ನಗೇಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ. ನಗೇಂದ್ರ [೧೯೧೫-]. ಭಾರತೀಯ ಕಾವ್ಯಮೀಮಾಂಸೆಗೆ ರಸ ಸಿದ್ಧಾಂತ ಎಂಬ ವಿಶಿಷ್ಟ ಗ್ರಂಥವನ್ನು ನೀಡಿದ ಪ್ರಸಿದ್ಧ ವಿಮರ್ಶಕ. ವಿಮರ್ಶೆಗೆ ಪೌರಸ್ತ್ಯ ಹಾಗೂ ಪಾಶ್ಚಾತ್ಯ ಕಾವ್ಯಮೀಮಾಂಸೆಯ ಹಿನ್ನೆಲೆಯಲ್ಲಿ ಹೊಸ ಆಯಾಮವನ್ನೂ, ದೃಷ್ಟಿಯನ್ನೂ ನೀಡಿದ ಬಹುಮುಖ ಪ್ರತಿಭಾಶಾಲಿಯಾದ ಸಂಶೋಧಕ, ಸಂಪಾದಕ, ಅನುವಾದಕ, ಕವಿ, ಪ್ರಬಂಧಕಾರ, ಕೋಶಕಾರ. ಇವರಿಗೆ ಆಧುನಿಕ ಹಿಂದೀ ಸಾಹಿತ್ಯದಲ್ಲಿ ಮಹತ್ತ್ವದ ಸ್ಥಾನವಿದೆ.

ಬಾಲ್ಯ[ಬದಲಾಯಿಸಿ]

ಹುಟ್ಟಿದ್ದು ಉತ್ತರ ಪ್ರದೇಶದ ಅತರೌಲಿಯಲ್ಲಿ ತಂದೆ ರಾಜೇಂದ್ರ. ಅತರೌಲಿ, ಅನೂಪ್‍ಶಹರ್, ಆಗ್ರಾಗಳಲ್ಲಿ ಓದಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಎಂ.ಎ. ಪದವಿಗಳಿಸಿ ಮುಂದೆ ಡಿ.ಲಿಟ್. ಪದವಿಯನ್ನು ಪಡೆದರು. ಆರಂಭದ ವರ್ಷಗಳಲ್ಲಿ ಸುಮಾರು ೧೦ ವರ್ಷಗಳ ಕಾಲ ದೆಹಲಿ ವಿಶ್ವವಿದ್ಯಾನಿಲಯಕ್ಕೆ ಸಂಬಂದಪಟ್ಟ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ಇದ್ದು ೧೯೪೭ರಲ್ಲಿ ಆಕಾಶವಾಣಿಯ ಸುದ್ದಿವಿಭಾಗದ ಮೇಲ್ವಿಚಾರಕರಾಗಿ ನೇಮಕಗೊಂಡರು. ೧೯೫೨ರಲ್ಲಿ ಅಲ್ಲಿಯೇ ಸ್ಟೇಷನ್ ಡೈರೆಕ್ಟರ್ ಹುದ್ದೆಗೆ ಆಯ್ಕೆಯಾದಾಗ, ಅದನ್ನು ನಿರಾಕರಿಸಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿಯನ್ನೇ ಆರಿಸಿಕೊಂಡು ವಿಶ್ವವಿದ್ಯಾನಿಲಯದಲ್ಲಿನ ಹಿಂದೀ ವಿಭಾಗದ ಮುಖ್ಯಸ್ಥರಾದರು.[೧]

ಸಾಹಿತ್ಯ ಸೇವೆ[ಬದಲಾಯಿಸಿ]

ನಗೇಂದ್ರ ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದ್ದು ಕವಿಯಾಗಿ. ಇವರ ಮೊಟ್ಟ ಮೊದಲ ಕಾವ್ಯಸಂಗ್ರಹ ವನಬಾಲಾ (೧೯೩೭). ಆಗ್ರಾದಿಂದ ಪ್ರಕಟವಾಗುತ್ತಿದ್ದ ಸಾಹಿತ್ಯ ಸಂದೇಶದಲ್ಲಿ ಇವರ ಮೊದಲ ವಿಮರ್ಶಾಲೇಖನ ಪ್ರಕಟಗೊಂಡಿತು. ಸುಮಿತ್ರಾ ನಂದನ್ ಪಂತ್-ಏಕ್ ಅಧ್ಯಯನ್ ಎಂಬ ಸ್ವತಂತ್ರ ವಿಮರ್ಶಾ ಕೃತಿಯ ಮೂಲಕ ಹಿಂದೀ ವಿಮರ್ಶಾ ಜಗತ್ತಿಗೆ ಕಾಲಿಟ್ಟ (೧೯೩೮) ಇವರು ಈವರೆಗೆ ಸುಮಾರು ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಂಶೋಧನೆ, ವಿಮರ್ಶೆ, ವೈಚಾರಿಕ ಸಾಹಿತ್ಯಕ್ಕೆ ಸಂಬಂಧಿಸಿದ ಇವರ ಇತರ ಕೆಲವು ಮೌಲಿಕ ಗ್ರಂಥಗಳೆಂದರೆ ಸಾಕೇತ್ ಏಕ್ ಅಧ್ಯಯನ್, ವಿಚಾರ್ ಔರ್ ಅನುಭೂತಿ, ರೀತಿಕಾವ್ಯ ಕೀ ಭೂಮಿಕಾ, ಭಾರತೀಯ ಕಾವ್ಯ ಕೀ ಭೂಮಿಕಾ, ಆಲೋಚಕ್ ಕೀ ಆಸ್ಥಾ, ರಸ್ ಸಿದ್ಧಂತ, ಆಧುನಿಕ ಹಿಂದೀ ನಾಟಕ್, ದೇವ್ ಔರ್ ಉನ್‍ಕೀ ಕವಿತಾ, ಆಧುನಿಕ್ ಹಿಂದೀ ಕಾವ್ಯ ಕೀ ಮುಖ್ಯ ಪ್ರವೃತ್ತಿಯಾ, ವಿಚಾರ್ ಔರ್ ವಿಶ್ಲೇಷಣ್, ಅನುಸಂಧಾನ್ ಔರ್ ಆಲೋಚನಾ, ಕಾವ್ಯ್‍ಬಿಂಬ, ಕಾವ್ಯ್ ಮೇ ಉದಾತ್ತತತ್ತ್ವ ಶೈಲಿ ವಿಜ್ಞಾನ, ಭಾರತೀಯ ಸೌಂದರ್ಯಶಾಸ್ತ್ರ ಕೀ ಭೂಮಿಕಾ.[೨]

ಸಂಪಾದಿತ ಕೃತಿಗಳು[ಬದಲಾಯಿಸಿ]

ಇವರ ಕೆಲವು ಸಂಪಾದಿತ ಕೃತಿಗಳು ಇವು: ಹಿಂದೀ ಧ್ವನ್ಯಲೋಕ, ಹಿಂದೀ ವಕ್ರೋಕ್ತಿಜೀವಿತ, ಭಾರತೀಯ ಕಾವ್ಯಶಾಸ್ತ್ರ ಕೀ ಪರಂಪರಾ, ಹಿಂದೀ ಅಭಿನವಭಾರತಿ, ಹಿಂದೀ ಕಾವ್ಯಾಲಂಕಾರಸೂತ್ರ, ಪಾಶ್ಚಾತ್ಯ ಕಾವ್ಯಶಾಸ್ತ್ರ ಕೀ ಪರಂಪರಾ, ಹಿಂದೀ ಅಭಿನವಭಾರತಿ, ಹಿಂದೀ ಕಾವ್ಯಾಲಂಕಾರಸೂತ್ರ, ಪಾಶ್ಚಾತ್ಯ ಕಾವ್ಯಶಾಸ್ತ್ರ ಔರ್ ವಾದ್, ಭಾರತೀಯ ನಾಟ್ಯಪದ್ಧತಿ, ಮಾನವಿಕೀ ಶಬ್ದಕೋಶ್, ಹಿಂದೀ ಸಾಹಿತ್ಯಕಾ ಬೃಹತ್ ಇತಿಹಾಸ್, ಹರಿಭಕ್ತರಸಾಮೃತ್ ಸಿಂಧು, ರಾಮಚರಿತಮಾನಸ್-ತುಲನಾತ್ಮಕ್ ಅಧ್ಯಯನ್.[೩]

ನಗೇಂದ್ರ ಮೂಲತಃ ರಸವಾದಿ ವಿಮರ್ಶಕರು. ರಸ ಸಿದ್ಧಾಂತವನ್ನು ಕುರಿತಂತೆ ಗಂಭೀರ ಅಧ್ಯಯನವನ್ನು ನಡೆಸಿರುವ ಇವರ ಶ್ರೇಷ್ಠ ಕೃತಿ ರಸ ಸಿದ್ಧಾಂತ.
ಹಿಂದೀ ವಿಮರ್ಶೆಗೆ ಹಾಗೂ ಸಂಶೋಧನೆಗೆ ಮೂಲಭೂತ ಸಾಮಗ್ರಿಯನ್ನೊದಗಿಸಲು ಸಂಸ್ಕøತ ಸಾಹಿತ್ಯದಲ್ಲಿನ ಅಮೂಲ್ಯ ಗ್ರಂಥಗಳನ್ನು ವಿಸ್ತøತ ಮುನ್ನುಡಿಗಳೊಂದಿಗೆ ಪ್ರಕಟಿಸಿರುವ ನಗೇಂದ್ರರು ಹಿಂದಿಯಲ್ಲಿ ಕಾವ್ಯಮೀಮಾಂಸೆಗೆ ಸಂಬಂಧಿಸಿದಂಥ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ. ಶುಕ್ಲೋತ್ತರ ಹಿಂದೀ ವಿಮರ್ಶಾಕ್ಷೇತ್ರವನ್ನು ಶಾಸ್ತ್ರೀಯ, ಮನೋವೈಜ್ಞಾನಿಕ, ಸಮಾಜಶಾಸ್ತ್ರೀಯ, ಸೈದ್ಧಾಂತಿಕ, ಸಂಶೋಧನಾತ್ಮಕ ದೃಷ್ಟಿಯಿಂದ ಬೆಳೆಸಿದವರಿವರು. ಹಿಂದೀ ಕವಿಗಳನ್ನು, ಕೃತಿಗಳನ್ನು ಕುರಿತು ಬರೆದಿರುವ ಇವರ ಸಾಹಿತ್ಯಿಕ ವಿಮರ್ಶಾ ಗ್ರಂಥಗಳೂ ಆ ಕ್ಷೇತ್ರದಲ್ಲಿ ಪ್ರಕಟವಾಗಿರುವ ಗ್ರಂಥಗಳಲ್ಲಿ ಮೈಲಿಗಲ್ಲುಗಳು. ಅರಿಸ್ಟಾಟಲನ ಕಾವ್ಯಶಾಸ್ತ್ರ ಹಾಗೂ ಲಾಂಜೈನಸನ ಉದಾತ್ತತತ್ತ್ವಗಳಂಥ ಗ್ರಂಥಗಳನ್ನು ಹಿಂದಿಯಲ್ಲಿ ಪ್ರಕಟಿಸಿ ಹಿಂದೀ ವಿಮರ್ಶೆಗೆ ಹೊಸ ಆಯಾಮವನ್ನು ನೀಡುವಲ್ಲಿ ಇವರು ನೆರವಾಗಿದ್ದಾರೆ.
ನಗೇಂದ್ರರು ಶ್ರೇಷ್ಠ ಹಿಂದೀ ಲೇಖಕರಾಗಿರುವಂತೆ ಇಂಗ್ಲಿಷ್ ಲೇಖಕರೂ ಹೌದು. ಇಂಡಿಯನ್ ಲಿಟರೇಚರ್, ಎನ್ ಇಂಟ್ರೊಡಕ್ಷನ್ ಟು ಇಂಡಿಯನ್ ಪೊಯೆಟಿಕ್ಸ್. ಲಿಟರರಿ ಕ್ರಿಟಿಸಿಸಮ್ ಇನ್ ಇಂಡಿಯ, ಕಂಪಾರೆಟಿವ್ ಲಿಟರೆಚರ್-ಇವರು ರಚಿಸಿರುವ ಇಂಗ್ಲಿಷ್ ಗ್ರಂಥಗಳು. ಇಂಡಿಯನ್ ಲಿಟರೆಚರ್ ರಷ್ಯನ್ ಭಾಷೆಗೂ ಅನುವಾದವಾಗಿದೆ.

ಪದವಿ ಪುರಸ್ಕಾರ[ಬದಲಾಯಿಸಿ]

೧೯೬೫ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಇವರ ರಸಸಿದ್ಧಾಂತವನ್ನು ಉತ್ಕೃಷ್ಟ ಕೃತಿ ಎಂದು ಪುರಸ್ಕರಿಸಿ ಗೌರವಿಸಿದೆ. ಉತ್ತರ ಪ್ರದೇಶದ ಹಿಂದೀ ಸಮಿತಿ ಅಖಿಲಭಾರತ ಮಟ್ಟದ ತನ್ನ ೫೦೦೦ ರೂಪಾಯಿಗಳ ಮೊದಲ ಬಹುಮಾನ ನೀಡಿ ಗೌರವಿಸಿದೆ. ಅಲ್ಲದೆ ಅಲಹಾಬಾದಿನ ಹಿಂದೀ ಸಾಹಿತ್ಯ ಸಮ್ಮೇಳನ ಸಾಹಿತ್ಯ ವಾಚಸ್ಪತಿ ಬಿರುದನ್ನೂ ಮೀರತ್ ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ ಪದವಿಯನ್ನೂ ನೀಡಿ ಇವರನ್ನು ಗೌರವಿಸಿದೆ.

ರಷ್ಯ, ಇಟಲಿ, ಜರ್ಮನಿ, ಫ್ರಾನ್ಸ್, ಅಮೆರಿಕ ಹಾಗೂ ಇನ್ನಿತರ ಅನೇಕ ದೇಶಗಳಲ್ಲಿ ಭಾರತದ ಪ್ರತಿನಿಧಿಯಾಗಿ ಪ್ರವಾಸಮಾಡಿರುವ ನಗೇಂದ್ರರ ಅನೇಕ ಕೃತಿಗಳು ಬಂಗಾಳಿ, ಗುಜರಾತಿ, ಮರಾಠಿ, ಕನ್ನಡ, ತೆಲುಗು, ಪಂಜಾಬಿ, ಮಲೆಯಾಳಂ, ಉರ್ದು ಹಾಗೂ ರಷ್ಯನ್ ಭಾಷೆಗಳಲ್ಲಿ ಅನುವಾದಗೊಂಡಿವೆ. [೪]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2007-09-27. Retrieved 2019-12-12.
  2. http://bharatdiscovery.org/india/%E0%A4%A1%E0%A5%89._%E0%A4%A8%E0%A4%97%E0%A5%87%E0%A4%A8%E0%A5%8D%E0%A4%A6%E0%A5%8D%E0%A4%B0
  3. https://epustakalay.com/writer/382-dr-nagendra/
  4. https://pdfbooks.ourhindi.com/all-writers/dr-nagendra/
"https://kn.wikipedia.org/w/index.php?title=ನಗೇಂದ್ರ&oldid=1125365" ಇಂದ ಪಡೆಯಲ್ಪಟ್ಟಿದೆ