ವಿಷಯಕ್ಕೆ ಹೋಗು

ಸಂಘ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಘ ಎಂದರೆ ನಿರ್ದಿಷ್ಟ ಉದ್ದೇಶಗಳ ಈಡೇರಿಕೆಗಾಗಿ ಸಮಾನ ಆಸಕ್ತಿಯ ಸದಸ್ಯರು ಸಂಘಟನೆಗೊಂಡು ರೂಪುಗೊಳ್ಳುವ ಸಂಸ್ಥೆ (ಅಸೋಸಿಯೇಷನ್). ನಿರ್ದಿಷ್ಟಪಡಿಸಿದ ಅರ್ಹತೆ ಹಾಗೂ ಸಮಾನ ಆಸಕ್ತಿಯ ವ್ಯಕ್ತಿಗಳು ಔಪಚಾರಿಕ ಸದಸ್ಯತ್ವದ ಮೂಲಕ ಸಂಘಟನೆಗೊಳ್ಳುವುದರಿಂದ ಇದು ಮೂರ್ತ ಸ್ವರೂಪ ಪಡೆಯುತ್ತದೆ.[] ಸದಸ್ಯರ ಅರ್ಹತೆ ಅಥವಾ ಆಸಕ್ತಿ ಕುಂಠಿತಗೊಂಡಾಗ ಸಂಘ ನಿಷ್ಕ್ರಿಯವಾಗುತ್ತದೆ ಹಾಗೂ ಅವಸಾನಗೊಳ್ಳುತ್ತದೆ.

ಸಂಘದ ಸದಸ್ಯರು ಒಂದು ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಯಲ್ಲಿದ್ದು ಜೊತೆಗೂಡಿ ತಮ್ಮ ಉದ್ದೇಶಗಳ ಈಡೇರಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವೊಮ್ಮೆ ಆಂಗ್ಲಭಾಷೆಯ ಆರ್ಗನೈಜ಼ೇಷನ್ ಎಂಬ ಪದಕ್ಕೆ ಸಂವಾದಿಯಾಗಿ ಸಂಘ ಎಂಬ ಪದವನ್ನು ಬಳಸುವುದೂ ಕಂಡುಬರುತ್ತದೆ. ಇಂಥ ಕಡೆ ರಾಜಕೀಯ ಪಕ್ಷ, ಆರ್ಯಸಮಾಜ, ರಾಷ್ಟ್ರಮಟ್ಟದ ವಿದ್ಯಾರ್ಥಿ ಸಂಘಟನೆ, ಶಿಕ್ಷಕರ ಸಂಘಟನೆ ಮೊದಲಾದವನ್ನು ಉದಾಹರಿಸಲಾಗಿದೆ.

ಸಂಘಟನೆ ಎಂಬ ಪದದ ಧಾತುರೂಪ ಸಂಘ. ಇದು ಅನೇಕಾರ್ಥಗಳಲ್ಲಿ, ಅನೇಕ ಭಾಷೆಗಳಲ್ಲಿ ಬಳಕೆಯಲ್ಲಿದೆ. ಒಮ್ಮೊಮ್ಮೆ ಸಂಘ ಮತ್ತು ಸಂಘಟನೆಗಳನ್ನು ಸಮಾನಾರ್ಥಕವಾಗಿಯೂ ಬಳಸಲಾಗುತ್ತಿದೆ. ವಾಸ್ತವಾರ್ಥದಲ್ಲಿ ಸಂಘಟನೆ ಒಟ್ಟುಗೂಡಿಸುವ ಒಂದು ಪ್ರಕ್ರಿಯೆಯಾಗಿದ್ದರೆ, ಸಂಘ ಅದರ ಪರಿಣಾಮವಾಗಿ ರೂಪುಗೊಳ್ಳುವ ಸಮೂಹ.

ಸಮಾನ ಆಸಕ್ತಿ ಅಥವಾ ಉದ್ದೇಶಗಳು ಹಾಗೂ ಸಹಕಾರ ಮನೋಭಾವಗಳು ಸಂಘ ಸ್ಥಾಪನೆಯ ಪ್ರಧಾನ ಅಂಶಗಳಾಗಿವೆ. ಇದರ ಕಾರ್ಯ ನಿರ್ವಹಣೆಯಲ್ಲಿ ನಿರ್ದಿಷ್ಟ ಪಾತ್ರಗಳ ಹಾಗೂ ಸ್ಥಾನಮಾನಗಳ ಹಂಚಿಕೆಯ ಮೂಲಕ ಮಾಡುವ ಸಂಘಟನಾ ಪ್ರಕ್ರಿಯೆ ಸಂಘಕ್ಕೆ ಸ್ಥಿರತೆಯ ನ್ನೊದಗಿಸುತ್ತದೆ. ಸದಸ್ಯರೇ ಪರಸ್ಪರ ಚರ್ಚಿಸಿ, ಸಂಘಕ್ಕೆ ಸದಸ್ಯರಾಗುವವರ ಅರ್ಹತೆ, ಶುಲ್ಕ, ಪಾತ್ರನಿರ್ವಹಣೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ನೀತಿ ನಿಯಮಗಳ ರಚನೆ (ಸ್ಟ್ಯಾಚೂಟ್) ಹಾಗೂ ಅದರ ತಿದ್ದುಪಡಿ ಮಾಡುವುದು (ಅಮೆಂಡ್‍ಮೆಂಟ್) ಸಂಘದ ಕ್ರಿಯಾಶೀಲತೆಗೆ ನಿದರ್ಶನ. ದೀರ್ಘಕಾಲಿಕ ಉದ್ದೇಶಗಳ ಈಡೇರಿಕೆಗಾಗಿ ರೂಪುಗೊಳ್ಳುವ ಸಂಘಗಳು ದೀರ್ಘಾವದಿ ಅಸ್ತಿತ್ವ ಪಡೆದಿರುತ್ತವೆ. ಕೃಷಿ ಸಹಕಾರ ಸಂಘ, ಯುವಕ-ಯುವತಿ ಮಂಡಳಿಗಳು, ಸ್ವಸಹಾಯ ಸಂಘ, ಸ್ಥಳೀಯ ರೋಟರಿಕ್ಲಬ್ ಮುಂತಾದವು ಈ ಬಗೆಯವು.

ತಾತ್ಕಾಲಿಕ ಉದ್ದೇಶಗಳ ಈಡೇರಿಕೆಗಾಗಿ ರೂಪುಗೊಳ್ಳುವ ಸಂಘಗಳು ತಾತ್ಕಾಲಿಕ ಅಸ್ತಿತ್ವ ಪಡೆಯುತ್ತವೆ. ಸಾಂಸ್ಕøತಿಕ ಕ್ರಿಯಾವೇದಿಕೆ, ಪರಿಸರ ರಕ್ಷಣಾ ಸಮಿತಿ ಮುಂತಾದ ಸಂಘಗಳು ತಮ್ಮ ಉದ್ದೇಶಗಳ ಈಡೇರಿಕೆಯ ಅನಂತರ ಸ್ಥಗಿತಗೊಳ್ಳಬಹುದು.

ಆಧುನಿಕ ಯುಗದಲ್ಲಿ ಸಂಘ ಪರಿಕಲ್ಪನೆ ಹೆಚ್ಚು ಪ್ರಾಧಾನ್ಯ ಪಡೆದಿದೆ. ವ್ಯಕ್ತಿಗತವಾಗಿ ಸಾಧಿಸಲಾಗದ ಬೇಡಿಕೆಗಳನ್ನು ಸಂಘಗಳ ಮೂಲಕ ಸಾಧಿಸುವುದು ಸಾಧ್ಯ. ಸಂಘೇ ಶಕ್ತೌ ಕಲೌಯುಗೇ (ಕಲಿಯುಗದಲ್ಲಿ ಸಂಘಗಳೇ ಶಕ್ತಿಯುತವಾದುವು) ಎಂಬ ಮಾತು ಪ್ರಚಲಿತವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2020-01-22. Retrieved 2020-01-13.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸಂಘ&oldid=1242267" ಇಂದ ಪಡೆಯಲ್ಪಟ್ಟಿದೆ