ವಿಷಯಕ್ಕೆ ಹೋಗು

ಗಡ್ಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಂದೂ ಸಾಧುವಿನ ಗಡ್ಡ

ಗಡ್ಡ ಎಂದರೆ ಮಾನವರು ಮತ್ತು ಕೆಲವು ಮಾನವರಲ್ಲದ ಪ್ರಾಣಿಗಳ ಗದ್ದ ಮತ್ತು ಕೆನ್ನೆಗಳ ಮೇಲೆ ಬೆಳೆಯುವ ಕೂದಲಿನ ಸಂಗ್ರಹ. ಮಾನವರಲ್ಲಿ, ಸಾಮಾನ್ಯವಾಗಿ ಕೇವಲ ಹರಯಕ್ಕೆ ಬಂದಿರುವ ಅಥವಾ ವಯಸ್ಕ ಗಂಡಸರು ಗಡ್ಡ ಬೆಳೆಸುವಲ್ಲಿ ಸಮರ್ಥರಾಗಿರುತ್ತಾರೆ. ವಿಕಾಸಾತ್ಮಕ ದೃಷ್ಟಿಕೋನದಿಂದ ಗಡ್ಡವು ಗಂಡುಜನಕ ಕೂದಲಿನ ವಿಶಾಲ ವರ್ಗದ ಭಾಗವಾಗಿದೆ. ಗೊರಿಲಾಗಳ ಮೇಲಿನ ಕೂದಲಿನಂತೆ ಮಾನವರು ತಮ್ಮ ಮುಖ ಮತ್ತು ಸಂಪೂರ್ಣ ಶರೀರದ ಮೇಲೆ ಕೂದಲನ್ನು ಹೊಂದಿದ್ದ ಕಾಲದಿಂದ ಇದು ನೆಪಮಾತ್ರವಾಗಿ ಉಳಿದುಕೊಂಡಿರುವ ಲಕ್ಷಣವಾಗಿದೆ. ಕೂದಲಿನ ವಿಕಾಸಾತ್ಮಕ ನಷ್ಟವು ಸ್ಥಳೀಯ ಅಮೇರಿಕನ್ನರು ಮತ್ತು ಪೂರ್ವ ಏಷ್ಯಾ ಹಾಗೂ ಆಗ್ನೇಯ ಏಷ್ಯಾದ ಜನರಂತಹ ಕೆಲವು ಜನರಲ್ಲಿ ಎದ್ದುಕಾಣುತ್ತದೆ. ಇವರು ಮುಖದ ಮೇಲೆ ಕಡಿಮೆ ಕೂದಲನ್ನು ಹೊಂದಿದ್ದರೆ, ಯೂರೋಪ್, ಮೆಡಿಟರೇನಿಯನ್, ಮತ್ತು ದಕ್ಷಿಣ ಏಷ್ಯಾ ವಂಶಾವಳಿಯ ಜನರು ಮತ್ತು ಐನು ಜನಾಂಗದವರು ಮುಖದ ಮೇಲೆ ಹೆಚ್ಚು ಕೂದಲು ಹೊಂದಿರುತ್ತಾರೆ.

ಗಂಡಸರ ಗಡ್ಡಗಳ ಕಡೆಗೆ ಸಮಾಜದ ಮನೋಭಾವಗಳು ಪ್ರಚಲಿತವಿರುವ ಸಾಂಸ್ಕೃತಿಕ ಧಾರ್ಮಿಕ ಸಂಪ್ರದಾಯಗಳು ಮತ್ತು ಪ್ರಸಕ್ತ ಯುಗದ ಫ಼್ಯಾಷನ್ ಪ್ರವೃತ್ತಿಗಳಂತಹ ಅಂಶಗಳನ್ನು ಅವಲಂಬಸಿ ವ್ಯಾಪಕವಾಗಿ ಬದಲಾಗಿವೆ. ಕೆಲವು ಧರ್ಮಗಳು (ಉದಾಹರಣೆಗೆ ಸಿಖ್ ಧರ್ಮ) ಬೆಳೆಸಿಕೊಳ್ಳಲು ಸಾಧ್ಯವಾದ ಎಲ್ಲ ಗಂಡಸರಿಗೆ ಪೂರ್ಣ ಗಡ್ಡವು ಅತ್ಯಗತ್ಯವೆಂದು ಪರಿಗಣಿಸಿವೆ, ಮತ್ತು ತಮ್ಮ ಅಧಿಕೃತ ಮತತತ್ವದ ಭಾಗವಾಗಿ ಅದನ್ನು ಆದೇಶಿಸುತ್ತವೆ. ಇತರ ಸಂಸ್ಕೃತಿಗಳು, ಅದನ್ನು ಅಧಿಕೃತವಾಗಿ ಆದೇಶಿಸದಿದ್ದರೂ ಕೂಡ, ಗಡ್ಡವು ಗಂಡಸಿನ ಪುರುಷತ್ವಕ್ಕೆ ಕೇಂದ್ರೀಯವಾಗಿ ಕಾಣುತ್ತವೆ, ಮತ್ತು ಬುದ್ಧಿವಂತಿಕೆ, ಶಕ್ತಿ, ಲೈಂಗಿಕ ಕೌಶಲ ಮತ್ತು ಉನ್ನತ ಸಾಮಾಜಿಕ ಸ್ಥಾನಮಾನದಂತಹ ಸದ್ಗುಣಗಳ ಉದಾಹರಣೆಗಳಾಗಿ ಕಾಣುತ್ತವೆ. ಆದರೆ, ಮುಖದ ಮೇಲಿನ ಕೂದಲು ಅಸಾಮಾನ್ಯವಾಗಿರುವ (ಅಥವಾ ಪ್ರಸಕ್ತವಾಗಿ ಫ಼್ಯಾಷನ್‍ನಲ್ಲಿಲ್ಲದಿರುವುದು) ಸಂಸ್ಕೃತಿಗಳಲ್ಲಿ, ಗಡ್ಡಗಳನ್ನು ಕಡಿಮೆ ನೈರ್ಮಲ್ಯ ಅಥವಾ ಅನಾಗರಿಕ, ಅಥವಾ ಅಪಾಯಕಾರಿ ವರ್ತನೆಯೊಂದಿಗೂ ಸಂಬಂಧಿಸಲಾಗುತ್ತದೆ.

ಗಡ್ಡವು ಪ್ರೌಢಾವಸ್ಥೆಯ ಅವಧಿಯಲ್ಲಿ ಬೆಳೆಯುತ್ತದೆ. ಗಡ್ಡದ ಬೆಳವಣಿಗೆಯು ಪ್ರದೇಶದಲ್ಲಿ ಡೈಹೈಡ್ರೊಟೆಸ್ಟಾಸ್ಟೆರೋನ್‍ನಿಂದ ಕೂದಲು ಕೋಶಕಗಳ ಉತ್ತೇಜನಕ್ಕೆ ಸಂಬಂಧ ಹೊಂದಿದೆ. ಇದು ಪ್ರೌಢಾವಸ್ಥೆಯ ನಂತರ ಗಡ್ಡದ ಬೆಳವಣಿಗೆ ಮೇಲೆ ಪ್ರಭಾವ ಬೀರುವುದನ್ನು ಮುಂದುವರಿಸುತ್ತದೆ. ವಿವಿಧ ಹಾರ್ಮೋನುಗಳು ಭಿನ್ನ ಪ್ರದೇಶಗಳ ಕೂದಲು ಕೋಶಕಗಳನ್ನು ಉತ್ತೇಜಿಸುತ್ತದೆ. ಉದಾಹರಣೆಗೆ, ಡಿಎಚ್‍ಟಿಯು ಮುಖದ ಮೇಲಿನ ಕೂದಲಿನ ಅಲ್ಪಾವಧಿಯ ಬೆಳವಣಿಗೆಯನ್ನು ಕೂಡ ಉತ್ತೇಜಿಸಬಹುದು. ದೇಹದ ತುದಿಯ ಮತ್ತು ಮುಖದ ಮೇಲಿನ ಕೂದಲಿನ ಬೆಳವಣಿಗೆಯೊಂದಿಗೆ ಡಿಎಚ್‍ಟಿಯ ಸಂಬಂಧದ ಹೊರತಾಗಿಯೂ, ಪ್ರಾಯಶಃ ಗಂಡು ಲೈಂಗಿಕ ಹಾರ್ಮೋನಾದ ಟೆಸ್ಟಾಸ್ಟೆರೋನ್ ಮುಖದ ಮೇಲಿನ ಕೂದಲ ಬೆಳವಣಿಗೆಯಲ್ಲಿ ಪ್ರಧಾನ ಹಾರ್ಮೋನಾಗಿದೆ, ಮತ್ತು ಡಿಎಚ್‍ಟಿಯು ನಿಬಿಡತೆಯ ಬದಲಾಗಿ ಗಡ್ಡದ ಬೆಳವಣಿಗೆಯ ವೇಗದೊಂದಿಗೆ ಹೆಚ್ಚು ನಿಕಟವಾಗಿ ಸಂಬಂಧಿಸಿದೆ; ಮೇಲಾಗಿ, ಈ ಹಾರ್ಮೋನುಗಳಲ್ಲಿ ಯಾವುದೂ ಒಂಟಿಯಾಗಿ ಕಾರ್ಯನಿರ್ವಹಿಸುವುದಿಲ್ಲ, ಬದಲಾಗಿ ಮುಖದ ಮೇಲಿನ ಗಂಡುಜನಕ ಗ್ರಾಹಿಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ.

"https://kn.wikipedia.org/w/index.php?title=ಗಡ್ಡ&oldid=871382" ಇಂದ ಪಡೆಯಲ್ಪಟ್ಟಿದೆ