ವಿಷಯಕ್ಕೆ ಹೋಗು

ಶಿಕ್ಷಣ ಮಾಧ್ಯಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಕ್ಷಣ ಮಾಧ್ಯಮ ಎಂದರೆ ಶಿಕ್ಷಣ ನೀಡಲು ಬಳಸುವ ಮಾಧ್ಯಮ. ಭಾಷಾರಹಿತ ಮಾಧ್ಯಮಗಳ ಬಳಕೆ ಶಿಕ್ಷಣದ ಕೆಲವು ಸನ್ನಿವೇಶಗಳಲ್ಲಿ ಇದ್ದರೂ ಭಾಷೆಯನ್ನು ಪರಿಗಣಿಸದೆ ಶಿಕ್ಷಣದ ಬಗ್ಗೆ ಆಲೋಚಿಸಲು ಸಾಧ್ಯವಿಲ್ಲ. ಎಂದೇ, ಬೋಧನ ಮಾಧ್ಯಮವನ್ನು (ಮೀಡಿಯಮ್ ಆಫ಼್ ಇನ್‍ಸ್ಟ್ರಕ್ಷನ್) ಶಿಕ್ಷಣ ಮಾಧ್ಯಮ ಕ್ಕೆ ಸಮಾನಾರ್ಥಕವಾಗಿ ಬಳಸುವುದು ವಾಡಿಕೆ. ಭಾಷೆಗಳನ್ನು ಹೊರತುಪಡಿಸಿ ಉಳಿದ ವಿಷಯಗಳನ್ನು ಬೋಧಿಸಲು ಬಳಸುವ ಭಾಷೆಯೇ ಬೋಧನ ಮಾಧ್ಯಮ.

ಮಾತೃಭಾಷೆಯಲ್ಲಿ ಕಲಿಯುವುದು ನೈಸರ್ಗಿಕ ಅಥವಾ ಸ್ವಾಭಾವಿಕ ಪ್ರಕ್ರಿಯೆ. ಮಾತೃಭಾಷಾ ಮಾಧ್ಯಮದ ಮುಖೇನ ಕಲಿಯುವ ಮಕ್ಕಳ ಕಲಿಕೆ ಅಪೇಕ್ಷಿತ ವೇಗದಲ್ಲಿ ಜರಗಿ ಅಪೇಕ್ಷಿತ ಮಟ್ಟವನ್ನು ಬೇಗನೆ ತಲಪುತ್ತದೆ. ಈ ತನಕ ನಡೆದಿರುವ ಸಂಶೋಧನೆಗಳು ಇದನ್ನು ಪುಷ್ಟೀಕರಿಸುತ್ತವೆ. ಯಾವ ರಾಷ್ಟ್ರಗಳಲ್ಲಿ ಸ್ನಾತಕೋತ್ತರ ಶಿಕ್ಷಣವೂ ಸೇರಿದಂತೆ ಎಲ್ಲ ಹಂತಗಳಲ್ಲಿ ಶಿಕ್ಷಣವನ್ನು ಆಯಾ ಜನತೆಯ ಭಾಷೆಯಲ್ಲಿ ನೀಡಲಾಗುತ್ತಿದೆಯೋ ಅವು ವೇಗವಾಗಿ ವಿಕಸಿಸುತ್ತಿರುವುದನ್ನು ಕಾಣಬಹುದು. ಆದರೂ ವಸಾಹತುಗಳಲ್ಲಿ, ಪರಕೀಯರ ಆಳ್ವಿಕೆಯಿಂದ ಮುಕ್ತಿ ಪಡೆದ ರಾಷ್ಟ್ರಗಳಲ್ಲಿ ಮತ್ತು ಬಹುಭಾಷಾ ರಾಷ್ಟ್ರಗಳಲ್ಲಿ (ಉದಾ: ಭಾರತದಲ್ಲಿ 1576 ವರ್ಗೀಕೃತ, 1796 ಅವರ್ಗೀಕೃತ ಭಾಷೆಗಳಿವೆ. ಇವುಗಳ ಪೈಕಿ 10,000ಕ್ಕೂ ಹೆಚ್ಚು ಮಂದಿ ಬಳಸುವ ಭಾಷೆಗಳು 216) ಅನ್ಯಭಾಷೆಯ ಮೂಲಕ ಕಲಿಸುವ ಅಸ್ವಾಭಾವಿಕ ಪ್ರಯತ್ನ ಬಹುಕಾಲ ಮಾಡಿದ್ದರಿಂದ ಅಲ್ಲಿ ಮಾತ್ರ ಬೋಧನಮಾಧ್ಯಮ ಯಾವುದು ಆಗಿರಬೇಕೆಂಬ ಜಿಜ್ಞಾಸೆ ಇದೆ. ಇಂಥ ರಾಷ್ಟ್ರಗಳಲ್ಲಿಯೂ ಅನ್ಯಭಾಷೆಗಳನ್ನು ನಿರ್ಲಕ್ಷಿಸದೆ ಮಾತೃಭಾಷೆಯ ಮೂಲಕ ಶಿಕ್ಷಣಕ್ಕೆ ಆದ್ಯತೆ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಈ ರಾಷ್ಟ್ರಗಳಲ್ಲಿ ದ್ವಿಭಾಷಾ ಸಾಕ್ಷರತೆ, ತ್ರಿಭಾಷಾ ಸಾಮಥ್ರ್ಯ ವರ್ಧನೆ ಇತ್ಯಾದಿ ಪರಿಕಲ್ಪನೆಗಳನ್ನು ಹುಟ್ಟುಹಾಕಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ. ವೃತ್ತಿ ಅಥವಾ ಉದ್ಯಮ ಜಗತ್ತಿನಲ್ಲಿ ಇಂಗ್ಲಿಷ್ ಸಂವಹನ ಮಾಧ್ಯಮದ ಸ್ಥಾನ ಗಿಟ್ಟಿಸಿಕೊಂಡಿರುವುದರಿಂದ ಸಾರ್ವತ್ರಿಕ ಶಿಕ್ಷಣ ಮಾತೃಭಾಷಾ ಮಾಧ್ಯಮದಲ್ಲಿ, ಉನ್ನತ ಶಿಕ್ಷಣ ಇಂಗ್ಲಿಷ್‍ಭಾಷಾ ಮಾಧ್ಯಮದಲ್ಲಿ ಎಂಬ ಸೂತ್ರಾನುಷ್ಠಾನವೂ ಕೆಲವೆಡೆ ಆಗುತ್ತಿದೆ. (ಉದಾ: ಹಾಂಗ್‍ಕಾಂಗ್: ಸೆಕೆಂಡರಿ ಶಾಲೆಗಳಲ್ಲಿ ಮಾತೃಭಾಷೆ ಬೋಧನಮಾಧ್ಯಮ, ವಿದ್ಯಾರ್ಥಿಗಳ ದ್ವಿಭಾಷಾ ಸಾಕ್ಷರತೆ ಮತ್ತು ತ್ರಿಭಾಷಾಸಾಮಥ್ರ್ಯ ವರ್ಧನೆ ಗುರಿ. ದಕ್ಷಿಣ ಆಫ್ರಿಕ: ಮೊದಲ ಆರು ವರ್ಷಗಳ ಶಿಕ್ಷಣ ಮಾತೃಭಾಷೆಯಲ್ಲಿ, ಇಂಗ್ಲಿಷ್ ಒಂದು ವಿಷಯ, ಆರು ವರ್ಷಗಳನಂತರ ಅಗತ್ಯವಾದರೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ನೀತಿ ಅಳವಡಿಸಿಕೊಳ್ಳುವ ಪ್ರಯತ್ನ).

ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಪರಿಸ್ಥಿತಿ ಇಂತಿದೆ: ಸರ್ಕಾರಿ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಪ್ರಾದೇಶಿಕ (ರೀಜನಲ್) ಭಾಷೆ ಬೋಧನಮಾಧ್ಯಮವಾಗಿದೆ. ಉನ್ನತ ಶಿಕ್ಷಣ ಹಂತದಲ್ಲಿ ಪ್ರಾದೇಶಿಕ ಭಾಷೆಯನ್ನು ಬೋಧನಮಾಧ್ಯಮವಾಗಿ ಅಳವಡಿಸುವ ಪ್ರಯತ್ನ ನಡೆದಿದೆ. ಪ್ರಾದೇಶಿಕ ಭಾಷೆಯಲ್ಲದ ಭಾಷಾಮಾಧ್ಯಮದಲ್ಲಿ ಕಲಿಯುವ ಅವಕಾಶದ ದೃಷ್ಟಿಯಿಂದ ರಾಜ್ಯಗಳ ನಡುವೆ ವಿಭಿನ್ನತೆ ಇದೆ. ಖಾಸಗಿ ಸಂಸ್ಥೆಗಳಲ್ಲಿ ಬೋಧನಮಾಧ್ಯಮವಾಗಿ ಇಂಗ್ಲಿಷ್ ಪ್ರಾಬಲ್ಯ ಹೆಚ್ಚು. ಭಾಷಾ ಕಲಿಕೆಯ ದೃಷ್ಟಿಯಿಂದ ಸೆಕೆಂಡರಿ ಶಾಲೆಗಳಲ್ಲಿ ತ್ರಿಭಾಷಾ ಸೂತ್ರದ (ಹಿಂದಿಭಾಷಾ ರಾಜ್ಯಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನೊಂದಿಗೆ ಒಂದು ಆಧುನಿಕ ಭಾರತೀಯ ಭಾಷೆ - ದಕ್ಷಿಣ ಭಾರತದ ಭಾಷೆಗಳಿಗೆ ಆದ್ಯತೆ; ಹಿಂದಿಯೇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆ ಮತ್ತು ಇಂಗ್ಲಿಷ್‍ನೊಂದಿಗೆ ಹಿಂದಿ. ವಿಶ್ವವಿದ್ಯಾಲಯ ಗಳಲ್ಲಿ ಮತ್ತು ಕಾಲೇಜುಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಅಧ್ಯಯನಾವಕಾಶ) ಅಳವಡಿಕೆಗೆ ತೀವ್ರ ಒತ್ತು ಕೊಡಲಾಗಿದೆ.

ಪ್ರದೇಶಿಕ ಭಾಷೆಯಿಂದ ಭಿನ್ನವಾದ ಮಾತೃಭಾಷೆಯ ಸ್ಥಾನಮಾನದ ಅಸ್ಪಷ್ಟತೆ, ಅಧ್ಯಯಿಸಬೇಕಾದ ಭಾಷೆಯ ಅಥವಾ ಬೋಧನಮಾಧ್ಯಮದ ಆಯ್ಕೆಗೆ ಮತ್ತು ಅಭಿಜಾತ ಭಾಷೆಗಳ ಅಧ್ಯಯನಕ್ಕೆ ಅವಕಾಶರಾಹಿತ್ಯ, ಆಧುನಿಕ ಭಾರತೀಯ ಭಾಷೆಯ ಪರಿಕಲ್ಪನೆಯ ಅಸ್ಪಷ್ಟತೆ ತ್ರಿಭಾಷಾಸೂತ್ರದ ದೋಷಗಳು ಎನ್ನಲಾಗಿದೆ. ಈ ಕಾರಣಗಳಿಂದಾಗಿ ಪ್ರಾದೇಶಿಕ ಭಾಷೆಯನ್ನು ಪ್ರಾಥಮಿಕ ಹಂತದ ಶಿಕ್ಷಣಮಾಧ್ಯಮವಾಗಿ ಕಡ್ಡಾಯಗೊಳಿಸುವ ಕೆಲವು ಪ್ರಯತ್ನಗಳನ್ನು ನ್ಯಾಯಾಲಯಗಳು ಅಸಿಂಧುಗೊಳಿಸಿವೆ.

ರಾಜ್ಯದ ಅಧಿಕೃತ ಆಡಳಿತ ಭಾಷೆ, ಕೇಂದ್ರ ಸರ್ಕಾರದ ಅಧಿಕೃತ ಆಡಳಿತ ಭಾಷೆಗಳ ಪೈಕಿ ಒಂದು, ಇವೆರಡರಿಂದ ಭಿನ್ನವಾದ ಆಧುನಿಕ ಭಾರತೀಯ ಭಾಷೆ ಎಂಬುದಾಗಿ ತ್ರಿಭಾಷಾ ಸೂತ್ರವನ್ನು ವ್ಯಾಖ್ಯಾನಿಸಬೇಕೆಂಬ ಅಭಿಪ್ರಾಯವೂ ಇದೆ. ರಾಜ್ಯದ ಅಧಿಕೃತ ಆಡಳಿತ ಭಾಷೆ ಮಾತೃಭಾಷೆಯಿಂದ ಭಿನ್ನವಾಗಿರುವ ಸಮುದಾಯಗಳ ಮಕ್ಕಳು ಪ್ರಾಥಮಿಕ ಹಂತಕ್ಕೆ ಪ್ರವೇಶಿಸುವಾಗ ಮಾತೃಭಾಷಾಮಾಧ್ಯಮದಲ್ಲಿ ಶಿಕ್ಷಣ ಆರಂಭಿಸಬೇಕು, ಸೆಕೆಂಡರಿ ಹಂತ ತಲಪುವುದರ ಒಳಗೆ ಅವರನ್ನು ರಾಜ್ಯಭಾಷಾಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಸಮರ್ಥರನ್ನಾಗಿಸಬೇಕು ಎಂಬ ಸಲಹೆಯೂ ಇದೆ. ಸಂಸ್ಕøತ ಅಥವಾ ಇತರ ಅಭಿಜಾತ ಭಾಷೆಗಳನ್ನು ಕಲಿಯ ಬಯಸುವವರಿಗೆ ಐಚ್ಛಿಕ ವಿಷಯವಾಗಿ ಕಲಿಯಲು ಅವಕಾಶ ಒದಗಿಸುವ ಬಗ್ಗೆ ಚಿಂತನೆ ಮಾಡಬೇಕೆಂಬ ಸಲಹೆಯೂ ಇದೆ.

ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿಸುವ ಪ್ರಯತ್ನಗಳಿವು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: