ವಿಷಯಕ್ಕೆ ಹೋಗು

ದಂಡಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಂಡಕನು ಸೂರ್ಯವಂಶದ ಒಬ್ಬ ರಾಜ.[] ಇಕ್ಷ್ವಾಕು ರಾಜನ ನೂರು ಮಂದಿ ಮಕ್ಕಳಲ್ಲಿ ಒಬ್ಬ. ಕಡು ಮೂರ್ಖನಾಗಿದ್ದ ಈತನಿಗೆ ಯಾರಿಂದಲಾದರೂ ಶಾಪ ಬಂದೀತೆಂಬ ಹೆದರಿಕೆಯಿಂದ ದಂಡಕನೆಂದು ನಾಮಕರಣ ಮಾಡಿದರು. ಈತ ಮಾಡುತ್ತಿದ್ದ ಅನ್ಯಾಯಗಳನ್ನು ಸಹಿಸದ ಇಕ್ಷ್ವಾಕು ವಿಂಧ್ಯ, ಶೈವಲ ಪರ್ವತಗಳ ನಡುವೆ ರಾಜ್ಯವನ್ನು ನಿರ್ಮಿಸಿ ಅಲ್ಲಿ ಈತನನ್ನು ಪ್ರತ್ಯೇಕವಾಗಿರಿಸಿದ. ದಂಡಕ ಅಲ್ಲಿ ಮಧುವಂತವೆಂಬ ನಗರವನ್ನು ನಿರ್ಮಾಣ ಮಾಡಿ ದೈತ್ಯಗುರು ಶುಕ್ರಾಚಾರ್ಯನನ್ನು ರಾಜಗುರುವನ್ನಾಗಿ ನೇಮಿಸಿಕೊಂಡು ರಾಜ್ಯಭಾರ ನಡೆಸತೊಡಗಿದ. ಒಮ್ಮೆ ಶುಕ್ರಾಚಾರ್ಯನಿಲ್ಲದಾಗ ಆತನ ಆಶ್ರಮಕ್ಕೆ ಹೋದ ಈತ ಆಚಾರ್ಯನ ಮಗಳು ಅರಜೆಯನ್ನು ಕೆಣಕಿ, ತಾನು ಗುರುಪುತ್ರಿಯೆಂದೂ ತನ್ನನ್ನು ಬಲಾತ್ಕರಿಸುವುದು ಯೋಗ್ಯವಲ್ಲವೆಂದೂ ಆಕೆ ಎಷ್ಟು ಹೇಳಿದರೂ ಕೇಳದೆ ಆಕೆಯನ್ನು ಬಲಾತ್ಕಾರವಾಗಿ ಭೋಗಿಸಿದ.

ಅದನ್ನು ತಿಳಿದ ಶುಕ್ರಾಚಾರ್ಯ ಕೋಪಗೊಂಡು ಅಂದಿನಿಂದ ಏಳುದಿನಗಳ ಒಳಗಾಗಿ ದಂಡಕ ಹಾಗೂ ಆತನ ಪರಿವಾರವೆಲ್ಲವೂ ನಾಶವಾಗಲಿ; ಆತನ ರಾಜ್ಯದ ಸುತ್ತಲೂ ಮೂರು ಯೋಜನ ಅಗಲವುಳ್ಳ ಪ್ರದೇಶ ಹಾಗೂ ಅಲ್ಲಿನ ಸಮಸ್ತ ಜೀವಜಂತುಗಳೂ ನಾಶವಾಗಲಿ ಎಂದು ಶಪಿಸಿದ. ಅನಂತರ ತನ್ನ ಮಗಳನ್ನು ಸಮಾಧಾನಪಡಿಸಿ ಆಕೆ ವಾಸಿಸುವ ಪ್ರದೇಶದ ಸುತ್ತಲೂ ಒಂದು ಯೋಜನದ ವರೆಗೆ ಗಿಡಮರಬಳ್ಳಿಗಳು ಬೆಳೆದು ಫಲಪುಷ್ಪಗಳಿಂದ ತುಂಬಲೆಂದು ಹರಸಿ ತನ್ನ ಶಿಷ್ಯರೊಡಗೂಡಿ ಆ ರಾಜ್ಯದ ಗಡಿದಾಟಿ ಹೊರಟುಹೋದ. ಇದಾದ ತರುವಾಯ ದಂಡಕನ ರಾಜ್ಯದಲ್ಲಿ ಏಳು ದಿನಗಳ ಕಾಲ ನಿರಂತರವಾಗಿ ಧೂಳಿನ ಮಳೆ ಸುರಿದು ಆತ ಹಾಗೂ ಆತನ ಪರಿವಾರದವರು ಭಸ್ಮವಾದರು. ಆ ಪ್ರದೇಶವೆಲ್ಲವೂ ಅರಣ್ಯವಾಯಿತು. ಅಂದಿನಿಂದ ಆ ಪ್ರದೇಶಕ್ಕೆ ಜನಸ್ಥಾನವೆಂದೂ ದಂಡಕಾರಣ್ಯವೆಂದೂ ಹೆಸರಾಯಿತು.

ವೃತ್ತ ರತ್ನಾಕರದಲ್ಲಿ ಉಕ್ತವಾದ 26 ಕ್ಕಿಂತಲೂ ಅಧಿಕಾಕ್ಷರ ಪಾದಗಳುಳ್ಳ ಒಂದು ಛಂದಸ್ಸಿಗೂ ದಂಡಕ ಎಂಬ ಹೆಸರಿದೆ. ಪ್ರತಿಪಾದದಲ್ಲಿಯೂ ಮೊದಲು ನಗಣಗಳು ಎರಡಿದ್ದು ಅನಂತರ ಏಳು ರಗಣಗಳಿದ್ದರೆ ಅದಕ್ಕೆ ಚಂಡವೃಷ್ಟಿಪ್ರಯಾತದಂಡಕ ಎಂದು ಕರೆಯುತ್ತಾರೆ. ಈ ಲಕ್ಷಣದ ಮುಂದೆ ಒಂದೊಂದು ರಗಣ ಹೆಚ್ಚುತ್ತ ಹೋದಲ್ಲಿ ಕ್ರಮವಾಗಿ ಆ ದಂಡಕಗಳನ್ನು ಅರ್ಣಃ, ಆರ್ಣವ, ವ್ಯಾಲಃ, ಜೀಮೂತಃ, ಲೀಲಾಕರಃ ಇತ್ಯಾದಿ ದಂಡಕಗಳೆಂದು ಕರೆಯುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದಂಡಕ&oldid=933731" ಇಂದ ಪಡೆಯಲ್ಪಟ್ಟಿದೆ