ಆಸರೆಕಟ್ಟು (ಸರಕಟ್ಟು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಸರೆಕಟ್ಟು (ಸರಕಟ್ಟು)[ಬದಲಾಯಿಸಿ]

ಕಟ್ಟಡದ ಅಂಗಗಳನ್ನು ಒಂದೇ ಸಮತಳದಲ್ಲಿ ಜೋಡಿಸಿ ಚೌಕಟ್ಟು ಭದ್ರವಾಗುವ ಹಾಗೆ ಮಾಡಿ ಕೊನೆಗಳಲ್ಲಿ ಸೇರಿಸಿ ಆಸರೆಕಟ್ಟನ್ನು (ಟ್ರಸ್) ತಯಾರಿಸುತ್ತಾರೆ. ಇದನ್ನು ಮನೆಗಳ ಮಾಡುಗಳಲ್ಲೂ ಸೇತುವೆಗಳಲ್ಲೂ ಉಪಯೋಗಿಸುವುದೇ ಹೆಚ್ಚು. ಗಟ್ಟಿಯಾದ ತಗಡುಳ್ಳ (ವೆಬ್) ಉಕ್ಕಿನ ಗರ್ಡರಿಗಿಂತ ಭಾರ ಬಹಳ ಹೆಚ್ಚಾಗದೆ ಇನ್ನೂ ಆಳವಾಗಿ ಹೆಚ್ಚಿನ ಭಾರವನ್ನು ಹೊರುವ ಹಾಗೆ ಆಸರೆಕಟ್ಟನ್ನು ತಯಾರಿಸಬಹುದು.

ಹಿಂದಿನ ಕಾಲದಲ್ಲಿ ಆಸರೆಕಟ್ಟುಗಳನ್ನು ಮರದಿಂದ ಮಾಡುತ್ತಿದ್ದರು. ಮೂರು ಮರದ ತೊಲೆಗಳನ್ನು ತ್ರಿಕೋನಾಕಾರವಾಗಿ ಜೋಡಿಸಿ ತೊಲೆಗಳು ಸೇರುವ ಕಡೆ ಮೊಳೆಗಳನ್ನೋ ಬೋಲ್ಟುಗಳನ್ನೂೀ ಹೊಡೆದರೆ ಸರಳವಾದ ಆಸರೆಕಟ್ಟು ಬರುತ್ತದೆ.

ಚಿತ್ರ-1[ಬದಲಾಯಿಸಿ]

ಈ ಚೌಕಟ್ಟಿನ ಮೇಲೆ ಭಾರ ಬಿದ್ದಾಗ ಎರಡು ತೀರುಗಳ ಸಂಧಿಗಳ (ಜಾಯಿಂಟ್ಸ್) ಸಾಪೇಕ್ಷ (ರಿಲೆಟಿವ್) ಸ್ಥಾನಗಳಲ್ಲಿ ಬದಲಾವಣೆಯಾಗುವುದಿಲ್ಲ. ಮಾಡುಗಳ ಅಥವಾ ಸೇತುವೆಯ ಕಣ್ಣುಗಳ (ಸ್ಟ್ಯಾನ್ಸ್) ಅಗಲ ಹೆಚ್ಚಿದಾಗ ಇಂಥ ಹಲವು ತ್ರಿಕೋನಾಕಾರಗಳನ್ನು ಒಂದು ನಿಯಮಕ್ಕೆ ಅನುಸಾರವಾಗಿ ಒಟ್ಟುಗೂಡಿಸಿ ಆಸರೆಕಟ್ಟನ್ನು ತಯಾರಿಸುತ್ತಾರೆ.ಮನೆಗಳ ಮಾಡುಗಳಲ್ಲಿ 2.43-6.07 ಮೀ ಅಗಲದ ಅಂಕಣಗಳಿಗೆ ಕಪ್ಲ್ ಕ್ಲೋಸ್ ಮತ್ತು ಕಾಲರ್ ಬೀಮ್ ಸರಕಟ್ಟುಗಳನ್ನು ಮರದಿಂದ ಮಾಡಿ ಉಪಯೋಗಿಸುತ್ತಿದ್ದರು. 7.58 ಮೀ ಅಂಕಣಗಳಿಗೆ ಕಿಂಗ್ ಪೋಸ್ಟ್. 10.62 ಮೀ ಗೆ ಕ್ವೀನ್ ಪೋಸ್ಟ್ ಮತ್ತು 50 ಗೆ ಹ್ಯಾಮರ್ ಬೀಮ್ ಆಸರೆಕಟ್ಟುಗಳು ಬಂದುವು. ಆ ಮೇಲೆ ಮರದಿಂದಲೇ ಮಾಡಿದ ಹಗುರವಾದ ತಡಿಕೆಯ (ಲ್ಯಾಟಿಸ್) ನಮೂನೆ ಬಂತು. ಮುಂದಿನ ಹೆಜ್ಜೆಯಲ್ಲಿ ಒಂದೇ ಸರಕಟ್ಟಿನಲ್ಲಿ ಒತ್ತಡಕ್ಕೆ (ಕಂಪ್ರೆಷನ್) ಸಿಕ್ಕಿದ ಭಾಗಗಳನ್ನು ಮರದಿಂದಲೂ ಎಳೆತಕ್ಕೆ (ಟೆನಷನ್) ಸಿಕ್ಕಿದವನ್ನು ಕಬ್ಬಿಣದಿಂದಲೂ ಮಾಡಿ ಅಗಲವಾದ ಕಣ್ಣುಗಳಿಗೆ ಉಪಯೋಗಿಸಿದರು. ಅಗಲವಾದ ಕಣ್ಣಿನ ರೈಲು ಸೇತುವೆಗಳು ಬಂದಾಗಿನಿಂದ ಸರಕಟ್ಟುಗಳಿಗೆ ಮೊದಲು ತಾಂಡವಾಳವನ್ನೂ, (ಕ್ಯಾಸ್ಟ್ ಐರನ್) ಆಮೇಲೆ ಮೆದು ಕಬ್ಬಿಣವನ್ನೂ (ರಾಟ್ ಐರನ್) ಈಚೆಗೆ ಉಕ್ಕನ್ನೂ ಉಪಯೋಗಿಸುತ್ತಿದ್ದಾರೆ. ಮಿತಿಮೀರಿದ ಭಾರದಿಂದಲೂ ಉಷ್ಣತೆಯ (ಟೆಂಪರೇಚರ್) ಬದಲಾವಣೆಯಿಂದಲೂ ಆಗಬಹುದಾದ ಚಲನೆಗೆ ಅವಕಾಶ ಮಾಡಿಕೊಡಲು ಒಂದು ಕೊನೆಯನ್ನು ರೋಲರುಗಳ ಮೇಲೆ ಇಟ್ಟಿರುತ್ತಾರೆ.

ಚಿತ್ರ-2[ಬದಲಾಯಿಸಿ]

ಒಂದು ಆಸರೆಕಟ್ಟಿನ ಸಂವಿಧಾನದಲ್ಲಿ ನಾಲ್ಕು ಹಂತಗಳಿವೆ. 1. ಚೌಕಟ್ಟು ಹೊರಬೇಕಾದ ಭಾರಗಳ ಲೆಕ್ಕಾಚಾರ. 2. ತೊಲೆಗಳು ಕಂಬಗಳು ಮತ್ತು ದೂಲಗಳ ಸಂವಿಧಾನ ಮತ್ತು ಜೋಡಣೆ. 3. ಮೇಲೆ ಭಾರ ಬಿದ್ದಾಗ ಅದರ ಭಾಗಗಳಲ್ಲಿ ಉತ್ಪನ್ನವಾಗುವ ತ್ರಾಸಗಳು. 4. ಈ ತ್ರಾಸಗಳನ್ನು ಸುರಕ್ಷಿತವಾಗಿ ತಡೆಯುವ ಹಾಗೆ ಭಾಗಗಳ ಜೋಡಣೆ. ಆಸರೆಕಟ್ಟಿನ ಮೇಲೆ ಬರುವ ಭಾರಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು : 1. ಅದರ ಸ್ಥಿರಭಾಗ (ಡೆಡ್-ಲೋಡ್). ಇದು ಲಂಬವಾಗಿ ಕೆಳಕ್ಕೆ ಎಳೆಯುತ್ತದೆ. 2. ಸೇತುವೆಯ ಮೇಲೆ ಓಡಾಡುವ ಕಾರುಗಳು, ರೈಲುಗಾಡಿಗಳು, ಮಂಜು ಮತ್ತು ಗಾಳಿಯ ಒತ್ತಡ (ಲೈವ್ ಲೋಡ್). ಈ ಭಾರದ ಆಘಾತ ಸೇತುವೆಯ ಮೇಲೆ ವಿಶೇಷವಾಗಿದೆ. ದೊಡ್ಡ ಆಸರೆಕಟ್ಟುಗಳು ಒಂದೇ ಸಮತಳದಲ್ಲಿ (ಪ್ಲೇನ್) ಇರಬಹುದು. ಇಲ್ಲವೆ ಎರಡು ಸಮತಲದಲ್ಲಿರಬಹುದು. ಆಕಾರದಲ್ಲಿ ಎರಡು ಉಕ್ಕಿನ ಕೋನಗಳಿಂದ ಮಾಡಿದ ಒಂದು ಸಮತಳದ ಆಸರೆಕಟ್ಟುಗಳನ್ನು ಕಾರ್ಖಾನೆಗಳು ಮತ್ತು ಯಂತ್ರಾಗಾರಗಳ ಮಾಡುಗಳಲ್ಲಿ ಉಪಯೋಗಿಸುತ್ತಾರೆ. ಅಥವಾ ಆಕಾರದಲ್ಲಿ ಎರಡು ಇಲ್ಲವೆ ನಾಲ್ಕು ಅಸಮವಾದ ಕೋನಗಳಿಂದ ಮಾಡಿದ ಎರಡು ಸಮತಳಗಳ ಆಸರೆಕಟ್ಟುಗಳನ್ನು ಅಗಲವಾದ ಸೇತುವೆಗಳಲ್ಲಿ ಉಪಯೋಗಿಸುತ್ತಾರೆ.

ಚಿತ್ರ-3[ಬದಲಾಯಿಸಿ]

ದೊಡ್ಡ ಸೇತುವೆಯ ಸಂವಿಧಾನದಲ್ಲಿ ಹೊಳೆಯ ತಳದ ಮತ್ತು ತಳಪಾಯದ ನಿಷ್ಕøಷ್ಟವಾದ ತಿಳಿವಳಿಕೆ ಅವಶ್ಯಕ. ಆಗ ಸೇತುವೆಯ ಕಣ್ಣಿನ ಅಗಲ ಮತ್ತು ನಮೂನೆಯನ್ನು ನಿರ್ಧರಿಸಬಹುದು. ರಸ್ತೆಗಳ ಸೇತುವೆಗಳ ಮೇಲೆ ಹೋಗುವ ಟ್ರಕ್ಕುಗಳ ಮತ್ತು ಟ್ರಾಕ್ಟರುಗಳ ಭಾರ ಈಚೆಗೆ ಬಹಳ ಹೆಚ್ಚಾಗುತ್ತಿದೆ. ಸೇತುವೆಯ ಭಾರದಲ್ಲಿ ಆಸರೆಕಟ್ಟು, ರಸ್ತೆ, ನೀರಿನ ಕೊಳಾಯಿಗಳು ಮತ್ತು ವಿದ್ಯುತ್ತಿನ ಸಾಲುಗಳು ಮುಖ್ಯವಾದುವು. ಸೇತುವೆಯ ಉಕ್ಕಿನ ತೂಕವನ್ನು ಸೂತ್ರಗಳನ್ನು (ಫಾರ್ಮುಲ) ನಂಬದೆ ನೇರವಾಗಿ ಲೆಕ್ಕ ಹಾಕಬೇಕು. ಹಾಗೆಯೇ ಕಟ್ಟಡಗಳಲ್ಲೂ ಮೇಲೆ ಬರುವ ಮಾಡುಗಳು, ಗೋಡೆಗಳು ಮತ್ತು ವಿಶಿಷ್ಟಭಾರಗಳನ್ನು (ಸ್ಪೆಷಲ್ ಲೋಡ್ಸ್) ಪ್ರತ್ಯೇಕವಾಗಿ ಲೆಕ್ಕ ಹಾಕಬೇಕು. ಮಂಜು ಮತ್ತು ಗಾಳಿಯ ಒತ್ತಡ ಒಂದೊಂದು ಪ್ರದೇಶಕ್ಕೂ ಬೇರೆ ಬೇರೆಯಾಗಿರುತ್ತದೆ.

ಸಾಮಾನ್ಯವಾಗಿ ಉಪಯೋಗದಲ್ಲಿರುವ ಆಸರೆಕಟ್ಟುಗಳ ನಮೂನೆಗಳನ್ನು ಚಿತ್ರಗಳಲ್ಲಿ ತೋರಿಸಿದೆ. ಇವುಗಳಲ್ಲಿ ಒಂದು ಸನ್ನಿವೇಶಕ್ಕೆ ಯಾವ ಸಂವಿಧಾನ ಹೊಂದುವುದೆಂದು ನಿರ್ಣಯಿಸಿ ಆಸರೆಕಟ್ಟಿನ ಭಾಗಗಳಲ್ಲಿ ತ್ರಾಸಗಳನ್ನು ರೇಖಾಕೃತಿಗಳ ಮೂಲಕವೂ (ಗ್ರ್ಯಾಫಿಕ್ ಸ್ಟ್ಯಾಟಿಕ್ಸ್), ಗಣಿತದ ಮೂಲಕವೂ (ಅನಲಿಟಿಕಲಿ) ಗೊತ್ತು ಮಾಡಿ, ಒಂದರೊಡನೆ ಇನ್ನೊಂದನ್ನು ಹೋಲಿಸಿ ಹೆಚ್ಚಿನ ತ್ರಾಸವನ್ನು ಸಂವಿಧಾನದಲ್ಲಿ ಉಪಯೋಗಿಸಿಕೊಳ್ಳಬೇಕು. ಉಕ್ಕಿನ ಇಲ್ಲವೇ ಪ್ರಬಲಿತ ಕಾಂಕ್ರೀಟಿನ (ರೀನ್‍ಪೋಸ್ರ್ಡ ಕಾಂಕ್ರೀಟ್) ಆಸರೆಕಟ್ಟಿನ ಮೇಲುಗಡೆಯ ತುಂಡುಗಳನ್ನು ಮೇಲಿನ ಹುರಿಯೆಂದೂ (ಅಪ್ಪರ್ ಕಾರ್ಡ್) ಕೆಳಗಿನ ತುಂಡುಗಳನ್ನು ಕೆಳಗಿನ ಹುರಿಯೆಂದೂ (ಲೋಯರ್ ಕಾರ್ಡ್) ಕರೆಯುತ್ತಾರೆ. ಇವೆರಡನ್ನೂ ಒಟ್ಟುಗೂಡಿಸುವ ಲಂಬವಾದ ಇಲ್ಲವೇ ಓರೆಯಾದ ಭಾಗಗಳನ್ನು ದಿಂಡಿನ (ವೆಬ್) ಭಾಗಗಳು ಎನ್ನುತ್ತಾರೆ. ಚೌಕಟ್ಟು ಹೊರಬೇಕಾದ ಭಾರಗಳನ್ನು ಕಾರ್ಡ್ ಮತ್ತು ವೆಬ್ಬಿನ ತುಂಡುಗಳ ಸಂಧಿಗಳ ಮೇಲೆ ಬೀಳುವ ಹಾಗೆ ಸಂವಿಧಾನ ಮಾಡಿರುತ್ತಾರೆ. ಈ ಕಾರಣದಿಂದ ಆಸರೆಕಟ್ಟಿನ ಭಾಗಗಳು ಒತ್ತಡದ (ಕಂಪ್ರೆಷನ್) ಅಥವಾ ತುಯ್ತ ತ್ರಾಸದಲ್ಲಿರುತ್ತವೆ ಬಾಗುವ (ಬೆಂಡಿಂಗ್) ತ್ರಾಸದಲ್ಲಿರುವುದಿಲ್ಲ. ಸೇತುವೆಯ ಒಂದು ಕಣ್ಣಿನಮೇಲೆ ಬೀಳುವ ಭಾರವನ್ನು ಹಿಮ ಮತ್ತು ಗಾಳಿಯ ಒತ್ತಡವನ್ನೂ ಸೇರಿಸಿ ಲೆಕ್ಕ ಹಾಕಿ ಆಸರೆಕಟ್ಟಿನ ನಕ್ಷೆಯಮೇಲೆ ಮೇಲಿನ ಹುರಿಯ ಸಂಧಿಗಳಿಗೆ ಸಂಪೂರ್ಣವಾಗಿ ಹಂಚಿ ರೇಖಾಕೃತಿಗಳಿಂದ (ಗ್ರ್ಯಾಫಿಕ್ ಸ್ಟ್ಯಾಟಿಕ್ಸ್) ಆಸರೆಕಟ್ಟಿನ ಒಂದೊಂದು ರೌಂಡಿನ ಮೇಲೂ ಬೀಳುವ ಒತ್ತಡದ ಅಥವಾ ಎಳೆತದ ಅಥವಾ ತ್ರಾಸದ ಪ್ರಮಾಣವನ್ನು ಶಾಸ್ತ್ರೀಯವಾಗಿ ನಕ್ಷೆಗಳಿಂದಲೇ ಒಂದು ವಿಶಿಷ್ಟವಾದ ವಿಧಾನದಲ್ಲಿ ಕಂಡುಹಿಡಿಯುತ್ತಾರೆ. ಆಮೇಲೆ ಆಸರೆಕಟ್ಟಿನ ಚಿತ್ರದಲ್ಲಿ ಒತ್ತಡಕ್ಕೆ (-) ಸಿಕ್ಕಿದ ಭಾಗಗಳನ್ನು ದಪ್ಪವಾದ ರೇಖೆಗಳಿಂದಲೂ ಎಳೆತಕ್ಕೆ (+) ಸಿಕ್ಕಿದವುಗಳನ್ನು ತೆಳುವಾದ ರೇಖೆಗಳಿಂದಲೂ ಗುರುತುಮಾಡಿ ಒಂದೊಂದು ಭಾಗದಲ್ಲೂ ಬರುವ ತ್ರಾಸಗಳನ್ನು ಕೋಷ್ಟಕಗಳಲ್ಲಿ ಬರೆದಿಡುತ್ತಾರೆ. ಈ ಆಧಾರದ ಮೇಲೆ ಒಂದೊಂದು ರೌಂಡನ್ನು ಪ್ರತ್ಯೇಕವಾಗಿ ಸಂವಿಧಾನ ಮಾಡುತ್ತಾರೆ.

ಮನೆಯ ಮಾಡುಗಳಲ್ಲಿ ಉಪಯೋಗಿಸುವ ಸರಕಟ್ಟುಗಳು ಮೇಲುಗಡೆಯಿಂದ ಬರುವ ತೂಕ, ಹಿಮ ಮತ್ತು ಗಾಳಿಯ ಭಾರವನ್ನು ಮೇಲಿನ ಹುರಿಯ ಮೂಲಕ ಹೊರುತ್ತವೆ. ಒಳಮಾಳಿಗೆಯಿದ್ದರೆ ಅದರ ತೂಕ ಕೆಳಗಿನ ಹುರಿಯಮೇಲೆ ಬೀಳುತ್ತದೆ. ಸೇತುವೆಯ ಎರಡು ಆಸರೆಕಟ್ಟುಗಳ ನಡುವೆ ತಳದಲ್ಲಿ ರೈಲುದಾರಿಯಾಗಲಿ, ರಸ್ತೆಯಾಗಲಿ ಹೋದರೆ ಅದನ್ನು ಥ್ರೊ ಸೇತುವೆಯೆನ್ನುತ್ತಾರೆ. ಮೇಲುಗಡೆ ಹೋದರೆ ಡೆಕ್ ಸೇತುವೆಯೆನ್ನುತ್ತಾರೆ. ಸೇತುವೆಗಳಲ್ಲಿ ಭಾರ ಮೇಲಿನ ಹುರಿಯ ಮೇಲಾದರೂ ಬೀಳಬಹುದು. ಕೆಳಹುರಿಯ ಮೇಲಾದರೂ ಬೀಳಬಹುದು. ಡೆಕ್ ಸೇತುವೆಗಳಲ್ಲಿ ಮೇಲಿನ ಹುರಿಯೂ ಥ್ರೊ ಸೇತುವೆಗಳಲ್ಲಿ ಕೆಳಗಿನ ಹುರಿಯೂ ಭಾರವನ್ನು ಹೊರುತ್ತವೆ. ಸೇತುವೆಗಳಲ್ಲಿ ಆಸರೆಕಟ್ಟಿನ ಭದ್ರತೆಯನ್ನು ಕಾಪಾಡಲು ಅದರ ಸಮತಳಕ್ಕೆ ಸಮಕೋಣವಾಗಿ ಬಿಗಿ ಪಟ್ಟಿಯನ್ನು ಕೊಡಬೇಕಾಗುತ್ತದೆ. ಸಾಮಾನ್ಯವಾಗಿ ಎರಡು ಆಸರೆಕಟ್ಟುಗಳ ನಡುವೆ ಒಂದು ಚೌಕಟ್ಟನ್ನು ಸೇರಿಸುತ್ತಾರೆ. ಆಸರೆಕಟ್ಟಿನ ಆಳ ಸೇತುವೆಯ ಕಣ್ಣಿನ 1/8 ಭಾಗದಿಂದ 1/5ರ ವರೆಗೊ ವ್ಯತ್ಯಾಸವಾಗುತ್ತದೆ. ಕಣ್ಣಿನ ಅಗಲ ಹೆಚ್ಚಾದ ಹಾಗೆ ಈ ಪ್ರಮಾಣವೂ ಹೆಚ್ಚಾಗುತ್ತದೆ. ಒಂದೇ ಅಗಲದ ರಸ್ತೆಯ ಸೇತುವೆಯ ಆಳ ರೈಲು ಸೇತುವೆಯ ಆಳಕ್ಕಿಂತ ಕಡಿಮೆಯಾಗಿರುತ್ತದೆ. ಸೇತುವೆಯ ಕಣ್ಣು 91ಮೀ ಗಿಂತ ಕಡಿಮೆ ಇದ್ದರೆ ಮೇಲಿನ ಮತ್ತು ಕೆಳಗಿನ ಹುರಿಗಳು ನೇರವಾಗಿ ಸಮಾನಾಂತರವಾಗಿರುತ್ತವೆ. ಹೆಚ್ಚಾದರೆ ಮೇಲಿನ ಹುರಿ ಮಾತ್ರ ಪರವಲಯದ (ಪ್ಯಾರಬೊಲ) ಆಕಾರದಲ್ಲಿ ಬಾಗಿರುತ್ತದೆ. ಆಸರೆಕಟ್ಟಿನ ಸಂವಿಧಾನ : ಆಸರೆಕಟ್ಟಿನ ಭಾಗಗಳಲ್ಲಿ ತ್ರಾಸವನ್ನು (ಸ್ಟ್ರೆಸ್) ಲೆಕ್ಕ ಹಾಕುವಾಗ ಎರಡು ತುಂಡುಗಳ ಸಂಧಾನಗಳಲ್ಲಿ ಘರ್ಷಣೆಯಿಲ್ಲದ ಮೊಳೆಗಳಿವೆಯೆಂದೂ ಮೇಲೆ ಭಾರ ಬಿದ್ದಾಗ ಒಂದೊಂದು ತುಂಡೂ ಕೇವಲ ತುಯ್ತ ಇಲ್ಲವೆ ಒತ್ತಡದ ತ್ರಾಸದಲ್ಲಿರುವುದೆಂದೂ ಅಂಗೀಕರಿಸುತ್ತಾರೆ. ಒಂದೊಂದು ಸಂಧಿಯಲ್ಲೂ ತ್ರಾಸಗಳೂ ಭಾರಗಳೂ ಸಮತೂಕದಲ್ಲಿದ್ದು ಒಂದೇ ಸಮತಳದಲ್ಲಿರುತ್ತವೆ. ಇವುಗಳನ್ನು ಮಟ್ಟವಾಗಿಯಾಗಲಿ ಲಂಬವಾಗಿಯೇ (ವರ್ಟಿಕಲಿ) ಆಗಲಿ ವಿಭಜಿಸಿದಾಗ ಒಂದೊಂದು ದಿಕ್ಕಿನಲ್ಲೂ ಅವುಗಳ ಮೊತ್ತ ಶೂನ್ಯವಾಗಿರಬೇಕು. ಇಷ್ಟೇ ಅಲ್ಲದೆ ಸಮಸ್ಥಿತಿ ಶಾಸ್ತ್ರದ (ಸ್ಟ್ಯಾಟಿಕ್ಸ್) ತತ್ತ್ವಗಳ ಪ್ರಕಾರ ಆಸರೆಕಟ್ಟಿಗೆ ಸಮಕೋಣವಾದ ಒಂದು ಅಕ್ಷದ ಸುತ್ತ ಮೇಲಿನ ತ್ರಾಸಗಳ ಮತ್ತು ಭಾರಗಳ ಭ್ರಾಮಕ ಶಕ್ತಿಗಳ (ಮೊಮೆಂಟ್ಸ್) ಒಟ್ಟು ಮೊತ್ತ ಶೂನ್ಯವಾಗಿರಬೇಕು. ಒಂದು ಆಸರೆಕಟ್ಟಿನಲ್ಲಿ ಸಂಧಿಗಳಿದ್ದು ಅದರಲ್ಲಿರುವ ತುಂಡುಗಳ (ಮೆಂಬರ್ಸ್) ಸಂಖ್ಯೆ (2ಟಿ-3) ಆಗಿದ್ದರೆ, ಒಂದಲ್ಲ ಒಂದು ವಿಧದಲ್ಲಿ ತ್ರಾಸಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಬಹುದು. ತುಂಡುಗಳ ಸಂಖ್ಯೆ ಕಡಿಮೆಯಾಗಿದ್ದರೆ ಚೌಕಟ್ಟು ಅಭದ್ರವಾಗುತ್ತದೆ. ಹೆಚ್ಚಾಗಿದ್ದರೆ ತ್ರಾಸಗಳು ಅನಿಶ್ಚಿತವಾಗಿ ಬಿಡುತ್ತವೆ. ಅದನ್ನು ಸರಿಯಾಗಿ ಲೆಕ್ಕ ಹಾಕಲಾಗುವುದಿಲ್ಲ.

ದೊಡ್ಡ ಸೇತುವೆಗಳ ಸಂವಿಧಾನವೂ ಕಟ್ಟಡವೂ ತೊಡಕಾದ ಮತ್ತು ಕಷ್ಟವಾದ ಕೆಲಸಗಳು. ಅವುಗಳ ಮೇಲಿನ ತ್ರಾಸವನ್ನು ಕಂಡುಹಿಡಿಯಲು ಪ್ರಭಾವದ ರೇಖೆಗಳು (ಇನ್‍ಪ್ಲುಯೆನ್ಸ್ ಲೈನ್ಸ್) ಎಂಬ ಕ್ರಮವನ್ನು ಬಳಸುತ್ತಾರೆ.[೧][೨]

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು" (PDF). Archived from the original (PDF) on 2017-01-10. Retrieved 2016-10-19.
  2. https://en.wikipedia.org/wiki/BiblioBazaar