ಕನ್ನಡ ವಿಲಾಸಿ ರಂಗಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಟಕ ಕಲೆಯನ್ನು ಕಸಬಿಗಾಗಿ ಅಥವಾ ಸಂಪಾದನೆಗಾಗಿ ಕಲಿಯದೆ ಆತ್ಮವಿನೋದಕ್ಕಾಗಿ ಅಭ್ಯಾಸ ಮಾಡಿ ಅಭಿನಯಿಸುವವರ ವಿಲಾಸಿ ರಂಗಭೂಮಿ ಅಥವಾ ಹವ್ಯಾಸಿ ರಂಗಭೂಮಿ ಕನ್ನಡದಲ್ಲಿ ಈ ಕಲೆಯ ಬೆಳೆವಣಿಗೆಗೆ ತಕ್ಕಮಟ್ಟಿಗೆ

ಕಾರಣವಾಗಿದೆ.

20ನೆಯ ಶತಮಾನದ[ಬದಲಾಯಿಸಿ]

ಕನ್ನಡ ರಂಗಭೂಮಿಯ ಬೆಳೆವಣಿಗೆಯಲ್ಲಿ ಒಂದು ಕಾಲದಲ್ಲಿ ವೃತ್ತಿನಿರತರ ಕಂಪನಿಗಳು ಪ್ರಮುಖ ಪಾತ್ರ ವಹಿಸಿ ಜನತೆಯಲ್ಲಿ ಅಭಿಮಾನ ಮೂಡಿಸಿದ್ದುವು. ಸು. 1930ರ ದಶಕದಲ್ಲಿ ವೃತ್ತಿ ರಂಗಭೂಮಿಯ ಇಳಿಮುಖದ ಸೂಚನೆಗಳು ಕಾಣತೊಡಗಿದುವು. ಬದಲಾಗುತ್ತಿದ್ದ ಸಮಾಜಕ್ಕೆ ಕಂಪನಿ ನಾಟಕಗಳು ರುಚಿಸದೇ ಹೋದವು. ಆ ನಾಟಕಗಳ ವಸ್ತು ಮತ್ತು ಶೈಲಿ, ಅವುಗಳಿಗೆ ವ್ಯಯವಾಗುತ್ತಿದ್ದ ಕಾಲ, ಚಲನಚಿತ್ರಗಳ ಪ್ರವೇಶ ಮುಂತಾದವು ಕಂಪನಿ ನಾಟಕಗಳು ರುಚಿಸದೆ ಇದ್ದುದಕ್ಕೆ ಕಾರಣಗಳು. ಇದೇ ಸಮಯಕ್ಕೆ ಸರಿಯಾಗಿ ಕಾಲೇಜುಗಳಲ್ಲಿ ಇಂಗ್ಲಿಷ್ ನಾಟಕಗಳು ಪ್ರಯೋಗಿಸಲ್ಪಡುತ್ತಿದ್ದವು. ವಿದ್ಯಾವಂತ ಜನಕ್ಕೆ ತಾವೂ ಕನ್ನಡದಲ್ಲಿ ನಾಟಕಗಳನ್ನು ಪ್ರಯೋಗಿಸಬೇಕೆಂಬ ಅಭಿಲಾಷೆ ಉಂಟಾಯಿತು. ಕಾಲೇಜು ದಿನಾಚರಣೆ ಇತ್ಯಾದಿಗಳಲ್ಲಿ ನಾಟಕ ಪ್ರಯೋಗ ಅನಿವಾರ್ಯವೆನಿಸಿತ್ತು. ಇದಕ್ಕಾಗಿ ಆಡಲು ಹೊಸ ನಾಟಕಗಳು ಬೇಕಾದುವು. ಈ ನಾಟಕಗಳ ಬರೆವಣಿಗೆ ಪ್ರಧಾನವಾಗಿ ಗದ್ಯ. ಪೌರಾಣಿಕ ಐತಿಹಾಸಿಕ ನಾಟಕಗಳಿಗೆ ಬೇಕಾಗುವಂತೆ ಹೆಚ್ಚು ಪಾಲು ನಾಟಕಗಳಿಗೆ ಉಡಿಗೆತೊಡಿಗೆಗಳಾಗಲಿ, ರಂಗಸಜ್ಜಿಕೆಯಾಗಲಿ, ದೀಪಾಲಂಕಾರವಾಗಲೀ ಬೇಕಿರಲಿಲ್ಲ. ಇದರಿಂದಾಗಿ ಹಲವು ನಾಟಕಗಳು ಕನ್ನಡದಲ್ಲಿ ಬಂದುವು. ಈ ರೀತಿಯಾದ ಬೆಳೆವಣಿಗೆ ಕಾಲೇಜುಗಳಿಗೇ ಸೀಮಿತವಾಗಿರಲಿಲ್ಲ. ಬೇರೆ ಬೇರೆ ರೀತಿಯ ನಾಗರಿಕ ಸಂಘ ಸಂಸ್ಥೆಗಳು ಈ ದಿಸೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದುವು. ಕನ್ನಡ ನಾಡಿನ ವಿವಿಧ ಭಾಗಗಳಲ್ಲಿ ಒಂದು ಕಾಲಕ್ಕೆ ವೃತ್ತಿನಿರತ ನಾಟಕ ಕಂಪನಿಗಳು ಹುಟ್ಟಿಕೊಂಡಂತೆ ವಿಲಾಸಿ ತಂಡಗಳು ಹುಟ್ಟಿಕೊಂಡದ್ದು ಆಗ.ಆದಿಭಾಗದಲ್ಲಿ ಪ್ರಾರಂಭವಾದ ಭರತ ಕಲೋತ್ತೇಜಕ ಸಂಗೀತ ಸಮಾಜ ಮೊದಲ ವಿಲಾಸಿ ತಂಡವೆಂದು ಹೇಳಬಹುದು. ಇದು ಹೆಚ್ಚು ಕಾಲ ಬಾಳದೆ ಹೋದರೂ ಉತ್ತರ ಕರ್ನಾಟಕದಲ್ಲಿ ಅನೇಕ ವಿಲಾಸಿ ತಂಡಗಳು ಹುಟ್ಟಿಕೊಳ್ಳಲು ಕಾರಣವಾಯಿತು. ಆದ್ದರಿಂದ ಭರತ ಕಲೋತ್ತೇಜಕ ಸಂಗೀತ ಸಮಾಜಕ್ಕೆ ಐತಿಹಾಸಿಕ ಮಹತ್ತ್ವವಿದೆ. ಈ ತಂಡದ ಪ್ರಭಾವದಿಂದ ಹುಟ್ಟಿಕೊಂಡ ವಿಲಾಸಿ ತಂಡಗಳಲ್ಲಿ ಪ್ರಮುಖವಾದದ್ದು ಗದಗಿನ ದಿ ಯಂಗ್ ಮೆನ್ಸ್‌ ಫುಟ್ಬಾಲ್ ಕ್ಲಬ್ ಅಸೋಸಿಯೇಷನ್. ಹುಯಿಲಗೋಳ ನಾರಾಯಣರಾಯರು ಈ ವಿಲಾಸಿ ತಂಡದ ಉಸಿರಾಗಿದ್ದರು. ಈ ತಂಡದ ಮೂಲಕ ಹೊಸ ಹೊಸ ತಂತ್ರ ಹಾಗೂ ಹೊಸ ಹೊಸ ವಸ್ತುಗಳುಳ್ಳ ನಾಟಕಗಳನ್ನು ಹುಯಿಲಗೋಳರು ರಂಗದ ಮೇಲೆ ತಂದರು. ಬಾಗಲಕೋಟೆಯ ವಾಸುದೇವ ವಿನೋದಿನೀ ಸಭಾವನ್ನೂ ಪ್ರಮುಖ ವಿಲಾಸೀ ತಂಡಗಳ ಸಾಲಿನಲ್ಲಿ ಹೆಸರಿಸುವುದು ಆವಶ್ಯಕ. ಈ ವಿಲಾಸಿ ತಂಡ ಪ್ರಮುಖವಾಗಿ ಮೊದಲಿಗೆ ಕೆರೂರು ವಾಸುದೇವಾಚಾರ್ಯರ, ಅನಂತರ ಶ್ರೀರಂಗರ ನಾಟಕಗಳನ್ನೇ ಪ್ರದರ್ಶಿಸಿತು. ಈ ತಂಡ ಕರ್ನಾಟಕದ ವಿವಿಧ ಭಾಗಗಳಲ್ಲಿ ನಾಟಕಗಳ ಪ್ರದರ್ಶನವನ್ನು ಏರ್ಪಡಿಸುತ್ತಿತ್ತು ಎಂಬುದು ತಿಳಿದುಬರುತ್ತದೆ. ಕನ್ನಡ ನಾಟ್ಯ ವಿಲಾಸಿ ಸಂಘ ಧಾರವಾಡದಲ್ಲಿ ಶ್ರೀರಂಗರ ನೇತೃತ್ವದಲ್ಲಿ ಆರಂಭವಾಯಿತು. ಶ್ರೀರಂಗರೇ ಈ ತಂಡಕ್ಕೆ ನಾಟಕಗಳನ್ನು ಬರೆದರು ; ಭಾರತದ ವಿವಿಧ ಭಾಗಗಳಲ್ಲಿ ಆಡಿಸಿದರು. ಧಾರವಾಡದ ಕಲೋಪಾಸಕ ಮಂಡಳಿಯೂ ಧಾರವಾಡದ ವಿಲಾಸಿ ತಂಡಗಳಲ್ಲಿ ಮುಖ್ಯವಾದದ್ದು. ಈ ತಂಡ ದ. ರಾ. ಬೇಂದ್ರೆಯವರ, ಎಲ್. ಈ. ಬೇಂದ್ರೆಯವರ ಮತ್ತು ಹುಯಿಲಗೋಳ ನಾರಾಯಣ ರಾಯರ ನಾಟಕಗಳನ್ನು ಅಭ್ಯಾಸ ಮಾಡಿ, ಉತ್ತರ ಕರ್ನಾಟಕದ ಪ್ರಮುಖ ಊರುಗಳಲ್ಲಿ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಿದೆ. ಈ ರೀತಿ ದುಡಿದ ವಿಲಾಸಿ ತಂಡಗಳಲ್ಲಿ ಕನ್ನಡ ಕಲೋದ್ಧಾರಕ ಸಂಘವೂ ಒಂದು. ಧಾರವಾಡದ ಕರ್ನಾಟಕ ಕಾಲೇಜು ಆ ಭಾಗದ ಸಾಂಸ್ಕೃತಿಕ ಜೀವನದ ಕೇಂದ್ರವಾಗಿದ್ದು, ಅನೇಕ ನಟರನ್ನು ವಿಲಾಸಿ ರಂಗಭೂಮಿಗೆ ಕೊಟ್ಟಿದೆ. ಮನೋಹರ ಗ್ರಂಥಮಾಲೆಯ ಜಿ. ಬಿ. ಜೋಶಿ ಯವರು ವಿಲಾಸಿಗಳಿಂದ ನಾಟಕಾಭ್ಯಾಸ ಮಾಡಿಸಿ, ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಾಗೂ ಪುನ, ಮುಂಬಯಿ ಮುಂತಾದ ಪ್ರಮುಖ ಊರುಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದುದನ್ನು ಇಲ್ಲಿ ಉಲ್ಲೇಖಿಸಬಹುದು. ಧಾರವಾಡದ ಆಕಾಶವಾಣಿ ವಿಭಾಗದಲ್ಲಿ ನಾಟಕ ನಿರ್ದೇಶಕರಾಗಿರುವ ಎನ್. ಎಸ್. ವಾಮನ್ ಆಕಾಶವಾಣಿಯ ಹೊರಗೂ ಕೆಲಸ ಮಾಡುತ್ತಿದ್ದರು. ತಮ್ಮ ಸ್ನೇಹಿತರೊಡಗೂಡಿ ಅಲ್ಲಲ್ಲೆ ನಾಟಕಗಳನ್ನು ಪ್ರದರ್ಶಿಸುವುದರ ಜೊತೆಗೆ ನಾಟಕ ತಂಡಗಳಿಗೆ ಸಹಾಯ ಮಾಡುತ್ತಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಾಪಕ ಮಿತ್ರರು ಈಚೆಗೆ ಅಂತರಂಗವೆಂಬ ಒಂದು ವಿಲಾಸಿ ತಂಡವನ್ನು ರಚಿಸಿಕೊಂಡಿದ್ದರು.

ಬೆಂಗಳೂರಿನ ಅಮೆಚ್ಯೂರ್ ಡ್ರಮಾಟಿಕ್ ಅಸೋಸಿಯೇಷನ್ (ಎ.ಡಿ.ಎ.)[ಬದಲಾಯಿಸಿ]

ಬಹಳ ಹಳೆಯ ಹಾಗೂ ಬಹುಮುಖ್ಯ ವಿಲಾಸಿತಂಡ. ಆಧುನಿಕ ಕನ್ನಡ ನಾಟಕಗಳ ಜನಕ ಕೈಲಾಸಂ ಅವರ ಮೊದಲ ನಾಟಕವಾದ ಟೊಳ್ಳುಗಟ್ಟಿಯ ಜನನಕ್ಕೆ ಎ. ಡಿ. ಎ. ಕಾರಣ. 1943ರಲ್ಲಿ ಬೆಂಗಳೂರಿನಲ್ಲಿ ಛಾಯಾ ಕಲಾವಿದರ ತಂಡದ ಜನನವಾಯಿತು. ಇವರು ಮೊದಲಿಗೆ ಕೈಲಾಸಂ ನಾಟಕಗಳನ್ನೂ ಅನಂತರ ಪರ್ವತವಾಣಿಯವರ ನಾಟಕಗಳನ್ನೂ ಪ್ರದರ್ಶಿಸಿದರು. ಅಲ್ಲದೆ ಬೆಂಗಳೂರಿನ ರವಿ ಕಲಾವಿದರು, ಶಶಿ ಕಲಾವಿದರು, ಚಿತ್ರಕಲಾವಿದರು, ಕಮಲ ಕಲಾಮಂದಿರ ಇವೇ ಮೊದಲಾದ ತಂಡಗಳು ವಿಲಾಸಿ ರಂಗಭೂಮಿಯಲ್ಲಿ ಸಾಕಷ್ಟು ಕೆಲಸಮಾಡಿವೆ. ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಬೆಂಗಳೂರಿನ ಕಲಾಕುಂಜ, ಕಲಾಪೋಷಿಣಿ, ಮಿತ್ರಬಳಗ, ಸಾಧನಾ ಕಲಾವಿದರು, ಕನ್ನಡ ಸಾಹಿತ್ಯ ಕಲಾಸಂಘ, ಪ್ರತಿಮಾ ನಾಟಕರಂಗ ಇವೇ ಮೊದಲಾದವು ಇತರ ಭಾಷೆಗಳ ಅನುವಾದಗಳನ್ನು, ಅಸಂಗತ ನಾಟಕಗಳನ್ನು, ಕನ್ನಡದ ಉತ್ತಮ ನಾಟಕಗಳನ್ನು ರಂಗದ ಮೇಲೆ ತಂದು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿವೆ. ಬೆಂಗಳೂರಿನಲ್ಲಿರುವ ನಾಟ್ಯಸಂಘ ವಿಲಾಸಿ ತಂಡಗಳಿಂದ ಪ್ರದರ್ಶನಗಳನ್ನು ಏರ್ಪಡಿಸುವುದರ ಜೊತೆಗೆ ಉಲ್ಲಾಳ್ ಪಾರಿತೋಷಕ ಸ್ಪರ್ಧೆಯನ್ನೂ ವರ್ಷಕ್ಕೊಮ್ಮೆ ಏರ್ಪಡಿಸಿ ವಿಲಾಸಿ ರಂಗಭೂಮಿಯ ಶ್ರೇಯಸ್ಸಿಗೆ ಕಾರಣವಾಗಿದೆ. ನಾಟಕ ರಂಗದಲ್ಲಿ ಕ್ರಾಂತಿಯನ್ನುಂಟು ಮಾಡಿದ ಇನ್ನೊಂದು ಹೆಸರು ಶ್ರೀರಂಗ, ಶ್ರೀರಂಗರ ಹೊಸ ರೀತಿಯ ನಾಟಕಗಳು ಬೆಂಗಳೂರಿನ ರಂಗಭೂಮಿಯ ಮೇಲೆ ಆಗಾಗ ಕಾಣಿಸಿಕೊಳ್ಳುತ್ತಿವೆ. ಹೊಸ ಹೊಸ ತಂತ್ರ ಹಾಗೂ ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿಇವರು ಎತ್ತಿದ ೦ಕೈ. ಉತ್ತಮ ನಟರೂ ನಾಟಕಕಾರರೂ ಆದ ಪರ್ವತವಾಣಿ ಮತ್ತು ಎಚ್. ಕೆ. ರಂಗನಾಥ್ ಅವರೂ ಬೆಂಗಳೂರಿನ ವಿಲಾಸಿ ರಂಗಭೂಮಿಯ ಮೇಲೆ ಆಗಾಗ್ಗೆ ಕಾಣಿಸಿಕೊಳ್ಳುವುದೇ ಅಲ್ಲದೆ, ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಮಾರ್ಗದರ್ಶಕರಾಗಿದ್ದರು. ಬಿ.ಎಸ್. ರಾಮರಾವ್, ಬಿ.ಎಸ್. ನಾರಾಯಣರಾವ್, ಬಿ.ಎಸ್. ವೆಂಕಟರಾಂ, ಬಿ. ಚಂದ್ರಶೇಖರ್, ಬಿ.ಎನ್. ನಾರಾಯಣರಾವ್, ಎಂ.ವಿ. ಕೃಷ್ಣಸ್ವಾಮಿ, ಎಂ.ಎನ್. ಶ್ರೀನಿವಾಸ್, ಪಿ. ಲಂಕೇಶ್, ಎಸ್.ಜಿ. ರಾಮಚಂದ್ರ, ಬಿ. ಕೃಷ್ಣ, ನಾಗರತ್ನ, ಜಿ.ವಿ. ಶಿವಾನಂದ, ಉಮೇಶರುದ್ರ, ಪಿ.ಎ. ವೇಣುಗೋಪಾಲ್, ನಾಗೇಶ್, ಕ.ವೆಂ. ರಾಜಗೋಪಾಲ್, ಎ.ಎಸ್. ಮೂರ್ತಿ ಇವರೇ ಮೊದಲಾದ ನಟರೂ ನಿರ್ದೇಶಕರೂ ವಿಲಾಸಿ ರಂಗಭೂಮಿಯನ್ನು ಜೀವಂತಗೊಳಿಸಿಕೊಂಡು ಬರುತ್ತಿರುವುದರ ಜೊತೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ; ವಿಲಾಸಿ ರಂಗಭೂಮಿಯಲ್ಲಿ ಹೊಸ ಬೆಳಕನ್ನು ಚೆಲ್ಲಿದ್ದಾರೆ.ಮೈಸೂರು ನಗರದಲ್ಲಿ 1919ರಲ್ಲಿ ಡಿ. ಲಕ್ಷಣಯ್ಯನವರ ನೇತೃತ್ವದಲ್ಲಿ ಪ್ರಾರಂಭವಾದ ದಿ ಲಿಟರರಿ ಅಂಡ್ ಡ್ರಮಾಟಿಕ್ ಅಸೋಸಿಯೇಷನ್ 1944ರವರೆಗೂ ಕೆಲಸ ಮಾಡಿತು. ಮಹಾರಾಜ ಕಾಲೇಜಿನಲ್ಲಿದ್ದ ಯಾಕೂಬ್ಸ್‌, ಮಿತ್ರಮೇಳ ಮತ್ತು ಕರ್ಣಾಟಕ ಸಂಘ-ಇವು ಹವ್ಯಾಸಿ ರಂಗಭೂಮಿಗೆ ಉತ್ತಮ ನಟರನ್ನು ಕೊಡುವುದರ ಜೊತೆಗೆ ಉತ್ತಮ ನಾಟಕಕಾರರನ್ನೂ ಕೊಟ್ಟಿವೆ. ಮೈಸೂರು ನಗರದ ಪ್ರಮುಖ ವಿಲಾಸಿ ತಂಡ ಸ್ಯಾಮ್ಸ್‌ ಲಿಟಲ್ ಥಿಯೇಟರ್ ಅಂದು ಸಂಪತ್ ಅವರ ನೇತೃತ್ವದಲ್ಲಿ ಕೆಲಸ ಮಾಡಿಕೊಂಡು ಬಂದಿದೆ. ಅನಂತರ ಜನ್ಮತಾಳಿದ ಸಮತಂತೋ, ಅಮರ ಕಲಾವಿದರು-ಈ ತಂಡಗಳೂ ಬೆಂಗಳೂರಿನ ತಂಡಗಳಂತೆ ಮೈಸೂರು ನಗರದಲ್ಲಿ ಅನುವಾದಿತ ನಾಟಕಗಳನ್ನು ಅಸಂಗತ ನಾಟಕಗಳನ್ನೂ ರಂಗದ ಮೇಲೆ ತಂದು ಹೊಸ ಹೊಸ ಪ್ರಯೋಗಗಳನ್ನು ಮಾಡಿ ತಂದಿವೆ ಹಳೆಯ ಉತ್ತಮ ನಾಟಕಗಳನ್ನು ರಂಗದ ಮೇಲೆ ತರುತ್ತಿವೆ. ಆರ್. ಗುರುರಾಜರಾವ್ ಅವರು ವಿಲಾಸಿ ತಂಡಗಳು ಪ್ರದರ್ಶಿಸುವ ನಾಟಕಗಳಿಗೆ ಸಹಾಯ ಮಾಡುತ್ತಿದ್ದಾರೆ.

ಹವ್ಯಾಸಿ ರಂಗಭೂಮಿ[ಬದಲಾಯಿಸಿ]

ದಕ್ಷಿಣ ಕನ್ನಡದಲ್ಲಿ ಹವ್ಯಾಸಿ ರಂಗಭೂಮಿಗಾಗಿ ಶಿವರಾಮ ಕಾರಂತರು ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಕನ್ನಡ ನಾಡಿನ ಉಳಿದ ಭಾಗಗಳಲ್ಲೂ ವಿಲಾಸಿ ತಂಡಗಳು ಕೆಲಸ ಮಾಡಿಕೊಂಡು ಬರುತ್ತಿವೆ. ಹೆಗ್ಗೋಡಿನ ಶ್ರೀ ನೀಲಕಂಠೇಶ್ವರರ ನಾಟ್ಯ ಸೇವಾ ಸಂಘ, ಸಾಗರದ ಎನ್. ಆರ್. ಮಾಸೂರ್ ಮತ್ತು ಮಿತ್ರರು ಧಾರವಾಡದ ಎನ್. ವಿ. ಜಗನ್ನಾಥರಾವ್ ಮತ್ತು ಮಿತ್ರರು ಮೊದಲಾದವರನ್ನು ಇಲ್ಲಿ ಹೆಸರಿಸಬಹುದು. ಕನ್ನಡ ನಾಡಿನಲ್ಲಿ ಅಲ್ಲದೆ ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬಯಿ, ಪುನ, ನಾಗಪುರ, ಹೈದರಾಬಾದ್, ಮದರಾಸು-ಮುಂತಾದ ಕಡೆಗಳಲ್ಲಿ ಕನ್ನಡ ನಾಟಕಗಳು ವಿಲಾಸಿ ತಂಡಗಳಿಂದ ಪ್ರದರ್ಶಿತವಾಗುತ್ತಿವೆ. ಅಲ್ಲದೆ ಭಾರತದ ವಿವಿಧ ಭಾಗಗಳಲ್ಲಿರುವ ಕೈಗಾರಿಕಾ ನಗರಗಳಲ್ಲಿ ಕರ್ಣಾಟಕ ಸಂಘಗಳ ಮೂಲಕ ವಿಲಾಸಿ ನಾಟಕಗಳು ಬೆಳಕು ಕಾಣುತ್ತಿವೆ. ಈ ದಿಸೆಯಲ್ಲಿ ಪ್ರಮುಖವಾಗಿ ಮುಂಬಯಿಯ ಕನ್ನಡ ಥಿಯೇಟರ್ಸ್‌, ದೆಹಲಿಯ ಕನ್ನಡ ಭಾರತಿ ಮುಂತಾದ ಸಂಸ್ಥೆಗಳಲ್ಲದೆ, ಮುಂಬಯಿಯಲಿರುವ ಕೆ.ಕೆ. ಸುವರ್ಣ, ವಿ.ಕೆ. ಮೂರ್ತಿ ಕೆ.ಎಂ. ಮುತಾಲಿಕ್, ದೆಹಲಿಯಲ್ಲಿರುವ ಬಿ.ವಿ. ಕಾರಂತ, ಪ್ರೇಮಾ ಕಾರಂತ, ಪ್ರಭಾಕರರಾವ್, ಎಂ.ವಿ. ನಾರಾಯಣರಾವ್, ಡಿ. ರಮೇಶ್, ಎಂ.ಎಸ್. ಸತ್ಯ, ಚೆನ್ನೈನಲ್ಲಿರುವ ಪಿ. ಶೇಷಗಿರಿರಾವ್ ಇವರೇ ಮೊದಲಾದವರು ಹವ್ಯಾಸಿ ನಾಟಕಗಳಲ್ಲಿ ಆಸ್ಥೆ ತೋರಿಸುತ್ತಿದ್ದಾರೆ. ಬಿ.ವಿ. ಕಾರಂತ ಅವರ ಕಾರ್ಯವ್ಯಾಪ್ತಿ ಈಗ ದೆಹಲಿಗೆ ಸೀಮಿತವಾಗಿರುವ ಕನ್ನಡ ನಾಡಿನ ಇತರ ಭಾಗಗಳಲ್ಲಿ ವ್ಯಾಪಿಸಿದೆ.ಈ ಖಾಸಗಿ ಸಂಸ್ಥೆಗಳು, ತಂಡಗಳು ಮತ್ತು ವ್ಯಕ್ತಿಗಳು ವಿಲಾಸಿ ರಂಗಭೂಮಿಗಾಗಿ ಕೆಲಸ ಮಾಡುತ್ತಿದ್ದಂತೆಯೇ ಸರ್ಕಾರವೂ ಈ ದಿಸೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಸಕ್ತಿ ತೋರಿಸುತ್ತಿದೆ. ಸಂಗೀತ ನಾಟಕ ಅಕೆಡಮಿಯ ಆಶ್ರಯದಲ್ಲಿ ಹವ್ಯಾಸಿ ರಂಗಭೂಮಿಗೆ ಪ್ರೋತ್ಸಾಹವಿದೆ. ದೇಶದ ಪ್ರಮುಖ ವಿಲಾಸಿ ತಂಡಗಳಿಂದ ಪ್ರಯೋಗಗಳನ್ನು ಏರ್ಪಡಿಸುವುದರ ಮೂಲಕ ಇದು ಹವ್ಯಾಸಿ ರಂಗಭೂಮಿಯನ್ನು ಜೀವಂತವಾಗಿಟ್ಟಿದೆ ಎನ್ನಬಹುದು. ನಾಟಕ ಕೇವಲ ಹವ್ಯಾಸವಷ್ಟೇ ಅಲ್ಲ. ಅದೊಂದು ಶಾಸ್ತ್ರ; ಅದರ ಅಭ್ಯಾಸ ಹಾಗೂ ಪ್ರಯೋಗ ವೈe್ಞÁನಿಕ-ಎಂಬುದನ್ನು ಮೈಸೂರು ವಿಶ್ವವಿದ್ಯಾನಿಲಯವೂ ಗಮನಿಸಿ, ಆ ಶಾಸ್ತ್ರವನ್ನು ಅಭ್ಯಾಸಕ್ಕಿಟ್ಟಿದೆ. ಇದರಿಂದ ಉತ್ಸಾಹೀ ಹವ್ಯಾಸಿಗಳನ್ನು ಈ ದಿಸೆಯಲ್ಲಿ ಪ್ರೋತ್ಸಾಹಿಸುತ್ತಿದೆ ಎನ್ನಬಹುದು. ಕೇಂದ್ರ ಸರ್ಕಾರದ ವಿದ್ಯಾ ಇಲಾಖೆ ಎರಡು ಮೂರು ಬಾರಿ ದೇಶದ ಬೇರೆ ಬೇರೆ ಭಾಗಗಳಲ್ಲಿ ನಾಟಕ ತರಬೇತಿ ಶಿಬಿರಗಳನ್ನು ವಿಶ್ವವಿದ್ಯಾನಿಲಯಗಳ ಅಧ್ಯಾಪಕರಾಗಿ ನಡೆಸಿದುದುಂಟು, ಅಲ್ಲಿ ತರಬೇತಿ ಪಡೆದ ಅಧ್ಯಾಪಕರು ತಮ್ಮ ತಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಸಹಾಯ ಮಾಡಿದ್ದೂ ಉಂಟು. ಕೆಲವು ವರ್ಷಗಳಿಂದ ಆ ಕಾರ್ಯಕ್ರಮ ನಿಂತುಹೋದಂತಿದೆ. ರಾಜ್ಯ ಸರ್ಕಾರದ ಸಂಗೀತ ನಾಟಕ ಅಕೆಡೆಮಿ ಪ್ರೌಢಶಾಲೆಯ ಅಧ್ಯಾಪಕರಿಗೆ ಹಾಗೂ ಹವ್ಯಾಸಿಗಳಿಗೆ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ ಹವ್ಯಾಸಿ ರಂಗಭೂಮಿ ವ್ಯವಸ್ಥಿತ ರೀತಿಯಲ್ಲಿ ಬೆಳೆಯಲು ಇದರಿಂದ ಸಹಾಯವಾಗುವುದರಲ್ಲಿ ಸಂದೇಹವಿಲ್ಲ.ವಿಲಾಸಿ ನಾಟಕಗಳಲ್ಲಿ ಅಭಿನಯಿಸುವುದರ ಮೂಲಕ ಹವ್ಯಾಸಿ ರಂಗಭೂಮಿಗೆ ವರ್ಚಸ್ಸು ತಂದುಕೊಡಲು ನಾಡಿನ ಹಲವಾರು ಸುಶಿಕ್ಷಿತರೂ ಸಾಹಿತಿಗಳೂ ಕಾರಣರಾಗಿದ್ದಾರೆ, ಕೈಲಾಸಂ. ಶಿವರಾಮ ಕಾರಂತ, ಶ್ರೀರಂಗ, ದೇವುಡು ನರಸಿಂಹಶಾಸ್ತ್ರಿ, ಬಳ್ಳಾರಿ

ಕಲಾವಿದರು[ಬದಲಾಯಿಸಿ]

ರಾಘವಾಚಾರಿ, ಎಂ.ಎಲ್. ಶ್ರೀನಿವಾಸಶಾಸ್ತ್ರಿ, ಡಿ. ಲಕ್ಷ್ಮಣಯ್ಯ, ಸಿ. ಆನಂದರಾವ್, ಎನ್.ಎಸ್. ನಾರಾಯಣ ಶಾಸ್ತ್ರಿ, ಎ.ಎಂ. ನಟೇಶ್, ನಾ. ಕಸ್ತೂರಿ, ವಿ.ಕೆ. ಶ್ರೀನಿವಾಸನ್, ಎ.ಸಿ. ನರಸಿಂಹಮೂರ್ತಿ, ಸಿ.ಬಿ. ಜಯರಾವ್, ಸಂಪತ್, ಆರ್. ಗುರುರಾಜರಾವ್, ಟಿ.ಎಂ. ಅಮೀರ್, ಸಿ.ಕೆ. ನಾಗರಾಜರಾವ್, ಟಿ. ಸದಾಶಿವಯ್ಯ, ಎಸ್.ಎಚ್. ಪಾರ್ವತಿ, ಹೇಮಾ, ಯಮುನಾ, ವಿಜಯಾ, ಬಿ.ಎಸ್. ವೆಂಕಟರಾಂ. ಮಂಗಳವೇಡೆ, ಸಿ.ಎಸ್. ಬೆನ್ನೂರ, ಕೆ.ಜಿ. ಹಲಸಗಿ, ಜಿ.ವಿ. ಹಿರೇಮಠ, ವಿ.ಎಂ. ಇನಾಂದಾರ್, ಜೋಳದ ರಾಶಿ ದೊಡ್ಡನಗೌಡ, ವೈ.ಎಂ. ಚಂದ್ರಯ್ಯ ಇವರೇ ಮೊದಲಾದವರೂ ವಿಲಾಸಿ ರಂಗಭೂಮಿಗಾಗಿ ವಿವಿಧ ರೀತಿಯಲ್ಲಿ ಕೆಲಸ ಮಾಡಿದವರೂ ಬಹಳ ಹಿಂದೆಯೇ ನಾಟಕಗಳಲ್ಲಿ ಅಭಿನಯಿಸಿ ಹವ್ಯಾಸೀ ರಂಗಭೂಮಿಗೆ ಒಂದು ಅಸ್ತಿತ್ವವನ್ನು ತಂದುಕೊಟ್ಟರು. ಇತ್ತೀಚೆಗೆ ಹವ್ಯಾಸಿ ರಂಗಭೂಮಿಯಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವ ಹಲವಾರು ನಟರೂ ನಟಿಯರೂ ನೇಪಥ್ಯ ವರ್ಗದವರೂ ಈ ರಂಗಭೂಮಿಯನ್ನು ಪ್ರಗತಿಪಥದತ್ತ ಒಯ್ಯುತ್ತಿದ್ದಾರೆ. ನಾಡಿನ ಬಹಳೆಡೆಗಳಲ್ಲಿ ವಿಲಾಸಿ ನಾಟಕಗಳ ಪ್ರಯೋಗ ನಡೆಯುತ್ತಿದ್ದು, ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರುಗಳಲ್ಲಿ ಈ ಚಟುವಟಿಕೆ ಹೆಚ್ಚಾಗಿ ಕಾಣಬರುತ್ತಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಉತ್ತಮ ನಟನಟಿಯರನ್ನೂ ನೇಪಥ್ಯ ವರ್ಗದವರನ್ನೂ ಇಲ್ಲಿ ಹೆಸರಿಸಬಹುದು. ಅವರುಗಳೆಂದರೆ (ಈ ಹಿಂದೆ ಹೆಸರಿಸಿದವರಲ್ಲದೆ) ಬೆಂಗಳೂರಿನಲ್ಲಿ-ಸಿಂಹ, ನಾಗರತ್ನ, ಲೋಕನಾಥ್, ಬಿ.ಆರ್. ಜಯರಾಂ, ಸೀತಾರಾಂ. ಲೋಕೇಶ್, ವಿಮಲಾ ರಂಗಾಚಾರ್, ಶಿವರಾಮಯ್ಯ, ನೀಲಿ, ಜಿ. ನೀಲಕಂಠರಾವ್, ಜಿ.ವಿ. ಜಯಶ್ರೀ, ಎಚ್.ಜಿ. ಸೋಮೇಶೇಖರರಾವ್, ಪದ್ಮನಾಭ್ (ಪದ್ದು), ವೆಂಕಟಸುಬ್ಬರಾವ್, ಲಲಿತಾ ಕುಪ್ಪಸ್ವಾಮಿ, ಮಾಲತಿ, ವಿಜಯಲಕ್ಷಿ, ಶಾಂತಾ, ಶಾಂತ ದೇವುಡು, ರಾಮಮೂರ್ತಿ, ಜಯಶ್ರೀ, ಸುಶೀಲ ಭಾರ್ಗವಿ ಇವರೇ ಮೊದಲಾದವರು, ಮೈಸೂರಿನಲ್ಲಿ ಚಲನಚಿತ್ರ ನಟ ಕೆ.ಎಸ್. ಅಶ್ವತ್ಥ, ಬಿ.ಎ. ಸತ್ಯನಾರಾಯಣರಾವ್, ಎಚ್.ಎನ್. ದೊಡ್ಡನಾರಾಣಪ್ಪ, ವಾಸು, ಬಸವರಾಜ್, ಕೆ. ಇಂದಿರಾ, ನ. ರತ್ನ, ವಿಶ್ವನಾಥ ಮಿರ್ಲೆ, ಎಚ್.ಎಂ. ಚನ್ನಯ್ಯ, ಸಿಂಧುವಳ್ಳಿ ಅನಂತಮೂರ್ತಿ, ರಾಮೇಶ್ವರೀ ವರ್ಮ ನರಸಿಂಹನ್, ರಾಮನಾಥ್, ಬಿ.ಆರ್. ವೆಂಕಟರಾಂ ಇವರೇ ಮೊದಲಾದವರು, ಹವ್ಯಾಸಿ ರಂಗಭೂಮಿಯ ಕೊಡುಗೆಗಳು ಗಮನಾರ್ಹ, ಬಿ.ಎಂ.ಶ್ರೀ., ಕುವೆಂಪು, ಕೈಲಾಸಂ, ಶ್ರೀರಂಗ, ಸಂಸ, ಎಸ್.ಜಿ. ಶಾಸ್ತ್ರಿ, ಎಂ.ಆರ್. ಶ್ರೀ ವೆಂಬಾರ್, ವೆಂಕಣ್ಣಚಾರ್, ಪು.ತಿ.ನ., ಮಾಸ್ತಿ, ಶಿವರಾಮ ಕಾರಂತ, ಪರ್ವತವಾಣಿ, ಕ್ಷೀರಸಾಗರ, ಎ.ಎನ್. ಮೂರ್ತಿರಾವ್, ನಾ. ಕಸ್ತೂರಿ, ಚಿ. ಸದಾಶಿವಯ್ಯ, ಜಿ.ಬಿ. ಜೋಶಿ ಕೀರ್ತಿನಾಥ ಕುರ್ತಕೋಟಿ, ದ.ರಾ. ಬೇಂದ್ರೆ, ಜಿ.ಪಿ. ರಾಜರತ್ನಂ; ಗಿರೀಶ ಕಾರ್ನಾಡ ಲಂಕೇಶ್, ಚಂದ್ರಶೇಖರ ಪಾಟೀಲ್, ಚಂದ್ರಶೇಖರ ಕಂಬಾರ, ಎಚ್.ಕೆ. ರಾಮಚಂದ್ರಮೂರ್ತಿ, ರಾಮಚಂದ್ರಶರ್ಮ, ನ. ರತ್ನ ಮೊದಲಾದ ನಾಟಕಕಾರರನ್ನು ಕೊಟ್ಟಿದೆ. ಸಾಹಿತ್ಯಿಕವಾಗಿ, ವೈಚಾರಿಕವಾಗಿ ನಾಟಕ ಪ್ರದರ್ಶನವನ್ನು ನೋಡಲು ಸಾಧ್ಯವಾಗಿದೆ. ಹಿನ್ನೆಲೆ, ರಂಗಸಜ್ಜಿಕೆ ದೀಪದ ವ್ಯವಸ್ಥೆ, ನಿರ್ದೇಶನ, ಅಭಿನಯ ಇವೇ ಮೊದಲಾದವುಗಳಲ್ಲಿ ಪ್ರಯೋಗ ಶೀಲತೆ ಕಂಡುಬರುತ್ತದೆ. ಪ್ರೇಕ್ಷಕರು ಹಣ ಕೊಟ್ಟು ನಾಟಕ ನೋಡುವ ಪ್ರವೃತ್ತಿ ಬೆಳೆಯುತ್ತಿದೆ. ಹವ್ಯಾಸಿ ರಂಗಭೂಮಿಯಲ್ಲಿ ದೆಂದೂ ಕಾಣದಷ್ಟು ಲವಲವಿಕೆ ಇಂದು ಕಂಡು ಬರುತ್ತಿದ್ದು, ಕನ್ನಡ ರಂಗಭೂಮಿಯ ಭವಿಷ್ಯದ ಬಗ್ಗೆ ಭರವಸೆ ಉಂಟಾಗಿದೆ. [೧]

ಉಲ್ಲೇಖಗಳು[ಬದಲಾಯಿಸಿ]

  1. http://www.prajavani.net/news/article/2016/03/28/397854.html[ಶಾಶ್ವತವಾಗಿ ಮಡಿದ ಕೊಂಡಿ]