ಚಪ್ಪೆರೋಗ
ಚಪ್ಪೆರೋಗವು ಮೆಲಕುಹಾಕುವ ಪ್ರಾಣಿಗಳಲ್ಲಿ ಕಾಣಬರುವ ತೀವ್ರ ಬಗೆಯ ಅಂಟುಜಾಡ್ಯ (ಬ್ಲ್ಯಾಕ್ ಕ್ವಾರ್ಟರ್; ಬ್ಲ್ಯಾಕ್ ಲೆಗ್). ಮುಂಗಾರು ಮಳೆಯ ಆರಂಭದ ಕಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಆರು ತಿಂಗಳಿನಿಂದ ಮೂರು ವರ್ಷ ವಯಸ್ಸಿನ ಪ್ರಾಣಿಗಳು ಈ ರೋಗಕ್ಕೆ ಬಲುಬೇಗ ಒಳಗಾಗುತ್ತವೆ. ಆಕ್ಸಿಜನ್ ರಹಿತ ಸ್ಥಿತಿಗಳಲ್ಲಿ ಬೆಳೆಯುವ ಕ್ಲಾಸ್ಟ್ರಿಡಿಯನ್ ಜಾವಿಯೈ ಎಂಬ ಬ್ಯಾಕ್ಟೀರಿಯ ಈ ರೋಗವನ್ನು ಉಂಟುಮಾಡುತ್ತದೆ. ಪ್ರಪಂಚದಾದ್ಯಂತ ಇದರ ವ್ಯಾಪ್ತಿ ಉಂಟು. ಬರಿಯ ಹಸು, ಎಮ್ಮೆಗಳಲ್ಲದೆ ಕುರಿ, ಮೇಕೆ, ಹಂದಿ, ಒಂಟೆ, ಜಿಂಕೆಗಳಲ್ಲೂ ಇದು ಕಂಡುಬರುತ್ತದೆ.
ರೋಗಲಕ್ಷಣಗಳು
[ಬದಲಾಯಿಸಿ]ರೋಗಪೀಡಿತ ಪ್ರಾಣಿಯ ಭುಜ, ಕತ್ತು ಮತ್ತು ಪೃಷ್ಠ ಭಾಗಗಳಲ್ಲಿ ಅನಿಲ ಶೇಖರಣೆ, ಬಾವು, ಕುಂಟು ಮತ್ತು ಜ್ವರ ಇವು ಚಪ್ಪೆರೋಗದ ಮುಖ್ಯಲಕ್ಷಣಗಳು ಬಾತಿರುವ ಭಾಗ ಬೆಚ್ಚಗಿದ್ದು ತುಂಬ ನೋವನ್ನು ಉಂಟುಮಾಡುತ್ತದೆ. ಕೆಲವು ಗಂಟೆಗಳಲ್ಲಿ ಒಳಗಿನ ಕೀವು ಹೊರಬೀಳುವುದಲ್ಲದೆ ಆ ಭಾಗದ ಸ್ಪರ್ಶವೇದಿತ್ವ ಕಡಿಮೆಯಾಗುತ್ತದೆ. ಬರಬರುತ್ತ ಆ ಭಾಗ ತಣ್ಣಗೂ ವೇದನಾರಹಿತವೂ ಆಗುತ್ತದೆ. ಪ್ರಾಣಿ ನಡೆಯಲು ಅಸಮರ್ಥವಾಗುತ್ತದೆ. ರೋಗಪೀಡಿತ ಭಾಗದಲ್ಲಿ ಒಳಗಿನ ಸ್ನಾಯುವಿನ ಅಂಗಾಂಶಗಳೆಲ್ಲ ಸತ್ತುಹೋಗಿ ಕೊಳೆಯ ತೊಡಗುತ್ತವೆ. ಇಂಥ ಸ್ನಾಯು ಕಪ್ಪಗಿರುತ್ತದಲ್ಲದೆ ಹಳಸಲು ಬೆಣ್ಣೆಯಂತೆ ನಾರುತ್ತದೆ. ರೋಗಕಾರಕ ಜೀವಿಯ ಬೀಜಾಣುಗಳಿಂದ ಕೂಡಿದ ನೀರು ಮತ್ತು ಆಹಾರದ ಮೂಲಕ ರೋಗ ಹರಡುತ್ತದೆ. ಅಲ್ಲದೆ ಇಂಥ ಬೀಜಾಣುಗಳಿರುವ ಹುಲ್ಲಿನಲ್ಲಿ ನಡೆದಾಡುವ ಪ್ರಾಣಿಗಳ ಮೈಮೇಲೆ ಗಾಯಗಳಿದ್ದರೆ ಅವುಗಳ ಮೂಲಕ ಕೂಡ ರೋಗಾಣುಗಳು ಪ್ರಾಣಿಗಳ ದೇಹವನ್ನು ಸೇರಬಲ್ಲವು. ದೇಹವನ್ನು ಹೊಕ್ಕ 1-5 ದಿವಸಗಳ ಅನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪೀಡಿತ ಪ್ರಾಣಿ ಒಂದೆರಡು ದಿವಸಗಳಲ್ಲಿಯೇ ಸತ್ತುಹೋಗುತ್ತದೆ.
ಚಿಕಿತ್ಸೆ ಮತ್ತು ನಿಯಂತ್ರಣ
[ಬದಲಾಯಿಸಿ]ಚಿಕ್ಕವಯಸ್ಸಿನ ಪ್ರಾಣಿಗಳಿಗೆ ದೇವಿ ಹಾಕುವುದರ ಮೂಲಕ ರೋಗವನ್ನು ತಡೆಗಟ್ಟಬಹುದು. ಕೊನೆಯ ಪಕ್ಷ ವರ್ಷಕ್ಕೊಮ್ಮೆ ದೇವಿ ಹಾಕುತ್ತಿರಬೇಕು. ಚಪ್ಪೆರೋಗದಿಂದ ಸತ್ತ ಪ್ರಾಣಿಗಳ ದೇಹವನ್ನು ಸುಟ್ಟುಹಾಕಬೇಕು ಇಲ್ಲವೆ ಹೂಳಿಬಿಡಬೇಕು. ಇದರಿಂದ ರೋಗದ ಹರಡುವಿಕೆಯನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಪ್ರಾಣಿಗಳನ್ನು ಹೂಳಿದ ಸ್ಥಳದ ಮೇಲೆಲ್ಲ ಹುಲ್ಲನ್ನು ದಪ್ಪಪದರವಾಗಿ ಹಾಕಿದರೆ ಒಳ್ಳೆಯದು.