ವಿಷಯಕ್ಕೆ ಹೋಗು

ಮಂದಾರ ಕೇಶವ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂದಾರ ಕೇಶವ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದವರು. ಕನ್ನಡ ಹಾಗೂ ತುಳು ಭಾಷೆಯ ಲೇಖಕ, ವಿದ್ವಾಂಸ ಮತ್ತು ಪ್ರಾಧ್ಯಾಪಕ. ಕನ್ನಡ ಹಾಗೂ ತುಳುವಿನಲ್ಲಿ ಕಾವ್ಯ, ಯಕ್ಷಗಾನ, ವಿಮರ್ಶೆ, ವ್ಯಾಕರಣ, ಸಂಶೋಧನೆಯ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ತುಳುವಿನಲ್ಲಿ ಮಂದಾರ ರಾಮಾಯಣ ಎಂಬ ಮಹಾಕಾವ್ಯ ಬರೆದಿದ್ದಾರೆ. ಅವರು ಸಾಹಿತ್ಯದ ಜೊತೆಗೆ ಯಕ್ಷಗಾನ ಅರ್ಥದಾರಿಯಾಗಿದ್ದರು.[]

ಬಾಲ್ಯ ಮತ್ತು ಶಿಕ್ಷಣ

[ಬದಲಾಯಿಸಿ]

ಕೇಶವ ಭಟ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಮಂದಾರದಲ್ಲಿ ೧೯೧೯ರ ಜನವರಿ ೬ರಂದು ಜನಿಸಿದರು. ಅವರ ತಂದೆ ಲಕ್ಷೀನಾರಾಯಣ ಭಟ್ ಹಾಗೂ ತಾಯಿ ತುಂಗಮ್ಮ. ಅವರು ಕರಾಡ ಬ್ರಾಹ್ಮಣ ವಂಶಕ್ಕೆ ಸೇರಿದ್ದರು. ಅವರ ಮಾತೃ ಭಾಷೆ ಕರಾಡ ಭಾಷೆಯಾಗಿದ್ದರೂ ಮನೆ ಭಾಷೆ ಕನ್ನಡವಾಗಿತ್ತು. ಕೇಶವ ಭಟ್ಟರ ತಂದೆ ಲಕ್ಷ್ಮೀನಾರಾಯಣರಿಗೆ ಕೇಶವ ಭಟ್ಟರನ್ನು ಸೇರಿಸಿ ಒಟ್ಟು ಐದು ಮಕ್ಕಳು. ಕೇಶವ ಭಟ್ ಅವರು ಕುಡುಪಿನ ಜಿಲ್ಲಾ ಬೋರ್ಡ್ ಶಾಲೆಯಲ್ಲಿ ಎರಡು ವರ್ಷಗಳ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಡೆಸಿದರು. ಕೊಂಚಾಡಿಯ ರಾಮಶ್ರಮ ಶಾಲೆಯಲ್ಲಿ ಏಳನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮುಂದುವರೆಸಿದರು.

ವೃತ್ತಿ ಜೀವನ

[ಬದಲಾಯಿಸಿ]

ಅವರ ಕುಟುಂಬವು ಕೃಷಿ ಅವಲಂಬಿತವಾಗಿತ್ತು. ೧೯೫೨ರಲ್ಲಿ ಮದ್ರಾಸಿನ ವಿದ್ವಾನ್ ಪರೀಕ್ಷೆಯಲ್ಲಿ ಪಾಸಾಗಿ ಗುರುಪುರದ ಹಿಂದೂ ಹೈಯರ್ ಪ್ರೈಮರಿ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ೧೯೫೪ರಲ್ಲಿ ಕೂಳೂರಿನ ಚರ್ಚ್ ಶಾಲೆಯಲ್ಲಿ ಕನ್ನಡ ಪಂಡಿತರಾಗಿ ಸೇರಿ ೧೯೭೫ರಲ್ಲಿ ಅಲ್ಲಿಯೇ ನಿವೃತ್ತರಾದರು. ೧೯೭೫ರಿಂದ ಯಕ್ಷಗಾನ ಕೃತಿ ರಚನೆಯೊಂದಿಗೆ ತಾಳಮದ್ದಳೆಗಳಲ್ಲಿ ಅರ್ಥದಾರಿಗಳಾಗಿ ಭಾಗವಹಿಸಿದರು. ೧೯೪೦ರಲ್ಲಿ ಫರಂಗಿಪೇಟೆ ಹಸನಬ್ಬ ಒಡೆಯರ್ ಸ್ಥಾಪನೆ ಮಾಡಿದ ಒಡೆಯರ್ ಬಳಗದ ತಾಳಮದ್ದಲೆ ಕೂಟದಲ್ಲಿ ಭಾಗವತರಾಗಿ ಪಾಲ್ಗೊಳ್ಳುತ್ತಿದ್ದರು.

ಸಾಹಿತ್ಯ ಕ್ಷೇತ್ರ

[ಬದಲಾಯಿಸಿ]

ಮಂದಾರ ಕೇಶವ ಭಟ್ ಅವರ ಕೃತಿಗಳು ತುಳು ಜನಪದ ಮಹಾಕಾವ್ಯಗಳಾದ ಪಾಡ್ದನ-ಕಬಿತಗಳು, ಜನಪದ ಕಥೆಗಳು, ತುಳುಜನರ ನುಡಿಗಟ್ಟುಗಳು ಕೃತಿರಚನೆಯ ಮೇಲೆ ಪ್ರಭಾವ ಬೀರಿದೆ. ಗಾದೆ ಮಾತುಗಳು, ನುಡಿಗಟ್ಟುಗಳು ಇವರ ಕೃತಿಯಲ್ಲಿ ಹೇರಳವಾಗಿ ಬಳಸಲಾಗಿದೆ. ವ್ಯಾಕರಣ, ಸಂಶೋಧನೆ, ಯಕ್ಷಗಾನದ ಕುರಿತಾದ ಹಲವು ಲೇಖನಗಳು ಪ್ರಕಟವಾಗಿವೆ.[][]

ತುಳು ಕೃತಿಗಳು

[ಬದಲಾಯಿಸಿ]
  1. ಮಂದಾರ ರಾಮಾಯಣ- ಎಸಳ್ ೧-೨:೧೯೭೭, ಮಣಿಪಾಲ ಸಾಹಿತ್ಯ ಸಂಘ
  2. ಮಂದಾರ ರಾಮಾಯಣ, ೧೯೮೭ ವಜ್ರದೀಪ ಪ್ರಕಾಶನ, ಬೆಳಗಾವಿ
  3. ಕನತ್ತ ಪೊಣ್ಣು, ೧೯೯೧,ಶ್ರೀನಿವಾಸ ಪ್ರಕಾಶನ, ಕುಡುಪು(ಭಾಸ ಕವಿಯ ಸ್ವಪ್ನವಾಸವಾದತ್ತ ಕೃತಿಯ ಅನುವಾದ)
  4. ಜಾಗಂಟೆ, ೧೯೯೧, ಶ್ರೀನಿವಾಸ ಪ್ರಕಾಶನ ಕುಡುಪು(ಕವಿತೆಗಳು)
  5. ಬೀರದ ಬೊಲ್ಪು, ೧೯೯೭, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
  6. ತುಳು ಪಾಠ ಪುಸ್ತಕ (ಅಪ್ರಕಟಿತ)

ಕನ್ನಡ ಕೃತಿಗಳು

[ಬದಲಾಯಿಸಿ]
  1. ಉನ್ಮತ್ತ ರಾಘವ,೧೯೯೭,ಯುಗಪುರುಷ ಪ್ರಕಟಣಾಲಯ, ಕಿನ್ನಿಗೋಳಿ
  2. ಶ್ರೀರಾಮ ಪರಂಧಾಮ, ೧೯೯೭, ಯುಗಪುರುಷ ಪ್ರಕಟಣಾಲಯ ಕಿನ್ನಿಗೋಳಿ(ಯಕ್ಷಗಾನ)
  3. ಮಂದಾರ ಮಾಲೆ (ಕವಿತೆಗಳು)
  4. ಹುಚ್ಚುಜೋಗಿಯ ಹಾಡು (ಅಪ್ರಕಟಿತ)
  5. ಸತ್ಯವತಿ ಶಪಥ ಮತ್ತು ಪುಣ್ಯಕೋಟಿ(ಯಕ್ಷಗಾನ ಪ್ರಸಂಗಗಳು)
  6. ಗೋವರ್ಣೋದ್ಧರಣ (ಯಕ್ಷಗಾನ)
  7. ಗಜಾಸುರ ವಧೆ(ಯಕ್ಷಗಾನ-ಅಪ್ರಕಟಿತ)
  8. ಅಹಲ್ಯೊದ್ಧಾರ
  9. ಮಾಯೆದ ಸೂರ್ಪನಖಿ ಮತ್ತು ಮೋಜೆದ ಭರತ
  10. ಮಂದಾರ ರಾಮಾಯಣದ ಕನ್ನಡ ಅನುವಾದ

ಯಕ್ಷಗಾನ

[ಬದಲಾಯಿಸಿ]

ಮಂದಾರ ಕೇಶವ ಭಟ್ ಅವರು ಸಾಹಿತಿ ಮಾತ್ರವಲ್ಲದೆ ಯಕ್ಷಗಾನದ ಕಲಾವಿದರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಬಾಲ್ಯದಿಂದಲೇ ಕದ್ರಿ, ಕಟೀಲು, ಧರ್ಮಸ್ಥಳ ಮೇಳಗಳ ಯಕ್ಷಗಾನವನ್ನು ನೋಡಿಕೊಂಡು ಬೆಳೆದಿದ್ದರು. ೧೯೪೦ರಿಂದ ಒಡೆಯರ್ ಬಳಗದಲ್ಲಿ ಭಾಗವತರಾಗಿದ್ದರು. ೧೯೪೦ರಿಂದ ೧೯೮೫ರ ವರೆಗೆ ಯಕ್ಷಗಾನದಲ್ಲಿ ಅರ್ಥದಾರಿಯಾಗಿ ಭಾಗವತಿಕೆ ಮತ್ತು ಅರ್ಥಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ೧೯೮೦ರ ಬಳಿಕ ಸ್ವರಶಕ್ತಿ ಕಡಿಮೆಯಾದ ಹಿನ್ನಲೆಯಲ್ಲಿ ಭಾಗವತಿಕೆಯನ್ನು ನಿಧಾನವಾಗಿ ಬಿಡುತ್ತಾ ಬಂದಿದ್ದರು.

ಪ್ರಶಸ್ತಿಗಳು

[ಬದಲಾಯಿಸಿ]
  • ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್ (೧೯೯೬)
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿ (೧೯೮೭)
  • ತುಳು ಅಕಾಡೆಮಿ ಗೌರವ ಪ್ರಶಸ್ತಿ (೧೯೯೬)
  • ವಿಶ್ವ ತುಳು ಸಾಹಿತ್ಯ ಸಮ್ಮೇಳನ ಪ್ರಶಸ್ತಿ
  • ತುಳು ಮಲ್ಲಿಗೆ ಪ್ರಶಸ್ತಿ
  • ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಪ್ರಶಸ್ತಿ

ಉಲ್ಲೇಖಗಳು

[ಬದಲಾಯಿಸಿ]
  1. ಮಹಾಕವಿ ಮಂದಾರ ಕೇಶವ ಭಟ್ಟ, ಲೇಖಕರು:ಡಾ. ನಿಕೇತನ, ಕನ್ನಡ ಸಂಘ ಕಾಂತವರ
  2. ಜಾಗಂಟೆ, ಶ್ರೀನಿವಾಸ ಪ್ರಕಾಶನ, ಕುಡುಪು
  3. ನಿಕೇತನ, ಅಪ್ರಕಟಿತ ಸಂಶೋಧನಾ ಗ್ರಂಥ