ವಿಷಯಕ್ಕೆ ಹೋಗು

ವಿಜ್ಞಾನೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜ್ಞಾನೇಶ್ವರ ೧೧ನೆಯ ಶತಮಾನದಲ್ಲಿ ಬದುಕಿದ್ದ ಒಬ್ಬ ಭಾರತೀಯ ನ್ಯಾಯಶಾಸ್ತ್ರ ಪಂಡಿತ. ಕಲ್ಯಾಣಿ ಚಾಲುಕ್ಯ ಅರಸ, ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿ ವಿದ್ವಾಂಸನಾಗಿದ್ದನು.

ವಿಜ್ಞಾನೇಶ್ವರ ಬರೆದ ಪ್ರಮುಖ ಕೃತಿ ಮಿತಾಕ್ಷರ. ಇದು ಭಾರತದ ಪುರಾತನ ಕಾನೂನು ಗ್ರಂಥಗಳಲ್ಲಿ ಪ್ರಭಾವಶಾಲಿಯಾದ ಕೃತಿ.

ಇವನ ಜೀವನಕಾಲವು ಹನ್ನೊಂದನೆಯ ಶತಮಾನದ ಕೊನೆಯ ಭಾಗ ಮತ್ತು ಹನ್ನೆರಡನೆಯ ಶತಮಾನದ ಮೊದಲ ಭಾಗ.[]

ವಿಜ್ಞಾನೇಶ್ವರನು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮಾಸಿಮಾಡು ಎಂಬ ಹಳ್ಳಿಯಲ್ಲಿ ಹುಟ್ಟಿದನು. ಅವನು ಪೂರ್ವಮೀಮಾಂಸೆಯ ಗಂಭೀರ ವಿದ್ಯಾರ್ಥಿಯಾಗಿದ್ದನು.[]

ಯಾಜ್ಞವಲ್ಕ್ಯ ಸ್ಮೃತಿಗೆ ಬರೆದಿರುವ ವ್ಯಾಖ್ಯಾನವೆಂದು ಹೇಳಲಾಗಿರುವ ‘ಮಿತಾಕ್ಷರಾ’ ಅವನ ಪ್ರಸಿದ್ಧವಾದ ಕೃತಿ. ಆದರೆ ಅದು ಕೇವಲ ವ್ಯಾಖ್ಯಾನವಾಗಿ ಉಳಿಯದೆ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ಅದು ನೂರಾರು ವರ್ಷಗಳಿಂದ ಕೂಡಿಕೊಂಡಿದ್ದ ತಿಳಿವಳಿಕೆಯನ್ನು ಬಹಳ ವ್ಯವಸ್ಥಿತವಾಗಿ ಒಂದು ಕಡೆ ಅಳವಡಿಸಿಕೊಟ್ಟ ಬೃಹತ್ ಕೃತಿ. ಅದರಲ್ಲಿ ಬಹಳ ಒತ್ತಾಗಿ ಮುದ್ರಿತವಾಗಿರುವ ಸುಮಾರು 500 ಪುಟಗಳಿವೆ. ಅವನು ತನ್ನ ಬರವಣಿಗೆಯನ್ನು ಕೇವಲ ‘ಯಾಜ್ಞವಲ್ಕ್ಯ ಸ್ಮೃತಿಗೆ’ ಸೀಮಿತಗೊಳಿಸಿ ಕೊಳ್ಳುವುದಿಲ್ಲ. ಸ್ಮೃತಿಗಳಿಗೆ ಅದಕ್ಕಿಂತ ಹಿಂದೆ ಬಂದಿರುವ ವ್ಯಾಖ್ಯಾನಗಳನ್ನೂ ಅರ್ಥೈಸುವ ಹಾಗೂ ವಿಮರ್ಶಿಸುವ ಕೆಲಸದಲ್ಲಿ ಅವನು ತೊಡಗಿಕೊಳ್ಳುತ್ತಾನೆ. ಇತರ ಸ್ಮೃತಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪುಸ್ತಕಗಳು ಅವನ ಪರಿಶೀಲನೆಗೆ ಒಳಪಡುತ್ತವೆ. ಇಂದಿಗೂ ಕೂಡ ‘ಮಿತಾಕ್ಷರಾ’ ಕೃತಿಯು ಹಿಂದೂ ಕಾನೂನುಗಳ ಎಲ್ಲ ಆಯಾಮಗಳ ಬಗೆಗ ಮಾಹಿತಿ ನೀಡುವ ಹಾಗೂ ವ್ಯಾಖ್ಯಾನಿಸುವ ಪುಸ್ತಕವೆಂದು ಅದನ್ನು ಬಳಸುತ್ತಾರೆ. ಆಸ್ತಿಯ ಹಕ್ಕುಗಳು, ದತ್ತಕ ಪದ್ಧತಿ, ಸ್ಥಿರ ಆಸ್ತಿಗಳ ಹಂಚಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಹಿಂದೂ ನ್ಯಾಯಶಾಸ್ತ್ರದ ನಿಲುವುಗಳನ್ನು ತಜ್ಞರು ಈ ಪುಸ್ತಕಕ್ಕೆ ಮೊರೆಹೋಗುತ್ತಾರೆ. ‘ಮಿತಾಕ್ಷರಾ’ದ ವಿಶೇಷ ಲಕ್ಷಣವೆಂದರೆ, ‘ಹಿಂದೂ ಆವಿಭಕ್ತ ಕುಟುಂಬಗಳ’ ಒಡೆತನದಲ್ಲಿರುವ ಆಸ್ತಪಾಸ್ತಿಗಳ ಹಂಚಿಕೆಯ ಸಂದರ್ಭದಲ್ಲಿ ಅದು ಬಳಸುವ ತಾತ್ವಿಕತೆ. ಈ ಪದ್ಧತಿಯ ಪ್ರಕಾರ ತಂದೆಯು ಜೀವಂತವಾಗಿ ಇರುವಾಗಲೂ ಅವಿಭಕ್ತ ಕುಟುಂಬಕ್ಕೆ ಸೇರಿದ ಭೂಮಿಕಾಣಿಗಳನ್ನು ಮಕ್ಕಳ ನಡುವೆ ಹಂಚಬಹುದು. ಆದರೆ, ‘ದಾಯಭಾಗ’ ಕಾನೂನು ವ್ಯವಸ್ಥೆಯು ಇಂತಹ ಹಂಚಿಕೆಯನ್ನು ಒಪ್ಪುವುದಿಲ್ಲ.[]

ಅನುವಾದ

[ಬದಲಾಯಿಸಿ]

ಹೆನ್ರಿ ಥಾಮಸ್ ಕೋಲ್ ಬ್ರೂಕ್ ಅವರು ಈ ಪುಸ್ತಕವನ್ನು ಕ್ರಿ.ಶ. 1810 ರಷ್ಟು ಹಿಂದೆಯೇ ಇಂಗ್ಲಿಷಿಗೆ ಅನುವಾದ ಮಾಡಿದರು. ಏಕೆಂದರೆ, ಬ್ರಟಿಷ್ ಆಡಳಿತವ್ಯವಸ್ಥೆಗೆ ಇಡೀ ಭಾರತಕ್ಕೆ ಅನ್ವಯಿಸಬಹುದಾದ, ಎಲ್ಲರಿಗೂ ಸಮ್ಮತವಾಗುವ ಒಂದು ಕಾನೂನುಸಂಹಿತೆಯ ಅಗತ್ಯವಿತ್ತು. ಬಂಗಾಳ ಮತ್ತು ಅಸ್ಸಾಂಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳೂ ‘ಮಿತಾಕ್ಷರಾ’ದ ಅಧಿಕೃತತೆಯನ್ನು ಒಪ್ಪಿಕೊಂಡವು. ಆ ಎರಡು ರಾಜ್ಯಗಳು ಮಾತ್ರ ಜೀಮೂತವಾಹನನ ‘ದಾಯಭಾಗ’ ವ್ಯವಸ್ಥೆಯ ಪರವಾದ ನಿಲುವನ್ನು ತಳೆದವು.

ಉಲ್ಲೇಖಗಳು

[ಬದಲಾಯಿಸಿ]
  1. "ವಿಜ್ಞಾನೇಶ್ವರ - ಮಿತಾಕ್ಷರ". www.shastriyakannada.org , 14 November 2017. Archived from the original on 26 ಅಕ್ಟೋಬರ್ 2020. Retrieved 14 ನವೆಂಬರ್ 2017.
  2. Sen, Sailendra (2013). A Textbook of Medieval Indian History. Primus Books. pp. 52–53. ISBN 978-9-38060-734-4.
  3. Vijnaneshwara