ನಾನಾ ಫಡ್ನವೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nana Fadnavis

ನಾನಾ ಫಡ್ನವೀಸ್ -ಮಹಾರಾಷ್ಟ್ರದ ಒಬ್ಬ ರಾಜಕಾರಣಿ. ಇಂಗ್ಲಿಷರು ಪ್ರಬಲರಾಗುತ್ತಿದ್ದಾಗ ಮರಾಠಾ ಶಕ್ತಿಯನ್ನು ಸಂಘಟಿಸಿದವನು. ಈತನ ಹೆಸರು ಜನಾರ್ದನ್ ಭಾನು. ನಾನಾ ಫಡ್ನವೀಸನೆಂದು ಇತಿಹಾಸದಲ್ಲಿ ಪ್ರಖ್ಯಾತನಾಗಿದ್ದಾನೆ.

ಬದುಕು[ಬದಲಾಯಿಸಿ]

ಈತನ ಪೂರ್ವಿಕರು ಬಾಲಾಜೀ ವಿಶ್ವನಾಥ ಮುಂತಾದ ಪೇಶ್ವೆಗಳ ಕಾಲದಲ್ಲಿ ಸರ್ಕಾರದ ಅಧಿಕಾರಿಗಳಾಗಿದ್ದರು. ತಾಯಿಯನ್ನು ಕಳೆದುಕೊಂಡು, ಪಾಣಿಪಟ್ ಯುದ್ಧರಂಗದಿಂದ ಪಾರಾಗಿ ಹಿಂದಿರುಗಿದ್ದ ಈತನನ್ನು ಪೇಶ್ವೆ 1ನೆಯ ಮಾಧವರಾಯ ಮೊದಲು ಆಪ್ತ ಕಾರ್ಯದರ್ಶಿಯನ್ನಾಗಿಯೂ ಆಮೇಲೆ ಫಡ್ನವೀಸ್ ಎಂದರೆ ರಾಷ್ಟ್ರದ ಆರ್ಥಿಕ ಮೇಲ್ವಿಚಾರಕನನ್ನಾಗಿಯೂ ನೇಮಿಸಿಕೊಂಡಿದ್ದ. ನಾನಾ ಫಡ್ನವೀಸ್ ಬುದ್ಧಿಶಾಲಿಯೆಂದು ಪ್ರಖ್ಯಾತನಾಗಿದ್ದ. ಅವನು ಪೇಶ್ವೆಯ ಕಚೇರಿಯ ಮೇಲ್ವಿಚಾರಕನಾಗಿ ಜಿಲ್ಲೆಗಳ ಮತ್ತು ಹಳ್ಳಿಗಳ ಅಧಿಕಾರಿಗಳನ್ನು ಅಂಕೆಯಲ್ಲಿಟ್ಟಿದ್ದ. ಸರ್ಕಾರದ ಎಲ್ಲ ಪತ್ರವ್ಯವಹಾರಗಳು ನಾನಾಫಡ್ನವೀಸನ ಉಸ್ತುವಾರಿಯಲ್ಲಿಯೇ ನಡೆಯುತ್ತಿದ್ದವು. ಪೇಶ್ವೆ 1ನೆಯ ಮಾಧವರಾಯನ ಮರಣಾನಂತರ (1772) ಪೇಶ್ವೆ ನಾರಾಯಣರಾಯನ ಕಾಲದಲ್ಲೂ ನಾನಾ ಫಡ್ನವೀಸ್ ಅಧಿಕಾರದಲ್ಲಿ ಮುಂದುವರಿದ. ಆದರೆ ಅಧಿಕಾರಾಕಾಂಕ್ಷಿಯಾಗಿದ್ದ ರಘೋಬನ ಸಂಚಿನಿಂದ ನಾರಾಯಣರಾಯ ಕೊಲೆಯಾದ. ರಘೋಬನೇ ಪ್ರಬಲನಾದ ಆ ವೇಳೆಗೆ ಪೇಶ್ವೆಯ ಪತ್ನಿಗೆ ಗಂಡು ಸಂತಾನವಾಯಿತು. ಪೇಶ್ವೆಯ ಅನುಯಾಯಿಗಳು ಆ ಮಗುವನ್ನು ಪೇಶ್ವೆಯೆಂದು ಪರಿಗಣಿಸಿ ಅವನ ಪರವಾಗಿ ರಾಜ್ಯವಾಳಲು ಮಂಡಲಿಯೊಂದನ್ನು ನೇಮಿಸಿದರು. ಅವರಿಗೆ ನಾನಾ ಫಡ್ನವೀಸನ ಬೆಂಬಲ ದೊರಕಿತು. ನಾರಾಯಣರಾಯನ ಕೊಲೆ ಮಾಡಿಸಿದ ರಘೋಬನ ಮೇಲೆ ಸೇಡು ತೀರಿಸಿಕೊಳ್ಳಲು ಅವನು ಪಣ ತೊಟ್ಟ. ಮಂಡಲಿಯಲ್ಲಿ ನಾನಾ ಫಡ್ನವೀಸನದೇ ಮೇಲುಗೈಯಾಗಿತ್ತು. ಅವನು ರಘೋಬನನ್ನು ಪೀಡಿಸಿದ. ರಘೋಬ ಮುಂಬಯಿಯಲ್ಲಿದ್ದ ಇಂಗ್ಲಿಷರ ನೆರವನ್ನು ಬೇಡಿದ. ಇಂಗ್ಲಿಷರು ಫಡ್ನವೀಸ್ ನೇತೃತ್ವದ ಪುಣೆ ಸರಕಾರದೊಂದಿಗೆ ಸ್ನೇಹದಿಂದಿದ್ದರಾದರೂ ಭಾರತೀಯರ ಈ ಒಳಜಗಳದಲ್ಲಿ ಪ್ರವೇಶಿಸುವ ಸಂದರ್ಭವನ್ನು ಬಳಸಿಕೊಳ್ಳದಿರಲಿಲ್ಲ. ಅವರು ರಘೋಬನ ನೆರವಿಗೆ ಬಂದರು. ಆದರೆ ಕಲ್ಕತ್ತೆಯಲ್ಲಿದ್ದ ಗವರ್ನರ್-ಜನರಲ್ ಇದನ್ನು ಒಪ್ಪಲಿಲ್ಲ. ಅವರ ಆದೇಶದಂತೆ ಮುಂಬಯಿಯ ಇಂಗ್ಲಿಷರು ಹಿಂದೆಗೆಯಬೇಕಾಯಿತು. ಅವರು ನಾನಾ ಫಡ್ನವೀಸನೊಂದಿಗೆ ಒಪ್ಪಂದ ಮಾಡಿಕೊಂಡರು. ಆದರೆ ಈ ಒಡಂಬಡಿಕೆ ಬಹುಕಾಲ ಮುಂದುವರಿಯಲಿಲ್ಲ. ನಾನಾ ಫಡ್ನವೀಸ್ ಫ್ರೆಂಚರೊಂದಿಗೆ ಸ್ನೇಹವಾಗಿದ್ದನೆಂಬ ಕಾರಣದಿಂದ ಇಂಗ್ಲಿಷರು ಮರಾಠರ ಮೇಲೆ ಯುದ್ಧ ಮಾಡಿದರು. ಆದರೆ ಇಂಗ್ಲೀಷರೇ ಸೋಲಬೇಕಾಯಿತು. ಅಲ್ಲದೆ ತಮ್ಮ ವಶದಲ್ಲಿದ್ದ ಪ್ರದೇಶಗಳನ್ನು ಬಿಟ್ಟುಕೊಡಬೇಕಾಯಿತು. ಗವರ್ನರ್ ಜನರಲ್ ಇದರಿಂದ ಕೋಪಗೊಂಡು ಕರ್ನಲ್ ಗೊಡಾರ್ಡನ ನೇತೃತ್ವದಲ್ಲಿ ದೊಡ್ಡ ಸೈನ್ಯವೊಂದನ್ನು ಕಳಿಸಿದ. ಇದು ಪುಣೆಯ ಕಡೆಗೆ ಮುಂದುವರಿಯುತ್ತಿದ್ದಾಗ ಸೋಲನ್ನು ಅನುಭವಿಸಿತು.

ನಾನಾ ಫಡ್ನವೀಸ್ ದಕ್ಷತೆಯನ್ನೂ ದೂರಾಲೋಚನಾ ಶಕ್ತಿಯನ್ನೂ ಪ್ರದರ್ಶಿಸಿದ. ಗೊಡಾರ್ಡನ ಸೋಲಿಗೆ ನಾನಾ ಫಡ್ನವೀಸನೇ ಮುಖ್ಯ ಕಾರಣ. ಅವರು ಇಂಗ್ಲಿಷರೊಡನೆ ಸಾಲ್ಬಾಯ್ ಒಪ್ಪಂದ (1782) ಮಾಡಿಕೊಂಡು ಪೇಶ್ವೆಯ ಅಧಿಕಾರವನ್ನು ಉಳಿಸಿದ. ಮಹಾರಾಷ್ಟ್ರದ ಅಂತಃಕಲಹಗಳ ಮಧ್ಯೆ ನಾನಾ ಫಡ್ನವೀಸ್ ತನ್ನ ಧ್ಯೇಯವನ್ನು ಸಾಧಿಸಿದ.

ಮರಾಠಾ ಒಕ್ಕೂಟದ ಮೇಲೆ ಅಧಿಕಾರ ಸ್ಥಾಪಿಸಬೇಕೆಂದೂ ಉತ್ತರ ಭಾರತದಲ್ಲಿ ತನ್ನ ಕೈ ಬಲಪಡಿಸಿಕೊಳ್ಳಬೇಕೆಂದೂ ಆಕಾಂಕ್ಷೆ ಹೊಂದಿದ್ದ ಮಹಾದಾಜಿ ಸಿಂಧ್ಯ ಆಗ ಇಂಗ್ಲಿಷರ ಸ್ನೇಹ ಬಯಸಿದ. ಅವರೊಂದಿಗೆ ಸಂಧಾನ ಮಾಡಿದ. ನಾನಾ ಫಡ್ನವೀಸನನ್ನೂ ಓಡಿಸಬೇಕೆಂದು ಸಿಂಧ್ಯ 1792ರಲ್ಲಿ ಪ್ರಯತ್ನಿಸಿದ. ನಾನಾ ಫಡ್ನವೀಸ್ ಬಹು ಎಚ್ಚರಿಕೆಯಿಂದ ಸಿಂಧ್ಯನ ಪ್ರಯತ್ನವನ್ನು ಮುರಿದ. 1794ರಲ್ಲಿ ಮಹಾದಾಜಿ ಸಿಂಧ್ಯ ಮರಣಹೊಂದಿದ. ನಾನಾ ಫಡ್ನವೀಸನೇ ಮಹಾರಾಷ್ಟ್ರದ ಮುಖಂಡನಾದ.

1794ರಲ್ಲಿ ನಿಜಾóಮ ಮರಾಠರಿಗೆ ಕೊಡಬೇಕಾಗಿದ್ದ ಚೌತ್ ಮತ್ತು ಸರ್‍ದೇಶಮುಖಿಗಳನ್ನು ತಿರಸ್ಕರಿಸಿದುದೇ ಅಲ್ಲದೆ, ಮರಾಠರೇ ತನಗೆ ಎರಡು ಕೋಟಿ ರೂಪಾಯಿಗಳನ್ನು ಕೊಡಬೇಕೆಂದು ಹೇಳಿದ. ಅಲ್ಲದೆ ನಾನಾ ಫಡ್ನವೀಸನನ್ನು ಅವಮಾನಗೊಳಿಸಿದ. ನಾನಾ ಫಡ್ನವೀಸ್ ಮರಾಠಾ ಸರ್ದಾರರನ್ನೆಲ್ಲ ಒಟ್ಟುಗೂಡಿಸಿ ಖಾರ್ದಾ ಯುದ್ಧದಲ್ಲಿ (1795) ನಿಜಾóಮನನ್ನು ಸೋಲಿಸಿದ. ಈ ವಿಜಯದಿಂದ ನಾನಾ ಫಡ್ನವೀಸನ ಕೀರ್ತಿ ಅತ್ಯುನ್ನತಿಗೆ ಏರಿತು. ಅವನು ಪರಕೀಯರ ಪ್ರವೇಶವಿಲ್ಲದೆ ಮಹಾರಾಷ್ಟ್ರದ ಘನತೆಯನ್ನು ಸ್ಥಾಪಿಸಿದ.

ಪೇಶ್ವೆ ಸವಾಯ್ ಮಾಧವರಾಯನಿಗೆ 21 ವರ್ಷ ಆಗಿದ್ದರೂ ನಾನಾ ಫಡ್ನವೀಸ್ ಅವನಿಗೆ ಅಧಿಕಾರ ಕೊಡದೆ ಅದನ್ನು ತನ್ನ ಹಿಡಿತದಲ್ಲೇ ಇಟ್ಟುಕೊಂಡಿದ್ದ. ಇದರಿಂದ ಮನನೊಂದ ಪೇಶ್ವೆ ಆತ್ಮಹತ್ಯೆ ಮಾಡಿಕೊಂಡ. ಪೇಶ್ವೆಯ ಸ್ಥಾನಕ್ಕೆ ವಿವಾದಗಳು ಪ್ರಾರಂಭವಾದವು. ನಾನಾ ಫಡ್ನವೀಸ್ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಕೊನೆಗೆ 2ನೆಯ ಬಾಜೀರಾಯನನ್ನು ಪೇಶ್ವೆಯನ್ನಾಗಿ ಅಂಗೀಕರಿಸಿ ತಾನು ಮುಖ್ಯಮಂತ್ರಿಯಾದ.

1797ರಲ್ಲಿ ತುಕೋಜಿ ರಾವ್ ಹೋಳ್ಕರನ ಮರಣಾನಂತರ ನಾನಾ ಫಡ್ನವೀಸನ ಅವನತಿ ಆರಂಭವಾಯಿತು. ಬಾಜೀರಾಯನೂ ಮಹಾದಾಜಿ ಸಿಂಧ್ಯನ ಮಗನಾದ ದೌಲತ್‍ರಾವ್ ಸಿಂಧ್ಯನೂ ಒಟ್ಟುಗೂಡಿ ನಾನಾ ಫಡ್ನವೀಸನನ್ನು ಹಿಡಿದು ಸೆರೆಯಲ್ಲಿ ಇಟ್ಟರು. 1800ರಲ್ಲಿ ನಾನಾ ಫಡ್ನವೀಸ್ ತೀರಿಕೊಂಡ.

ಗುಣಾವಗುಣಗಳು[ಬದಲಾಯಿಸಿ]

ನಾನಾ ಫಡ್ನವೀಸ್ ವೈದಿಕ ಬ್ರಾಹ್ಮಣ; ಸದಾ ಗಂಭೀರವಾಗಿ, ಕಾರ್ಯತತ್ಪರನಾಗಿದ್ದ ವ್ಯಕ್ತಿ. ಮಿತಭಾಷಿ. ತನ್ನ ರಹಸ್ಯಗಳನ್ನು ಯಾರಿಗೂ ಬಿಟ್ಟುಕೊಡುತ್ತಿರಲಿಲ್ಲ. ಸರ್ಕಾರದಲ್ಲಿ ದಕ್ಷತೆಯನ್ನು ಕಾಪಾಡುವುದಕ್ಕಾಗಿ ಹಗಲಿರುಳೂ ಚಿಂತಿಸುತ್ತಿದ್ದ ಈತ ನಗುವುದನ್ನು ಕಂಡವರೇ ಇಲ್ಲವೆನ್ನುತ್ತಾರೆ. ಲೆಕ್ಕಾಚಾರದಲ್ಲಿ ಅತ್ಯಂತ ನಿಪುಣನಾಗಿದ್ದ. ಕಾಗದಪತ್ರಗಳ ಪ್ರತಿಯೊಂದು ವಿವರವನ್ನೂ ಇವನು ಪರಿಶೀಲನೆ ಮಾಡುತ್ತಿದ್ದ. ಸರ್ಕಾರದ ಕಾಗದಪತ್ರಗಳನ್ನು ಅತ್ಯಂತ ಜೋಪಾನವಾಗಿ ಸುವ್ಯವಸ್ಥಿತವಾದ ರೀತಿಯಲ್ಲಿಟ್ಟಿದ್ದ. ಈತನ ಬುದ್ಧಿಶಕ್ತಿ ಅಸಾಧಾರಣವಾದದ್ದು. ತನ್ನ ಬುದ್ಧಿಮತ್ತೆಯಿಂದ, ಕಾರ್ಯತತ್ಪರತೆಯಿಂದ ಪೇಶ್ವೆಯ ಸ್ಥಾನಮಾನಗಳನ್ನು ರಕ್ಷಿಸಿದ. ಮಹಾರಾಷ್ಟ್ರದ ಇತಿಹಾಸವನ್ನು ಬರೆಯಬೇಕೆಂದು 1783ರಲ್ಲಿ ಇವನು ಯೋಜನೆಯೊಂದನ್ನು ಇಟ್ಟುಕೊಂಡಿದ್ದ. ಈತನು ತನ್ನ ಅಧಿಕಾರಾವಧಿಯಲ್ಲಿ ಅನೇಕ ಕಲಾಕೃತಿಗಳನ್ನು ಸಂಗ್ರಹಿಸಿದ್ದ. ಈತ ಕಲಾಭಿಮಾನಿಯೂ ಕಲಾವಿಮರ್ಶಕನೂ ಆಗಿದ್ದ. ನಾನಾ ಫಡ್ನವೀಸನ ದೃಷ್ಟಿಯೆಲ್ಲ ದಖನ್ನಿನಲ್ಲಿ ಕೇಂದ್ರೀಕೃತವಾಗಿತ್ತು. ಈತ ಅತ್ಯುನ್ನತ ಮಟ್ಟದ ದೇಶಪ್ರೇಮಿಯಾಗಿದ್ದು ಪ್ರಜೆಗಳ ಹಿತಾಸಕ್ತಿಗಳನ್ನೇ ಗಮನದಲ್ಲಿಟ್ಟಿದ್ದ. ಇಂಗ್ಲಿಷರ ಸ್ವಭಾವವನ್ನು ಅವರ ಮಹತ್ವಾಕಾಂಕ್ಷೆಗಳನ್ನೂ ಅರಿತು ಬಹು ಎಚ್ಚರಿಕೆಯಿಂದ ರಾಜಕಾರಣ ನಡೆಸಿದ. ಇಪ್ಪತ್ತು ವರ್ಷಗಳ ಕಾಲ ಇಂಗ್ಲಿಷರ ಪ್ರಭುತ್ವ ಮಹಾರಾಷ್ಟ್ರಕ್ಕೆ ಪ್ರವೇಶಿಸದಂತೆ ತಡೆದ. ಈತ ಕೊಟ್ಟ ಮಾತಿಗೆ ಎಂದೂ ತಪ್ಪುತ್ತಿರಲಿಲ್ಲ. ಇವನು ಉದಾರಿಯೂ ದಯಾವಂತನೂ ಆಗಿದ್ದ.

ಆದರೆ ಈತನಲ್ಲಿದ್ದ ಅತ್ಯಂತ ದೊಡ್ಡ ದುರ್ಗುಣವೆಂದರೆ ಅಧಿಕಾರದ ವ್ಯಾಮೋಹ. ಇದರಿಂದ ಈತ ಅನೇಕ ತೊಂದರೆಗಳಿಗೆ ಈಡಾಗಿ ಮನಶ್ಶಾಂತಿ ಕಳೆದುಕೊಂಡ. ಕಷ್ಟಕಾಲದಲ್ಲಿ ಇವನು ಮನಶ್ಯಾಂತಿಯನ್ನು ಕಳೆದುಕೊಳ್ಳುತ್ತಿದ್ದ. ಮರಾಠರಿಗೆ ಈತನನ್ನು ಕಂಡರೆ ಭಯಗೌರವಗಳಿದ್ದುವೇ ಹೊರತು ವಿಶ್ವಾಸ ಇರಲಿಲ್ಲ. ಈತನನ್ನು ಕೊಲೆ ಮಾಡಲು ಅನೇಕರು ಅನೇಕ ಬಾರಿ ಪ್ರಯತ್ನಿಸಿ ವಿಫಲವಾದರು. ತನ್ನ ಶತ್ರುಗಳನ್ನು ಕೊನೆಗಾಣಿಸುವವರೆಗೂ ಈತ ತೃಪ್ತನಾಗುತ್ತಿರಲಿಲ್ಲ. ರಘೋಬನನ್ನೂ ಅವನ ಮಕ್ಕಳನ್ನೂ ಅನಾವಶ್ಯಕವಾಗಿ ಪೀಡಿಸಿದ. ಇವನಿಂದ ಹಿಂಸೆಗೊಳಗಾದ 2ನೆಯ ಬಾಜೀರಾಯ ನಾನಾ ಫಡ್ನವೀಸನಲ್ಲಿ ದ್ವೇಷ ಇಟ್ಟಿದ್ದುದು ಸಹಜ. ಉತ್ತರ ಭಾರತದಲ್ಲಿ ಮಹಾದಾಜಿ ಸಿಂಧ್ಯನ ಕಾರ್ಯಚಟುವಟಿಕೆಗಳ ಪ್ರಾಮುಖ್ಯವನ್ನು ನಾನಾ ಫಡ್ನವೀಸ್ ಅರಿಯಲಿಲ್ಲ. ಈತ ಸುವ್ಯವಸ್ಥಿತ ಗೂಢಾಚಾರ ಪಡೆಯನ್ನು ನೇಮಿಸಿ ಶತ್ರುಗಳನ್ನು ನಿರ್ಮೂಲ ಮಾಡಿದ. ಸವಾಯ್ ಮಾಧವರಾಯ ಪ್ರಾಪ್ತವಯಸ್ಕನಾದರೂ ಫಡ್ನವೀಸ್ ಅವನಿಗೆ ಅಧಿಕಾರವನ್ನು ಬಿಟ್ಟುಕೊಡಲಿಲ್ಲ. ತನ್ನ ಅಧಿಕಾರಾವಧಿಯಲ್ಲಿ ಕೋಟ್ಯಂತರ ರೂಪಾಯಿಗಳಷ್ಟು ಸ್ವಂತ ಆಸ್ತಿಯನ್ನು ಮಾಡಿಕೊಂಡ.

ನಾನಾ ಫಡ್ನವೀಸ್ ಭಾರತದ ಅತ್ಯಂತ ಶ್ರೇಷ್ಠ ರಾಜಕಾರಣಿ. ಈತನನ್ನು ಮರಾಠಾ ಚಾಣಕ್ಯನೆಂದು ಕರೆಯುತ್ತಾರೆ. ಮುಂಬಯಿಯಲ್ಲಿದ್ದ ಇಂಗ್ಲಿಷರ, ಗವರ್ನರ್-ಜನರಲ್ ವಾರನ್ ಹೇಸ್ಟಿಂಗ್ಸನ, ರಘೋಬನ ಪಿತೂರಿಗಳನ್ನು ಈತ ಮುರಿದ. ಹೈದರ್ ಅಲಿ, ನಿಜಾಮ್ ಮತ್ತು ಸಿಂಧ್ಯನ ಸಹಕಾರದಿಂದ ಇಂಗ್ಲಿಷರನ್ನು ಭಾರತದಿಂದ ಓಡಿಸಬೇಕೆಂಬ ಯೋಜನೆಯನ್ನೂ ಈತ ಸಿದ್ಧಪಡಿಸಿದ್ದ. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಇವನು ಮಹಾದಾಜಿ ಸಿಂಧ್ಯನೊಡನೆ ಸಹಕರಿಸಿ ಮಹಾರಾಷ್ಟ್ರ ಸ್ವಾತಂತ್ರ್ಯವನ್ನು ಕಾಪಾಡಿದ. ಆಡಳಿತ ವಿಚಾರದಲ್ಲಿ ಎಷ್ಟೇ ದಕ್ಷನಾಗಿದ್ದರೂ ಸೈನ್ಯ ವ್ಯವಸ್ಥೆಗೆ ಈತ ಗಮನ ಕೊಡಲಿಲ್ಲ. ನಾನಾ ಫಡ್ನವೀಸನ ಮರಣಾನಂತರ ಮಹಾರಾಷ್ಟ್ರಕ್ಕೆ ದಕ್ಷ ಮುಂದಾಳುತನವಿಲ್ಲದಂತಾಗಿ ಮರಾಠರ ಸ್ವಾತಂತ್ರ್ಯ ನಷ್ಟವಾಯಿತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: