ಟಂಕಸಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಂಕಸಾಲೆ ಯಾವುದೇ ಸರ್ಕಾರದಿಂದ ಅಂಗೀಕೃತವಾದ ಮಾದರಿಗಳನ್ನು ಅನುಸರಿಸಿ ಆ ಸರ್ಕಾರದ ಅಧಿಕೃತ ಆಜ್ಞೆಯ ಮೇರೆಗೆ ನಾಣ್ಯಗಳನ್ನು ಮುದ್ರಿಸುವ ಕರ್ಮಾಗಾರ (ಮಿಂಟ್). ಹಾಗೆ ಅಧಿಕೃತ ನಾಣ್ಯಗಳನ್ನು ಮುದ್ರಿಸಿದ ಮೊತ್ತಮೊದಲ ಟಂಕಸಾಲೆ ಸ್ಥಾಪನೆಗೊಂಡದ್ದು ಇಂದಿಗೆ ಸುಮಾರು ಇಪ್ಪತ್ತೇಳು ಶತಮಾನಗಳಷ್ಟು ಹಿಂದೆ ಮಾತ್ರ. ಇತಿಹಾಸಕಾಲದ ಆರಂಭಕಾಲದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ವಸ್ತುವಿನಿಮಯ ಪದ್ಧತಿಯೇ ಪ್ರಚಾರದಲ್ಲಿತ್ತು. ಕಾಲ ಕಳೆದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಮಾರಾಟದ ವಸ್ತುಗಳ ಬೆಲೆ ಕಟ್ಟುವಲ್ಲಿ ಎತ್ತುಗಳನ್ನೂ ಹಸುಗಳನ್ನೂ ಮಾಪಕವಾಗಿ ಬಳಸುವ ಪದ್ಧತಿ ಜಾರಿಗೆ ಬಂದಿತು. ಆದಿಮಾನವ ಲೋಹಯುಗವನ್ನು ಪ್ರವೇಶಿಸಿದ ಮೇಲೆ ಉಂಗುರ, ಸರ ಇತ್ಯಾದಿ ಆಭರಣಗಳನ್ನೂ ಖಡ್ಗ, ಕೊಡಲಿಯೇ ಮೊದಲಾದ ಆಯುಧಗಳನ್ನೂ ವ್ಯಾಪಾರ ಕ್ಷೇತ್ರದಲ್ಲಿ ಹಣದಂತೆ ಬಳಸತೊಡಗಿದ. ಈಜಿಪ್ಟ್, ಕ್ಯಾಲ್ಡಿಯ, ಅಸ್ಸಿರಿಯ ಮುಂತಾದ ರಾಷ್ಟ್ರಗಳಲ್ಲಿ ಸಹಸ್ರಾರು ವರ್ಷಗಳ ಕಾಲ ಈ ಪದ್ಧತಿ ಜಾರಿಯಲ್ಲಿತ್ತು.

ಇತಿಹಾಸ[ಬದಲಾಯಿಸಿ]

ಕ್ರಿ. ಪೂ. 8ನೆಯ ಶತಮಾನದ ಕೊನೆಯ ವೇಳೆಗೆ ಏಷ್ಯ ಮೈನರಿನ ಲಿಡಿಯ ರಾಜ್ಯದ ಅರಸು ಗೈಗೆಸ್ ಎಂಬಾತ ತನ್ನ ಚಿನ್ನ, ಬೆಳ್ಳಿ ಮತ್ತು ಮಿಶ್ರಲೋಹದ ನಾಣ್ಯಗಳನ್ನು ಮುದ್ರಿಸುವ ಸಲುವಾಗಿ ಸಾರ್ಡಿಸ್ ನಗರದಲ್ಲಿ ಪ್ರಪಂಚದ ಪ್ರಪ್ರಥಮ ಟಂಕಸಾಲೆಯನ್ನು ಸ್ಥಾಪಿಸಿದನೆಂದು ಪ್ರಾಚೀನ ಗ್ರೀಕ್ ಇತಿಹಾಸಕಾರ ಹಿರೋಡೋಟಸ್ ಹೇಳಿರುತ್ತಾನೆ. ಪ್ರಾರಂಭಾವಸ್ಥೆಯ ಆ ಟಂಕಸಾಲೆಯಲ್ಲಿ ನಿರ್ದಿಷ್ಟ ತೂಕದ ಕರಗಿಸಿದ ಲೋಹದ ಮುದ್ದೆಯ ಮೇಲೆ ಮೊಳೆಯೊಂದರ ಸಹಾಯದಿಂದ ರಾಜಚಿಹ್ನೆಯನ್ನು ಒತ್ತಿ ಅಧಿಕೃತ ನಾಣ್ಯಗಳನ್ನು ತಯಾರಿಸುವ ಸುಲಭ ರೀತಿ ಬಳಕೆಯಲ್ಲಿತ್ತು. ಟಂಕಸಾಲೆಯಲ್ಲಿ ಹೀಗೆ ನಾಣ್ಯಗಳನ್ನು ಮುದ್ರಿಸಿ ಅಧಿಕೃತವಾಗಿ ಚಲಾವಣೆಗೆ ತರುವ ಈ ಅತ್ಯುಪಯುಕ್ತ ಹಾಗೂ ಪರಿಣಾಮಕಾರಿಯದ ಪದ್ಧತಿ ಅಲ್ಪಕಾಲದಲ್ಲೆ ಲಿಡಿಯದಿಂದ ಪಶ್ಚಿಮಕ್ಕಿದ್ದ ಈಜಿಯನ್ ದ್ವೀಪಗಳಿಗೂ ಗ್ರೀಸ್ ದೇಶಕ್ಕೂ ಅಯೋನಿಯನ್ ದ್ವೀಪಗಳಿಗೂ ಹರಡಿತು. ಕ್ರಿ. ಪೂ. 7ನೆಯ ಶತಮಾನದಿಂದ ಕ್ರಿ, ಪೂ. 4ನೆಯ ಶತಮಾನದ ಕೊನೆಯ ತನಕ ಜಾಗತಿಕ ರಾಜಕೀಯ ರಂಗದಲ್ಲಿ ಪ್ರಬಲರಾಗಿ ಮೆರೆದ ಗ್ರೀಕರು ತಮ್ಮ ಹಲವು ಮಾದರಿಯ ನಾಣ್ಯಗಳನ್ನು ಮುದ್ರಿಸುವ ಸಲುವಾಗಿ ಅಥೆನ್ಸ್, ಅದ್ರ ಮೈತಿಯಮ್, ಅಪಮೈಯ, ಎಫಿಸಸ್, ಲಾವೊಡೀಸಿಯ, ನೈಸ, ಪೆರ್ಗಮಮ್, ಸಾರ್ಡಿಸ್, ಸ್ಮೈರ್ನಾ, ಥೈತಿರ, ತ್ರಲ್ಲೆಸ್ ಮುಂತಾದ ಹಲವು ನಗರಗಳಲ್ಲಿ ಟಂಕಸಾಲೆಗಳನ್ನು ಸ್ಥಾಪಿಸಿದರು. ಪ್ರಾಚೀನ ಗ್ರೀಕರ ಈ ಟಂಕಸಾಲೆಗಳು ಗೈಗಸ್‍ನ ಟಂಕಸಾಲೆಗಿಂತ ತಾಂತ್ರಿಕವಾಗಿ ಅದೆಷ್ಟೊ ಮುಂದುವರಿದಿದ್ದರೂ ಸಣ್ಣಪ್ರಮಾಣದ ಅತ್ಯಂತ ಸರಳ ಕಮ್ಮಟಗಳಾಗಿಯೆ ಉಳಿದಿದ್ದುವು: ಇಟ್ಟಿಗೆಯ ಅಥವಾ ಮರಗೆಲಸದ ಒಂದು ಸಣ್ಣಗುಡಿಸಲು, ಅದರ ಒಂದು ಮೂಲೆಯಲ್ಲಿ ಜೇಡಿಮಣ್ಣಿನಿಂದಾದ ಒಂದು ಇದ್ದಲಿನ ಕುಲುಮೆ. ನಾಣ್ಯದ ಮೇಲ್ಭಾಗ (ಅಬ್ವರ್ಸ್) ಮತ್ತು ಕೆಳಭಾಗದಲ್ಲಿ (ರಿವರ್ಸ್) ಮುದ್ರಿಸಬೇಕಾದ ಅಲೇಖ್ಯ ಮತ್ತು ಗುರುತುಗಳ ಮುದ್ರೆಗಳನ್ನು ಕೊರೆಯುಳಿ ಮತ್ತು ಅಂಕನ ಮಾಡುವ ಸಲಕರಣೆಯ ಸಹಾಯದಿಂದ ತಯಾರಿಸಿಕೊಂಡ ಬಳಿಕ ಗುಡಿಸಲಿನ ಮತ್ತೊಂದು ಮೂಲೆಯಲ್ಲಿನ ಅಡಿಗಲ್ಲಿನ ಮೇಲೆ ನಿರ್ದಿಷ್ಟ ಜಾಗದಲ್ಲಿ ಕೆಳಭಾಗದ ಮುದ್ರೆಯನ್ನು ಮಡಗಿ ಅದರ ಮೇಲೆ ನಾಣ್ಯವಾಗಿ ಪರಿವರ್ತಿಸಬೇಕಾಗಿದ್ದ ಲೋಹದ ನಿರ್ದಿಷ್ಟ ತೂಕದ ಸುಡು ತುಂಡನ್ನು ಇಟ್ಟು, ಅಂಕನ ಮಾಡುವ ಸಲಕರಣೆಯ ಅಡಿಭಾಗಕ್ಕೆ ಮೇಲ್ಭಾಗದ ಮುದ್ರೆಯನ್ನು ಹೊಂದಿಸಿ, ಅದನ್ನು ಆ ಲೋಹದ ತುಂಡಿನ ಮೇಲೆ ಇರಿಸಿ, ಒಂದು ಸುತ್ತಿಗೆಯಿಂದ ಹೊಡೆದಾಗ ಪ್ರಾಚೀನ ಗ್ರೀಕರ ನಾಣ್ಯ ಅಧಿಕೃತವಾಗಿ ಅಸ್ತಿತ್ವಕ್ಕೆ ಬರುತ್ತಿತ್ತು. ಅಂಥ ಟಂಕಸಾಲೆಗಳಲ್ಲಿ ಎಷ್ಟೊ ಬಾರಿ ಹಳೆಯ ನಾಣ್ಯಗಳನ್ನೇ ಮೂಲಸಾಮಗ್ರಿಗಳಾಗಿ ಬಳಸಿ, ಅವುಗಳ ಮೇಲೆ ಹೊಸ ಮುದ್ರೆಗಳನ್ನು ಒತ್ತಿ ಹೊಸ ನಾಣ್ಯಗಳನ್ನು ಹೊರಡಿಸಲಾಗಿತ್ತೆಂಬುದಕ್ಕೂ ನಿದರ್ಶನಗಳಿವೆ.

ಪ್ರಾಚೀನ ಗ್ರೀಕ್ ಟಂಕಸಾಲೆಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಒಂದು ಕುತೂಹಲಕಾರಿಯಾದ ಮಾಹಿತಿಯನ್ನು ಇಲ್ಲಿ ನೀಡಬಹುದಾಗಿದೆ. ಕ್ರಿ. ಪೂ. 420ನೆಯ ವರ್ಷದಲ್ಲಿ 90ನೆಯ ಒಲಿಂಪಿಕ್ ಮಹೋತ್ಸವ ನಡೆಯಬೇಕಿತ್ತು. ಆದರೆ ಆ ಉತ್ಸವದ ಸಂದರ್ಭದಲ್ಲಿ ಹೊರಡಿಸಬೇಕಾಗಿದ್ದ ಎಲ್ಲ ನಾಣ್ಯಗಳನ್ನೂ ಮುದ್ರಿಸುವ ಸಾಮಥ್ರ್ಯ ಒಲಿಂಪಿಯದ ಏಕೈಕ ಟಂಕಸಾಲೆಗೆ ಇರಲಿಲ್ಲ. ಹಾಗಾಗಿ ಆ ವರ್ಷದಲ್ಲಿ ಹೇರಾ ಎಂಬ ಸ್ಥಳದ ಪುರೊಹಿತಜನರ ಅಧಿಕಾರವ್ಯಾಪ್ತಿಯಲ್ಲಿ ಒಲಿಂಪಿಯದಲ್ಲಿ ಮತ್ತೊಂದು ಟಂಕಸಾಲೆಯನ್ನು ಸ್ಥಾಪಿಸಿ, ಆ ಮಹೋತ್ಸವದ ಸವಿನೆನಪಿಗಾಗಿ ಉತ್ತಮ ಶ್ರೇಣಿಯ ಅಸಂಖ್ಯಾತ ನಾಣ್ಯಗಳನ್ನು ಮುದ್ರಿಸಿ ಹೊರಡಿಸಲಾಯಿತು. ಪ್ರಖ್ಯಾತ ಗ್ರೀಕ್ ಚಕ್ರವರ್ತಿ ಅಲೆಕ್ಸಾಡರ್ ತನ್ನ ಸಾಮ್ರಾಜ್ಯಶಾಹೀ ನಾಣ್ಯಗಳನ್ನು ಮುದ್ರಿಸುವ ಸಲುವಾಗಿ ಆತನ ಅಧೀನದಲ್ಲಿದ್ದ ಯುರೋಪ್, ಅನಟೋಲಿಯ, ಸಿಲಿಸಿಯ, ಸಿರಿಯ ಮುಂತಾದ ಪ್ರಾತಗಳಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ಟಂಕಸಾಲೆಗಳನ್ನು ಸ್ಥಾಪಿಸಿದ್ದ. ಅವನ ಕಾಲಕ್ಕೂ ಹಿಂದೆಯೇ ಭಾರತದಲ್ಲಿ ಮುದ್ರಾಂಕಿತ (ಪಂಚ್-ಮಾಕ್ರ್ಡ್) ನಾಣ್ಯಗಳು ಚಲಾವಣೆಯಲ್ಲಿದ್ದವಾದರೂ ಭಾರತೀಯರು ನಾಣ್ಯಗಳನ್ನು ಮುದ್ರಿಸುವ ಸಲುವಾಗಿಯೇ ಟಂಕಸಾಲೆಗಳನ್ನು ಸ್ಥಾಪಿಸಿದ್ದು ಅಲೆಕ್ಸಾಂಡರನ ದಿಗ್ವಿಜಯದ ತರುವಾಯವೇ ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ.

ರೋಮ್ ಸಾಮ್ರಾಜ್ಯದಲ್ಲಿ[ಬದಲಾಯಿಸಿ]

ಕ್ರಿ. ಪೂ. 3ನೆಯ ಶತಮಾನದ ತರುವಾಯ ಗ್ರೀಕರು ಬಲಗುಂದಿದಾಗ ಪ್ರಾಬಲ್ಯಕ್ಕೆ ಬಂದ ರೋಮನರು ಹೊರಡಿಸಿದ ಗಣರಾಜ್ಯ (ರಿಪಬ್ಲಿಕ್) ಹಾಗೂ ಅನಂತರದ ಸಾಮ್ರಾಜ್ಯಶಾಹೀ (ಇಂಪಿರಿಯಲ್) ನಾಣ್ಯಗಳು ಅವರ ಅದೃಷ್ಟ ಪೂರ್ವ ಪ್ರಮಾಣದ ವಾಣಿಜ್ಯ ಚಟುವಟಿಕೆಗಳಿಂದಾಗಿ ಪ್ರಪಂಚದ ಎಲ್ಲೆಡೆಗಳಿಗೂ ಹರಡಿ, ಅನಂತರದ ಕಾಲದಲ್ಲಿ ಅನೇಕ ರಾಷ್ಟ್ರಗಳು ಹೊರಡಿಸಿದ ನಾಣ್ಯಗಳಿಗೆ ಮಾದರಿಗಳೇ ಆದವು. ಕ್ರಿ. ಪೂ 335ರಲ್ಲಿ ರೋಮನ್ ಗಣರಾಜ್ಯದ ನಾಣ್ಯಗಳು ಹೊರಬರಲಾರಂಭಿಸಿದವು. ಗಣರಾಜ್ಯದ ಮಿಶ್ರಲೋಹದ ನಾಣ್ಯಗಳನ್ನು ಮುದ್ರಿಸುವ ಸಲುವಾಗಿ ರೋಮ್ ನಗರದಲ್ಲೂ ಬೆಳ್ಳಿ ನಾಣ್ಯಗಳನ್ನು ಮುದ್ರಿಸುವ ಸಲುವಾಗಿ ಕಪುವಾ ನಗರದಲ್ಲೂ ಟಂಕಸಾಲೆಗಳನ್ನು ತೆರೆಯಲಾಗಿತ್ತು. ಬೆಳ್ಳಿ ನಾಣ್ಯಗಳನ್ನು ಮುದ್ರಿಸುವ ಮತ್ತೊಂದು ಟಂಕಸಾಲೆ ರೋಮ್ ನಗರದಲ್ಲೂ ಕ್ರಿ. ಪೂ. 264ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಕ್ರಿ. ಪೂ. 27ರಲ್ಲಿ ರೋಮನ್ ಸಾಮ್ರಾಜ್ಯ ಸ್ಥಾಪನೆಗೊಂಡ ಬಳಿಕ ರೋಮನ್ ಚಕ್ರವರ್ತಿಗಳು ತಮ್ಮ ತಮ್ಮ ಆಳ್ವಿಕೆಯಲ್ಲಿ ಹೊರಡಿಸಿದ ನಾಣ್ಯಗಳು ಆಂಟಿಯೋಕ್, ಆರ್ಲೆಸ್, ಅಲೆಕ್ಸಾಂಡ್ರಿಯ, ಆಂಟಿಯಾನಮ್, ಅಕ್ವಲೈಯ, ಆಗಸ್ಟ ಅಥವಾ ಲಂಡಿನಿಯಮ್ (ಇಂದಿನ ಲಂಡನ್), ಕಾರ್ಥೇಜ್ ಮುಂತಾದ ನಗರಗಳಲ್ಲಿಯ ಟಂಕಸಾಲೆಗಳಲ್ಲಿ ತಯಾರಾದವೆಂದು ಆ ನಾಣ್ಯಗಳ ಮೇಲಿನ ಆಲೇಖ್ಯಗಳಿಂದಲೇ ತಿಳಿದುಬರುತ್ತದೆ. ರೋಮನರು ತಮ್ಮ ನಾಣ್ಯಗಳನ್ನು ಸಾಮಾನ್ಯವಾಗಿ ಪ್ರಾಚೀನ ಗ್ರೀಕರ ಮುದ್ರಣ ರೀತಿಯಲ್ಲಿ ತಯಾರಿಸುತ್ತಿದ್ದರಾದರೂ ದೊಡ್ಡ ಪ್ರಮಾಣದ ತಾಮ್ರದ ನಾಣ್ಯಗಳನ್ನು ತಯಾರಿಸುವಲ್ಲಿ ಮಾತ್ರ ಕರಗಿಸಿದ ಲೋಹವನ್ನು ಜೇಡಿಮಣ್ಣಿನ ಮುದ್ರೆಯ ಪಾತ್ರೆಗಳಲ್ಲಿ ಹುಯ್ಯುವ ಪದ್ಧತಿಯನ್ನು ಬಳಸಿದ್ದರು. ಇಂಗ್ಲೆಂಡಿನಲ್ಲಿ ಹಿಂದಿನಿಂದಲೂ ಸಣ್ಣ ಪ್ರಮಾಣದ ಟಂಕಸಾಲೆಗಳಿದ್ದುದರ ಕುರುಹುಗಳು ದೊರೆತಿವೆ. ಆದರೆ ನಾಣ್ಯಗಳನ್ನು ಹೇರಳವಾಗಿ ಮುದ್ರಿಸಲಾರಂಭಿಸಿದ್ದು ಕ್ರಿ. ಶ. 3ನೆಯ ಶತಮಾನದಲ್ಲಿ ಲಂಡನ್ ಮತ್ತು ಕೋಲ್ಚಸ್ಟರ್ ನಗರಗಳಲ್ಲಿ ರೋಮನರು ಟಂಕಸಾಲೆಗಳನ್ನು ಸ್ಥಾಪಿಸಿದ ಬಳಿಕವೇ. ಯೂರೋಪಿನ ಟಂಕಸಾಲೆಗಳಲ್ಲಿ ಕಾಲಕ್ರಮದಲ್ಲಿ ಹಲವು ತಾಂತ್ರಿಕ ಸುಧಾರಣೆಗಳು ಜಾರಿಗೆ ಬಂದವು. ಮೊದಲು ನಾಣ್ಯಗಳ ಮೇಲೆ ಮುದ್ರೆಗಳನ್ನು ಒತ್ತಲು ಸುತ್ತಿಗೆಯ ಬದಲು ತಾನೇ ಜಾರಿ ಬೀಳುವ ಭಾರದ ಸಲಕರಣೆಯನ್ನು (ಮಂಕಿ ಪ್ರೆಸ್) ಬಳಸಲಾಯಿತು. ಅನಂತರ ತಿರುಪೊತ್ತುಗ (ಸ್ಕ್ರೂ ಪೆಸ್) ಉಪಯೋಗಕ್ಕೆ ಬಂತು. ಕ್ರಿ. ಶ. 1533ರ ಪ್ಯಾರಿಸಿನ ಟಂಕಸಾಲೆಯಲ್ಲಿ ತಿರುಪೊತ್ತುಗ ಹಾಗೂ ಚಪ್ಪಟೆಯಾದ ಲೋಹದ ಪಟ್ಟಿಗಳನ್ನು ವರ್ತುಲಾಕಾರಕ್ಕೆ ತುಂಡರಿಸುವಂಥ ಯಂತ್ರವನ್ನು ಬಳಸಿ ನಾಣ್ಯಗಳನ್ನು ತಯಾರಿಸಲಾರಂಭಿಸಿದರು. ಇಂಗ್ಲೆಂಡಿನ ಬರ್ಮಿಂಗ್ ಹಾಮ್ನ ಟಂಕಸಾಲೆಯಲ್ಲಿ 1788ರಲ್ಲಿ ಮೊದಲ ಬಾರಿಗೆ ಮುದ್ರಣಯಂತ್ರಗಳನ್ನು ಚಲಿಸಲು ಅವಿಸಾಮಥ್ರ್ಯವನ್ನು ಬಳಸಲಾಯಿತು. ಇಂದಿನ ದಿನಗಳಲ್ಲಂತೂ ಪ್ರಪಂಚದ ಇಲ್ಲ ಟಂಕಸಾಲೆಗಳಲ್ಲೂ ಮುದ್ರಣಯಂತ್ರಗಳನ್ನು ನಡೆಸಲು ವಿದ್ಯುತ್ತನ್ನೇ ಬಳಸಲಾಗುತ್ತಿದೆ. ಜೊತೆಗೆ ಪ್ರಾಚೀನ ಗ್ರೀಕರ ಸರಳ ವ್ಯವಸ್ಥೆಯ ಟಂಕಸಾಲೆಗಳು ಇಂದು ಹಲವು ಹೊಣೆಗಾರಿಕೆಗಳ ನಾಣ್ಯಗಳನ್ನು ತಯಾರಿಸುವ ವಿವಿಧ ಹಂತಗಳು ಹೀಗಿವೆ: ಲೋಹಗಳನ್ನು ಕರಗಿಸಿ, ಪಟ್ಟಿಗಳನ್ನು ತಯಾರಿಸುವುದು. ಪಟ್ಟಿಗಳನ್ನು ಉರುಳೆಗಳಲ್ಲಿ ಉರುಳಿಸಿ ಒತ್ತಿ ಉದ್ದವಾದ ಕಿರಿದಗಲದ ತುಂಡುಗಳನ್ನು ತಯಾರಿಸುವುದು. ಆ ಪಟ್ಟಿಗಳಿಂದ ನಾಣ್ಯದ ಖಾಲಿ ಬಿಲ್ಲೆಗಳನ್ನು ತಯಾರಿಸುವುದು. ಖಾಲಿ ಬಿಲ್ಲೆಗಳನ್ನು ನಿರ್ದಿಷ್ಟ ತೂಕಕ್ಕೆ ಅಳವಡಿಸುವುದು. ಬಿಲ್ಲೆಗಳನ್ನು ಉರುಳಿಸಿ ಅಂಚುಗಳನ್ನು ಮೇಲೆಬ್ಬಿಸುವುದು. ಖಾಲಿ ಬಿಲ್ಲೆಗಳನ್ನು ಕಾಸಿ ಆರಿಸುವುದರ ಮೂಲಕ ಹದಪಡಿಸುವುದು (ಅನ್ನೀಲನ). ಬಿಲ್ಲೆಗಳನ್ನು ಆಮ್ಲದಿಂದ ಶುದ್ಧೀಕರಿಸುವುದು.ಸುತ್ತುಪಟ್ಟಿಯ (ಕಾಲರ್) ಒಳಗಿರಿಸಿದ ಬಿಲ್ಲೆಗಳ ಮೇಲ್ಭಾಗದಲ್ಲೂ ಕೆಳಭಾಗದಲ್ಲೂ ಅಧಿಕೃತ ಆಲೇಖ್ಯ ಗುರುತುಗಳನ್ನು ಮುದ್ರಿಸುವುದು.ಪ್ರತಿಯೊಂದು ನಾಣ್ಯವನ್ನೂ ತೂಕ ಮಾಡುವುದು.ವಿವಿಧ ಹಂತದ ಈ ಇಲ್ಲ ಕಾರ್ಯಗಳನ್ನೂ ಜಾಗರೂಕತೆಯಿಂದ ನೆರವೇರಿಸುವ ಸಲುವಾಗಿ ಆಧುನಿಕ ಟಂಕಸಾಲೆಗಳಲ್ಲಿ ಸಂಕೀರ್ಣ ಯಂತ್ರಗಳೂ ನಿಯಮಿತ ಅಧಿಕಾರವರ್ಗಗಳೂ ಇವೆ.

ಭಾರತದಲ್ಲಿ ಟಂಕಸಾಲೆಗಳು[ಬದಲಾಯಿಸಿ]

ಋಗ್ವೇದ ಕಾಲದಿಂದಲೇ (ಕ್ರಿ. ಪೂ. ಸು. 2500) ಭಾರತದಲ್ಲಿ ಲೋಹದ ನಾಣ್ಯಗಳು ಬಳಕೆಯಲ್ಲಿದ್ದವೆಂದು ಹೇಳಲು ಕೆಲವು ಆಧಾರಗಳಿವೆ. ವೈದಿಕ ಯುಗದ ಭಾರತೀಯರು ವಸ್ತುಗಳ ಬೆಲೆಕಟ್ಟುವಲ್ಲಿ ಹಸುಗಳನ್ನು ಮಾಪಕಗಳಾಗಿ ಬಳಸುತ್ತಿದ್ದರಾದರೂ ಋಗ್ವೇದದಲ್ಲೆ ಚಿನ್ನದ ಖಾಲಿ ನಾಣ್ಯಗಳನ್ನು ಹಿರಣ್ಯಪಿಂಡವೆಂದೂ ಮುದ್ರಿತ ನಾಣ್ಯವನ್ನು ನಿಷ್ಕವೆಂದೂ ಹೆಸರಿಸಲಾಗಿದೆ. ನಿಷ್ಕವು ಸರದಂಥ ಒಂದು ಆಭರಣವನ್ನು ಸೂಚಿಸುತ್ತದೆಯೇ ವಿನಾ ನಾಣ್ಯವನ್ನಲ್ಲ ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ. ವೈದಿಕ ಯುಗ ಮುಂದುವರಿದಂತೆ ನಿಷ್ಕ, ಶತಮಾನ, ಸುವರ್ಣ, ಪೌದ, ಕೃಷ್ಣಲ ಇತ್ಯಾದಿ ಮೌಲ್ಯಗಳು ಬಳಕೆಗೆ ಬಂದವು. ಈ ಮೌಲ್ಯಗಳು ನಾಣ್ಯಗಳ ಹೆಸರುಗಳೇ ಅಥವಾ ತೂಕಸೂಚಕಗಳೇ ಎಂಬುದರ ತನಕ ಬಗ್ಗೆ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಇಲ್ಲಿಯ ತನಕ ದೊರೆತಿರುವ ಮಾಹಿತಿಗಳ ಪ್ರಕಾರ ಕ್ರಿ. ಪೂ. 6ನೆಯ ಶತಮಾನದ ವೇಳೆಗೆ ಚಿನ್ನದ ಚೂರುಗಳ ಮೇಲೆ ಮುದ್ರೆಗಳನ್ನು ಒತ್ತಿ ಅವನ್ನು ನಾಣ್ಯಗಳಾಗಿ ಬಳಸಲಾಗುತ್ತಿತ್ತೆಂದು ಹೇಳಬಹುದಾಗಿದೆ.

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ (ಕ್ರಿ. ಪೂ. 4ನೆಯ ಶತಮಾನ) ನಾಣ್ಯಗಳನ್ನು ತಯಾರಿಸುವ ವಿಧಾನದ ವರ್ಣನೆಯಿದೆ. ಅವನ ಹೇಳಿಕೆಯಂತೆ ಲೋಹವನ್ನು ಮೊದಲು ಕರಗಿಸಿ, ಅವುಗಳಿಗೆ ಕ್ಷಾರಗಳನ್ನು ಸೇರಿಸಿ, ಶುದ್ಧಗೊಳಿಸಿ, ತಗಡುಗಳನ್ನು ತಯಾರಿಸುತ್ತಿದ್ದರು. ಅನಂತರ ಆ ತಗಡುಗಳನ್ನು ವಿವಿಧ ಆಕಾರಗಳಿಗೆ ಕತ್ತರಿಸಿ, ಹಾಗೆ ಕತ್ತರಿಸಿದ ಚೂರುಗಳ ಮೇಲೆ ಮುದ್ರೆಗಳನ್ನು ಒತ್ತುತ್ತಿದ್ದರು. ಆಗಿನ ಕಾಲದಲ್ಲೂ ಖೋಟಾ ನಾಣ್ಯಗಳ ತಯಾರಕರಿದ್ದರೆಂದು ಕೌಟಿಲ್ಯ ಆಪಾದಿಸುತ್ತಾನೆ. ರೂಪ್ಯಕಾಧ್ಯಕ್ಷನೆಂಬ ಟಂಕಸಾಲೆಯ ಅಧಿಕಾರಿಯನ್ನು ಅವನು ಪ್ರಸ್ತಾಪಿಸುತ್ತಾನೆ.

ಅಲೆಕ್ಸಾಂಡರನ ಆಕ್ರಮಣದ ಮುನ್ನ ಭಾರತದಲ್ಲಿ ಟಂಕಸಾಲೆಗಳಿರಲಿಲ್ಲವೆಂದೂ ಆಕ್ರಮಣಾನಂತರ ಗ್ರೀಕರ ಪ್ರಭಾವದಿಂದಾಗಿ ಭಾರತದಲ್ಲಿ ಟಂಕಸಾಲೆಗಳ ಮೂಲಕ ಕ್ರಮವತ್ತಾಗಿ ನಾಣ್ಯಗಳನ್ನು ಹೊರಡಿಸುವ ಪದ್ಧತಿ ಹುಟ್ಟಿಕೊಂಡಿತೆಂದೂ ಹೆಚ್ಚಿನ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕ್ರಿಸ್ತಪೂರ್ವದ ಕೊನೆಯ ವೇಳೆಯ ಮತ್ತು ಕ್ರಿಸ್ತಶಕದ ಪ್ರಾರಂಭಕಾಲದ, ವಿವಿಧಾಕಾರಗಳ ಮುದ್ರಾಂಕಿತ ನಾಣ್ಯಗಳು ಭಾರತದ ಎಲ್ಲೆಡೆಗಳಲ್ಲೂ ದೊರೆತಿದ್ದು, ಅವನ್ನು ತಯಾರಿಸುವಲ್ಲಿ ಬಳಸಲಾದ ಮಣ್ಣಿನ ಮುದ್ರೆಗಳು ಮಥುರಾ, ಅಲಹಾಬಾದ್, ಶಿಶುಪಾಲಘಡ, ಕೊಂಡಾಪುರ ಮುಂತಾದ ಸ್ಥಳಗಳಲ್ಲಿ ದೊರೆತಿರುವ ಕಾರಣ, ಅ ಊರುಗಳಲ್ಲಿ ಸಣ್ಣಪ್ರಮಾಣದ ಟಂಕಸಾಲೆಗಳಿದ್ದವೆಂದು ಊಹಿಸಲಾಗಿದೆ.

ಗ್ರೀಕರ ದಾಳಿಯ ಪರಿಣಾಮವಾಗಿ ಭಾರತದಲ್ಲೂ ಎರಕಹೊಯ್ದು ನಾಣ್ಯಗಳನ್ನು ತಯಾರುಮಾಡುವ ಪದ್ಧತಿ ಬಳಕೆಗೆ ಬಂದಿತು. ಇಂಡೋ-ಬ್ಯಾಕ್ಟಿಯನ್ ಅರಸುಗಳ ನಾಣ್ಯಗಳ ಅಲೇಖ್ಯಗಳ ಆಧಾರದ ಮೇಲೇ ಕಾಪಿಶೀ, ಪುಷ್ಕಲಾವತೀ ನಗರಗಳಲ್ಲಿ ಅಂಥ ನಾಣ್ಯಗಳನ್ನು ತಯಾರಿಸುವ ಟಂಕಸಾಲೆಗಳಿದ್ದವೆಂದು ಊಹಿಸಬಹುದಾಗಿದೆ.

ಮಗಧದ ಮೌರ್ಯರು ಬಲಗುಂದಿದ ಬಳಿಕ ಹಾಗೂ ಮುಸಲ್ಮಾನ ಪ್ರಭುತ್ವ ಪ್ರಬಲವಾಗುವವರೆಗಿನ ಸುದೀರ್ಘ ಅವಧಿಯಲ್ಲಿ ಭರದ ನಾನಾಭಾಗಗಳಲ್ಲಿ ರಾಜ್ಯವಾಳಿದ ಅರಸುಮನೆತನಗಳು ಹೊರಡಿಸಿದ ನಾಣ್ಯಗಳು ಹೇರಳವಾಗಿ ದೊರೆತಿವೆಯಾದರೂ ಆ ನಾಣ್ಯಗಳನ್ನು ಮುದ್ರಿಸಿದ ಟಂಕಸಾಲೆಗಳ ಬಗ್ಗೆ ನಮಗೆ ನೇರವಾದ ಮಾಹಿತಿಗಳೇನೂ ದೊರೆತಿಲ್ಲ. ಕರ್ನಾಟಕದ ಮಧ್ಯಯುಗೀನ ಶಾಸನಗಳಲ್ಲಿ ಕಟಕಗದ್ಯಾಣದ ಪ್ರಸ್ಥಾಪಗಳಿರುವ ಕಾರಣ, ಸಾಮ್ರಾಜ್ಯದ ಕಟಕದಲ್ಲಿ (ಅಂದರೆ ರಾಜಧಾನಿ) ಟಂಕಸಾಲೆ ಇತ್ತೆಂದುಕೊಳ್ಳಬಹುದಾಗಿದೆ. ಲೊಕ್ಕಿಗುಂಡಿಯಲ್ಲೂ (ಇಂದಿನ ಲಕ್ಕುಂಡಿ) ಟಂಕಸಾಲೆ ಇತ್ತೆಂಬುದು ಅದೇ ಯುಗದ ಶಾಸನಗಳಿಂದ ತಿಳಿದುಬರುವ ಸಂಗತಿ. ಅಂದಿನ ಕನ್ನಡ ಶಾಸನಗಳಲ್ಲಿ ಟಂಕಸಾಲೆಗಳನ್ನು ಕಮ್ಮಟಗಳೆಂದೂ ಅವುಗಳ ಅಧಿಕಾರಗಳನ್ನು ಕಮ್ಮಟದಾಚಾರಿಗಳೆಂದೂ ಕರೆಯಲಾಗಿದೆ. ವಿಜಯನಗರ ಯುಗದ ದಕ್ಷಿಣ ಭಾರತದಲ್ಲಿ ಆ ಸಾಮ್ರಾಜ್ಯದ ಹಲವೆಡೆಗಳಲ್ಲಿ ಟಂಕಸಾಲೆಗಳಿದ್ದುವು. ಉದಾಹರಣೆಗೆ, ಸಾಮ್ರಾಜ್ಯದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕರಾವಳಿಯ ಬಾರಕೂರು ಮತ್ತು ಮಂಗಳೂರು ನಗರಗಳಲ್ಲಿಯ ಟಂಕಸಾಲೆಗಳು ನಾಣ್ಯಗಳನ್ನು ಮುದ್ರಿಸುತ್ತಿದ್ದುವು.

ಟಂಕಸಾಲೆಗಳ ಮಟ್ಟಿಗೆ ಭಾರತ ಆಧುನಿಕ ಯುಗವನ್ನು ಪ್ರವೇಶಿಸುವುದು ಮುಸಲ್ಮಾನರು ಪ್ರಬಲರಾದಾಗಿನಿಂದ, ಮುಸಲ್ಮಾನ ಸುಲ್ತಾನರ ನಾಣ್ಯಗಳಲ್ಲಿ ಅವನ್ನು ಅಚ್ಚುಹಾದಿಸಿದ ಟಂಕಸಾಲೆಗಳ ಹೆಸರುಗಳನ್ನು ನಾಣ್ಯಗಳ ಮೇಲೆ ಹಾಕಿಸುವುದರಲ್ಲಿ ವಿಶೇಷ ಆಸಕ್ತಿ ವಹಿಸಿದ್ದ ಕ್ರಿ. ಶ. 14ನೆಯ ಶತಮಾನದಲ್ಲಿ ರಾಜ್ಯವಾಳಿದ ಮಹಮ್ಮದ್-ಬಿನ್-ತುಘಲಖನ ಕಾಲದಲ್ಲಿ ಕನಿಷ್ಠಪಕ್ಷ ಎಂಟು ಟಂಕಸಾಲೆಗಳು (ದೆಹಲಿ ದೌಲತಾಬಾದ್, ತೆಲಿಂಗಾಣ, ಸುಲ್ತಾನ್‍ಪುರ, ತುಘಲಖ್ಪುರ, ಧಾರ್, ಲಖನೌ, ಸತ್‍ಗಾಂವ್) ಕೆಲಸಮಾಡುತ್ತಿದ್ದುವು. ಷೇರ್ ಷಾ ಸೂರಿ ಸಾಮ್ರಾಜ್ಯದಲ್ಲಿ ವ್ಯವಸ್ಥಿತವಾಗಿದ್ದ ಟಂಕಸಾಲೆಗಳಲ್ಲಿ ನಾಣ್ಯಗಳನ್ನು ಮುದ್ರಿಸುವುದರ ಜೊತೆಗೆ ಪ್ರಮಾಣ ವೇಳೆಗಳಲ್ಲಿ ತಾನು ಬೀಡುಬಿಟ್ಟಿದ್ದ ಸ್ಥಳಗಳಿಂದಲೂ ಚಲಿಸುವ ಟಂಕಸಾಲೆಗಳ ಮೂಲಕ ನಾಣ್ಯಗಳನ್ನು ಮುದ್ರಿಸಿ ಹೊರಡಿಸುವ ಸಾಹಸಮಾಡಿದ್ದ.

ಸಿಖ್ಖರ ಪ್ರಖ್ಯಾತ ದೊರೆ ರಣಜಿತ್ ಸಿಂಗ್ ತನ್ನ ಆಳ್ವಿಕೆಯ ನಾಣ್ಯಗಳನ್ನು ಅಮೃತಸರ, ಲಾಹೋರ್ ಮತ್ತು ಕಾಶ್ಮೀರದ ಟಂಕಸಾಲೆಗಲ್ಲಿ ಮುದ್ರಿಸಿ ಹೊರಡಿಸಿರುವನು. 18ನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಮುಸಲ್ಮಾನರ ಪ್ರಭುತ್ವ ಸ್ಥಾಪನೆಯಾದಾಗ ಹೈದರ್ ಆಲಿ 1963ರಲ್ಲಿ ಬಿದನೂರಿನಲ್ಲಿ ಒಂದು ಟಂಕಸಾಲೆಯನ್ನು ಪ್ರಾರಂಭಿಸಿದ. ವಿವಿಧ ಮಾದರಿಯ ನಾಣ್ಯಗಳನ್ನು ಹೇರಳವಾಗಿ ಹೊರಡಿಸಿದ ಅವನ ಉತ್ತರಾಧಿಕಾರ ಟೀಪ್ಪು ಸುಲ್ತಾನನ ಆಳ್ವಿಕೆಯ ಕಾಲದಲ್ಲಿ ಕನಿಷ್ಠಪಕ್ಷ ಹದಿನಾರು ಟಂಕಸಾಲೆಗಳು (ಶ್ರೀರಂಗಪಟ್ಟಣ, ನಗರ, ಬೆಂಗಳೂರು, ಗುತ್ತಿ, ಚಿತ್ರದುರ್ಗ, ಕಲ್ಲಿಕೋಟೆ, ಫೆರೋಕ, ಸತ್ಯಮಂಗಲ, ದಿಂಡಿಗಲ್, ಗುರ್ರಂಕೊಂಡ, ಧಾರವಾಡ, ಮೈಸೂರು ಇತ್ಯಾದಿ) ಅಸ್ತಿತ್ವದಲ್ಲಿದ್ದುವು.

1510ರಲ್ಲಿ ಗೋವೆಯನ್ನು ವಶಪಡಿಸಿಕೊಂಡ ಪೋರ್ಚಗೀಸರು ತಮ್ಮ ನಾಣ್ಯಗಳನ್ನು ಮುದ್ರಿಸುವ ಸಲುವಾಗಿ ಅಲ್ಲಿ ಟಂಕಸಾಲೆಯನ್ನು ಸ್ಥಾಪಿಸಿದರು. ಡಚ್ಚರು ಮೊದಮೊದಲು ಮೊಗಲರ ಮತ್ತೂ ಇತರರ ನಾಣ್ಯಗಳನ್ನೇ ಕೆಲವು ಬದಲಾವಣೆಗಳೊಂದಿಗೆ ಉಪಯೋಗಿಸುತ್ತಿದ್ದರಾದರೂ ಸ್ವಲ್ಪಕಾಲಾನಂತರ ತಮ್ಮದೇ ನಾಣ್ಯಗಳನ್ನು ಮುದ್ರಿಸುವ ಸಲುವಾಗಿ ನಾಗಪಟ್ಟಣ, ಮಚಲಿಪಟ್ಟಣ, ಪಾಂಡಿಚ್ಚೇರಿ, ಕೊಚ್ಚಿ ಮುಂತಾದ ಕಡೆಗಳಲ್ಲಿ ಟಂಕಸಾಲೆಗಳನ್ನು ಸ್ಥಾಪಿಸಿದರು.

ಆಂಗ್ಲರೂ ಮೊದಮೊದಲು ಮೊಗಲರ ಟಂಕಸಾಲೆ ಬಳಸುತ್ತಿದ್ದರು. ಆದರೆ ದೇಶಾದ್ಯಂತ ಕ್ರಮೇಣ ಆಂಗ್ಲರ (ಈಸ್ಟ್ ಇಂಡಿಯ ಕಂಪನಿ) ಹಿಡಿತ ವ್ಯಾಪಿಸಿದಂತೆ ಕಂಪನಿ ಸರ್ಕಾರಕ್ಕೆ ಸ್ವಂತ ಟಂಕಸಾಲೆಗಳನ್ನು ಸ್ಥಾಪಿಸುವುದು ಅನಿವಾರ್ಯವಾಯಿತು. ಇವರು ಹೂಡಿದ ಮೊದಲ ಟಂಕಸಾಲೆ ಮದ್ರಾಸಿನದು (1620). 1829ರಲ್ಲಿ ಇದನ್ನು ಮುಚ್ಚಿದರು. 1671ರಲ್ಲಿ ಒಂದು ಟಂಕಸಾಲೆಯನ್ನು ಮುಂಬಯಿಯಲ್ಲಿ ಸ್ಥಾಪಿಸಲಾಯಿತು. 1677ರಿಂದ ಇಲ್ಲಿ ನಾಣ್ಯಗಳನ್ನು ಟಂಕಿಸುವ ಕಾರ್ಯವನ್ನು ಆರಂಭಿಸಿದರು. ಮುಂಬಯಿಯಲ್ಲಿ ಈಗ ಇರುವ ಟಂಕಸಾಲೆಯ ರಚನೆಯನ್ನು 1824ರಲ್ಲಿ ತೊಡಗಿ 1829ರಲ್ಲಿ ಪೂರ್ಣಗೊಳಿಸಲಾಯಿತು. ಕಲ್ಕತ್ತದಲ್ಲಿ ಮೊದಲ ಟಂಕಸಾಲೆಯನ್ನು 1757ರಲ್ಲೂ ಎರಡನೆಯ ಟಂಕಸಾಲೆಯನ್ನು 1792ರಲ್ಲೂ ನಿರ್ಮಿಸಿದರು. ಕಲ್ಕತ್ತದ ಸ್ಟ್ರ್ಯಾಂಡ್ ರಸ್ತೆಯಲ್ಲಿನ ಟಂಕಸಾಲೆಯನ್ನು 1819ರಲ್ಲಿ ಯೋಜಿಸಿ 1824ರ ಮಾರ್ಚ್ 31ರಂದು ಅದರ ಆಸ್ತಿಭಾರವನ್ನು ಹಾಕಿ 1829ರ ಆಗಸ್ಟ್ 1ರಂದು ಉದ್ಘಾಟಿಸಲಾಯಿತು. ಪಶ್ಚಿಮ ಬಂಗಾಳದ ಅಲೀಪುರದಲ್ಲಿರುವ ಹೊಸ ಟಂಕಸಾಲೆಗೆ ಹಳೆಯದಾದ ಯಂತ್ರಾವಳಿಗಳನ್ನು 1951ರಲ್ಲಿ ವರ್ಗಮಾಡಿದ ಬಳಿಕ ಹಳೆಯದು ಬೆಳ್ಳಿ ಶುದ್ಧಿಕಾರಿಯಾಗಿ ಕಾರ್ಯ ನಡೆಸುತ್ತಿದೆ. ಅಲೀಪುರದ ಟಂಕಸಾಲೆ ಸರ್ವವಿಧದಲ್ಲೂ ಅತ್ಯಾಧುನಿಕವಾದದ್ದು. 8-ಗಂಟೆಗಳ ಒಂದು ಪಾಳಿಯಲ್ಲಿ 12 ಲಕ್ಷ ನಾಣ್ಯ ತುಣುಕುಗಳ ಉತ್ಪಾದನೆ ಈ ಟಂಕಸಾಲೆಯ ಪ್ರಾರಂಭಿಕ ಅಲೇಖಿತ ಸಾಮಥ್ರ್ಯ. ಇವುಗಳ ಜೊತೆಗೆ ಹಲವಾರು ಪದಕ ಮುಂತಾದವನ್ನೂ ಈ ಟಂಕಸಾಲೆ ತಯಾರಿಸುತ್ತದೆ. ಹೈದರಾಬಾದಿನ ಟಂಕಸಾಲೆಯನ್ನು ಭಾರತ ಸರ್ಕಾರ 1950ರಲ್ಲಿ ತನ್ನ ಅಧೀನಕ್ಕೆ ತೆಗೆದುಕೊಂಡಿತು. (ಇದರ ಸ್ಥಾಪನೆ ಆದದ್ದು 1809ರಲ್ಲಿ). ಈಗ (1975) ಭಾರತದಲ್ಲಿ ಒಟ್ಟು ಮೂರು ಟಂಕಸಾಲೆಗಳಿವೆ; ಮುಂಬಯಿ, ಕಲ್ಕತ್ತ (ಅಲೀಪುರ) ಮತ್ತು ಹೈದರಾಬಾದು.

ಟಂಕವಿಧಾನ ನಡೆದು ಬಂದಿರುವ ಹಾದಿ ಸ್ಥೂಲವಾಗಿ ಹೀಗಿದೆ: ಲೋಹ ದ್ರವವನ್ನು ಸಾಚಿಗಳಿಗೆ ಹುಯ್ದು ತಯಾರಿಕೆ; ಸುತ್ತಿಗೆ ಅಡಿಗಲ್ಲುಗಳ ನಡುವೆ ಲೋಹ ತುಣುಕುಗಳನ್ನು ಇರಿಸಿ ಕುಟ್ಟಿ ತಯಾರಿಕೆ; ಆಧುನಿಕ ಯಂತ್ರೋಪಕರಣಗಳಿಂದ ನಾಜೂಕು ತಯಾರಿಕೆ.

1833ರ ವರೆಗೆ ಕಂಪನಿ ಸರ್ಕಾರದ ಸ್ಥಳೀಯ ನಾಣ್ಯಗಳನ್ನು ಇಂಗ್ಲಿಷ್ ಟಂಕಸಾಲೆಯಲ್ಲಿ ಟಂಕಿಸುತ್ತಿದ್ದರು. ಮೊದಲ ನಾಣ್ಯೀಕರಣ ಕಾಯದೆ (1835) ಎರಡು-ರೂಪಾಯಿ, ಒಂದು-ರೂಪಾಯಿ, ಅರ್ಧ-ರೂಪಾಯಿ ಮತ್ತು ಕಾಲು-ರೂಪಾಯಿ ನಾಣ್ಯಗಳ ತೂಕ ಹಾಗೂ ಬೆಳ್ಳಿ ಅಂಶವನ್ನು ವಿಧಿಸಿತು. ಈ ಕಾಯದೆಯನ್ನು ಕಾಲದಿಂದ ಕಾಲಕ್ಕೆ ಬದಲಾಯಿಸುತ್ತ ಬಂದು 1870ರ ಕಾಯದೆಯಲ್ಲಿ ಪರಿಷ್ಕøತವಾದ ಆಜ್ಞೆಯನ್ನು ವಿಧಿಸಲಾಯಿತು. ಇಂಗ್ಲೆಂಡಿನ ರಾಜನ ಮುಖ ಮುದ್ರೆಯನ್ನು ಪಡೆದಿದ್ದ ನಾಣ್ಯಗಳೇ ಆಗ ಪ್ರಚಲಿತವಾಗಿದ್ದಂಥವು. 1950ರ ಆಗಸ್ಟ್ 15ರಂದು (ಸ್ವತಂತ್ರಭಾರತಕ್ಕೆ ಅಂದು ಮೂರು ವರ್ಷ ತುಂಬಿತು) ನಾಣ್ಯಗಳ ಸ್ವರೂಪದಲ್ಲಿ ಬಲು ಮುಖ್ಯವಾದ ಒಂದು ಬದಲಾವಣೆಯನ್ನು ಬಳಕೆಗೆ ತರಲಾಯಿತು. ಮೇಲ್ಭಾಗದಲ್ಲಿ ರಾಜನ ಮುಖಮುದ್ರೆಯ ಬದಲು ಭಾರತ ಸರ್ಕಾರದ ಲಾಂಛನದ (ಅಶೋಕ ಸ್ತಂಭ ಮತ್ತು ಸಿಂಹಗಳು) ಪ್ರತಿಸ್ಥಾಪನೆ; ಕೆಳಭಾಗದಲ್ಲಿ ಸ್ವತಂತ್ರಭಾರತಕ್ಕೆ ಒಪ್ಪುವಂಥ ಹೊಸ ಅಲೇಖ್ಯದ ಮುದ್ರೆ. 1957ರ ಏಪ್ರಿಲ್ 1ರಂದು ಬಳಕೆಗೆ ತರಲಾದ ದಾಶಮಿಕ ಪದ್ಧತಿಗೆ ಅನುಸಾರವಾದ ನಾಣ್ಯಗಳ ತಯಾರಿಕೆ ಮತ್ತು ಚಲಾವಣೆ ಇನ್ನೊಂದು ಗಮನಾರ್ಹವಾದ ಹಂತ. ಇದಕ್ಕೆ ಅನುಸಾರವಾಗಿ ನಾಣ್ಯಗಳ ರಚನಾವಸ್ತುವನ್ನು ಕುರಿತು ತಳೆದ ನಿರ್ಧಾರಗಳಿವು; ರೂಪಾಯಿ … ಶುದ್ಧ ನಿಕ್ಕಲ್ 50 ನೆಯ ಪೈಸೆ .. ಶುದ್ಧ ನಿಕ್ಕಲ್ 25 ನೆಯ ಪೈಸೆ .. ಶುದ್ಧ ನಿಕ್ಕಲ್ 10 ನೆಯ ಪೈಸೆ .. ತಾಮ್ರ-ನಿಕ್ಕಲ್ (3:1) 5 ನೆಯ ಪೈಸೆ .. ತಾಮ್ರ-ನಿಕ್ಕಲ್ (3:1) 1 ನೆಯ ಪೈಸೆ .. ಹಿತ್ತಾಳೆ 1964ರ ಜೂನ್ 1ರಿಂದ "ನಯಾ/ನಯೇ" ಗುಣವಾಚಕವನ್ನು ತ್ಯಜಿಸಲಾಯಿತು.

ಅಲ್ಲಿಂದೀಚೆಗೆ ನಾಣ್ಯಗಳನ್ನು ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಇವನ್ನು ಕುರಿತ ವಿವರಗಳಿಗೆ ನೋಡಿ-ನಾಣ್ಯಗಳು.

ಭಾರತೀಯ ಟಂಕಸಾಲೆಗಳು, ಆಸ್ಟ್ರೇಲಿಯಾ, ಭೂತಾನ, ಶ್ರೀಲಂಕ, ಈಜಿಪ್ಟ್, ಪಾಕಿಸ್ಥಾನ, ಸೌದಿ ಅರೇಬಿಯ, ಸ್ಟ್ರೇಟ್ಸ್ ಸೆಟ್ಲ್‍ಮೆಂಟ್, ತಾಹ್ಲೆಂಡ್, ಗ್ರೀಸ್ ಇತ್ಯಾದಿ ಪರರಾಷ್ಟ್ರಗಳಿಗಾಗಿ ಕೂಡ ನಾಣ್ಯಗಳನ್ನು ಟಂಕಿಸುವ ಹೊಣೆಗಾರಿಕೆ ವಹಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ.

ಇವುಗಳ ಜೊತೆಗೆ ಸ್ಮರಣಾರ್ಥ ನಾಣ್ಯಗಳನ್ನು ಮತ್ತು ಪದಕಗಳನ್ನು ಕೂಡ ಭಾರತದ ಟಂಕಸಾಲೆಗಳು ಟಂಕಿಸಿವೆ. ಉದಾಹರಣೆಗೆ ನೆಹ್ರೊನಾಣ್ಯಗಳು (1964). ಗಾಂಧೀನಾಣ್ಯಗಳು (1969). ಎಫ್ ಎ ಓ ನಾಣ್ಯಗಳು (1970). ಭಾರತ ಸ್ವಾತಂತ್ರ್ಯದ ಬೆಳ್ಳಿಹಬ್ಬ ನಾಣ್ಯಗಳು (1972), ಅಭಿವೃದ್ಧಿ ಸೂಚಕ (ಯೋಜಿತ ಕುಟುಂಬ, ಸರ್ವರಿಗೂ ಆಹಾರ) ನಾಣ್ಯಗಳು (1974). ಅಂತರರಾಷ್ಟ್ರೀಯ ಮಹಿಳಾವರ್ಷದ ಸ್ಮರಣೆಗಾಗಿ ಅಭಿವೃದ್ಧಿಸೂಚಕ (ಸಮತೆ, ಅಭಿವೃದ್ಧಿ ಮತ್ತು ಶಾಂತಿ) ನಾಣ್ಯಗಳು (1975).

"https://kn.wikipedia.org/w/index.php?title=ಟಂಕಸಾಲೆ&oldid=739225" ಇಂದ ಪಡೆಯಲ್ಪಟ್ಟಿದೆ