ವಿಷಯಕ್ಕೆ ಹೋಗು

ಕಿಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಿಟ್ಟ ಎಂದರೆ ಲೋಹಗಳನ್ನು ಅದುರುಗಳಿಂದ ಪ್ರತ್ಯೇಕಿಸುವಾಗ, ಕುಲುಮೆಗಳಿಂದ ಹೊರ ಹರಿಯುವ, ಅದುರುಗಳಲ್ಲಿನ ಅಶುದ್ಧತೆಗಳನ್ನೊಳಗೊಂಡ, ಒಂದು ದ್ರವರೂಪ ವಸ್ತು (ಸ್ಲ್ಯಾಗ್). ಬಹುತೇಕ ಕ್ಯಾಲ್ಸಿಯಮ್ ಸಿಲಿಕೇಟುಗಳು, ಫಾಸ್ಫೇಟ್‍ಗಳು ಮತ್ತು ಸಲ್ಫೇಟ್‍ಗಳಿಂದ ಕೂಡಿರುತ್ತದೆ. ಅದುರು ಹಾಗೂ ಅಪಕರ್ಷಣಕಾರಿ ಮತ್ತು ಸ್ರಾವಕ ವಸ್ತುಗಳ (ಫ್ಲಕ್ಸ್) ಮಿಶ್ರಣವನ್ನು ಕುಲುಮೆಯೊಳಗಡೆ ಚೆನ್ನಾಗಿ ಕಾಯಿಸಿದಾಗ ಲೋಹ ದ್ರವರೂಪದಲ್ಲಿ ಪ್ರತ್ಯೇಕಗೊಳ್ಳುತ್ತದೆ. ಸ್ರಾವಕವಸ್ತು ಅದುರಿನ ಕಲ್ಮಷ ಮತ್ತು ಇಂಧನದ ಬೂದಿಯೊಡನೆ ಸಂಯೋಗ ಹೊಂದಿ ಒಂದು ದ್ರವವಾಗುವುದು. ಅದೇ ಕಿಟ್ಟ. ಕಿಟ್ಟ ದ್ರವರೂಪದಲ್ಲಿರುವ ಲೋಹದೊಡನೆ ವಿಲೀನವಾಗುವುದಿಲ್ಲ. ದ್ರವಲೋಹಕ್ಕಿಂತ ಕಿಟ್ಟ ಸಾಮಾನ್ಯವಾಗಿ ಕಡಿಮೆ ಸಾಂದ್ರತೆಯುಳ್ಳದ್ದು. ಪರಿಣಾಮವಾಗಿ ಅದು ಮೇಲ್ಪದರವಾಗಿರುತ್ತದೆ. ಕಿಟ್ಟಕ್ಕಿರಬೇಕಾದ ಕೆಲ ಮುಖ್ಯ ಲಕ್ಷಣಗಳೆಂದರೆ ಅದು ಕುಲುಮೆಯೊಳಗಿನ ಉಷ್ಣತೆಯಲ್ಲಿ ಸುಲಭವಾಗಿ ದ್ರವವಾಗುವಂತಿರಬೇಕು. ಅದುರಿನ ಮುಖ್ಯ ಲೋಹವನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳಬಾರದು, ಅಶುದ್ಧತೆಗಳನ್ನು ಆದಷ್ಟು ಪರಿಣಾಮಕಾರಿಯಾಗಿ ತನ್ನಲ್ಲಿ ವಿಲೀನಗೊಳಿಸಿಕೊಳ್ಳುವ ಸಾಮಥ್ರ್ಯ ಹೊಂದಿರಬೇಕು. ಕುಲುಮೆಯ ಒಳಮೈಗೆ ಜೀರ್ಣಕಾರಿಯಾಗಬಾರದು. ಕುಲುಮೆಯೊಳಗಡೆ ಒಮ್ಮೆ ಬೇರ್ಪಟ್ಟ ಲೋಹ ಮತ್ತೆ ರಾಸಾಯನಿಕ ಕ್ರಿಯೆಗೊಳಗಾಗದಂತೆ ಕಿಟ್ಟದ ಮೇಲ್ಪದರ ರಕ್ಷಣಾಕವಚವೂ ಆಗಿರುತ್ತದೆ. ಕೆಲ ವೇಳೆ ಭಾರಿ ಪ್ರಮಾಣದ ನೀರಿನ ಆವಿ ಉತ್ಪಾದನ ಕೇಂದ್ರಗಳಲ್ಲಿ ಕಲ್ಲಿದ್ದಲನ್ನು ಉರಿಸಿದಾಗಲೂ ಶೇಷವಾಗಿ ಉಳಿಯುವ ಬೂದಿಯನ್ನು ದ್ರವರೂಪದಲ್ಲಿ ಕಿಟ್ಟವಾಗಿ ಹೊರತೆಗೆಯುವ ಪದ್ಧತಿ ಆಚರಣೆಯಲ್ಲಿದೆ. ಕುಲುಮೆಗಳಿಂದ ಹೊರಹರಿದ ದ್ರವರೂಪದ ಕಿಟ್ಟ ಆರಿದಂತೆ ಘನವಾಗುವುದು. ಆರುವಾಗ ಗಾಳಿ ಅಥವಾ ನೀರಿನ ಆವಿಯನ್ನು ನುಗ್ಗಿಸಿ ದ್ರವರೂಪದ ಕಿಟ್ಟವನ್ನು ಸಣ್ಣ ಸಣ್ಣ ಗಡ್ಡೆಗಳಾಗಿಯಾಗಲೀ, ಉಣ್ಣೆಯ ಎಳೆಯಂತಾಗಲೀ ಪಡೆಯಬಹುದು. ಗುಡ್ಡೆಗಳು ಜಲ್ಲಿ ಕಲ್ಲಿನಂತೆ ಬಹು ಗಟ್ಟಿಯೂ ಭಾರವೂ ಆಗಿರುತ್ತವೆ. ಆದ್ದರಿಂದ ಸಾಮಾನ್ಯ ರಸ್ತೆ ಮತ್ತು ರೈಲುರಸ್ತೆ ನಿರ್ಮಾಣ, ಸಿಮೆಂಟ್ ಕಾಂಕ್ರೀಟ್, ಹಡಗುಗಳ ಸ್ಥಿರತೆಗಾಗಿ ಉಪಯೋಗಿಸುವ ನಿಲುಭಾರ ಮುಂತಾದವುಗಳಲ್ಲಿ ಅದನ್ನು ಉಪಯೋಗಿಸುತ್ತಾರೆ. ಕಿಟ್ಟದ ಉಣ್ಣೆ (ಸ್ಲ್ಯಾಗ್ ವೂಲ್) ಬೆಂಕಿ, ಉಷ್ಣ ಮತ್ತು ಶಬ್ದನಿರೋಧಕ ರಚನಾವಸ್ತುವಾಗಿ ಉಪಯೋಗ ಹೊಂದುವುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಿಟ್ಟ&oldid=888202" ಇಂದ ಪಡೆಯಲ್ಪಟ್ಟಿದೆ