ಕಾಲಪರಿಮಿತಿ ಕಾಯಿದೆ, 1963
ಭಾರತೀಯ ಕಾಲಮಿತಿ ಕಾಯಿದೆ, 1963 ಭಾರತೀಯ ಕರಾರು ಕಾಯಿದೆ, 1872 ರ ಎಲ್ಲ ದಾಖಲೆ ಪತ್ರಗಳ ಜೀವಾವಧಿ, ಪ್ರಾಮುಖ್ಯತೆ, ಕಾನೂನಿನ ಸ್ಥಿತಿಗತಿಗಳ ಬಗ್ಗೆ ವಿಶದವಾಗಿ ವಿವರಿಸುತ್ತದೆ. 1963ರಲ್ಲಿ ಕಾಲಪರಿಮಿತಿ ಕಾಯಿದೆಯು ಜಾರಿಗೆ ಬಂದಿತು. ಇದು ಎಲ್ಲ ವ್ಯವಹಾರಗಳ, ಒಡಂಬಡಿಕೆ-ಕರಾರುಗಳ, ದಾಖಲೆ ಪತ್ರಗಳ, ಕರಾರು ಪತ್ರಗಳ ವಿಧಿಬದ್ಧತೆಯ ಬಗ್ಗೆ ಈ ಕಾಯಿದೆಯು ನಿಖರವಾಗಿ ಹೇಳುತ್ತದೆ.[೧]
ಕಾಲಪರಿಮಿತಿ ಕಾಯಿದೆ, 1963 ಒಟ್ಟಾರೆ 31 ಅಧಿನಿಯಮಗಳಿದ್ದು ಅವುಗಳನ್ನು ಐದು ಭಾಗಗಳಾಗಿ ಮಾಡಲಾಗಿದೆ. ಈ ಕಾಯಿದೆಯು 1974 ರಲ್ಲಿ ಪರಿಷ್ಕತಗೊಂಡಿತು
[ಬದಲಾಯಿಸಿ]1. ಪೀಠಿಕೆ
2. ದಾವೆಗಳು, ಕೋರಿಕೆಗಳು, ಅಭ್ಯರ್ಥನ ಪತ್ರಗಳ ಕಾಲಮಿತಿ.
3. ಕಾಲ ಪರಿಮಿತಿಯ ಗಣನೆಯ ವಿಧಿ, ವಿಧಾನಗಳು.
4. ಮಾಲೀಕತ್ವದ ಸ್ವಾಮ್ಯವನ್ನು ಅರ್ಜಿಸುವುದು.
5. ಇತರ ವಿಷಯಗಳು.
(1). ಪೀಠಿಕೆ
[ಬದಲಾಯಿಸಿ]ಪೀಠಿಕೆಯಲ್ಲಿ ಈ ಕಾಯಿದೆಯ ಪೂರ್ಣ ಹೆಸರು ಮತ್ತು ದೇಶದಲ್ಲಿನ ಅದರ ವ್ಯಾಪ್ತಿಯ ವಿವರವನ್ನು ನೀಡಿದೆ. ನಂತರ ಈ ಕಾಯಿದೆಯಲ್ಲಿ ಉಪಯೋಗಿಸಿರುವ ಎಲ್ಲ ಪ್ರಮುಖ ಪದಗಳಿಗೆ ವ್ಯಾಖ್ಯೆಯನ್ನು ನೀಡಲಾಗಿದೆ.
(2) ದಾವೆಗಳು, ಕೋರಿಕೆಗಳು, ಅಭ್ಯರ್ಥನ ಪತ್ರಗಳ ಕಾಲಮಿತಿ
[ಬದಲಾಯಿಸಿ]ಈ ಅಧ್ಯಾಯದಲ್ಲಿ ಯಾವುದೇ ದಾವೆಗಳನ್ನು ಹಾಕುವ ವ್ಯಕ್ತಿಯ, ವ್ಯಕ್ತಿಗಳ, ಅವರ ವಾರಸುದಾರರು ಅಥವಾ ಪ್ರತಿನಿಧಿಗಳಿಗೆ ಸಿಗುವ ವಿವಿಧ ಸಂದರ್ಭದಲ್ಲಿನ ವಿವಿಧ ಕಾಲ ಪರಿಮಿತಿಯ ಸಂಭಾವ್ಯಗಳನ್ನು ಕಾಯಿದೆಯು ವಿವರವಾಗಿ ತೆರೆದಿಟ್ಟಿದೆ. ಅಧಿನಿಯಮ 3 ರಿಂದ 11 ರ ವರೆಗೆ ಈ ಅಧ್ಯಾಯದಲ್ಲಿ ವಿವರಣೆಗಳು ಇವೆ.
(3). ಕಾಲ ಪರಿಮಿತಿಯ ಗಣನೆಯ ವಿಧಿ, ವಿಧಾನಗಳು
[ಬದಲಾಯಿಸಿ]ಈ ಅಧ್ಯಾಯವು ಅಧಿನಿಯಮ 12 ರಿಂದ 24 ರವರೆಗೆ ವ್ಯಾಪಿಸಿದೆ. ಕಾಲಾವಧಿಯನ್ನು ಲೆಕ್ಕಹಾಕುವ ಪ್ರಕ್ರಿಯೆಯಲ್ಲಿ ಬರುವ ಹಲವಾರು ವಿಭಿನ್ನ ಸಂದರ್ಭಗಳಲ್ಲಿ ಕಾಲ ಪರಿಮಿತಿಯನ್ನು ಹೇಗೆ ಗಣನೆಗೆ ತಂದುಕೊಂಡು ಲೆಕ್ಕ ಹಾಕಬೇಕು ಎಂಬುದನ್ನು ವಿವರವಾಗಿ ವ್ಯಾಖ್ಯಾನಿಸಿದೆ.
(4). ಮಾಲೀಕತ್ವದ ಸ್ವಾಮ್ಯವನ್ನು ಅರ್ಜಿಸುವುದು
[ಬದಲಾಯಿಸಿ]ಈ ಅಧ್ಯಾಯದಲ್ಲಿ ಅಧಿನಿಯಮ 25, 26 ಮತ್ತು 27 ಸೇರ್ಪಡೆಯಾಗಿವೆ. ವ್ಯಕ್ತಿಯ, ವ್ಯಕ್ತಿಗಳ ಅಥವಾ ಒಂದು ಸಂಸ್ಥೆಯು ಒಂದು ಆಸ್ತಿಯ ಮೇಲಣ ಸ್ವಾಮ್ಯವನ್ನು ಅನುಭೋಗಿಸುತ್ತಿರುವ ಕಾಲ, ಹಕ್ಕು ಮೊದಲಾದವುಗಳನ್ನು ವಿಶ್ಲೇಷಿಸಿ ಅದನ್ನು ಕಾಲಾವಧಿಯೊಳಗೆ ಪರಿಶೀಲಿಸಿ ಹಕ್ಕು ಊರ್ಜಿತವೋ, ಅನೂರ್ಜಿತವೋ ಎಂಬುದನ್ನು ವ್ಯಾಖ್ಯಾನಿಸುತ್ತದೆ. ಸರ್ಕಾರಕ್ಕೆ 30 ವರ್ಷ, ಇತರರಿಗೆ 20 ವರ್ಷಗಳ ಅನುಭೋಗದ ಕಾಲಮಿತಿಯಿರುವಾಗ ಅದರ ನಂತರದ ದಾವೆಯು ಊರ್ಜಿತವಾಗದೆ ಅವರದೇ ಆಗುವುದೆಂಬುದನ್ನು ವ್ಯಾಖ್ಯಾನಿಸಿದೆ.
(5). ಇತರ ವಿಷಯಗಳು
[ಬದಲಾಯಿಸಿ]ಅಧಿನಿಯಮ 28 ರಿಂದ 31 ರವರೆಗೆ ವ್ಯಾಪಿಸಿದೆ. ಇದರಲ್ಲಿ ಇತರ ವಿಷಯಗಳನ್ನು ವಿವರಿಸಿದೆ. ಅಲ್ಲದೆ ಈ ಕಾಯಿದೆಯು ಬರುವ ಮುಂಚೆ ಇದ್ದ ಭಾರತೀಯ ಕಾಲಪರಿಮಿತಿ ಕಾಯಿದೆ, 1908 ರ ಅನ್ವಯವಾಗಿರುವ ನಿರ್ಣಯ ಬಗ್ಗೆ ಈ ಕಾಯಿದೆಯಿಂದ ದ್ವಂದ್ವವಾಗದೆ ಹೇಗೆ ಅರ್ಥೈಸಿಕೊಳ್ಳಬೇಕೆಂಬುದನ್ನು ವಿವರಿಸಿದೆ.
ಕಾಲ ಪರಿಮಿತಿ ಕಾಯಿದೆ, 1963 ಹಾಗು ಬ್ಯಾಂಕಿನ ವಿವಿಧ ದಾಖಲೆಗಳ ಕಾಲಾವಧಿ
[ಬದಲಾಯಿಸಿ]ವಿವಿಧ ದಾಖಲೆಗಳ ಕಾಲಾವಧಿ, ಅವುಗಳ ಪ್ರಾಮುಖ್ಯತೆಯ ಬದ್ಧತೆಯ ಕಾಲ ಮಿತಿ ಮೊದಲಾದವುಗಳನ್ನು ಈ ಕಾಯಿದೆಯು ವಿಸ್ತಾರವಾಗಿ ವಿವರಿಸಿದೆ. ಅವುಗಳಲ್ಲಿ ಮುಖ್ಯವಾದವುಗಳು ಹೀಗಿವೆ :
1. ಚಾಲ್ತಿ ಖಾತೆಗಳಾದ ನಗದು ಉದರಿ, ಮೀರೆಳೆತ ಸಾಲದ ಖಾತೆಗಳಿಗೆ ಕ್ಲೇಟನ್ನಿನ ಸಿದ್ಧಾಂತವು ಅನ್ವಯ ವಾಗುವುದು. ಈ ಖಾತೆಗಳಲ್ಲಿನ ಮೊದಲ ಜಮೆಯು ಮೊದಲ ಖರ್ಚನ್ನು ತೀರಿಸುವುದು.
2. ಈ ಚಾಲ್ತಿ ಖಾತೆಗಳಲ್ಲಿ ಗ್ರಾಹಕ ಸಾಲಗಾರನು ಮಾಡಿದ ಕೊನೆಯ ಜಮೆಯ ದಿನದಿಂದ ಕಾಲ ಪರಿಮಿತಿಯ ಗಣನೆಗೆ ಬರುವುದು. ಅಂದಿನಿಂದ ಮೂರು ವರ್ಷಗಳೊಳಗೆ ವಸೂಲಿ ಮಾಡಬೇಕು ಅಥವಾ ಕರಾರು ಪತ್ರಗಳು, ದಾಖಲೆಗಳು ಮತ್ತೆ ನವೀಕರಿಸಬೇಕು. ಆಗ ಮತ್ತೆ ಮೂರು ವರ್ಷಗಳ ಕಾಲಾವಧಿಯು ದೊರಕುತ್ತದೆ.
3. ಸಾವಧಿ ಸಾಲಗಳಿಗೆ ಕಾಲ ಪರಿಮಿತಿಯ ಲೆಕ್ಕವು ಬೇರೆ ರೀತಿಯಾಗಿರುತ್ತದೆ. ಕಡೆಯ ಸಾಲದ ಕಂತು ಪಾವತಿ ಮಾಡಬೇಕಾದ ದಿನದಿಂದ ಈ ಕಾಲ ಪರಿಮಿತಿಯು ಪ್ರಾರಂಭವಾಗುತ್ತದೆ. ಇದು ಎಲ್ಲ ಕಂತುಗಳಿಗೂ ಅನ್ವಯವಾಗುತ್ತದೆ.
4. ಸಾಮಾನ್ಯವಾಗಿ ಪ್ರತಿಯೊಂದು ಸಾಲದ ವಸೂಲಿಗೆ, ಅದರ ದಾಖಲೆ ಪತ್ರಗಳಿಗೆ ಮೂರು ವರ್ಷದ ಕಾಲಾವಧಿ ಇರುತ್ತದೆ. ಅಷ್ಟರಲ್ಲಿ ಸಾಲವು ವಸೂಲಿಯಾಗಬೇಕು. ಅಥವಾ ವಸೂಲಿ ಪ್ರಕ್ರಿಯೆಯು ಪ್ರಾರಂಭವಾಗಬೇಕು. ಇಲ್ಲವೇ ದಾಖಲೆಗಳ, ಕರಾರುಗಳ ನವೀಕರಣವಾಗಿ ಸಾಲಗಾರನಿಂದ ಸಹಿಯಾಗಬೇಕು.
5. ಬೇರೆ ಖಾತೆಗಳಲ್ಲಿ ಬ್ಯಾಂಕು ಮರುಪಾವತಿ ಬೇಡಿಕೆ ಸಲ್ಲಿಸುವ ದಿನದಿಂದ ಮೂರು ವರ್ಷದ ಕಾಲ ಪರಿಮಿತಿ ಇರುತ್ತದೆ. ಅಷ್ಟರೊಳಗೆ ವಸೂಲಿ ಪ್ರಕ್ರಿಯೆಯು ಪ್ರಾರಂಭವಾಗಬೇಕು.
6. ಪರಸ್ಪರರ ಒಡಂಬಡಿಕೆ/ಕರಾರುಗಳ ಒಪ್ಪಂದದ ಕಾಗದ ಪತ್ರಗಳು ಮೂರು ವರ್ಷಗಳಿಗೊಮ್ಮೆ ನವೀಕರಿಸಬೇಕು. ಮೂರು ವರ್ಷಾನಂತರ ಆ ಕಾಗದ ಪತ್ರಗಳು ಶಾಸನ ಬದ್ಧತೆಯನ್ನು ಕಳೆದುಕೊಂಡು ದಾವೆಗೆ ಆಧಾರವಾಗುವುದಿಲ್ಲ. ನ್ಯಾಯಾಲಯವು ನಂತರದ ಕಾಗದ ಪತ್ರಗಳನ್ನು ಪುರಸ್ಕರಿಸುವುದಿಲ್ಲ.
7. ಆದುದರಿಂದ ಬ್ಯಾಂಕುಗಳು ಅಥವ ಎಲ್ಲ ಸಾಲದಾತರು ಮೂರು ವರ್ಷಗಳೊಳಗೆ ಪ್ರಸ್ತುತ ಇರುವ ಸಾಲದ ಶಿಲ್ಕು, ಬಡ್ಡಿ ಮೊದಲಾದವುಗಳ ಬಗ್ಗೆ ಒಪ್ಪಿದ ಲಿಖಿತ ಪತ್ರವನ್ನು ತಮ್ಮ ಸಾಲಗಾರನಿಂದ ತೆಗೆದುಕೊಳ್ಳಬೇಕು. ಆಗ ಅದು ಮತ್ತೆ ಮೂರು ವರ್ಷಗಳ ವರೆಗೆ ಎಲ್ಲವನ್ನು ಜೀವಂತವಾಗಿಡುತ್ತದೆ. ಇದನ್ನು ಸಾಲೊಪ್ಪಿಗೆ ಪತ್ರ ಎನ್ನುತ್ತಾರೆ.
8. ಸಾವಧಿ ಠೇವಣಿಗಳ ಬಗ್ಗೆ ಹೇಳುವುದಾದರೆ, ಕಾಲ ಪರಿಮಿತಿಯು ಠೇವಣಿದಾರನು ಅದರ ಮರುಪಾವತಿ ಗಾಗಿ ಬೇಡಿಕೆ ಸಲ್ಲಿಸಿದ ದಿನದಿಂದ ಪ್ರಾರಂಭವಾಗುತ್ತದೆ. ಅಂದಿನಿಂದ ಮೂರು ವರ್ಷದೊಳಗೆ ಠೇವಣಿದಾರನು ತನ್ನ ಠೇವಣಿಯ ಹಣದ ಮರುಪಾವತಿಗೆ ದಾವೆ ಸಲ್ಲಿಸಬಹುದು.
9. ಬ್ಯಾಂಕ್ ಖಾತರಿ ಪತ್ರಗಳ ಅವಧಿ ಮುಗಿದ ದಿನದಿಂದ ಮೂರು ವರ್ಷಗಳೊಳಗಿನ ಕಾಲ ಪರಿಮಿತಿಯೊಳಗೆ ಪಾವತಿಗೆ ಬೇಡಿಕೆ ಸಲ್ಲಿಸಿ ಬಾರದಿದ್ದಲ್ಲಿ ಕ್ರಮ ತೆಗೆದುಕೊಳ್ಳಬಹುದು.
10. ನ್ಯಾಯಾಲಯವು ನೀಡಿದ ತೀರ್ಪಿನಾಧಾರದಿಂದ ವಸೂಲಿಗೆ ನ್ಯಾಯಬದ್ಧವಾಗಿ ಕ್ರಮ ಜರುಗಿಸಬಹುದು. ಆದರೆ ತೀರ್ಪಿನಾದೇಶದ ದಿನದಿಂದ 12 ವರ್ಷಗಳೊಳಗೆ ಕ್ರಮ ಜರುಗಿಸದಿದ್ದರೆ ಆ ತೀರ್ಪು ನಂತರ ಅನೂರ್ಜಿತವಾಗುತ್ತದೆ. ಅಮೇಲೆ ಸಾಲ ವಸೂಲಿಗೆ ಮತ್ತೆ ನ್ಯಾಯಾಲಯದಲ್ಲಿ ದಾವೆ ಹೂಡಬೇಕಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಇಂಡಿಯನ್ ಸಿವಿಲ್ ಸರ್ವಿಸ್". schoolserver.xsce.org accessdate 25 October 2016.