ಒಪ್ಪಂದ
ಒಪ್ಪಂದ: ಏನನ್ನಾದರೂ ಮಾಡುವುದಾಗಿ ಅಥವಾ ಮಾಡದೆ ಬಿಡುವುದಾಗಿ ಒಂದು ಗೊತ್ತುಪಾಡಿನ ವ್ಯಕ್ತಿಗಳ ಅಥವಾ ಪಕ್ಷಗಳ ನಡುವೆ ಏರ್ಪಟ್ಟ ಏಕಾಭಿಪ್ರಾಯ; ಪರಸ್ಪರ ತಿಳಿವಳಿಕೆ, ನಿರ್ಣಯ, ಷರತ್ತು; ಮನಸ್ಸುಗಳ ಕೂಡಿಕೆ (ಅಗ್ರೀಮೆಂಟ್),ಒಬ್ಬ ಅಥವಾ ಒಂದು ಪಕ್ಷ ಏನನ್ನಾದರೊ ಮಾಡಲು ಇಲ್ಲವೇ ಮಾಡದಿರಲು ಪ್ರಸ್ತಾಪ (ಪ್ರೊಪೋಸಲ್) ಮಾಡಲಾಗಿ, ಇನ್ನೊಬ್ಬ ಅಥವಾ ಇನ್ನೊಂದು ಪಕ್ಷ ಅದನ್ನು ನವೀಕರಿಸಿರುವುದನ್ನು ಅಥವಾ ಅದಕ್ಕೆ ಸಮ್ಮತಿಸಿರುವುದನ್ನು ಮತ್ತು ಆ ಬಗ್ಗೆ ಬರೆಯಲಾದ ಪತ್ರವನ್ನು ಒಪ್ಪಂದ ಎನ್ನಲಾಗುತ್ತದೆ. ಈ ಪದವನ್ನು ನ್ಯಾಯಶಾಸ್ತ್ರದಲ್ಲಿ ತಾತ್ಕಾಲಿಕ ವ್ಯವಸ್ಥೆ ಮತ್ತು ವ್ಯವಹಾರದ ಮುಕ್ತಾಯ ಎಂಬ ಎರಡರ್ಥದಲ್ಲಿ ಉಪಯೋಗಿಸಲಾಗುತ್ತದೆ. ಅದನ್ನು ಯಾವ ಅರ್ಥದಲ್ಲಿ ಬಳಸಲಾಗಿದೆ ಎಂಬುದನ್ನು ಒಪ್ಪಂದದ ಪತ್ರದ ಸಂದರ್ಭದಿಂದ ತಿಳಿಯಬಹುದು.ಭಾರತದ ಕರಾರು ಕಾಯಿದೆಯಲ್ಲಿ ಒಪ್ಪಂದ ಪದದ ವಿವರಣೆಯುಂಟು. ಒಂದು ವಾಗ್ದಾನವನ್ನು ಅಥವಾ ಪರಸ್ಪರವಾಗಿ ಉಭಯಪಕ್ಷದವರಿಗೂ ಪ್ರತಿಫಲವಾಗಿ (ಕನ್ಸಿಡರೇಷನ್) ಪರಿಣಮಿಸುವ ವಾಗ್ದಾನಗಳ ಸಮೂಹವನ್ನು ಒಪ್ಪಂದವೆನ್ನಲಾಗಿದೆ. ಇದೇ ಕಾಯಿದೆಯಲ್ಲಿ ಪ್ರಸ್ತಾಪ, ಸ್ವೀಕಾರ (ಆಕ್ಸಿಪ್ಟೆನ್ಸ್), ವಚನ (ಪ್ರಾಮಿಸ್) ಪ್ರತಿಫಲ ಇತ್ಯಾದಿ ಶಬ್ದಗಳನ್ನೂ ವಿವರಿಸುವುದರ ಮೂಲಕ ಅವುಗಳಿಗೆ ಒಂದು ನಿರ್ದಿಷ್ಟ ಅರ್ಥವ್ಯಾಪ್ತಿಯನ್ನು ನೀಡಲಾಗಿದೆ.ದಿವಾಣೀ ಸಂಹಿತೆಯ ಆದೇಶ 23ರ ನಿಯಮ ೩ರಲ್ಲಿ ಹೇಳಿದ, ನ್ಯಾಯಸಮ್ಮತ ಒಪ್ಪಂದ, ಕರಾರು ಕಾಯಿದೆಯ ಕಲಂ ೨() ದಲ್ಲಿ ಹೇಳಿದ, ನ್ಯಾಯದ ಮೂಲಕ ಜಾರಿಗೆ ತರಬಹುದಾದ ಒಪ್ಪಂದ-ಈ ಉಭಯ ಪದಗುಂಫನಗಳ ಅರ್ಥ ಒಂದೇ ಆಗಿದೆ ಎಂದು ನ್ಯಾಯಾಲಯಗಳು ತೀರ್ಪು ಕೊಟ್ಟಿವೆ. ನ್ಯಾಯಿಕವಾಗಿ ಜಾರಿಗೆ ತರಲು ಸಾಧ್ಯವಿಲ್ಲದ್ದು ಶೂನ್ಯ ಒಪ್ಪಂದ (ವಾಯ್ಡ್ ಅಗ್ರೀಮೆಂಟ್). ನ್ಯಾಯದ ಬೆಂಬಲದ ಮೇಲೆ ಜಾರಿಗೆ ತರಬಹುದಾದ ಒಪ್ಪಂದವೇ ಕರಾರು (ಕಂಟ್ರಾಕ್ಟ್). ಒಪ್ಪಂದ ಹೀಗೆ ಕರಾರಿನಲ್ಲಿ ಪರ್ಯವಸಾನವಾಗುತ್ತದೆ. ಭಾರತದ ಕರಾರು ಕಾಯಿದೆಯಲ್ಲಿ ಒಪ್ಪಂದ ಮತ್ತು ಕರಾರು ಶಬ್ದಗಳ ವ್ಯತ್ಯಾಸಗಳನ್ನು ವಿವರಿಸಲಾಗಿದೆ (ನೋಡಿ-ಕರಾರು).
ಒಪ್ಪಂದಗಳು, ಅನೌಪಚಾರಿಕ
[ಬದಲಾಯಿಸಿ]ವ್ಯವಹಾರದಲ್ಲಿ ಪೈಪೋಟಿ ನಡೆಸುತ್ತಿರುವ ವ್ಯಕ್ತಿಗಳು ಇಲ್ಲವೆ ಘಟಕಗಳು ಖಾಸಗಿಯಾಗಿ ಕಲೆತು ತಾವು ಯಾವ ಬೆಲೆಯನ್ನು ನಿಗದಿ ಮಾಡಬೇಕು, ಯಾವ ಪ್ರದೇಶದಲ್ಲಿ ವ್ಯವಹಾರ ನಡೆಸಬೇಕು, ಯಾವ ಸರಕನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಅಥವಾ ಬಾರದು ಎಂಬ ಬಗ್ಗೆ ಮಾಡಿಕೊಂಡ ಒಪ್ಪಂದ. ಅನೌಪಚಾರಿಕ ಒಪ್ಪಂದ ಸಾಮಾನ್ಯವಾಗಿ ಸ್ಥಳೀಯ ಹಾಗೂ ತಾತ್ಕಾಲಿಕವಾಗಿರುತ್ತದೆ. ಇದಕ್ಕೆ ಯಾವ ಬಗೆಯ ಕಾಗದ, ಕರಾರಿನ ಅವಶ್ಯಕತೆಯೂ ಇರುವುದಿಲ್ಲ. ಪರಸ್ಪರ ವಿಶ್ವಾಸವೇ ಇದಕ್ಕೆ ಆಧಾರ. ಗೋಣು ಕುಯ್ಯುವ ಪೈಪೋಟಿ ತಡೆಯಲು, ಒಂದೇ ಬಗೆಯ ಸೇವೆ ನೀಡುವುದರಲ್ಲಿ ಅನೇಕರು ತೊಡಗುವುದನ್ನು ತಡೆಯಲು, ಇಂಥ ಒಪ್ಪಂದ ನೆರವಾಗುತ್ತದೆ.ಅನೌಪಚಾರಿಕ ಒಪ್ಪಂದಕ್ಕೆ ಸಂಭಾವಿತರ ಒಪ್ಪಂದ, ಕ್ರಯ ಒಡಂಬಡಿಕೆ, ವ್ಯಾಪಾರಿ ಒಡಂಬಡಿಕೆ ಎಂಬ ಹೆಸರುಗಳೂ ಉಂಟು.ಒಪ್ಪಂದದಲ್ಲಿ ಸೇರುವ ಘಟಕಗಳು ಸ್ವಲ್ಪಮಟ್ಟಿಗೆ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಅವುಗಳ ಒಡೆತನ ಮತ್ತು ನಿಯಂತ್ರಣ ಯಾವ ಬಗೆಯಲ್ಲೂ ಬಾಧಿತವಾಗುವುದಿಲ್ಲ. ಅನೌಪಚಾರಿಕ ಒಪ್ಪಂದ ಸರಳವಾಗಿ ಹಾಗೂ ಖರ್ಚಿಲ್ಲದೆ ಸಂಯೋಗದ ಫಲವನ್ನನುಭವಿಸುವ ಮಾರ್ಗವಾಗಿದೆ. ಸದಸ್ಯರು ಒಪ್ಪಂದಕ್ಕೆ ತಾವಾಗಿಯೇ ಮುಂದಾಗುತ್ತಾರೆ. ಸನ್ನಿವೇಶಕ್ಕೆ ತಕ್ಕಂತೆ ಒಪ್ಪಂದದಲ್ಲಿ ಬದಲಾವಣೆಮಾಡಿಕೊಳ್ಳುವುದು ಸುಲಭ. ಒಪ್ಪಂದ ಸದಸ್ಯರ ನಡುವೆ ಗುಟ್ಟಾಗಿ ಇರುತ್ತದೆ. ಆದರೆ ಸಾಮಾನ್ಯ ಜನ ಇಂಥ ಒಪ್ಪಂದಗಳ ಸುಳಿವನ್ನರಿತು ಅವುಗಳ ಬಗ್ಗೆ ಸಂದೇಹ ತಾಳಬಹುದು. ಅವನ್ನು ಖಂಡಿಸಲೂಬಹುದು. ಇದಕ್ಕೆ ಕಾರಣವಿಲ್ಲದೆ ಇಲ್ಲ. ಅನೌಪಚಾರಿಕ ಒಪ್ಪಂದಗಳು ಕೆಲವು ವೇಳೆ ಗ್ರಾಹಕರ ಒಳಿತನ್ನು ಕಡೆಗಣಿಸಿ, ಅವರನ್ನು ಶೋಷಿಸಲು ನೆರವಾಗುತ್ತವೆ.ಪರಸ್ಪರ ನಂಬಿಕೆ, ಕೊಟ್ಟ ಮಾತಿನಂತೆ ನಡೆಯುವಿಕೆ-ಇವೇ ಅನೌಪಚಾರಿಕ ಒಪ್ಪಂದಗಳಿಗೆ ಆಧಾರವಾದ್ದರಿಂದ ಅವುಗಳ ಯಶಸ್ಸು ಖಚಿತವಲ್ಲ. ಎಲ್ಲ ಸದಸ್ಯರೂ ಒಪ್ಪಂದದ ನಿಯಮಗಳನ್ನು ಪಾಲಿಸುತ್ತಾರೆಂಬ ಭರವಸೆಯಿಲ್ಲ. ಕೆಲವರು ಗುಟ್ಟಾಗಿ ನಿಯಮ ಮೀರಿ ನಡೆಯಬಹುದು. ಮೇಲಾಗಿ ಸದಸ್ಯರ ಇತರ ಚಟುವಟಿಕೆಗಳ ಮೇಲೆ ಹತೋಟಿಯಿಲ್ಲದಿರುವುದರಿಂದ ಒಪ್ಪಂದದ ಉದ್ದೇಶ ನೆರವೇರದೆ ಇರಬಹುದು. ಉದಾಹರಣೆಗೆ ಒಪ್ಪಂದದಲ್ಲಿ ಕನಿಷ್ಠ ಮಾರುವ ಬೆಲೆ ಮಾತ್ರ ನಿಗದಿಯಾಗಿದ್ದು ಉತ್ಪಾದನೆ ಅನಿರ್ದಿಷ್ಟವಾಗಿ ಮುಂದುವರಿದರೆ ಮಾರುಕಟ್ಟೆಯಲ್ಲಿ ನೀಡಿಕೆ ಬೇಡಿಕೆಗಿಂತ ಅಧಿಕವಾಗಿ ಬೆಲೆ ಕುಸಿಯಬಹುದು.ಅನೌಪಚಾರಿಕ ಒಪ್ಪಂದಗಳು ಸ್ವಾರ್ಥಸಾಧನೆಗೆ, ಗ್ರಾಹಕರ ಶೋಷಣೆಗೆ ಕೈಹಾಕಬಹುದಾದರೂ ಸೂಕ್ತ ವ್ಯಕ್ತಿಗಳ ನಡುವೆ ಆದ ಒಪ್ಪಂದಗಳು ಸಮಾಜದ ಹಿತದೃಷ್ಟಿಯಿಂದಲೂ ಸದಸ್ಯರಿಗೆ ಅನುಕೂಲ ಮತ್ತು ಮಿತವ್ಯಯಗಳನ್ನು ದೊರಕಿಸುವ ದೃಷ್ಟಿಯಿಂದಲೂ ಮುಖ್ಯವಾಗಿವೆ.
ಉಲ್ಲೇಖ
[ಬದಲಾಯಿಸಿ]