ಕಾನೂನಿನ ಅಜ್ಞಾನ ಮತ್ತು ವಸ್ತುಸ್ಥಿತಿಯ ಅಜ್ಞಾನ
ಭಾರತೀಯ, ಇಂಗ್ಲೀಷ್ ಮತ್ತು ಅಮೆರಿಕನ್ ನ್ಯಾಯದ ಪ್ರಕಾರ ಅಜ್ಞಾನ ಎರಡು ಬಗೆ : ಕಾನೂನಿನ ಅಜ್ಞಾನ (ಇಗ್ನೊರನ್ಸ್ ಅಫ್ ಲಾ) ಮತ್ತು ವಸ್ತುಸ್ಥಿತಿಯ ಅಜ್ಞಾನ (ಇಗ್ನೊರನ್ಸ್ ಆಫ್ ಫ್ಯಾಕ್ಟ್). ಪಾಶ್ಚಾತ್ಯ ನ್ಯಾಯಕ್ಕೆ ಮೂಲಭೂತವಾದ ರೋಮನ್ ನ್ಯಾಯದಲ್ಲೂ ಈ ವ್ಯತ್ಯಾಸ ಮಾಡಲಾಗಿದೆ.
ಕಾನೂನಿನ ಅಜ್ಞಾನ (ಇಗ್ನೊರನ್ಸ್ ಅಫ್ ಲಾ)
[ಬದಲಾಯಿಸಿ]ಒಂದು ದೇಶದ ಪ್ರಜೆ ಆ ದೇಶದ ಕಾನೂನನ್ನು ಅರಿತಿರುವನೆಂದು ನ್ಯಾಯಾಲಯ ಭಾವಿಸುತ್ತದೆ. ಕಾನೂನನ್ನುಲ್ಲಂಘಿಸಿದಾತ ನ್ಯಾಯಾಲಯದಿಂದ ದಂಡಾರ್ಹ. ಒಂದು ಕೃತ್ಯ ಮಾಡಿದ ವ್ಯಕ್ತಿ ಕಾನೂನು ದೃಷ್ಟಿಯಲ್ಲಿ ಅದರ ಪರಿಣಾಮವೇನೆಂಬುದರ ಬಗ್ಗೆ ತಪ್ಪುತಿಳಿವಳಿಕೆ ಹೊಂದಿದ್ದರೆ ಅಥವಾ ತಪ್ಪು ತೀರ್ಮಾನಕ್ಕೆ ಬಂದಿದ್ದರೆ ಅದು ಕಾನೂನಿನ ಅಜ್ಞಾನ ಅಥವಾ ತಪ್ಪು ತಿಳಿವಳಿಕೆ. ಕ್ರಿಮಿನಲ್ ಅಪರಾಧದ ಆಪಾದನೆಗೆ ಒಳಗಾದ ವ್ಯಕ್ತಿ ತನ್ನ ಕೃತ್ಯ ದಂಡಾರ್ಹ ಅಪರಾಧವೆಂಬುದನ್ನು ಅರಿತಿರಲಿಲ್ಲವೆಂಬುದಾಗಿ ಪ್ರತಿವಾದ ಹೂಡುವ ಹಾಗಿಲ್ಲ. ಕಾನೂನನ್ನು ಅರಿತೋ ಅರಿಯದೆಯೋ ಮಾಡಿ ಈ ಬಗೆಯ ಕೃತ್ಯವೆಲ್ಲ ಶಿಕ್ಷಾರ್ಹವೇ. ಕಾನೂನನ್ನು ಅರಿತಿರಲಿಲ್ಲವೆಂದ ಮಾತ್ರಕ್ಕೆ ಅದರ ಉಲ್ಲಂಘನೆ ಕ್ಷಮಾರ್ಹವಲ್ಲ. ಕಾನೂನಿನ ಅಜ್ಞಾನ ಯಾರಿಗೂ ಕ್ಷಮೆ ನೀಡುವುದಿಲ್ಲ ಎಂಬುದು ಸೂತ್ರ. ದಂಡಾರ್ಹ ಅಪರಾಧಗಳಿಗೆಲ್ಲ ಈ ಸೂತ್ರ ಸಂಪೂರ್ಣವಾಗಿ ಅನ್ವಯವಾಗುತ್ತದೆ. ಒಂದು ದೇಶದ ಕಾನೂನನ್ನು ಅರಿತಿರಬೇಕಾದ್ದಿಲ್ಲದ ವಿದೇಶೀಯನಿಗೆ ಕೂಡ ಆತನ ಅಜ್ಞಾನದ ಕಾರಣದಿಂದಾಗಿ ಕ್ಷಮೆ ಅಥವಾ ವಿನಾಯಿತಿ ದೊರುಕವುದಿಲ್ಲ. ಇದು ಬ್ಯಾರೋನೆಟ್ (1852) ತೀರ್ಪಿನಲ್ಲಿ ಸಿದ್ದವಾಗಿದೆ. ಇಬ್ಬರು ಫ್ರೆಂಚರು ಇಂಗ್ಲೆಂಡಿನಲ್ಲಿ ಕತ್ತಿವರಿಸೆಯ ಕಾಳಗ ನಡೆಸಿದಾಗ ಅವರಲ್ಲೊಬ್ಬ ಮಡಿದ. ಅವನ ಕೊಲೆ ಮಾಡಿದ ಆಪಾದನೆ ಹೊರಿಸಿ ಇನ್ನೊಬ್ಬನ ಮೇಲೆ ಮೊಕದ್ದಮೆ ಹೂಡಲಾಯಿತು. ಕತ್ತಿವರಿಸೆಯಲ್ಲಿ ಕೊಂದರೆ ಅದು ತನ್ನ ದೇಶದಲ್ಲಿ ಅಪರಾಧವಲ್ಲವೆಂದೂ ಇಂಗ್ಲೆಂಡಿನಲ್ಲಿ ಅದನ್ನು ಕೊಲೆಯೆಂದು ಪರಿಗಣಿಸಲಾಗುವುದೆಂಬುದು ತನಗೆ ಅರಿವಿರಲಿಲ್ಲವೆಂದೂ ಆ ವ್ಯಕ್ತಿ ವಾದಿಸಿದ. ಅದರೆ ನ್ಯಾಯಾಲಯ ಅದನ್ನು ತಳ್ಳಿಹಾಕಿತು.[೧]
ಅಪಾದಿತನ ಅಜ್ಞಾನ
[ಬದಲಾಯಿಸಿ]ಒಂದು ಕೃತ್ಯ ದಂಡಾರ್ಹ ಅಪರಾಧವೆಂದು ಮಾಡುವ ಕಾಯಿದೆಯೊಂದು ಆಗ ತಾನೇ ಜಾರಿಗೆ ಬಂದಿದ್ದು. ಅದರ ಬಗ್ಗೆ ತಿಳಿವಳಿಕೆ ಇನ್ನೂ ತಲಪುವುದು ಅಸಾಧ್ಯವೆನಿಸುವಂಥ ಸ್ಥಳದಲ್ಲಿ ಮತ್ತು ಸಮಯದಲ್ಲಿ ಆ ಅಪಕೃತ್ಯ ನಡೆದಿದ್ದರೆ ಕೂಡ ಅಪಾದಿತನ ಅಜ್ಞಾನ ಮಾಫಿಗೆ ಕಾರಣವಾಗಲಾರದು. ಅವನು ದಂಡನೆಯನ್ನು ತಪ್ಪಿಸಿಕೊಳ್ಳಲಾರ.ಪ್ರತಿಯೊಬ್ಬನೂ ಕಾನೂನು ಕಟ್ಟಳೆಗಳನ್ನರಿತಿರಬೇಕು. ಅವನೊಬ್ಬ ಜಂಗಮ ವಿಶ್ವಕೋಶವಾಗಬೇಕು-ಎಂಬುದು ನ್ಯಾಯಾಲಯದ ಉದ್ದೇಶವಲ್ಲ. ಕಾನೂನಿನ ಅಜ್ಞಾನ ಕ್ಷಮಾರ್ಹವೆಂದು ನ್ಯಾಯಾಲಯ ಒಪ್ಪಿದ ಪಕ್ಷದಲ್ಲಿ ಸಮಾಜದ ತಳಹದಿಯಾದ ನ್ಯಾಯಪರಿಪಾಲನೆಯೇ ಅಸಾಧ್ಯವಾಗುತ್ತದೆ. ಆಪಾದಿತರು ಕಾನೂನಿನ ಅಜ್ಞಾನದ ಸೋಗಿನಿಂದ ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದು ಸಾಧ್ಯ. ಅಪರಾಧಿಗೆ ಕಾನೂನಿನ ಅರಿವು ಇತ್ತೆಂದು ರುಜುವಾತು ಮಾಡುವುದು ಅನೇಕ ಸಾರಿ ಅಸಾಧ್ಯವಾಗುತ್ತದೆ. ಆದ್ದರಿಂದಲೇ ಕಾನೂನಿನ ಅಜ್ಞಾನದಿಂದಾಗಿ ಆಪಾದಿತನಿಗೆ ಬಿಡುಗಡೆ ಅಥವಾ ವಿನಾಯಿತಿಯಿಲ್ಲವೆಂದೇ ಎಲ್ಲ ನ್ಯಾಯಶಾಸ್ತ್ರಗಳೂ ಹೇಳುತ್ತವೆ. ನ್ಯಾಯ ವಿತರಣೆಯಲ್ಲಿ ಈ ತತ್ತ್ವ ಅತ್ಯಂತ ಅವಶ್ಯವಾದ್ದು. ತೀವ್ರ ದಂಡಾರ್ಹ ಅಪರಾಧಗಳಲ್ಲಿ ಆಪಾದಿತನಿಗೆ ಸಾಮಾನ್ಯವಾಗಿ ತನ್ನ ಕೃತ್ಯ ದಂಡಾರ್ಹ ಅಪರಾಧವೆನಿಸದಿದ್ದರೂ ಅದು ಅಕೃತ್ಯವೆಂಬುದರ ಅರಿವಂತೂ ಸಾಮಾನ್ಯವಾಗಿ ಇದ್ದೇ ಇರುತ್ತದೆ.ಕಾಯಿದೆ, ನಿಯಮಗಳು (ರೂಲ್ಸ್), ಉಪನಿಯಮಗಳು (ಬೈ-ಲಾಸ್), ನಿಬಂಧನೆಗಳು (ರೆಗ್ಯುಲೇಷನ್ಸ್) ಇವೆಲ್ಲವೂ ಕಾನೂನು ಎಂಬ ಶಬ್ದದ ವ್ಯಾಪ್ತಿಗೆ ಒಳಪಡುತ್ತವೆ. ವಿಧಾನ ಮಂಡಲ ಅಥವಾ ಸಂಸತ್ತು ಕಾಯಿದೆಗಳನ್ನೂ ಸರ್ಕಾರ ನಿಯಮಗಳನ್ನೂ ವಿಶ್ವವಿದ್ಯಾನಿಲಯ ಮುಂತಾದ ಸಾರ್ವಜನಿಕ ಸಂಸ್ಥೆಗಳು ನಿಬಂಧನೆಗಳನ್ನೂ ರಚಿಸುತ್ತವೆ. ಪ್ರಜೆಗಳಿಗೆ ಅನುಕೂಲವಾಗುವಂತೆ ಇವನ್ನು ಪ್ರಚುರಪಡಿಸುವುದು ಆಯಾ ರಚನಾಂಗಗಳ ಕರ್ತವ್ಯ. ಯುಕ್ತಾಯುಕ್ತ ಪರಿಜ್ಞಾನವುಳ್ಳ, ವಯಸ್ಸಿಗೆ ಬಂದ ಪ್ರತಿಯೊಬ್ಬ ಪ್ರಜೆಯೂ ಅದನ್ನು ಅರಿಯುವುದು ಕರ್ತವ್ಯ. ಹಾಗೆ ಅರಿಯದೆ ಮಾಡಿದ ಉಲ್ಲಂಘನೆ ಶಿಕ್ಷಾರ್ಹ.
ಸಿವಿಲ್ ವಿಚಾರಗಳಲ್ಲಿ ಕಾನೂನಿನ ಅಜ್ಞಾನ
[ಬದಲಾಯಿಸಿ]ಸಿವಿಲ್ ವಿಚಾರಗಳಲ್ಲಿ ಕಾನೂನಿನ ಅಜ್ಞಾನ ಸಾಮಾನ್ಯವಾಗಿ ಅಸಂಬದ್ಧವಾದ್ದು. ಕೊಟ್ಟ ಮಾತು ಬಂಧಕ ಕರಾರಾಗಿ ಪರಿಣಮಿಸಬಹುದೆಂಬ ಸಂದರ್ಭದಲ್ಲಿ, ತಾನು ವಚನ ನೀಡುತ್ತಿರುವುದರ ಅರಿವಿಲ್ಲದೆಯೇ ಅದನ್ನು ನೀಡಿದನೆಂಬ ಕಾರಣದಿಂದ ಯಾವ ವ್ಯಕ್ತಿಯೂ ತನ್ನ ವಚನವನ್ನು ನಿರಾಕರಿಸುವುದು ಸಾಧ್ಯವಿಲ್ಲ.ವಸ್ತುಸ್ಥಿತಿಯ ಅಥವಾ ವಾಸ್ತವಾಂಶದ ಅಜ್ಞಾನದ ಫಲವಾದ ಅಪರಾಧಗಳನ್ನು ಕಾನೂನು ಕ್ಷಮಿಸುತ್ತದೆ. ಕೃತ್ಯಕ್ಕೆ ಅಥವಾ ವ್ಯವಹಾರಕ್ಕೆ ಸಾರಭೂತವಾದ (ಮಟೀರಿಯಲ್) ವಾಸ್ತವಾಂಶ ಅಥವಾ ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೆಯೇ ಒಂದು ಕೃತ್ಯ ಸಂಭವಿಸಿರಬೇಕು. ಅಜ್ಞಾನ ಕಾನೂನನ್ನು ಕುರಿತದ್ದಾಗಿರಬಾರದು. ಒಬ್ಬ ವ್ಯಕ್ತಿ ಕಾನೂನುಬದ್ದ ಕೃತ್ಯವೊಂದನ್ನು ಮಾಡುವುದಾಗಿ ಉದ್ದೇಶಿಸಿ ಕಾನೂನುಬಾಹಿರವಾದ್ದನ್ನು ಮಾಡಿದ ಪಕ್ಷದಲ್ಲಿ ಅವನ ಉದ್ದೇಶವನ್ನೂ ಕೃತ್ಯವನ್ನೂ ಪ್ರತ್ಯೇಕವಾಗಿ ಪರಿಗಣಿಸಬೇಕಾಗುತ್ತದೆ. ಒಂದು ಕೃತ್ಯ ಸ್ವತಃ ತಪ್ಪಾದ್ದೆಂಬುದು ಸ್ಪಷ್ಟವಿದ್ದು, ಅದು ಯಾವಾಗ ಅಪರಾಧವಾಗುವುದೆಂಬುದನ್ನು ಕುರಿತ ವಾಸ್ತವಾಂಶಗಳ ಬಗ್ಗೆ ತಪ್ಪು ತಿಳಿವಳಿಕೆ ಅಥವಾ ಅಜ್ಞಾನದಿಂದಾಗಿ ಆ ಕೃತ್ಯವನ್ನೆಸಗಿದರೆ ಆತ ದಂಡಾರ್ಹ ಅಪರಾಧದ ತಪ್ಪಿಗೆ ಒಳಗಾಗುತ್ತಾನೆ. ಇನ್ನೊಬ್ಬನ ಸರಕುಗಳನ್ನು ತನ್ನವೆಂದೇ ಭಾವಿಸಿ ತೆಗೆದು ಕೊಂಡು ಹೋದ ವ್ಯಕ್ತಿ ಕಳವಿನ ತಪ್ಪಿಗೆ ಒಳಗಾಗುವುದಿಲ್ಲ. ಏಕೆಂದರೆ ಇಲ್ಲಿ ಕದಿಯುವುದು ಅವನ ಉದ್ದೇಶವಲ್ಲ. ಅಪರಾಧದ ಉದ್ದೇಶಕ್ಕೂ ವಸ್ತುಸ್ಥಿತಿಯ ಅಜ್ಞಾನಕ್ಕೂ ಸಂಬಂಧ ಏರ್ಪಡದ್ದರಿಂದ ಆತ ನಿರಪರಾಧಿಯೆಂದು ಪ್ರತಿವಾದ ಹೂಡಬಹುದು. ಸಿವಿಲ್ ಮೊಕದ್ದಮೆಗಳಲ್ಲಿ ಕೂಡ ವಸ್ತುಸ್ಥಿತಿಯ ಅಜ್ಞಾನದಿಂದಾಗಿ ಒಂದು ವ್ಯಕ್ತಿಗೆ ಹೊಣೆಯಿಂದ ವಿಮೋಚನೆ ಲಭಿಸುವುದು ಸಾಧ್ಯ. ವಿಮಾ ಕಂಪನಿಯ ಪಾಲಿಸಿಯೊಂದು ವ್ಯಪಗತವಾಗಿದ್ದುದು (ಲ್ಯಾಪ್ಸ್) ಗೊತ್ತಿಲ್ಲದೆ ಆ ಕಂಪನಿ ವಿಮಾ ಮೊಬಲಗನ್ನು ಪಾಲಿಸಿದಾರನಿಗೆ ಕೊಟ್ಟಿದ್ದ ಪಕ್ಷದಲ್ಲಿ ಇದು ವಸ್ತುಸ್ಥಿತಿಯ ಅಜ್ಞಾನದಿಂದ ಮಾಡಿದ ಕೃತ್ಯ. ಕಂಪನಿಗೆ ಆ ಹಣವನ್ನು ವಾಪಸು ಪಡೆಯಲು ಹಕ್ಕುಂಟು.
ವಸ್ತುಸ್ಥಿತಿಯ ಅಜ್ಞಾನ
[ಬದಲಾಯಿಸಿ]ವಸ್ತುಸ್ಥಿತಿಯ ಬಗ್ಗೆ ಅಜ್ಞಾನ ರುಜುವಾತಾದರೆ ನ್ಯಾಯಾಲಯ ಕ್ಷಮೆ ತೋರುತ್ತದೆಯೆಂಬುದನ್ನು ಸಿದ್ಧಪಡಿಸುವ ಅನೇಕ ತೀರ್ಪುಗಳಿವೆ. ಗೋಪಾಲಿ ಕಲ್ಲಯ್ಯ (1923, 26 ಬಾಂಬೆ ಎಲ್.ಅರ್.138) ಮೊಕದ್ದಮೆಯ ತೀರ್ಪು ಒಂದು ಉದಾಹರಣೆ. ಒಬ್ಬನನ್ನು ಕೈದು ಮಾಡಲು ಪೋಲೀಸ್ ಅಧಿಕಾರಿಯೊಬ್ಬನಿಗೆ ವಾರಂಟ್ ಕೊಡಲಾಗಿತ್ತು. ಆತ ಸದುದ್ದೇಶದಿಂದ ಆಪಾದಿತನ ಬಗ್ಗೆ ವಿಚಾರಿಸಿ, ತಪ್ಪಾಗಿ ಇನ್ನೊಬ್ಬನನ್ನು ಕೈದು ಮಾಡಿದ. ಆತ ಅಧಿಕಾರವಿಲ್ಲದೆ ತನ್ನನ್ನು ಬಂಧಿಸಿದ್ದಾನೆಂದು ಬಂಧಿತ ವ್ಯಕ್ತಿ ಮೊಕದ್ದಮೆ ಹೂಡಿದ. ವಸ್ತುಸ್ಥಿತಿಯ ಅಜ್ಞಾನವಿದ್ದು, ಸದುದ್ದೇಶದಿಂದ ಪೋಲೀಸ್ ಅಧಿಕಾರಿ ಆ ಇನ್ನೊಬ್ಬನನ್ನು ಕೈದು ಮಾಡಿರುವುದು ಶಿಕ್ಷಾರ್ಹವಲ್ಲವೆಂದು ನ್ಯಾಯಾಲಯ ತೀರ್ಪು ನೀಡಿತು. ವಸ್ತುಸ್ಥಿತಿಯ ಅಜ್ಞಾನ ಕ್ಷಮಾರ್ಹವಾಗಬೇಕಾದರೆ. ಹಾಗೆಂದು ಸಿದ್ದಪಡಿಸಬೇಕಾದರೆ ಅದು ಒಳಸಂಚಿರದ, ಸದುದ್ಧೇಶದಿಂದೊಡಗೂಡಿದ ದುರದೃಷ್ಟ ಸಂದರ್ಭವಾಗಿರಬೇಕು.ಪತಿ ದೇಶಾಂತರ ಹೋಗಿ ಏಳು ವರ್ಷಗಳನ್ನೂ ಮಿಕ್ಕಿದ್ದರೂ ಆತ ಇನ್ನೂ ಬಾರದಿದ್ದುದರಿಂದ ಅವನು ಮಡಿದಿರಬೇಕೆಂದು ಭಾವಿಸಿದ ಪತ್ನಿ ಎರಡನೆಯ ವಿವಾಹವಾದಳು. ಆದರೆ ಪತಿ ಮಡಿದಿರಲಿಲ್ಲ. ವಸ್ತುಸ್ಥಿತಿಯ ಅರಿವು ಆಕೆಗೆ ಇರಲಿಲ್ಲ. ಆದ್ದರಿಂದ ಅವಳ ವಿವಾಹ ಎರಡನೆಯ ವಿವಾಹದ ಅಪರಾಧವಾಗುವುದಿಲ್ಲವೆಂದು ನ್ಯಾಯಾಲಯ ತೀರ್ಪಿತ್ತಿತು [೨]
ಪ್ರಿನ್ಸ್ (1875. ಎಲ್.ಆರ್. 2 ಸಿ.ಸಿ.ಆರ್. 154) ಮೊಕದ್ದಮೆಯ ತೀರ್ಪು ಈ ರೀತಿ ಇದೆ
[ಬದಲಾಯಿಸಿ]ಅವಿವಾಹಿತ ಅವಯಸ್ಕಳೊಬ್ಬಳನ್ನು ಅಪಹರಿಸಿಕೊಂಡು ಹೋದ ಅಪಾದನೆಗೆ ಒಳಗಾಗಿದ್ದವನೊಬ್ಬ, ತನಗೆ ಆಕೆಯ ವಯಸ್ಸು 18ನ್ನು ಮೀರಿದಂತೆ ತೋರಿತೆಂದೂ ಆದ್ದರಿಂದ ತನ್ನ ಕೃತ್ಯ ಅವಯಸ್ಕಳ ಅಪಹರಣವಾಗುವುದಿಲ್ಲವೆಂದೂ ವಸ್ತುಸ್ಥಿತಿಯ ಅಜ್ಞಾನವಿದ್ದುದರಿಂದ ತಾನು ಕ್ಷಮಾರ್ಹನೆಂದೂ ವಾದಿಸಿದ. ಆತನ ಕೃತ್ಯ ದುರುದ್ದೇಶಪೂರಿತವಾದ್ದರಿಂದ (ಅಪಹಾರ) ಕ್ಷಮಾರ್ಹವಲ್ಲವೆಂದು ನ್ಯಾಯಾಲಯ ತೀರ್ಮಾನಿಸಿತು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-04-25. Retrieved 2016-10-25.
- ↑ (ಟಾಲ್ಸಲ್ 1889, 23 ಕೂ. ಬಿ.ಡಿ. 168).