ಕೃಷಿ ರಸಾಯನ ಶಾಸ್ತ್ರ
ಪರಿಚಯ
[ಬದಲಾಯಿಸಿ]ಕೃಷಿಯ ಉತ್ಪನ್ನಗಳ ಮತ್ತು ಕೃಷಿಗೆ ಸಹಾಯಕವಾದ ಸಾಕು ಪ್ರಾಣಿಗಳ ಅಭಿವೃದ್ಧಿಯ ದಿಶೆಯಲ್ಲಿ ಬಳಸುವ ರಾಸಾಯನಿಕಗಳ ಹಾಗೂ ಅವುಗಳ ರಾಸಾಯನಿಕ ಕ್ರಿಯೆಗಳ ಅಧ್ಯಯನ. ಕೃಷಿಗೆ ಆಧಾರ ಭೂಮಿ, ಅದರಲ್ಲೂ ಭೂಮಿಯ ಮೇಲ್ಮೈ. ಆದ್ದರಿಂದ ಕೃಷಿಯ ದೃಷ್ಟಿಯಿಂದ ಕೆಲವೇ ಮೀಟರುಗಳಷ್ಟು ಆಳದ ವರೆಗೆ ಮಣ್ಣನ್ನು ಪರಿಶೀಲಿಸಿದರೆ ಸಾಕು. ಕಲ್ಲುಮರಳು ಪ್ರಧಾನವಾದ ಭೂಮಿ ಕೃಷಿಗೆ ಯೋಗ್ಯವಲ್ಲ. ಮೂಲವಾಗಿ ಕಲ್ಲುಮರಳುಗಳಿಂದಲೇ ಫಲಿತವಾದ ಮೆದುಮಣ್ಣಿನ ಭೂಮಿ ಮಾತ್ರವೇ ಅರ್ಹವಾದದ್ದು. ಅನಾದಿಕಾಲದಿಂದಲೂ ಭೂಮಿ ಬಿಸಿಲು ಗಾಳಿ ಮಳೆ ಶೀತೋಷ್ಣಗಳ ವೈಪರೀತ್ಯ ಮತ್ತು ಜೀವಿಗಳ ಆಕ್ರಮಣಗಳಿಗೆ ತುತ್ತಾಗಿ ಕ್ರಮೇಣ ಜರ್ಝರಿತವಾಗಿ ಅದರ ಅಲ್ಪಾಂಶ ಮಣ್ಣಾಗಿದೆ. ದೂಳಾಗಿ ಛಿದ್ರಿತವಾದ ಕಲ್ಲುಬಂಡೆಗಳ ಮತ್ತು ಸತ್ತ ಜೀವಿಗಳು ಕೊಳೆತು ನಶಿಸಿ ಉಂಟಾಗುವ ಸಾವಯವ ಸಂಯುಕ್ತ ಶೇಷಗಳ ಮಿಶ್ರಣವೇ ಮಣ್ಣು. ಹೀಗಾಗಿ ಮಣ್ಣಿನ ರಚನೆ ಮತ್ತು ಲಕ್ಷಣಗಳು ಕಾಲಕಾಲಕ್ಕೆ ಬದಲಾಯಿಸುತ್ತ ಹೋಗುತ್ತವೆ. ಈ ಮಣ್ಣೇ ಗಿಡಮರಗಳನ್ನೂ ತನ್ಮೂಲಕ ಪ್ರಾಣಿವರ್ಗವನ್ನೂ ಹೊರುವ ಮತ್ತು ಪೋಷಿಸುವ ಆಧಾರವಸ್ತು. ಆದ್ದರಿಂದ ಪ್ರತಿಯೊಬ್ಬ ರೈತನೂ ತನ್ನ ಕೃಷಿಭೂಮಿಯ ರಸಾಯನ ಚರಿತ್ರೆಯನ್ನು ಕಾಲಕಾಲಕ್ಕೆ ಪ್ರಯೋಗಪೂರ್ವಕವಾಗಿ ಅರಿಯುವುದು ಆಧುನಿಕ ಕೃಷಿಪದ್ಧತಿಗಳಲ್ಲಿ ಒಂದು. ಕೃಷಿ ಕ್ಷೇತ್ರಾಧಿಕಾರಿಗಳು ವಿವರಣಾತ್ಮಕ ಕ್ಷೇತ್ರ ಭೂಪಟಗಳನ್ನು ಸಿದ್ಧಪಡಿಸಿ ಆ ಕ್ಷೇತ್ರದ ಮಣ್ಣಿನ ಲಕ್ಷಣಗಳಿಗೆ ಅನುಸಾರವಾಗಿ ಯಾವ ಬೆಳೆಯನ್ನು ಫಲಪ್ರದವಾಗಿ ಪಡೆಯಬಹುದೆಂಬುದನ್ನು ನಿರ್ಧರಿಸಲು ಸಹಾಯಕರಾಗುವರು. ಮಣ್ಣು ಎಷ್ಟರಮಟ್ಟಿಗೆ ಗಡುಸಾಗಿದೆ ಅಥವಾ ಮೆದುವಾಗಿದೆ ಅಂದರೆ ಕಲ್ಲುಮರಳಿನ ಅಂಶವೆಷ್ಟು ಜೇಡಿಮಣ್ಣಿನ ಅಂಶವೆಷ್ಟು ಎಂಬುದು ಒಂದು ಮುಖ್ಯಾಂಶ. ಮಣ್ಣಿನ ಭೌತರಚನೆಗೂ ಅದರ ನೀರು ಹೀರುವಿಕೆಗೂ ನಿಕಟಸಂಬಂಧ ಉಂಟು. ನೀರಿನ ಜೊತೆಯಲ್ಲಿ ಮಣ್ಣಿನಲ್ಲಿರುವ ಲವಣಗಳು, ಬೆಳೆಗೆ ಹಾಕುವ ಗೊಬ್ಬರಗಳೂ ಮತ್ತು ರೋಗ ಕ್ರಿಮಿಕೀಟನಿರೋಧಕ ರಾಸಾಯನಿಕ ವಸ್ತುಗಳು ವಿಲೀನವಾದ ಅನಂತರ ಆ ಅಂಶಗಳನ್ನು ಮಣ್ಣಿನ ಕಣಗಳು ಎಷ್ಟರ ಮಟ್ಟಿಗೆ ಹೀರುತ್ತವೆ ಎಂಬುದೂ ತಿಳಿಯಬೇಕಾದ ಅಂಶ. ಹಾಕಿದ ನೀರೆಲ್ಲ ಮಣ್ಣಿನ ಮೂಲಕ ಶೀಘ್ರವಾಗಿ ಇಳಿದು ಹೋದರೆ ಎಷ್ಟು ನಿಷ್ಪ್ರಯೋಜಕವೋ ನೀರು ನಿಂತು ಕೆಸರಾದರೂ ಅಷ್ಟೇ ನಿಷ್ಪ್ರಯೋಜಕ. ನೀರನ್ನು ಆದಷ್ಟು ಹೀರಿ, ತೇವಾಂಶವನ್ನು ಬಹುಕಾಲ ಉಳಿಸಿಕೊಂಡು ಸಸ್ಯಗಳಿಗೆ ಕ್ರಮೇಣ ಆ ತೇವವನ್ನು ಒದಗಿಸಬಲ್ಲ ಸಾಮಥ್ರ್ಯವುಳ್ಳ ಮಣ್ಣೇ ಬಹು ಬೆಳೆಗಳಿಗೆ ಶ್ರೇಷ್ಠವಾದುದು. ಮಣ್ಣಿನಲ್ಲಿ ಅನೇಕ ಲವಣಗಳಿವೆ. ಇವು ನೀರಿನಲ್ಲಿ ವಿಲೀನವಾದಾಗ ಫಲಿತ ದ್ರಾವಣಗಳಲ್ಲಿ ಲವಣಗಳಲ್ಲಿನ ಅಯಾನುಗಳು ಪ್ರತ್ಯೇಕಿತವಾಗುವುವು. ಪೊಟಾಸಿಯಂ ಸೋಡಿಯಂ ಕ್ಯಾಲ್ಸಿಯಂ ಮೆಗ್ನೀಸಿಯಂ ಅಯಾನುಗಳು; ಕಾರ್ಬೊನೇಟ್ ಬೈಕಾರ್ಬೊನೇಟ್ ಕ್ಲೋರೈಡ್ ಸಲ್ಫೇಟ್ ಅಯಾನುಗಳು-ಇವೇ ಪ್ರಧಾನವಾದವು. ಪೊಟಾಸಿಯಂ ಮುಂತಾದ ಲೋಹಗಳ ಅಯಾನುಗಳ ಪರಿಮಾಣ ಹೆಚ್ಚಾದರೆ ಮಣ್ಣು ಆಮ್ಲೀಯವೂ ಆಗುತ್ತದೆ. ಮಣ್ಣಿನ ಆಮ್ಲ ಕ್ಷಾರ ಪ್ರಮಾಣವನ್ನು ರೈತ ತಾನೇ ಕೆಲ ಸರಳ ರಾಸಾಯನಿಕ ಪ್ರಯೋಗಗಳ ಮೂಲಕ ತಿಳಿದುಕೊಳ್ಳಬಹುದು. ಆಮ್ಲಾಂಶ ಹೆಚ್ಚಾದರೆ ಮಣ್ಣಿನಲ್ಲಿ ಅತಿ ಸೂಕ್ಷ್ಮ ಜೀವಾಣುಗಳು ಬದುಕಲಾರವು. ಅವಿಲ್ಲದಿದ್ದರೆ ಮಣ್ಣಿಗೆ ಹಾಕುವ ತಿಪ್ಪೆ ಗೊಬ್ಬರ ಕಾಂಪೋಸ್ಟ್ ಮಲಮೂತ್ರ ಮುಂತಾದ ಗೊಬ್ಬರಗಳಲ್ಲಿನ ಸಾವಯವ ಸಂಯುಕ್ತಗಳು ವಿಭಜನೆ ಹೊಂದಲಾರವು. ಪರಿಣಾಮವಾಗಿ ಸಸ್ಯಗಳಿಗೆ ಪೌಷ್ಟಿಕಾಂಶಗಳಾದ ಸಾರಜನಕ ರಂಜಕ ಮತ್ತು ಗಂಧಕಗಳು ಬಿಡುಗಡೆಯಾಗುವುದಿಲ್ಲ. ಮಣ್ಣಿನ ಆಮ್ಲತೆ ಕೆಲವೇಳೆ ಅದಕ್ಕೆ ಹಾಕುವ ಕೃತಕ ರಾಸಾಯನಿಕ ಗೊಬ್ಬರಗಳಿಂದ ಸಹ ವೃದ್ಧಿಯಾಗುತ್ತದೆ. ಹೇರಳವಾಗಿ ಬಳಸುವ ಅಮೋನಿಯಂ ಸಲ್ಫೇಟ್ ಗೊಬ್ಬರ ಸ್ಪಷ್ಟ ಉದಾಹರಣೆ. ಮಣ್ಣಿನ ಆಮ್ಲೀಯತೆಯನ್ನು ಕಡಿಮೆಮಾಡಲು ಕ್ಷಾರವಸ್ತು ಸುಣ್ಣದ ನೀರನ್ನು ಬೆರೆಸುವುದು ವಾಡಿಕೆ. ಮಣ್ಣಿನ ಕ್ಷಾರತೆ ಹೆಚ್ಚಾಗುವುದೂ ಅಪೇಕ್ಷಣೀಯವಲ್ಲ. ಅದರ ಪರಿಣಾಮವೆಂದರೆ ಮಣ್ಣಿನಲ್ಲಿರುವ ಕಬ್ಬಿಣ ತಾಮ್ರ ಸತು ಮ್ಯಾಂಗನೀಸ್ ಮುಂತಾದ ಸಸ್ಯಪೋಷಕ ಲೋಹಾಂಶಗಳು ಬಿಡುಗಡೆಯಾಗಲಾರವು. ಕೆಲ ಸಸ್ಯವರ್ಗಗಳ ಬೆಳವಣಿಗೆಗೆ ಬೋರಾನ್, ಮೊಲಿಬ್ಡಿನಮ್, ಬೇರಿಯಂ, ಸ್ಟ್ರಾನ್ಷಿಯಂ, ಕೊಬಾಲ್ಟ್ ಮುಂತಾದ ಮೂಲವಸ್ತುಗಳೂ ಅವಶ್ಯಕ ಎಂಬುದು ಈಗ ಸ್ಪಷ್ಟವಾಗಿದೆ. ಸಾರಜನಕ (ಗಾಳಿಯಿಂದ) ರಂಜಕ (ನಶಿಸಿದ ಜೀವಿಗಳಿಂದ) ಪೊಟಾಸಿಯಂಗಳು (ಭೂಮಿಯಲ್ಲಿನ ಲವಣಗಳಿಂದ) ಸಸ್ಯಗಳ ಬೆಳವಣಿಗೆಗೆ ಅಗಾಧಪ್ರಮಾಣದಲ್ಲಿ ಅವಶ್ಯವಾದ ಪೌಷ್ಟಿಕಾಂಶಗಳಾದರೆ ಬೋರಾನ್ ಕೊಬಾಲ್ಟ್ ತಾಮ್ರ ಮುಂತಾದವು ಕನಿಷ್ಠಾಂಶದಲ್ಲಿಯಾದರೂ ಅವಶ್ಯವಾದ ಪೋಷಕ ವಸ್ತುಗಳು. ಇವುಗಳ ಪೂರೈಕೆ ಮಣ್ಣಿನಿಂದ ಎಷ್ಟರಮಟ್ಟಿಗೆ ಆಗಬಲ್ಲದು ಎಂಬುದಕ್ಕೆ ಮಣ್ಣಿನ ರಾಸಾಯನಿಕ ವಿಶ್ಲೇಷಣೆ ಹಾಗೂ ಅಧ್ಯಯನ ಅಗತ್ಯ. ಮರಳು ಸುಣ್ಣ ತಿಪ್ಪೆಗೊಬ್ಬರ ಕೃತಕಗೊಬ್ಬರ ನೀರು ಇವನ್ನು ನಿಯಂತ್ರಿತ ನಿಯೋಜಿತ ಪ್ರಮಾಣದಲ್ಲಿ ಉಪಯೋಗಿಸಿ ಮಣ್ಣನ್ನು ಕೃಷಿಯೋಗ್ಯ ಸ್ಥಿತಿಯಲ್ಲಿಡುವುದು ಪದ್ಧತಿ.[೧]
ಕೃಷಿಯೋಗ್ಯ ಭೂಮಿ
[ಬದಲಾಯಿಸಿ]ಉತ್ತಮ ಬೀಜವನ್ನು ಬಿತ್ತುವುದು ವ್ಯವಸಾಯದಲ್ಲಿ ಮೊದಲ ಹೆಜ್ಜೆ. ಉತ್ತಮ ಬೀಜದ ಉತ್ಪಾದನೆ ಮತ್ತು ಶೇಖರಣೆಯಲ್ಲಿ ತಳಿಶಾಸ್ತ್ರಜ್ಞರಿಗೆ ರಸಾಯನಶಾಸ್ತ್ರದ ನೆರವು ಅತ್ಯಾವಶ್ಯಕ. ಹೆಚ್ಚು ಬೆಳೆ ಇಳುವರಿ ಬರುವ ಮತ್ತು ರೋಗನಿರೋಧಕ ದೃಢಕಾಯ ಮಿಶ್ರತಳಿ ಶಕ್ತಿಮಾನ್ ಜೋಳ, ಐಆರ್-8 ಬತ್ತದ ತಳಿಗಳ ವೃದ್ಧಿಯೇ ಉದಾಹರಣೆಗಳು. ಬಿತ್ತಿದ ಬೀಜ ಮೊಳೆತು ಗಿಡವಾಗಿ ಬೆಳೆಯಲು ಪೋಷಕವಾಗಿ ಪುಷ್ಟಿಕರವಾದ ಆಹಾರ ಪೂರೈಕೆ ಅವಶ್ಯ. ಗಾಳಿಯಲ್ಲಿ ಯಥೇಚ್ಛವಾಗಿ ಸಾರಜನಕವಿದ್ದರೂ ಎಲ್ಲ ಸಸ್ಯವರ್ಗಗಳೂ ನೇರವಾಗಿ ಅದನ್ನು ಸೇವಿಸಲು ಸಮರ್ಥವಾಗಿಲ್ಲ. ಕೆಲವು ಜಾತಿಯ ಸಸ್ಯಗಳು ಮಾತ್ರ ತಮ್ಮ ಬೇರಿನ ಮೂಲಕ ಮಣ್ಣಿನ ಒಳಗೆ ಅಡಕವಾಗಿರುವ ಗಾಳಿಯಲ್ಲಿನ ಸಾರಜನಕವನ್ನು ಹೀರಬಲ್ಲವು. ಉಳಿದೆಲ್ಲವಕ್ಕೂ ಸಾರಜನಕ ಸಂಯುಕ್ತಗಳನ್ನು ಮಣ್ಣಿಗೆ ಬೆರಸಬೇಕು. ಮತ್ತೊಂದು ಪೌಷ್ಟಿಕಾಂಶವಾದ ರಂಜಕ ತಿಪ್ಪೆಗೊಬ್ಬರ, ಮೂಳೆಗೊಬ್ಬರಗಳ ಮೂಲಕ ಮಣ್ಣಿನಲ್ಲಿ ಸೇರಿದರೂ ಅದರ ಪ್ರಮಾಣ ಅಲ್ಪವಾದುದು. ಮೂರನೆಯ ಅವಶ್ಯ ಪೌಷ್ಟಿಕಾಂಶವಾದ ಪೊಟಾಸಿಯಂ ಕೂಡ ಎಲ್ಲ ಮಣ್ಣುಗಳಲ್ಲಿಯೂ ಅಪೇಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ. ಮನುಷ್ಯರಂತೆಯೇ ಸಸ್ಯಗಳಿಗೂ ಪೌಷ್ಟಿಕಾಂಶಗಳಿಗೆ ಸಂಬಂಧಿಸಿದಂತೆ ಸಮತೂಕದ ಆಹಾರ ಅವಶ್ಯಕ. ಈಗ ಸಾಮಾನ್ಯ ರೈತನಿಗೂ ಸುಪರಿಚಿತವಾಗಿರುವ ಎನ್ಪಿಕೆ ಮಿಶ್ರಣಗೊಬ್ಬರಗಳು ಈ ಮಾದರಿಯವು. ಹೆಚ್ಚು ಗೊಬ್ಬರ ಹಾಕಿದ ಮಾತ್ರಕ್ಕೆ ಹೆಚ್ಚು ಬೆಳೆ ಬರುವುದೆನ್ನುವುದೂ ವೈಜ್ಞಾನಿಕವಾಗಿ ಸರಿಯಲ್ಲ. ಅವಶ್ಯಕತೆಗಿಂತ ಹೆಚ್ಚಿನ ಪರಿಮಾಣದಲ್ಲಿ ಯಾವೊಂದು ಗೊಬ್ಬರವನ್ನು ಬಳಸಿದರೂ ವ್ಯರ್ಥವಾಗುತ್ತದೆ. ರಸಾಯನಶಾಸ್ತ್ರಜ್ಞನ ನೆರವಿನಿಂದ ಅವಶ್ಯ ಪೌಷ್ಟಿಕಾಂಶಗಳ ಸಮತೂಕದ ಮಿಶ್ರಗೊಬ್ಬರಗಳನ್ನೂ ಅವನ್ನು ವಿವಿಧ ಬೆಳೆಗಳಿಗೆ ಉಪಯೋಗಿಸುವ ಪ್ರಮಾಣಗಳನ್ನೂ ನಿರ್ಧರಿಸಬಹುದು, ಬಳಕೆಯಲ್ಲಿರುವ ರಾಸಾಯನಿಕ ಗೊಬ್ಬರಗಳೆಂದರೆ ಅಮೋನಿಯಂ ಸಲ್ಫೇಟ್, ಕ್ಯಾಲ್ಸಿಯಂ ಸಯನಮೈಡ್, ಅಮೋನಿಯಂ ನೈಟ್ರೇಟ್, ಸೂಪರ್ ಪಾಸ್ಪೇಟ್, ಪೊಟಾಸಿಯಂ ಲವಣಗಳು ಮುಂತಾದವು. ಈ ಕೃತಕಗೊಬ್ಬರಗಳು ನೀರಿನಲ್ಲಿ ಎಷ್ಟರಮಟ್ಟಿಗೆ ವಿಲೀನವಾಗುತ್ತವೆ, ಮಣ್ಣಿನ ಆಮ್ಲತೆ ಕ್ಷಾರಗಳನ್ನು ಹೇಗೆ ಮಾರ್ಪಾಡುಮಾಡುತ್ತವೆ, ಬೆಳೆಗಳಿಂದ ಯಾವ ರೀತಿಯಲ್ಲಿ ಹೀರಿಕೊಳ್ಳಲ್ಪಡುತ್ತವೆ. ಮಣ್ಣಿನಲ್ಲಿ ಎಷ್ಟು ಇರಬಲ್ಲವು ಎಂಬೆಲ್ಲ ವಿಷಯಗಳ ಅಧ್ಯಯನ ಫಲಿತಾಂಶನಿರ್ಧಾರ ಕೃಷಿ ರಸಾಯನಶಾಸ್ತ್ರದ ಕರ್ತವ್ಯ. ಪುಷ್ಟ ಆಹಾರ ಪೂರೈಕೆಯಾದರೂ ಬೆಳೆಗಳು ಸಮೃದ್ಧಿಯಾಗಿ ಕೈಗೆ ಬರುವುವೆಂಬ ನಿರೀಕ್ಷೆಗೆ ಅನೇಕ ಅಡಚಣೆಗಳಿವೆ. ರೋಗರುಜಿನಗಳು ಕ್ರಿಮಿಕೀಟಗಳ ಆಕ್ರಮಣ ಕಳೆಗಳ ಪೈಪೋಟಿ ಇವೇ ಮುಂತಾದ ಸಮಸ್ಯೆಗಳನ್ನು ಕೃಷಿಕ್ಷೇತ್ರದಲ್ಲಿ ಸರ್ವೇಸಾಧಾರಣವಾಗಿ ಎದುರಿಸುತ್ತಲೇ ಇರಬೇಕು. ನಿರಂತರ ಎಚ್ಚರಿಕೆ ನಿರೋಧ ಕ್ರಮಗಳನ್ನು ಅನುಸರಿಸದಿದ್ದಲ್ಲಿ ಪೈರು ನಾಶವಾದೀತು. ಕೆಲವೊಂದು ಸಾಂಕ್ರಾಮಿಕ ರೋಗಗಳು ವಿಶಾಲಕ್ಷೇತ್ರದ ಇಡೀ ಬೆಳೆಯನ್ನು ನಾಶಮಾಡಲು ಸಾಧ್ಯ. ಉದಾಹರಣೆಗೆ ಕಿತ್ತಳೆ, ಕಬ್ಬು, ಆಲೂಗಡ್ಡೆ ಇವುಗಳಿಗೆ ತಗಲುವ ವೈರಸ್ಮೂಲ ಅಥವಾ ನಂಜು ರೋಗಗಳು. (ನೋಡಿ- ಕೀಟನಾಶಕಗಳು)
ಕೀಟನಾಶಕಗಳು ಮೂಲತಃ ರಾಸಾಯನಿಕಗಳು. ಅವನ್ನು ಅಲ್ಪ ಪರಿಮಾಣದಲ್ಲಿ ಉಪಯೋಗಿಸಿದಾಗ ಬಾಧಕ ಕ್ರಿಮಿಕೀಟಾದಿಗಳಿಗೆ ವಿಷವಾದರೆ ಹೆಚ್ಚು ಪರಿಮಾಣದಲ್ಲಿ ಮುಖ್ಯ ಸಸಿಗೂ ಅಷ್ಟೇ ವಿಷವಾಗುವುದು ಮಾತ್ರವಲ್ಲ ಅದರ ಸಂಪರ್ಕಕ್ಕೆ ಬರುವ ರೈತನಿಗೂ ಅವನ ಸಾಕುಪ್ರಾಣಿಗಳಿಗೂ ಅಪಾಯಕಾರಿಯಾದೀತು. ಆದ್ದರಿಂದ ಈಗ ರೈತನಿಗೆ ಹೊಸದಾಗಿ ಲಭಿಸಿರುವ ಕೀಟನಾಶಕ ರಾಸಾಯನಿಕಗಳನ್ನು ರಸಾಯನಶಾಸ್ತ್ರ ಪರಿಣತರು ನಿಗದಿ ಮಾಡಿರುವ ಪರಿಮಾಣದಲ್ಲಿ ಕಟ್ಟುನಿಟ್ಟಾಗಿ ಉಪಯೋಗಿಸುವುದು ಅನಿವಾರ್ಯ, ಇದೇ ಮಾತು ಕೃಷಿ ಉತ್ಪನ್ನಗಳ ದಾಸ್ತಾನಿನಲ್ಲಿ ಬಳಸುವ ವಿವಿಧ ಕ್ರಿಮಿಕೀಟನಾಶಕ ರಾಸಾಯನಿಕ ವಸ್ತುಗಳಿಗೂ ಅನ್ವಯಿಸುತ್ತದೆ. ಪ್ರತಿ ಬೆಳೆಯ ಸಂರಕ್ಷಣೆಗೋಸ್ಕರ ಬಳಸುವ ರಾಸಾಯನಿಕಗಳು ಮಣ್ಣಿನಲ್ಲಿ ಬೆರೆತು ಭಾಗಶಃ ತಮ್ಮ ಕಾರ್ಯನಿರ್ವಹಿಸಿ ನಿರ್ಮೂಲವಾದರೆ ಉಳಿದ ಅಂಶ ಹಾಗೆಯೇ ಉಳಿಯುತ್ತದೆ. ಕಾಲಕ್ರಮೇಣ ಅದು ಹೆಚ್ಚಾಗಿ ಮಿತಿಮೀರಿದಾಗ ಬೆಳೆಗೇ ಅಪಾಯಕಾರಿಯಾದೀತು. ಆದ್ದರಿಂದ ಕೃಷಿ ರಸಾಯನಶಾಸ್ತ್ರಜ್ಞ ಈ ವಿಷವಸ್ತುಗಳ ಉತ್ಪಾದನೆ ವಿಶ್ಲೇಷಣೆ ಪ್ರಯೋಗ ಪ್ರಯೋಗೋತ್ತರ ಪರಿಣಾಮಗಳ ಅಧ್ಯಯನ ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವಿಕೆಯ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ಆಸಕ್ತನಾಗಿರುತ್ತಾನೆ.
ಎಲ್ಲ ಜೀವಿಗಳಂತೆ ಸಸ್ಯವರ್ಗವೂ ಅದರ ಜೀವಿತಕಾಲದಲ್ಲಿ ಆಕಸ್ಮಿಕಗಳಿಗೊಳಗಾಗಿ ಗಾಯಗೊಳ್ಳುವುದುಂಟು. ಈ ಆಕಸ್ಮಿಕಗಳಿಗೆ ನೈಸರ್ಗಿಕ ಕಾರಣಗಳಿರಬಹುದು ಅಥವಾ ಪ್ರಾಣಿವರ್ಗದ ಉದ್ದೇಶಪೂರಿತ ಕೃತ್ಯಗಳೂ ಕಾರಣಗಳಾಗಬಹುದು. ಬಿರುಗಾಳಿ, ಅತಿವೃಷ್ಟಿ, ಭಾರಿ ಹಿಮ ಸಿಡಿಲು ಮುಂತಾದ ಕಾರಣಗಳಿಂದ ಕೊಂಬೆಗಳು ಮುರಿಯುವುದು ಎಲೆಗಳುದುರುವುದು ಸಾಮಾನ್ಯ ಅನುಭವ. ಹಕ್ಕಿಗಳು, ಪ್ರಾಣಿಗಳು ಕೊಂಬೆಗಳನ್ನು ಮುರಿಯುವುದೂ ಎಲೆ ಹೂಗಳನ್ನು ತಿನ್ನುವುದೂ ಗಾಯಗಳಿಗೆ ಕಾರಣವಾಗುತ್ತದೆ. ಪ್ರಾಣಿವರ್ಗಕ್ಕೆ ಹೋಲಿಸಿದರೆ ಸಸ್ಯವರ್ಗಕ್ಕೆ ತನ್ನ ಗಾಯಗಳನ್ನು ತಾನೇ ವಾಸಿಮಾಡಿಕೊಳ್ಳುವುದರಲ್ಲಿ ಅಸಾಧಾರಣ ಶಕ್ತಿ ಇದೆ. ಆದರೂ ಗಾಯಗೊಂಡ ಜಾಗಕ್ಕೆ ಚಿಕಿತ್ಸೆ ನಡೆಸುವುದರಿಂದ ಸಸ್ಯದ ಆರೋಗ್ಯ ರಕ್ಷಣೆಗೆ ಸಹಾಯವಾಗುತ್ತದೆ. ಕತ್ತರಿಸಿದ ಭಾಗವನ್ನು ಸ್ವಚ್ಛಮಾಡಿ ರಾಸಾಯನಿಕ ಮುಲಾಮನ್ನು ಹಚ್ಚಿ ಪೊಟರೆಗಳನ್ನೆಲ್ಲ ಮುಚ್ಚಿ ಗಾಯವನ್ನು ಮಾಯಲು ಸಹಾಯ ಮಾಡಬೇಕು. ಈ ಉದ್ದೇಶಕ್ಕಾಗಿ ಅರಗು ಮೇಣ ಬಣ್ಣದ ಮುಲಾಮು ಲಿನ್ಸಿಡ್ ಎಣ್ಣೆ ಟಾರ್ ಆಧಾರಿತ ರಾಸಾಯನಿಕಗಳು ಬಳಕೆಯಲ್ಲಿವೆ. ಇತ್ತೀಚಿನ ದಿನಗಳ ನೂತನ ಪದ್ಧತಿಯೊಂದೆಂದರೆ ಗಿಡಮರಗಳಿಗೂ ಚುಚ್ಚುಮದ್ದನ್ನು ಕೊಡುವುದು. ಉದಾಹರಣೆಗೆ ಕಬ್ಬಿಣದ ಅಂಶ ಕಡಿಮೆಯಾದಾಗ ಕಬ್ಬಿಣಸಂಯುಕ್ತ ದ್ರವವೊಂದನ್ನು ಚುಚ್ಚುಮದ್ದಾಗಿ ಬಳಸುವರು. ಹಾಗೆಯೇ ಸತುವಿನ ಕ್ಲೋರೈಡ್ ಮೈಲುತುತ್ತಗಳನ್ನೂ ಬಳಸಬಹುದು. ಇದಕ್ಕೆಲ್ಲ ರಸಾಯನಶಾಸ್ತ್ರಜ್ಞ ಮೊದಲು ಯಾವ ಔಷಧಿಯನ್ನು ಎಷ್ಟು ಪರಿಮಾಣದಲ್ಲಿ ಕೊಡಬೇಕೆಂದು ನಿರ್ಧರಿಸುವ ವೈದ್ಯನಂತಾಗುತ್ತಾನೆ.
ಸಂರಕ್ಷಿತ ಭೂಮಿ ಪೌಷ್ಟಿಕ ಆಹಾರ ಸಂರಕ್ಷಿತ ಬೆಳೆ ಇಷ್ಟಾದ ಮೇಲೆ ಉದ್ದೇಶಿತ ಅಂತಿಮ ಫಲವನ್ನು ಆದಷ್ಟು ಬೇಗ ಪಡೆಯುವುದೂ ರೈತನ ಆಕಾಂಕ್ಷೆಗಳಲ್ಲೊಂದು. ಈ ಕ್ಷೇತ್ರದಲ್ಲೂ ರಾಸಾಯನಿಕಗಳ ಪ್ರಭಾವ ರೈತನಿಗೆ ಸಹಕಾರಿಯಾಗಿದೆ. ಕಾಯಿಗಳನ್ನು ಬೇಗ ಹಣ್ಣಾಗಿಸಲು ಎಥೀಲಿನ್ ರಾಸಾಯನಿಕ ಉತ್ತೇಜಕ. ಸೇಬು ಕಿತ್ತಲೆ ಹಣ್ಣುಗಳು ಬಲಿಯುವುದಕ್ಕೆ ಮುಂಚೆಯೇ ಗಿಡದಿಂದ ಬಿದ್ದುಹೋಗದಂತೆ ರಕ್ಷಿಸಿ ಚೆನ್ನಾಗಿ ಬಲಿತು ಹಣ್ಣಾಗುವಂತೆ ಮಾಡಲು ನ್ಯಾಪ್ಥಲೀನ್ ಅಸೆಟಿಕ್ ಆಮ್ಲ ಮತ್ತು 2-4 ಡೈಕ್ಲೋರೊ ಫೀನಾಕ್ಸಿ ಅಸೆಟಿಕ್ ಆಮ್ಲಗಳನ್ನು ಉಪಯೋಗಿಸುವರು. ಗಿಬೆರಲಿನ್ ಎಂಬ ರಾಸಾಯನಿಕ ಸಸ್ಯ ಮತ್ತು ಅದರ ಫಲದ ಶೀಘ್ರ ಬೆಳವಣಿಗೆಗೆ ಉತ್ತೇಜಕ. ಗಿಡಮರಗಳು ಹೂ ಬಿಟ್ಟಾಗ ಗೊಂಚಲಿನಲ್ಲಿನ ಹೂಗಳ ಸಂಖ್ಯೆಯನ್ನು ನಿಯಂತ್ರಿಸಿ ಅವು ಯಶಸ್ವಿಯಾಗಿ ಕಾಯಿ ಬಿಡುವಂತೆ ಮಾಡಲು ಸಾಧ್ಯ. ಪೈರಿನ ಕುಯಿಲು ಯಾಂತ್ರೀಕರಣಗೊಳ್ಳಲಾಗಿ ಫಲವನ್ನು ಮಾತ್ರ ಬೆಳೆಯ ಮೇಲೆ ಬಿಟ್ಟು ಉಳಿದ ಎಲೆಗಳನ್ನು ಉದುರುವಂತೆ ಮಾಡುವುದು ವಿಹಿತ. ಉದಾಹರಣೆಗೆ ಹತ್ತಿ ಬೆಳೆಯಲ್ಲಿ ಕ್ಯಾಲ್ಸಿಯಂ ಸಯನಮೈಡ್ ದೂಳಿನ ಉಪಯೋಗ ಬೊರೇಟ್-ಕ್ಲೋರೇಟುಗಳ ಮಿಶ್ರಣ ಇತ್ಯಾದಿ. ಈ ಎಲ್ಲ ಉದ್ದೇಶಗಳನ್ನೂ ಸೂಕ್ತ ರಾಸಾಯನಿಕಗಳ ಪ್ರಯೋಗದಿಂದ ಸಾಧಿಸಲಾಗಿದೆ.
ಕೃಷಿ ರಸಾಯನಶಾಸ್ತ್ರದ ಪೂರ್ಣ ಉಪಯೋಗವನ್ನು ಇತರ ಕೃಷಿವಿಜ್ಞಾನಿಗಳ ಸಹಕಾರದಿಂದ ಮಾತ್ರ ಪಡೆಯುವುದು ಸಾಧ್ಯ. ವೈಜ್ಞಾನಿಕ ಕೃಷಿಯ ಪೂರ್ಣ ಫಲವನ್ನು ಮೊದಲು ಅನುಭವಿಸಿದ ರಾಷ್ಟ್ರವೆಂದರೆ ಅಮೆರಿಕ. ಅಲ್ಲಿ ಇಳುವರಿ ಎಷ್ಟರಮಟ್ಟಿಗೆ ಹೆಚ್ಚಿತೆಂದರೆ ರೈತ ತನ್ನ ಉತ್ಪನ್ನವನ್ನು ವಿಲೆವಾರಿ ಮಾಡುವುದೇ ಒಂದು ಸಮಸ್ಯೆಯಾಯಿತು.
ಕರ್ನಾಟಕದಲ್ಲಿ ಮಿಶ್ರತಳಿ
[ಬದಲಾಯಿಸಿ]ಜೋಳದ ಬೆಳೆ ಆಹಾರ ಪೂರೈಕೆಗಿಂತ ಅಧಿಕವಾಗಿ ಬೆಲೆ ಕುಸಿದು ರೈತರನ್ನು ಸಮಸ್ಯೆಗೀಡುಮಾಡಿದುದೂ ಒಂದು ಉದಾಹರಣೆ. ಇಂಥ ಸಮಸ್ಯೆಯನ್ನು ಎದುರಿಸಲು ರಸಾಯನ ಶಾಸ್ತ್ರಜ್ಞರು ಸಹಾಯಕರಾಗಿ ಕೃಷಿ ರಸಾಯನಶಾಸ್ತ್ರದ ಒಂದು ವಿಶಿಷ್ಟ ಶಾಖೆಯೇ ಎನ್ನಬಹುದಾದ ಕೆಮರ್ಜಿ ಅಂದರೆ ಅಧಿಕ ಕೃಷಿ ಆಹಾರೋತ್ಪನ್ನಗಳ ರಾಸಾಯನಿಕ ವಿಲೆವಾರಿ ಉದಯವಾಯಿತು. ಇದರಲ್ಲಿ ಸಾವಯವ ರಸಾಯನಶಾಸ್ತ್ರದ ಪಾತ್ರವೇ ಪ್ರಮುಖವಾದುದು. ಕೃಷಿ ಉತ್ಪನ್ನಗಳಲ್ಲೆಲ್ಲ ಉಪಯುಕ್ತ ಸಾವಯವ ಸಂಯುಕ್ತಗಳಾದ ಶರ್ಕರಪಿಷ್ಟಾದಿಗಳು ಸೆಲ್ಯುಲೋಸ್ ಪ್ರೋಟೀನ್ಗಳೂ ಎಣ್ಣೆ ಮತ್ತು ಕೊಬ್ಬುಗಳು ಇರುವುವು. ಇವುಗಳ ಆಧಾರದ ಮೇಲೆ ರಾಸಾಯನಿಕ ಕೈಗಾರಿಕೆಗಳನ್ನು ಕೈಗೊಂಡು ಉಪಯುಕ್ತ ಕೈಗಾರಿಕಾ ಉತ್ಪನ್ನಗಳನ್ನು ಪಡೆಯಬಹುದು. ಉದಾಹರಣೆಗೆ ಕಬ್ಬಿನ ಚರಟಿನಿಂದ ಕಾಗದ, ಜೋಳದಿಂದ ಪಿಷ್ಟ ಮತ್ತು ಗ್ಲೂಕೋಸ್, ಅಕ್ಕಿ ತೌಡಿನಿಂದ ಎಣ್ಣೆ ಮತ್ತು ಸಾಬೂನು, ಕಡ್ಲೆಕಾಯಿ ಸಿಪ್ಪೆಯಿಂದ ಬೆಂಡು, ಓಟ್ಸ್ ಜೊಂಡಿನಿಂದ ಕಾಗದ, ಓಟ್ಸ್ ಹೊಟ್ಟು ತೌಡಿನಿಂದ ಫರ್ಫ್ಯುರಾಲ್ ಅದರಿಂದಾಗಿ ನೈಲಾನ್ ಕೀಲೆಣ್ಣೆಗಳು ಇತ್ಯಾದಿ ; ಅಗಸೆಗಿಡದ ಜಾತಿಯ ಲಿನ್ಸೀಡ್ ಎಣ್ಣೆಯ ಬೀಜದ ಗಿಡದ ನಾರಿನಿಂದ ಸಿಗರೇಟ್ ಕಾಗದ ಹರಳೆಣ್ಣೆಯಿಂದ ಬೇಗ ಒಣಗುವ ಶಾಯಿಗಳು, ಬಣ್ಣಗಳು, ವಾರ್ನಿಷ್ಗಳು ಇತ್ಯಾದಿ. (ಎಚ್.ಎಸ್.ಎನ್.)