ಈಜಿಯನ್ ನಾಗರಿಕತೆ
ಮೆಡಿಟರೇನಿಯನ್ ಸಮುದ್ರದ ಒಂದು ಪ್ರಮುಖ ಕವಲಾದ ಈಜಿಯನ್ ಸಮುದ್ರದ ಸುತ್ತಣ ಪ್ರದೇಶದಲ್ಲಿ ಇತಿಹಾಸಪೂರ್ವ ಕಾಲದ ಈಚಿನ ಯುಗದಲ್ಲಿನ ನಾಗರಿಕತೆಗಳೆಲ್ಲಕ್ಕೂ ಅನ್ವಯವಾಗುವ ಹೆಸರು. ಕ್ರಿ.ಪೂ. 2500 ರಿಂದ 1100ರ ವರೆಗೆ, ಎಂದರೆ ಈ ಪ್ರದೇಶದಲ್ಲೆಲ್ಲ ಕಬ್ಬಿಣದ ಬಳಕೆ ಸಾಮಾನ್ಯವಾಗುವವರೆಗೆ, ಈ ನಾಗರಿಕತೆ ಪ್ರಬಲವಾಗಿತ್ತು. ಈ ನಾಗರಿಕತೆಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕ್ರೀಟ್ ದ್ವೀಪದ ನಾಗರಿಕತೆಯ ಮಿನೋವನ್ ಎಂದೂ ಗ್ರೀಸಿನ ಭೂ ಪ್ರದೇಶದ್ದಕ್ಕೆ ಹೆಲ್ಲಾಡಿಕ್ ಎಂದೂ ಈಜಿಯನ್ ಸಮುದ್ರದಲ್ಲಿರುವ ಡೆಲಾಸ್ ದ್ವೀಪ ಮತ್ತು ಅದರ ಸುತ್ತಮುತ್ತಲಿರುವ ಇತರ ದ್ವೀಪಗಳದ್ದಕ್ಕೆ ಸೈಕ್ಲಾಡಿಕ್ ಎಂದೂ ಹೇಳುವುದುಂಟು. ಹೋಮರ್ ಎಂಬ ಗ್ರೀಸಿನ ಪ್ರಖ್ಯಾತ ಕವಿ ಕ್ರಿ.ಪೂ. ಒಂಬತ್ತನೆಯ ಶತಮಾನದಲ್ಲಿ ಕ್ರೀಟ್ ದ್ವೀಪದ ಹಿರಿಮೆಯನ್ನು ತನ್ನ ಕವಿತೆಯಲ್ಲಿ ಕೊಂಡಾಡಿ ಅದರ ಉನ್ನತಿಯ ಕಾಲವನ್ನು ಸುವರ್ಣಯುಗವೆಂದು ಕರೆದಿದ್ದಾನೆ. ಈಜಿಯನ್ ನಾಗರಿಕತೆ ಪ್ರಾಚೀನ ಈಜಿಪ್ಟ್ ಮತ್ತು ಮೆಸೊಪೊಟೇಮಿಯ ನಾಗರಿಕತೆಗಳ ಸಮಕಾಲೀನವೂ ಮೈಸೀನಿಯನ್ನಿನ ಏಳ್ಗೆಯ ಕಾಲಕ್ಕೆ ಪ್ರಾಚೀನ ಆಗಿತ್ತೆಂದು ಹೇಳಬಹುದು.[೧]
ಇತಿಹಾಸ
[ಬದಲಾಯಿಸಿ]ಸುಮಾರು ಕ್ರಿ.ಪೂ. 3000ದಲ್ಲಿ ಕ್ರೀಟಿನ ಜನ ನವಶಿಲಾಯುಗದಿಂದ ಲೋಹದ ಯುಗಕ್ಕೆ ಸ್ಥಿತ್ಯಂತರ ಹೊಂದಿದರು. ಕ್ರಮೇಣ ಜನಸಂಖ್ಯೆಯೂ ಹೆಚ್ಚಿತು. ಕಂಚು ಇವರ ಮುಖ್ಯ ಲೋಹವಾಗಿ ಬಳಕೆಗೆ ಬಂತು. ಅಂದರೆ ಕಬ್ಬಿಣ ಯುಗ ಆರಂಭವಾಗುವುದಕ್ಕೆ ಸುಮಾರು 2000 ವರ್ಷಗಳ ಹಿಂದೆ ಕಂಚು ಉಪಯೋಗದಲ್ಲಿತ್ತೆಂದು ತಿಳಿಯುತ್ತದೆ. ಈ ಜನರಿಗೆ ಬಹುಶಃ ಬರವಣಿಗೆಯೂ ತಿಳಿದಿತ್ತು. ಈ ಸಂಸ್ಕøತಿಗಳ ಬೆಳವಣಿಗೆ ಬೇರೆ ಬೇರೆ ಕಾಲದಲ್ಲಿ ಜರುಗಿತು. ಸುಮಾರು ಕ್ರಿ.ಪೂ. 1800ರಲ್ಲಿ ನಾಸಾಸ್ ಮತ್ತು ಫೇಸ್ಪಾಸ್ ಎಂಬ ನಗರಗಳು ಪ್ರಮುಖವಾಗಿದ್ದುವು. ಆಗ ಈ ನಾಗರಿಕತೆ ತನ್ನ ಔನ್ನತ್ಯದ ಶಿಖರ ಮುಟ್ಟಿತ್ತು. ಅಲ್ಲಿಂದ ಮುಂದೆ ನೂರು ವರ್ಷಗಳ ಅವಧಿಯಲ್ಲಿ ಯಾವುದೋ ಭಯಂಕರ ವಿಪತ್ತಿಗೆ ಗುರಿಯಾಗಿ ನಾಸಾಸ್ನ ಪ್ರಖ್ಯಾತ ಅರಮನೆ ನಾಶವಾಯಿತು. ಹಾಗೆಯೇ ಇತರ ನಗರಗಳಲ್ಲಿದ್ದ ಅರಮನೆಗಳೂ ಕಟ್ಟಡಗಳೂ ನಾಶ ಹೊಂದಿದುವು.ಸುಮಾರು 50 ವರ್ಷಗಳ ಅನಂತರ ಟ್ರಾಯ ಮತ್ತು ಕ್ರೀಟ್ ನಗರಗಳು ಪುನಃ ನಿರ್ಮಾಣವಾದುವು. ಆಗ ಈಜಿಯನ್ ನಾಗರಿಕತೆ ಮತ್ತು ಉಜ್ವಲವೂ ಪ್ರಭಾವ ಶಾಲಿಯೂ ಆಗಿ ಪ್ರದೇಶದ ಎಲ್ಲ ಭಾಗಗಳಿಗೂ ಹಬ್ಬಿತು. ಆದರೆ ಈ ವೈಭವ ಕೇವಲ ಸ್ವಲ್ಪ ಕಾಲದವರೆಗೆ ಉಳಿದಿದ್ದು ಅನಂತರ ಅಳಿಯಿತು. ಅಕೇಯನ್ನರೆಂಬ ದಾಳಿಕಾರರು ಸುಮಾರು ಕ್ರಿ.ಪೂ. 1400ರಲ್ಲಿ ಕ್ರೀಟ್ ದ್ವೀಪವನ್ನು ವಶಪಡಿಸಿಕೊಂಡು ತಮ್ಮ ಸಂಸ್ಕøತಿಯನ್ನು ಅಲ್ಲಿ ಹರಡಿದರು.ಪೂರ್ವ ಮೆಡಿಟರೇನಿಯನ್ ಸಮುದ್ರದ ದ್ವೀಪಗಳನ್ನೊಳಗೊಂಡು, ಅದರ ಕರಾವಳಿ ಪ್ರದೇಶ, ಗ್ರೀಕ್ ಭೂಪ್ರದೇಶ ಏಷ್ಯ ಮೈನರಿನ ಕರಾವಳಿ ಪ್ರದೇಶ, ಮತ್ತು ಸೈಪ್ರೆಸ್ನಲ್ಲೂ ಈಜಿಯನ್ ನಾಗರಿಕತೆಯ ಪ್ರಭಾವವಿತ್ತು.ಏಷ್ಯ ಮೈನರಿನ ಸಮುದ್ರ ತೀರಪ್ರದೇಶ, ಸಿರಿಯ, ಪ್ಯಾಲಿಸ್ಟೈನ್, ಈಜಿಪ್ಟ್ ಪ್ರದೇಶಗಳೂ ಕಂಚಿನ ಯುಗದ ನಾಗರಿಕತೆ ಹೊಂದಿದ್ದುವು. ಈಜಿಯನ್ ನಾಗರಿಕತೆ ಕ್ರೀಟ್ ದ್ವೀಪದಲ್ಲಿ ಜನಿಸಿ, ಅಭಿವೃದ್ಧಿಗೊಂಡು ಅನಂತರ ಗ್ರೀಸಿನ ಭೂಪ್ರದೇಶ ಮತ್ತು ಈಜಿಯನ್ ಪ್ರದೇಶದ ಇತರ ದ್ವೀಪಗಳಿಗೂ ಹರಡಿತು.ಇತಿಟ್ರಾಯ್ ಪಟ್ಟಣ ಗ್ರೀಕರ ವಶವಾಗುವುದಕ್ಕೂ ಸಾವಿರ ವರ್ಷ ಹಿಂದೆಯೇ ಈ ನಾಗರಿಕತೆ ಉನ್ನತ ಶಿಖರವನ್ನೇರಿ ಕಲಾಕೌಶಲದಲ್ಲಿ ಪ್ರಪಂಚದಲ್ಲಿಯೇ ಒಂದು ಉನ್ನತ ಸ್ಥಾನ ಪಡೆಯಿತು. ಈಜಿಪ್ಟಿನ ಸಂಪರ್ಕ ಇದರ ಅಭಿವೃದ್ಧಿಗೆ ಚೈತನ್ಯದಾಯಕವಾಗಿತ್ತು. ಅಲ್ಲಿನ ವಸಾಹತು ಜನ ಇಲ್ಲಿ ಬಂದು ನೆಲಸಲಾಗಿ ಅವರ ರೀತಿ ನೀತಿ ಭಾವನೆಗಳು ಇವರಲ್ಲಿ ಮಿಲಿನವಾಗಲು ಅವಕಾಶ ದೊರೆಯಿತು. ಹೀಗೆಯೇ ಏಷ್ಯ ಮೈನರ್ ಹಾಗೂ ಟೈಗ್ರಿಸ್-ಯೂಫ್ರಟಿಸ್ ಕಣಿವೆಯ ಸಂಪರ್ಕವೂ ಸ್ಫೂರ್ತಿದಾಯಕವಾಗಿತ್ತು. ಕ್ರೀಟ್ ದ್ವೀಪದ ನಾಗರಿಕತೆಯ ಮಿನೋವನ್ ನಾಗರಿಕತೆ ಎಂದು ಹೆಸರು ಬರಲು ಮಿನಾಸ್ ಎಂಬ ದೊರೆ ಕಾರಣ. ಈತ ವಾಸ್ತವವಾಗಿ ಇದ್ದನೆಂಬ ಬಗ್ಗೆ ಖಚಿತವಾಗಿ ಮಾಹಿತಿಯೇನೂ ದೊರಕಿಲ್ಲ.
ಮಿನೋವನ್ ನಾಗರಿಕತೆಯ ಮುಖ್ಯ ಲಕ್ಷಣಗಳು
[ಬದಲಾಯಿಸಿ]ಸುಮಾರು 2000 ವರ್ಷಗಳ ದೀರ್ಘ ಅವಧಿಯ ಮಿನೋವನ್ ನಾಗರಿಕತೆಯನ್ನು ಪೂರ್ವ ಮಿನೋವನ್ (3400-2100) ಮಧ್ಯ ಮಿನೋವನ್ (2100-1600) ಮತ್ತು ಅಂತ್ಯ ಮಿನೋವನ್ (1600-1150) ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಇವನ್ನು ಮತ್ತೆ ತಲಾ ಮೂರು ಭಾಗಗಳಾಗಿ ಮಾಡುವುದು ಸಾಧ್ಯ.ಮಿನೋವನ್ ಕಾಲ ಆರಂಭವಾಗುವುದಕ್ಕೂ ಮುಂಚೆ ಕ್ರೀಟಿನಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳು ಮೆಡಿಟರೇನಿಯನ್ ಜನಾಂಗದ ಬೇರೆ ಬೇರೆ ವಂಶಗಳಿಗೆ ಸೇರಿದವರಾಗಿದ್ದರೆಂದೂ ಹೇಳಬಹುದು. ಇವರ ಪೂರ್ವಿಕರು ಬಹುಶಃ ಸಿರಿಯ ಮತ್ತು ಅನಟೋಲಿಯಗಳಿಂದ ಬಂದವರು. ಇವರಿಗೂ ಹಿಟೈಟರು ಮತ್ತು ಇಂಡಿಯದ ಮೇಲೆ ಮೊಟ್ಟ ಮೊದಲು ದಾಳಿ ನಡೆಸಿದ ಆರ್ಯರಿಗೂ ಸಂಬಂಧ ಇರಬಹುದು. ಉದ್ದ ತಲೆ, ಕುಳ್ಳನೆಯ ತೆಳು ದೇಹ, ಅಲೆಯಲೆಯ ಕಪ್ಪು ಕೂದಲು-ಈ ಲಕ್ಷಣವಿರುವ ಇವರು ಈಜಿಪ್ಟಿನವರನ್ನು ಹೋಲುತ್ತಿದ್ದರು.ಮಿನೋವನ್ ಕಾಲದ ಆರಂಭದಲ್ಲಿ ಕ್ರೀಟಿಗೆ ಏಷ್ಯ ಮೈನರಿನಿಂದ ಜನ ವಲಸೆ ಹೋದರು. ಇದರಿಂದ ಅಲ್ಲಿನ ಜನಸಂಖ್ಯೆಯು ಹೆಚ್ಚಿತು. ಆದ್ದರಿಂದ ಕ್ರೀಟಿನ ಪೂರ್ವ, ದಕ್ಷಿಣ ಮತ್ತು ಮಧ್ಯಭಾಗಗಳಿಂದ ಸಂಸ್ಕøತಿಗಳು ಪರಸ್ಪರ ಭಿನ್ನವಾದುವು.ಈ ಕಾಲದಲ್ಲಿ ಹಲವು ನಗರಗಳು ಸಮುದ್ರತೀರದಲ್ಲಿ ಉದ್ಭವವಾಗಿ ಕ್ರಮೇಣ ಉನ್ನತ ಸ್ಥಿತಿಗೇರಿದುವು. ಕೃಷಿ, ಕುರಿಸಾಕಣೆ, ಬೇಟೆ, ಮೀನು ಹಿಡಿಯುವುದು ಮತ್ತು ವಿದೇಶೀ ವ್ಯಾಪಾರ-ಇವು ಜನರ ಮುಖ್ಯ ಕಸುಬು. ಸೈಕ್ಲಡೀಸ್, ಏಷ್ಯಮೈನರ್, ಲಿಬಿಯ, ಈಜಿಪ್ಟ್, ಲವಾಂಟ್, ಗ್ರೀಕ್ ಭೂಪ್ರದೇಶ ಹಾಗೂ ಮೆಸೊಪೊಟೇಮಿಯಗಳೊಡನೆ ವ್ಯಾಪಾರ ಸಂಪರ್ಕವಿತ್ತು. ಪ್ರದೇಶಗಳ ಪ್ರಭಾವ ಕ್ರೀಟಿನ ಕಲೆಯ ಮೇಲೆ ಸ್ವಲ್ಪ ಮಟ್ಟಿಗೆ ಇದ್ದರೂ ಒಟ್ಟಿನಲ್ಲಿ ಅದು ವೈಶಿಷ್ಟ್ಯ ಪೂರ್ಣವಾದ ಪ್ರಗತಿ ಸಾಧಿಸಿತ್ತು. ಇಲ್ಲಿನ ಕಲಾವಿದರು ಈಜಿಪ್ಟಿನ್ನನುಕರಿಸಿದರೂ ತಮ್ಮ ವೈಶಿಷ್ಟ್ಯವನ್ನೂ ಉಳಿಸಿಕೊಂಡಿದ್ದರು. ತಮ್ಮ ಪ್ರಭಾವವನ್ನು ಇತರ ದೇಶಗಳ ಮೇಲೂ ಬೀರಿದ್ದರು. ಸೈಕ್ಲಡೀಸ್ನಲ್ಲಿ ಈ ಕಲೆ ಪ್ರಾಮುಖ್ಯ ಗಳಿಸಿತ್ತು. ಫೈಲಾಕೋಪಿಯಲ್ಲಿ ಜನ ಅಬ್ಸಿಡಿಯನ್ ಎಂಬ ಒಂದು ಬಗೆಯ ಕಾಚಶಿಲೆ ಮಾರಿ ಅತ್ಯಧಿಕ ಸಂಪತ್ತುಗಳಿಸಿದ್ದರು. ಅಮರ್ಗೋಸ್ನ ಶಿಲಾಪ್ರತಿಮೆಗಳು ಪ್ರಖ್ಯಾತವಾಗಿದ್ದುವು.
ವಸಿಲಿಕಿಯಲ್ಲಿದ್ದ ಮನೆಗಳು
[ಬದಲಾಯಿಸಿ]ವಸಿಲಿಕಿಯಲ್ಲಿದ್ದ ಮನೆಗಳು ಅಗಲ, ತಗ್ಗು, ಅವುಗಳದು ಚೌಕಟ್ಟಿನ ಆಕಾರ. ಸಮಾತಲವಾದ ಮೇಲ್ಛಾವಣಿ. ಕೆಲವು ಕಾಲದ ಮಹಡಿ ಮನೆಗಳು ನಿರ್ಮಾಣವಾದುವು. ಕೆಳಭಾಗವನ್ನು ಮಣ್ಣಿನಿಂದಲೂ ಮೇಲ್ಬಾಗವನ್ನು ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳಿಂದಲೂ ಕಟ್ಟಿ, ಕಿಟಕಿ ಬಾಗಿಲುಗಳಿಗೆ ಮರದ ಚೌಕಟ್ಟು ಹಾಕಿ, ಗೋಡೆಗೆ ಗಾರೆ ಬಳಿಯುತ್ತಿದ್ದರು. ಕೋಣೆಗಳನ್ನು ಹೆಚ್ಚಿಸಿದಾಗ ಅಂಗಳಗಳನ್ನೂ ನಿರ್ಮಿಸುತ್ತಿದ್ದರು. ನಗರಗಳು ಬೆಳೆದಂತೆ ಕೈಗಾರಿಕೆಗಳೂ ಬೆಳೆದುವು. ಕುಂಬಾರರೂ ಕೆತ್ತನೆ ಕೆಲಸಗಾರರು ತಮ್ಮ ಉತ್ಪಾದನೆ ಹೆಚ್ಚಿಸಿದರು. ಅಮೃತಶಿಲೆ ಮತ್ತು ದಂತದ ಬಿಲ್ಲೆಗಳ ಮೇಲೆ ಚಿತ್ರರೂಪದಲ್ಲಿ (ಸಾಂಕೇತಿಕವಾಗಿ) ಅಕ್ಷರಗಳನ್ನು ಬರೆಯುವುದು ರೂಢಿಗೆ ಬಂತು.ಕ್ರಿ.ಪೂ 2000ದ ಅನಂತರ ಕ್ರೀಟನ್ನರ ನಾಗರಿಕತೆ ಉಚ್ಛ್ರಾಯಸ್ಥಿತಿ ಮುಟ್ಟಿತು. ಮಧ್ಯಕಾಲದ ಆರಂಭದಿಂದಲೇ ನಾಸಾಸ್ ರಾಜಕೀಯ ಹಾಗೂ ವಾಣಿಜ್ಯ ಚಟುವಟಿಕೆಯ ಮುಖ್ಯ ಕೇಂದ್ರವಾಯಿತು. ಮೊದಲಿನಿಂದಲೂ ಸಮುದ್ರಯಾನ ಪ್ರಿಯರಾಗಿದ್ದ ಕ್ರೀಟನ್ನರು ಈಜಿಪ್ಟ್, ಬ್ಯಾಬಿಲೋನಿಯಗಳೊಡನೆ ವಿಶೇಷವಾಗಿ ವ್ಯಾಪಾರ ನಡೆಸುತ್ತಿದ್ದರು. ಮಿನೋವನ್ ಕಾಲದ ಅಂತ್ಯಭಾಗದಲ್ಲಿ ಕೆಲವು ವರ್ಷಗಳವರೆಗೆ ಈಜಿಯನ್ ಪ್ರದೇಶದಲ್ಲೆಲ್ಲ ನಾಸಾಸ್ ಮುಖ್ಯ ನಗರವಾಗಿತ್ತು. ಹಿಂದೆಂದೂ ಕಾಣದ ಅನುಭವಯುತವಾದ ಯುಗವೊಂದು ಆಗ ಪ್ರಾರಂಭವಾಯಿತು. ಅಲ್ಲಿಯ ಅರಮನೆ ಎಲ್ಲ ಪ್ರಗತಿಯ ಅನುಕೂಲಗಳನ್ನು ಹೊಂದಿ ಭವ್ಯತೆಯಿಂದ ಕಂಗೊಳಿಸುತ್ತಿತ್ತು. ಅರಮನೆಗೆ ಸೇರಿದಂತೆ ದೊಡ್ಡ ದೊಡ್ಡ ಉಗ್ರಾಣ, ಶಾಲೆ, ಯುದ್ಧಸಾಮಗ್ರಿ ತಯಾರಿಸುವ ಕಾರ್ಖಾನೆ, ಹಿಪ್ಪೆ ಎಣ್ಣೆಯ ಗಾನ, ಹಾಗೂ ನಾನಾ ಪದಾರ್ಥ ತಯಾರಿಸುವ ಕಾರ್ಖಾನೆಗಳು ಇದ್ದು ಅದೇ ಒಂದು ಸ್ವಸಂಪೂರ್ಣ ಪಟ್ಟಣವಾಗಿತ್ತು.
ರಾಜಕೀಯ ವ್ಯವಸ್ಥೆ
[ಬದಲಾಯಿಸಿ]ಇತರ ಎಲ್ಲ ಕಡೆಗಳಲ್ಲೂ ಸಾಮಾನ್ಯವಾಗಿ ಇದ್ದಂತೆ ಕ್ರೀಟಿನಲ್ಲೂ ಆರಂಭದಲ್ಲಿ ಒಂದೇ ವಂಶದ ಆಡಳಿತ ಒಂದೊಂದು ಸ್ಥಳದಲ್ಲೂ ಪ್ರತ್ಯೇಕವಾಗಿ ವ್ಯವಸ್ಥಿತವಾಗಿತ್ತು. ಮಧ್ಯ ಮಿನೋವನ್ ಕಾಲದಲ್ಲಿ ಅಥವಾ ಅಂತ್ಯದ ಮಿನೋವನ್ ಕಾಲದ ಆರಂಭದಲ್ಲಿ ಕ್ರೀಟ್ ಏಕತೆ ಸಾಧಿಸಿತ್ತು. ಆಗ ಅದನ್ನು ನಾಸಾಸ್ ದೊರೆಗಳು ಆಳುತ್ತಿದ್ದರು. ಮುಂದೆ ಗ್ರೀಸ್ ಭೂಪ್ರದೇಶಕ್ಕೂ ಇವರ ಅಧಿಕಾರ ವ್ಯಾಪಿಸಿತು. ಆಗಿನ ದೊರೆಗಳು ಅರ್ಚಕ-ದೊರೆಗಳು. ಅವರದು ಧಾರ್ಮಿಕ ವೃತ್ತಿ. ಆ ಕಾರಣದಿಂದಾಗಿ ರಾಜ್ಯವಾಳುವುದಕ್ಕೆ ಅವರಿಗೆ ಅಧಿಕಾರಿ ಪ್ರಾಪ್ತಿ.
ಆರ್ಥಿಕ ಜೀವನ
[ಬದಲಾಯಿಸಿ]ಆರಂಭದಲ್ಲಿ ಕ್ರೀಟಿನ ನಿವಾಸಿಗಳು ಕೃಷಿ, ಮೀನುಗಾರಿಕೆ ಮತ್ತು ಕುರಿ ಸಾಕಣೆಯಿಂದ ಜೀವನ ಸಾಗಿಸುತ್ತಿದ್ದರು. ಭೂಮಿ ಫಲವತ್ತಾಗಿದ್ದರೂ ದೇಶದ ವಿಸ್ತಾರ ಕಡಿಮೆ. ಆದ್ದರಿಂದ ಜನಸಂಖ್ಯೆ ಹೆಚ್ಚಿದ ಹಾಗೆಲ್ಲ ಕೃಷಿಯ ಜೊತೆಗೆ ಇತರ ಉದ್ಯೋಗ ಬೆಳೆಸುವುದು ಅನಿವಾರ್ಯವಾಯಿತು. ಕೆಲವು ಜನ ಬೇರೆ ದೇಶಗಳಿಗೆ ವಲಸೆ ಹೋದರು. ಮತ್ತೆ ಕೆಲವರು ಸಮುದ್ರಯಾನದಲ್ಲಿ ನಿರತರಾದರು. ಆದರೆ ಹೆಚ್ಚು ಜನ ಸ್ವದೇಶದಲ್ಲೇ ಉಳಿದು ವ್ಯಾಪಾರ ಸಾಮಗ್ರಿ ತಯಾರಿಕೆಯಲ್ಲಿ ತೊಡಗಿದರು. ದ್ರಾಕ್ಷರಸ, ಹೆಪ್ಪೆ, ಎಣ್ಣೆ, ಮಡಕೆ, ಜಾಡಿ, ಹೂದಾನಿ ಮುಂತಾದ ಗೃಹಕೃತ್ಯದ ಸಾಮಾನುಗಳನ್ನು ತಯಾರಿಸುತ್ತಿದ್ದರು. ರತ್ನ, ಮುದ್ರಿಕೆ, ಕಠಾರಿ, ಬಾಕು ಮತ್ತು ಕುಶಲಕಲೆಯ ವಸ್ತುಗಳು ತಯಾರಾಗಿ ಪರದೇಶಗಳಿಗೂ ಹೋಗುತ್ತಿದ್ದುವು. ಆಮದು ಪದಾರ್ಥಗಳಲ್ಲಿ ಆಹಾರ ಮತ್ತು ಲೋಹ ಪದಾರ್ಥಗಳು ಮುಖ್ಯ. ವ್ಯಾಪಾರ ಮತ್ತು ಕೈಗಾರಿಕೆ ಅತ್ಯಂತ ಬಿರುಸಿನಿಂದ ನಡೆದು ಕ್ರೀಟ್ ಕೆಲವು ಕಾಲದವರೆಗೆ ಸಂಪದ್ಭರಿತವಾಗಿತ್ತು.
ಸಾಮಾಜಿಕ ಜೀವನ
[ಬದಲಾಯಿಸಿ]ಕ್ರೀಟನ್ನರು ಸ್ವಾತಂತ್ರ್ಯ ಪ್ರೇಮಿಗಳೂ ಕಲಾಪ್ರೇಮಿಗಳೂ ಶಾಂತಿಪ್ರಿಯರೂ ಸ್ತ್ರೀಪುರುಷ ಸಮಾನತೆಯ ಭಾವನೆಯುಳ್ಳವರೂ ಆದ್ದರಿಂದ ಅವರ ಸಾಮಾಜಿಕ ಜೀವನ ಸ್ವಾರಸ್ಯಕರವೂ ಉಲ್ಲಾಸಭರಿತವೂ ಚಟುವಟಿಕೆಯಿಂದ ಕೂಡಿದ್ದೂ ಆಗಿತ್ತು. ಕೃಷಿ, ಕೈಗಾರಿಕೆ, ವ್ಯಾಪಾರಗಳಲ್ಲಿ ತೊಡಗಿದ್ದ ಜನರ ಸಂಖ್ಯೆಯೇ ಹೆಚ್ಚಾಗಿದ್ದರೂ ಕುಶಲಕಲೆಗಳಲ್ಲಿ ಆಸಕ್ತಿಯುಳ್ಳ ಜನರೂ ಹೆಚ್ಚು ಸಂಖ್ಯೆಯಲ್ಲಿಯೇ ಇದ್ದರು. ಶ್ರೀಮಂತರೂ ದೊಡ್ಡ ಜಮೀನುದಾರರೂ ಕೆಲವರಿದ್ದರು. ಮಹಿಳೆಯರು ಸಮಾನ ಹಕ್ಕುಬಾಧ್ಯತೆ ಪಡೆದು ಧಾರ್ಮಿಕ ಮತ್ತು ನಿತ್ಯ ಜೀವನದಲ್ಲಿ ಉಚ್ಚಸ್ಥಾನಗಳಿಸಿದ್ದರು. ಸಂಗೀತ, ನಾಟ್ಯ, ಕ್ರೀಡೆ ಮುಂತಾದ ಮನೋರಂಜನೆಯ ಕಾರ್ಯಕ್ರಮಗಳಲ್ಲಿ ವಿಶೇಷ ಆಸಕ್ತಿ ವಹಿಸಿ, ಪುರುಷರೊಡನೆ ವಿರಾಮದ ಕಾಲವನ್ನು ಆನಂದ, ವಿನೋದಗಳಿಂದ ಕಳೆಯುತ್ತಿದ್ದರು. ಅಂತಃಪುರದ ಏಕಾಂಥ ಜೀವನ ರೂಢಿಯಲ್ಲಿರಲಿಲ್ಲ. ಜನಪ್ರಿಯ ಕ್ರೀಡೆಗಳಲ್ಲಿ ಮಲ್ಲಯುದ್ಧ, ಗೂಳಿಯ ಕಾಳಗ ಮುಖ್ಯವಾದುವು. ಗೂಳಿಯ ಕಾಳಗ ಮತೀಯ ಆಚರಣೆಯೂ ಆಗಿದ್ದಿರಬಹುದು. ಈ ಕ್ರೀಡೆಯಲ್ಲಿ ತೆಳ್ಳನೆಯ ಯುವಕರು ತಮ್ಮ ಮೇಲೆ ಧಾವಿಸಿ ನುಗ್ಗಿ ಬರುತ್ತಿದ್ದ ಗೂಳಿಯನ್ನು ಕೊಂಬುಗಳಿಂದ ಸೆಳೆದು ಹಿಡಿತು, ಅದು ತಲೆಯನ್ನು ಮೇಲೆ ಎತ್ತಿದಾಗ ಅದರ ಬೆನ್ನಿನ ಮೇಲ ಉರುಳಿ ಬೀಳುತ್ತಿದ್ದರು. ಈ ಕ್ರೀಡೆಯಲ್ಲಿ ಶಕ್ತಿ, ಚಳಕ, ಧೈರ್ಯಗಳ ಪ್ರದರ್ಶನ ನಡೆಯುತ್ತಿತ್ತು. ಮುಂದೆ ಇದು ಗ್ರೀಕರಲ್ಲೂ ರೂಢಿಯಾಗಿ ಬಂದು ಅವರ ರಾಷ್ಟ್ರೀಯ ಕ್ರೀಡೆಯಾಯಿತು.
ಉಡುಪು
[ಬದಲಾಯಿಸಿ]ಪುರುಷರು ಸಾಧಾರಣವಾದ ಬಟ್ಟೆಯಲ್ಲಿ ಎರಡು ತುಂಡುಗಳನ್ನು ಮಾಡಿ ಸೊಂಟದವರೆಗೂ ಮುಚ್ಚುವುದಕ್ಕೆ ಒಂದು ತುಂಡನ್ನೂ ದೇಹದ ಮೇಲ್ಭಾಗವನ್ನು ಮುಚ್ಚಲು ಇನ್ನೊಂದು ತುಂಡನ್ನೂ ಉಪಯೋಗಿಸುತ್ತಿದ್ದರು.ಸ್ತ್ರೀಯರು ಹೆಚ್ಚು ನಿರಿಗಟ್ಟಿದ ಲಂಗವನ್ನೂ ದೇಹದ ಮೇಲ್ಭಾಗವನ್ನೂ ಮುಚ್ಚಲು ಒಂದು ಕವಚವನ್ನೂ ಧರಿಸುತ್ತಿದ್ದರು. ಈ ಕವಚ ಮುಂಭಾಗದಲ್ಲಿ ತೆರೆದಂತಿದ್ದು ಹಿಂಭಾಗದಲ್ಲಿ ಮಾತ್ರ ಎತ್ತರವಾದ ಕತ್ತುಪಟ್ಟಿ ಉಳ್ಳದಾಗಿತ್ತು. ಉಂಗುರವನ್ನು ಅಪರೂಪವಾಗಿ ಉಪಯೋಗಿಸುತ್ತಿದ್ದರು. ಸ್ತ್ರೀಪುರುಷರು ಕೊರಳು ಮತ್ತು ಮುಂಗೈಗಳನ್ನು ಮುದ್ರಿಕೆಯಿಂದ ಅಲಂಕರಿಸಿಕೊಳ್ಳುತ್ತಿದ್ದರು. ಮಕ್ಕಳ ಜೀವನ ಎಲ್ಲ ಕಡೆಯೂ ಸರಳವಾಗಿತ್ತು. ಚಿನ್ನದ ಕೊರಳಹಾರ, ಕೈಕಾಪು, ಮುಕುಟ, ಪಿನ್ನುಗಳು ಉಪಯೋಗದಲ್ಲಿದ್ದುವು.
ಧಾರ್ಮಿಕ ಜೀವನ
[ಬದಲಾಯಿಸಿ]ಆರಾಧನೆಗಾಗಿ ಪ್ರತ್ಯೇಕವಾಗಿ ಕಟ್ಟಲಾಗಿದ್ದ ದೇವಾಲಯಗಳು ಎಲ್ಲ ಕಂಡು ಬಂದಿಲ್ಲ. ಬೆಟ್ಟದ ತುದಿ, ತೋಪು, ಗುಹೆಗಳು ಪವಿತ್ರ ಸ್ಥಳಗಳಾಗಿದ್ದುವು. ಕಂಬಗಳೂ ಶಿಲೆಗಳಲ್ಲೂ ಪ್ರಕೃತಿ ದೇವತೆಗಳು ಇರುವುವೆಂದು ಭಾವಿಸಿ ನರ್ತನ ಪೂಜೆ ಪುನಸ್ಕಾರಗಳಿಂದ ಅವರನ್ನು ಒಲಿಸಿಕೊಳ್ಳಬಹುದೆಂದೇ ಈ ಜನ ನಂಬಿದ್ದರು. ಖಾಸಗಿ ಗೃಹಗಳಲ್ಲೂ ಕಂಬಗಳನ್ನೊಳಗೊಂಡ ಕೋಣೆಗಳಿದ್ದುವು. ಅರೆಮನೆಗಳ ನಿರ್ಮಾಣವಾದ ಅನಂತರ ಕಂಬಗಳ ಕೋಣೆಯ ನಿರ್ಮಾಣ ನಿಂತು ಸಣ್ಣ ಗುಡಿಗಳ ರಚನೆ ಪ್ರಾರಂಭವಾಯಿತು.ಮಹಾಮಾತೆಯೇ ಇದರ ಮುಖ್ಯದೇವತೆ. ಈಕೆಯ ಚಿಹ್ನೆ ದ್ವಿಮುಖಪರಶು. ಈ ದೇವತೆಯ ಜೊತೆಗೆ ಒಂದು ಚಿಕ್ಕ ವಯಸ್ಸಿನ ಪುರುಷ ದೇವತೆಯೂ ಇರುತ್ತಿತ್ತು. ಮನೆಗಳಲ್ಲಿನ ಸಣ್ಣ ಗುಡಿಗಳಲ್ಲಿ ಗುಂಡಾದ ಮುಕ್ಕಾಲು ಮೇಜನ್ನು ಮಧ್ಯ ಭಾಗದಲ್ಲಿರಿಸಿ, ಪೂಜಾ ಸಾಮಗ್ರಿಗಳನ್ನು ಅದರ ಮೇಲಿಡುತ್ತಿದ್ದರು. ಹಾಗೆಯೇ ಗೋಡೆಗೆ ಒರಗಿದ ಹಾಗೆ ಒಂದು ಬೆಂಚು ಇಟ್ಟು ಗಂಟೆಯಾಕಾರದ ವಿಗ್ರಹವನ್ನು ಅದರ ಮೇಲಿರಿಸಿ, ಜೊತೆಗೆ ಎರಡು ಕೊಂಬುಗಳ ಮಧ್ಯ ದ್ವಿಮುಖ ಪರಶುವನ್ನು ಇಟ್ಟು ಪೂಜಿಸುತ್ತಿದ್ದರು.ನಾಸಾಸ್ ಅರಮನೆಯ ಗುಡಿಯಲ್ಲಿ ನಾಗದೇವತೆಯ ಪೂಜೆ ನಡೆಯುತ್ತಿತ್ತು. ಪೂಜಾರಿಣಿ ತನ್ನ ಕೈಗಳಲ್ಲಿ ಸರ್ಪಗಳನ್ನು ಹಿಡಿದುಕೊಂಡಿರುವುದೂ ಅವಳ ಉಡುಪಿನಲ್ಲಿ ಸಮುದ್ರದ ಚಿಪ್ಪುಗಳನ್ನು ಚಿತ್ರಿಸಿರುವುದೂ ಅವಳ ಸುತ್ತ ಪಾರಿವಾಳ, ಹಸು ಕರು, ಆಡು ಕುರಿಗಳು ಮೇಲೆ ನಕ್ಷತ್ರ ಚಿಹ್ನೆಗಳು ಇರುವುದೂ ಚಿತ್ರದಲ್ಲಿ ಕಂಡುಬಂದಿದೆ. ಸರ್ಪ ಮನೆಯನ್ನು ಕಾಯುವುದೆಂದೂ ಶುಭಕರವೆಂದೂ ಆಗಿನ ಜನರ ಭಾವನೆ.
ಕಲೆ
[ಬದಲಾಯಿಸಿ]ಚಕ್ರದ ಉಪಯೋಗ ಬಳಕೆಗೆ ಬಂದ ಅನಂತರ ಮಡಕೆಯ ತಯಾರಿಕೆ ಸುಲಭವಾಯಿತು. ಕಲ್ಲಿನ, ನೇಯ್ಗೆಯ, ಲೋಹದ, ಚಕ್ಕಳದ ವರ್ಣರಂಜಿತವಾದ ವಿವಿಧಾಕಾರದ ಸಾಮಗ್ರಿಗಳ ತಯಾರಿಕೆಯಾಗುತ್ತಿತ್ತು. ಕಪ್ಪು ಬಣ್ಣದ ಹಿನ್ನೆಲೆಯ ಮೇಲೆ ಬಿಳಿಯ ಬಣ್ಣದಲ್ಲೂ ಇತರ ಬಣ್ಣಗಳ ಹಿನ್ನೆಲೆಯ ಮೇಲೆ ಕಪ್ಪು ಬಣ್ಣದಲ್ಲೂ ತಿದ್ದುತ್ತಿದ್ದರು. ಕ್ರೀಟನ್ ಕಲೆಯ ವೈಶಿಷ್ಟ್ಯ ನಾಸಾಸ್ ಅರಮನೆಯಲ್ಲಿ ಚಿತ್ರಿತವಾಗಿರುವ ವರ್ಣರಂಜಿತ ದೃಶ್ಯಗಳಿಂದಲೂ ಅಲ್ಲಿ ದೊರಕಿರುವ ಇತರ ಸಾಮಗ್ರಿಗಳಿಂದಲೂ ತಿಳಿದು ಬರುತ್ತದೆ. ಕೊನೆಯ ಮಿನೋವನ್ ಕಾಲ ಕಲೆಯ ಉತ್ಕøಷ್ಟ ಕಾಲ. ಊರಿನ ನೈರ್ಮಲ್ಯ ವ್ಯವಸ್ಥೆ, ಕೊಳಾಯಿ ವ್ಯವಸ್ಥೆ, ಕಾಲುವೆಗಳ ನಿರ್ಮಾಣ, ಕಟ್ಟಡ-ಇವುಗಳ ವಿಚಾರದಲ್ಲಿ ಇದು ಈಜಿಪ್ಟ್, ಬ್ಯಾಬಿಲೋನಿಯಗಳಿಗೆ ಸಮಾನವಾಗಿತ್ತು. ಗ್ರೀಕರ ಕಲಾಕೃತಿಗಳು ವಿಶೇಷವಾಗಿ ಕ್ರೀಟನ್ನರ ಕಲೆಯ ವಿಧಾನವನ್ನೇ ಅನುಸರಿಸಿದ್ದುವು.ದಂತದ ಸಾಮಾನುಗಳು ಬಳಕೆಯಲ್ಲಿದ್ದುವು. ಆರೂವರೆ ಅಂಗುಲ ಎತ್ತರಲ್ಲಿ ಒಂದು ದಂತದ ಸರ್ಪದೇವತೆಯ ಮೂರ್ತಿಶಿಲ್ಪ ಸಿಕ್ಕಿದೆ. ಈ ದೇವತೆಯ ಕೈಯ ಚಿನ್ನದ ಸರ್ಪಗಳೂ ದೇಹದ ಮೇಲೆ ಚಿನ್ನದಿಂದ ಮಾಡಿದ ಉಡುಪೂ ಇವೆ. ಹೀಗೆಯೇ ದಂತದಿಂದ ಕೆತ್ತಿರುವ ಅನೇಕ ಮೂರ್ತಿಗಳು ಸಿಕ್ಕಿವೆ. ಆಗಿನ ಶಿಲ್ಪಕಲೆ ಎಷ್ಟು ಉನ್ನತ ಮಟ್ಟದ್ದಾಗಿತ್ತೆಂಬುದಕ್ಕೆ ಇವು ಸಾಕ್ಷಿಗಳು.
ಶವಸಂಸ್ಕಾರ
[ಬದಲಾಯಿಸಿ]ಮರಣಾನಂತರದ ಅವಸ್ಥೆಯ ಬಗ್ಗೆ ಈಜಿಯನ್ ಜನರಲ್ಲೂ ಭಯವಿತ್ತು. ಆದ್ದರಿಂದ ಶವಸಂಸ್ಕಾರವನ್ನು ಎಚ್ಚರಿಕೆಯಿಂದ ನಡೆಸುತ್ತಿದ್ದರು. ಸಮಾಧಿಗಳನ್ನು ಸರಿಯಾದ ರೀತಿಯಲ್ಲಿ ಕಟ್ಟಿ ಶವದ ಜೊತೆಗೆ ಆಹಾರ, ಆಯುಧಗಳನ್ನೂ ಸಣ್ಣ ವಿಗ್ರಹಗಳನ್ನೂ ಇಡುತ್ತಿದ್ದರು. ಈ ವಿಗ್ರಹಗಳು ಆ ಮನುಷ್ಯನ ಅನುಯಾಯಿಗಳು, ಸೇವಕರು.ಹೀಗೆ ನಾನಾ ಬಗೆಯಲ್ಲಿ ವಿಶಿಷ್ಟವಾಗಿದ್ದ ಈಜಿಯನ್ ನಾಗರಿಕತೆಯ ಬಹುಕಾಲ ಬಾಳಿ ನೆರೆಹೊರೆಯ ದೇಶಗಳ ಮೇಲೆ ಪ್ರಭಾವ ಬೀರಿ, ಗ್ರೀಕ್ ಸಂಸ್ಕøತಿಗೆ ನಾಂದಿಯಾಗಿ ಪರಿಣಮಿಸಿತು.
ಸಂಸ್ಕøತಿ
[ಬದಲಾಯಿಸಿ]ಮೈಸಿನಿ, ಟ್ರಾಯ್ಗಳಲ್ಲಿ ಶ್ಲೀಮನ್ ಮಾಡಿದ ಭೂಶೋಧನೆಗಳಿಂದಲೂ ಕ್ರೀಟ್, ನಾಸಾಸ್ಗಳಲ್ಲಿ ಇವಾನ್ಸ್ ಮಾಡಿದ ಭೂಶೋಧನೆಗಳಿಂದಲೂ ಚರಿತ್ರ ಪೂರ್ವ ಕಾಲದಲ್ಲಿ ಯೂರೋಪಿನಲ್ಲಿ ಬಹಳ ಉಚ್ಛ್ರಾಯಸ್ಥಿತಿಯಲ್ಲಿದ್ದ ಕಂಚಿನ ಯುಗದ ಸಂಸ್ಕøತಿಯೊಂದು ಬೆಳಕಿಗೆ ಬಂತು. ಇದಕ್ಕೆ ಸೇರಿದಂತೆ ಈಜಿಯನ್ ಸಮುದ್ರದ ಅಕ್ಕಪಕ್ಕಗಳಲ್ಲಿರುವ ಏಜಿಯಾ, ಟ್ರಿಯಾಂಡ, ಟೈಲಿಸಸ್, ಟೈರಿನ್ಸ್, ಹಿನಾರ್ ಲಿಕ್, ಫೇಸ್ಟಸ್, ಗೌರ್ನಿಯ, ಮಲ್ಲಿಯಾ, ಥೀಬ್ಸ್ ಮುಂತಾದ ಕಡೆಗಳಲ್ಲೂ ಇದೇ ರೀತಿಯ ಅವಶೇಷಗಳು ದೊರಕಿದ್ದರಿಂದ ಈ ಸಂಸ್ಕøತಿಗೆ ಈಜಿಯನ್ ಸಂಸ್ಕøತಿ ಎಂದು ಹೆಸರು.ಈ ಪ್ರದೇಶ ಹೊಸ ಶಿಲಾಯುಗದ ಕಾಲದಿಂದಲೂ ಜನಗಳ ವಾಸಸ್ಥಾನವಾಗಿದ್ದಿತೆಂದೂ ಶಿಲಾಯುಗದ ಅವಶೇಷಗಳಿಂದ ಗೊತ್ತಾಗುತ್ತದೆ. ಹೊಸ ಶಿಲಾಯುಗದ ಅನಂತರ ಕಂಚಿನ ಯುಗದಲ್ಲಿ ಈ ಸಂಸ್ಕøತಿ ಉಚ್ಛ್ರಾಯಸ್ಥಿತಿಯಲ್ಲಿದ್ದು ಬ್ಯಾಬಿಲಾನ್ ಮತ್ತು ಈಜಿಪ್ಟ್ ದೇಶಗಳೊಡನೆ ಸಂಪರ್ಕವನ್ನು ಹೊಂದಿತ್ತು.ಇಲ್ಲಿ ದೊಡ್ಡ ಅರಮನೆಗಳೂ ಕೋಟೆಗಳೂ ಮನೆಗಳೂ ಕೆತ್ತನೆಯ ಕಂಬಗಳೂ ಬಣ್ಣದ ಚಿತ್ರಗಳೂ, ಕೆತ್ತನೆಯ ಕೆಲಸ ಮಾಡಿದ ಗೋಡೆಗಳೂ ದೊರೆತಿವೆ. ನಾಯಕರ ವಾಸಸ್ಥಾನಗಳಾಗಿದ್ದ ಅರಮನೆಗಳಲ್ಲಿ ನೀರು ಸರಬರಾಜು, ಚರಂಡಿ ವ್ಯವಸ್ಥೆ, ಪ್ರತ್ಯೇಕ ಕೊಠಡಿಗಳು, ಅಂತಃಪುರಗಳು ಇದ್ದುವು. ದೇವಾಲಯಗಳು ಅರಮನೆಯೊಳಗೆ ಮಾತ್ರ ದೊರಕಿರುವುದರಿಂದ ನಾಯಕರೇ ಮತದ ಮೇಲ್ವಿಚಾರಕರಾಗಿದ್ದರೆಂದು ತೋರುತ್ತದೆ. ಇವರು ಕುಶಲಕಲೆಗಳಲ್ಲಿ ಬಹಳ ಮುಂದುವರಿದಿದ್ದರಿಂದೂ ಗೊತ್ತಾಗುತ್ತದೆ. ಕಲ್ಲು, ತಾಮ್ರ, ಚಿನ್ನ, ಬೆಳ್ಳಿ-ಇವುಗಳಿಂದ ಮಾಡಿದ ಪದಾರ್ಥಗಳ ಮೇಲೆ ಅನೇಕ ವಿಧವಾದ ಕೆತ್ತನೆಯ ಕೆಲಸಗಳು ಕಾಣಬರುತ್ತದೆ. ಕಂಚಿನ ಕತ್ತಿ, ಕೊಡಲು, ಚಾಕು ಮುಂತಾದ ಆಯುಧಗಳೂ ಬಣ್ಣಬಣ್ಣದ ಮತ್ತು ಬಣ್ಣ ಹಚ್ಚಿದ ಮಡಕೆಗಳೂ ಆಭರಣಗಳೂ ಕೆತ್ತನೆಯ ಕೆಲಸ ಮಾಡಿದ ಮಣಿಗಳೂ ಇವರ ಪಾರಿಶ್ರಮಿಕ ಉದ್ಯೋಗ ಎಷ್ಟರಮಟ್ಟಿಗೆ ಅಭಿವೃದ್ಧಿ ಹೊಂದಿತ್ತೆಂಬುದನ್ನು ತೋರಿಸುತ್ತದೆ.
ವ್ಯಾಪಾರ
[ಬದಲಾಯಿಸಿ]ಇವರು ವ್ಯಾಪಾರದಲ್ಲಿ ಬಹಳ ಮುಂದುವರಿದಿದ್ದರು. ಕ್ರೀಟನ್ ನಾಗರಿಕತೆಯ ಮಡಕೆಗಳು ಈಜಿಪ್ಟ್, ಬ್ಯಾಬಿಲಾನ್ ಮತ್ತು ಏಷ್ಯ ಮೈನರ್ ದೇಶಗಳೊಡನೆ ಇದ್ದ ವಾಣಿಜ್ಯ ಸಂಬಂಧ ಸೂಚಿಸುತ್ತದೆ. ಇವರು ಸೂರ್ಯ, ನಕ್ಷತ್ರ, ಬೆಟ್ಟ, ಮರ, ಪ್ರಾಣಿ-ಇವನ್ನು ಪೂಜಿಸುತ್ತಿದ್ದರು. ಸತ್ತವರನ್ನು ಹೂಳುತ್ತಿದ್ದರು. ಮೊದಮೊದಲು ಇವರ ಗೋರಿಗಳು ಸಣ್ಣವಾಗಿದ್ದು, ನೆಲದೊಳಗೇ ಕಲ್ಲುಗಳನ್ನು ಜೋಡಿಸಿ ಮಾಡಿದವಾಗಿದ್ದುವು. ಕ್ರಮೇಣ ಅವು ದೊಡ್ಡವಾಗುತ್ತ ಬಂದುವು. ಅನಂತರ ವೃತ್ತಾಕಾರದ ಗೋರಿಗಳು ಬಂದುವು. ಮೈಸಿನಿ ಎಂಬಲ್ಲಿ ಈ ಸಂಸ್ಕøತಿಯ ಅಂತ್ಯಕಾಲಕ್ಕೆ ಸಂಬಂಧಿಸಿದ ಜೇನುಗೂಡಿನ ಆಕಾರದ ಗೋರಿಗಳು ದೊರಕಿವೆ. ಮಡಕೆಗಳಲ್ಲಿ ಆಹಾರ, ಪಾನೀಯ ಇಡುತ್ತಿದ್ದರು.ಇವರು ತಮ್ಮದೇ ಆದ ಬರವಣೆಗೆಯನ್ನು ಉಪಯೋಗಿಸುತ್ತಿದ್ದರೆಂದು ಇಲ್ಲಿ ಸಿಕ್ಕಿರುವ ಬರೆದ ಮಣ್ಣಿನ ಫಲಕಗಳಿಂದ ಹೇಳಬಹುದು. ಈ ಸಂಸ್ಕøತಿಯ ಆದಿಯಲ್ಲಿ ಅಕ್ಷರಗಳ ಬಲು ಚಿತ್ರಗಳನ್ನು ಉಪಯೋಗಿಸುತ್ತಿದ್ದರೆಂಬುದು ಚಿತ್ರಲೇಖನಗಳಿಂದ ವ್ಯಕ್ತವಾಗುತ್ತದೆ. ಈ ಚಿತ್ರಲೇಖನ ಇಲ್ಲಿಯೇ ಪ್ರಾರಂಭವಾಯಿತೇ ಅಥವಾ ಈಜಿಪ್ಟ್ ದೇಶದಿಂದ ಇಲ್ಲಿಗೆ ಬಂತೇ ಎಂದು ಹೇಳುವುದು ಕಷ್ಟವಾದರೂ ಈ ಎರಡು ಲಿಪಿಗಳಿಗೂ ಸಂಬಂಧಗಳಿವೆ. ಸ್ವಲ್ಪ ಕಾಲಾನಂತರ ಈ ಚಿತ್ರ ಲೋಪದೋಷಗಳನ್ನು ಸರಿಪಡಿಸಿ ರೇಖಾ (ಲೀನಿಯರ್) ಬರವಣಿಗೆ ಪ್ರಾರಂಭವಾಯಿತು. ಇದು ಬಹಳವಾಗಿ ಕ್ರೀಟ್ ದ್ವೀಪದಲ್ಲಿ ಬಳಕೆಯಲ್ಲಿ ಇದ್ದಿತೆಂದು ಕಾಣುತ್ತದೆ.ಈ ಸಂಸ್ಕøತಿಗೆ ಕಾರಣರಾದ ಜನ ಯಾವ ಜನಾಂಗದವರು ಎಂದು ಹೇಳುವುದು ಕಷ್ಟ. ಇವರು ಕಪ್ಪುಬಣ್ಣದ ಉದ್ದ ತೆಲೆಯುಳ್ಳ ಪೇಲಿಯೋ ಮೆಡಿಟರೇನಿಯನ್ ಎಂಬ ಗುಂಪಿನವರೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಕಂಚಿನ ಯುಗ ಕ್ರೀಟ್ನಲ್ಲಿ ಕ್ರಿ.ಪೂ. 4000ರಲ್ಲಿ ಪ್ರಾರಂಭವಾಯಿತೆಂದು ಹೇಳಬಹುದು. ಕ್ರಿ.ಪೂ. ಹನ್ನೆರಡನೆಯ ಶತಮಾನದ ಕೊನೆಯಲ್ಲಿ ಇಲ್ಲಿನ ಸಂಸ್ಕøತಿ ನಾಶವಾಯಿತು. ಮೈಸಿನಿ, ಟೈರಿನ್ಸ್, ಮುಂತಾದ ಪಟ್ಟಣಗಳು ನಾಶವಾದುವು. ಕಬ್ಬಿಣದ ಆಯುಧಗಳನ್ನು ಹೊಂದಿದ್ದ ಉತ್ತರದಿಂದ ವಲಸೆ ಬಂದ ಜನಾಂಗವೇ ಇದಕ್ಕೆ ಕಾರಣವಿರಬಹುದು. ಇದರಿಂದ ಈಜಿಯನ್ ಪ್ರದೇಶಗಳಲ್ಲಿ ಕಂಚಿನ ಯುಗ ಕೊನೆಗೊಂಡಿತು ಮತ್ತು ಕಬ್ಬಿಣದ ಯುಗ ಪ್ರಾರಂಭವಾಯಿತು.
ಉಲ್ಲೇಖಗಳು
[ಬದಲಾಯಿಸಿ]