ವಿಷಯಕ್ಕೆ ಹೋಗು

ಕುಸ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಸ್ತಿಯು ಆಯುಧಗಳನ್ನು ಉಪಯೋಗಿಸದೆ ಒಬ್ಬನೊಡನೊಬ್ಬ ಸೆಣಸಿ ಗೆಲ್ಲುವ ಒಂದು ಪಂದ್ಯಾಟದ ಬಗೆ. ಇದರಲ್ಲಿ ವ್ಯಕ್ತಿಯ ಶಕ್ತಿ ಹಾಗೂ ಯುಕ್ತಿಗಳು ಪ್ರದರ್ಶಿತವಾಗುತ್ತದೆ. ಭಾರತದಲ್ಲಿ ಕುಸ್ತಿ ಅದರ ಲಿಖಿತ ಚರಿತ್ರೆಗಿಂತ ಪುರಾತನವಾದುದ್ದು. ಇಲ್ಲಿನ ಪುರಾಣಕಥೆಗಳಲ್ಲಿ ಅನೇಕ ಕುಸ್ತಿ ಪ್ರಸಂಗಗಳಿವೆ. ರಾಮಾಯಣ ಮತ್ತು ಮಹಾಭಾರತ ಕಾವ್ಯಗಳೂ ಕುಸ್ತಿಪಟಗಳ ಶ್ಲಾಘನೀಯವಾದ ಸಾಹಸ ಕಾರ್ಯಗಳಿಂದ ತುಂಬಿವೆ. ಹನುಮಂತ, ವಾಲಿ, ಸುಗ್ರೀವ ಇವರು ಯಾರಿಗೂ ಸಗ್ಗದಿರುವ ಕುಸ್ತಿಪಟುಗಳಾಗಿದ್ದರು. ಭೀಮ ಮತ್ತು ಜರಾಸಂಧ ಇವರೀರ್ವರಿಗೂ ನಡೆದ ಕುಸ್ತಿಯೂ ಸ್ಮರಣೀಯವಾದದ್ದು. ಹನುಮಂತ ಭಾರತದಲ್ಲಿನ ಕುಸ್ತಿ ಪಟುಗಳ ಆರಾಧ್ಯದೈವವಾಗಿದ್ದಾನೆ. ಕುಸ್ತಿಗೆ ದ್ವಂದ್ವಯುದ್ಧ, ಮುಷ್ಟಿಯುದ್ಧ ಎಂಬ ಹೆಸರುಗಳೂ ಬಳಕೆಯಲ್ಲಿದ್ದುವು.

ಭಾರತದಲ್ಲಿ ಕುಸ್ತಿ ಕಲೆ ಪುರುಷ ಕ್ರೀಡೆಗಳಲ್ಲೆಲ್ಲ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ. ಕುಸ್ತಿ ಶರೀರದ ಎಲ್ಲ ಭಾಗಗಳಿಗೂ ವ್ಯಾಯಾಮ ಒದಗಿಸಿ, ದೇಹವನ್ನು ಸಮಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿ, ಮಾಂಸಖಂಡಗಳನ್ನು ತುಂಬುವಂತೆಮಾಡಿ, ದೇಹವನ್ನು ನೋಡಲು ಅಂದವಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ ಧೈರ್ಯ, ಮುನ್ನುಗ್ಗುವ ಶಕ್ತಿಗಳನ್ನು ಕೊಟ್ಟು ಆತ್ಮವಿಶಾಸವನ್ನು ಬಲಪಡಿಸುತ್ತದೆ. ಇದು ಗುರುಭಕ್ತಿಯನ್ನು ಹೆಚ್ಚಿಸುವ ಕ್ರೀಡೆ. ಬೇರೆ ಯಾವ ಕ್ರೀಡೆಯಲ್ಲಿಯೂ ಇಂಥ ಗುರುಭಕ್ತಿ ಕಂಡುಬರುವುದಿಲ್ಲ. ಶಿಷ್ಯನಾದವ ಗುರುವಿನ ಕಾಲಿಗೆ ಬೀಳುವ ಪದ್ಧತಿ ಇಂದಿಗೂ ಗರಡಿಗಳಲ್ಲಿ ರೂಢಿಯಲ್ಲಿದೆ.

ಕುಸ್ತಿಯಲ್ಲಿ ಒಂದೊಂದು ಸಲಕ್ಕೆ ಇಬ್ಬಿಬ್ಬರಂತೆ ಜಟ್ಟಿಗಳು ಅಖಾಡಕ್ಕಿಳಿದು ಹೋರಾಡುತ್ತಾರೆ. ನಿಗದಿಯಾದ ಕಾಲಮಿತಿಯಲ್ಲಿ ಒಬ್ಬ ಇನ್ನೊಬ್ಬನನ್ನು ಚಿತ್ತು ಮಾಡಬೇಕು; ಅಂದರೆ ಸೋಲಿಸಬೇಕು. ಸೋತವನು ನೆಲಕ್ಕುರುಳಿದರೆ ಸಾಲದು. ಆತನ ಎರಡು ಭುಜಗಳೂ ಏಕಕಾಲದಲ್ಲಿ ಮಣ್ಣಿಗೆ ತಗಲುವಂತೆ ಆತ ಅಂಗಾತವಾಗಿ ಬೀಳಬೇಕು. ಹೀಗೆ ಕುಸ್ತಿಯ ಸೋಲು ಗೆಲುವುಗಳು ನಿರ್ಧಾರವಾಗುತ್ತವೆ.

ಕುಸ್ತಿ ವೈಯಕ್ತಿಕ ಕ್ರೀಡೆಗಳಲ್ಲಿ ಅತ್ಯುತ್ತಮವಾದುದು. ಓಡುವ ಪಂದ್ಯದಲ್ಲಿ ಸ್ಪರ್ಧಿ ತನ್ನ ಶಕ್ತಿ, ಓಡುವ ರೀತಿ, ತಾನು ಅದುವರೆಗೆ ಮಾಡಿದ ಅಭ್ಯಾಸ ಇವುಗಳ ಆಧಾರದ ಮೇಲೆ ತನ್ನ ಪಾಡಿಗೆ ತಾನು, ಕೈಲಾದಷ್ಟು ಪ್ರಯತ್ನ ಮಾಡಿ, ಓಡಿ ಜಯಗಳಿಸುತ್ರಾನೆ. ಕುಸ್ತಿಮಾಡುವವ ತನ್ನ ವೈಯಕ್ತಿಕಶಕ್ತಿ, ತನ್ನ ಕುಸ್ತಿ ಮಾಡುವ ರೀತಿ, ಬಳಸುವ ಪಟ್ಟುಗಳು, ಮಾಡಿದ ಸಾಧನೆ-ಇವುಗಳ ಆಧಾರದ ಮೇಲೆ ಜಯಗಳಿಸುತ್ತಾನಾದರೂ ಇವೆಲ್ಲವುಗಳ ಜೊತೆಗೆ ತನ್ನ ಎದುರಾಳಿಯ ಶಕ್ತಿಯನ್ನು ಉಪಯೋಗಿಸಿಕೊಂಡು ಹಾಕಿದ ಪಟ್ಟೇ ಅವನಿಗೆ ಮುಳುವಾಗುವಂತೆ ತೋಡು ಮಾಡಿ, ಎದುರಾಳಿಯನ್ನು ಕೆಡವಿ ಜಯಗೊಳಿಸುತ್ತಾನೆ.

ಸಾಧನೆಯ ಅವಶ್ಯಕತೆ: ಕುಸ್ತಿ ಮಾಡುವವನು ನಾಲ್ಕು ಮುಖ್ಯವಾದ ಅಂಶಗಳನ್ನು ಗಮನದಲ್ಲಿಡಬೇಕು: 1 ಶಕ್ತಿ, 2 ದಮ್ಮುಕಸ್ತು (ದಮ್ಮು ಮುರಿಯುವುದು), 3 ಪಟ್ಟುಗಳು ಅಥವಾ ಡಾವುಗಳು, 4 ಚತುರತೆ. ಈ ನಾಲ್ಕು ಅಂಶಗಳಲ್ಲಿ ಒಂದಿಲ್ಲದೆ ಹೋದರೂ ಜಯಗಳಿಸುವುದು ಕಷ್ಟವಾಗುತ್ತದೆ. ಕುಸ್ತಿಮಾಡುವವನಿಗೆ ದಮ್ಮುಕಸ್ತು ತುಂಬಾ ಅಗತ್ಯವಾದದ್ದು. ದಮ್ಮನ್ನು ಮುರಿಯಲು ಅಂಗಸಾಧನೆ ಮಾಡಬೇಕಾಗುತ್ತದೆ. ಎಷ್ಟು ಹೊತ್ತು ವ್ಯಾಯಾಮ ಮಾಡಿದರೂ ಏದುಸಿರು ಬರದಂತೆ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಖಾಡಕ್ಕಿಳಿದ ಒಂದೆರಡು ನಿಮಿಷಗಳಲ್ಲೆ ವ್ಯಕ್ತಿ ಸುಸ್ತು ಬೀಳಬೇಕಾಗುತ್ತದೆ. ಮೈಸೂರು ದೇಶದ ಅರಸರಾದ ಕಂಠೀರವ ನರಸಿಂಹರಾಜ ಒಡೆಯರನ್ನು ಇಲ್ಲಿ ನೆನೆಯಬಹುದು. ಅವರು ಕುಸ್ತಿ ಪಟುಗಳಿಗೆ ಆಶ್ರಯದಾತರಾಗಿದ್ದುದಲ್ಲದೆ. ಸ್ವಯಂ ಕುಸ್ತಿ ಪಟುಗಳಾಗಿದ್ದು, ದಮ್ಮು ಮುರಿಯಲು ಪ್ರತಿದಿವಸ ಬೆಳಗಿನಜಾವ ಹೆಗಲಮೇಲೆ ಎಮ್ಮೆಕರುವನ್ನು ಹೊತ್ತುಕೊಂಡು ಚಾಮುಂಡಿ ಬೆಟ್ಟವನ್ನು ಹತ್ತಿ ಇಳಿಯುತ್ತಿದ್ದರಂತೆ. ಕುಸ್ತಿಯನ್ನು ಮಾಡಲು ಮಟ್ಟಿಯನ್ನು ಪ್ರವೇಶಿಸುವ ಮೊದಲು, ಹೊಸಬನಾದವ ಸಾಕಷ್ಟು ಅಂಗಸಾಧನೆ ಮಾಡಿದ್ದು ದಮ್ಮು ಮುರಿದು, ತನ್ನ ದೇಹ ಸಾಮಥ್ರ್ಯ ಹೆಚ್ಚಿಸಿಕೊಂಡಿರಬೇಕು. ಅನಂತರವೇ ಕುಸ್ತಿ ಮಾಡಲು ಮಟ್ಟಿಯ ಪ್ರವೇಶ ಮಾಡಬೇಕು. ಇದಕ್ಕಾಗಿ ಬಸ್ಕಿಹೊಡೆಯುವುದು, ದಂಡೆ ಹೊಡಿಯುವುದು, ಓಡುವುದು, ಮೆಟ್ಟಲು ಹತ್ತಿ ಇಳಿಯುವುದು, ಭಾರವಾದ ವಸ್ತುವನ್ನು ಕೈಯಿಂದ ತಿರುಗಿಸುವುದು. ಮಟ್ಟಿ ಕುರಾಯಿಸುವುದು, ಕುತ್ತಿಗೆಗೆ ಬಲಬರಲು ಕತ್ತು ತಿರುಗಿಸುವುದು, ಏಟು ತಿನ್ನುವುದು, ಮತ್ತು ತೊಡೆಗಳಿಗೆ ಶಕ್ತಿ ಮತ್ತು ಬಿಗಿ ಬರಲು ಕಂಬ ಕಟ್ಟುವುದು ಮುಂತಾದ ಅಂಗಸಾಧನೆಗಳನ್ನು ಅಳವಡಿಸಲಾಗಿದೆ. ಎಲ್ಲ ಕುಸ್ತಿ ಪಟುಗಳೂ ಅಭ್ಯಾಸ ಕಾಲದಲ್ಲಿ ಮೈಗೆ ಸಾಸಿವೆ ಎಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ಮೈಉಜ್ಜಿಕೊಂಡು ಸಾಧನೆ ಮಾಡುತ್ತಾರೆ. ಇದು ದೇಹದ ಮಾಂಸಖಂಡಗಳನ್ನು ಸಡಿಲಗೊಳಿಸಿ, ಕುಸ್ತಿ ಮಾಡಲು ಅನುಕೂಲವನ್ನುಂಟುಮಾಡುತ್ತದಲ್ಲದೆ, ಧರ್ಮವನ್ನು ಮೃದುಗೊಳಿಸಿ, ಕಾಂತಿಯುಕ್ತವನ್ನಾಗಿಸುತ್ತದೆ.

ಮಟ್ಟಿಯ ತಯಾರಿ: ಪ್ರತಿಯೊಂದು ಗರಡಿ ಮನೆಯಲ್ಲಿನ ಮಟ್ಟಿಯೂ ಕೆಂಪುಮಣ್ಣಿನಿಂದ ಕೂಡಿತುತ್ತದೆ. ಇದರ ಜೊತೆಗೆ ಕುಂಕುಮ ಕೇಸರಿಗಳನ್ನೂ ಇನ್ನೂ ಅನೇಕ ಔಷಧ ವಸ್ತುಗಳನ್ನೂ ಹಾಕಿ ಆರೋಗ್ಯದಾಯಕವನ್ನಾಗಿ ಮಾಡಿರುತ್ತಾರೆ. ಅಲ್ಲದೆ ಈ ಮಣ್ಣು ಪೂತಿನಾಶಕವಾಗಿರುತ್ತದೆ. (ಆಂಟಿಸೆಪ್ಟಿಕ್). ಕುಸ್ತಿ ಮಾಡುವಾಗ, ಯಾವ ಪೈಲ್ವಾನನಿಗಾದರೂ ಕೈ, ಕಾಲು, ಮಂಡಿ ಗಾಯವಾಗಿರುವ ಸ್ಥಳಕ್ಕೆ ಮೆತ್ತುತ್ತಾನೆ. ಕುಸ್ತಿಮಾಡಿದ ಮೇಲೆ ಕುಸ್ತಿಪಟು ಮಟ್ಟಿಯನ್ನು ಆಳವಾಗಿ ತೋಡಿ, ಅದರೊಳಕ್ಕೆ ಮಲಗಿ ಕತ್ತಿನವರೆಗೆ ಮಣ್ಣುಮುಚ್ಚಿಕೊಂಡು ಮುಖಭಾಗವನ್ನು ಮಾತ್ರ ಹೊರಗೆ ಬಿಟ್ಟು ಸ್ವಲ್ಪ ಕಾಲ ಕಳೆಯುತ್ತಾನೆ. ಹೀಗೆ ಮಲಗುವುದರಿಂದ ಅವನ ದೇಹದ ಕಾವು ಕಡಿಮೆಯಾಗುತ್ತದೆ. ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ. ಮಣ್ಣು ಸ್ನಾನದ (ಮಡ್ ಬಾತ್) ಎಲ್ಲ ಉಪಯೋಗಗಳೂ ಇದರಿಂದ ಅವನಿಗೆ ದೊರೆಯುತ್ತವೆ.

ಆಹಾರ: ಕುಸ್ತಿ ಮಾಡುವವನಿಗೆ ಸಾಧನೆ ಮಾಡುವುದು ಎಷ್ಟು ಅವಶ್ಯಕವೋ ಉಚಿತ ಆಹಾರ ಸೇವನೆಯೂ ಅಷ್ಟೇ ಅವಶ್ಯಕ. ಶ್ರಮಪಟ್ಟು ಮಾಡುವ ಸಾಧನೆಗೆ ಸರಿಯಾದ ಪುಷ್ಟಿಕರವಾದ ಆಹಾರವನ್ನು ದೊರಕಿಸಿಕೊಳ್ಳದಿದ್ದರೆ, ದೇಹದ ಬೆಳೆವಣಿಗೆಯಾಗುವುದಿಲ್ಲ. ಶಕ್ತಿ ಕುಂದುತ್ತದೆ. ಕುಸ್ತಿಪಟುವಿಗಂತೂ ಪುಷ್ಟಿದಾಯಕವಾದ ಆಹಾರ ಬೇಕೇ ಬೇಕು. ಸಸ್ಯಾಹಾರಿಯಾದವರು ಉದ್ದಿನ ಅಂಶವಿರುವ ಆಹಾರ, ಹಾಲು, ಬಾದಮಿ ಹಣ್ಣು, ಬೆಣ್ಣೆ, ಮುಂತಾದುವನ್ನು ತೆಗೆದುಕೊಳ್ಳಬೇಕು. ಮಾಂಸಹಾರಿಗಳು ಮಾಂಸ, ಮೊಟ್ಟೆ, ಮೀನು, ಹಣ್ಣು, ಹಾಲು ಮುಂತಾದವನ್ನು ತೆಗೆದುಕೊಳ್ಳಬೇಕು.

ಇವುಗಳ ಜೊತೆಗೆ ಗರಡಿಮನೆಗಳಲ್ಲಿ ಬಾದಾಮಿ, ಗಸಗಸೆ, ಕಲ್ಲುಸಕ್ಕರೆ, ಮೆಣಸಿನಕಾಳು, ಬಡೇಸೋಪು ಮುಂತಾದುವನ್ನು ಅರೆದು, ಹಾಲಿನಲ್ಲಿ ಸೇರಿಸಿ ತಂಡ ಎಂಬ ಪಾನೀಯವನ್ನು ಸಿದ್ಧಗೊಳಿಸುತ್ತಾರೆ. ಇದು ಪೈಲ್ವಾನರುಗಳಿಗೆ ತುಂಬ ಅಗತ್ಯವಾದ ಪಾನೀಯ.

ಸ್ಪರ್ಧೆಗಳು: ಭಾರತದಲ್ಲಿ ರಾಷ್ಟೀಯ ಮಟ್ಟದಲ್ಲಿ ವರ್ಷಕ್ಕೆ ಒಂದು ಸಾರಿ ಹಿಂದ್ ಕೇಸರಿ ಎಂಬ ಬಿರುದಿಗೋಸ್ಕರ ಹಿಂದ್‍ಕೇಸರಿ ಕುಸ್ತಿ ಸ್ಪರ್ಧೆಯನ್ನು ನಡೆಸುತ್ತಾರೆ. ಭಾರತದ ಎಲ್ಲ ಭಾಗಗಳಿಂದಲೂ ಪೈಲ್ವಾನರು ಇದರಲ್ಲಿ ಭಾಗವಹಿಸುತ್ತಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕುಸ್ತಿ ಸ್ಪರ್ಧೆಗಳು ಹೀಗಿವೆ: 1. ಒಲಿಂಪಿಕ್ ಕುಸ್ತಿ ಸ್ಪರ್ಧೆ 2. ಏಷ್ಯನ್ ಗೇಮ್ಸ್ ಕುಸ್ತಿ ಸ್ಪರ್ಧೆ 3. ಕಾಮನ್‍ವೆಲ್ತ್ ಕುಸ್ತಿ ಸ್ಪರ್ಧೆ ಮತ್ತು 4. ವಿಶ್ವಪ್ರಶಸ್ತಿ ಕುಸ್ತಿ ಸ್ಪರ್ಧೆ. ಇವುಗಳಲ್ಲಿ ವಿಶ್ವಪ್ರಶಸ್ತಿ ಕುಸ್ತಿ ಸ್ಪರ್ಧೆ ಕುಸ್ತಿಗೋಸ್ಕರವೇ ನಡೆಯುವಂಥದು. ಪ್ರತಿವರ್ಷವೂ ನಡೆಯುತ್ತದೆ.

ಕುಸ್ತಿಯ ಅಖಾಡ: ಹಿಂದೆ ಕೆಂಪು ಮಣ್ಣಿನಿಂದ ಚಚ್ಚೌಕ ಕಣವನ್ನು ನಿರ್ಮಿಸಿ ಅದಕ್ಕೆ ಕುಸ್ತಿಯ ಅಖಾಡವೆಂದು ಕರೆಯುತ್ತಿದ್ದರು. ಈ ಅಖಾಡದಲ್ಲಿ ನಿಂತು ಪೈಲ್ವಾನರು ಕಾದಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಸ್ತಿಮಾಡಲು ಮೆತ್ತೆಗಳಿಂದ ಅಖಾಡ ನಿರ್ಮಿಸುತ್ತಾರೆ. ಪ್ರತಿಯೊಂದು ಮೆತ್ತೆಯ ಉದ್ದ 2 ಮೀಟರ್, ಅಗಲ 1 ಮೀಟರ್, ದಪ್ಪ 10 ಸೆಂಟಿಮೀಟರ್ ಅಥವಾ 4 ಅಂಗುಲ. ಇತ್ತೀಚಿಗೆ ಈ ಮೆತ್ತೆಗಳನ್ನು ಫೋಮ್ ರಬ್ಬರಿನಿಂದ ನಿರ್ಮಿಸಲಾಗುತ್ತಿದೆ. ಇಂಥ ಮೆತ್ತೆಗಳನ್ನು ಉಪಯೋಗಿಸಿಕೊಂಡು 6 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲವಿರುವ ಚಚ್ಚೌಕ ಕಣವನ್ನು ನಿರ್ಮಿಸುತ್ತಾರೆ.

ರಾಷ್ಟ್ರೀಯ ಮಟ್ಟದಲ್ಲಿ ಅಖಾಡ ನಿರ್ಮಿಸುವಾಗ ಮೆತ್ತೆಗಳನ್ನು ಉಪಯೋಗಿಸಿಕೊಂಡು 6 ಮೀಟರ್ ಉದ್ದ ಹಾಗೂ 6 ಮೀಟರ್ ಅಗಲವಿರುವ ಚಚ್ಚೌಕಕಣವೊಂದನ್ನು ಏರ್ಪಡಿಸುತ್ತಾರೆ. ಈ ಕಣದ ಸುತ್ತಲೂ 2ಮೀಟರ್ ಉದ್ದ, 2 ಮೀಟರ್ ಅಗಲದಲ್ಲಿ ಇದೇ ರೀತಿಯ ಮೆತ್ತೆಗಳನ್ನು ಹಾಕಿರುತ್ತಾರೆ. ಈ ಚಚ್ಚೌಕ ಕಣದ ಮೇಲ್ಭಾಗವನ್ನು ಮೆದುವಾದ ಹೊದಿಕೆಯಿಂದ ಮುಚ್ಚಿರುತ್ತಾರೆ. ಈರೀತಿಯ ಅಖಾಡವನ್ನು ಎತ್ತರವಾದ ವೇದಿಕೆಯೊಂದರ ಮೇಲೆ ಇಟ್ಟಿರುತ್ತಾರಾಗಿ ಪ್ರೇಕ್ಷಕರು ತೊಂದರೆ ಇಲ್ಲದೆ ಪಂದ್ಯವನ್ನು ವೀಕ್ಷಿಸಬಹುದು. ಮುಷ್ಟಿಯುದ್ಧದಲ್ಲಿರುವಂತೆ (ಬಾಕ್ಸಿಂಗ್) ಈ ಅಖಾಡದ ಸುತ್ತ ಕಂಬಗಳನ್ನು ನೆಟ್ಟು ಸುತ್ತಲೂ ಹಗ್ಗಗಳಿಂದ ಬಿಗಿದು ಕಟ್ಟಿರುವುದಿಲ್ಲ.

ಅಂತರರಾಷ್ಟ್ರೀಯ ಮಟ್ಟದಲ್ಲಿನ ಅಖಾಡವನ್ನು ರಾಷ್ಟ್ರೀಯ ಮಟ್ಟದ ರೀತಿಯಲ್ಲಿಯೇ ನಿರ್ಮಿಸುತ್ತಾರೆ. ಇರುವ ಒಂದೇ ಒಂದು ವ್ಯತ್ಯಾಸ ಅಖಾಡದ ಉದ್ದ ಮತ್ತು ಅಗಲಕ್ಕೆ ಸಂಬಂಧಿಸಿದ್ದು. ಈ ಅಖಾಡದ ಉದ್ದ 8 ಮೀಟರ್ ಮತ್ತು ಅಗಲ 8 ಮೀಟರ್ ಇದ್ದು ಸುತ್ತಲೂ 2 ಮೀಟರ್ ಉದ್ದ ಮತ್ತು 2 ಮೀಟರ್ ಅಗಲಕ್ಕೆ ಮೆತ್ತೆಗಳನ್ನು ಹಾಕಿರುತ್ತಾರೆ.

ತೂಕ ವಿಂಗಡಣೆಗಳು: ಕುಸ್ತಿಗಳೆಲ್ಲವೂ ಜಟ್ಟಿಗಳ ತೂಕದ ಆಧಾರದ ಮೇಲೆಯೇ ನಡೆಯುತ್ತವೆ. ಪೈಲ್ವಾನರನ್ನು ತೂಕದ ಆಧಾರದ ಮೇಲೆ ವಿಂಗಡಿಸಿ ಜೋಡಿ ಮಾಡಲಾಗುತ್ತದೆ. ಈ ತೂಕ ವಿಂಗಡಣೆಗಳು ಹೀಗಿರುತ್ತವೆ.

ಪಿನ್ ವೇಟ್ 48 ಕೆಜಿಗಳ ವರೆಗೆ
ಫ್ಲೈ ವೇಟ್ 48_52 "
ಬ್ಯಾಂಟಮ್ ವೇಟ್ 52_57 "
ಫೆದರ್ ವೇಟ್ 57_62 "
ಲೈಟ್ ವೇಟ್ 62_68 "
ವೆಲ್ಟರ್ ವೇಟ್ 68_74 ಕೆಜಿಗಳ ವರೆಗೆ
ಮಿಡಲ್ ವೇಟ್ 74_82 "
ಲೈಟ್ ಹೆವೀ ವೇಟ್ 82_90 "
ಹೆವಿ ವೇಟ್ 100 ಕೆಜಿಗಳ ಮೇಲೆ

ನಿಲ್ಲುವ ರೀತಿ ಮತ್ತು ಪಟ್ಟುಗಳು:ಕುಸ್ತಿಮಾಡುವಾಗ ನಿಂತುಕೊಳ್ಳುವ ರೀತಿ ಮತ್ತು ಹಾಕುವ ಪಟ್ಟುಗಳು ಗಮನೀಯವಾದ ಅಂಶಗಳು. ಜಟ್ಟಿ ನಿಲ್ಲುವ ರೀತಿಯಿಂದಲೇ, ಅವನು ಒಳ್ಳೆಯ ಕುಸ್ತಿಯ ಪಟು ಎಂದು ನಿರ್ಧರಿಸಬಹುದು. ಕುಸ್ತಿಯಲ್ಲಿ ನಿಲ್ಲುವ ರೀತಿ ಹಲವು ಬಗೆಯದು. ಇವುಗಳಲ್ಲೆಲ್ಲ. ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ರೀತಿಯೆಂದರೆ ಪವಿತ್ರರೀತಿ (ಕ್ಲೋಸ್ ಸ್ಟಾನ್ಸ್). ಈ ರೀತಿಯಲ್ಲಿ ಜಟ್ಟಿ, ಒಂದು ಕಾಲು ಹಿಂದೆ ಹಾಕಿ, ತನ್ನ ಶರೀರದ ಭಾರವನ್ನು ಕಾಲುಗಳ ಮೇಲೆ ಸರಿಸಮನಾಗಿ ಬೀಳುವಂತೆ ಮಾಡಿಕೊಂಡು ನಿಲ್ಲುತ್ತಾನೆ. ಹಾಗೆಯೆ ಜಟ್ಟಿಗೆ ಪಟ್ಟುಗಳ ಅಥವಾ ಡಾವುಗಳ ಆವಶ್ಯಕತೆ ಇರುತ್ತದೆ. ಈ ಡಾವುಗಳಲ್ಲಿ ಹಲವಾರು ವಿಧಗಳಿವೆ.

ಎದುರು ಬದುರು ನಿಂತಾಗ ಮಾಡುವ ಡಾವುಗಳು: ಎದುರು ಬದುರು ನಿಂತು ಕುಸ್ತಿ ಮಾಡುವಾಗ, ಜಟ್ಟಿ ಡಾಕ್ ಹೊಡೆಯುವುದು, ಏಕಲಾಂಗ್ ಹೊಡೆಯುವುದು, ದೋಬಿ ಶಾಟ್ ಹೊಡೆಯುವುದು, ಸಖೀ ಹೊಡೆಯುವುದು ಮುಂತಾದ ಡಾವುಗಳನ್ನು ಮಾಡುತ್ತಾನೆ. ಹಾಗೆಯೇ ತನ್ನ ಎದುರಾಳಿಯ ಹಿಂದೆ ಬಂದು, ಸೊಂಟಹಿಡಿದು, ಉಖ್ಖಾಡು ಎತ್ತುವುದು ಮುಂತಾದ ಡಾವುಗಳನ್ನು ಮಾಡುತ್ತಾನೆ. ಎದುರಾಳಿಯೂ ತನ್ನ ಸೊಂಟ ಹಿಡಿದಿರುವ ಜಟ್ಟಿಗೆ, ಒಳಟಾಂಗ ಹೊಡೆಯುವುದು, ಹೊರಟಾಂಗ ಹೊಡೆಯುವುದು ಮುಂತಾದ ಡಾವುಗಳನ್ನು ಮಾಡುತ್ತಾನೆ.

ಕುಳಿತು ಕುಸ್ತಿ ಮಾಡುವ ಡಾವುಗಳು: ಕುಳಿತಿರುವಾಗ ಮೇಲಿರುವ ಜಟ್ಟಿ, ಕೆಳಗಿನ ತನ್ನ ಎದುರಾಳಿಗೆ ಒಂಟಿಗಾಲು ಸವಾರಿ, ಜೋಡಿಗಾಲು ಸವಾರಿ, ಮತ್ತು ಸಿವುಡುಕಾಲು ಸವಾರಿ (ಕ್ರೌಚ್ ಲಿಫ್ಟ್) ಮತ್ತು ನೆಲ್ಸನ್ ಮುರಿತ ಇತ್ಯಾದಿ ಡಾವುಗಳನ್ನು ಮಾಡುತ್ತಾನೆ. ಸಿವುಡುಕಾಲು ಸವಾರಿಗೆ ಫ್ರೀಸ್ಟೈಲ್ ಕುಸ್ತಿಯಲ್ಲಿ ಅವಕಾಶವಿಲ್ಲ. ಹಾಗೆಯೇ ಕೆಳಗೆ ಕುಳಿತಿರುವ ಜಟ್ಟಿ ತನ್ನ ಮೇಲಿರುವ ಜಟ್ಟಿಗೆ ಬಗಲಿ ಹೊಡೆಯುವುದು, ಗದ್ದಾಲೋಡ್ (ಒಂದು ಕೈ, ಒಂದು ಕಾಲು ಹಿಡಿದು ಮೂಟೆಯಂತೆ ಹಿಂದೆ ಉರುಳಿಸುವುದು), ರೂಮು ತಿರುಗುವುದು ಮುಂತಾದ ಡಾವುಗಳನ್ನು ಮಾಡುತ್ತಾನೆ.

ಸಾಮಾನ್ಯವಾಗಿ ಜಟ್ಟಿಗಳು ಒಬ್ಬರ ಕತ್ತನ್ನು ಮತ್ತೊಬ್ಬರು ಹಿಡಿದು ಕುಸ್ತಿ ಮಾಡುವುದುಂಟಷ್ಟೆ. ಇದಕ್ಕೆ ಕಾರಣವೆಂದರೆ ಇತರ ಅಂಗಾಂಗಗಳಿಗೆ ಹೋಲಿಸಿ ನೋಡಿದಾಗ ಕತ್ತು ದುರ್ಬಲವಾಗಿರುತ್ತದೆ. ಆದ್ದರಿಂದಲೇ ಜಟ್ಟಿಗಳು ತಮ್ಮ ತಮ್ಮ ಎದುರಾಳಿಗಳ ಕತ್ತನ್ನು ಹಿಡಿದು ಕತ್ತನ್ನೇ ಆಧಾರವಾಗಿಟ್ಟುಕೊಂಡು ಹಲವಾರು ಡಾವುಗಳನ್ನು ಮಾಡುತ್ತಾನೆ.

ಭಾರತದಲ್ಲಿ ಕುಸ್ತಿಯ ಡಾವುಗಳನ್ನು ಮುಖ್ಯವಾಗಿ ಮೂರು ಭಾಗ ಮಾಡಬಹುದು: 1 ಭೀಮಸೇನೀ ಡಾವುಗಳು (ಈ ಬಗೆಯಲ್ಲಿ ಶಕ್ತಿಯ ಅಗತ್ಯವಿರುತ್ತದೆ). 2 ಹನುಮಂತೀ ಡಾವುಗಳು (ಈ ಬಗೆಯಲ್ಲಿ ಯುಕ್ತಿಯ ಅಗತ್ಯವಿರುತ್ತದೆ) 3. ಜಾಂಬವಂತೀ ಡಾವುಗಳು (ಈ ಬಗೆಯಲ್ಲಿ ಕೈಕಾಲುಗಳು ಮುರಿಯುವ ಸಂದರ್ಭವಿರುತ್ತದೆ).

ಪುರಾತನ ಕಾಲದಲ್ಲಿ ಕುಸ್ತಿಯಿಂದ ಪ್ರಾಣಹಾನಿಯಾಗುತ್ತಿತ್ತು. ರಾಮಾಯಣ ಮಹಾಭಾರತ ಕಾವ್ಯಗಳಲ್ಲಿ ಕಂಡುಬರುವ ಕುಸ್ತಿಪಂದ್ಯಗಳಲ್ಲಿ ಇಬ್ಬರಲ್ಲಿ ಯಾರಾದರೂ ಒಬ್ಬ ಸಾಯುವುದನ್ನು ಕಾಣಬಹುದು. ದಿನಗಳುರುಳಿದಂತೆ ಕುಸ್ತಿಯ ಉದ್ದೇಶದಲ್ಲಿ ಮಾರ್ಪಾಡಾಯಿತು. ಅಪಾಯ ಉಂಟುಮಾಡುವ ಡಾವುಗಳನ್ನು ನಿಷೇಧಿಸಲಾಯಿತು.

ಬಗೆಗಳು: ಇಂದು ವಾಡಿಕೆಯಲ್ಲಿರುವ ಕುಸ್ತಿಯ ಬಗೆಗಳು ಮೂರು. 1. ಭಾರತೀಯ ಮಾದರಿ, 2. ಸ್ವಚ್ಛಂದ (ಫ್ರೀಸ್ಟೈಲ್ ಅಥವಾ ಕ್ಯಾಚ್ ಆ್ಯಸ್ ಕ್ಯಾಚ್ ಕ್ಯಾನ್) ಮಾದರಿ, 3. ಗ್ರೀಕೋರೋಮನ್ ಮಾದರಿ.

ಭಾರತೀಯ ಮಾದರಿ ಕುಸ್ತಿ: ಈ ಬಗೆಯ ಕುಸ್ತಿ, ಕೆಂಪು ಮಣ್ಣಿನ ಮೇಲೆ ನಡೆಯುವಂಥದಾಗಿದ್ದು, ಭಾರತದ ಎಲ್ಲ ಭಾಗಗಳಲ್ಲಿ ಪ್ರಸಿದ್ಧವಾಗಿದೆ. ಜಟ್ಟಿಗಳು ಬಿಗಿಯಾಗಿ ಕಾಚವನ್ನು ಕಟ್ಟಿ, ಅದರ ಮೇಲ್ಭಾಗದಲ್ಲಿ ಹನುಮಾನ್ ಚಡಿಯನ್ನು ಧರಿಸುತ್ತಾರೆ. ಅನಧಿಕೃತವಾಗಿ ನಡೆಯುವ ಕುಸ್ತಿ ಸ್ಪರ್ಧೆಗಳಲ್ಲಿ ಜಟ್ಟಿಗಳು ಮೈಗೆ ಎಣ್ಣೆ ಬಳಿದುಕೊಂಡು ಅಖಾಡಕ್ಕಿಳಿಯಲು ಅವಕಾಶವಿರುತ್ತದೆ. ಅಖಾಡಕ್ಕಿಳಿಯವ ಜಟ್ಟಿ ಸಾಮಾನ್ಯವಾಗಿ ತನ್ನ ತಲೆಯನ್ನು ನುಣ್ಣನೆ ಬೋಳಿಸಿರುತ್ತಾನಲ್ಲದೆ ಮೈಕೈ ಕಾಲುಗಳ ಮೇಲಿನ ಕೂದಲನ್ನು ತೆಗೆಸಿರುತ್ತಾನೆ. ಅವಿದ್ದಲ್ಲಿ ಎದುರಾಳಿಗೆ ಹಿಡಿತ ಸಿಕ್ಕುತ್ತದೆಂದೇ ಜಟ್ಟಿಗಳ ಭಾವನೆ. ಜಟ್ಟಿಗಳಲ್ಲಿ ಒಬ್ಬ ಕೆಳಕ್ಕುರುಳಿ ಅವನ ಎರಡು ಭುಜಗಳೂ ಒಮ್ಮೆಗೇ ನೆಲಕ್ಕೆ ಸೋಕಿದರೆ ಆತ ಸೋತಂತಾಗುತ್ತದೆ. ಯಾರೊಬ್ಬರೂ ಬೀಳದಿದ್ದರೆ ಪಂದ್ಯ ಸಮ ಆಟದಲ್ಲಿ ಮುಕ್ತಾಯವಾಗುತ್ತದೆ. ಈ ಬಗೆಯ ಕುಸ್ತಿಯಲ್ಲಿ ಹನುಮಾನ್ ಚಡ್ಡಿಯನ್ನು ಹಿಡಿಯಲು ಅವಕಾಶವಿರುತ್ತದೆ. ಭಾರತದ ಜಟ್ಟಿಗಳಲ್ಲಿ ಫ್ರೀಸ್ಟೈಲ್ ಕುಸ್ತಿಕಲೆಯಲ್ಲಿ ಪರಿಣಿತರನ್ನಾಗಿ ಮಾಡಲೋಸುಗ ಭಾರತೀಯ ರೀತಿಯ ಕುಸ್ತಿ ಸಂಘದವರು ನಿಯಮಗಳನ್ನು ಸ್ವಲ್ಪ ಬದಲಿಸಿ, ಕುಸ್ತಿಯ ರೀತಿಯಲ್ಲಿ ಹೊಸತಂತ್ರಗಳನ್ನು ಅಳವಡಿಸಿದ್ದಾರೆ. ಭಾರತೀಯ ಮಾದರಿ ಕುಸ್ತಿಸಂಘದ ನಿಯಮದ ಪ್ರಕಾರ ಲೈಟ್‍ವೇಟ್ ವಿಭಾಗಕ್ಕೆ 10 ನಿಮಿಷಗಳೂ ಮಿಡ್ಲ್‍ವೇಟ್ ವಿಭಾಗಕ್ಕೆ 15 ನಿಮಿಷಗಳೂ ಲೈಟ್ ಹೆವಿ ಮತ್ತು ಹೆವಿವೇಟ್ ವಿಭಾಗಗಳಿಗೆ 20 ನಿಮಿಷಗಳೂ ನಿಗದಿಯಾಗಿದೆ. ಪಂದ್ಯದಲ್ಲಿ ಯಾರೊಬ್ಬರೂ ನಿಗದಿಯಾದ ಕಾಲಾವಧಿಯಲ್ಲಿ ಸೋಲದಿದ್ದರೆ, ಇಡೀ ಕುಸ್ತಿ ನಡೆದ ಕಾಲಾವಧಿಯಲ್ಲಿ, ಯಾವ ಜಟ್ಟಿ ಉತ್ತಮವಾಗಿ ಕಾದಾಡಿದ, ಉತ್ತಮ ಡಾವುಗಳನ್ನು ಮಾಡಿದ, ಮತ್ತು ತನ್ನ ಎದುರಾಳಿ ಮಾಡಿದ ಡಾವುಗಳಿಗೆ ಪ್ರತಿಯಾಗಿ ತೋಡುಮಾಡಿ ಎದುರಾಳಿ ಮಾಡಿದ ಡಾವಿನಿಂದ ತಪ್ಪಿಸಿಕೊಂಡ, ಮುಕ್ಕಾಲುಭಾಗ ಕುಸ್ತಿ ಆಗುವವರೆಗೆ ಎಷ್ಟುಬಾರಿ ಚಿತ್ತುಮಾಡಿದ, ಎದುರಾಳಿಯೊಡ್ಡಿದ್ದ ಇಂಥ ಅಪಾಯದಿಂದ ಹೇಗೆ ಪಾರಾದ-ಮುಂತಾದ ಎಲ್ಲ ಅಂಶಗಳನ್ನೂ ಪರಿಗಣಿಸಿ, ಯಾವ ಜಟ್ಟಿ ಹೆಚ್ಚು ಪಾಯಿಂಟು (ಅಂಕ)ಗಳಿಸಿದ ಎನ್ನುವ ಆಧಾರದ ಮೇಲೆ, ಅಖಾಡದ ಸುತ್ತ ಕುಳಿತಿರುವ ಮೂರು ಜನ ತೀರ್ಪುಗಾರರಿಂದ ಜಟ್ಟಿಯ ಸೋಲು ಗೆಲುವುಗಳು ನಿರ್ಧಾರವಾಗುತ್ತದೆ.

ಭಾರತದಲ್ಲಿನ ಅತ್ಯುತ್ತಮ ಕುಸ್ತಿಪಟುವನ್ನು ಆರಿಸಲು ಹಿಂದ್ ಕೇಸರಿ ಪ್ರಶಸ್ತಿ ಸ್ಪರ್ಧೆಯನ್ನು ಪ್ರತಿವರ್ಷವೂ ನಡೆಸಲಾಗುತ್ತಿದೆಯಷ್ಟೆ. ಈ ಸ್ಪರ್ಧೆಯಲ್ಲಿ ಭಾಗಹಿಸಲು ಭಾರತದ ಎಲ್ಲ ಭಾಗಗಳಿಂದಲೂ ಜಟ್ಟಿಗಳು ಬರುತ್ತಾರೆ. ಈ ಪಂದ್ಯ ಒಂದು ಗಂಟೆಯ ಕಾಲ ನಡೆಯುತ್ತದೆ. ಈ ಕೆಳಗೆ ಕಾಣಿಸಿರುವವರು ಹಿಂದ್ ಕೇಸರಿ ಪ್ರಶಸ್ತಿಗಳಿಸಿದ್ದಾರೆ: 1. ಮಧ್ಯಪ್ರದೇಶದ ರಾಮಚಂದ್ರ, 2. ಮಹಾರಾಷ್ಟದ ಶ್ರೀಪತಿ ಕಂಚಿನಾಳ್ 3. ಪಂಜಾಬಿನ ಕರಣ್‍ಸಿಂಗ್ 4. ಡೆಲ್ಲಿಯ ಚಾಂದ್‍ಗಿ ರಾಮ್, 5. ಮಹಾರಾಷ್ಟದ ಮಾರುತಿ ಮಾನೆ 6. ರಾಜಾಸ್ತಾನದ ಮೆಹರುದ್ದೀನ್.

ಸ್ವಚ್ಛಂದ (ಕ್ಯಾಚ್ ಆ್ಯಸ್ ಕ್ಯಾಚ ಕ್ಯಾನ್ ಅಥವಾ ಫ್ರೀಸ್ಟೈಲ್) ಮಾದರಿ ಕುಸ್ತಿ: ಈ ಮಾದರಿಯ ಕುಸ್ತಿ ಅಂತರರಾಷ್ಟ್ರೀಯ ಕುಸ್ತಿ ಸಂಘದವರಿಂದ ಮತ್ತು ಒಲಿಂಪಿಕ್ಸ್ ಸಮಿತಿಯಿಂದ ಅಂಗೀಕರಿಸಲ್ಪಟ್ಟಿದೆ. ಇಲ್ಲಿ 8 ಅಧಿಕೃತ ತೂಕಗಳ ವಿಭಾಗಗಳಿವೆ. ಮೆತ್ತೆಗಳಿಂದ ನಿರ್ಮಿಸಲಾದ 8 ಮೀಟರ್ ಉದ್ದ ಮತ್ತು 8 ಮೀಟರ್ ಅಗಲವಿರುವ ಅಖಾಡದಲ್ಲಿ ಪಂದ್ಯ ನಡೆಯುತ್ತದೆ. ಜಟ್ಟಿಗಳನ್ನು ತೂಕದ ಆಧಾರದ ಮೇಲೆ ವಿಂಗಡಿಸಿ, ವೈದ್ಯಕೀಯ ಪರೀಕ್ಷೆ ನಡೆಸಿದ ಅನಂತರ ಜೋಡಿ ಮಾಡಲಾಗುತ್ತದೆ. ಈ ಮಾದರಿ ಕುಸ್ತಿಯಲ್ಲಿ ಎಣ್ಣೆ ಅಥವಾ ಜಿಡ್ಡು ಪದಾರ್ಥವನ್ನು ಮೈಗೆ ಸವರಿಕೊಳ್ಳುವ ಹಾಗಿಲ್ಲ. ಅಖಾಡಕ್ಕೆ ಬರುವಾಗ ಹಾ, ಹೂ ಎಂದು ಕೂಗಿಕೊಂಡು ಆರ್ಭಟಿಸುತ್ತ ಬರುವುದನ್ನು ನಿಷೇಧಿಸಿದೆ. ಪ್ರತಿಯೊಂದು ಕುಸ್ತಿಯಲ್ಲಿ ತೂಕದ ವಿಭಾಗಕ್ಕೂ ಕಾಲಾವಕಾಶವನ್ನು ನಿಗದಿಮಾಡಿದೆ. ಅಪಾಯ ಉಂಟುಮಾಡುವ ಉಂಗುರ ಅಥವಾ ಯಾವುದೇ ಬಗೆಯ ಒಡವೆ ವಸ್ತುಗಳನ್ನು ಧರಿಸಿಕೊಂಡು ಅಖಾಡಕ್ಕಿಳಿಯಲಾಗದು. ಜಟ್ಟಿಗಳು ನಿಗದಿಯಾದ ವೇಷವನ್ನು ತೊಟ್ಟು, ಕಾಲಿಗೆ ನಿಗದಿಯಾದ ಶೂಸ್ ಧರಿಸಿ, ಕುಸ್ತಿ ಅಖಾಡಕ್ಕಿಳಿಯಬೇಕು. ಕಾಲಾವಧಿ ಹಾಗೂ ಪಾಯಿಂಟು ಗಳಿಸುವ ಪದ್ಧತಿಯಲ್ಲಿ ಕ್ರಮಕ್ರಮವಾಗಿ ಬದಲಾವಣೆಗಳು ಆದಮೇಲೆ ಈ ಮಾದರಿ ಕುಸ್ತಿ ಈ ಕೆಳಗಿನ ಆಧಾರದ ಮೇಲೆ ನಡೆಯುತ್ತದೆ.

ಕೊಟ್ಟಿರುವ ಕಾಲಾವಧಿಯಾದ 11 ನಿಮಿಷದಲ್ಲಿ ಪ್ರತಿ ಮೂರು ನಿಮಿಷಕ್ಕೂ ಕಾದಾಡುತ್ತಿರುವ ಜಟ್ಟಿಗಳನ್ನು ಬಿಡಿಸಿ ದಣಿವಾರಿಸಿಕೊಳ್ಳಲು ಒಂದು ನಿಮಿಷ ಬಿಡುವು ಮಾಡಿಕೊಡುತ್ತಾರೆ. ಅಂದರೆ ಕುಸ್ತಿ ನಡೆಯುವುದು ಒಟ್ಟು 9 ನಿಮಿಷ ಮಾತ್ರ. ಕುಸ್ತಿ ನಡೆಯುವ ಈ 9 ನಿಮಿಷದಲ್ಲಿ ಜಟ್ಟಿಗಳು ಸುಮ್ಮನೆ ಕುಳಿತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೆ, ಏನಾದರೂ ಡಾವುಗಳನ್ನು ಮಾಡುತ್ತಿರಬೇಕು, ಅಂತೂ ಇಬ್ಬರೂ ಚಟುವಟಿಕೆಯಿಂದ ಕುಸ್ತಿಯಲ್ಲಿ ಭಾಗವಹಿಸಬೇಕು. ಯಾವ ಡಾವುಗಳನ್ನೂ ಮಾಡದೆ, ನಿಂತಲ್ಲಿ ನಿಂತಹಾಗೆಯೇ ಅಥವಾ ಕುಳಿತಲ್ಲಿ ಕುಳಿತ ಹಾಗೆಯೇ ಒಬ್ಬರಿಗೊಬ್ಬರು ಕಚ್ಚಾಡುತ್ತಿದ್ದರೆ, ಒಬ್ಬರಿಗೊಬ್ಬರು ರೆಫರಿ ಎಚ್ಚರಿಕೆ ನೀಡುತ್ತಾನೆ. ಎಚ್ಚರಿಕೆ ನೀಡಿದರೂ ಅದಕ್ಕೆ ಕಿವಿಗೊಡದೆ ಮತ್ತೆ ಅದೇ ರೀತಿ ಕಚ್ಚಾಡುತ್ತಿದ್ದರೆ ಅಥವಾ ನಿಯಮಕ್ಕೆ ವಿರುದ್ಧವಾದ ಡಾವುಗಳನ್ನು ಮಾಡುತ್ತಿದ್ದರೆ ಅಖಾಡದ ಸುತ್ತಲೂ ಕುಳಿತಿರುವ ಮೂರು ಜನ ನ್ಯಾಯಮೂರ್ತಿಗಳ ಸಲಹೆ ತೆಗೆದುಕೊಂಡು ರೆಫರಿ ಅವರನ್ನು ಪಂದ್ಯದಿಂದ ಹೊರದೂಡಬಹುದು. ಈ ಮಾದರಿ ಕುಸ್ತಿಯಲ್ಲಿ ಜಟ್ಟಿಯ ಎರಡೂ ಭುಜಗಳು ಕೆಳಕ್ಕೆ ತಗಲಿದಾಗ, ರೆಫರಿ ಒಂದು ಎಣಿಸಿ ತನ್ನ ಕೈಯಿಂದ ಹಾಸಿಗೆಯನ್ನು ಬಡಿದ ಮೇಲೆ ಪಂದ್ಯ ಮುಕ್ತಾಯವಾಗುತ್ತದೆ. ರೆಫರಿ ಕೈತಟ್ಟುವವರೆಗೂ ಕುಸ್ತಿಯನ್ನು ಮುಂದುವರಿಸಬೇಕು.

ಭಾರತೀಯ ಕುಸ್ತಿಪಟುಗಳು ಕಾಮನ್‍ವೆಲ್ತ್ ಕ್ರೀಡಾಕೂಟ, ಏಷ್ಯನ್ ಗೇಮ್ಸ್‍ನಲ್ಲಿ ಈ ಮಾದರಿ ಕುಸತಿಯಲ್ಲಿ ಭಾಗವಹಿಸಿ, ಉತ್ತಮ ಮಟ್ಟದಲ್ಲಿ ಹೋರಾಡಿ ಹೆಸರು ಗಳಿಸಿದ್ದಾರೆ. ದೇಶಕ್ಕೆ ಖ್ಯಾತಿತಂದ ಜಟ್ಟಿಗಳಲ್ಲಿ ಕೆಲವರನ್ನು ಈ ಕೆಳಗೆ ಹೆಸರಿಸಿದೆ: 1 ಕೆ.ಡಿ. ಜಾದವ್ 2 ಲೀಲರಾಮ್ 3 ಬಿಷಂಬರ್ ಸಿಂಗ್ 4 ಮಾಳ್ವ 5 ಬಿ.ಜಿ.ಕಾಸಿದ್ 6 ಸೋಹಾನ್ ಸಿಂಗ್ 7 ಲಲಿತಾಪ್ರಸಾದ್ 8 ಉದಯ ಚಂದ್ 9 ಲಕ್ಷ್ಮೀಕಾಂತ ಪಾಂಡೆ 10 ಕುಮಾರ ವೇದಪ್ರಕಾಶ್

ಗ್ರೀಕೋರೋಮನ್ ಸ್ಟೈಲ್ ಕುಸ್ತಿ: ಈ ಮಾದರಿ ಕುಸ್ತಿಯೂ ಅಂತರರಾಷ್ಟ್ರೀಯ ಕುಸ್ತಿ ಸಂಘ ಮತ್ತು ಒಲಂಪಿಕ್ ಸಮಿತಿಯಿಂದ ಅಂಗೀಕರಿಸಲ್ಪಟ್ಟಿದೆ. ಫ್ರೀಸ್ಟೈಲ್ ಮಾದರಿ ಕುಸ್ತಿಯ ಪ್ರತಿರೂಪವಾಗಿದೆ. ಆದರೆ ಯಾವ ಡಾವುಗಳನ್ನೂ ಸೊಂಟದ ಕೆಳಗೆ ಮಾಡುವಂತಿಲ್ಲ. ಜಟ್ಟಿಯನ್ನು ಸಿಕ್ಕಿಸಿಕೊಳ್ಳಲು ಕಾವಲುಗಳನ್ನು ಉಪಯೋಗಿಸುವಂತಿಲ್ಲ. ಭಾರತದಲ್ಲಿ 1964ರಿಂದ ಈ ಬಗೆಯ ಕುಸ್ತಿ ನಡೆಯುತ್ತಿದೆ.

ವಿಶ್ವ ಕುಸ್ತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತ: 18ನೆಯ ಶತಮಾನದ ಕೊನೆಯಲ್ಲಿ ನಡೆದ ವಿಶ್ವಕುಸ್ತಿ ಸ್ಪರ್ಧೆ, ಅತ್ಯಂತ ಪ್ರಖ್ಯಾತವಾದ ಕುಸ್ತಿ ಸ್ಪರ್ಧೆಗಳಲ್ಲಿ ಒಂದು. ಇದರ ಹೊಣೆ ಹೊತ್ತಿದ್ದವರು ಮಹಾರಾಜ ನೃಪೇಂದ್ರ ನಾರಾಯಣ್ ಅವರು. ಈ ಸ್ಪರ್ಧೆಯಲ್ಲಿ ಭಾರತದ ಅಂದು ವಿಶ್ವದಲ್ಲೆಲ್ಲಾ ಪ್ರಮುಖ ಕುಸ್ತಿ ಪಟುವಾಗಿದ್ದ ಟಾಮ್ ಕ್ಯಾನನ್ ಎಂಬಾತನನ್ನು ಸೋಲಿಸಿ ವಿಶ್ವಕುಸ್ತಿ ಪ್ರಶಸ್ತಿಯನ್ನು ಗೆದ್ದುಕೊಂಡು ಭಾರತಕ್ಕೆ ಕೀರ್ತಿತಂದ ಪಂಡಿತ್ ಮೋತಿಲಾಲ್ ನೆಹ್ರೂ ಅವರು ಭಾರತೀಯ ಕುಸ್ತಿ ಪಟುಗಳಿಗೆ ಆಶ್ರಯ ದಾತರಾಗಿದ್ದರು. ಪ್ಯಾರಿಸ್‍ನಲ್ಲಿ ನಡೆದ ವಿಶ್ವಕುಸ್ತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಭಾರತದ ಖ್ಯಾತ ಪೈಲ್ವಾನ್ ಗುಲಾಂನನ್ನು ಅವರು ಕರೆದೊಯ್ದರು. ಗುಲಾಂನ ದೇಹದಾಢ್ರ್ಯ, ಸಾಮಥ್ರ್ಯ, ಚಾಕಚಕ್ಯತೆಗಳ ವಿಷಯದಲ್ಲಿ ಮೋತಿಲಾಲರಿಗೆ ಅಚಲ ವಿಶ್ವಾಸವಿತ್ತು. ಅಂತೆಯೇಗುಲಾಂ ತುರ್ಕಿಯ ಖಾದರ್ ಅಲಿಯನ್ನು ಸೋಲಿಸಿ ವಿಶ್ವಪ್ರಶಸ್ತಿ ಗೆದ್ದು ತಂದ.

1910ರಲ್ಲಿ, ಲಂಡನ್ನಿನಲ್ಲಿ ನಡೆದ ಜಾನ್‍ಬುಲ್ ವಿಶ್ವಕುಸ್ತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಗಾಮ ಮತ್ತು ಇಮಾಂ ಬಕ್ಷ್ ಎಂಬಿಬ್ಬರನ್ನು ಅವರಿಗೆ ತಗುಲುವ ಖರ್ಚಿನ ಹೊಣೆಯನ್ನು ಪೂರ್ಣವಹಿಸಿಕೊಂಡು ಬಂಗಾಳದ ಅತಿ ದೊಡ್ಡ ಶ್ರೀಮಂತರಾದ ಸರತ್ ಕುಮಾರ್ ಮಿತ್ರರು ಲಂಡನಿಗೆ ಕರೆದೊಯ್ದರು. ಭಾರತದಲ್ಲೆಲ್ಲ ತುಂಬ ಪ್ರಖ್ಯಾತಿಯನ್ನು ಪಡೆದಿದ್ದ ಗಾಮನಿಗೆ ವಿಶ್ವಕುಸ್ತಿ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅಂದು ಅವಕಾಶ ನೀಡಲಿಲ್ಲ. ಕೇವಲ 5 ಅಡಿ 7 ಅಂಗುಲ ಎತ್ತರವಿದ್ದು, 250 ಪೌಂಡು ತೂಕವಿದ್ದ ಗಾಮ, ಇವನಿಗಿಂತ ಎತ್ತರ ಹಾಗೂ ಹೆಚ್ಚು ತೂಕವಿರುವ ಪ್ರಪಂಚದ ಇತರ ಖ್ಯಾತ ಕುಸ್ತಿ ಪಟುಗಳ ಎದುರಿನಲ್ಲಿ ನಿಲ್ಲಲಾರನೆಂಬುದೇ ಕಾರಣವಾಗಿತ್ತು.

ಕಡ್ಲೆಕಾಯಿಯನ್ನು ಹೊಸಗುವ ರೀತಿಯಲ್ಲಿ ಬಾದಾಮಿ ಕಾಯಿಗಳನ್ನು ಎರಡೇ ಎರಡು ಬೆರಳಿನಿಂದ ಹೊಸಗಿ ತಿನ್ನುತ್ತಿದ್ದ ಅಸಾಧಾರಣ ಶಕ್ತಿ ಸಾಮಥ್ರ್ಯವನ್ನು ಹೊಂದಿದ್ದ ಗಾಮ. ಇದರಿಂದಾಗಿ ಸಿಡಿದೆದ್ದು, ಸ್ಪರ್ಧೆ ನಡೆಯಲಿದ್ದ ಕ್ರೀಡಾಂಗಣದಲ್ಲಿ ನಿಂತು, ಇಡೀ ಇಂಗ್ಲೆಂಡಿನಲ್ಲಿ, ಯಾರೇ ಆಗಲಿ, ತನ್ನ ಎದುರು ನಿಂತು 5 ನಿಮಿಷ ಹೋರಾಡಿದವರಿಗೆ 15 ಪೌಂಡ್ ಬಹುಮಾನ ಕೊಡುವುದಾಗಿ ಸವಾಲು ಹಾಕಿದ. ಇವನ ಸವಾಲನ್ನು ಎದುರಿಸಲು ಮೊದಲ ದಿವಸ ಮೂರು ಜನ ಪೈಲ್ವಾನರು ಮುಂದೆ ಬಂದರು. ಗಾವi ಈ ಮೂರು ಜನರನ್ನೂ ಎರಡು ನಿಮಿಷದ ಒಳಗೇ ಮಣ್ಣು ಮುಕ್ಕಿಸಿದ. ಅದರ ಮಾರನೆಯ ದಿನ ಇವನನ್ನೆದುರಿಸಲು ಬಂದ 12 ಜನ ಕುಸ್ತಿ ಪಟುಗಳಿಗೆ ಅದೇ ಗತಿ ಕಾಣಿಸಿದ. ದಿಗ್ಬ್ರಮೆ ಹಿಡಿಸುವಂತೆ ಜಯದ ಮೇಲಿನ ಜಯವನ್ನು ಗಳಿಸುತ್ತ ಬಂದ ಗಾಮನಿಗೆ ವ್ಯವಸ್ಥಾಪಕರು ವಿಶ್ವ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲೇಬೇಕಾಯಿತು. ಅನಂತರ ಗಾಮ 1910ನೆಯ ಇಸ್ವಿ ಸೆಪ್ಟೆಂಬರ್ 12 ರಂದು, ಹೆಸರಾಂತ ಅಮೆರಿಕದ ಪೈಲ್ವಾನ್ ಇ. ರೋಲರನನ್ನು ಎದುರಿಸಿ ನಿಂತನಲ್ಲದೆ ಆತನನ್ನು ಹದಿನೈದು ನಿಮಿಷಗಳಲ್ಲಿ ಹನ್ನೆರಡು ಬಾರಿ ಸೋಲಿಸಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೆಕ್ಷಕರಿಗೆ ಆಶ್ಚರ್ಯ ವುಂಟುಮಾಡಿದ. ಇದಾದ ಅನಂತರ ಅಂದು ವಿಶ್ವದಲ್ಲೆಲ್ಲ ಪ್ರಖ್ಯಾತಿ ಗಳಿಸಿ ವಿಶ್ವ ಕುಸ್ತಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಆಸ್ಟ್ರೇಲಿಯದ ಜಿಬಿಸ್ಕೊನನ್ನು ಎದುರಿಸಿದ. ಮೂರು ಗಂಟೆಗಳ ಕಾಲ ಇಬ್ಬರಿಗೂ ಪಂದ್ಯ ನಡೆದು, ಯಾರೂ ಸೋಲದ ಕಾರಣ ಪಂದ್ಯವನ್ನು ಮುಂದಿನ ದಿವಸಕ್ಕೆ ದೂಡಲಾಯಿತು. ಅಂದು ನಡೆದ ಕುಸ್ತಿ ಪಂದ್ಯದಲ್ಲಿ ಕೊನೆಯವರೆಗೂ ಗಾಮನದೇ ಮೇಲುಗೈಯಾಗಿತ್ತು. ಕುಸ್ತಿ ಪಂದ್ಯದ ನೀತಿ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದರೆ ಅಂದೇ ಗಾಮನಿಗೆ ಜಯ ದೊರಕಬೇಕಿತ್ತು. ಇದರಿಂದ ಗಾಮ ಕೊಂಚವೂ ಸಹನೆಯನ್ನು ಕಳೆದುಕೊಳ್ಳಲಿಲ್ಲ. ಇದಕ್ಕೆ ಪ್ರತಿಯಾಗಿ ಮಾರನೆಯ ದಿವಸ ಅತ್ಯಂತ ಉತ್ಸಾಹದಿಂದ ಕುಸ್ತಿ ಅಖಾಡಕ್ಕಿಳಿದ. ಆದರೆ ಅವನ ಎದುರಾಳಿ ಹಿಂದಿನ ದಿವಸದ ಕುಸ್ತಿಪಂದ್ಯದಲ್ಲಿ ಮೈಮೂಳೆ ಮುರಿಸಿ ಕೊಂಡಿದ್ದರಿಂದ ನಿಶ್ಚೇತಸನಾಗಿ ಸ್ಪರ್ಧೆಗೆ ಗೈರುಹಾಜರಾದ. ಅಂದೇ ಗಾಮ ವಿಶ್ವಕುಸ್ತಿ ಪ್ರಶಸ್ತಿಯನ್ನು ಸಂಪಾದಿಸಿ ಭಾರತದ ಕೀರ್ತಿಪತಾಕೆಯನ್ನು ಎತ್ತಿಹಿಡಿದ.

ಇದಾದ ಕೆಲವು ತಿಂಗಳುಗಳ ಅನಂತರ ವಿಶ್ವ ಕುಸ್ತಿ ಪ್ರಶಸ್ತಿಯನ್ನು ಮತ್ತೆ ವಾಪಸ್ಸು ಪಡೆಯಲು ತನ್ನ ದೇಶದ ಜನತೆಯಿಂದ ಪ್ರೇರಿತನಾದ ಜಿಬಿಸ್ಕೊ ಮತ್ತೆ ಗಾಮನನ್ನು ಎದುರಿಸಿದ. ಆದರೆ ಈ ಸಾರಿ ಗಾಮ, ಕೇವಲ ಎರಡು ಸೆಕೆಂಡಿನಲ್ಲಿ ಆತನನ್ನು ಸೋಲಿಸಿ, ಇಡೀ ವಿಶ್ವದಲ್ಲಿ ಅಜೇಯನೆಂದು ಕೀರ್ತಿ ಸಂಪಾದಿಸಿಕೊಂಡ.

ಗಾಮ ಬೆಳಕಿಗೆ ಬರುವ ಮುಂಚೆ ಕಿಕಾರ್‍ಸಿಂಗ್ ಮತ್ತು ಗುಲಾಂ-ಇವರ ಹೆಸರು ಕುಸ್ತಿ ಪ್ರಪಂಚದಲ್ಲಿ ಮನೆಮಾತಾಗಿತ್ತು. ಲಾಹೋರಿನ ಸತಾರ-ಎ-ಹಿಂದ್‍ನಲ್ಲಿದ್ದ ವಿದ್ದೊ ಪೈಲ್ವಾನನ ಹೆಸರನ್ನು ಇಲ್ಲಿ ಸ್ಮರಿಸಬಹುದು. ಕುಸ್ತಿಯಲ್ಲಿ ಗಾಮ ಸ್ವಲ್ಪ ಹೆದರುತ್ತಿದ್ದುದು ಬಹುಷಃ ಈತನೊಬ್ಬನಿಗೇ ಹೆಚ್ಚುಕಡಿಮೆ ಈತ ಗಾಮನಿಗೆ ಸರಿಸಮನಾಗಿ ನಿಲ್ಲುತ್ತಿದ್ದ, ಅನಂತರ ಬಂದ ಭಾರತದ ಹೆಸರಾಂತ ಕೆಲವು ಕುಸ್ತಿಪಟುಗಳೇಂದರೆ-ಭೂಲರ್, ಗೊಂಗಾಬಲಿವಾಲ, ಹರ್‍ಬಾನ್‍ಸಿಂಗ್, ಗುಟ್ಟಾಸಿಂಗ್, ಇಮಾಂಬಕ್ಷ್, ಗರ್ದಾವರ್, ಹಮೀದಾ, ಗಂಧಾಸಿಂಗ್, ಹಕೀಮ್, ಮಾಧೋಸಿಂಗ್, ವುಸ್ತಾದ್‍ಕರೀಮ್‍ಬಕ್ಷ್, ಪಲೇರ್‍ವಾಲ, ಗೋಬರ್‍ಬಾಬು, ಕಲ್ಲು, ರಹೀಂಸುಲ್ತಾನಿವಾಲಾ, ದಾರಾಸಿಂಗ್, ಜೋಗಿಂದರ್‍ಸಿಂಗ್-ಮುಂತಾದವರು. ಫ್ರೀಸ್ಟೈಲ್ ಕುಸ್ತಿಯಲ್ಲಿವರು ಹೆಸರುವಾಸಿಯಾದವರು. ಹೀಗೆ ಭಾರತ ಕಾಮನ್‍ವೆಲ್ತ್ ರಾಷ್ಟ್ರಗಳ ಪೈಕಿ ಉನ್ನತ ಮಟ್ಟದ ಕುಸ್ತಿಯ ರಾಷ್ಟ್ರವೆಂದು ಹೆಸರುಗಳಿಸಿಕೊಂಡಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಕುಸ್ತಿ&oldid=1202273" ಇಂದ ಪಡೆಯಲ್ಪಟ್ಟಿದೆ