ವಿಷಯಕ್ಕೆ ಹೋಗು

ಆಂಗ್ ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಗ್ ಸನ್ ಪ್ರತಿಮೆ

ಆಂಗ್ ಸನ್ (೧೯೧೫-೧೯೪೭). ಬರ್ಮದ ರಾಷ್ಟ್ರೀಯ ಮುಖಂಡ. ದೇಶದ ಸ್ವಾತಂತ್ರ್ಯ ಶಿಲ್ಪಿ.[] []

ಈತ ಜನಿಸಿದ್ದು ಮಧ್ಯ ಬರ್ಮದ ಮಾಗ್ವೆ ಜಿಲ್ಲೆಯ ನಟ್‍ಮಾಕ್ ಎಂಬಲ್ಲಿ. 1886ರಲ್ಲಿ ಬರ್ಮವನ್ನು ಬ್ರಿಟನ್ ವಶಪಡಿಸಿಕೊಂಡ ಅನಂತರ ನಡೆದ ಪ್ರತಿಭಟನಾ ಚಳುವಳಿಯಲ್ಲಿ ಈತನ ಪೂರ್ವಜರು ಭಾಗವಹಿಸಿ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ವಿದ್ಯಾಭ್ಯಾಸ ಕಾಲದಲ್ಲಿ 1936 ರಲ್ಲಿ ನಡೆದ ರಂಗೂನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಚಳುವಳಿಯ ನಾಯಕತ್ವವನ್ನು ಈತ ವಹಿಸಿದ್ದ.

ನಾಯಕತ್ವ

[ಬದಲಾಯಿಸಿ]

1938ರಲ್ಲಿ ಪದವಿಯನ್ನು ಪಡೆದ ಅನಂತರ ದೊಬಾಮ ಆಸಿ-ಅಯಾನ್ (ನಾವು ಬರ್ಮಿಯರ ಸಂಸ್ಥೆ) ಎಂಬ ಆಂದೋಳನದಲ್ಲಿ ದುಡಿದು 1939ರಲ್ಲಿ ಅದರ ಪ್ರಧಾನ ಕಾರ್ಯದರ್ಶಿಯಾದ. 1940-41 ರಲ್ಲಿ ಈತ ಕೈಗೊಂಡ ಟೊಕಿಯೋ ಗುಪ್ತಪ್ರವಾಸದ ಅನಂತರ ಬರ್ಮದ ಸ್ವಾತಂತ್ರ್ಯಸೇನೆಯ ದಂಡನಾಯಕನಾದ. 1943-45ರಲ್ಲಿ ಬಾ ಮಾವಿನ ಕೈಗೊಂಬೆ ಸರ್ಕಾರದಲ್ಲಿ ಈತ ರಕ್ಷಣಾಸಚಿವನಾಗಿದ್ದ. ಬರ್ಮದ ರಾಷ್ಟ್ರೀಯ ಸೇನೆ ಎಂಬುದಾಗಿ ವ್ಯವಸ್ಥಿತಗೊಂಡಿದ್ದ ಬರ್ಮದ ಸೇನೆ ಜಪಾನೀಯರಿಗೆ ಸೋತ ಅನಂತರ, ಅವರನ್ನು ಪ್ರತಿಭಟಿಸುವ ಸಲುವಾಗಿ ಸರ್ವಾಧಿಕಾರತತ್ತ್ವದ ವಿರುದ್ಧ ಒಂದು ಸಂಸ್ಥೆಯನ್ನು 1944ರ ಅಂತ್ಯದಲ್ಲಿ ಸ್ಥಾಪಿಸಿದ. 1945ರಲ್ಲಿ ಆಂಟಿ-ಫಾಸಿಸ್ಟ್ ಪೀಪಲ್ಸ್ ಲೀಗ್ ಎಂಬ ಸಂಸ್ಥೆಯನ್ನೂ ಪೀಪಲ್ಸ್ ವಾಲಂಟಿಯರ್ ಸಂಸ್ಥೆಯನ್ನೂ ರಾಷ್ಟ್ರದ ಸ್ಚಾತಂತ್ರ್ಯದ ಸಲುವಾಗಿಯೇ ಸ್ಥಾಪಿಸಿದ. 1946ರಲ್ಲಿ ಗೌರ್ನರ್‍ನ ಸಲಹಾಮಂಡಲಿಯ ಉಪಾಧ್ಯಕ್ಷನಾದ ಮೇಲೆ ಲಂಡನ್ನಿಗೆ ಭೇಟಿ ನೀಡಿ ಅಲ್ಲಿ ನಡೆದ ಅಟ್ಲೀ-ಆಂಗ್ ಸನ್ ಒಪ್ಪಂದದಲ್ಲಿ (27 ಜನವರಿ 1947) ಭಾಗವಹಿಸಿದ್ದ. ಇದು ನಡೆದ ಒಂದು ವರ್ಷದೊಳಗೆ ಬರ್ಮಕ್ಕೆ ಸ್ವಾತಂತ್ರ್ಯ ಲಭಿಸಿತು. 1947ರಲ್ಲಿ ಅಲ್ಲಿನ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಈತನ ಪಕ್ಷವೇ ಬಹುಮತಗಳಿಸಿತು, ಇವನ ರಾಜಕೀಯ ವಿರೋಧಿ ಉ ಸಾ ನಡೆಸಿದ ಕೃತ್ರಿಮದಿಂದ ರಂಗೂನಿನ ರಾಜ್ಯಸಭೆಯು ಸಮಾವೇಶಗೊಳ್ಳುತ್ತಿರುವಾಗಲೇ ಈತನ ಮತ್ತು ಸಹೋದ್ಯೋಗಿಗಳ ಕೊಲೆಯಾಯಿತು.

ಉಲ್ಲೇಖಗಳು

[ಬದಲಾಯಿಸಿ]