ಖರ್ಜೂರದ ಮರ
ಖರ್ಜೂರದ ಮರವು ಅರಿಕೇಸೀ (ಪಾಮೀ) ಕುಟುಂಬಕ್ಕೆ ಸೇರಿದ ಸುಪ್ರಸಿದ್ಧ ಹಣ್ಣಿನ ಮರ. ತೆಂಗು, ಈಚಲು ಮುಂತಾದ ಮರಗಳಿಗೆ ಬಲು ಹತ್ತಿರದ ಸಂಬಂಧಿ. ಸಸ್ಯಶಾಸ್ತ್ರೀಯ ಹೆಸರು ಫೀನಿಕ್ಸ್ ಡ್ಯಾಕ್ಟೈಲಿಫೆರ. ಇಂಗ್ಲಿಷಿನಲ್ಲಿ ಬಳಕೆಯ ಹೆಸರು ಡೇಟ್ ಪಾಮ್. ಇದರ ಹಣ್ಣನ್ನು ಸಂಸ್ಕøತದಲ್ಲಿ ಪಿಂಡ-ಖರ್ಜೂರ ಎಂದೂ ಕನ್ನಡದಲ್ಲಿ ಖರ್ಜೂರ, ಉತ್ತತ್ತಿ, ಕಾರೀಕ, ಗಿಜ್ಜಿರ ಹಣ್ಣು ಎಂದೂ ಕರೆಯುತ್ತಾರೆ.
ಖರ್ಜೂರದ ಮರ ಏಷ್ಯ ಮತ್ತು ಆಫ್ರಿಕಗಳ ಉಷ್ಣವಯಗಳಲ್ಲೆಲ್ಲ ಸ್ವಾಭಾವಿಕವಾಗಿ ಬೆಳೆಯುವುದಲ್ಲದೆ ಬೇಸಾಯದಲ್ಲೂ ಇದೆ. ಮೂಲತಃ ಎಲ್ಲಿಯದೆಂದು ಖಚಿತವಾಗಿ ತಿಳಿಯದಿದ್ದರೂ ಪರ್ಷಿಯದ ಖಾರಿ ಇಲ್ಲವೆ ಪಶ್ಚಿಮ ಪಾಕಿಸ್ತಾನ ಇದರ ಉಗಮಸ್ಥಾನವೆಂದು ನಂಬಲಾಗಿದೆ. ಅರಬ್ ದೇಶಗಳ ಮರುಭೂಮಿ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಇತಿಹಾಸಪೂರ್ವದಿಂದಲೂ ಬೆಳೆಯುತ್ತಿದ್ದ ಖರ್ಜೂರದ ಮರವನ್ನು ಸಹಸ್ರಾರು ವರ್ಷಗಳ ಹಿಂದೆಯೇ ಆ ದೇಶಗಳಲ್ಲಿ ವ್ಯಾಪಕವಾಗಿ ರೂಢಿಸಲಾಯಿತು. ಅಲ್ಲಿಂದ ಕಾಲಕ್ರಮೇಣ ಸ್ಪೇನಿಗೂ ನೈಲ್ ನದಿ ಕಣಿವೆಯ ಒಣ ಪ್ರದೇಶಗಳಿಗೂ ಕಾಲಿಟ್ಟಿತು. ಎರಡು-ಮೂರು ಶತಮಾನಗಳ ಹಿಂದೆ ಸ್ಪೇನಿನಿಂದ ಅಮೆರಿಕಕ್ಕೆ ಇದನ್ನು ತರಲಾಯಿತು. ಈಗ ಅಮೆರಿಕದ ಉಷ್ಣವಲಯದ ಒಣ ಪ್ರದೇಶಗಳಲ್ಲಿ ಇದರ ಬೇಸಾಯ ದೊಡ್ಡಪ್ರಮಾಣದಲ್ಲಿ ನಡೆಯುತ್ತಿದೆ. ಕ್ಯಾಲಿಪೋರ್ನಿಯ ಹಾಗೂ ಆರಿಜ಼ೋನಗಳ ಒಳಪ್ರದೇಶಗಳಲ್ಲಿ 4,000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಇದನ್ನು ಬೆಳೆಸಲಾಗುತ್ತಿದೆ. ಬಹುಶಃ ಭಾರತಕ್ಕೆ ದಂಡೆತ್ತಿ ಬಂದ ಮುಸ್ಲಿಮರ ತಮ್ಮ ಜೊತೆಯಲ್ಲಿ ಖರ್ಜೂರದ ಮರವನ್ನು ತಂದಿರಬೇಕು. ಅಂದಿನಿಂದಲೂ ಭಾರತದ ವಾಯವ್ಯ ಭಾಗದಲ್ಲಿ ಇದು ಕಾಣಬರುತ್ತದೆ. ಭಾರತದಲ್ಲಿ ಖರ್ಜೂರದ ಬೇಸಾಯ ಹೆಚ್ಚಾಗಿಲ್ಲ; ಗುಜರಾತ್, ರಾಜಸ್ಥಾನ್, ಪಂಜಾಬ್, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮೈಸೂರು ರಾಜ್ಯಗಳ ಜಿಲ್ಲೆಗಳಲ್ಲಿ ಸ್ವಲ್ಪಮಟ್ಟಿಗೆ ಇದನ್ನು ಬೆಳೆಸಲಾಗುತ್ತಿದೆ. ಅರಬ್ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉತ್ಪಾದನೆಯಾಗುವ ಖರ್ಜೂರ ಕೊಂಚ ಕೀಳುದರ್ಜೆಯದು. ಇತ್ತೀಚೆಗೆ ವಾಯವ್ಯ ಏಷ್ಯದ ಕೆಲವು ದೇಶಗಳಿಂದ ಹಾಗೂ ಅಮೆರಿಕ ಸಂಯಕ್ತಸಂಸ್ಥಾನಗಳಿಂದ ಖರ್ಜೂರದ ಕೆಲವು ಉತ್ಕøಷ್ಟ ಬಗೆಗಳನ್ನು ತರಿಸಲಾಗಿದ್ದು ಅವನ್ನು ಪಂಜಾಬಿನ ಅಬೊಹಾರ್ ಮತ್ತು ಗುಜರಾತಿನ ಖೆಡಿಯೊಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಸುವ ಪ್ರಯತ್ನಗಳು ನಡೆದಿವೆ. ಖರ್ಜೂರದ ಬೆಳೆಗೆ ಇಂದು ಹೆಸರಾಗಿರುವ ದೇಶಗಳೆಂದರೆ ಇರಾಕ್, ಇರಾನ್, ಮೊರಾಕೊ ಮತ್ತು ಆಲ್ಜೀರಿಯಗಳು.
ಸಸ್ಯಶಾಸ್ತ್ರಕ ವಿವರಣೆ: ಖರ್ಜೂರದ ಮರ ನೇರವಾಗಿ ಸುಮಾರು 60'-100' ಎತ್ತರಕ್ಕೆ ಬೆಳೆಯುವ, ಕವಲೊಡೆಯೆದ ವೃಕ್ಷ. ಮರದ ಮುಖ್ಯ ಹಾಗೂ ವಿಶೇಷ ಲಕ್ಷಣವೆಂದರೆ ಮುಖ್ಯ ಕಾಂಡದ ಬುಡದಿಂದ ಹಲವಾರು ಉಪಶಾಖೆಗಳು (ಮೋಸುಗಳು, ಕಂದುಗಳು, ಬೇರು ಸಸಿಗಳು-ಆಫ್‍ಷೂಟ್ಸ್) ಹೊರಟಿರುವುದು. ಇವನ್ನು ಕತ್ತರಿಸದೆ ಹಾಗೆಯೆ ಬಿಟ್ಟಿಲ್ಲಿ ಎಲ್ಲವೂ ಬೆಳೆದುಕೊಂಡು ಖರ್ಜೂರದ ಮರ ಒಂದು ದೊಡ್ಡ ಮೆಳೆಯಾಗಿಬಿಡುತ್ತದೆ. ಆದರೆ ಸಾಮಾನ್ಯವಾಗಿ ಖರ್ಜೂರದ ಬೇಸಾಯವಿರುವಲ್ಲೆಲ್ಲ ಮೋಸುಗಳು ಒಂದು ನಿರ್ದಿಷ್ಟ ವಯಸ್ಸಿಗೆ ಬಂದಾಗ ಅವನ್ನು ಕತ್ತರಿಸಿ ತೆಗೆದುಹಾಕುತ್ತಾರೆ. ಅಲ್ಲದೆ ಇವು ಖರ್ಜೂರದ ಮರದ ಅಬೀಜ ಸಂತಾನೋತ್ಪತ್ತಿಯ ಮುಖ್ಯಸಾಧನಗಳೂ ಆಗಿವೆಯಾದ್ದರಿಂದ ಇವನ್ನು ಕತ್ತರಿಸಿ ಬೇರೆಯಾಗಿ ನೆಟ್ಟು ಹೊಸ ಮರಗಳನ್ನು ಬೆಳೆಸುವುದುಮಟು. ಮರದ ಮುಖ್ಯಕಾಂಡದ ಮೇಲೆಲ್ಲ ಉದುರಿಹೋದ ಎಲೆಗಳ ತೊಟ್ಟಿನ ಬುಡಗಳ ದಟ್ಟವಾದ ಹೊದಿಕೆಯಿದೆ. ವಜ್ರಾಕೃತಿಯ ಹಾಗೂ ಬೂದುಬಣ್ಣದ ಇವು ಕೆಲವೊಮ್ಮೆ ನಾರಿನಂತಾಗಿ ನಿಬಿಡವಾಗಿ ಹೆಣೆದುಕೊಂಡುಬಿಡುತ್ತದೆ. ಇದರಿಂದ ಮುಖ್ಯಕಾಂಡಕ್ಕೆ ಅದರ ಜೀವಮಾನಪೂರ್ತಿ ರಕ್ಷಣೆ ದೊರೆಯುತ್ತದೆ. ಮರದ ತುದಿಯಲ್ಲಿ ಈಚಲು ಮರದಲ್ಲಿರುವಂತೆ ಪತ್ರಕಿರೀಟವಿದೆ (ಗರಿಸಮೂಹ). ಮರದ ಮೇಲೆಯೇ ಬಿಟ್ಟಲ್ಲಿ ಗರಿಗಳು ಹಲವಾರು ವರ್ಷಗಳು ಹಾಗೆಯೇ ಇದ್ದು ಕ್ರಮೇಣ ಬಿದ್ದುಹೋಗುತ್ತವೆ. ವರ್ಷಂಪ್ರತಿ 10-20 ಹೊಸ ಎಲೆಗಳು ಹುಟ್ಟುತ್ತವೆ. ಸಾಮಾನ್ಯವಾಗಿ 2-3 ವರ್ಷಗಳಿಗೊಮ್ಮೆ ಗರಿಗಳನ್ನು ಕತ್ತರಿಸಿ ತೆಗೆದು ಚಾವಣಿಗೂ ಬುಟ್ಟಿ ಮುಂತಾದವನ್ನು ಮಾಡಲೂ ಬಳಸುವುದುಂಟು. ಗರಿಗಳು ಸುರುಳಿರೂಪದಲ್ಲಿ ಜೋಡಣೆಗೊಂಡಿವೆ. ಗರಿ ಸಮೂಹದ ಮಧ್ಯಭಾಗದಲ್ಲಿ ನೆಟ್ಟಗೆ ಮೇಲ್ಮುಖವಾಗಿ ಚಾಚಿರುವ ಎಳೆಯ ಗರಿಗಳೂ ಹೊರಭಾಗದಲ್ಲಿ ಬಾಗಿಕೊಂಡಿರುವ ವಯಸ್ಸಾದ ಗರಿಗಳೂ ಇವೆ. ಒಂದೊಂದು ಗರಿಯೂ ಬಲು ಉದ್ದ; 10'-20' ವರೆಗೂ ಇರುತ್ತದೆ. ತೊಟ್ಟು ದಪ್ಪವಾಗಿಯೂ ನಾರುನಾರಾಗಿಯೂ ಬಿರುಸಾಗಿಯೂ ಇದೆ. ಇದರ ಬಣ್ಣ ಬೂದಿಮಿಶ್ರಿತ ಹಸಿರು. ಇದು ಬುಡದಲ್ಲಿ ಅಗಲವಾಗಿ ಮುಮ್ಮೂಲೆಯಾಕಾರದಲ್ಲಿ ಹರಡಿದ್ದು ಕಾಂಡವನ್ನು ಭಾಗಶಃ ಸುತ್ತುವರಿದಿರುತ್ತದೆ. ಅಲ್ಲದೆ ಗರಿಯ ಬುಡದ ಸುತ್ತ ಕಗ್ಗಂದು ಬಣ್ಣದ ನಾರಿನಿಂದಾದ ಉರುಳೆಯಾಕಾರದ ಕವಚ ಇದೆ. ಗರಿಗಳು ಚಿಕ್ಕವಿದ್ದು ಇನ್ನೂ ಮೊಗ್ಗಿನ ರೂಪದಲ್ಲಿರುವಾಗ ಈ ಕವಚ ಇದಕ್ಕೆ ಒಳ್ಳೆಯ ರಕ್ಷಣೆಯನ್ನು ಒದಗಿಸುತ್ತದೆ. ತೊಟ್ಟು ಭಾಗವನ್ನು ಬಿಟ್ಟು ಗರಿಯ ಉದ್ದಕ್ಕೂ ನೂರಾರು ಕಿರುಪತ್ರಗಳಿದೆ (ಲೀಫ್ ಲೆಟ್ಸ್). ಗರಿಯ ಬುಡಭಾಗದೆಡೆಗೆ ಇವು ಜೊತೆಜೊತೆಯಾಗಿ ವ್ಯವಸ್ಥಿತವಾಗಿವೆ. ಆದರೆ ಗರಿಯ ತುದಿಯೆಡೆಗೆ ಹೋದಂತೆಲ್ಲ ಈ ವ್ಯವಸ್ಥೆ ಅಸ್ಪಸ್ಟವಾಗುತ್ತದೆ. ಕಿರುಪತ್ರದ ಜೋಡಿಯಲ್ಲಿ ಒಂದು ಮೇಲ್ಮುಖವಾಗಿಯೂ ಇನ್ನೊಂದು ಅಡ್ಡಲಾಗಿಯೂ ಚಾಚಿಕೊಂಡಿವೆ. ಪ್ರತಿ ಕಿರುಪತ್ರದ ಉದ್ದ 8"-16"; ಆಕಾರ ಭರ್ಜಿಯಂತೆ; ಗಡುಸಾಗಿಯೂ ಚೂಪಾಗಿಯೂ ಇದೆ. ಇದರ ಮೇಲೆಲ್ಲ ನೀಲಿ ಹಸಿರುಬಣ್ನದ ಮೇಣವಂಥ ವಸ್ತುವಿನ ಲೇಪವಿದೆ. ಗರಿಯ ತೊಟ್ಟಿನ ಮೇಲೆ ಹಲವಾರು ಚಿಕ್ಕ ಗಾತ್ರದ ಚೂಪಾದ ಮುಳ್ಳುಗಳಿವೆ (ಗರಿಯ ಬುಡದಲ್ಲಿನ ಕಿರುಪತ್ರಗಳೇ ಮಾರ್ಪಾಟಾಗಿ ಮುಳ್ಳುಗಳಾಗಿವೆ ಎಂಬ ಅಭಿಪ್ರಾಯವಿದೆ.) ಮುಳ್ಳುಗಳ ಸಂಖ್ಯೆ, ಜೋಡಣಾವ್ಯವಸ್ಥೆ. ಹಾಗೂ ಉದ್ದ-ಇವು ಖರ್ಜೂರದ ಮರದ ವಿವಿಧ ಬಗೆಗಳಿಗನುಗುಣವಾಗಿ ವ್ಯತ್ಯಾಸವಾಗುತ್ತವೆ.
ಮುಖ್ಯ ಕಾಂಡದ ಬುಡದಿಂದ ಹಗ್ಗಂದಂತಿರುವ ಅಸಂಖ್ಯಾತ ಆಗಂತುಕ ಬೇರುಗಳು (ಅಡ್ವೆಂಟಿಷಸ್ ರೂಟ್ಸ್) ಉತ್ಪತ್ತಿಯಾಗುತ್ತವೆ. ಇವುಗಳ ಬಣ್ಣ ಕಗ್ಗಂದು. ಬಹು ಮಟ್ಟಿಗೆ ಭೂಮಿಯ ಮೇಲ್ಪದರಲ್ಲೇ ಬೆಳೆದುಕೊಂಡು ಹೋಗುವ ಇವು ನೀರಿನ ನೆಲೆಯನ್ನರಸಿಕೊಂಡು ಬಲುದೂರ ಬೆಳೆಯತ್ತವೆ. ಈಜಿಪ್ಟಿನಲ್ಲಿ ಬೆಳೆಯುವ ಖರ್ಜೂರದ ಮರಗಳ ಬೇರುತುದಿಯ ಜೀವಕೋಶಗಳಲ್ಲಿ ಒಂದು ಬಗೆಯ ಬೂಷ್ಟು ವಾಸಿಸುತ್ತಿದ್ದು ಮರದ ನೈಟ್ರೊಜನ್ ಪೂರೈಕೆಯಲ್ಲಿ ಮಹತ್ತ್ವದ ಪಾತ್ರವಹಿಸುತ್ತದೆ. ಖರ್ಜೂರದ ಮರದಲ್ಲಿ ಲಿಂಗಭೇದವಿದೆ. ಆದರೆ ಗಂಡು ಮತ್ತು ಹೆಣ್ಣುಮರಗಳ ವ್ಯತ್ಯಾಸ ಹೊರನೋಟಕ್ಕೆ ಕಾಣದು. ಕೆಲವು ಬಗೆಗಳಲ್ಲಿ ಮಾತ್ರ ಗಂಡು ಹಾಗೂ ಹೆಣ್ಣು ಮರಗಳನ್ನು ಅವುಗಳ ಎಲೆ, ಕಾಂಡ ಮುಂತಾದ ಲಿಂಗಸಂಬಂಧವಿಲ್ಲದ ಅಂಗಗಳ ಲಕ್ಷಣಗಳಿಂದ ಗುರುತಿಸಬಹುದು. ಗಂಡುಮರದಲ್ಲಿ ವರ್ಷಕ್ಕೆ 30-50 ಗಂಡು ಹೂಗೊಂಚಲುಗಳು ಉತ್ಪತ್ತಿಯಾಗುತ್ತವೆ. ಹೂಗೊಂಚಲು ತಾಳಗುಚ್ಛಮಾದರಿಯದು; ಗೊಂಚಲಿನ ಸುತ್ತ ಕಂದುಬಣ್ಣದ ಪುಡಿಯಿಂದ ಲೇಪಿತವಾದ ಕವಚ ಇದೆ. ಗೊಂಚಲಿನಲ್ಲಿ ಮೋಟಾದ ಕೇಂದ್ರ ಅಕ್ಷವನ್ನೂ ಇದರಿಂದ ಹೊರಡುವ ನೂರಾರು ಕವಲುಗಳನ್ನೂ ನೋಡಬಹುದು. ಕವಲುಗಳ ಮೇಲೆಲ್ಲ ಅವುಗಳ ಉದ್ದಕ್ಕೂ ಜೋಡಣೆಗೊಂಡ ಹೂಗಳಿವೆ. ಹೂಗಳು ಬಲು ಚಿಕ್ಕವು; ⅓" ಉದ್ದ ಇವೆ. ತಿಳಿಹಳದಿ ಬಣ್ಣದ ಇವಕ್ಕೆ ನವುರಾದ ಸುವಾಸನೆಯಿದೆ. ಪ್ರತಿ ಹೂವಿನಲ್ಲಿ 6 ಹಾಲೆಗಳನ್ನುಳ್ಳ ಪೆರಿಯಾಂತ್ ಭಾಗ ಮತ್ತು 6 ಕೇಸರಗಳಿವೆ. ಪೆರಿಯಾಂತ್ ಭಾಗದಲ್ಲಿ ತಲಾ 3 ಹಾಲೆಗಳ ಹೊರಸುತ್ತು ಮತ್ತು ಒಳಸುತ್ತನ್ನು ಗುರುತಿಸಬಹುದು. ಹೊರಸುತ್ತಿನ ಹಾಲೆಗಳು ಬಲುಚಿಕ್ಕವು-ಇವುಗಳಿಗೆ ರೂಢಿಯಲ್ಲಿ ಪುಷ್ಪಪತ್ರಗಳೆಂಬ (ಕೇಲಿಕ್ಸ್) ಹೆಸರಿದೆ. ಒಳಸುತ್ತಿನ ಹಾಲೆಗಳು ದೊಡ್ಡಗಾತ್ರದವು; ಇವನ್ನು ದಳಗಳು (ಕರೋಲ) ಎನ್ನುವುದುಂಟು. ಕೇಸರಗಳಲ್ಲಿ ಬಲುಚಿಕ್ಕದಾದ ಕೇಸರದಂಡವೂ ಉದ್ದವಾದ, ಚಪ್ಪಟೆಯಾದ ಮತ್ತು ಅಲೆಯಾಕಾರದ ಅಂಚನ್ನುಳ್ಳ ಪರಾಗಕೋಶಗಳೂ ಇವೆ. ಹೂವಿನ ಮಧ್ಯ ಭಾಗದಲ್ಲಿ ಪುಟ್ಟದಾದ ಬಂಜೆ ಅಂಡಾಶಯವೂ ಉಂಟು. ಪರಾಗ ಹಳದಿಬಣ್ಣದ್ದು. ಬಲು ಹಗುರವಾಗಿಯೂ ನಯವಾಗಿಯೂ ಇದೆ; ಬಹುಕಾಲ ಮೊಳೆಯುವ ಸಾಮಥ್ರ್ಯವನ್ನು ಉಳಿಸಿಕೊಂಡಿರಬಲ್ಲುದು. ಹೆಣ್ಣುಮರದಲ್ಲೂ ತಾಳಗುಚ್ಛಮಾದರಿಯ ಹೂಗೊಂಚಲಿದೆ. ಗಂಡು ಹೂಗೊಂಚಲಿನಂತೆಯೇ ಇದು ಕೂಡ ಕವಚದಿಂದ ಆವೃತವಾಗಿದೆ. ಕವಚ ಗಂಡಿನದಕ್ಕಿಂತ ಹೆಚ್ಚು ಅಗಲವಾದುದು. ಅಲ್ಲದೆ ಹೆಣ್ಣು ಹೂಗೊಂಚಲು ಗಂಡುಗುಚ್ಛಕ್ಕಿಂತ ಹೆಚ್ಚು ಉದ್ದ. ಹೆಣ್ಣು ಹೂಗೊಂಚಲಿನಲ್ಲಿ ಉದ್ದನೆಯ ಹಾಗೂ ಹಲವಾರು ಕವಲುಗಳನ್ನೊಳಗೊಂಡ ಅಕ್ಷವಿದೆ. ಕವಲುಗಳ ಉದ್ದ 12"-20" ವರೆಗೆ ಇದೆ. ಅವುಗಳ ಉದ್ದಕ್ಕೂ ಅನೇಕ ಹೆಣ್ಣು ಹೂಗಳು ಜೋಡಣೆಗೊಂಡಿವೆ. ಪ್ರತಿ ಹೂವಿನಲ್ಲಿ 2 ಸುತ್ತುಗಳಲ್ಲಿ ಜೋಡಣೆಯಾದ 6 ಹಾಲೆಗಳಿಂದ ಕೂಡಿದ ಪೆರಿಯಾಂತ್ ಭಾಗ (ಎರಡು ಸುತ್ತುಗಳ ಹಾಲೆಗಳೂ ಗಾತ್ರದಲ್ಲಿ ಚಿಕ್ಕವು), ಮೂರು ಬಿಡಿಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಖರ್ಜೂರದ ಮರದಲ್ಲಿ ಗಾಳಿಯ ಮೂಲಕ ಸ್ವಾಭಾವಿಕವಾಗಿ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ. ಆದರೂ ಸಾಗುವಳಿಯಲ್ಲಿರುವ ಮರಗಳಲ್ಲಿ ಕೈಯಿಂದ ಪರಾಗಸ್ಟರ್ಶಕ್ರಿಯೆಯನ್ನು ನಡೆಸುವುದೇ ವಾಡಿಕೆಯಲ್ಲಿರುವ ಕ್ರಮ. ಇದರಿಂದ ಸ್ವಾಭಾವಿಕ ಕ್ರಮದಲ್ಲಿ ಉಂಟಾಗಬಹುದಾದ ಪರಾಗನಷ್ಟವನ್ನು ಕಡಿಮೆಮಾಡಬಹುದು. ಗಂಡು ಹೂಗೊಂಚಲಿನ ಸಣ್ಣ ತುಂಡುಗಳನ್ನು ಹೆಣ್ಣುಹೂಗೊಂಚಲಿನ ಕವಲುಗಳ ಮಧ್ಯೆ ಸೇರಿಸಿ ಪರಾಗಸ್ಪರ್ಶ ನಡೆಯುವಂತೆ ಮಾಡಲಾಗುತ್ತದೆ. ಒಂದು ಗಂಡುಮರ ಸುಮಾರು 100 ಹೆಣ್ಣುಮರಗಳಿಗೆ ಸಾಕಾಗುವಷ್ಟು ಪರಾಗವನ್ನು ಉತ್ಪಾದಿಸಬಲ್ಲುದು. ಖರ್ಜೂರದ ವಿವಿಧ ಬಗೆಗಳ ಗಂಡುಮರಗಳು ಉತ್ಪಾದಿಸುವ ಪರಾಗದ ಗುಣ ಮತ್ತು ಸಾಮಥ್ರ್ಯಗಳಲ್ಲಿ ವ್ಯತ್ಯಾಸವಿದೆ. ಈ ವ್ಯತ್ಯಾಸ ಫಲಗಳ ಗಾತ್ರ, ಗುಣ ಮತ್ತು ಮಾಗುವ ಸಮಯದ ಮೇಲೆ ಪ್ರಭಾವ ಬೀರುತ್ತದೆಯೆಂದು ತಿಳಿದಿದೆ. ಆದ್ದರಿಂದ ಒಳ್ಳೆಯ ಹಣ್ಣುಬಿಡುವ ಹೆಣ್ಣುಮರಗಳನ್ನು ಆಯುವಂತೆಯೆ ಒಳ್ಳೆಯ ಪರಾಗವುಳ್ಳ ಗಂಡುಮರಗಳನ್ನೆ ಆಯ್ದು ಬೆಳೆಸಬೇಕು. ನಿಷೇಚನವಾದ ಮೇಲೆ ಪ್ರತಿ ಹೆಣ್ಣುಹೂವಿನ ಅಂಡಾಶಯದಲ್ಲಿನ 3 ಕಾರ್ಪೆಲುಗಳಲ್ಲಿ ಒಂದೇ ಒಂದು ಬೆಳೆದು ಫಲವಾಗುತ್ತದೆ. ಉಳಿದ ಎರಡು ಕಾರ್ಪೆಲುಗಳು ಬಟಾಣಿಕಾಳಿನ ಗಾತ್ರಕ್ಕೆ ಬೆಳೆದು ಬಿದ್ದುಹೋಗುತ್ತವೆ. ಅನಂತರ ಹೆಣ್ಣು ಹೂಗೊಂಚಲಿನ ಎಲ್ಲ ಕವಲುಗಳೂ ಉದ್ದವಾಗಿ ಬೆಳೆದು ತೂಗಾಡುವ ಫಲಭರಿತ ಗೊಂಚಲುಗಳಾಗುತ್ತವೆ. ಒಂದೊಂದು ಮರದಲ್ಲೂ ಸುಮಾರು 20-30 ಗೊಂಚಲುಗಳು ಉತ್ಪತ್ತಿಯಾಗುತ್ತವೆ. ಫಲ (ಖರ್ಜೂರ) ಒಂದೇ ಬೀಜವುಳ್ಳ ಬೆರಿ ಮಾದರಿಯದು. ಇದರ ಉದ್ದ 1"-3". ಬಣ್ಣ ವಿವಿಧ ಬಗೆಗಳಿಗನುಗುಣವಾಗಿ ಅಚ್ಚಹಳದಿಯಿಂದ ಕೆಂಪುಮಿಶ್ರಿತ ಕಂದಿನ ವರೆಗೂ ವ್ಯತ್ಯಾಸವಾಗುತ್ತದೆ. ಅಂತೆಯೆ ಹಣ್ಣಿನ ಆಕಾರ ಮತ್ತು ವಾಸನೆಗಳಲ್ಲೂ ಬಗೆಯಿಂದ ಬಗೆಗೆ ಭಿನ್ನತೆಯಿದೆ. ಸಾಮಾನ್ಯವಾಗಿ ಹಣ್ಣು ಉದ್ಧುದ್ದವಾಗಿರುವುದಾದರೂ ಕೆಲವು ಬಗೆಗಳಲ್ಲಿ ಗುಂಡಾಗಿರುವುದುಂಟು. ಹಣ್ಣಿನ ಬುಡದಲ್ಲಿ ಪೆರಿಯಾಂತಿನ ಉಳಿಕೆಗಳನ್ನು ಕಾಣಬಹುದು. ಬೀಜ ಸುಮಾರು 1" ಉದ್ದ ಇದೆ. ಬಲುಗಟ್ಟಿಯಾಗಿರುವ ಇದರ ಒಂದು ಪಕ್ಕದಲ್ಲಿ ಒಂದು ಉದ್ದನೆಯ ತೋಡೂ ಮೇಲೆಲ್ಲ ತೆಳುವಾದ ಕಾಗದದಂಥ ಪೊರೆಯೂ ಇವೆ.
ಖರ್ಜೂರದ ಮರದ ಬಗೆಗಳು: ಖರ್ಜೂರದ ಮರದಲ್ಲಿ ಅಸಂಖ್ಯಾತ ಬಗೆಗಳುಂಟು. ಇವುಗಳಲ್ಲಿ ಕೆಲವು ಮಾತ್ರ ಆರ್ಥಿಕ ದೃಷ್ಟಿಯಿಂದ ಮುಖ್ಯವಾದವು. ಖರ್ಜೂರದಲ್ಲಿ ಲಿಂಗಭೇದವಿರುವುದರಿಂದ ಉಂಟಾಗಿರಬಹುದಾದ ವಿಷಮಜನಾಯ ಸ್ವಭಾವವೂ (ಹೆಟರೊಜೀನಸ್ ನೇಚರ್) ಆಹಾರವಸ್ತುವಾಗಿ ಬೆಳೆಸಲಾಗುವ ಪ್ರದೇಶಗಳಲ್ಲಿ ಬಹುಹಿಂದಿನ ಕಾಲದಿಂದ ಇರುವ ಬೇಸಾಯವೂ ಖರ್ಜೂರದ ಮರದಲ್ಲಿ ಅನೇಕ ಬಗೆಗಳಿರುವುದಕ್ಕೆ ಮುಖ್ಯ ಕಾರಣಗಳೆಂದು ಭಾವಿಸಲಾಗಿದೆ. ಅರೇಬಿಯ ಮತ್ತು ಉತ್ತರ ಆಫ್ರಿಕಗಳಲ್ಲಿ ಸಸಿಗಳ ಮೂಲಕ ಪಡೆದು ಬೆಳೆಸಿದ ಖರ್ಜೂರದ ಮರಗಳು ಗುಣ ಮತ್ತು ಇಳುವರಿಯ ದೃಷ್ಟಿಯಿಂದ ಅಷ್ಟು ಉತ್ತಮವಲ್ಲ. ಬೇರೆಡೆಯಲ್ಲಿ ಬೆಳೆಸುವ ಬಗೆಗಳು ಅಬೀಜ ಪುನರುತ್ಪಾದನೆಯಿಂದ ಪಡೆದವಾಗಿದ್ದು ಉತ್ತಮದರ್ಜೆಯವೆಂದು ಹೆಸರಾಗಿವೆ. ಖರ್ಜೂರದ ಮರದ ವಿವಿಧ ಬಗೆಗಳ ಸಂಖ್ಯೆ ನೂರನ್ನು ಮೀರುವುದಾದರೂ ಇವನ್ನು ಮೂರು ಮುಖ್ಯ ಗುಂಪುಗಳಾಗಿ ವಿಂಗಡಿಸಬಹುದು.
- ಮೆತು ಖರ್ಜೂರ: ಇದರ ಹಣ್ಣುಗಳು ಹೆಚ್ಚು ರಸಭರಿತ ಹಾಗೂ ಮೆತು; ಬೇಗ ಒಣಗುವುದಿಲ್ಲ. ಸಕ್ಕರೆಯ ಅಂಶ ಬೇರೆ ಬಗೆಗಳಿಗೆ ಹೋಲಿಸಿದರೆ ಬಹಳ ಕಡಿಮೆ (60% ಮಾತ್ರ ಇದೆ) ಎನಿಸಿದರೂ ಸಹಜವಾಗಿ ಆಗಬಹುದಾದ ಹುದುಗುವಿಕೆಯನ್ನು ತಡೆಯಲು ಸಾಕಷ್ಟಿರುವುದರಿಂದ ಹಣ್ಣುಗಳನ್ನು ಸಂಗ್ರಹಿಸಿಡಬಹುದು. ಸಕ್ಕರೆ ಗ್ಲೂಕೋಸ್ ಮತ್ತು ಫ್ರಕ್ಟೋಸುಗಳ ರೂಪದಲ್ಲಿರುತ್ತದೆ. ಮೆತುಖರ್ಜೂರವನ್ನು ಹಾಗೆಯೇ ಉಪಯೋಗಿಸಬಹುದು. ಇಲ್ಲವೇ ಒತ್ತಡಕ್ಕೊಳ ಪಡಿಸಿ ಅಗ್ವ ಎನ್ನಲಾಗುವ ರೂಪಕ್ಕೆ ಮಾರ್ಪಡಿಸಿ ಜೋಪಾನಿಸಬಹುದು. ಅಗ್ವ ಅರಬ್ ದೇಶಗಳ ಮಾರುಕಟ್ಟೆಗಳಲ್ಲಿ ಬಲುಸಾಮಾನ್ಯ. ಪ್ರಪಂಚದಾದ್ಯಂತ ಮಾರಲಾಗುವ ಖರ್ಜೂರಗಳಲ್ಲಿ ಬಹುಪಾಲು ಈ ಬಗೆಯಿಂದ ಪಡೆಯಲಾದುದು. ಹಣ್ಣಿನ ಅಂಗಡಿಗಳಲ್ಲಿ ಖರ್ಜೂರ ಇಲ್ಲವೆ ಪಿಂಡೆ ಖರ್ಜೂರ ಎಂದು ಹೆಸರಿನಲ್ಲಿ ಮಾರಲಾಗುವ ಬಗೆ ಇದು. ಮೆತು ಖರ್ಜೂರದಲ್ಲಿ ಸುಮಾರು 350 ಬಗೆಗಳುಂಟು. ಇವುಗಳಲ್ಲೆಲ್ಲ ಅತಿಮುಖ್ಯವಾದವು ಮಿಶ್ರಿಗ್, ಹಿಲ್ಲಾವಿ, ಖದ್ರಾವಿ ಮತ್ತು ಸೇಯರ್. ಇರಾಕ್, ಪಶ್ಚಿಮ ಪಾಕಿಸ್ತಾನ ಮತ್ತು ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಬೆಳೆಯುವ ಮುಖ್ಯ ಬಗೆಗಳಿವು.
- ಅರೆಮೆತು ಖರ್ಜೂರ: ಈ ಗುಂಪಿಗೆ ಸೇರಿದ ಬಗೆಗಳ ಹಣ್ಣುಗಳಲ್ಲಿ ಮೆತು ಖರ್ಜುರಕ್ಕಿಂತ ಗಟ್ಟಿಯಾದ ತಿರುಳಿದೆ. ಒಣಗುವುದು ಬಲುನಿಧಾನ. ಒಣಗಿದಾಗಲೂ ಮೃದುತ್ವವನ್ನು ಉಳಿಸಿಕೊಂಡಿರುತ್ತವೆ. ಮೆತುಖರ್ಜೂರಕ್ಕೆ ಹೋಲಿಸಿದರೆ ಇದರಲ್ಲಿನ ಸಕ್ಕರೆಯ ಪರಿಮಾಣ ಹೆಚ್ಚು. ಹಣ್ಣು ಪೂರ್ತಿ ಮಾಗುವ ಮುನ್ನವೆ ಅದನ್ನು ಮರದಿಂದ ಬಿಡಿಸಲಾಗುತ್ತದೆ. ಈ ಗುಂಪಿನಲ್ಲೂ ಹಲವಾರು ಬಗೆಗಳಿದ್ದು ಇರಾಕ್ ದೇಶದಲ್ಲಿ ಬೆಳೆಯುವ eóÁಹಿದಿ, ದಾಯೆರಿ ಬಗೆಗಳೂ ಅಲ್ಜೀರಿಯದಲ್ಲಿ ಬೆಳೆಯುವ ಡೆಗ್ಲೆಟ್ ನೂರ್ ಎಂಬುದೂ ಮುಖ್ಯವೆನಿಸಿವೆ. ಡೆಗ್ಲೆಟ್ ನೂರ್ ಬಗೆಯನ್ನು ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲೂ ಬೆಳೆಸಲಾಗುತ್ತಿದೆ.
- ಒಣಖರ್ಜೂರ: ಇದರ ಹಣ್ಣುಗಳು ಮರದಲ್ಲಿದ್ದಂತೆಯೆ ಬಿಸಿಲಿನ ಬೇಗೆಗೆ ಒಣಗಿಬಿಡುತ್ತವೆ. ಇದರಿಂದಾಗಿ ಇವನ್ನು ಬಹಳ ಕಾಲ ಸಂಗ್ರಹಿಸಿಡಬಹುದು. ಸಾಗಾಣಿಕೆಯೂ ಸುಲಭ. ಸಕ್ಕರೆಯ ಪರಿಮಾಣ ಬೇರೆ ಗುಂಪುಗಳ ಖರ್ಜೂರಗಳಿಗಿಂತ ಅತಿಹೆಚ್ಚು (ಸುಮಾರು 65%-70% ಇದೆ). ಸಕ್ಕರೆ ಸೂಕ್ರೋಸ್ ರೂಪದಲ್ಲಿದೆ. ಭಾರತದಲ್ಲಿ ದಿನಸಿ ಅಂಗಡಿಗಳಲ್ಲೆಲ್ಲ ಸಿಕ್ಕುವ ಬಗೆ ಇದು. ಇದಕ್ಕೆ ಹಿಂದಿಯಲ್ಲಿ ಚುಹಾರ ಎಂದೂ ಕನ್ನಡದಲ್ಲಿ ಕಾರೀಕ, ಉತ್ತತ್ತಿ ಎಂದೂ ಹೆಸರಿದೆ. ಇದರಲ್ಲೂ ಅನೇಕ ಬಗೆಗಳಿವೆ. ಇವುಗಳಲ್ಲಿ ಅಲ್ಜೀರಿಯದಿಂದ ಪಡೆಯಲಾಗುವ ಥೂರಿ ಬಗೆ ಅತಿಮುಖ್ಯವಾದದ್ದು.
ಬೇಸಾಯ: ಖರ್ಜೂರದ ಮರ ಮುಖ್ಯವಾಗಿ ಉಷ್ಣವಲಯದ ಬೆಳೆ. ಹವಾಮಾನದ ತನ್ನ ಅಗತ್ಯಗಳಲ್ಲಿ ಬಲು ನಿಷ್ಕøಷ್ಟವಾದದ್ದು. ತಂಪು ಹವೆಯನ್ನು ಸ್ವಲ್ಪಕಾಲ ಸಹಿಸಬಲ್ಲುದಾದರೂ ಇದಕ್ಕೆ ದೀರ್ಘಾವಧಿಯ ಅತಿ ಹೆಚ್ಚಿನ ಉಷ್ಣತೆ ಅತ್ಯಂತ ಆವಶ್ಯಕ. ಹಗಲು ಮತ್ತು ರಾತ್ರಿ ಅಧಿಕ ಉಷ್ಣತೆ ಇರುವ ದೀರ್ಘಾವಧಿಯ ಬೇಸಗೆ ಅಗತ್ಯ. ಆದ್ರ್ರತೆ ಮತ್ತು ಮಳೆ ಕನಿಷ್ಠಪ್ರಮಾಣದಲ್ಲಿರಬೇಕು. ಹೂ ಬಿಡುವಾಗ, ಕಾಯಿ ಕಚ್ಚುವಾಗ ಸಂಪೂರ್ಣ ಶುಷ್ಯವಾದ ಹಾಗು ಹೆಚ್ಚು ಉಷ್ಣತೆಯ ಪರಿಸ್ಥಿತಿ ಇರಬೇಕು (ಉಷ್ಣತೆ 25'-30' ಸೆಂ. ಇರಬೇಕು). ಖರ್ಜೂರದ ಮರ ಮರಳು, ಗೋಡು, ಜೇಡಿಮಿಶ್ರಿತ ಗೋಡು ಮುಂತಾದ ಹಲವಾರು ಬಗೆಯ ಮಣ್ಣುಗಳಲ್ಲಿ ಬೆಳೆಯಬಲ್ಲುದಾದರೂ ನೀರು ಮತ್ತು ಗಾಳಿ ಸರಾಗವಾಗಿ ಚಲಿಸಬಲ್ಲಂಥ ಮರಳು ಮಿಶ್ರಿತ ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಣ್ಣು ಹೆಚ್ಚು ಆಳವಾಗಿಯೂ ನೀರನ್ನು ಹಿಡಿದಿಡುವ ಸಾಮಥ್ರ್ಯವುಳ್ಳದ್ದಾಗಿಯೂ ಇರಬೇಕು. ಮಣ್ಣಿನಲ್ಲಿನ ಹೆಚ್ಚಿನ ಪರಿಮಾಣದ ಕ್ಷಾರತೆಯನ್ನೂ ಖರ್ಜೂರ ಸಹಿಸಬಲ್ಲುದು. ಇದರಿಂದಾಗಿ ಇದರ ಬೇಸಾಯದಲ್ಲಿ (ಸಾಮಾನ್ಯವಾಗಿ ನೀರಾವರಿ ಭೂಮಿಯಲ್ಲೆ ಇದರ ಬೇಸಾಯ ಹೆಚ್ಚು) ಈ ಅಂಶಗಳ ಬಗ್ಗೆ-ಅದರಲ್ಲೂ ಗಿಡಗಳು ಚಿಕ್ಕವಿರುವಾಗ ಹೆಚ್ಚು ಗಮನ ಕೊಡುವುದು ಅಗತ್ಯ. ಖರ್ಜೂರದ ಮರದ ಈ ಬಗೆಯ ನಿಖರವಾದ ಅವಶ್ಯಕತೆಗಳಿಂದಾಗಿ ಖರ್ಜೂರದ ಮರದ ಕಾಲು ಹರಿವ ನೀರಿನಲ್ಲಿ, ತಲೆ ಉರಿವ ಬಾನಿನಲ್ಲಿ ಇರಬೇಕು ಎಂದು ಅರಬ್ ದೇಶಗಳಲ್ಲಿ ಹೇಳುವುದಿದೆ.
ಬೇಸಾಯದ ಕ್ರಮ: ಖರ್ಜೂರದ ಮರವನ್ನು ಕಂದುಗಳಿಂದ ಇಲ್ಲವೆ ಬೀಜಗಳಿಂದ ವೃದ್ಧಿಮಾಡಬಹುದು. ಬೀಜಗಳಿಂದ ಬೆಳೆಸುವುದು ಲಾಭದಾಯಕವಲ್ಲ. ಏಕೆಂದರೆ ಬತ್ತಿದ ಬೀಜಗಳಲ್ಲಿ 50%ರಷ್ಟು ಮಾತ್ರ ಹೆಣ್ಣು ಸಸಿಗಳಾಗುತ್ತವೆ. ಉಳಿದವು ಗಂಡು ಸಸಿಗಳು. ಅಲ್ಲದೆ ಸಸಿಗಳ ಲಿಂಗವನ್ನು ಗೊತ್ತುಹಚ್ಚಲು 4-10 ವರ್ಷಗಳು ಬೇಕು. ಇವು ಬಿಡುವ ಹಣ್ಣಿನ ಗುಣ ಗೊತ್ತಾಗುವುದೂ ಅನಂತರವೇ. ಇದರಿಂದಾಗಿ ಕಂದುಗಳಿಂದ ವೃದ್ಧಿಮಾಡುವುದೇ ಸೂಕ್ತಕ್ರಮ. ಆದರೂ ಕೆಲವೊಮ್ಮೆ ಬೀಜದಿಂದ ಪಡೆದ ಸಸಿ ಶ್ರೇಷ್ಠ ಗುಣಗಳಿಂದ ಕೂಡಿದ್ದಾಗಿರಬಹುದು. ಆಗ ಅದನ್ನು ಉಳಿಸಿಕೊಂಡು ಅದರಿಂದ ಹೊರಡುವ ಕಂದುಗಳಿಂದ ಮರಗಳನ್ನು ಬೆಳೆಸಿಕೊಳ್ಳಬಹುದು. ಹಣ್ಣಿನ ಗುಣ ಲಕ್ಷಣಗಳಲ್ಲಿ ಉತ್ತಮವೆನಿಸಿದ ಮರದಿಂದ ಹುಟ್ಟುವ ಕಂದುಗಳನ್ನು ಕತ್ತರಿಸಿ ತೆಗೆದು ಬೇರೆಡೆಯಲ್ಲಿ ನೆಟ್ಟು ಬೆಳೆಸುವುದೇ ವಾಡಿಕೆಯಲ್ಲಿರುವ ಕ್ರಮ. ಒಂದು ಮರಕ್ಕೆ 4-5 ವರ್ಷ ವಯಸ್ಸಾದ ಅನಂತರ ಕಂದುಗಳನ್ನು ಕತ್ತರಿಸಲು ಆರಂಭಿಸುತ್ತಾರೆ. ಒಂದು ಮರದಿಂದ ಪ್ರತಿವರ್ಷ ಎರಡು ಕಂದುಗಳಂತೆ 10-15 ವರ್ಷಗಳ ವರೆಗೂ ಪಡೆಯಬಹುದು. ಬೇರುಗಳು ಹೊರಟ ಕಂದುಗಳನ್ನು ಕತ್ತರಿಸುವುದೇ ಉತ್ತಮ. ಇವನ್ನು ಬೇರ್ಪಡಿಸುವ 4-5 ದಿವಸಗಳ ಮುಂಚೆ ಇಲ್ಲವೆ ಬೇರ್ಪಡಿಸಿದ ತತ್ ಕ್ಷಣ ಇವುಗಳಿಂದ ಎಳೆಯ ಗರಿಗಳನ್ನು ಬಿಟ್ಟು ಉಳಿದವನ್ನು ತೆಗೆದು ಹಾಕುತ್ತಾರೆ. ಕಂದುಗಳನ್ನು ಬೇರ್ಪಡಿಸುವ ಕಾಲ ಫೆಬ್ರುವರಿ-ಏಪ್ರಿಲ್ ಇಲ್ಲವೆ ಆಗಸ್ಟ್-ಸೆಪ್ಟೆಂಬರ್. ಕಂದುಗಳನ್ನು ಬೇರ್ಪಡಿಸಿದ ತತ್ ಕ್ಷಣವೇ ಬೇರೆಡೆಯಲ್ಲಿ ನೆಡಬೇಕು. ಆದರೆ ಕಂದುಗಳನ್ನು ನರ್ಸರಿಗಳಲ್ಲಿ ಕೊಂಚಕಾಲ ಹಾಗೆಯೇ ಇಟ್ಟಿರಬಹುದು. ಕಂದುಗಳನ್ನು ನೆಡುವಾಗ ಗಿಡದಿಂದ ಗಿಡಕ್ಕೆ ಸಾಕಷ್ಟು ಅಂತರ ವಿರುವಂತೆ ನೋಡಿಕೊಳ್ಳಬೇಕು. ಖರ್ಜೂರದ ಮರದ ಬಗೆ, ನೆಲದ ಗುಣ ಮತ್ತು ನೀರಾವರಿಯ ಕ್ರಮಗಳನ್ನು ಅನುಸರಿಸಿ ಅಂತರ ವ್ಯತ್ಯಾಸವಾಗುತ್ತದೆ. ಗಿಡದಿಂದ ಗಿಡಕ್ಕೆ (15'-25') ( (15'-25') ಅಂತರವಿರುವುದು ಉತ್ತಮ ಎನ್ನಲಾಗಿದೆ. ಅಮೆರಿಕದಲ್ಲಿ 27' ( 27' ಅಂತರ ಕೊಡುವುದು ರೂಢಿಯಲ್ಲಿದೆ. ಕಂದುಗಳು ನೆಲದಲ್ಲಿ ಚೆನ್ನಾಗಿ ಕೂರುವಂತೆ ನೆಡಬೇಕು. ಕಂದಿನ ತುದಿ ನೆಲದಿಂದ ಳಿ-¾ ಮೇಲಕ್ಕೆ ಚಾಚಿರುವಂತಿರಬೇಕು. ಇದರಿಂದ ಗಿಡಗಳಿಗೆ ನೀರು ಹಾಯಿಸಿದಾಗ ನೀರು ಅವುಗಳ ತುದಿಯನ್ನು ಪ್ರವೇಶಿಸಿ ಕೊಳೆಯಿಸುವುದಿಲ್ಲ. ಕಂದುಗಳನ್ನು ನೆಟ್ಟ ಅನಂತರ ಎರಡು-ಮೂರು ವರ್ಷ ಅವು ಹವಾಮಾನದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವವರೆಗೂ ಚಿನ್ನಾಗಿ ಅರೈಕೆ ಮಾಡಬೇಕು.
ಸೂಕ್ತ ಬಗೆಯ ಗೊಬ್ಬರವನ್ನು ಅಗತ್ಯ ಪ್ರಮಾಣದಲ್ಲಿ ಹಾಕುವುದು ಬಲು ಮುಖ್ಯ. ಗೊಬ್ಬರದ ಪರಿಮಾಣ ಮಣ್ಣಿನ ಫಲವತ್ತತೆ ಮತ್ತು ಮರದ ವಯಸ್ಸು ಮುಂತಾದವನ್ನು ಆವಲಂಬಿಸಿದೆಯಾದರೂ ಫಲ ಕೊಡುವ ಪ್ರತಿ ಮರಕ್ಕೂ ವರ್ಷಕ್ಕೆ 50-60 ಕೆಜಿ. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಇಲ್ಲವೆ 1-2 ಕೆಜಿ. ಅಮೋನಿಯಂ ಸಲ್ಫೇಟನ್ನೂ ಹಾಕಬೇಕು. ಜನವರಿ-ಫೆಬ್ರುವರಿಯಲ್ಲೊಮ್ಮೆ ಮತ್ತು ಆಗಸ್ಟ್ ಸೆಪೆಂಬರ್‍ನಲ್ಲೊಮ್ಮೆ ಹೀಗೆ ವರ್ಷಕ್ಕೆ ಎರಡು ಬಾರಿ ಮೇಲೆ ಹೇಳಿದ ಪರಿಮಾಣದ ಗೊಬ್ಬರವನ್ನು ಸಮಭಾಗ ಮಾಡಿ ಹಾಕಬೇಕು. ವಸಂತ ಕಾಲದಲ್ಲಿ ಮರ ಚಿಗುರೊಡೆಯುವ ಮುನ ಸಗಣಿ ಗೊಬ್ಬರವನ್ನು ಮರವೊಂದಕ್ಕೆ 45 ಕೆಜಿ.ಯ ದರದಂತೆ ಹಾಕಬಹುದು. ಅಮೆರಿಕದಲ್ಲಿ ಹಸಿರು ಗೊಬ್ಬರದ ಬಳಕೆ ಉತ್ತಮ ಫಲಿತಾಂತ ನೀಡಿದೆ.
ಖರ್ಜೂರದ ಮರಕ್ಕೆ ಹೆಚ್ಚು ನೀರು ಬೇಕು. ನೀರಾವರಿ ಸೌಲಭ್ಯವಿರುವೆಡೆ ಬೇಸಗೆಯಲ್ಲಿ 10-14 ದಿವಸಗಳಿಗೊಮ್ಮೆ ಮತ್ತು ಚಳಿಗಾಲದಲ್ಲಿ 30-40 ದಿವಸಗಳಿಗೊಮ್ಮೆ ನೀರು ಹಾಯಿಸಬೇಕು. ಖರ್ಜೂರದ ಮರದ ಬೇರುಗಳು ನೆಲದಲ್ಲಿ 6'-9' ಆಳಕ್ಕೆ ಇಳಿಯುವುದರಿಂದ ಅಷ್ಟು ಆಳದವರೆಗೆ ತೇವವಿರುವಂತೆ ನೋಡಿಕೊಳ್ಳಬೇಕು. ಮರ ಹೆಚ್ಚು ನೀರು ಹಾಯಿಸುವಿಕೆಯನ್ನು ಮತ್ತು ನೆರೆ ಹಾವಳಿಗಳನ್ನು ಸಹಿಸಬಲ್ಲುದಾದರೂ ಇದು ಬೆಳೆಯುವ ಭೂಮಿಯಲ್ಲಿ ಶಾಶ್ವತವಾಗಿ ನೀರು ನಿಲ್ಲಬಾರದು.
ಖರ್ಜೂರದ ಮರದ ತೋಟಗಳಲ್ಲಿ ಮರಗಳ ನಡುವಣ ಸ್ಥಳಗಳಲ್ಲಿ ಗೋದಿ, ಬಾರ್ಲಿ, ದ್ವಿದಳಧಾನ್ಯಗಳು, ತರಕಾರಿ ಸಸ್ಯಗಳು ಮುಂತಾದವನ್ನು ಉಪಬೆಳೆಗಳನ್ನಾಗಿ ಬೆಳೆಸಬಹುದು. ಹೀಗೆ ಮಾಡುವುದು ಅರ್ಥಿಕ ದೃಷ್ಟಿಯಿಂದ ಲಾಭದಾಯಕವಲ್ಲದೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲೂ ಸಹಕಾರಿ. ಮರಗಳು ಎತ್ತರಕ್ಕೆ ಬೆಳೆದಾಗ ದ್ರಾಕ್ಷಿ. ದಾಳಿಂಬೆ, ಅಂಜೂರ, ಸಕ್ಕರೆ ಬಾದಾಮಿ, ಕಿತ್ತಳೆ ಮುಂತಾದ ಹಣ್ಣಿನ ಗಿಡಗಳನ್ನು ಬೆಳೆಸಬಹುದು.
ಕಂದುಗಳನ್ನು ನೆಟ್ಟ 5-8 ವರ್ಷಗಳ ಅನಂತರ ಮರ ಹೂ ಬಿಡಲು ಅರಂಭಿಸುತ್ತದೆ. ಖರ್ಜೂರದ ಫಲೋತ್ಪಾದನಾ ಸಾಮಥ್ರ್ಯ ಗರಿಗಳ ಸಂಖ್ಯೆಯನ್ನು ಅವಲಂಬಿಸಿದೆ. ಪ್ರತಿ 8-9 ಗರಿಗಳಿಗೆ ಒಂದು ಗೊಂಚಲು ಹಣ್ಣುಗಳಿರುವುದು ಉತ್ತಮ ಎನ್ನಲಾಗಿದೆ. ಇದರಿಂದ ಮರದಲ್ಲಿನ ಹಣ್ಣಿನ ಗೊಂಚಲಿನ ಸಂಖ್ಯೆಗನುಗುಣವಾಗಿ ಗರಿಗಳನ್ನು ಉಳಿಸಿಕೊಂಡು ಹೆಚ್ಚಾದವನ್ನು ಕತ್ತರಿಸಬೇಕು. ಒಣಗಿದ ಗರಿಗಳನ್ನಂತೂ ತೆಗದು ಹಾಕಲೇಬೇಕು. ಅಂತೆಯೆ ಅನಗತ್ಯವಾದ ಕಂದುಗಳನ್ನೂ ಕತ್ತರಿಸಿಬಿಡಬೇಕು. ಇಲ್ಲದಿದ್ದರೆ ಇಳುವರಿ ಕಡಿಮೆಯಾಗುತ್ತದೆ.
ಖರ್ಜೂರದ ಮರ ಹೂ ಬಿಡುವುದು ಮಾರ್ಚ್-ಏಪ್ರಿಲ್ ತಿಂಗಳುಗಳಲ್ಲಿ. ಹಣ್ಣು ಮಾಗುವ ಕಾಲ ಆಗಸ್ಟ್-ಅಕ್ಟೋಬರ್. ಹಣ್ಣುಗಳ ಗಾತ್ರ ಮತ್ತು ರುಚಿಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರತಿ ಗೊಂಚಲಿನಲ್ಲಿನ ಕೆಲವು ಫಲಗಳನ್ನು ತೆಗೆದು ಹಾಕಬೇಕು. ಹೀಗೆ ಮಾಡುವುದರಿಂದ ಮಾರನೆಯ ವರ್ಷ ಹೂ ಅರಳಿಕೆಯೂ ಚೆನ್ನಾಗಿರುತ್ತದೆ. ಸಾಮಾನ್ಯವಾಗಿ ಒಂದೊಂದು ಹೂಗೊಂಚಲಿನಲ್ಲಿನ 50%-75%ರಷ್ಟು ಹೂಗಳನ್ನು ಇಲ್ಲವೆ ಚಿಕ್ಕ ಕಾಯಿಗಳನ್ನು ತೆಗೆದು ಹಾಕುತ್ತಾರೆ. ಒಂದು ಮರದಿಂದ ಕೆಲವು ಗೊಂಚಲುಗಳನ್ನೇ ಕತ್ತರಿಸಿ ಹಾಕುವ ಕ್ರಮವೂ ಇದೆ.
ಕೊಯ್ಲು ಮತ್ತು ಇಳುವರಿ: ಬೆಳೆವಣಿಗೆಯ ಹಾಗೂ ಮಾಗುವ ಹಂತವನ್ನವ ಲಂಬಿಸಿ ಖರ್ಜೂರದ ಹಣ್ಣನ್ನು ನಾಲ್ಕು ಮುಖ್ಯ ಬಗೆಗಳಾಗಿ ವಿಂಗಡಿಸಲಾಗಿದೆ. ಅರಬ್ ದೇಶಗಳಲ್ಲಿ ಇವಕ್ಕೆ ಕಿಮ್ರಿ, ಖಲಾಲ್, ರುಟಾಬ್ ಮತ್ತು ಟಮರ್ ಎಂದೂ ಪಾಕಿಸ್ತಾನದಲ್ಲಿ ಗಾಂಡೋರ, ಡೋಕ, ಡಂಗ್ ಮತ್ತು ಪಿಂಡ್ ಎಂದೂ ಹೆಸರಿದೆ. ಗಾಂಡೋರ ಅಥವಾ ಕಿಮ್ರಿ ಎಂಬುದು ಎಳೆಯದು. ಹಸಿರು ಬಣ್ಣದ್ದು. ಡೋಕ ಅಥವಾ ಖಲಾಲ್ ಎಂಬುದು ಕೆಂಪು, ಹಳದಿಮಿಶ್ರಿತ ಕೆಂಪು ಇಲ್ಲವೆ ಹಳದಿಬಣ್ಣದ್ದು. ಡಂಗ್ (ರುಟಾಬ್) ಎಂಬ ಬಗೆಯದು ಮೃದುವಾದ ತುದಿಯುಳ್ಳದ್ದು. ಇದರ ಬಣ್ಣ ಕಡು ಹಳದಿ ಇಲ್ಲವೆ ಕೆಂಪು. ಪಿಂಡ್ (ಟಮರ್) ಪೂರ್ಣ ಮಾಗಿದ ರೀತಿಯದು. ಖರ್ಜೂರವನ್ನು ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ಹಂತಗಳಲ್ಲಿ ಕೊಯ್ಯುತ್ತಾರೆ.ಅರಬ್ ದೇಶಗಳಲ್ಲಿ ಕೆಲವು ಬಗೆಗಳನ್ನು ಖಲಾಲ್ ಹಂತದಲ್ಲೂ ಇನ್ನು ಕೆಲವನ್ನು ಪಿಂಡ್ ಹಂತದಲ್ಲೂ ಕೊಯ್ಯುತ್ತಾರೆ. ಪಾಕಿಸ್ತಾನದಲ್ಲಿ ಹಣ್ಣುಗಳು ಮಾಗುವ ಸ್ವಲ್ಪ ಸಮಯದ ಮುಂಚೆ ಬಿಡಿಸಲಾಗುತ್ತದೆ. ಭಾರತದಲ್ಲಿ ಡಂಗ್ ಹಂತದಲ್ಲಿ ಬಿಡಿಸುವುದು ವಾಡಿಕೆ. ಬಹುಪಾಲು ಬಗೆಯ ಖರ್ಜೂರದ ಮರಗಳು ನೆಟ್ಟ 4ನೆಯ ವರ್ಷದಿಂದ ಫಲ ಬಿಡಲು ಆರಂಬಿಸಿ 10-15 ವರ್ಷ ವಯಸ್ಸಾದಾಗ ಗರಿಷ್ಠ ಪರಿಮಾಣದಲ್ಲಿ ಫಲ ಕೊಡುತ್ತವೆ. ಫಲ ಕೊಡುವ ಅವಧಿ ಸುಮಾರು 50 ವರ್ಷಗಳು. ಇಳುವರಿಯ ಪರಿಮಾಣ ಬಗೆಯಿಂದ ಬಗೆಗೆ ಮತ್ತು ಹವಾಮಾನ ಸ್ಥಿತಿಯನ್ನವಲಂಬಿಸಿ ವ್ಯತ್ಯಾಸವಾಗುತ್ತದೆ. ಕೆಲವು ಬಗೆಗಳಲ್ಲಿ ವರ್ಷಕ್ಕೆ ಒಂದು ಮರದಿಂದ 45 ಕೆಜಿ. ಖರ್ಜೂರ ದೊರೆತರೆ ಇನ್ನು ಕೆಲವು ಬಗೆಗಳಲ್ಲಿ 240 ಕೆಜಿ. ದೊರೆಯಬಹುದು.
ಖರ್ಜೂರದ ಮರಕ್ಕೆ ತಗಲುವ ರೋಗಗಳು: ಇದಕ್ಕೆ ಹಲವಾರು ಬಗೆಯ ಶಿಲೀಂಧ್ರ ರೋಗಗಳು ಹಾಗೂ ಕೀಟಗಳು ತಗಲುವುದುಂಟು. ಶಿಲೀಂಧ್ರ ರೋಗಗಳಲ್ಲಿ ಮುಖ್ಯವಾದ್ದು ಗ್ರಾಫಿಯೋಲ ಫೀನಿಸಿಸ್ ಎಂಬ ಬೂಷ್ಟಿನಿಂದ ಉಂಟಾಗುವ ಗರಿಯ ಬೊಕ್ಕೆ ರೋಗ. ಇದರಿಂದ ಗರಿಗಳ ಮೇಲೆ ಕಪ್ಪು ಬಣ್ಣದ ಬೊಕ್ಕೆಗಳೇಳುತ್ತವೆ. ರೋಗ ಅಂಟಿದ ಗರಿಗಳನ್ನು ಕಿತ್ತುಹಾಕುವುದು ಮತ್ತು ಬೋರ್ಡೊ ಮಿಶ್ರಣ ಇಲ್ಲವೆ ಪೊಟ್ಯಾಸಿಯಂ ಪರ್ಮಾಂಗನೇಟ್ ದ್ರಾವಣವನ್ನು ಸಿಂಪಡಿಸುವುದು ಈ ರೋಗಕ್ಕೆ ನಿವಾರಣೋಪಾಯಗಳು. ಡೈಡರ್ಮ ಎಫ್ಯೂಸಮ್ ಎಂಬುದರಿಂದ ಉಂಟಾಗುವ ಚುಕ್ಕೆರೋಗ, ಪೆಸ್ಟಲೋಶಿಯ ಪಾಮೇರಮ್‍ನಿಂದ ಉಂಟಾಗುವ ಬೂದಿ ಕೊಳೆರೋಗ ಮುಂತಾದವು ಇತರ ಬಗೆಯ ಶಿಲೀಂಧ್ರ ರೋಗಗಳು.
ಕೀಟ ಪಿಡುಗುಗಳಲ್ಲಿ ಮುಖ್ಯವಾದವು- 1 ಕೆಂಪು ಮೂತಿ ಹುಳು (ರಿಂಕೋ ಫೋರಸ್ ಫೆರುಜಿನಿಯಸ್). ಇದರ ಡಿಂಬಗಳು ಕಾಂಡದ ತುದಿಯಲ್ಲಿ ಸುರಂಗಗಳನ್ನು ಕೊರೆದು ಅದು ಒಣಗಿಹೋಗಿ ಮುರಿದುಬೀಳುವಂತೆ ಮಾಡುತ್ತವೆ. 2 ಖಡ್ಗಜೀರುಂಡೆ (ಒರಿಕ್ಟಿಸ್ ರೈನಾಸೆರಸ್). ಇದು ಕೂಡ ಕೆಂಪು ಮೂತಿ ಹುಳುವಿನ ಡಿಂಬಗಳಂತೆಯೇ ಸುರಂಗಗಳನ್ನು ಕೊರೆದು ಮರಗಳನ್ನು ನಾಶಗೊಳಿಸುತ್ತದೆ. ಈ ಎರಡು ಬಗೆಯ ಕೀಟಗಳನ್ನು ಕೊಕ್ಕೆಯಂಥ ತುದಿಯುಳ್ಳ ಕಬ್ಬಿಣದ ಸಲಾಕೆಯಿಂದ ಹೊರತೆಗೆದು ಹಾಕಬಹುದು. ಕೀಟನಾಶಕಗಳನ್ನು ಸುರಂಗದೊಳಕ್ಕೆ ಹಾಕಿಯೂ ನಿರ್ಮೂಲಮಾಡಬಹುದು. 3 ಶಲ್ಕ ಕೀಟಗಳು. ಇವು ಕಿರುಗರಿಗಳ ಮೇಲೆ ಗರಿಗಳ ನಡುದಿಂಡಿನ ಮೇಲೆ ಇದ್ದು ಮರದ ಬೆಳೆವಣಿಗೆಯನ್ನು ಕುಂಠಿತಗೊಳಿಸುತ್ತವೆ. ರೋಸಿನ್ ಮಿಶ್ರಣದ ಬಳಕೆಯಿಂದ ಇವನ್ನು ಹತೋಟಿಯಲ್ಲಿಡಬಹುದು.
ಖರ್ಜೂರ ಪಕ್ವವಾಗುತ್ತ ಬಂದಂತೆ ಹಕ್ಕಿ ಮತ್ತು ಕೆಲವು ಬಗೆಯ ಕೀಟಗಳ ಹಾವಳಿ ಹೆಚ್ಚುವುದರಿಂದ ಇವನ್ನು ಕಾಗದ ಇಲ್ಲವೆ ಬಟ್ಟೆಯ ಚೀಲಗಳಿಂದ ಮರೆಮಾಡಿ ರಕ್ಷಿಸಬೇಕು.
ಖರ್ಜೂರದ ಸಂಸ್ಕರಣ: ಖರ್ಜೂರವನ್ನು ಅದು ಪಕ್ವವಾಗುವ ವಿವಿಧ ಹಂತಗಳಲ್ಲಿ ಹಾಗೆಯೆ ತಿನ್ನಬಹುದು. ಡೋಕ ಹಂತದಲ್ಲಿ ಖರ್ಜೂರಕ್ಕೆ ಬಂಧಕ ಗುಣವಿದೆಯಾದರೂ ಸಾಕಷ್ಟು ರುಚಿಯಾಗಿರುವುದಿಂದ ಅರಬ್ಬೀಯರು ಆ ಹಂತದಲ್ಲೇ ತಿನ್ನುತ್ತಾರೆ. ಡಂಗ್ ಹಂತದಲ್ಲಿನ ಖರ್ಜೂರ ಬಹಳ ಮಧುರವಾಗಿರುತ್ತದೆ. ಅದರೆ ಈ ಸ್ಥಿತಿಯಲ್ಲಿ ಬಹಳ ದಿನ ಸಂಗ್ರಹಿಸಿ ಇಡುವುದಕ್ಕಾಗುವುದಿಲ್ಲ. ಆದ್ದರಿಂದ ಖರ್ಜೂರವನ್ನು ಕಿತ್ತ ಅನಂತರ ಅವನ್ನು ವಿವಿಧ ರೀತಿಗಳಲ್ಲಿ ಸಂಸ್ಕರಿಸಿ, ಒಣಗಿಸಿ ಸಂಗ್ರಹಿಸಿ ಇಡಲಾಗುತ್ತದೆ. ಖರ್ಜೂರವನ್ನು ಒಣಗಿಸುವ ಮುನ್ನ ಸೇ. 1 ರ ಕುದಿಯುತ್ತಿರುವ ಕೊಳೆ ಕಳೆಯುವ ತೀವ್ರಕ್ಷಾರ ಜಲದಲ್ಲಿ (ಲೈ) ಅದ್ದಿ ತೆಗೆದು ನೀರಿನಲ್ಲಿ ತೊಳೆಯಬೇಕು. ಇದರಿಂದ ಹಣ್ಣು ಶುದ್ಧವಾಗುವುದಲ್ಲದೆ ನೋಡುವುದಕ್ಕೂ ಚೆನ್ನಾಗಿ ಕಾಣುತ್ತವೆ. ಹಣ್ಣು ಒಣಗಲು ಬೇಕಾಗುವ ಅವಧಿಯೂ ಕಡಿಮೆಯಾಗುತ್ತದೆ. ಆದರೆ ರುಚಿಕೊಂಚ ಕಡಿಮೆಯಾಗುತ್ತದೆ. ಪಾಕಿಸ್ತಾನದಲ್ಲಿ ಖರ್ಜೂರವನ್ನು ಡಂಗ್ ಹಂತದಲ್ಲಿ ಕಿತ್ತು ಗರಿಗಳಿಂದ ಮಾಡಿದ ಚಾಪೆಗಳ ಮೇಲೆ ಹರಡಿ 3-7 ದಿವಸಗಳ ಕಾಲ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಕೆಲವು ಬಗೆಯ ಶುದ್ಧೀಕರಿಸುವ ಮತ್ತು ಒಣಗಿಸುವ ಉಪಕರಣಗಳನ್ನೂ ಬಳಸುವುದಿದೆ. ಡಂಗ್ ಹಂತದಲ್ಲಿ ಬಿಡಿಸುವುದು ಹೆಚ್ಚು ಖರ್ಚಿನದೂ ಪ್ರಯಾಸಕರವೂ ಆದ್ದರಿಂದ ಡೋಕ ಹಂತದಲ್ಲಿ ಬಿಡಿಸುವುದು ಉತ್ತಮ ಎನ್ನಲಾಗಿದೆ. ಸೂಕ್ತವಾದ ರೀತಿಯಲ್ಲಿ ಒಣಗಿಸಿದ ಹಣ್ಣಗಳನ್ನು ವಿವಿಧ ಉಷ್ಣತೆಗಳಲ್ಲಿ ಬೇರೆ ಬೇರೆ ಕಾಲಾವಧಿಯ ವರೆಗೆ ಸಂಗ್ರಹಿಸಿಡಬಹುದು (ಉದಾಹರಣೆಗೆ ಡೆಗ್ಲೆಟ್ ನೂರ್ ಬಗೆಯನ್ನು 27' ಸೆಂ. ನಲ್ಲಿ ಒಂದು ತಿಂಗಳ ವರೆಗೆ 16' ಸೆಂ. ನಲ್ಲಿ 3 ತಿಂಗಳ ವರೆಗೆ, 4' ಸೆಂ.ನಲ್ಲಿ 8 ತಿಂಗಳ ವರೆಗೆ ಮತ್ತು 0' ಸೆಂ.ನಲ್ಲಿ ಒಂದು ವರ್ಷ ಸಂಗ್ರಹಿಸಿಡಬಹುದು).
ಅರಬ್ ದೇಶಗಳಲ್ಲಿ ಸಂಸ್ಕರಿಸಿದ ಖರ್ಜೂರವನ್ನು ಗರಿಗಳಿಂದ ಮಾಡಿದ ಬುಟ್ಟಿಗಳಲ್ಲಿ ತುಂಬಿ ಸಾಗಿಸಲಾಗುತ್ತದೆ. ಅಮೆರಿಕದಲ್ಲಿ ರಟ್ಟಿನ ಇಲ್ಲವೆ ಹಗುರ ಮರದ ಪೆಟ್ಟಿಗೆಗಳಲ್ಲಿ ತುಂಬಿ ಕಳಿಸಲಾಗುತ್ತದೆ. ರೋಗಕಾರಕ ಜೀವಾಣುಗಳು. ಕೀಟಗಳು ಖರ್ಜೂರಕ್ಕೆ ಅಂಟುವ ಸಂಭವವಿರುವುದರಿಂದ ಸಥಳದಿಂದ ಸ್ಥಳಕ್ಕೆ ಸಾಗಿಸುವಾಗ ಹಣ್ಣನ್ನು ಪ್ಯಾಶ್ಚುರೀಕರಣಕ್ಕೆ ಒಳಪಡಿಸುವುದುಂಟು.
ಭಾರತದಲ್ಲಿ ಗಣನೀಯ ಪರಿಮಾಣದಲ್ಲಿ ಖರ್ಜೂರದ ಬಳಕೆಯಿದೆ. ಮುಖ್ಯವಾಗಿ ಇರಾಕ್, ಸೌದಿ ಅರೇಬಿಯ, ಇರಾನ್‍ಗಳಿಂದ ಖರ್ಜೂರವನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ರಾಸಾಯನಿಕ ಸಂಯೋಜನೆ ಮತ್ತು ಉಪಯೋಗ: ಬಹಳ ಪುಷ್ಟಿಕರವಾದ ಆಹಾರವೆನಿಸಿರುವ ಖರ್ಜೂರದ ರಾಸಾಯನಿಕ ಸಂಯೋಜನೆ ಹೀಗೆದೆ-ತೇವಾಂಶ, 15.3%; ಪ್ರೋಟೀನ್,2.5%; ಕೊಬ್ಬು,0.4%; ಕಾರ್ಬೊಹೈಡ್ರೇಟ್ 75.8%: ನಾರು, 3.9%: ಖನಿಜಾಂಶ, 2.1%: ರಂಜಕ, 0,05%; ಕ್ಯಾಲ್ಸಿಯಂ, 0.12%. ಅಲ್ಲದೆ ಪ್ರತಿ ನೂರು ಗ್ರಾಮಿಗೆ 7.3 ಮಿಗ್ರಾಂ. ಕಬ್ಬಿಣ. 44 ಐ.ಯು, ಕ್ಯಾರೊಟಿನ್, 3 ಮಿಗ್ರಾಂ. ಆಸ್ಕಾರ್ಬಿಕ್ ಆಮ್ಲ, 0.023 ಮಿಗ್ರಾಂ. ರೈಬೊಫ್ಲೇವಿನ್. 0.011 ಮಿಗ್ರಾಂ. ತಯಮಿನ್ ಮತ್ತು 0.9 ಮಿಗ್ರಾಂ. ನಿಕೊಟಿನಿಕ್ ಆಮ್ಲಗಳೂ ಇವೆ. ಒಟ್ಟಾರೆ ಖರ್ಜೂರದಲ್ಲಿ ತಿನ್ನಲು ಯೋಗ್ಯವಾದ ಭಾಗ 86% ರಷ್ಟಿದ್ದು ಪ್ರತಿ ನೂರು ಗ್ರಾಂ ಖರ್ಜೂರದಿಂದ 317 ಕೆಲೊರಿ ಶಕ್ತಿಯನ್ನು ಪಡೆಯಬಹುದು. ಮಾಗಿದ ಖರ್ಜೂರದಲ್ಲಿನ ಕಾರ್ಬೊಹೈಡ್ರೇಟುಗಳಲ್ಲಿ ಬಹುಪಾಲು ಸಕ್ಕರೆಗಳಿಂದಾದುದು. ಮೆತು ಖರ್ಜೂರಗಳಲ್ಲಿ ಗ್ಲೂಕೋಸ್ ಮತ್ತು ಫ್ರಕ್ಟೋಸ್ ರೂಪದಲ್ಲೂ ಒಣಬಗೆಗಳಲ್ಲಿ ಸೂಕ್ರೋಸ್ ರೂಪದಲ್ಲೂ ಸಕ್ಕರೆ ಇರುತ್ತದೆ. ಅಲ್ಲದೆ ಅಲ್ಪಪ್ರಮಾಣದಲ್ಲಿ ರ್ಯಾಮ್ನೋಸ್, ಜೈಲೋಸ್, ರೈಬೋಸ್, ಅರ್ಯಾಬಿನೋಸ್, ಗ್ಯಲಕ್ಟೋಸ್ ಮುಂತಾದ ಸಕ್ಕರೆಗಳೂ ಇವೆ. ಅಪಕ್ವ ಹಣ್ಣುಗಳಲ್ಲಿ ಕೆಲವು ಬಗೆಯ ಬಂಧಕ ಘಟಕಗಳಿವೆ.ಇದರಿಂದಲೇ ಮಾಗದ ಹಣ್ಣುಗಳನ್ನು ತಿಂದರೆ ಹೊಟ್ಟೆ ಕಟ್ಟುವುದು. ಹಣ್ಣು ಮಾಗುತ್ತ ಬಂದಂತೆ ಈ ಘಟಕಗಳು ಅಳಿದುಹೋಗುತ್ತವೆ.
ಖರ್ಜೂರ ಅರಬ್ ದೇಶಗಳ ಜನರಿಗೆ ಪ್ರಮುಖವಾದ ಹಾಗೂ ಅಚ್ಚುಮೆಚ್ಚಿನ ಆಹಾರವಾಗಿದೆ. ಹೋಳಿಗೆ ಮೊದಲಾದ ಸಿಹಿತಿಂಡಿಗಳಲ್ಲೂ ಇದರ ಬಳಕೆಯುಂಟು. ಇದರಿಂದ ಹಲವಾರು ಬಗೆಯ ರಸಪಾಕಗಳನ್ನೂ ಒಂದು ರೀತಿಯ ಜೇನುತುಪ್ಪವನ್ನೂ ಮಾಡುವುದಿದೆ. ಹಾಲು, ಬೆಣ್ಣೆ ಮತ್ತು ಮಾಂಸಗಳೊಂದಿಗೆ ಇದನ್ನು ಬಳಸುತ್ತಾರೆ. ಹಲವಾರು ರೀತಿಯಲ್ಲಿ ಇದನ್ನು ಸಂಸ್ಕರಿಸಿ, ಹುದುಗುವಿಕೆಗೆ ಒಳಪಡಿಸಿ ಒಂದು ಬಗೆಯ ಮಾದಕ ಪಾನೀಯವನ್ನೂ (ಸಿರಪ್) ಬ್ರಾಂಡಿ ಅಥವಾ ಸಾರಾಯಿಯನ್ನೂ ತಯಾರು ಮಾಡುವುದುಂಟು. ನೈಜೀರಿಯದಲ್ಲಿ ಖರ್ಜೂರವನ್ನು ಮೆಣಸಿನಕಾಯಿಯೊಂದಿಗೆ ಬೆರೆಸಿ ಬೀರ್‍ಗೆ ಸೇರಿಸಿ ಕುಡಿಯುವ ಕ್ರಮ ಇದೆ. ಖರ್ಜೂರಕ್ಕೆ ಔಷಧೀಯ ಗುಣಗಳೂ ಇವೆ: ಇದು ಬಲು ಒಳ್ಳೆಯ ಶಾಮಕ, ಕಫಹಾರಕ, ಶಕ್ತಿವರ್ಧಕ, ಕಾಮೋತ್ತೇಜಕ ಹಾಗೂ ವಿರೇಚಕವೆಂದು ಹೆಸರಾಗಿದೆ. ಹೊಸ ಖರ್ಜೂರವನ್ನು ಹಾಲಿನೊಂದಿಗೆ ಸೇರಿಸಿ ಶಕ್ತಿದಾಯಕ ಕಷಾಯವಾಗಿ ಬಳಸುತ್ತಾರೆ. ಬಾದಾಮಿ, ಪಿಸ್ತಾ ಬೀಜ, ಸಕ್ಕರೆ, ಸಂಬಾರ ಪದಾರ್ಥಗಳು ಮುಂತಾದವುಗಳೊಂದಿಗೆ ಒಣ ಖರ್ಜೂರವನ್ನು ಸೇರಿಸಿ ಕುಟ್ಟಿ ತಯಾರಿಸಿದ ಮಿಶ್ರಣ ಬಲು ಒಳ್ಳೆಯ ಪುಷ್ಟಿದಾಯಕ ಆಹಾರವಾಗಿದೆ. ಬೀಜಗಳನ್ನು ಹುರಿದು ಪುಡಿಮಾಡಿ ಒಂದು ರೀತಿಯ ಕಾಫಿ ಮಾಡಲು ಬಳಸುವುದುಂಟು. ಬೀಜಗಳಿಂದ ತಯಾರಿಸುವ ಅಂಟು ಲೇಪವನ್ನು ಕೆಲವು ಬಗೆಯ ಕಣ್ಣಿನ ತೊಂದರೆಗಳಿಗೂ ತಲೆ ನೋವಿಗೂ ಮದ್ದಾಗಿ ಬಳಸುವುದುಂಟು. ಲೇಪವನ್ನು ಉತ್ತರಾಣಿ ಬೇರಿನೊಂದಿಗೆ ಅರೆದು ವೀಳೆಯದೆಲೆಗೆ ಸುಣ್ಣದಂತೆ ಹಚ್ಚಿ ಲವಂಗ, ಏಲಕ್ಕಿ, ಕಾಚು ಮತ್ತು ಅಡಿಕೆಪುಡಿಯೊಂದಿಗೆ ಸೇರಿಸಿ ತಯಾರಿಸಲಾಗುವ ಔಷಧಿ ಚಳಿಜ್ವರಕ್ಕೆ ಪರಿಣಾಮಕಾರಿ ಮದ್ದು ಎಂದು ಹೆಸರಾಗಿದೆ. ಬೀಜಗಳನ್ನು ನೀರಿನಲ್ಲಿ ನೆನೆಯಿಟ್ಟು ವೃದುಗೊಳಿಸಿ ಒಂಟೆ, ಆಡು, ಕುರಿ ಮತ್ತು ದನಗಳಿಗೆ ಆಹಾರವಾಗಿ ಬಳಸುವುದುಂಟು. ಬೀಜಗಳಿಂದ ಎಣ್ಣೆಯನ್ನೂ ಪಡೆಯಬಹುದು. ಇರಾಕಿನಲ್ಲಿ ಈ ಎಣ್ಣೆಯನ್ನು ಸಾಬೂನು-ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಆಕ್ಸಾಲಿಕ್ ಆಮ್ಲದ ಉತ್ಪಾದನೆಗೆ ಬಿಜಗಳನ್ನು ಕಚ್ಚಾವಸ್ತುವಾಗಿ ಬಳಸುವುದುಂಟು.
ಈಚಲು ಮರದಿಂದ ತೆಗೆದಂತೆ ಖರ್ಜೂರದ ಮರದಿಂದಲೂ ರಸವನ್ನು ಇಳಿಸುವುದುಂಟು. ಅದೇ ತಾನೆ ತೆಗೆದು ರಸ ಸಿಹಿಯಾದ್ದೂ ಮಧುರ ವಾಸನೆಯುಳ್ಳದ್ದೂ ಆಗಿರುತ್ತದೆ. ಇದು ತಂಪುಕಾರಕ ಹಾಗೂ ವಿರೇಚಕ ಎನ್ನಲಾಗಿದೆ. ಇದರಲ್ಲಿ ಸುಮಾರು 10% ಸೂಕ್ರೋಸ್ ಇದೆಯಾಗಿ ಇದರಿಂದ ಬೆಲ್ಲ ಹಾಗೂ ಸಕ್ಕರೆಯನ್ನು ತಯಾರಿಸಬಹುದು. ರಸವನ್ನು ಬಿಸಿಲಿನಲ್ಲಿ ಹಾಗೆಯೆ ಬಿಟ್ಟಲ್ಲಿ ಹುಳಿತು ಹೆಂಡವಾಗುತ್ತದೆ.
ಖರ್ಜೂರದ ಮರಕ್ಕೆ ಇನ್ನಿತರ ಉಪಯೋಗಗಳೂ ಉಂಟು. ಚಾಪೆ, ಬೀಸಣಿಗೆ, ಬುಟ್ಟಿ, ಹಗ್ಗ ಮುಂತಾದವನ್ನು ತಯಾರಿಸುವುದಕ್ಕೂ ಚಾವಣಿಗಳಿಗೆ ಹೊದಿಸುವುದಕ್ಕೂ ಇದರ ಗರಿಗಳನ್ನು ಬಳಸುತ್ತಾರೆ. ಗರಿಗಳ ತೊಟ್ಟಿನಿಂದ ಉತ್ತಮ ಬಗೆಯ ಕೈಬೆತ್ತ ಮತ್ತು ಪೆಟ್ಟಿಗೆಗಳನ್ನು ಮಾಡಬಹುದು. ತೊಟ್ಟಿನಿಂದ ಪಡೆಯಲಾಗುವ ನಾರನ್ನು ಕಡಲೆಕಾಯಿ ಸಿಪ್ಪೆಯೊಂದಿಗೆ ಸೇರಿಸಿ ವಿದ್ಯುದವಾಹಕ ಹಲಗೆಗಳನ್ನು ತಯಾರಿಸುತ್ತಾರೆ. ಮರದ ಎಳೆಯ ತುದಿಮೊಗ್ಗನ್ನು ತರಕಾರಿಯಂತೆ ಬಳಸುವ ಕ್ರಮ ಅರಬ್ಬೀಯರಲ್ಲಿದೆ. ಹೂಗೊಂಚಲಿನ ಕವಚಗಳನ್ನು ಆಸವೀಕರಣಗೊಳಿಸಿ ತಯಾರಿಸಲಾಗುವ ತಾರ ಎನ್ನುವ ಹೆಸರಿನ ರಸ ಬಹಳ ಸುವಾಸನೆಯುಳ್ಳದ್ದಾಗಿದೆ. ಇದನ್ನು ಷರಬತ್ತುಗಳಲ್ಲಿ ಉಪಯೋಗಿಸುತ್ತಾರೆ. ಮರದಿಂದ ದೊರೆಯುವ ಚೌಬೀನೆ ಹಗುರವಾದ್ದೂ ಸಾಕಷ್ಟು ಬಾಳಿಕೆ ಬರುವಂಥಾದ್ದೂ ಆಗಿದೆ. ಮನೆ ಕಟ್ಟುವುದಕ್ಕೆ, ಸೇತುವೆ ನಿರ್ಮಾಣಕ್ಕೆ, ನೀರು ಹಾಯಿಸುವ ಕೊಳಾಯಿಗಳ ತಯಾರಿಕೆಯಲ್ಲಿ ಚೌಬೀನೆ ಉಪಯೋಗಕ್ಕೆ ಬರುತ್ತದೆ. ಗರಿಗಳನ್ನು ಹಾಗೂ ಹೂಗೊಂಚಲುಗಳನ್ನು ಕತ್ತರಿಸಿದಾಗ ಉಳಿಯುವ ಅನಪೇಕ್ಷಿತ ತುಂಡುಗಳನ್ನು ಗೊಬ್ಬರವಾಗಿ ಬಳಸುವುದಿದೆ. ಬೇರಾವ ಕೆಲಸಕ್ಕೂ ಬಾರದ ಭಾಗವನ್ನು ಇಂಧನವಾಗಿ ಉಪಯೋಗಿಸುವುದುಂಟು.