ವಿಷಯಕ್ಕೆ ಹೋಗು

ಸದಸ್ಯ:Shivaprasad Haluvalli/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎ.ಈಶ್ವರಯ್ಯ

[ಬದಲಾಯಿಸಿ]

ಪೀಠಿಕೆ:

[ಬದಲಾಯಿಸಿ]

ಎ.ಈಶ್ವರಯ್ಯ ಅವರು ೧೯೭೩ರಲ್ಲಿ ಉದಯವಾಣಿ ಬಳಗದಿಂದ ಪ್ರಕಟವಾಗುವ ತುಷಾರ ಮಾಸಪತ್ರಿಕೆ ಆರಂಭವಾದಾಗ ಸಂಪಾದಕರಾಗಿದ್ದವರು. ೧೯೭೦-೮೦ರಲ್ಲಿ ಕರ್ನಾಟಕದ ಅನೇಕ ಲೇಖಕರನ್ನು ಪ್ರೋತ್ಸಾಹಿಸಿ ಅವರಿಗೆ ತುಷಾರದ ಮೂಲಕ ವೇದಿಕೆ ಕಲ್ಪಿಸಿಕೊಟ್ಟಿದ್ದರು.

ಈಶ್ವರಯ್ಯ ಅವರ ಸಂಪಾದಕತ್ವದ ಅವಧಿಯಲ್ಲಿ ಈಗ ಜನಪ್ರಿಯವಾಗಿರುವ ಕನ್ನಡದ ಅನೇಕ ಕೃತಿಗಳು ತುಷಾರದಲ್ಲಿ ಪ್ರಕಟವಾದವುಗಳಾಗಿವೆ. ಕತೆ, ಕವನ, ಲೇಖನದ ಜೊತೆಗೆ ಮೊದಲಬಾರಿಗೆ ಮಾಸಪತ್ರಿಕೆಯೊಂದರಲ್ಲಿ ಧಾರವಾಹಿಗಳನ್ನು ಪ್ರಕಟಿಸುವ ಧೈರ್ಯ ತೋರಿಸಿದ್ದರು. ಕನ್ನಡದ ಹೆಚ್ಚಿನ ಲೇಖಕರು ಈಗಲೂ ಈಶ್ವರಯ್ಯ ಅವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.

ತುಷಾರದ ಸಂಪಾದಕರಾದ ನಂತರ ಉದಯವಾಣಿಯ ಮ್ಯಾಗಜಿನ್ ವಿಭಾಗದ ಸಂಪಾದಕರಾಗಿ ಅನೇಕ ವರ್ಷ ಸೇವೆ ಸಲ್ಲಿಸಿ ವಿಶ್ರಾಂತ ಜೀವನ ನಡೆಸಿದರು. ಸಂಗೀತ, ಸಾಹಿತ್ಯ, ಫೊಟೊಗ್ರಫಿ, ಯಕ್ಷಗಾನ ಹೀಗೆ ಹಲವು ವಿಷಯಗಳಲ್ಲಿ ಪರಿಣತರಾಗಿದ್ದ ಅವರು ಕಲಾ ವಿಮರ್ಶೆಗೊಂದು ಮಾದರಿಯನ್ನು ರೂಪಿಸಿದರು.

ಈಶ್ವರಯ್ಯ ತುಷಾರದಲ್ಲಿ ಬರೆಯುತ್ತಿದ್ದ ಪ್ರಬಂಧ ಸರಣಿ 'ಸರಸ' ಎಪ್ಪತ್ತರ ದಶಕದಲ್ಲಿ ಮನೆಮಾತಾಗಿದ್ದ ಅಂಕಣವಾಗಿತ್ತು.

ಬಾಲ್ಯ, ವಿದ್ಯಾಭ್ಯಾಸ

[ಬದಲಾಯಿಸಿ]

ಅಗಸ್ಟ್ ೧೨, ೧೯೪೦ರಂದು ಈಶ್ವರಯ್ಯ ಅವರು ಕಾಸರಗೋಡು ತಾಲ್ಲೂಕಿನ ಅನಂತಪುರದಲ್ಲಿ ಜನಿಸಿದರು. ಶಾನುಭೋಗ ಮನೆತನದ ನಾರಾಯಣಯ್ಯ ಹಾಗೂ ವೆಂಕಟಲಕ್ಷಮ್ಮ ದಂಪತಿಗಳ ನಾಲ್ಕು ಮಂದಿ ಪುತ್ರ ಹಾಗೂ ನಾಲ್ಕು ಮಂದಿ ಪುತ್ರಿಯರಲ್ಲಿ ಈಶ್ವರಯ್ಯನವರು ಮೊದಲಿಗರು.

ಪ್ರಾಥಮಿಕ ವಿದ್ಯಾಭ್ಯಾಸದ ಕಾಲದಲ್ಲಿಯೇ ವಿಷ್ಣು ಕಲ್ಲೂರಾಯರಿಂದ ಮತ್ತು ಮಂಗಳೂರಿನ ಕಲಾಮಂದಿರದಲ್ಲಿ ಸಂಗೀತವನ್ನು ಕಲಿತರು. ಕೊಳಲು ವಾದನ, ವಯಲಿನ್, ಕ್ಲಾರಿನೆಟ್ ಮೊದಲಾದವುಗಳನ್ನೂ ಅಭ್ಯಸಿಸಿದರು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಇಂಗ್ಲಿಷ್ ಪದವಿ ಪಡೆದ ಈಶ್ವರಯ್ಯ, ವಿಷ್ಣು ಕಲ್ಲೂರಾಯರಿಂದ ಮಂಗಳೂರಿನ ಕಲಾಮಂದಿರದಲ್ಲಿ ಸಂಗೀತ ಕಲಿತರು. ಕೊಳಲು ವಾದನ, ವಯಲಿನ್, ಕ್ಲಾರಿನೆಟ್ ಸೇರಿದಂತೆ ಹಲವು ವಾದ್ಯಗಳನ್ನು ಅಭ್ಯಸಿಸಿದ್ದರು. ಛಾಯಾಗ್ರಹಣದಲ್ಲಿಯೂ ಅವರಿಗೆ ಪರಿಶ್ರಮವಿತ್ತು. ಉತ್ತಮ ವಾಗ್ಮಿ ಮತ್ತು ಸಮರ್ಥ ವಿಮರ್ಶಕರೂ ಆಗಿದ್ದರು.

ಪತ್ರಿಕಾರಂಗಕ್ಕೆ ಪ್ರವೇಶಿಸುವ ಮೊದಲು ಲೋಕೋಪಯೋಗಿ ಇಲಾಖೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಸುಮಾರು ೬೦ ಕಥೆಗಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನೂ ಬರೆದಿದ್ದರು.

ಸಮರ್ಥ ನಾಟಕ ಕಲಾವಿದರೂ ಆಗಿದ್ದ ಈಶ್ವರಯ್ಯ, ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿಯೇ ಕು.ಶಿ.ಹರಿದಾಸ ಭಟ್ಟ ನಿರ್ದೇಶನದ ಇಂಗ್ಲೀಷ್ ನಾಟಕದಲ್ಲಿ ಅಭಿನಯಿಸಿದ್ದರು. ಅನಂತರ ಹಲವು ಕನ್ನಡ ನಾಟಕಗಳಲ್ಲೂ ಪಾತ್ರಗಳನ್ನು ನಿರ್ವಹಿಸಿದರು.

ವೃತ್ತಿ :

[ಬದಲಾಯಿಸಿ]

೧೯೭೨ರಲ್ಲಿ ಉದಯವಾಣಿ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗುವ ಮೂಲಕ ಎ.ಈಶ್ವರಯ್ಯ  ಅವರ ಪತ್ರಿಕೋದ್ಯಮ ವೃತ್ತಿ ಆರಂಭವಾಯಿತು. ಪುರವಣಿ ವಿಭಾಗದಲ್ಲಿ ಲಲಿತರಂಗ, ಕಲಾವಿಹಾರ ಅಂಕಣಗಳಿಂದ ಪ್ರಸಿದ್ಧರಾದರು. ೧೯೭೩ರಲ್ಲಿ ತುಷಾರ ಪಾಕ್ಷಿಕವು ಪ್ರಾರಂಭವಾದಾಗ ಅದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಛಾಯಾಚಿತ್ರ ಲೇಖನಗಳು, ಛಾಯಾಚಿತ್ರಗಳ ಸ್ಪರ್ಧೆ ಮೊದಲಾದ ಅನೇಕ ಹೊಸ ಪ್ರಯೋಗಗಳನ್ನು ತಂದರು. ಯುವಕ ಯುವತಿಯರಿಗಾಗಿ ಆರಂಭಿಸಿದ ‘ಸರಸ’ ಎಂಬ ಲಲಿತ ಪ್ರಬಂಧ ಅಂಕಣವು ಜನಪ್ರಿಯವಾಯಿತು. ಉದಯವಾಣಿಯಲ್ಲಿ ಈಶ ಕಾವ್ಯನಾಮದಲ್ಲಿ ರಾಜಕೀಯ ವಿಶ್ಲೇಷಣಾತ್ಮಕ ಲೇಖನಗಳನ್ನು ಬರೆಯುತ್ತಿದ್ದರು.

ಸಂಗೀತ ಪ್ರೇಮಿಯಾದ ಈಶ್ವರಯ್ಯನವರು ಉಡುಪಿಯಲ್ಲಿ ಅರವಿಂದ ಹೆಬ್ಬಾರ್ ಜೊತೆಗೂಡಿ 'ರಾಗಧ್ವನಿ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆಯ ಆಶ್ರಯದಲ್ಲಿ ತಿಂಗಳಿಗೊಮ್ಮೆ 'ಮನೆಮನೆ ಸಂಗೀತ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡು ಓರ್ವ ಕಲಾವಿದರ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು. 'ರಾಗಧನಶ್ರೀ’ ಎಂಬ ಸಂಗೀತ ಮಾಸಿಕದ ಸಂಪಾದಕರಾಗಿಯೂ, ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವರು. ಈಶ್ವರಯ್ಯ ಸಮರ್ಥ ಅನುವಾದಕರೂ ಹೌದು. ನವಕರ್ನಾಟಕ ಪ್ರಕಾಶನವು ಪ್ರಕಟಿಸಿದ ವಿಶ್ವಕಥಾಕೋಶದ ೧೬ನೇ ಸಂಪುಟಕ್ಕಾಗಿ ಗ್ರೀಸ್, ಟರ್ಕಿ ಮತ್ತು ಸೈಪ್ರಸ್ ದೇಶಗಳ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು.

ಪ್ರಶಸ್ತಿಗಳು :

[ಬದಲಾಯಿಸಿ]

ಈಶ್ವರಯ್ಯನವರ ಸಾಧನೆಗೆ ಗೌರವಾದರಗಳು ಅವರನ್ನು ಅರಸಿಕೊಂಡು ಬಂದಿವೆ. ಶಾಸ್ತ್ರೀಯ ಸಂಗೀತ ಸಭಾ ಕಾರ್ಕಳ, ಸಂಗೀತ ಪರಿಷತ್ತು ಮಂಗಳೂರು, ರಾಗಧನ ಉಡುಪಿ, ಇಮೇಜ್ ಪುತ್ತೂರು, ಕ್ರಿಯೇಟಿವ್ ಕೆಮರಾ ಕ್ಲಬ್ ಮಂಗಳೂರು, ಗಾನ ಕಲಾ ಪರಿಷತ್ ಬೆಂಗಳೂರು, ಪದವೀಧರ ಯಕ್ಷಗಾನ ಸಮಿತಿ ಮುಂಬಯಿ, ಶ್ರೀಪೇಜಾವರ ಮಠ ಉಡುಪಿ, ಗಾಯನ ಸಮಾಜ ಬೆಂಗಳೂರು, ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಗದಗ, ಮಣಿಪಾಲ ಮೀಡಿಯಾ ನೆಟ್ವರ್ಕ್ಸ್ ಮೊದಲಾದ ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ

ಪೊಲ್ಯ ಯಕ್ಷಗಾನ ಪ್ರಶಸ್ತಿ (೧೯೯೪), ಕರ್ನಾಟಕ ರಾಜ್ಯ ಪತ್ರಿಕಾ ಅಕಾಡೆಮಿ ಪ್ರಶಸ್ತಿ (೨೦೦೦), ರಾಜ್ಯಮಟ್ಟದ ಸಂದೇಶ ಪತ್ರಿಕೋದ್ಯಮ ಸಮ್ಮಾನ ಪ್ರಶಸ್ತಿ (೨೦೦೧), ರಂಗವಾಚಸ್ಪತಿ ಬಿರುದು (೨೦೦೩), ಪರಶುರಾಮ ಪ್ರಶಸ್ತಿ (೨೦೦೩), ವ್ಯಾಸ ಸಾಹಿತ್ಯ ಪ್ರಶಸ್ತಿ (೨೦೦೮), ನುಡಿಸಿರಿ ರಾಜ್ಯ ಪ್ರಶಸ್ತಿ ಮೊದಲಾದ ಶ್ರೇಷ್ಠ ಪ್ರಶಸ್ತಿಗಳು ಈಶ್ವರಯ್ಯನವರಿಗೆ ಪ್ರಾಪ್ತವಾಗಿವೆ.

ಈಶ್ವರಯ್ಯನವರ ಬಾಳು- ಬದುಕಿನ ಕುರಿತಾಗಿ ಉದಯವಾಣಿಯ ಹಿರಿಯ ಉಪ ಸಂಪಾದಕರಾಗಿದ್ದ ನಿತ್ಯಾನಂದ ಪಡ್ರೆಯವರು 'ಕಲಾಲೋಕದ ಚಿಂತಕ ಎ. ಈಶ್ವರಯ್ಯ‘ ಎಂಬ ಕೃತಿಯನ್ನು ರಚಿಸಿದ್ದಾರೆ. ಇದನ್ನು ಕಾಂತಾವರ ಕನ್ನಡ ಸಂಘ ಪ್ರಕಟಿಸಿದೆ.

ಕುಟುಂಬ :

[ಬದಲಾಯಿಸಿ]

ಈಶ್ವರಯ್ಯನವರ ಪತ್ನಿ ಗಿರಿಜಾ, ಶೈಲೇಂದ್ರ ಪುತ್ರ. ಅನುರಾಧಾ ಹಾಗೂ ಚೇತನಾ ಪುತ್ರಿಯರು.

ನಿಧನ :

[ಬದಲಾಯಿಸಿ]

ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಈಶ್ವರಯ್ಯ ಅವರು ೨೦೧೮ರ ಡಿಸೆಂಬರ್ ೩೦ರ ಭಾನುವಾರದಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆಗ ಅವರಿಗೆ ೭೮ ವರ್ಷ ವಯಸ್ಸಾಗಿತ್ತು.

ನಿವೃತ್ತಿಯ ನಂತರ:

[ಬದಲಾಯಿಸಿ]

ಛಾಯಾಗ್ರಹಣದ ಪಾಠವನ್ನೂ ಹೇಳಿಕೊಡುತ್ತಿದ್ದ ಎ.ಈಶ್ವರಯ್ಯನವರು ನಿವೃತ್ತಿ ಬಳಿಕ ಕಲಾ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಸಂಸ್ಕೃತಿಯ ವಿವಿಧ ಆಯಾಮಗಳ ಸೂಕ್ಷ್ಮ ವಿಮರ್ಶಕರಾಗಿದ್ದರು.

ವಿದ್ವಜ್ಜನರು ಕಂಡಂತೆ :

[ಬದಲಾಯಿಸಿ]

ಈಶ್ವರಯ್ಯ ಅವರ ಬರಹಗಳು, ಕಲಾ ಶಿಬಿರಗಳು, ಉಪನ್ಯಾಸಗಳು ಎಲ್ಲವೂ ಹದ, ಅರಿವು ತುಂಬಿದ ಸಂಪನ್ಮೂಲಗಳ ಒರತೆಗಳು. ಸ್ನೇಹ, ಸಂಪರ್ಕ, ವಿಶಾಲ ಮನೋಧರ್ಮ, ಅತಿಯಿಲ್ಲದ ಪ್ರಶಂಸೆ, ತೂಕತಪ್ಪದ ವಿಮರ್ಶೆ ಪ್ರೋತ್ಸಾಹಗಳಲ್ಲೆಲ್ಲ ಈಶ್ವರಯ್ಯ ಸ್ಮರಣಾರ್ಹರು. ಈಶ್ವರಯ್ಯ- 'ತುಷಾರ'ದಂತೆ. ಸ್ವಚ್ಛ, ಜ್ಞಾನಪ್ರದ, ಚೈತನ್ಯಕಾರಕ.

- ಡಾ.ಎಂ.ಪ್ರಭಾಕರ ಜೋಷಿ, ಫೆಬ್ರವರಿ ೨೦೧೯ರ ತುಷಾರದಲ್ಲಿ ಪ್ರಕಟವಾದ 'ತುಷಾರದಂತೆ ಈಶ್ವರಯ್ಯ' ಬರಹದಿಂದ

ಈಶ್ವರಯ್ಯನವರ ಕುರಿತಾದ ಹೆಚ್ಚಿನ ವಿವರ ಹಾಗೂ ಸಾಕ್ಷ್ಯಚಿತ್ರಕ್ಕಾಗಿ :
[ಬದಲಾಯಿಸಿ]

ಕಟೀಲು ಸಿತ್ಲ ರಂಗನಾಥ ರಾವ್ ಅವರು ನಡೆಸಿದ ಸಂದರ್ಶನ ಹಾಗೂ ಬರಹದ ಕೊಂಡಿ-

#[http://yaksharangabykateelusitla.blogspot.com/2015/09/rambler-taster-thinker-of-various-art.html?m=1 ]

ಉಲ್ಲೇಖಗಳು:

[ಬದಲಾಯಿಸಿ]

#ಉದಯವಾಣಿ, ಪ್ರಜಾವಾಣಿ ಹಾಗೂ ವಿಜಯಕರ್ನಾಟಕದಲ್ಲಿ ಪ್ರಕಟವಾದ ಬರಹಗಳು.