ಅಳ್ಳೆಪರೆಯ ರೋಗಗಳು
ಎದೆಗೂಡಿನ ಪೊಳ್ಳಿನ ಗೋಡೆಯ ಮತ್ತು ವಪೆಯ ಮೇಲಿನ ಒಳವರಿಯಾಗಿಯೂ (ಅಂಗೋಡೆಯದು: ಪೆರೈಟಲ್) ಫುಪ್ಪುಸದ ಬುಡದ ತಾವಿನಲ್ಲಿ ಹಿಮ್ಮಡಿಕೆಯಾಗಿ ಪೂರ್ತಿ ಫುಪ್ಪುಸಕ್ಕೆ ಅಂಟಿದ ಹೊದಿಕೆಯಾಗಿಯೂ (ಒಳಾಂಗದ್ದು: ವಿಸರಲ್) ಉದ್ದಕ್ಕೂ ಒಂದೇ ಸಮನಾಗಿರುವ ಪದರಕ್ಕೆ ಅಳ್ಳೆಪರೆ (ಪ್ಲೂರ) ಎಂದಿದೆ. ಫುಪ್ಪುಸ ಅಳ್ಳೆಪರೆಯ ಸಂಬಂಧ, ಮುಚ್ಚಿರುವ ಒಂದು ದೊಡ್ಡ ಚೀಲವನ್ನು ಹಳ್ಳ ಬೀಳುವಂತೆ ತಳ್ಳಿ ಹೊದಿಕೆ ಆದಂತಿದೆ. ಫುಪ್ಪುಸದ ಸುತ್ತಲೂ ಒಂದಕ್ಕೊಂದು ಜಾಗ ಬಿಡದಂತೆ ತಗುಲಿಕೊಂಡಿರುವ ಅಳ್ಳೆಪರೆಯ ಎರಡು ಪದರಗಳು ಇವು ಒಂದರ ಮೇಲೊಂದು ನುಣುಪಾಗಿ ಜಾರುವಂತೆ ಮಾಡುವ, ಇವುಗಳ ನಡುವಣ ತುಸು ರಸಿಕೆಯ ದ್ರವವೂ ಇರುತ್ತದೆ. ರೋಗದಿಂದ ಈ ದ್ರವ ಹೆಚ್ಚಿದಾಗ, ಕೀವುಗೂಡಿದಾಗ, ಇಲ್ಲವೇ ಗಾಳಿ ಸೇರಿಕೊಂಡಾಗ ಮಾತ್ರ ಅಳ್ಳೆಪರೆಯ ಚೀಲದ ಪೊಳ್ಳು ಇರುವುದು ಗೊತ್ತಾಗುತ್ತದೆ.
ಅಳ್ಳೆಪರೆಯುರಿತ
[ಬದಲಾಯಿಸಿ]ಅಳ್ಳೆಪರೆಯುರಿತ : ಬಹುಮಟ್ಟಿಗೆ ಫುಪ್ಪುಸದ ಎಲ್ಲ ದೊಡ್ಡ ಬೇನೆಗಳೊಂದಿಗೇ ಆಗಿಬರುವ ಅಳ್ಳೆಪರೆಯ ಉರಿತಕ್ಕೆ (ಇನ್ಫ್ಲಮೇಷನ್) ಅಳ್ಳೆಪರೆಯುರಿತ (ಪ್ಲೂರಿಸಿ, ಪ್ಲೂರೈಟಿಸ್) ಎಂದಿದೆ. ಇದನ್ನು ಒಣಕಲು ಬಗೆಯದು ಎನ್ನುವುದುಂಟು. ಎದೆಗೂಡಲ್ಲಿ ಎಲ್ಲಿ ನೋವಿದ್ದರೂ ಕೆಲವೇಳೆ ಅಳ್ಳೆಪರೆಯುರಿತವೆಂದು ಜನಸಾಮಾನ್ಯರು ತಪ್ಪಾಗಿ ಹೇಳುವುದುಂಟು. ಅಳ್ಳೆಪರೆಯುರಿತದ ನೋವು ಸಾಮಾನ್ಯವಾಗಿ ಉಸಿರಾಡುವಾಗ ಒಂದು ಗೊತ್ತಾದೆಡೆಯಲ್ಲಿ ಚಳುಕು ಚುರುಕಾಗಿ ಹೊಡೆಯುವುದು. ಉರಿತವೆದ್ದ ಅಳ್ಳೆಪರೆಯಿಂದ ಜಿನುಗಿದ ಸ್ರವಿಕೆ ಗರಣಿಗಟ್ಟಿ ಅಳ್ಳೆಪರೆಯನ್ನು ಒರಟೊರಟಾಗಿಸುತ್ತದೆ. ಸರಾಗವಾಗಿ ಜಾರುತ್ತಿದ್ದ ಅಳ್ಳೆಪರೆ ಪದರಗಳು ಒಂದನ್ನೊಂದು ಉಜ್ಜುವುದರಿಂದ ಕೆರಳಿ ಚಳುಕು ಹುಟ್ಟುವುದು. ಈ ಉಜ್ಜಾಟವನ್ನು ಎದೆಯ ಮೇಲೆ ಮುಟ್ಟಿ ತಿಳಿಯಬಹುದು. ರೋಗಿಗೂ ಗೊತ್ತಾಗುತ್ತದೆ. ಇದರೊಂದಿಗೆ ತುಸು ಜ್ವರ ಕೂಡ ಇರುವುದು. ಫುಪ್ಪುಸದಲ್ಲಿ ಇನ್ನಾವ ಬೇನೆಯೂ ಇಲ್ಲದಲ್ಲಿ, ಇದರ ಸಾಮಾನ್ಯ ಕಾರಣ ಕ್ಷಯ ರೋಗವೇ.
ವಪೆಗೆ ಅಂಟಿರುವ ಅಳ್ಳೆಪರೆಯ ಉರಿತದಲ್ಲಿ ನೋವೂ ಚಳಕೂ ಪಕ್ಕೆಲಬುಗಳ (ರಿಬ್ಸ್) ಕೆಳಗೋ ಹೊಟ್ಟೆಯಲ್ಲೋ ತೋರಬಹುದು. ಉಸಿರಾಡುವಾಗ ನೋವಿರುವ ಪಕ್ಕೆ ಅಲುಗಾಡದಂತೆ ಇರಿಸಲು ವೈದ್ಯ ಪಟ್ಟಿಯನ್ನು ಬಿಗಿಯಾಗಿ ಅಂಟಿಸಬಹುದು. ಕಾರಣಕ್ಕೆ ತಕ್ಕ ಚಿಕಿತ್ಸೆ ಆಗತ್ಯ.
ಅಳ್ಳೆಪರೆಯ ಸೂಸುಗೆ
[ಬದಲಾಯಿಸಿ]ಅಳ್ಳೆಪರೆಯ ಸೂಸುಗೆ : ಕೆಲವೇಳೆ ಅಳ್ಳೆಪರೆಯುರಿತದಿಂದಲೋ ಹರಿಯದೇ ರಕ್ತಗಟ್ಟುವುದರಿಂದಲೋ (ಕಂಜೆಷನ್), ಅಂಗೋಡೆಯ, ಒಳಾಂಗದ ಅಳ್ಳೆಪರೆಗಳ ನಡುವಣ ಪೊಳ್ಳಿನಲ್ಲಿ ವಿಪರೀತ ಪ್ರಮಾಣಗಳ ದ್ರವ ಸೇರುವುದುಂಟು. ಇದೇ ಅಳ್ಳೆಪರೆಯ ಸೂಸುಗೆ (ಎಫ್ಯೂಷನ್). ಒಣಕಲ ಅಳ್ಳೆಪರೆಯುರಿತ ಆಗಿದ್ದವರಲ್ಲಿ ದ್ರವ ಹೀಗೆ ಸೇರಿಕೊಂಡರೆ, ಉಸಿರಾಡಿದಾಗ ಕೆಮ್ಮಿದಾಗ ಬರುವ ಪಕ್ಕೆ ಚಲಕು ಇಲ್ಲವಾಗುತ್ತದೆ. ರೋಗಿ ಒಳ್ಳೆಯದಾಯಿತೆಂದು ತಪ್ಪಾಗಿ ತಿಳಿಯುವನು. ಈ ದ್ರವ ಒಂದೆರಡು ಲೀಟರುಗಳಷ್ಟಕ್ಕೆ ಏರಿದಾಗ, ಫುಪ್ಪುಸವನ್ನು ಹಿಗ್ಗಲು ಬಿಡದೆ ಉಸಿರಾಟಕ್ಕೆ ಆತಂಕವಾಗಬಹುದು. ದ್ರವ ಹೆಚ್ಚಿದಂತೆಲ್ಲ ಉಸಿರಾಟಕ್ಕೆ ಆತಂಕವಾಗದು. ಆದರೆ ಬಲು ಬೇಗನೆ ತುಸುವೇ ದ್ರವ ಸೇರಿದರೂ ಉಸಿರು ಕಟ್ಟಿದಂತಾಗುತ್ತದೆ. ನಿಧಾನವಾಗಿ ಬಹಳ ಸೇರಿಕೊಂಡರೂ ಅಷ್ಟು ಅಡ್ಡಿಯಾಗದಿರಬಹುದು. ರೋಗಿ ಅದಕ್ಕೆ ಒಗ್ಗಿಕೊಳ್ಳುವನು. ದ್ರವ ಸೇರಿಕೊಂಡಂತೆಲ್ಲ ಮೆತ್ತನೆಯ ಫುಪ್ಪುಸ ಮುದುರಿಕೊಳ್ಳುವುದು. ಗುಂಡಿಗೆ, ಮಧ್ಯ ತಡಿಕೆಯನ್ನು ಎದೆಯ ಇನ್ನೊಂದು ಪಕ್ಕಕ್ಕೆ ಈ ದ್ರವ ತಳ್ಳುತ್ತದೆ. ಎಲ್ಲೋ ತುಸುವೇ ದ್ರವ ಸೇರಿಕೊಂಡಿದ್ದರೆ, ಎಕ್ಸ್-ಕಿರಣಗಳ ಪರೀಕ್ಷೆಯಾಗದೆ ಕಂಡುಹಿಡಿಯುವುದು ಕಷ್ಟವಾಗಬಹುದು. ದ್ರವ ತಿಳಿಯಾಗಿ ತಿಳಿ ಹಳದಿಯಾಗಿರುವುದು ಸಾಮಾನ್ಯವಾದರೂ, ಮಬ್ಬಿನಂತೆ ಮಂದವಾಗಿದ್ದು ಕೆಲವೇಳೆ ರಕ್ತದ ತೊಟ್ಟುಗಳೂ ಕಲೆತಿರಬಹುದು. ಒಳಸೇರಿದ ದ್ರವವನ್ನು ಸೂಜಿ ಹಾಕಿ ಹೊರಡಿಸುವ ಸಂದರ್ಭಗಳು ಕೆಲವಿವೆ; ಗುಂಡಿಗೆ, ಫುಪ್ಪುಸಗಳ ಮೇಲೆ ವಿಪರೀತ ಒತ್ತಡ ಬಿದ್ದು ಬದುಕಿಗೇ ತೊಂದರೆ; ದ್ರವ ತಾನಾಗಿ ಬಲು ನಿಧಾನವಾಗಿ ತಗ್ಗುತ್ತಿರುವುದು; ಎದೆಗೂಡಿನ ಎರಡು ಪಕ್ಕಗಳಲ್ಲೂ ದ್ರವ ಸೇರಿಕೆ ಅಪರೂಪ. ದ್ರವ ತೆಗೆದು ಹಾಕಿದ ಮೇಲೆ ಫುಪ್ಪುಸಗಳು ಮತ್ತೆ ಎಂದಿನಂತೆ ಇರಿಸಲು ನೆರವಾಗುವಂತೆ ಕೆಲವು ಅಂಗಸಾಧನೆಗಳನ್ನು ಮಾಡಬೇಕಾಗುತ್ತದೆ.
ಫುಪ್ಪುಸಕ್ಕೆ ಹತ್ತಿರುವ ಕ್ಷಯರೋಗ ಅಳ್ಳೆಪರೆಯ ಪೊಳ್ಳಿಗೂ ಹಬ್ಬಿಕೊಳ್ಳುವುದೇ ಅಳ್ಳೆಪರೆಯ ಸೂಸುಗೆಯ ಸಾಮಾನ್ಯ ಕಾರಣ. ಸಾಮಾನ್ಯವಾಗಿ, ಅಂಥ ದ್ರವ ತಿಳಿಯಾಗಿ ತಿಳಿಹಳದಿ ಬಣ್ಣಕ್ಕಿದ್ದು ಸಣ್ಣ ಹಾಲ್ರಸಕಣಗಳೂ (ಲಿಂಫೋಸೈಟ್ಸ್) ಒಂದಿಷ್ಟು ಕೂಡಿರುತ್ತದೆ. ಇದರಲ್ಲಿ ಕ್ಷಯದ ದಂಡಾಣುಜೀವಿಗಳು ಇದ್ದರೂ ಇರಬಹುದು. ಆದರೆ ಕ್ಷಯರೋಗವನ್ನು ಖಚಿತಪಡಿಸಲೂ ಕೆಲವೇಳೆ ಅಳ್ಳೆಪರೆಯ ಒಂದು ಚೂರನ್ನು ಕೊಯ್ದು ಹೊರತೆಗೆದು ಇಲ್ಲವೆ ಅಡಿನೊಸಿನ್ ಃ-ಅಮೀನೇಸ್ ಕಿಣ್ವದ ಏರಿಕೆಯಿರುವುದನ್ನು ಪರೀಕ್ಷಿಸಬೇಕಾಗುತ್ತದೆ. ಎಷ್ಟೋ ವೇಳೆ ಇದರೊಂದಿಗಿನ ಫುಪ್ಪುಸದ ಕ್ಷಯ ರೋಗವನ್ನು ಎಂದಿನ ವಿಧಾನಗಳಿಂದ ಕಂಡುಕೊಳ್ಳಬಹುದು. ಫುಪ್ಪುಸದ ಕ್ಷಯಕ್ಕೆ ರಾಸಾಯನಿಕ ರೋಗ ಚಿಕಿತ್ಸೆಯ ಮದ್ದುಗಳಿಂದ ಚಿಕಿತ್ಸೆಯಾದರೆ ಅಳ್ಳೆಪರೆಯ ಸೂಸುಗೆಯ ಚಿಕಿತ್ಸೆಯೂ ನೆರವೇರಿದಂತೆ. ಕ್ಷಯ ರೋಧಕಗಳ ಜೊತೆ ಕಾರ್ಟಿಸೊನ್ ಕೊಟ್ಟು ದ್ರವದ ಒಳಹೀರಿಕೆಯನ್ನು ಪ್ರಚೋದಿಸಬಹುದು ಮತ್ತು ಪರೆಯ ನಾರುಗಟ್ಟಿಕೆಯನ್ನು ಪ್ರತಿಬಂಧಿಸಬಹುದು.
ಫುಪ್ಪುಸುರಿತವೂ (ನ್ಯುಮೋನಿಯ) ಸೇರಿದಂತೆ ಫುಪ್ಪುಸದಲ್ಲಿ ಏಳುವ ಕೂರಾದ (ಅಕ್ಯೂಟ್) ಉರಿತದ ರೋಗಗಳಲ್ಲೂ ಕೆಲವೇಳೆ ಅಳ್ಳೆಪರೆ ನೋವು ಕಾಣಿಸಿಕೊಂಡು, ಒಂದೊಂದು ಬಾರಿ ಅಳ್ಳೆಪರೆಯ ಪೊಳ್ಳಿನಲ್ಲಿ ದ್ರವ ಕೂಡಲೂ ಬಹುದು. ದ್ರವ ಹಾಗೆ ಇಂಗದೆ, ರಕ್ತ, ರಸಿಕೆ, ಕೀವು, ತುಂಬಿ ಗಡುಸುಗಟ್ಟಿದ್ದರೆ, ಸೂಜಿ ಇಲ್ಲವೆ ಕೊಳವೆ ತೂರಿಸಿ ಒಸರಿಕೆಯನ್ನು ತೆಗೆಯಬೇಕಾಗುತ್ತದೆ.
ಗುಂಡಿಗೆಗೆ ಏನಾದರೂ ರೋಗ ಹತ್ತಿರುವಾಗ ಸಾಕಷ್ಟು ಬಲವಾಗಿ ಬಡಿದುಕೊಳ್ಳದಾಗ, ಫುಪ್ಪುಸಗಳಲ್ಲಿ ರಕ್ತದ ಹರಿವು ಕುಂದಿದರೆ, ರಕ್ತಗಟ್ಟಿ ಊದಿದ ಫುಪ್ಪುಸಗಳಿಂದ ಅಳ್ಳೆಪರೆಯ ಪೊಳ್ಳಿನೊಳಕ್ಕೆ ದ್ರವ ಜಿನುಗುತ್ತದೆ. ಹಲವೇಳೆ ಇದಕ್ಕಾಗಿ ಸೋಡಿಯಂ ಸೇವನೆಯನ್ನು ತಗ್ಗಿಸಿ ವಿಶ್ರಾಂತಿಯೊಂದಿಗೆ ಮೂತ್ರಕಾರಿ ಮದ್ದುಗಳನ್ನು ಕೊಡಬೇಕಾಗುವುದು. ಎದೆಗೂಡಿನ ಒಳಗೀವು : ಒಳಗೀವು (ಎಂಪಯೀಮ) ಎನಿಸಿಕೊಳ್ಳುವ ಅಳ್ಳೆಪರೆಯ ಪೊಳ್ಳಿನಲ್ಲಿ ಸೇರಿರುವ ಕೀವಿಗೆ ಸೋಂಕು ಮಿತಿಮೀರಿ ಬಹುಕಾಲ ಇರುವುದೇ ಕಾರಣ. ಎಲ್ಲ ವಯಸ್ಸುಗಳಲ್ಲೂ ಹೀಗಾಗುವುದಾದರೂ ಎಳೆಯ ಮಕ್ಕಳಲ್ಲಿ ಇದು ಸಾಮಾನ್ಯ. ಕೀವು ಹೆಚ್ಚಿದಂತೆಲ್ಲ ಫುಪ್ಪುಸ ಮತ್ತು ಗುಂಡಿಗೆಯನ್ನು ಒತ್ತಿ ಇನ್ನೊಂದು ಪಕ್ಕಕ್ಕೆ ತಳ್ಳಿ ಅವುಗಳ ಕೆಲಸಗಳಿಗೆ ಅಡ್ಡಿಬರುವುದು. ಫುಪ್ಪುಸದ ಹಾಲೆಗಳ (ಲೋಬ್ಸ್) ನಡುವೆ, ಫುಪ್ಪುಸ ವಪೆಗಳ ನಡುವೆ ಕೆಲವೇಳೆ ಕೀವು ಸೇರುತ್ತವೆ. ಎದೆಯಲ್ಲಿ ಒಳಗೀವು ಸೇರಿದಾಗ, ಆ ಪಕ್ಕದಲ್ಲಿ ನೋವು ಒಣಕೆಮ್ಮು, ಏದುಸಿರು, ಒಣಚರ್ಮ, ಅಗಾಗ್ಗೆ ಕಡುಬೆವರಿಕೆ, ನಡುಕ, ಏರಿಳಿವ ಜ್ವರ, ಬರಬಹುದು. ದಪ್ಪ ಸೂಜಿ ಹಾಕಿದಾಗ ಕೀವು ಇರುವುದು ಗೊತ್ತಾಗುತ್ತದೆ.
ಇದರ ಚಿಕಿತ್ಸೆ ಕಷ್ಟ. ಆಗಾಗ್ಗೆ ಎದೆಗೂಡಿಗೆ ಸೂಜಿಯನ್ನು ಇಲ್ಲವೆ ಕೊಳವೆಯನ್ನು ತೂರಿಸಿ ಕೆಲವೊಮ್ಮೆ ಶಸ್ತ್ರ ಕ್ರಿಯೆಯಿಂದಲೋ ಕೀವನ್ನು ಹೊರತೆಗೆಯುತ್ತಿರಬೇಕು. ಸೋಂಕಿಗೆ ಕಾರಣವಾದವುಗಳ ಎದುರಾಗಿ ಏಕಾಣುಜೀವಿಗಳ ವಿರೋಧಕ ಮದ್ದುಗಳನ್ನು ಆರಿಸಿಕೊಂಡು ಕೊಡಲು, ಕೀವಲ್ಲಿರುವ ಏಕಾಣುಜೀವಿಗಳನ್ನು ಖಚಿತವಾಗಿ ಗುರುತಿಸುವ ಪರೀಕ್ಷೆ ಆಗಬೇಕು. ಕೆಲವೇಳೆ ಸೋಂಕು ಹತ್ತಿ ಕೆಟ್ಟಿರುವ ಅಳ್ಳೆಪರೆಯ ದೊಡ್ಡ ಚೂರುಗಳನ್ನೇ ಶಸ್ತ್ರಕ್ರಿಯೆಯಿಂದ ಕಿತ್ತೆಸೆಯಬೇಕಾಗುತ್ತದೆ.
ಚಿಕಿತ್ಸೆ ಮುಗಿದ ಮೇಲೂ, ಕೆಲವೇಳೆ ಫುಪ್ಪುಸ ಎಂದಿನ ಆಕಾರ ಗಾತ್ರಗಳಿಗೆ ಹಿಗ್ಗದು. ಇದಕ್ಕಾಗಿ ಬಲವಂತವಾಗಿ ಉಸಿರನ್ನು ಒತ್ತಿ ಹೊರಬಿಡುವುದರಿಂದ ಅನುಕೂಲ. ರೋಗದ ಎಳಸಿನಲ್ಲೇ ಒಂದು ಸೀಸೆಯಿಂದ ಇನ್ನೊಂದಕ್ಕೆ ನೀರನ್ನು ಗಾಜು ಕೊಳವೆ ಮೂಲಕ ಬಾಯಿಂದ ಊದುತ್ತಿದ್ದರೆ ಅನುಕೂಲವಾಗಿ ಕುಸಿದ ಫುಪ್ಪುಸ ಹೀಚುವುದು.
ಅಳ್ಳೆಪರೆಯ ಗಂತಿಗಳು
[ಬದಲಾಯಿಸಿ]ಅಳ್ಳೆಪರೆಯ ಗಂತಿಗಳು ; ಅಳ್ಳೆಪರೆಯಲ್ಲಿ ಏಳುವ ಗಂತಿಗಳು (ಟ್ಯೂಮರ್ಸ್) ಬಹುಪಾಲು ನಡುಪರೆಗಂತಿಗಳು (ಮೀಸೋ ತೀಲಿಯೋಮಾಸ್[೧]). ಇವು ವಿಶೇಷವಾಗಿ, ವಿಷಮದವೋ (ಮೆಲಿಗ್ನೆಂಟ್) ಆಗಿರಬಹುದು; ಒಂದೆಡೆಯಲ್ಲಿ ಮಿತಿಗೊಂಡಿರಬಹುದು; ಅಳ್ಳೆಪರೆಯ ತುಂಬ ಹರಡಿರಬಹುದು. ಮಿನಿದರ್ಶಕದಡಿಯ (ಮೈಕ್ರೋಸ್ಕೋಪ್) ಪರೀಕ್ಷೆ ಮಾಡದೆ ರೋಗನಿದಾನ ಕಷ್ಟ. ಆದ್ದರಿಂದ ಶಸ್ತ್ರಕ್ರಿಯೆಯ ಜೀವುಂಡಿಗೆ(ಬಯಾಪ್ಸಿ) ಮಾಡಬೇಕಾಗುತ್ತದೆ; ಅಂದರೆ, ಒಂದು ಚೂರನ್ನು ಕೊಯ್ದು ತೆಗೆದು ಪರೀಕ್ಷಿಸಬೇಕು.
ಫುಪ್ಪುಸದಲ್ಲಿ ಏಳುವ (ಪಂಗುಸಿರ್ನಾಳಜನಿಕ : ಬ್ರಾಂಕೊಜನಿಕ್) ಏಡಿಗಂತಿ (ಕ್ಯಾನ್ಸರ್) ಅಳ್ಳೆಪರೆಗೂ ಹತ್ತುವಂತೆ ಸುತ್ತಂಚಿಗೂ (ಪೆರಿಫೆರಿ) ಹಬ್ಬಿಕೊಂಡು ಸೋಂಕಿನ ಲಕ್ಷಣಗಳನ್ನು ತೋರುವುದು. ಮೈಯಲ್ಲಿ ಇನ್ನೆಲ್ಲೋ ಎದ್ದಿರುವ ಗಂತಿಗಳ ಚೂರುಗಳು ರೋಗ ಕೈಮೀರಿದ ಕೊನೆಗಾಲದಲ್ಲಿ ಮೈಯೆಲ್ಲೆಲ್ಲ ಹರಡುವಂತೆ ಅಳ್ಳೆಪರೆಯ ಮೇಲೂ ವಿಷಮ ಗಂತಿಯ ಒಳನಾಟುಗಳು (ಇಂಪ್ಲಾಂಟ್) ನೆಲೆಸುವುದು ಸಾಮಾನ್ಯ. ಆಗ ಅಳ್ಳೆಪರೆಯ ಸೂಸುಗೆಯ ದ್ರವ ಸಾಕಷ್ಟು ಕೂಡಿ ರಕ್ತಗೂಡಿರಲೂಬಹುದು. ಎಕ್ಸ್-ಕಿರಣ ಮತ್ತು ಸಿಟಿಸ್ಕ್ಯಾನ್ ಪರೀಕ್ಷೆ, ಕೆಲವೇಳೆ ಜೀವುಂಡಿಗೆಗಳಿಂದ ರೋಗ ಖಚಿತವಾಗುತ್ತದೆ. ಚಿಕಿತ್ಸೆಯಂತೂ ಕಷ್ಟವೇ. ಆದರೂ ಎಕ್ಸ್-ಕಿರಣಗಳ ಇಲ್ಲವೇ ವಿಕಿರಣಶಕ್ತ ಸಮಸ್ಥಾನಿಗಳ (ಐಸೊಟೋಪ್ಸ್) ವಿಕಿರಣತೆ, ಗಂತಿಯಣಗಿಕ ಮದ್ದುಗಳ ಕೊಡುಗೆಗಳಿಂದ ಒಂದಷ್ಟು ಕಾಲ ರೋಗದ ಲಕ್ಷಣಗಳನ್ನು ಶಮನ ಮಾಡಬಹುದು. ಮೇದರಸತುಂಬೆದೆ : ಕರುಳಿನಿಂದ ಎದೆಗೂಡಿನ ಮೇಲಿನ ದೊಡ್ಡ ಸಿರಗಳಿಗೆ ಮೇದರಸವನ್ನು (ಕೈಲ್) ಸಾಗಿಕ ಹಾಲ್ರಸದ ಕೊಳವೆಯಾದ ಎದೆಗೂಡಿನ ಸಾಗುನಾಳ (ತೊರ್ಯಾಸಿಕ್ ಡಕ್ಟ್) ಒಡೆದುಕೊಂಡರೆ ಅಳ್ಳೆಪರೆಯ ಪೊಳ್ಳಿನೊಳಕ್ಕೆ ಮೇದರಸ ಸೋರಿ ತುಂಬಹುದು. ಹೀಗಾಗುವುದೇ ಮೇದರಸತುಂಬೆದೆ (ಕೈಲೋತೊರ್ಯಾಕ್ಸ್). ಹಾಲಂತಿರುವ ಕೊಬ್ಬುಗೂಡಿದ ಈ ರಸವನ್ನು ಚೆನ್ನಾಗಿ ಗುರುತಿಸಬಹುದು. ಅಲ್ಲದೆ ಮೇದರಸತುಂಬೆದೆಯ ಬಲು ಸಾಮಾನ್ಯ ಕಾರಣಗಳು ಎರಡು: ಪೆಟ್ಟು ಗಾಯಗಳು; ಎಲ್ಲೋ ಇರುವ ಗ್ರಂಥಿ ಇನ್ನೆಲ್ಲಿಗೋ ಹರಡುವ ಗೂಳೆಕದ ವಿಷಮತೆ (ಮೆಟಸ್ಟಾಟಿಕ್ ಮೆಲಿಗ್ನೆನ್ನಿ). ರಕ್ತೆದೆಗೂಡು : ಎದೆಗೂಡಿನ ಗೋಡೆಯಲ್ಲಿನ ದೊಡ್ಡ ರಕ್ತನಾಳಗಳಿಗೆ ಪೆಟ್ಟಾಗುವ ಅಪಾಯಕರ ಗಾಯಗಳಿಂದ ಅಳ್ಳೆಪೊರೆಯ ಪೊಳ್ಳಿನಲ್ಲಿ ರಕ್ತ ಸೇರಿದ್ದಕ್ಕೆ ರಕ್ತೆದೆಗೂಡು (ಹಿಮೋತೊರ್ಯಾಕ್ಸ್) ಎಂದಿದೆ. ಗಾಳಿದುಂಬೆದೆಯೊಂದಿಗೆ (ನ್ಯೂಮೋತೊರ್ಯಾಕ್ಸಂ ಆಗಿರುವ, ಒಳಾಂಗದ, ಅಂಗೊಡೆಯ ಅಳ್ಳೆಪರೆಗಳ ನಡುವಣ ಅಂಟಿಗೆಗಳ ಒಡೆಬಿರಿತದಿಂದಲೂ ಕೆಲವೇಳೆ ಗೊತ್ತಾಗುವ ಮೊದಲೇ ತೀವ್ರತೆಗೇರುವ ಮೂಲಗಾಣದ (ಅಕ್ಕಲ್ಟ್) ರಕ್ತ ಸುರಿಯಬಹುದು. ಹೀಗೆ ಒಳಗೇ ರಕ್ತ ಸುರಿದೂ ಸುರಿದು ರೋಗಿ ಅಪಾರ ರಕ್ತವನ್ನು ಕಳೆದುಕೊಳ್ಳಬಹುದು. ಎದೆಗೂಡಿನಲ್ಲಿನ ಯಾವುದಾದರೂ ರಕ್ತನಾಳ ಒಂದೆಡೆ ಬುಡ್ಡೆಯಂತೆ ಹಿಗ್ಗಿರುವ ಅಗಲುಬ್ಬು (ಅನ್ಯೂರಿಸಂ) ಒಡೆದುಕೊಂಡರೆ ಎದೆಗೂಡಿನ ತುಂಬ ಕೂಡಲೇ ರಕ್ತ ಸುರಿದು ರೋಗಿ ಸಾಯಬಹುದು. ಸೂಜಿ ಹಾಕುವುದರಿಂದಲೂ ಎಕ್ಸ್-ಕಿರಣ ಪರೀಕ್ಷೆಯಿಂದಲೂ ರಕ್ತೆದೆಗೂಡನ್ನು ಪತ್ತೆ ಹಚ್ಚಬಹುದು. ಇದನ್ನು ಗುಣಪಡಿಸಲು ತೆರೆದಿಡುವ ಶಸ್ತ್ರಕ್ರಿಯೆ ಮಾಡಬೇಕಾಗಬಹುದು.[೨]
ತಂತೆದೆಗೂಡು
[ಬದಲಾಯಿಸಿ]ತಂತೆದೆಗೂಡು : ರಕ್ತವನ್ನು ಹೆಪ್ಪುಗಟ್ಟಿಸುವ ವಸ್ತುವಾದ ತಂತುಕ (ಫೈಬ್ರಿನ್) ಅಳ್ಳೆಪರೆ ಪೊಳ್ಳಿನ ದ್ರವದಲ್ಲಿ ಅಪಾರವಾಗಿರಬಹುದು. ಅಳ್ಳೆಪರೆಯ ಮೇಲೆ ತಂತುಕ ಅಂಟಿಕೊಂಡು ಕೊನೆಗೆ ಕಲೆಗಟ್ಟಿದ (ಸ್ಕಾರ್) ಊತಕವಾಗಿ ಗಡುಸುಗಟ್ಟಬಹುದು. ಇದೇ ತಂತೆದೆಗೂಡು (ಫೈಬ್ರೊತೊರ್ಯಾಕ್ಸ್) ಕೆಲವು ವೇಳೆ ಫುಪ್ಪುಸದ ಮೇಲ್ತುದಿಯಂಥ ಒಂದು ಭಾಗವನ್ನೊ ಪೂರ್ತಿಯನ್ನೊ ಒಂದು ದಪ್ಪನೆಯ ಹಿಗ್ಗದ ಹೊದಿಕೆಯಲ್ಲಿ ಸುತ್ತುಗಟ್ಟುವಷ್ಟಾಗಿ, ಫುಪ್ಪುಸ ಹಿಗ್ಗಲು ಬಿಡದೆ ಉಸಿರಾಟಕ್ಕೆ ಆತಂಕಿಸಬಹುದು. ಅಳ್ಳೆಪರೆ ಗಡಸುಗಟ್ಟಿರುವೆಡೆ ಫುಪ್ಪುಸ ಮುದುರಿಕೊಂಡು ಎದೆಯಲ್ಲಿ ವಿಕಾರ ಕಾಣುವುದು; ಇದು ಹೆಚ್ಚಿದಾಗ ಬೆನ್ನುಕಂಬವೂ ಬಾಗಬಹುದು. ಎಲ್ಲರಲ್ಲೂ ಇದನ್ನು ಸರಿಪಡಿಸುವುದಾಗದು. ಆರಿಸಿದ ಕೆಲವು ರೋಗಿಗಳಲ್ಲಿ ಶಸ್ತ್ರಕ್ರಿಯೆಯಿಂದ ಇದನ್ನು ತೆಗೆದುಹಾಕಿದರೆ ಉಸಿರಾಟ ತುಸು ಸರಾಗ ಆಗಬಹುದು. ಅಲ್ಲಲ್ಲಿ ಅಷ್ಟಷ್ಟು ತಂತುಕ ಅಂಟಿರುವುದು ಸಾಮಾನ್ಯವಾದರೂ ಲೆಕ್ಕಕ್ಕಿಲ್ಲ. ಇಂಥವು ಕ್ಷಯ ಅಂಟಿ ವಾಸಿಯಾದ ಕಲೆಗಳು. (ನೋಡಿ- ಫುಪ್ಫುಸದ-ರೋಗಗಳು) (ನೋಡಿ- ಗಾಳಿತುಂಬಿದೆದೆ) (ನೋಡಿ- ಉಸಿರಾಟದ-ಮಂಡಲದ-ರೋಗಗಳು) (ಕೆ.ಜಿ.ವೈ.)