ಕಸ (ಹೆರಿಗೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆರಿಗೆಯಲ್ಲಿ ಶಿಶುವಿನ ಜನನದ ಅನಂತರ ಗರ್ಭಕೋಶದಲ್ಲಿ ಉಳಿದ ಮಾಸು, (ಸತ್ತೆ) ಗರ್ಭಪೊರೆ. ಅಳಿದುಳಿದ ಗರ್ಭಜಲ ತಾನಾಗಿ ಹೊರಬೀಳುತ್ತದೆ, ಎಲ್ಲವನ್ನು ಒಟ್ಟಾಗಿ ಕಸ (ಆಫ್ಟರ್ ಬರ್ತ್) ಎಂದು ಕರೆಯುತ್ತಾರೆ. ಆದರೆ ಕಸ ಎಂಬುದು ಮಾಸು ಎನ್ನುವುದಕ್ಕೆ ಪರ್ಯಾಯವಾಗಿ ಬಳಕೆಯಲ್ಲಿದೆ.[೧]

ಮಾಸು ತಾಯಿ ಮಗುವಿನ ನಡುವಿನ ಕೊಂಡಿ. ಅತಿ ಜತನದಿಂದ ಪ್ರಕೃತಿ ರೂಪಿಸಿದ ವಿಶೇಷ ಅಂಗಾಂಶ. ಗರ್ಭಧರಿಸಿದ ಸುಮಾರು ಮೂರು ತಿಂಗಳಿಗೆ (೧೨ ರಿಂದ ೧೪ ವಾರ) ಸಂಪೂರ್ಣ ಕಾರ್ಯ ನಿರ್ವಹಿಸುವ ಶಕ್ತಿ ಪಡೆಯುತ್ತದೆ. ಅದರ ಕಾರ್ಯ ವೈವಿಧ್ಯ ಹಲವು: ದೊಡ್ಡವರಲ್ಲಿ ಶ್ವಾಸಕೋಶ (ಲಂಗ್ಸ್‌), ಪಿತ್ತಜನಕಾಂಗ (ಲಿವರ್), ಮೂತ್ರಪಿಂಡ (ಕಿಡ್ನಿ), ಕರುಳು ನಿರ್ವಹಿಸುವ ಎಲ್ಲ ಕೆಲಸಗಳನ್ನು ಗರ್ಭದಲ್ಲಿರುವ ಶಿಶುವಿಗಾಗಿ ಮಾಸು ನಿರ್ವಹಿಸುತ್ತದೆ.[೨]


  • ಶಿಶುವಿಗೆ ಶರ್ಕರ, ಪಿಷ್ಟ, ತೈಲಾಂಶಗಳನ್ನು ಸಂಗ್ರಹಿಸುವುದು (ಕರುಳಿನ ಕೆಲಸ)
  • ಆಮ್ಲಜನಕ ಪೂರೈಸುವುದು, ಇಂಗಾಲದ ಡೈಯಾಕ್ಸೈಡ್ ಹೊರಕಳಿಸುವುದು (ಶ್ವಾಸಕೋಶದ ಕೆಲಸ)
  • ಹೆಚ್ಚುವರಿ ನೀರು, ಲ್ಯಾಕ್ಟಿಕ್ ಆಮ್ಲ, ಲವಣ ಇತ್ಯಾದಿಗಳನ್ನು ತಾಯ ರಕ್ತ ಸಂಚಲನಾ ವ್ಯವಸ್ಥೆಗೆ ತಲುಪಿಸುವುದು (ಮೂತ್ರಪಿಂಡದ ಕೆಲಸ)
  • ಮಗುವಿನ ಬೆಳೆವಣಿಗೆ ಪೂರ್ಣ ಹಂತ ತಲುಪುವಾಗ ವಿಶೇಷ ಚೋದನಿಗಳನ್ನು ಉತ್ಪಾದಿಸುವುದು (ಕಣ್ವ ಚೋದನಿಗಳನ್ನು ಉತ್ಪಾದಿಸುವುದು)
  • ಮಗುವಿಗೆ ಅಪಾಯವಾಗಬಲ್ಲ ಸೂಕ್ಷ್ಮ ಜೀವಿಗಳನ್ನು ಹೊರಕವಚದಲ್ಲೇ ತಡೆಯುವುದು. ಆದರೆ ವೈರಾಣುಗಳನ್ನು ಸೋಸಲು ಸಾಧ್ಯವಿಲ್ಲ (ರಕ್ಷಣಾ ಕವಚ)
  • ತಾಯ ಶರೀರದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳನ್ನು ಸೋಸುವುದು (ಐ. ಜಿ ಮ್ ಗುಂಪಿನ ಪ್ರತಿಕಾಯಗಳು ಮಾಸನ್ನು ದಾಟಲು ಅಸಮರ್ಥ)

ಮಾಸು ಸುಮಾರು ೩-೪ ಸೆಂಮೀ ದಪ್ಪವಾಗಿರುತ್ತದೆ. ೧೫-೧೮ ಸೆಂಮೀ ವ್ಯಾಸದ ವೃತ್ತಕಾರದಲ್ಲಿ ಮೆತು ಸ್ಪಂಜಿನಂತಿರುತ್ತದೆ. ೩೦೦ ರಿಂದ ೫೫೦ ಗ್ರಾಂ ತೂಗುತ್ತದೆ. ಸಾಮಾನ್ಯವಾಗಿ ಗರ್ಭಕೋಶದ ಒಳಗೆ ಮೇಲ್ಭಾಗದಲ್ಲಿ ಅಂಟಿ ಕೊಂಡಿರುತ್ತದೆ. ಇದರ ಅಂಚಿನಿಂದ ಪ್ರಾರಂಭವಾದ ಗರ್ಭಚೀಲ, ಉಲ್ಬಚೀಲ, ಅಮ್ನೆನಿಯಟಿಕ್ ಮೆಮ್ಬ್ರೇನ್ ಮಗುವನ್ನು ಸುತ್ತಲೂ ಆವರಿಸಿರುತ್ತದೆ. ಹೊಕ್ಕಳ ಬಳ್ಳಿಯ ಸಾಧಾರಣವಾಗಿ ಮಾಸುವಿನ ಮಧ್ಯದಿಂದ ಹಿಡಿದು ಮಗುವಿನ ಹೊಕ್ಕಳಲ್ಲಿ ಕೊನೆಯಾಗುತ್ತದೆ. ಅದರಲ್ಲಿ ಎರಡು ಸಿರೆಗಳೂ (ಅಪಧಮನಿ) ಒಂದು ಅಭಿಧಮನಿಯೂ ಇರುತ್ತದೆ. ಈ ಮೂರು ನಾಳಗಳು ಸುತ್ತಿಕೊಂಡು ಹೆಣೆದ ಹಗ್ಗದಂತೆ ಕಾಣುತ್ತದೆ, ಜನನದ ವೇಳೆಗೆ ೬೦೦-೭೫೦ ಮಿಲೀ ಗರ್ಭಜಲವಿರುತ್ತದೆ.

ವ್ಯತ್ಯಸ್ಥ ಸ್ಥಿತಿಗಳು : ಸಹಜವಾಗಿ ಗರ್ಭಕೋಶದ ಒಳಗೆ ಮೇಲುಭಾಗದಲ್ಲಿ ಮಾಸು ಅಂಟಿಕೊಂಡಿರುತ್ತದೆ. ೧. ಪ್ರಿವಿಯಾ: ಗರ್ಭಕೊರಳಿಗೆ, ಮಗುವಿನ ಕೆಳಗೆ ಅಂಟಿಕೊಂಡಿರುವ ಮಾಸು, ಗರ್ಭದ್ವಾರಕ್ಕೆ ಪೂರ್ಣ ಅಡ್ಡವಾಗಿ ಅಂಟಿಕೊಂಡಿದ್ದರೆ ಅದು ಅಪಾಯಕರ. ಪದೇ ಪದೇ ಆಗುವ ರಕ್ತಸ್ರಾವ ತಾಯಿಯನ್ನು ಮಗುವನ್ನು ಅಪಾಯದ ಆಂಚಿಗೆ ದೂಡುತ್ತವೆ. ಸಹಜ ಹೆರಿಗೆ ಈ ಪರಿಸ್ಥಿತಿಯಲ್ಲಿ ಅಸಾಧ್ಯ ಸ್ಕ್ಯಾನಿಂಗ್ ಪರೀಕ್ಷೆಯಿಂದ ಈ ಪರಿಸ್ಥಿತಿಯನ್ನು ಬಹುಬೇಗ ಗುರುತಿಸಬಹುದು (೧೪-೨೦ ವಾರ). ಗರ್ಭಿಣಿಸ್ತ್ರೀಯು ಪೂರ್ಣ ವಿಶ್ರಾಂತಿಯೊಡನೆ ಕೆಲವು ಔಷಧಿಗಳನ್ನು ಸೇವಿಸಬೇಕಾಗಬಹುದು. ಕೆಲವೊಮ್ಮೆ ಗರ್ಭದ್ವಾರ ಅಗಲವಾಗದೇ ಇರಲು ಹೊಲಿಗೆ ಹಾಕುವ ಅಗತ್ಯ ಇರುತ್ತದೆ. ಮಗುವಿನ ಬೆಳೆವಣಿಗೆಗೆ ೩೫-೩೬-೩೭ ವಾರಗಳ ಕಾಲ ಮುಗಿದರೆ ಅನುಕೂಲ ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಶಿಶುವನ್ನು ಹೊರತೆರೆಯಬೇಕು. ರಕ್ತಪೂರೈಕೆಯೂ ಅವಶ್ಯಕವಾಗುತ್ತದೆ. ಅತಿ ತೆಳುವಾಗಿರುವಿಕೆ / ಅತಿ ದಪ್ಪವಾಗಿರುವಿಕೆ :- ಸಾಧಾರಣವಾಗಿ ೩-೪ ಸೆಂ ಮೀ ದಪ್ಪದ ಮಾಸು ಸಹಜವಾದದ್ದು.

  • ತಾಯಿಗೆ ಮಧುಮೇಹ ಕಾಯಿಲೆ ಇದ್ದರೆ
  • ತಾಯಿ- ಮಗುವಿನ ರಕ್ತವಿಲೋಮತೆ
  • ಆಂತರಿಕವಾಗಿ ನಂಜಾಗಿದ್ದರೆ
  • ಗರ್ಭಕೋಶದ ರಕ್ತಪರಿಚಲನೆಗೆ ಏನಾದರೂ ಅಡೆತಡೆ ಇದ್ದರೆ ಮಾಸು ತೆಳುವಾಗಿ ಹರಡಿಕೊಳ್ಳಬಹುದು/ ಅತಿ ದಪ್ಪವಾಗಿರಬಹುದು.

“ಅಕ್ರೀಟಾ” ಗರ್ಭಕೋಶದ ಒಳಪದರಕ್ಕೆ ಅತಿ ಹತ್ತಿರವಾದಾಗ ಅಂಟಿಕೊಂಡಿರುವ ಮಾಸು. ಈ ಪರಿಸ್ಥಿತಿಯಲ್ಲಿ ಮಾಸು ಸಹಜವಾಗಿ ಕಳಚಿಬರುವುದಿಲ್ಲ. ಹೆರಿಗೆಯಾದ ಮೇಲೆ ಅರ್ಧ ಗಂಟೆಯೊಳಗೆ ಬರಬೇಕಾದ ಮಾಸು ಹೊರಬರದೇ ತಾಯಿ ದೇಹದಿಂದ ಅತಿ ರಕ್ತಸ್ರಾವ ಆಗಬಹುದು, ತಕ್ಷಣವೇ ಹಿರಿಯ ತಜ್ಞರ ನೆರವಿನಿಂದ ಮಾಸನ್ನು ಬಿಡಿಸಿ ಹೊರತರಬೇಕಾಗುತ್ತದೆ. ಸಾಧ್ಯವಾಗದಿದ್ದರೆ ಗರ್ಭಕೋಶಕ್ಕೆ ರಕ್ತ ಪೂರೈಸುವ ನಾಳಗಳನ್ನು ಕಟ್ಟಿ ರಕ್ತ ಹರಿವನ್ನು ನಿಲ್ಲಿಸಬೇಕಾಗುತ್ತದೆ.

ಮಾಸು ಹೊರಬಂದಿಲ್ಲ ಎಂದು ಹೊಕ್ಕಳ ಬಳ್ಳಿ ಹಿಡಿದು ಜೋರಾಗಿ ಎಳೆದರೆ ಗರ್ಭಕೋಶವೇ ಹೊರಬೀಳುವ ಪ್ರಸಂಗ ಬರಬಹುದು. ಇದೂ ಕೂಡ ತಾಯ ಜೀವಕ್ಕೆ ಅತಿ ಅಪಾಯಕಾರಿ. ತಾಯಿ ಮಗುವಿನ ನಡುವಿನ ಭದ್ರಸೇತು ಒಂದಿನಿತು ಹೆಚ್ಚು ಕಡಿಮೆಯಾದರೂ ತಾಯಿಗೆ/ ಮಗುವಿಗೆ ತೊಂದರೆ ತಪ್ಪಿದ್ದಲ್ಲ.

ಬಸುರಿ ನಂಜು - ಗರ್ಭಿಣಿಯರಿಗೆ ಕಾಡುವ ಶಾಪ. ಹೆಚ್ಚಿನ ಬಿ.ಪಿ, ಕಾಲುಬಾವು, ಅತಿಕಡಿಮೆ ಮೂತ್ರ ವಿಸರ್ಜನೆ ಕೆಲವೊಮ್ಮೆ ಅದಿರುವಾಯು ಎಲ್ಲ ಲಕ್ಷಣಗಳ ಸಮೂಹ. ಇದಕ್ಕೆ ಇದಮಿಥ್ಥಂ ಎಂಬ ಕಾರಣ ತಜ್ಞರಿಗೆ ಇನ್ನೂ ಸಿಕ್ಕಿಲ್ಲ. ಆದರೆ ಮಾಸುವಿನಲ್ಲಿಯ ರಕ್ತ ಪೂರಣದ ವ್ಯತ್ಯಾಸವನ್ನು ಎಲ್ಲ ಪ್ರಸಂಗಗಳಲ್ಲಿಯೂ ಗುರುತಿಸಿ ಧೃಢಪಡಿಸಲಾಗಿದೆ. ಈ ಅವ್ಯವಸ್ಥಿತ ಮಾಸು ತಾಯ ಬಸಿರು ನಂಜಿಗೆ ಕಾರಣ. ರಕ್ತಪೂರಣದಲ್ಲೇಕೆ ಏರುಪೇರಾಗುತ್ತದೆ, ಯಾರಲ್ಲಿ ಆಗುತ್ತದೆ ಎಂದು ಮೊದಲೇ ಕಂಡುಹಿಡಿಯುವ ವಿಧಾನ ತಿಳಿದರೆ ಎಷ್ಟೋ ಹೆಣ್ಣುಮಕ್ಕಳ ಪ್ರಾಣ ಉಳಿಯುತ್ತದೆ. ಶಿಶುಗಳು ಆರೋಗ್ಯವಾಗಿ ನಳನಳಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Dehbashi S, Honarvar M, Fardi FH (July 2004). "Manual removal or spontaneous placental delivery and postcesarean endometritis and bleeding". Int J Gynaecol Obstet. 86 (1): 12–5. doi:10.1016/j.ijgo.2003.11.001. PMID 15207663.
  2. BMJ summary of the Cochrane group metanalysis, at Postpartum Hemorrhage: prevention Archived 2008-10-11 ವೇಬ್ಯಾಕ್ ಮೆಷಿನ್ ನಲ್ಲಿ. by David Chelmow.