ಮೈಸೂರಿನ ಕೆರೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೈಸೂರಿನ ಕೆರೆಗಳು[೧][೨] ಮೈಸೂರಿನ ರಮ್ಯ ವಾತಾವರಣಕ್ಕೆ[೩], ಹಸಿರು ಸಿರಿಗೆ, ಜೈವಿಕ ತಾಣಕ್ಕೆ, ಜೀವವೈವಿಧ್ಯತೆಗೆ ಹೆಸರಾಗಿವೆ. ಬರಗಾಲದಿಂದ ತತ್ತರಿಸಿದ ಪರಿಣಾಮವೇ ಕೆರೆಗಳ ನಿರ್ಮಾಣ. ಅಂದಿದ್ದ ಕೆರೆ[೪]ಗಳಲ್ಲಿ ಇಂದು ಬಹಳಷ್ಟು ಕೆರೆಗಳು ಕಣ್ಮರೆಯಾಗಿ ಕಾಲಗರ್ಭದಲ್ಲಿ ಹೂತು ಹೋಗಿದ್ದರೆ, ಕೆಲವು ಕೆರೆಗಳ ಹೆಸರು ಆಯಾಯ ಜಾಗಕ್ಕೆ ಇಂದಿಗೂ ಇರುವುದನ್ನು ಮನಗಾಣಬಹುದಾಗಿದೆ.

ಇತಿವೃತ್ತ[ಬದಲಾಯಿಸಿ]

ಬಯಲು ಪ್ರದೇಶಗಳಲ್ಲಿ ಕೆರೆಗಳ ಸಂಪ್ರದಾಯ ಹಳೆಯದು. ಮೈಸೂರು ಪ್ರಾಂತ್ಯವು ರಾಜಾಶ್ರಯದಲ್ಲಿ ಅನೇಕ ಕೆರೆಕಟ್ಟೆಗಳನ್ನು ಹೊಂದಿತ್ತು. ಕೃಷಿಗೆ ನೀರು, ದನಕರುಗಳು, ಪ್ರಾಣಿಗಳು, ಪಕ್ಷಿಗಳಿಗೆ ಕುಡಿಯಲು ಮತ್ತು ಮೇವಿಗೆ ವರ್ಷಪೂರ್ತಿ ನೀರು ಒದಗಿಸಲು ಈ ಕೆರೆಗಳು ಜಲಾಶ್ರಯ ತಾಣಗಳಾಗಿದ್ದವು. ಜೊತೆಗೆ ಜನವಸತಿಗೆ, ಜಮೀನು ಹಾಗೂ ಗೋಮಾಳಕ್ಕೆ ಅವಶ್ಯಕವಾಗಿದ್ದವು. ಮೈಸೂರು ತಾಲೂಕಿನ ಶೇ. 25 ಕೆರೆಗಳೀಗ ನಿವೇಶನ ಗಳಾಗಿವೆ. ಅಭಿವೃದ್ಧಿ ಚಟುವಟಿಕೆಗಳಿಗಾಗಿ ಈ ಕೆರೆಗಳನ್ನು ಭೂ ಪರಿವರ್ತನೆಗೊಳಿಸಲಾಗಿದೆ. ಹಲವು ಕೆರೆಗಳು ಅಭಿವೃದ್ಧಿ ಚಟುವಟಿಕೆಗಳಿಗಾಗಿ ಒತ್ತುವರಿ ಆಗಿವೆ. ಇದಲ್ಲದೇ ಮೈಸೂರಿನ ಬಹುತೇಕ ಕೆರೆಗಳಿಗೆ ಕಾಲುವೆ ಮೂಲಕ ಚರಂಡಿ ನೀರು ಹರಿಯುತ್ತಿದ್ದು, ಲಿಂಗಾಂಬುದಿ, ಕಾರಂಜಿ, ಕುಕ್ಕರಹಳ್ಳಿಹಾಗೂ ಬೋಗಾದಿ ಕೆರೆಗಳು ಕೊಳಚೆ ನೀರಿನಿಂದ ಬಾದಿತವಾಗಿವೆ. ವರ್ತುಲ ರಸ್ತೆ ನಿರ್ಮಾಣದಿಂದಾಗಿ ನಗರದ ಸಂಚಾರ ದಟ್ಟಣೆ ಕ್ಷೀಣಿಸಿದೆಯಾದರೂ ಐದು ಕೆರೆಗಳು ಅಳಿವಿನ ಅಂಚಿಗೆ ಸಿಲುಕಿವೆ.

ಮೈಸೂರಿನಲ್ಲಿ ಇದ್ದ ಕೆರೆಗಳು[ಬದಲಾಯಿಸಿ]

  1. ದೇವನೂರು ಕೆರೆ
  2. ಬೊಮ್ಮನಹಳ್ಳಿಯ ಕೆರೆ
  3. ಜಯನಗರ ಕೆರೆ
  4. ಕಾಮನಕೆರೆ/ಹುಂಡಿಕೆರೆ
  5. ಹೆಬ್ಬಾಳ ಕೆರೆ
  6. ಬೋಗಾದಿ ಮರಿಯಪ್ಪ ಕೆರೆ
  7. ಹಿನಕಲ್ ಕೆರೆ
  8. ರಾಯನಕೆರೆ ವಸವನ ಕಟ್ಟೆ
  9. ತಾವರೆ ಕಟ್ಟೆ
  10. ಪರಸಯ್ಯನ ಕೆರೆ
  11. ದೊಬಿಘಾಟ್ ಕೆರೆ
  12. ದೊಡ್ಡ್ ಕೆರೆ
  13. ಜೀವಣ್ಣರಾಯನ ಕಟ್ಟೆ
  14. ಸುಬ್ಬರಾಯನ ಕೆರೆ
  15. ಕ್ಯಾತಮಾರನಹಳ್ಳಿ ಕೆರೆ
  16. ಮಳಲವಾಡಿ ಕೆರೆ
  17. ಕಾರಂಜಿ ಕೆರೆ
  18. ಕುಕ್ಕರಹಳ್ಳಿ ಕೆರೆ
  19. ಲಿಂಗಾಂಬುದಿ ಕೆರೆ
  20. ದಳವಾಯಿ ಕೆರೆ ಮೊದಲಾದುವು.

ದೇವನೂರು ಕೆರೆ[ಬದಲಾಯಿಸಿ]

೧೯೫೪ ರಲ್ಲಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಮೈಸೂರು ನಗರದಿಂದ ೧೨ ಕಿ.ಮಿ ದೂರದಲ್ಲಿದೆ. ಈ ಕೆರೆಯ ವ್ಯಾಪ್ತಿ ೫೦ಕ್ಕೂ ಹೆಚ್ಚು ಕಿ.ಮೀ ಪ್ರದೇಶ. ಇದರ ನೀರಿನ ಸಂಗ್ರಹ ಸಾಮರ್ಥ್ಯ ೪೫೮ ಮಿಲಿಯನ್ ಲೀಟರ್ಸ್. ಈಗ ಇದರಲ್ಲಿ ಹೂಳು ತುಂಬಿಕೊಂಡಿದೆ. ಇಲ್ಲಿಗೆ ಹರಿದು ಬರುವ ಕಾಲುವೆಗಳು, ಕಣಿವೆಗಳು ಬತ್ತಿ ಹೋಗಿ, ಒತ್ತುವರಿಗೊಳಗಾಗಿವೆ.

ಬೊಮ್ಮನಹಳ್ಳಿಯ ಕೆರೆ[ಬದಲಾಯಿಸಿ]

ಮೈಸೂರು ನಗರದಿಂದ ೧೦ ಕಿ.ಮಿ ದೂರದಲ್ಲಿದೆ. ೧೬ ಎಕರೆ ಪ್ರಧೇಶದಲ್ಲಿರುವ ಕೆರೆಯ ಮೇಲೆ ಈಗ ಕೆಐಎಡಿಬಿಯವರು ಈ ಕೆರೆಯ ಜಾಗವನ್ನು ಸ್ವಾಧೀನ ಪಡಿಸಿಕೊಂಡು ನಿವೇಶನ ಮಾಡಲು ಹೊರಟಿದೆ.

ಜಯನಗರ ಕೆರೆ[ಬದಲಾಯಿಸಿ]

ಇದನ್ನು 'ಮರಳವಾಡಿ ಕೆರೆ' ಎಂದು ಕರೆಯಲಾಗುತ್ತಿತ್ತು. ೫೩ ಎಕರೆ ಪ್ರದೇಶದ ಈ ಕೆರೆ ಈಗ ಎಲ್ಲಾ ಕಡೆಯಿಂದಲೂ ಒತ್ತುವರಿಗೆ ಒಳಪಟ್ಟಿದೆ. ಕೆರೆಯ ವ್ಯಾಪ್ತಿಯ ೧೫ ಎಕರೆ ವ್ಯಾಪ್ತಿಯ ಪ್ರದೇಶವನ್ನು ಸರ್ಕಾರವೇ ಇಸ್ಕಾನ್ ಸ್ಂಸ್ಥೆಗೆ ಕೊಟ್ಟಿದೆ. ಈ ಸಂಸ್ಥೆ ಈಗಲ್ಲಿ ಕಟ್ಟಡವನ್ನು ಕಟ್ಟಿದೆ.

ಕಾಮನಕೆರೆ/ಹುಂಡಿಕೆರೆ[ಬದಲಾಯಿಸಿ]

ಮೈಸೂರು ನಗರದಿಂದ ೧೦ ಕಿ.ಮಿ ದೂರದಲ್ಲಿದೆ. ಇದು ಸಹ ಒತ್ತುವರಿಗೊಳಗಾಗಿದೆ.

ಈಗ ಇರುವ ಪ್ರಮುಖ ಕೆರೆಗಳು[ಬದಲಾಯಿಸಿ]

  1. ಕಾರಂಜಿ ಕೆರೆ
  2. ಕುಕ್ಕರಹಳ್ಳಿ ಕೆರೆ
  3. ಲಿಂಗಾಂಬುದಿ ಕೆರೆ

ಕಾರಂಜಿ ಕೆರೆ[ಬದಲಾಯಿಸಿ]

ಮೈಸೂರು ಪ್ರಾಣಿ ಸಂಗ್ರಹಾಲಯದ ಒಡೆತನದ ಕಾರಂಜಿ ಕೆರೆ ಪ್ರಾಕೃತಿಕ ಸೊಬಗನ್ನೊಳಗೊಂಡ ಸುಮಾರು 120 ಎಕರೆ ವಿಸ್ತೀರ್ಣವುಳ್ಳ, ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ತಾಣ. ಒಂದು ಕಾಲದಲ್ಲಿ ವಲಸೆ ಹಕ್ಕಿಗಳ ಬೀಡಾಗಿದ್ದ ಈ ಕೆರೆ, ಮನು ಕುಲದ ಬೇಜವಾಬ್ದಾರಿಯಿಂದ ಪಕ್ಷಿಗಳ ತಿರಸ್ಕಾರಕ್ಕೆ ತುತ್ತಾಗಿದೆ! ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕಿನ ಆರ್ಥಿಕ ನೆರವಿನಿಂದ ಕೈಗೊಂಡ ಅಭಿವೃದ್ದಿ ಕಾರ್ಯಗಳಿಂದ ಪರಿಸ್ಥಿತಿ ಸುಧಾರಿಸುತ್ತಿದೆ.

ಕುಕ್ಕರಹಳ್ಳಿ ಕೆರೆ[ಬದಲಾಯಿಸಿ]

ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಯನ್ನು ಶ್ರೀ ಮುಮ್ಮಡಿ ಕೃಷ್ಣರಾಜ ವಡೆಯರ್ ಅವರು 1864ರಲ್ಲಿ ಕಟ್ಟಿಸಿದರೆಂಬ ದಾಖಲೆ ಇದೆ. ಸುಮಾರು 58 ಹೆಕ್ಟರ್ ವಿಸ್ತೀರ್ಣ (ಸುಮಾರು 150 ಎಕರೆ) 5 ಕಿ.ಮಿ. ದಡವನ್ನು ಹೊಂದಿರುವ ಈ ಕೆರೆ ಮಾನಸಗಂಗೋತ್ರಿ, ರಂಗಾಯಣ ಹಾಗು ಕೇಂದ್ರ ಆಹಾರ ಸಂಶೋದನಾಲಯದ ಮಧ್ಯದಲ್ಲಿದೆ. ಸುಮಾರು 10000 ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದ್ದ ಹಾಗು ನಗರದ ದಾಹವನ್ನು ಬಹು ಮಟ್ಟಿಗೆ ತಣಿಸುತ್ತಿದ್ದ ಕೆರೆ ಈಗ ಭೂ ಕಬಳಿಕೆಯ ಪರಿಣಾಮವಾಗಿ ಮರಣದ ಅಂಚನ್ನು ತಲುಪಿದೆ. ಕೆರೆಯ ಒಡೆತನ ಈಗ ಮೈಸೂರು ವಿಶ್ವ ವಿದ್ಯಾಲಯಕ್ಕೆ ಸೇರಿದೆ. ಅವರು ಹಾಗು ನಾಗರಿಕ ವೇದಿಕೆ ಕೆರೆಯನ್ನು ಉಳಿಸಿಕೊಳ್ಳುವ ಹರ ಸಾಹಸ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ಹತ್ತರಿಂದ ಹದಿನೈದು ಸಾವಿರದವರೆಗೆ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿತ್ತೆನ್ನುವುದು ಪಕ್ಷಿ ವೀಕ್ಷಕರ ಅಭಿಪ್ರಾಯ. ಈಚೆಗೆ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ನೀರಿನ ಗುಣಮಟ್ಟ ಕಡಿಮೆಯಾಗಿರುವುದು, ಕೆರೆಯ ವತ್ತುವರಿಯಾಗಿರುವುದು ಮುಖ್ಯ ಕಾರಣವೆನ್ನಲಾಗುತ್ತಿದೆ. ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕಿನ ಆರ್ಥಿಕ ನೆರೆವಿನಿಂದ ಸುಮಾರು 6-7 ವರುಷಗಳ ಹಿಂದೆ ಕೈಗೊಂಡ ಪುನರುಜ್ಜೀವನ ಕೆಲಸಗಳಿಂದ ಈಗ ಕೆರೆಯ ನೋಟ ಸುಂದರವಾಗಿದೆ. ಪಕ್ಷಿಗಳನ್ನು ನಿಧಾನವಾಗಿ ಆಕರ್ಷಿಸುತ್ತಿದೆ.

ಲಿಂಗಾಂಬುದಿ ಕೆರೆ[ಬದಲಾಯಿಸಿ]

ಮೈಸೂರಿನ ಹೊರವಲಯದಲ್ಲಿರುವ ಲಿಂಗಾಂಬುದಿ ಅತಿ ಹೆಚ್ಚು ಪಕ್ಷಿಗಳನ್ನು ಆಕರ್ಷಿಸುವ, 217 ಎಕರೆ ವಿಸ್ತಾರದ ಪಕ್ಷಿಧಾಮ ಹಾಗು ರಕ್ಷಿತಾರಣ್ಯ. ಈ ಕೆರೆಯು 1828ರಲ್ಲಿ ರಾಣಿ ಲಿಂಗಾಜಮ್ಮಣ್ಣಿಯವರಿಂದ ನಿರ್ಮಾಣವಾಯಿತೆಂದು ದಾಖಲೆಯಿದೆ. ನಗರದಿಂದ ಸಾಕಷ್ಟು ದೂರದಲ್ಲಿದ್ದ ಈ ಕೆರೆಗೆ ಬಹಳ ವಿಸ್ತಾರವಾದ ಜಲಾನಯನ ಪ್ರದೇಶವಿದ್ದು ನೀರಿನ ಪೂರೈಕೆ ಚೆನ್ನಾಗಿ ಆಗುತ್ತಿತ್ತೆನ್ನುವ ಮಾತಿದೆ. ವಿಸ್ತಾರವಾದ ಈ ಕೆರೆಯಿಂದ ಸುತ್ತ-ಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಪೂರೈಕೆ, ದನ ಕರುಗಳ ನೀರಿನ ಅವಶ್ಯಕತೆ, ವ್ಯವಸಾಯದ ನೀರಿನ ಅವಶ್ಯಕತೆ, ಮೀನುಗಾರಿಕೆ, ಗ್ರಾಮವಾಸಿಗಳ ಸ್ವಚ್ಚತೆ, ಮುಂತಾದ ಅನೇಕ ಅವಶ್ಯಕತೆಗಳ ಪೂರೈಕೆ ಸುಸೂತ್ರವಾಗಿ ನೆರವೇರುತ್ತಿತ್ತು. ಈಗ ನಗರದ ವಿಸ್ತೀರ್ಣ ಕಾರಣವಾಗಿ ಕೆರೆಯ ಸುತ್ತ ಮುತ್ತಲೆಲ್ಲ ಮನೆಗಳಾಗಿ, ಕೆರೆಗೆ ನೀರಿನ ಒರತೆ ಇಲ್ಲದೆ ಜಲ ವಿಸ್ತಾರ ಬಹಳ ಕಡಿಮೆಯಾಗಿದೆ. ಭೇಟಿ ಕೊಡುವ ಪಕ್ಷಿ ಸಂಕುಲವೂ ಕಡಿಮೆಯಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://nanjundaswamys.blogspot.in/2012/09/blog-post.html
  2. https://kannada.nativeplanet.com/mysore/
  3. "ಆರ್ಕೈವ್ ನಕಲು". Archived from the original on 2017-10-26. Retrieved 2017-11-07.
  4. https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95