ವಿಷಯಕ್ಕೆ ಹೋಗು

ಕಾಂಡ್ಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಪಶ್ಚಿಮ ತೀರದಲ್ಲಿರುವ ಒಂದು ಅಂತರರಾಷ್ಟ್ರೀಯ ಬಂದರು. ಗುಜರಾತ್ ರಾಜ್ಯದ ಕಚ್ ಜಿಲ್ಲೆಯ ದಕ್ಷಿಣ ಕರಾವಳಿಯಲ್ಲಿ (ಉ.ಅ. 23ಲಿ ಪೂ.ರೇ. 70ಲಿ) ಅಂಜಾರ್ ನಿಂದ ಆಗ್ನೇಯಕ್ಕೆ 12 ಮೈಲಿ ದೂರದಲ್ಲಿದೆ. ಇದು ಹಿಂದೆ ಒಂದು ಹಳ್ಳಿಯಾಗಿತ್ತು. 1930ರಲ್ಲಿ ಇದನ್ನು ಒಂದು ಬಂದರನ್ನಾಗಿ ಪರಿವರ್ತಿಸಲಾಯಿತು. ಸ್ವಾತಂತ್ರ್ಯಪೂರ್ವ ಭಾರತದ ಪಶ್ಚಿಮ ತೀರದ ಮುಖ್ಯ ಬಂದರುಗಳಲ್ಲೊಂದಾಗಿದ್ದ ಕರಾಚಿ ಪಾಕಿಸ್ತಾನಕ್ಕೆ ಸೇರಿದುದರಿಂದ ಭಾರತದ ಪಶ್ಚಿಮ ಮತ್ತು ವಾಯವ್ಯ ಭಾಗಗಳ ಸಾಗರಾಂತರ ವ್ಯಾಪಾರ ನಿರ್ವಹಿಸುವುದಕ್ಕೂ ಮುಂಬಯಿ ಬಂದರಿನ ಅತಿಯಾದ ಒತ್ತಡದ ನಿವಾರಣೆಗೂ ಇಂಥ ಒಂದು ಬಂದರಿನ ಆವಶ್ಯಕತೆಯನ್ನು ಮನಗಂಡ ಭಾರತ ಸರ್ಕಾರ ಅಭಿವೃದ್ಧಿಗಾಗಿ ವಿಶೇಷ ಗಮನ ನೀಡಿತು. ಸೂಕ್ತ ಸಾರಿಗೆ ವ್ಯವಸ್ಥೆಯ ಕೊರತೆ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ಹಿನ್ನಾಡಿನ ಅಭಾವ-ಈ ಕಾರಣಗಳಿಂದ ಕಾಂಡ್ಲಾ ಬಂದರಿನ ಬೆಳೆವಣಿಗೆ ಮೊದಮೊದಲು ಸ್ವಲ್ಪ ಕುಂಠಿತವಾದರೂ 1960ರ ದಶಕದಲ್ಲಿ ಇದು ಗಮನಾರ್ಹವಾಗಿ ವೃದ್ಧಿ ಹೊಂದಿದೆ. ಕಚ್, ಉತ್ತರ ಗುಜರಾತ್, ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ದೆಹಲಿ, ಉತ್ತರ ಪ್ರದೇಶದ ಪಶ್ಚಿಮ ಭಾಗ ಇವು ಕಾಂಡ್ಲಾ ಬಂದರಿನಿಂದ ನೇರ ಪ್ರಯೋಜನ ಪಡೆಯಬಹುದಾದ ಪ್ರದೇಶಗಳು. ಇದರ ಹಿನ್ನಾಡಿನ ವಿಸ್ತೀರ್ಣ 2,75,000 ಚ.ಮೈ. 1947ಕ್ಕೆ ಪೂರ್ವದಲ್ಲಿ ಕಾಂಡ್ಲಾವನ್ನು ಒಂದು ಉಪಯುಕ್ತ ಬಂದರನ್ನಾಗಿ ಅಭಿವೃದ್ಧಿ ಪಡಿಸುವುದರಲ್ಲಿ ಕಚ್ ನ ಮಹಾರಾವ್‍ಗಳು ಬಹಳ ಪ್ರಯತ್ನಿಸಿದರು. ಹೀಗೆ ಶ್ರಮಿಸಿದವರಲ್ಲಿ 3ನೆಯ ಮಹಾರಾವ್ ಖಂಗರ್ಜಿ ಪ್ರಮುಖ.[]

ಕಾಂಡ್ಲಾ-ಅಹಮದಾಬಾದ್ ಬ್ರಾಡ್ ಗೇಜ್ ರೈಲು ಮಾರ್ಗ

[ಬದಲಾಯಿಸಿ]

ಇತ್ತೀಚೆಗೆ ನಿರ್ಮಿತವಾದ ಕಾಂಡ್ಲಾ-ಅಹಮದಾಬಾದ್ ಬ್ರಾಡ್ ಗೇಜ್ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಂದ ಕಾಂಡ್ಲಾದ ಉಪಯೋಗ ಪಡೆಯುವ ಪ್ರದೇಶದ ವ್ಯಾಪ್ತಿ ದ್ವಿಗುಣಗೊಂಡಿದೆ. ಈ ಬಂದರನ್ನು ಎಲ್ಲ ಬಗೆಯ ಸರಕು ವಿಲೇವಾರಿಗೆ ಅನುಕೂಲವಾಗುವಂತೆ ಆಧುನಿಕ ಯಂತ್ರಗಳಿಂದ ಸಜ್ಜುಗೊಳಿಸಲಾಗಿದೆ. 3 ರಿಂದ 10 ಟನ್ ಭಾರತವನ್ನೆತ್ತಿ ಇಳಿಸಬಲ್ಲ 21 ಎತ್ತುಗೆಯಂತ್ರಗಳು (ಕ್ರೇನ್) ಇಲ್ಲಿ ಕೆಲಸ ಮಾಡುತ್ತವೆ. ಸರಕುಗಳನ್ನು ಸುರಕ್ಷಿತವಾಗಿ ಕಾಪಾಡಲು ಎರಡೆರೆಡು ಮಹಡಿಗಳ 4 ಉಗ್ರಾಣಗಳುಂಟು.ಕಡಿಮೆ ಮಳೆ, ಶುಷ್ಕ ವಾತಾವರಣ ಮತ್ತು ಆಧುನಿಕ ಯಂತ್ರ ಸೌಲಭ್ಯಗಳು ಈ ಬಂದರಿನ ಬೆಳೆವಣಿಗೆಗೆ ಸಹಾಯಕ. ಭಾರತದ ಇತರ ಬಂದರುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ತೇವದ ವಾತಾವರಣ ಇಲ್ಲಿಲ್ಲ. ವರ್ಷದ ಬಹುಕಾಲ ಇಲ್ಲಿ ಶುಷ್ಕ ಹವೆ ಇರುವುದಂತೂ ವಿಶೇಷ ಅನುಕೂಲ.  ಮಳೆ ಕಡಿಮೆಯಾದ್ದರಿಂದ ವರ್ಷದ ಅತಿ ಹೆಚ್ಚು ದಿನಗಳಲ್ಲಿ ಇಲ್ಲಿ ಕೆಲಸ ನಡೆಸಲು ಸಾಧ್ಯ. ಜೊತೆಗೆ ಈ ಬಂದರಿನ ನೆರೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬೆಳೆಬಣಿಗೆಗೆ ಅನುಕೂಲವಾದ ವಿಶಾಲ ಪ್ರದೇಶಗಳುಂಟು. ಭಾರತ ವಿಭಜನೆಯ ಪರಿಣಾಮವಾಗಿ ಸಿಂಧಿನಿಂದ ವಲಸೆ ಬಂದವರಿಗಾಗಿ ನಿರ್ಮಿಸಲಾದ ಗಾಂಧಿಧಾಮ ಇರುವುದು ಕಾಂಡ್ಲಾಕ್ಕೆ ಸಮೀಪದಲ್ಲೇ. ಅದು ಶೀಘ್ರವಾಗಿ ಬೆಳೆಯುತ್ತಿರುವ ಒಂದು ಮುಖ್ಯ ಕೈಗಾರಿಕಾ ನಗರ.[]

ರಾಜಸ್ಥಾನದ ಪರಮಾಣುವಿದ್ಯುತ್ ಕೇಂದ್ರ

[ಬದಲಾಯಿಸಿ]

736 ಅಡಿಗಳಿಗಿಂತ ಹೆಚ್ಚು ಉದ್ದವಾದ, 35,000 ಟನ್ನುಗಳಿಗೂ ಹೆಚ್ಚು ಭಾರ ಹೊತ್ತ ಹಡಗುಗಳು ಯಾವ ತೊಂದರೆಯೂ ಇಲ್ಲದೆ ಇಲ್ಲಿಗೆ ಆಗಮಿಸಬಲ್ಲುವು. ರಾಜಸ್ಥಾನದ ಪರಮಾಣುವಿದ್ಯುತ್ ಕೇಂದ್ರಕ್ಕೆ ವಿದೇಶಗಳಿಂದ ಆಮದು ಮಾಡಿಕೊಂಡ ಯಂತ್ರೋಪಕರಣಗಳನ್ನು ಈ ಬಂದರಿನಲ್ಲೇ ಇಳಿಸಿಕೊಳ್ಳಲಾಯಿತು.  ಕಳೆದ ಕೆಲವು ವರ್ಷಗಳಲ್ಲಿ ಭಾರೀ ಪ್ರಮಾಣದ ಆಹಾರ ಸಾಮಗ್ರಿಗಳನ್ನಿಲ್ಲಿಂದ ವಿಲೇವಾರಿ ಮಾಡಿದೆ.  ಮಿತವ್ಯಯದ ದೃಷ್ಟಿಯಿಂದ ಅಹಮದಾಬಾದ್-ಕಾಂಡ್ಲಾ ಬ್ರಾಡ್ ಗೇಜ್ ರೈಲು ಮಾರ್ಗ ಕಾಂಡ್ಲಾದ ಮಹತ್ತ್ವವನ್ನು ಹೆಚ್ಚಿಸಿದೆ.  ಅಹಮದಾಬಾದಿನ ವ್ಯಾಪಾರಿಗಳು ಹತ್ತಿಯನ್ನು ಮುಂಬಯಿ ಬಂದರಿನ ಬದಲಾಗಿ ಕಾಂಡ್ಲಾದ ಮೂಲಕ ತರಿಸಿಕೊಂಡರೆ ಆಗುವ ಉಳಿತಾಯ ಗಮನಾರ್ಹ. ಮೀಟರ್ ಗೇಜ್ ರೈಲು ಇದ್ದಾಗಲೆ ಪ್ರತಿ ಟನ್ನಿಗೆ ರೂ. 5.30 ಉಳಿತಾಯವಾಗುತ್ತಿತ್ತು. ಬ್ರಾಡ್ ಗೇಜ್ ರೈಲು ನಿರ್ಮಾಣದ ಫಲವಾಗಿ ಅವರಿಗೆ ಆಗುವ ಉಳಿತಾಯ ಪ್ರತಿ ಟನ್ನಿಗೆ ರೂ. 20.50[]

ಸರಕುಗಳ ಸಾಗಾಣಿಕೆ

[ಬದಲಾಯಿಸಿ]

ಸರಕುಗಳ ಸಾಗಾಣಿಕೆಗೆ ಅತ್ಯಾವಶ್ಯಕವಾವ ರೈಲು ಮಾರ್ಗ ಮತ್ತು ಹೆದ್ದಾರಿ ಸೌಕರ್ಯಗಳನ್ನು ಹೊಂದಿರುವ ಕಾಂಡ್ಲಾ ಬಂದರಿನ ಸುತ್ತಮುತ್ತಣ ಪ್ರದೇಶ ಭಾರತದ ಒಂದು ಮುಖ್ಯ ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತಿದೆ. ಖನಿಜ ಮತ್ತು ವ್ಯವಸಾಯೋತ್ಪನ್ನಗಳ ಕಾರ್ಖಾನೆಗಳು ಬೆಳೆಯಲು ಇಲ್ಲಿ ಒಳ್ಳೆಯ ವಾತಾವರಣವಿದೆ. ಎಂಜಿನಿಯರಿಂಗ್ ಸಲಕರಣೆಗಳ, ಲವಣಸಂಬಂಧ ವಸ್ತುಗಳ ಕಾರ್ಖಾನೆಗಳ ಸ್ಥಾಪನೆ ಯೋಜನೆಗಳೂ ರೂಪುಗೊಂಡಿವೆ. ರಾಜಾಸ್ಥಾನದ ಪರಮಾಣು ವಿದ್ಯುತ್ ಕೇಂದ್ರ, ರಾಸಾಯನಿಕ ಗೊಬ್ಬರ, ತೈಲ ಶುದ್ಧೀಕರಣ, ರಬ್ಬರ್ ಹಾಗೂ ಕೃತಕ ತಂತು ಕಾರ್ಖಾನೆಗಳು ಮುಖ್ಯವಾದವು. ಈ ಬಂದರಿಗೆ ಅತಿ ಸಮೀಪದಲ್ಲಿ ಫಾರ್ಮಾಲ್ಡಿಹೆಡ್ ಮತ್ತು ಹೆಕ್ಸಾಮಿನ್ ಕಾರ್ಖಾನೆಗಳು ಸ್ಥಾಪಿತವಾಗಿವೆ. ಕಾಂಡ್ಲಾಕ್ಕೆ ಸಮೀಪದಲ್ಲಿರುವ ಆದಿಪುರದಲ್ಲಿ 12,000 ಕದಿರುಗಳ ಸಾಮಥ್ರ್ಯದ ನೂಲು ಗಿರಣಿ ಸ್ಥಾಪನೆಯಾಗಿ ಈ ಪ್ರದೇಶದ ಕೈಗಾರಿಕಾ ಸಂಪತ್ತನ್ನು ಮತ್ತಷ್ಟು ಹೆಚ್ಚಿಸಿದೆ.

ಕಾಂಡ್ಲಾ ಬಂದರು

[ಬದಲಾಯಿಸಿ]

ಕಾಂಡ್ಲಾ ಬಂದರು ಮತ್ತು ಅದರ ಸುತ್ತಲಿನ ಪ್ರದೇಶ ಭಾರತದ ಪ್ರಪ್ರಥಮ ಮುಕ್ತ ವ್ಯಾಪಾರ ವಲಯ. ಭಾರತದಲ್ಲಿ ಲಭ್ಯವಿಲ್ಲದ ಅನೇಕ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳಲು ಕಾಂಡ್ಲಾ ಬಂದರಿನಲ್ಲಿ ಸುಂಕವಿಮೋಚನೆಯ ಸೌಲಭ್ಯವಿದೆ. ಅಂಥ ಸಲಕರಣೆಗಳನ್ನು ಆಯಾತ ಮಾಡಿಕೊಳ್ಳಲು ಮುಂಗಡ ಪರವಾನೆಗಳನ್ನು ಕೂಡ ಕೊಡಲಾಗುತ್ತದೆ. ವಿದೇಶಗಳಿಗೆ ರಫ್ತು ಮಾಡುವ ಅನೇಕ ಪದಾರ್ಥಗಳ ತಯಾರಿಕೆಗೆ ಅತ್ಯಾವಶ್ಯಕವಾದ ಯಂತ್ರ ಸಲಕರಣೆಗಳು, ರಾಸಾಯನಿಕ ಸಾಮಗ್ರಿಗಳು ಮತ್ತು ಕಚ್ಚಾ ವಸ್ತುಗಳಿಗೆ ಆಮದು ಸುಂಕ ಮತ್ತು ಕೇಂದ್ರ ಅಬ್ಕಾರಿ ಸುಂಕದ ವಿನಾಯ್ತಿಗಳು ಈ ಮುಕ್ತ ವ್ಯಾಪಾರ ವಲಯದಲ್ಲಿ ದೊರೆಯುತ್ತವೆ. ಈ ಮುಕ್ತ ವ್ಯಾಪಾರ ವಲಯ ನಿರ್ಮಾಣದಿಂದ ಭಾರತದ ರಫ್ತು ಸಾಮಥ್ರ್ಯವನ್ನು ಹೆಚ್ಚಿಸಿ ವಿದೇಶೀ ವಿನಿಮಯವನ್ನು ಗಳಿಸುವುದೂ ಈಗಾಗಲೇ ಲಭ್ಯವಿರುವ ಬಂದರು ಮತ್ತು ಕೈಗಾರಿಕೆಗಳ ಪ್ರಯೋಜನಗಳನ್ನು ಮತ್ತಷ್ಟು ವೃದ್ಧಿಪಡಿಸುವುದೂ ಗಾಂಧಿಧಾಮ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ಯೋಗ ಸೌಕರ್ಯ ಹೆಚ್ಚಿಸುವುದೂ ಸಾಧ್ಯವಾಗಿದೆ.ಕಾಂಡ್ಲಾ ಬಂದರು ಪ್ರತಿ ವರ್ಷ 25 ಲಕ್ಷ ಟನ್ನುಗಳಷ್ಟು ಸರಕುಗಳನ್ನು ಹಡಗುಗಳಿಗೆ ತುಂಬಿಳಿಸುವ ಸಾಮಥ್ರ್ಯ ಪಡೆದಿದೆ. ಅದರ ಮೂಲಕ ಸಾಗುತ್ತಿರುವ ಸರಕಿನ ಪರಿಮಾಣ 20 ಲಕ್ಷ ಟನ್ ಗಳಿಗೂ ಅಧಿಕ. ಕಚ್ಚಾ ತೈಲಗಳನ್ನು ಮತ್ತು ಅಪಾಯಕರ ರಾಸಾಯನಿಕ ಸಾಮಗ್ರಿಗಳನ್ನು ವಿಲೇವಾರಿ ಮಾಡಲು ಅನುಕೂಲವಾಗುವಂಥ ಪ್ರತ್ಯೇಕ ಘಟಕಗಳನ್ನಿದು ಹೊಂದಿದೆ. ಮುಂಬಯಿ ಮತ್ತು ಇತರ ನಗರಗಳಿಂದ ಕಾಂಡ್ಲಾಕ್ಕೆ ದೈನಿಕ ವಿಮಾನ ಯಾನ ಸೌಕರ್ಯವುಂಟು. ಬ್ರಿಟನ್, ಜಪಾನ್ ಮತ್ತು ಇತರ ಪ್ರಮುಖ ರಾಷ್ಟ್ರಗಳಿಗೆ 15 ದಿನಗಳಿಗೊಮ್ಮೆ ಪ್ರಯಾಣಿಕ ಹಡಗುಗಳು ಹೊರಡುತ್ತವೆ. ಕಾಂಡ್ಲಾ ಬಂದರಿನ ಆಡಳಿತವನ್ನು ನಿರ್ವಹಿಸಲು ಅಭಿವೃದ್ಧಿ ಸಮಿತಿಯೊಂದುಂಟು. ಆಹಾರ ಧಾನ್ಯ, ಖನಿಜ, ತೈಲಸಾಮಗ್ರಿ, ಯಂತ್ರೋಪಕರಣಗಳು, ರಾಸಾಯನಿಕ ವಸ್ತು, ಕೃತಕ ಗೊಬ್ಬರ ಇವು ಈ ಬಂದರಿನ ಮೂಲಕ ಹಾಯುವ ಆಮದುಗಳು. ಹತ್ತಿ, ಉಪ್ಪು, ಸಕ್ಕರೆ, ಚೂರ್ಣಾಸ್ಥಿ, ಖನಿಜ, ತೈಲಸಾಮಗ್ರಿ ಇವು ರಫ್ತುಗಳು.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಕಾಂಡ್ಲಾ&oldid=1054271" ಇಂದ ಪಡೆಯಲ್ಪಟ್ಟಿದೆ