ವಿಷಯಕ್ಕೆ ಹೋಗು

ಸಿರಗುಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿರಗುಪ್ಪ
ಸಿರಗುಪ್ಪ
town
Population
 (2001)
 • Total೨೨,೭೦೧

ಸಿರಗುಪ್ಪ ನಗರವು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ.

ಭೌಗೋಳಿಕ

[ಬದಲಾಯಿಸಿ]

ದಕ್ಷಿಣದಲ್ಲಿ ಬಳ್ಳಾರಿ, ನೈಋತ್ಯದಲ್ಲಿ ಹೊಸಪೇಟೆ ತಾಲ್ಲೂಕುಗಳೂ ಪಶ್ಚಿಮದಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕುಗಳೂ ಉತ್ತರ ಮತ್ತು ಪೂರ್ವದಲ್ಲಿ ಆಂಧ್ರಪ್ರದೇಶವೂ ಈ ತಾಲ್ಲೂಕನ್ನು ಸುತ್ತುವರಿದಿವೆ. ಹಟಚೊಳ್ಳಿ, ಸಿರಗುಪ್ಪ, ತೆಕ್ಕಲಕೋಟೆ ಮತ್ತು ಕರೂರು ಹೋಬಳಿಗಳು. 84 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 1,044 ಚ.ಕಿಮೀ. ಜನಸಂಖ್ಯೆ 2,35,179.

ಈ ತಾಲ್ಲೂಕಿನಾದ್ಯಂತ ಅಲ್ಲಲ್ಲಿ ಕೆಂಚನಗುಡ್ಡ ಬೆಟ್ಟಶ್ರೇಣಿಗೆ ಸೇರಿದ ಕಲ್ಲುಬೆಟ್ಟಗಳು ಮತ್ತು ಕಪ್ಪುಮಣ್ಣಿನ ವಿಶಾಲ ಬಯಲುಗಳನ್ನು ಕಾಣಬಹುದು. ತಾಲ್ಲೂಕಿನ ಪಶ್ಚಿಮ ಮತ್ತು ವಾಯವ್ಯ ಭಾಗದ ಉದ್ದಕ್ಕೂ ಈಶಾನ್ಯಾಭಿಮುಖವಾಗಿ ಈ ತಾಲ್ಲೂಕನ್ನು ರಾಯಚೂರು ಜಿಲ್ಲೆಯಿಂದ ವಿಂಗಡಿಸಿ ತುಂಗಭದ್ರಾ ನದಿ ಹರಿಯುತ್ತದೆ. ಆಗ್ನೇಯ ಭಾಗದಿಂದ ತಾಲ್ಲೂಕನ್ನು ಪ್ರವೇಶಿಸುವ ಹಗರಿನದಿ ಈ ತಾಲ್ಲೂಕಿನ ಮಧ್ಯದಲ್ಲಿ ಉತ್ತರಾಭಿಮುಖವಾಗಿ ಹರಿದು ಬಾಗವಾಡಿ ಬಳಿ ತುಂಗಭದ್ರಾ ನದಿಯನ್ನು ಕೂಡುತ್ತದೆ. ಹಗರಿ ನದಿಯ ಉಪಹೊಳೆಯೊಂದು ಬಳ್ಳಾರಿ ತಾಲ್ಲೂಕಿನಿಂದ ಸಿರಗುಪ್ಪ ತಾಲ್ಲೂಕನ್ನು ಪ್ರವೇಶಿಸಿ ಬೂದಗುಪ್ಪ ಬಳಿ ಹಗರಿ ನದಿಯನ್ನು ಸೇರುತ್ತದೆ. ತಾಲ್ಲೂಕಿನ ಈಶಾನ್ಯಭಾಗದಲ್ಲಿ ಹುಟ್ಟುವ ತೊರೆಯೊಂದು ತುಂಗಭದ್ರಾ ನದಿಯನ್ನು ಸೇರುತ್ತದೆ. ಈ ತಾಲ್ಲೂಕು ನದಿ ಮತ್ತು ಕಾಲುವೆಗಳಿಂದ ಸಾಕಷ್ಟು ಜಲಪೂರೈಕೆ ಪಡೆದಿದೆ. ತಾಲ್ಲೂಕಿನಲ್ಲಿ ವರ್ಷದ ಹೆಚ್ಚು ಕಾಲ ಒಣಹವೆ ಇದ್ದು ಬೇಸಗೆ ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ. ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 639.15 ಮಿಮೀ.

ಈ ತಾಲ್ಲೂಕಿನಲ್ಲಿ ಹೇರಳವಾಗಿ ಜಿಪ್ಸಮ್ ಖನಿಜ ದೊರೆಯುತ್ತದೆ. ಮನೆಕಟ್ಟಲು ಉಪಯುಕ್ತವಾದ ಗ್ರ್ಯಾನೈಟ್ ಕಲ್ಲು ಈ ತಾಲ್ಲೂಕಿನಲ್ಲಿ ದಮ್ಮೂರು ಮತ್ತು ಸಿರಿಗೆರೆ ಎಂಬ ಸ್ಥಳದಲ್ಲಿ ವಿಶೇಷವಾಗಿದೆ. ಇಲ್ಲಿ ಮಳೆ ಅವಲಂಬಿತ ಸಸ್ಯವರ್ಗ ಕಡಿಮೆ. ಹಗರಿ ನದಿಯ ದಂಡೆಗಳಲ್ಲಿ ವಿಶೇಷವಾಗಿ ಕುರುಚಲು ಕಾಡು ಕಂಡುಬರುತ್ತದೆ. ಬೇವು, ಮಾವು, ಕಕ್ಕೆ, ದಿಂಡಿಗ ಮೊದಲಾದ ಮರಗಳೂ ಬೆಳೆಯುತ್ತವೆ. ಗುಗ್ಗಳ, ಸೀತಾಫಲ, ಸೀಗೆಕಾಯಿ, ತೂಪರದ ಎಲೆ, ಜೇನು ಮೊದಲಾದವು ಇಲ್ಲಿನ ಅರಣ್ಯ ಉತ್ಪನ್ನಗಳು.

ಈ ತಾಲ್ಲೂಕಿನ ಕಪ್ಪುಮಣ್ಣಿನ ಜಮೀನು ಫಲವತ್ತಾಗಿದ್ದು ಜೋಳ, ಬತ್ತ, ಕಬ್ಬು, ಹತ್ತಿ, ನೆಲಗಡಲೆ-ಈ ಮುಖ್ಯ ಬೆಳೆಗಳಲ್ಲದೆ ನವಣೆ, ಹೆಸರು, ಸಾವೆ, ಮೆಣಸಿನಕಾಯಿ, ಹೊಗೆಸೊಪ್ಪು ಮೊದಲಾದ ಬೆಳೆ ಗಳನ್ನೂ ಬೆಳೆಯುತ್ತಾರೆ. ಈ ತಾಲ್ಲೂಕಿನಲ್ಲಿ ತುಂಗಭದ್ರಾ ನದಿಗೆ ಸಿರಗುಪ್ಪ ಮತ್ತು ದೇಸನೂರು ಅಣೆಕಟ್ಟಿದ್ದು ಅದರಿಂದ ಹೊರಡುವ ನಾಲೆಗಳು ವಿಜಯನಗರದ ಕಾಲದಿಂದಲೂ ಬಳಕೆಯಲ್ಲಿವೆ. ಇವುಗಳಿಂದ ಮತ್ತು ತುಂಗಭದ್ರಾ ಮೇಲ್ದಂಡೆ ನಾಲೆಯಿಂದ ತಾಲ್ಲೂಕಿನ ಜಮೀನಿಗೆ ನೀರೊದಗಿದೆ. ಸಿರಗುಪ್ಪಕ್ಕೆ 2ಕಿಮೀ ದೂರದಲ್ಲಿ ಸಿರಗುಪ್ಪ-ಆದವಾನಿ ಮಾರ್ಗದಲ್ಲಿ ವ್ಯವಸಾಯ ಸಂಶೋಧನ ಕೇಂದ್ರವಿದೆ.

ಕೊಠಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ಈ ತಾಲ್ಲೂಕಿನಲ್ಲಿ ಅನೇಕ ಕೈಗಾರಿಕೆಗಳಿವೆ. ತೆಕ್ಕಲಕೋಟೆ ಬಟ್ಟೆ ತಯಾರಿಕಾ ಕೇಂದ್ರ. ಸಿರಗುಪ್ಪದಲ್ಲಿ ಹತ್ತಿ ಸಂಸ್ಕರಿಸುವ ಅನೇಕ ಕಾರ್ಖಾನೆಗಳಿವೆ. ಪಾನೀಯಗಳು ಮತ್ತು ಹೊಗೆಸೊಪ್ಪಿಗೆ ಸಂಬಂಧಿಸಿದ ಹಲವಾರು ಉದ್ಯಮಗಳು ಸಿರಗುಪ್ಪ ದಲ್ಲಿವೆ. ಎಂಜಿನಿಯರಿಂಗ್ ಉದ್ಯಮಗಳಿವೆ. ಎಣ್ಣೆ ತಯಾರಿಕಾ ಘಟಕಗಳು, ಚರ್ಮದ ಉದ್ಯಮಗಳು ಈ ತಾಲ್ಲೂಕಿನಾದ್ಯಾಂತ ಕಂಡುಬರುತ್ತವೆ. ಸಿರಗುಪ್ಪದಲ್ಲಿ ಕುಶಲ ಕೈಗಾರಿಕಾ ತರಬೇತಿ ಸಂಸ್ಥೆ ಇದೆ.

ಸಿರಗುಪ್ಪದ ನೈಋತ್ಯಕ್ಕೆ 5ಕಿಮೀ ದೂರದಲ್ಲಿರುವ ಕೆಂಚನಗುಡ್ಡದಲ್ಲಿ ಎರಡು ಕೋಟೆಗಳಿವೆ. ಸಿರಗುಪ್ಪದ ದಕ್ಷಿಣಕ್ಕೆ 9 ಕಿಮೀ ದೂರದಲ್ಲಿರುವ ತೆಕ್ಕಲಕೋಟೆ (ನೋಡಿ- ತೆಕ್ಕಲಕೋಟೆ) ಈ ತಾಲ್ಲೂಕಿನ ಮುಖ್ಯ ಪಟ್ಟಣಗಳಲ್ಲೊಂದು. ತೆಕ್ಕಲಕೋಟೆಯ ಉತ್ತರಕ್ಕೆ 2 ಕಿಮೀ ದೂರದಲ್ಲಿರುವ ಮಳೆಕೋಟೆ ಎಂಬಲ್ಲಿಯ ವೀರಭದ್ರಸ್ವಾಮಿ ರಥೋತ್ಸವ, ತೆಕ್ಕಲಕೋಟೆಯ ನೈಋತ್ಯಕ್ಕೆ 12 ಕಿಮೀ ದೂರದಲ್ಲಿರುವ ಸಿರಿಗೆರೆಯ ನಾಗಲಿಂಗಸ್ವಾಮಿ ಜಾತ್ರೆ, ತೆಕ್ಕಲಕೋಟೆಯ ಆಗ್ನೇಯಕ್ಕೆ 16 ಕಿಮೀ ದೂರದಲ್ಲಿರುವ ದರೂರಿನ ವೀರಭದ್ರಸ್ವಾಮಿ ರಥೋತ್ಸವ ಪ್ರಸಿದ್ಧವಾದುವು.

ಸಿರಗುಪ್ಪ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬಳ್ಳಾರಿ-ರಾಯಚೂರು ಮಾರ್ಗದಲ್ಲಿ ಬಳ್ಳಾರಿಯ ಉತ್ತರಕ್ಕೆ 56 ಕಿಮೀ ದೂರದಲ್ಲಿದೆ. ಜನಸಂಖ್ಯೆ 66,440.

ವ್ಯಾಪಾರ ಕೇಂದ್ರವಾಗಿರುವ ಈ ಪಟ್ಟಣದಿಂದ ಹೆಚ್ಚು ಪ್ರಮಾಣದಲ್ಲಿ ಬತ್ತ, ತೆಂಗು, ಬೆಲ್ಲ, ಬಾಳೆಹಣ್ಣುಗಳನ್ನು ಹೊರಪ್ರದೇಶಗಳಿಗೆ ಕಳಿಸಲಾಗು ತ್ತದೆ. ಇಲ್ಲಿನ ಮುಖ್ಯ ಉತ್ಪಾದನೆ ಬೆಲ್ಲ, ಕಡಲೆಕಾಯಿ ಎಣ್ಣೆ ಮತ್ತು ಮರದ ಸಾಮಾನುಗಳು.

ಇತಿಹಾಸ

[ಬದಲಾಯಿಸಿ]

ಒಂದು ಕಾಲದಲ್ಲಿ ಸಿರಗುಪ್ಪ ಸಿರಿಕುಪ್ಪೆಯಾಗಿರಬೇಕು. ವಿಜಯನಗರದ ಅರಸರು ಕಟ್ಟಿಸಿದ ಕುತೂಹಲಕಾರಿ ಶಿಲ್ಪವುಳ್ಳ ಅಣೆಕಟ್ಟುಗಳು ಸಿರಗುಪ್ಪದ ಹತ್ತಿರವಿರುವ ಕೆಂಚನಗುಡ್ಡದ ಬಳಿ ಇವೆ. ಸಮೀಪದಲ್ಲೆ ಮಂತ್ರಾಲಯ ಮಠದ ಶ್ರೀವಸುಧೇಂದ್ರ ಸ್ವಾಮಿಗಳ ಬೃಂದಾವನವಿದೆ. ಇಲ್ಲಿಯ ಕೋಟೆ ಕೊತ್ತಲದ ಮೇಲೆ ಪ್ರಾಚೀನ ಶಂಭುಲಿಂಗ ದೇವಾಲಯವಿದೆ. ಸ್ಥಳೀಯ ಶ್ರೀಮಂತ ವ್ಯಾಪಾರಿಯೊಬ್ಬ 1887ರಲ್ಲಿ ಕಟ್ಟಿಸಿದ ಇಲ್ಲಿನ ಕೊಟ್ಟೂರು ಬಸವಣ್ಣ ದೇವಾಲಯ ಆಧುನಿಕ ನಿರ್ಮಾಣ.