ವಿಷಯಕ್ಕೆ ಹೋಗು

ಬಿಲ್ಲು ಮತ್ತು ಬಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಮ್ಮಿಳಿತ ಬಿಲ್ಲು

ಬಿಲ್ಲು ಮತ್ತು ಬಾಣವು ಸ್ಥಿತಿಸ್ಥಾಪಕ ಹಾರಿಸುವ ಸಾಧನ (ಬಿಲ್ಲು) ಮತ್ತು ಉದ್ದನೆಯ ಹಿಡಿಯಿರುವ ಉತ್ಕ್ಷೇಪಕಗಳನ್ನು (ಬಾಣಗಳು) ಹೊಂದಿರುವ ಒಂದು ವ್ಯಾಪ್ತಿ ಹೊಂದಿಸಬಲ್ಲ ಅಸ್ತ್ರ ವ್ಯವಸ್ಥೆಯಾಗಿದೆ. ಬಿಲ್ಲುವಿದ್ಯೆಯು ಬಾಣಗಳನ್ನು ಬಿಡಲು ಬಿಲ್ಲುಗಳನ್ನು ಬಳಸುವ ಕಲೆ, ಅಭ್ಯಾಸ ಅಥವಾ ಕೌಶಲವಾಗಿದೆ. ಬಿಲ್ಲಿನಿಂದ ಬಾಣಗಳನ್ನು ಬಿಡುವ ವ್ಯಕ್ತಿಯನ್ನು ಬಿಲ್ಲುಗಾರ ಎಂದು ಕರೆಯಲಾಗುತ್ತದೆ. ಬಾಣಗಳನ್ನು ತಯಾರಿಸುವವನನ್ನು ಬಾಣಗಾರ ಎಂದು ಕರೆಯಲಾಗುತ್ತದೆ.

ಮಾನವರಿಂದ ಬೇಟೆಗಾಗಿ ಬಿಲ್ಲು ಬಾಣಗಳ ಬಳಕೆಯು ದಾಖಲಿಸಿದ ಇತಿಹಾಸಕ್ಕಿಂತ ಹಿಂದಿನದ್ದಾಗಿದೆ ಮತ್ತು ಅನೇಕ ಪ್ರಾಗೈತಿಹಾಸಿಕ ಸಂಸ್ಕೃತಿಗಳಿಗೆ ಸಾಮಾನ್ಯವಾಗಿತ್ತು. ಪ್ರಾಚೀನ ಇತಿಹಾಸದಿಂದ ಮುಂಚಿನ ಆಧುನಿಕ ಕಾಲದವರೆಗೆ ಅವು ಪ್ರಮುಖ ಯುದ್ಧ ಶಸ್ತ್ರಾಸ್ತ್ರಗಳಾಗಿದ್ದವು. ಆಧುನಿಕ ಕಾಲದಲ್ಲಿ ಹೆಚ್ಚು ಪ್ರಬಲ ಮತ್ತು ನಿಖರವಾದ ಫಿರಂಗಿ, ಬಂದೂಕು, ಮೊದಲಾದವುಗಳ ಅಭಿವೃದ್ಧಿಯಿಂದ ಅವು ಹೆಚ್ಚೆಚ್ಚು ಅಪ್ರಚಲಿತವಾದವು, ಮತ್ತು ಅಂತಿಮವಾಗಿ ಅವುಗಳನ್ನು ಯುದ್ಧಗಳಿಂದ ಕೈಬಿಡಲಾಯಿತು. ಇಂದು, ಬಿಲ್ಲು ಬಾಣಗಳನ್ನು ಬಹುತೇಕವಾಗಿ ಬೇಟೆ ಮತ್ತು ಕ್ರೀಡೆಗಳಿಗಾಗಿ ಬಳಸಲಾಗುತ್ತದೆ.

ಬಿಲ್ಲು ಅರೆ ನಮ್ಯ ಆದರೆ ಸ್ಥಿತಿಸ್ಥಾಪಕ ಕಮಾನನ್ನು ಹೊಂದಿರುತ್ತದೆ ಮತ್ತು ಒಂದು ಹೆಚ್ಚು ಕರ್ಷಕ ಹೆದೆಯು ಬಿಲ್ಲಿನ ಎರಡು ಕೊನೆಗಳನ್ನು ಜೋಡಿಸುತ್ತದೆ. ಬಾಣವು ಮೊನೆಯುಳ್ಳ ತುದಿ ಮತ್ತು ಉದ್ದನೆಯ ಹಿಡಿಯನ್ನು ಹೊಂದಿರುವ ಉತ್ಕ್ಷೇಪಕವಾಗಿದೆ. ಇದು ಹಿಂದುಗಡೆ ಸ್ಥಿರೀಕರಣ ರೆಕ್ಕೆಗಳು, ಮತ್ತು ಅತ್ಯಂತ ಕೊನೆಯಲ್ಲಿ ಹೆದೆಯನ್ನು ಸಂಪರ್ಕಿಸಲು ಕಿರಿದಾದ ಕಚ್ಚನ್ನು ಹೊಂದಿರುತ್ತದೆ. ಬಾಣಪ್ರಯೋಗಕ್ಕಾಗಿ ಬಾಣವನ್ನು ಹೇರಲು, ಬಿಲ್ಲುಗಾರನು ಒಂದು ಬಾಣವನ್ನು ಬಿಲ್ಲಿನ ಮಧ್ಯದುದ್ದಕ್ಕೆ ಇಡುತ್ತಾನೆ ಮತ್ತು ಹೆದೆಯು ಬಾಣದ ಕಚ್ಚಿನಲ್ಲಿ ಇರುತ್ತದೆ. ಬಾಣವನ್ನು ಬಿಡಲು, ಬಿಲ್ಲುಗಾರನು ಬಾಣವನ್ನು ಹಿಂದಕ್ಕೆ ಎಳೆಯುತ್ತಾನೆ, ಮತ್ತು ಇದು ಹೆದೆಯನ್ನು ಕೂಡ ಎಳೆಯುತ್ತದೆ ಹಾಗೂ ಬಿಲ್ಲಿನ ತುದಿಗಳನ್ನು ಬಾಗಿಸುತ್ತದೆ ಮತ್ತು ಸ್ಥಿತಿಸ್ಥಾಪಕ ಶಕ್ತಿಯನ್ನು ಸಂಗ್ರಹಿಸುತ್ತದೆ. ಸಾಮಾನ್ಯವಾಗಿ, ಬಾಣವನ್ನು ಗುರಿಯಿಡಲು ಬಿಲ್ಲುಗಾರನು ಬಾಣದ ಉದ್ದಕ್ಕೆ ನೋಡುತ್ತಾನೆ. ಅಂತಿಮವಾಗಿ ಬಿಲ್ಲುಗಾರನು ಬಾಣವನ್ನು ಬಿಡುಗಡೆಗೊಳಿಸುತ್ತಾನೆ, ಮತ್ತು ಇದು ತುದಿಗಳಲ್ಲಿ ಸಂಗ್ರಹವಾದ ಅಂತಸ್ಥ ಶಕ್ತಿಯು ಚಲನಶಕ್ತಿಯಾಗಿ ಪರಿವರ್ತನೆಗೊಂಡು ಹೆದೆಯ ಮೂಲಕ ಬಾಣಕ್ಕೆ ಪ್ರಸಾರಣಗೊಳ್ಳಲು ಅನುಮತಿಸುತ್ತದೆ. ಇದು ಬಾಣವನ್ನು ಹೆಚ್ಚಿನ ವೇಗದಿಂದ ಮುಂದಕ್ಕೆ ಹಾರುವಂತೆ ನೂಕುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Paterson Encyclopaedia of Archery pp. 27-28