ವಿಷಯಕ್ಕೆ ಹೋಗು

ಸದಸ್ಯ:ಅನು ಅಮೀನ್ ಸಂಕಮಾರ್/ನನ್ನ ಪ್ರಯೋಗಪುಟ 2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಕ್ಷಿಣ ಭಾರತ ಜಾನಪದ

[ಬದಲಾಯಿಸಿ]

ಕಲೆಗಳ ಉಗಮ

[ಬದಲಾಯಿಸಿ]

ಮಾನವ ಬೆಳೆಸಿಕೊಂಡು ಬಂದ ಸಂಸ್ಕೃತಿಯನ್ನು ,ಆತ ಕಟ್ಟಿದ ಮಹಡಿ ಮನೆಗಳಿಂದ ,ಮಲಗುವ ಸುಪ್ಪತ್ತಿಗೆಗಳಿಂದ ,ಧರಿಸುವ ವಸ್ತ್ರಾಭರಣಗಳಿಂದ ,ಉಣ್ಣುವ ಭಕ್ಷ್ಯ ಭೋಜ್ಯಗಳಿಂದ ,ನಿರ್ಮಿಸಿಕೊಂಡ ಇತರ ಸವಲತ್ತು ಸಲಕರಣೆಗಳಿಂದ ಮಾತ್ರ ಅಳೆಯುವುದಿಲ್ಲ.ಭೌತಿಕ ಅವಶ್ಯಕತೆಗಳಾದ ಆಹಾರ ,ನಿದ್ರಾ, ಭಯ,ಮೈಥುನ ಮುಂತಾದ ಜೀವಗುಣಗಳನ್ನು ಮಾತ್ರ ಪರಿಗಣಿಸಿದರೆ ಆತನಿಗೂ ಪ್ರಾಣಿಗಳಿಗೂ ಏನೂ ವ್ಯತ್ಯಾಸವಿಲ್ಲದಂತಾಗುತ್ತದೆ.ಅನ್ನ ,ವಸ್ತ್ರ, ಹಸಿವುಗಳಿಗಿಂತಲೂ ಮಿಗಿಲಾದ ಆತ್ಮದ ಇನ್ನೊಂದು ಹಸಿವನ್ನು ಮಾನವ ಬೆಳೆಸಿಕೊಂಡು ಬಂದಿದ್ದಾನೆ.೧೯೮೫ರ ನೊಬೆಲ್ ಪಾರಿತೋಷಕ ಪಡೆದ ಕ್ಲಾಡ್ ಸೀಮೋ ಎಂಬ ಲೇಖಕ ಹೇಳುವಂತೆ ಮಾನವನ ಬದುಕಿಗೆ ಹಸಿವು ,ತೃಷೆ, ಉಸಿರಾಟಗಳಷ್ಟೇ ಅಗತ್ಯವಾದುದು ಕಲೆ ಮತ್ತು ಸಾಹಿತ್ಯ.ಚಿಂತನಶೀಲತೆ ,ಪಾರಮಾರ್ಥಿಕ ಸತ್ಯದ ಅನ್ವೇಷಣೆ ,ಕಣ್ಣಿಗೆ ಕಾಣದ ಶಕ್ತಿಗಳ ಬಗ್ಗೆ ವಿಶ್ಲೇಷಣೆ , ಸಮಾಜ ಜೀವನವನ್ನು ನಿಯಂತ್ರಿಸುವ ಮೌಲ್ಯಗಳ ಪ್ರತಿಪಾದನೆ ,ಕಲೆ ,ಸಾಹಿತ್ಯಗಳ ಸೃಜನೆ ಇವೇ ಮುಂತಾದ ಪ್ರವೃತ್ತಿಗಳನ್ನು ಅನಾದಿಕಾಲದಿಂದಲೂ ಮಾನವ ಬೆಳೆಸಿಕೊಂಡು ಬಂದಿದ್ದಾನೆ.ಮಾನವನ ವಿಕಾಸದ ಇತಿಹಾಸವೆಂದರೆ ಆತ ಬೆಳೆಸಿಕೊಂಡು ಬಂದ ಮೌಲ್ಯ, ಸಂಸ್ಕೃತಿ, ಕಲೆ ,ಸಾಹಿತ್ಯಗಳ ಇತಿಹಾಸವೇ ಆಗಿದೆ.ಇವೆಲ್ಲ ಆತನ ನಂಬಿಕೆ, ಧಾರ್ಮಿಕ ಚಿಂತನೆ,ಆರಾಧನಾ ಪದ್ಧತಿಗಳ ಚೌಕಟ್ಟಿನಲ್ಲಿ ಹುಟ್ಟಿವೆ,ಬೆಳೆದಿವೆ.ಆತನ ಆರಾಧನಾ ಕೇಂದ್ರಗಳು ಪಾರಮಾರ್ಥಿಕ ತತ್ತ್ವ ಚಿಂತನೆಗಳ ಕೇಂದ್ರಗಳೂ ಹೌದು.ಮನೋರಂಜನೆಯ ರಂಗಭೂಮಿಯೂ ಹೌದು, ಸಹಬಾಳ್ವೆ ನಡೆಸುವ ಕ್ಷೇತ್ರವೂ ಹೌದು ಎಂಬಂತೆ ಪ್ರಾಗೈತಿಹಾಸಿಕ ಕಾಲದಿಂದ ಬೆಳೆದು ಬಂದಿವೆ.

ಕಲೆಗಳ ಧಾರ್ಮಿಕ ಹಿನ್ನಲೆ

[ಬದಲಾಯಿಸಿ]

ಜಾನಪದ ಅಥವಾ ಫೋಕ್ ಲೋರ್ ಎಂಬ ಪದ ಹದಿನೆಂಟನೆಯ ಶತಮಾನದಿಂದೀಚೆಗೆ ರೂಢಿಗೆ ಬಂತು.ಆದರೆ ಜಾನಪದ ಕಲೆ ಧರ್ಮಗಳು ಮಾನವನೊಂದಿಗೆ ಹುಟ್ಟಿ ಬೆಳೆದು ಬಂದಿದೆ.ಆತ ಚಿಂತನಾಶೀಲ ಮನುಷ್ಯ ಅಥವಾ ಹೋಮೋಸೇಪಿಯನ್ಸ್ ಆಗಿ ಬೆಳೆದು ಬಂದಂದಿನಿಂದಲೂ ಆತನಲ್ಲಿ ಸೃಜನಶೀಲತೆ, ಸಂವೇದನೆ ಹಾಗೂ ಸಂವಹನ ಪ್ರವೃತ್ತಿ ಬೆಳೆದುಬಂದಿವೆ.ಈ ಪ್ರವೃತ್ತಿಗಳು ಆತನ ಎಲ್ಲಾ ಸಾಮಾಜಿಕ ,ಧಾರ್ಮಿಕ ,ಕಲಾತ್ಮಕ ಚಟುವಟಿಕೆಗಳಿಗೆ ಚಾಲನೆ ನೀಡಿ ಆತ ಹಂತಹಂತವಾಗಿ ಸಾಂಸ್ಕೃತಿಕ ವೈಭವದ ಶಿಖರವನ್ನೇರುವಂತೆ ಮಾಡಿದವು. ಆತನ ಎಲ್ಲಾ ಸಾಧನೆಗಳೂ ಜಾನಪದ ಕಲಾ ಪ್ರಕಾರಗಳ ಮೂಲಕ ,ಬಾಯ್ದೆರೆಯ ಮೂಲಕ ಹರಿದು ಬಂದ ಸಾಹಿತ್ಯ ಸಂಪ್ರದಾಯಗಳ ಮೂಲಕ ,ನಡೆಸಿಕೊಂಡು ಬಂದ ಆಚರಣೆಗಳ ಮೂಲಕ , ಬಿಟ್ಟು ಹೋದ ಸಾಧನಗಳ ಕಲಾಕೃತಿಗಳ ಮೂಲಕ ಮುಂದಿನ ಪೀಳಿಗೆಗಳಿಗೆ ದೊರಕಿದಂತಾಗಿದೆ.ಸಿಂಧೂ ಕಣಿವೆಯ ಮೊಹೆಂಜೊದಾರೊ ,ಹರಪ್ಪ ,ಈಜಿಪ್ಟಿನ ಪಿರಾಮಿಡ್ ಮುಂತಾದವುಗಳಲ್ಲಿ ದೊರಕಿದ ಅವಶೇಷಗಳಿಂದ ಆದಿಮಾನವ ಬೆಳೆಸಿಕೊಂಡು ಬಂದ ಸಂಸ್ಕೃತಿಯ ಪುರಾವೆಗಳು ದೊರೆಯುವಂತೆ ಆತ ಇನ್ನೂ ಮುಂದುವರಿಸಿಕೊಂಡು ಹೋಗುತ್ತಿರುವ ಧಾರ್ಮಿಕ ,ಕಲಾತ್ಮಕ ಆಚರಣೆಗಳಿಂದಲೂ ಆತ ನಡೆದು ಬಂದ ದಾರಿಯ ಅರಿವಾಗುತ್ತದೆ. ಲಿಖಿತ ಆಧಾರಗಳಿಲ್ಲದ ಸಂಧರ್ಭಗಳಲ್ಲಿ ಜನಪದ ಸಾಹಿತ್ಯ ,ಕಲೆ ,ಆಚರಣೆ ,ನಂಬಿಕೆ ,ಸಂಪ್ರದಾಯಗಳು ಅನಾದಿಕಾಲದಿಂದಲೂ ಆತ ಬೆಳೆಸಿಕೊಂಡು ಬಂದ ಸಮಾಜದ ಇಣುಕುನೋಟಗಳನ್ನು ಒದಗಿಸಿಕೊಡುತ್ತದೆ.ಹೀಗಾಗಿ ಜನಪದ ಕಲೆ ಆಚರಣೆಗಳು ಮಾನವನ ಸಾಂಸ್ಕೃತಿಕ ಇತಿಹಾಸವನ್ನು ಅರಿಯುವಲ್ಲಿ ಮುಖ್ಯ ಸಾಧನಗಳಾಗುತ್ತವೆ.ಆದುದರಿಂದ ಯಾವ ಇತಿಹಾಸಕಾರನೂ ಮಾನವಶಾಸ್ತ್ರಜ‍್ಞನೂ ಕಲಾವಿಮರ್ಶಕನೂ ಇವುಗಳ ಬಗ್ಗೆ ಔದಾಸೀನ್ಯ ತೋರುವಂತಿಲ್ಲ. ಆದಿಮಾನವನ ದೈವ ಪರಿಕಲ್ಪನೆಯೇ ಆತನ ಎಲ್ಲಾ ಕಲೆ ,ಸಾಹಿತ್ಯಗಳಿಗೂ ಮೂಲ ಎಂದು ಹೇಳಿದರೆ ತಪ್ಪಾಗಲಾರದು.ಏಕೆಂದರೆ ಆತನು ಅನಾದಿಕಾಲದಿಂದಲೂ ಬೆಳೆಸಿ ಪೋಷಿಸಿಕೊಂಡು ಬಂದ ಕಲೆಗಳೆಲ್ಲ ಆರಾಧನಾ ಸಂಧರ್ಭದಲ್ಲಿಯೇ ಹುಟ್ಟಿದವು.ಆತ ದೈವದ ಬಗ್ಗೆ ಚಿಂತನೆ ನಡೆಸಿದ್ದು ಸಾಹಿತ್ಯಕ್ಕೆ ಮೂಲವಾದಂತೆ ,ದೈವದ ಮುಂದೆ ಹಾಡಿ ನಲಿದದ್ದು ಸಂಗೀತ, ನೃತ್ಯಗಳಿಗೆ ಮೂಲವಾಯಿತು.ದೈವಕ್ಕೆ ಮಾಡಿದ ಅಲಂಕಾರ ಚಿತ್ರಗಳು ಚಿತ್ರಕಲೆಗೆ ಮೂಲವಾದುವು.