ಗೋಪುರ
ಗೋಪುರವು ಮುಖ್ಯವಾಗಿ ಔನ್ನತ್ಯದ ದೃಷ್ಟಿಯಿಂದ ರಚಿಸಲಾದ, ಆದ್ದರಿಂದ ತನ್ನ ವ್ಯಾಸಕ್ಕಿಂತ ಎತ್ತರವಾದ ಅಥವಾ ತನ್ನ ಸ್ಥಾನಮಹತ್ತ್ವದಿಂದಾಗಿ ಎತ್ತರವಾದ ಕಟ್ಟಡ. ಅದು ಒಂದು ಪ್ರತ್ಯೇಕ ಕಟ್ಟಡವಾಗಿರಬಹುದು; ಅಥವಾ ದೊಡ್ಡ ಕಟ್ಟಡವೊಂದಕ್ಕೆ ಸೇರಿದಂತಿರಬಹುದು; ಇಲ್ಲೇ ಗೋಡೆಯ ಮೇಲಿಂದ ಚಾಚಿ ನಿಂತಂತೆ ನಿರ್ಮಿಸಿದ್ದಾಗಿರಬಹುದು. ಆಧುನಿಕ ಗೋಪುರಗಳು (ಉದಾ: ವೀಕ್ಷಣಾಗೋಪುರ) ಸಾಮಾನ್ಯವಾಗಿ ಕಠಿನ ಚೌಕಟ್ಟುಗಳಿಂದ ನಿರ್ಮಿಸಿದವಾಗಿರುತ್ತವೆ.
ಊರಿನ ಸುತ್ತ ರಕ್ಷಣೆಗಾಗಿ ಕಟ್ಟಿದ ಕೋಟೆಗಳ ಎತ್ತರ ಹೆಬ್ಬಾಗಿಲುಗಳನ್ನು ಗೋಪುರ ಎನ್ನುತ್ತಿದ್ದುದುಂಟು. ಕಾಲಕ್ರಮದಲ್ಲಿ ದೇವಾಲಯಗಳನ್ನು ಸುತ್ತಿಕೊಂಡಿರುವ ಪ್ರಾಕಾರಗಳ ಮಹಾದ್ವಾರಗಳನ್ನೂ ಗೋಪುರ ಎಂದು ಕರೆದರೂ ಆ ಮಹಾದ್ವಾರದ ಮೇಲೆ ಹಲವು ಅಂತಸ್ತುಗಳಾಗಿ ಉನ್ನತವಾಗಿ ಕಟ್ಟಲಾದ ಕಟ್ಟಡವನ್ನು ಮುಖ್ಯವಾಗಿ ಗೋಪುರ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಆದರೂ ಮಹಾದ್ವಾರ ಮಾತ್ರವಲ್ಲದೆ ದೇವಾಲಯದ ಗರ್ಭಗುಡಿಯ ಮೇಲೆ ನಿರ್ಮಿವಾಗಿರುವ ವಿಮಾನ ಅಥವಾ ಶಿಖರಗಳನ್ನೂ ಗೋಪುರಗಳೆಂದೇ ಕರೆಯುವ ರೂಢಿಯಿದೆ. ದೇವಸ್ಥಾನಗಳ ಉನ್ನತವಾದ ಭಾಗಗಳು ಮಾತ್ರವಲ್ಲದೆ ತಲುವಿನ್ಯಾಸ ಕಿರಿದಾಗಿದ್ದು ಹಲವು ಅಂತಸ್ತುಗಳಾಗಿ ಮೇಲೆದ್ದ ಯಾವ ಕಟ್ಟಡವನ್ನಾದರೂ ಗೋಪುರವೆನ್ನುತ್ತಾರೆ.
ಊರಿನ ಹೆಬ್ಬಾಗಿಲು ರಕ್ಷಣೆಯ ದೃಷ್ಟಿಯಿಂದ ಉನ್ನತವಾದ ಬುರುಜುಗಳನ್ನು ಹೊಂದಿ ಸೈನಿಕ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸುತ್ತಣ ಕೋಟೆಯ ಗೋಡೆಗಿಂತ ಎತ್ತರವಾಗಿದ್ದುದರಿಂದ ಗೋಪುರ ಎನ್ನಿಸಿಕೊಂಡಿತು. ದೇವಾಲಯದ ರಕ್ಷಣೆಗಾಗಿ ಕಟ್ಟಿದ ಪ್ರಾಕಾರದ ಗೋಡೆಗಳ ಮಹಾದ್ವಾರಗಳ ಮೇಲಿನ ಉನ್ನತವಾದ ಕಟ್ಟಡಗಳು ಹೆಚ್ಚು ಅಲಂಕಾರಿಕವಾಗಿ ಬೆಳೆದುವು. ಕೋಟೆಗಳಿಗೆ ಅಲ್ಲಲ್ಲಿ ಎತ್ತರವಾದ ರಕ್ಷಣಾಗೋಪುರಗಳನ್ನೂ ವಿಕ್ಷಣಾಗೋಪುರಗಳನ್ನೂ ಕಟ್ಟುವುದು ಅತ್ಯಂತ ಪ್ರಾಚೀನ ಕಾಲದಿಂದಲೂ ನಡೆದು ಬಂದ ಪದ್ಧತಿ. ಕ್ರಿ.ಪೂ. 2000ಕ್ಕಿಂತ ಹಿಂದೆಯೇ ಕಟ್ಟಿದ ಪ್ರಸಿದ್ಧವಾದ ನಿನೆವ ಕೋಟೆಗೋಡೆಯ ಮೇಲೆ ಇಂಥ 1, 500 ರಕ್ಷಾಣಾಗೋಪುರಗಳಿದ್ದುವು. 2,000 ಮೈಲಿಗಳಿಗೂ ಹೆಚ್ಚು ಉದ್ದವಿರುವ ಚೀನದ ಬೃಹದ್ಗೋಡೆಯ ಹತ್ತಿರದಲ್ಲಿ ಉದ್ದಕ್ಕೂ ಅಲ್ಲಲ್ಲಿ ಎತ್ತರವಾದ ವೀಕ್ಷಣಾಗೋಪುರಗಳಿದ್ದುವು. ರೋಮನರ ಕೋಟೆಗೋಡೆಗಳ ಉದ್ದಕ್ಕೂ ಅಲ್ಲಲ್ಲಿ ಗೋಪುರಗಳಿದ್ದುವು. ಕೆಳಗಿರುವ ಶತ್ರುಗಳ ಮೇಲೆ ಅಲ್ಲಿಂದ ಕಾದ ಎಣ್ಣೆ ಮುಂತಾದವನ್ನು ಸುರಿಯಲೂ ಅಲ್ಲಿ ನಿಂತು ಯುದ್ಧ ಮಾಡಲೂ ಸೌಕರ್ಯಗಳಿರುತ್ತಿದ್ದುವು. ಭಾರತದಲ್ಲೂ ಊರುಗಳ ಹತ್ತಿರದ ಎತ್ತರವಾದ ದಿಣ್ಣೆಯ ಮೇಲೋ ಊರಿನ ನಡುವೆಯೋ ಶತ್ರುಗಳ ಸುಳಿವನ್ನು ಮುಂದಾಗಿ ಕಂಡುಕೊಳ್ಳುವುದಕ್ಕಾಗಿ ಗುಂಡಾಗಿ ಎತ್ತರವಾಗಿ ಕಟ್ಟಿದ್ದ ವೀಕ್ಷಣಾಗೋಪುರಗಳು ಅಲ್ಲಲ್ಲಿ ಕಾಣಸಿಗುತ್ತವೆ.
ದೇವಾಲಯದ ಕಟ್ಟಡಗಳು ಮೊದಲು ಸಾಮಾನ್ಯವಾಗಿದ್ದುವು. ಅದಕ್ಕೆ ಪ್ರಾಕಾರ ಇರುತ್ತಿರಲಿಲ್ಲ. ಆದರೂ ಗರ್ಭ ಗುಡಿಯ ಮೇಲೆ ಒಂದು ಅಂತಸ್ತಿನ ಕಿರುಗೋಪುರ ಕಟ್ಟುವ ಪದ್ಧತಿ ಬಹು ಹಿಂದೆಯೇ ಆರಂಭವಾಗಿರಬೇಕು. ಗುಂಡಾಗಿ ಕಟ್ಟಿದ ಗುಡಿಸಿಲುಗಳ ನಡುವೆ ಎತ್ತರವಾದ ಕಂಬ, ಅದಕ್ಕೆ ಸೇರಿದಂತೆ ಸುತ್ತಲೂ ಇಳಿಜಾರಾಗಿ ಕಟ್ಟಿದ ಗಳುಗಳು, ಮೇಲೆ ಹುಲ್ಲಿನ ಹೊದಿಕೆ. ಮಧ್ಯದ ಕಂಬದ ತುದಿಗೆ ನೀರು ಇಳಿಯದಂತೆ ಬೋರಲುಮುಚ್ಚಿರುವ ಮಡಕೆ - ಈ ಪದ್ಧತಿ ಚರಿತ್ರ ಪೂರ್ವಕಾಲದಿಂದ ನಡೆದುಕೊಂಡು ಬಂದದ್ದು. ಇದು ದೇವಾಲಯಗಳ ಕಟ್ಟಡಗಳಿಗೆ, ಅವುಗಳ ಗೋಪುರಗಳಿಗೆ ಮೂಲಸ್ಫೂರ್ತಿಯಾಗಿರಬೇಕೆಂದು ಕೆಲವರ ವಾದ. ಕಟ್ಟಡಗಳ ವಿನ್ಯಾಸ ಬದಲಾಗುತ್ತ ಹೋದರೂ ಗರ್ಭಗೃಹಗಳ ಮೇಲಿನ ಉನ್ನತವಾದ ಶಿಖರಗಳು ಬುಡದಲ್ಲಿ ಅಗಲವಾಗಿದ್ದು ಮೇಲೆ ಹೋಗುತ್ತ ಕಿರಿದಾಗಿ ತುದಿಯಲ್ಲಿ ಆಮಲಕ ಕಲಶಗಳನ್ನು ಹೊಂದಿರುವುದು ಈ ವಾದಕ್ಕೆ ಪುಷ್ಟಿ ಕೊಡುತ್ತದೆ. ಈ ವಿಮಾನಗಳು, ಶಿಖರಗಳು ಭಾರತದ ಉತ್ತರದಲ್ಲಿ, ದಕ್ಷಿಣದಲ್ಲಿ ಸ್ವತಂತ್ರವಾಗಿ ವೈವಿಧ್ಯಮಯವಾಗಿ ಬೆಳೆಯುತ್ತ ಬಂದು ನಾಗರ ದ್ರಾವಿಡ ಶೈಲಿಗಳ ಹೆಗ್ಗುರುತುಗಳಾಗಿವೆ. ಔತ್ತರೇಯ ಶಿಖರಗಳಲ್ಲಿ ಉದ್ದುದ್ದನೆಯ ಪಟ್ಟಿಕೆಗಳಿಗೆ ಪ್ರಾಮುಖ್ಯ ಇರುತ್ತದೆ. ಗೋಪುರಗಳು ನೇರವಾಗಿ ಮೇಲೆದ್ದು ತುದಿಯಲ್ಲಿ ಒಳಕ್ಕೆ ಬಾಗಿ ಆಮಲಕ ಮತ್ತು ಕಲಶಗಳಿಂದ ಕೂಡಿರುತ್ತವೆ. ದಕ್ಷಿಣದ ದ್ರಾವಿಡ ಶೈಲಿಯಲ್ಲಿ ಗರ್ಭಗುಡಿಯ ಮೇಲಿನ ಗೋಪುರದಲ್ಲಿ ಅಡ್ಡಪಟ್ಟಿಗೆ ಪ್ರಾಮುಖ್ಯ ಇರುತ್ತದೆ. ಅದು ಮೆಟ್ಟಲಾಗಿ ಮೇಲೇರುತ್ತದೆ, ಅಂತಸ್ತುಗಳಾಗಿ ವಿಭಾಗವಾಗಿರುತ್ತದೆ. ಈ ಎರಡು ಶೈಲಿಗಳ ಮಿಶ್ರಣವನ್ನು ಚಾಳುಕ್ಯ ಶೈಲಿಯಲ್ಲೂ ಅದರಿಂದ ಮುಂದೆ ಬೆಳೆದ ಹೊಯ್ಸಳ ಶೈಲಿಯಲ್ಲೂ ಕಾಣಬಹುದು.
ದಕ್ಷಿಣ ಭಾರತದಲ್ಲಿ ಪಲ್ಲವರ ಕಾಲದ ಕೊನೆಯ ದಿನಗಳಲ್ಲಿ ಒಂದಂತಸ್ತಿನ ಕಿರು ಗೋಪುರವಾಗಿ ಆರಂಭವಾಗಿ, ಮುಂದೆ ಚೋಳರ ಕಾಲದಲ್ಲಿ ಬೃಹದಾಕಾರವಾಗಿ ಉನ್ನತವಾಗಿ ಬೆಳೆದ ವಿಮಾನದ ಗೋಪುರಗಳನ್ನು ತಂಜಾವೂರಿನ ಬೃಹದೀಶ್ವರ ದೇವಾಲಯದಂಥ ದೇವಾಲಯಗಳ ಮೇಲೆ ನೋಡಬಹುದು. ಆದರೆ ದೇವಾಲಯಗಳಿಗೆ ರಕ್ಷಣೆಯ ದೃಷ್ಟಿಯಿಂದ ಪ್ರಾಕಾರಗಳನ್ನು ಕಟ್ಟಲಾರಂಭಿಸಿದ ಮೇಲೆ ಇವುಗಳ ಮಹಾದ್ವಾರಗಳ ಮೇಲಿನ ಗೋಪುರಗಳಿಗೆ ಪ್ರಾಮುಖ್ಯ ಹೆಚ್ಚುತ್ತ ಹೋಯಿತು. ಇದನ್ನು ಮುಖ್ಯವಾಗಿ ದ್ರಾವಿಡ ಶಿಲ್ಪರೀತಿಯಲ್ಲಿ ನೋಡಬಹುದು. ಮೊದಲು ಚಿಕ್ಕದಾಗಿದ್ದ ಗೋಪುರಗಳು ವಿಜಯನಗರದ ಕಾಲದಲ್ಲಿ ತಕ್ಕಷ್ಟು ಉನ್ನತವಾಗಿ ನಾಯಕರ ಕಾಲದಲ್ಲಿ 150' ಗೂ ಮೀರಿ ಅದ್ಭುತವಾಗಿ ಬೆಳೆದವು. ದೇವಾಲಯಗಳಿಗೆ ಹಲವು ಪ್ರಾಕಾರಗಳನ್ನು ಕಟ್ಟಿ ನಾಲ್ಕು ದಿಕ್ಕುಗಳಿಗೂ ದ್ವಾರಗೋಪುರಗಳನ್ನು ಹಲವು ಅಂತಸ್ತುಗಳಾಗಿ ಎತ್ತಿಸಿರುವ ಪದ್ಧತಿಯನ್ನು ಮಧುರೆ, ಚಿದಂಬರ ಮೊದಲಾದ ಎಡೆಗಳಲ್ಲಿ ನೋಡಬಹುದು. ಪ್ರತಿ ರಾಜಮನೆತನವೂ ಹಿಂದಿನ ಮನೆತನ ಕಟ್ಟಿಸಿದ್ದಕ್ಕಿಂತ ಬೃಹತ್ತಾದ ಉನ್ನತವಾದ ಗೋಪುರಗಳನ್ನು ಕಟ್ಟಿಸಬೇಕೆಂಬ ಹುರುಡನ್ನು ಪ್ರದರ್ಶಿಸಿದ್ದರಿಂದ ಹೊರ ಪ್ರಾಕಾರಗಳ ಗೋಪುರಗಳು ಅತ್ಯಂತ ಎತ್ತರವಾದುವಾಗಿದ್ದು ಕ್ರಮವಾಗಿ ಒಳಪ್ರಾಕಾರಗಳ ಗೋಪುರಗಳ ಎತ್ತರ ಕಡಿಮೆಯಾಗುತ್ತ ಹೋದುವು. ಆಯತಾಕಾರವಾಗಿ ಮೂರು, ಐದು, ಏಳು, ಒಂಬತ್ತು ಅಥವಾ ಹನ್ನೊಂದು ಅಂತಸ್ತುಗಳಿದ್ದು, ಮೇಲೇರಿದಂತೆ ಕಿರಿದಾಗುವ ಈ ಗೋಪುರಗಳಲ್ಲಿ ಪ್ರತಿ ಅಂತಸ್ತಿಗೂ ಬಾಗಿಲುವಾಡಗಳೂ ಎರಡೂ ಕಡೆಗಳಲ್ಲೂ ದ್ವಾರಪಾಲಕರೂ ಇದ್ದು, ಗೋಡೆಗಳ ಮೇಲೆ ಅರೆಗಂಬಗಳು, ಅರೆಗೋಪುರಗಳು ಮತ್ತು ಹಲವು ಭಂಗಿಗಳಲ್ಲಿರುವ ಮೂರ್ತಿಗಳ ಅಲಂಕರಣಗಳು ತುಂಬಿರುತ್ತವೆ. ಎಲ್ಲ ಅಂತಸ್ತುಗಳೂ ಒಂದೇ ರೀತಿಯಲ್ಲಿದ್ದರೂ ಕೆಳಗಿನಿಂದ ಮೇಲೆ ಹೋಗಹೋಗುತ್ತ ಕಿರಿದಾಗುತ್ತವೆ. ತುತ್ತತುದಿಯಲ್ಲಿ ಪೀಪಾಯಿಯಾಕಾರದ ರಚನೆಯೂ ಅದರ ಮೇಲೆ ಐದರಿಂದ ಒಂಬತ್ತರವರೆಗೆ ಕಲಶಗಳೂ ಇರುತ್ತವೆ. ಮಹಾದ್ವಾರವನ್ನು ಕಲ್ಲಿನಿಂದ ಕಟ್ಟಿದ್ದು, ಮೇಲಿನ ಗೋಪುರವನ್ನು ಇಟ್ಟಿಗೆ ಗಾರೆಗಳಿಂದ ಕಟ್ಟುತ್ತಾರೆ. ಪಕ್ಷಿತೀರ್ಥದಲ್ಲಿ ಊರಿನ ನಡುವೆ ಸ್ವತಂತ್ರವಾಗಿ ನಿಂತಿರುವ ಗೋಪುರ, ಕಂಚಿಯ ಏಕಾಂಬರನಾಥನ ದೇವಾಲಯದ ಮುಂದಿನ ಗೋಪುರ, ಶ್ರೀರಂಗದ ರಂಗನಾಥ ದೇವಾಲಯದ ಮುಂದಿನ ಗೋಪುರ ಮುಂತಾದವು ಬೃಹದ್ಗೋಪುರಗಳ ಸಾಲಿನಲ್ಲಿ ಹೆಸರಿಸಬಹುದಾದಂಥವು. ಕರ್ನಾಟಕದಲ್ಲಿ ಇಷ್ಟು ಉನ್ನತವಾದ ಗೋಪುರಗಳಿಲ್ಲದಿದ್ದರೂ ಹಂಪಿಯ ವಿರೂಪಾಕ್ಷ ದೇವಾಲಯದ ಮುಂದಿನ ಗೋಪುರ, ಬೇಲೂರಿನ ಚೆನ್ನಕೇಶವ ದೇವಾಲಯದ ಮುಂದಿರುವ ಗೋಪುರ, ಆಲಂಬಗಿರಿ, ಮಾಗಡಿ, ಶ್ರೀರಂಗ ಪಟ್ಟಣ, ನಂಜನಗೂಡು, ಚಾಮುಂಡಿ ಬೆಟ್ಟ ಮೊದಲಾದೆಡೆ ಇರುವ ಗೋಪುರಗಳು ತಕ್ಕಮಟ್ಟಿಗೆ ಎತ್ತರವಾಗಿವೆ.
ತೆಳುವಾಗಿ ಉನ್ನತವಾಗಿ ತುದಿಯಲ್ಲಿ ಚೂಪಾಗಿ ಎದ್ದಿರುವ ಗಾತಿಕ್ ಶೈಲಿಯ ಗೋಪುರಗಳನ್ನೂ ಚೌಕವಾಗಿ ನೇರವಾಗಿ ಮೇಲೆದ್ದಿರುವ ಪುನರುಜ್ಜೀವನ ಶೈಲಿಯ ಗೋಪುರಗಳನ್ನು ಯೂರೋಪಿನ ಇತರೆಡೆಯ ನೂರಾರು ಚರ್ಚುಗಳ ಮೇಲೆ ಕಾಣಬಹುದು. ಧರ್ಮಮಂದಿರಗಳಲ್ಲಿ ಮೇಲಲ್ಲದೆ ಇತರ ಉದ್ದೇಶಗಳಿಗಾಗಿ ಕಟ್ಟಿದ ಹಲವಾರು ರೀತಿಯ ಗೋಪುರಗಳಲ್ಲಿ ಪೀಸಾ ಓಲುಗೋಪುರ ಪ್ರಸಿದ್ಧವಾದ್ದು. ಹೀಗೆಯೇ ದೂರದ ವರೆಗೂ ಕಾಣಿಸಬೇಕೆಂಬ ಉದ್ದೇಶದಿಂದ ಕಟ್ಟಿರುವ ವೆಸ್ಟ್ ಮಿನ್‍ಸ್ಟರ್ ಗೋಪುರದಂಥ ಗಡಿಯಾರ ಗೋಪುರ, ಉಕ್ಕಿನಿಂದಲೇ ನಿರ್ಮಿಸಲಾದ ಪ್ಯಾರಿಸಿನ ಉನ್ನತವಾದ ಐಫೆಲ್ ಗೋಪುರ ಇವು ಉಲ್ಲೇಖಾರ್ಹ.
ಉಲ್ಲೇಖಗಳು
[ಬದಲಾಯಿಸಿ]Dallapiccola, Anna L. (2002). Dictionary of Hindu Lore and Legend. London: Thames & Hudson. ISBN 0-500-51088-1.
- Harle, J.C., The Art and Architecture of the Indian Subcontinent, 2nd edn. 1994, Yale University Press Pelican History of Art, ISBN 0300062176