ವಿಷಯಕ್ಕೆ ಹೋಗು

ರಾಮಕೃಷ್ಣ ಮಿಷನ್, ಮಂಗಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಮಕೃಷ್ಣ ಮಿಷನ್

ಶ್ರೀ ರಾಮಕೃಷ್ಣ ಮಿಷನ್ ಮಂಗಳಾದೇವಿ ದೇವಸ್ಥಾನದ ಎಡ ಪಾರ್ಶ್ವದಲ್ಲಿ ಸುಮಾರು ಏಳು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವುದು. ಭಾರತಕ್ಕೆ ಸ್ವಾತಂತ್ರ್ಯ ಬರಲಿದ್ದ ಸಂದರ್ಭಗಳಲ್ಲಿ, ಅಂದರೆ ೩-೬-೧೯೪೭ರಂದು ಮಂಗಳೂರಿನಲ್ಲಿ ಶ್ರೀ ರಾಮಕೃಷ್ಣ ಮಠ ಪ್ರಾರಂಭವಾಯಿತು. []

ಇತಿಹಾಸ

[ಬದಲಾಯಿಸಿ]

ಮಠ ಪ್ರಾರಂಭವಾದುದರ ಹಿಂದೆ ಸಣ್ಣದೊಂದು ಘಟಣೆ ಇದೆ. ೧೯೪೦ರ ಸುಮಾರಿಗೆ ಸಾಹುಕಾರ್ ವೆಂಕಟೇಶ ಪೈ ಎಂಬುವರು ಸೇವೆಯ ಆದರ್ಶವನ್ನು ಮುಂದಿಟ್ಟುಕೊಂಡು ಸ್ವಜಾತೀಯ ಬಡ ಮಕ್ಕಳ ಕಲ್ಯಾಣಕ್ಕಾಗಿ ಒಂದು ಬಾಲಕಾಶ್ರಮವನ್ನು ಹುಟ್ಟು ಹಾಕಿದ್ದರು. ಆ ಬಾಲಕಾಶ್ರಮದಲ್ಲಿ ಮಕ್ಕಳಿಗೆ ಉಚಿತವಾಗಿ ಊಟ-ವಸತಿಗಳನ್ನು ನೀಡಲಾಗುತ್ತಿತ್ತು. ಆನಂತರ ಅದನ್ನು ವ್ಯವಸ್ಥಿವಾಗಿ ನಡೆಸಲು ಹಿಂದೂ ಸೇವಾ ಸಂಘ ಎಂಬ ವಿಶ್ವಸ್ಥ ಮಂಡಳಿಯನ್ನು ಮಾಡಿ ಅದಕ್ಕೆ ಬಾಲಕಾಶ್ರಮವನ್ನು ಹಸ್ತಾಂತರಿಸಿದರು.ಅದೇ ಸಮಯದಲ್ಲಿ ಮಂಗಳೂರಿನಲ್ಲಿ ಶ್ರೀ ರಾಮಕೃಷ್ಣ ಮಠದ ಶಾಖೆಯೊಂದನ್ನು ಪ್ರಾರಂಭಿಸುವಂತೆ ಮಂಗಳೂರಿನ ಜನತೆ ಮಾಡಿದ ಮನವಿಗೆ ಪೂರಕವಾಗಿ ಪ್ರಧಾನ ಕೇಂದ್ರವಾದ ಕಲಕತ್ತೆಯ ಬೇಲೂರು ಮಠದಿಂದ ಸ್ವಾಮಿ ವಿಮಲಾನಂದಜೀಯವರನ್ನು ಕಳುಹಿಸಿಕೊಡಲಾಯಿತು. ಮೊದಲು ಲಾಲ್ ಬಾಗ್ ನ ಒಂದು ಬಾಡಿಗೆ ಮನೆಯಲ್ಲಿ ಮಠದ ಕಾರ್ಯ ಕಲಾಪಗಳು ಆರಂಭಗೊಂಡವು. ಸ್ವಾಮಿ ವಿಮಲಾನಂದಜೀಯವರು ಕೆಲವು ಬ್ರಹ್ಮಚಾರಿಗಳ (ಸ್ವಾಮಿ ನಿಃಸ್ವಾನಂದಜೀ, ಸ್ವಾಮಿ ಶಕ್ರಾನಂದಜೀ ಹಾಗೂ ತಿರುವಳ್ಳದಲ್ಲಿರುವ ಸ್ವಾಮಿ ಸಮಗ್ರಾನಂದಜೀ) ಸಹಾಯದಿಂದ ಪೂಜೆ ಭಜನೆಗಳನ್ನೂ ಪಾಠ ಪ್ರವಚನಗಳನ್ನೂ ನಡೆಸುತ್ತ ಬಂದರು. ಸ್ವಾಮಿ ವಿಮಲಾನಂದಜೀಯವರು ಆರಂಭದಲ್ಲಿ ಇಂಗ್ಲಿಷ್ ನಲ್ಲಿ ಪ್ರವಚನ ನೀಡುತ್ತಿದ್ದವರು ಬಹಳ ಬೇಗ ಕನ್ನಡ ಕಲಿತು, ಕನ್ನಡದಲ್ಲಿ ಪ್ರವಚನಗಳನ್ನು ನೀಡತೊಡಗಿದರು. ಆಳವಾದ ಶಾಸ್ತ್ರಜ್ಞಾನ ಹೊಂದಿದ್ದ ಅವರು ಮಂಗಳೂರಿನಲ್ಲಿ ರಾಮಕೃಷ್ಣ-ವಿವೇಕಾನಂದ ವಿಚಾರಧಾರೆಯ ಪ್ರಚಾರಕ್ಕಾಗಿ ಶ್ರಮಿಸಿದರು. ಇದೇ ಸಮಯದಲ್ಲಿ ಹಿಂದೂ ಸಂಘದ ವತಿಯಿಂದ ತಮ್ಮ ಮಿತ್ರರೊಡನೆ ಬಾಲಕಾಶ್ರಮವನ್ನು ನಡೆಸುತ್ತಿದ್ದ ಸಾಹುಕಾರ್ ವೆಂಕಟೇಶ್ ಪೈ ಅವರು ಅದನ್ನು ರಾಮಕೃಷ್ಣ ಮಠಕ್ಕೆ ಒಪ್ಪಿಸಲು ತುಂಬು ಮನಸ್ಸಿನಿಂದ ಮುಂದೆ ಬಂದರು. ರಾವ್ ಬಹದ್ದೂರ್ ಡಾ. ಎಂ.ಕೇಶವ ಪೈ ಮತ್ತು ಡಾ.ಸಿ.ಪಿ. ಕಾಮತ್ ಮೊದಲಾದವರು ವೆಂಕಟೇಶ್ ಪೈ ಅವರ ಪ್ರಯತ್ನದ ಹಿಂದೆ ಇದ್ದರು. ಅದರಂತೆ, ದಿನಾಂಕ ೧೧-೮-೧೯೫೧ರಂದು ಬಾಲಕಾಶ್ರಮ ಮತ್ತು ಅದರ ಜೊತೆಗೆ ಏಳು ಎಕರೆಗಳಷ್ಟು ಭೂಮಿಯನ್ನು ಹಾಗೂ ಅದರಲ್ಲಿದ್ದ ಸುಂದರ ಸುಸಜ್ವಿತ ಕಟ್ಟಡವನ್ನು ರಾಮಕೃಷ್ಣ ಮಹಾಸಂಘಕ್ಕೆ ಹಸ್ತಾಂತರಿಸಿದರು. ಶ್ರೀ ರಾಮಕೃಷ್ಣ ಮಠವು ಹಳೆಯ ಜಾಗದಲ್ಲಿ ನಡೆಸಿದಂತೆ ಪೂಜೆ ಪ್ರವಚನಗಳನ್ನು ಇಲ್ಲಿ ಮುಂದುವರಿಸಿಕೊಂಡು ಬಂದಿತು. ಬಾಲಕಾಶ್ರಮವನ್ನು ರಾಮಕೃಷ್ಣ ಮಿಶನ್ ನಡೆಸತೊಡಗಿತು.ಈ ಸಂದರ್ಭದಲ್ಲಿ ಸ್ವಾಮಿ ವಿಮಲಾನಂದಜೀಯವರ ಸ್ಥಾನಕ್ಕೆ ಸ್ವಾಮಿ ಆದಿ ದೇವಾನಂದಜೀಯವರು ಆಶ್ರಮದ ಅಧ್ಯಕ್ಷರಾಗಿ ಆಗಮಿಸಿದರು. ರಾಮಕೃಷ್ಣ ಮಿಷನ್ ಗೆ ವರ್ಗಾಯಿಸಲ್ಪಟ್ಟ ಬಾಲಕಾಶ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ ಜೀವನದ ಜೊತೆಗೆ ಆಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣವೂ ಕೂಡ ದೊರೆಯುವಂತಾಯಿತು. ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಇಲ್ಲಿ ಅವಕಾಶ ಸಿಕ್ಕಿತು. ಸ್ಥಳೀಯ ಬಡಜನತೆಗೆ ವೈದ್ಯಕೀಯ ಅಗತ್ಯವನ್ನು ಮನಗಂಡ ಆಶ್ರಮವು ದಿನಾಂಕ ೩೦-೪-೧೯೫೫ರಂದು ಉಚಿತ ಚಿಕಿತ್ಸಾಲಯವನ್ನು ಪ್ರಾರಂಭಿಸಿತು. ಮಂಗಳೂರಿನ ಗಣ್ಯ ವೈದರ ನೆರವಿನಿಂದ ಜಾತಿ ಭೇದವಿಲ್ಲದೆ ರೋಗಿಗಳ ಸೇವೆಗೆ ತನ್ನನ್ನು ತೊಡಗಿಸಿಕೊಂಡಿತು. ವರ್ಷಗಳು ಕಳೆದಂತೆ ಬಾಲಕಾಶ್ರಮದ ಮಕ್ಕಳ ಸಂಖ್ಯೆ ಹೆಚ್ಚತೊಡಗಿತು. ಮುಖ್ಯ ಕಟ್ಟಡದಲ್ಲಿ ಕಾರ್ಯ ಕಲಾಪಗಳು ನಡೆಯುತ್ತಿದ್ದುದರಿಂದ ಬಾಲಕಾಶ್ರಮಕ್ಕೆ ಸ್ಥಳ ಸಾಕಾಗುತ್ತಿರಲಿಲ್ಲ. ಹೀಗಾಗಿ ಸ್ವಾಮಿ ವಿವೇಕಾನಂದರ ಜನ್ಮ ಶತಾಬ್ದಿಯ ಸವಿನೆನಪಿಗಾಗಿ ೧೯೬೩ರಲ್ಲಿ ಬಾಲಕಾಶ್ರಮಕ್ಕೆ ತನ್ನದೇ ಆದ ಒಂದು ಕಟ್ಟಡದ ನಿರ್ಮಾಣವಾಯಿತು. ವಿದ್ಯಾರ್ಥಿಗಳ ವಸತಿ, ಅಧ್ಯಯನ ಇತ್ಯಾದಿಗಳಿಗಾಗಿ ಸ್ಥಳಾವಕಾಶದ ಜೊತೆಗೆ ಸಾರ್ವಜನಿಕರಿಗಾಗಿ ಪಾಠ ಪ್ರವಚನಗಳನ್ನು ನಡೆಸಲು ಅನುಕೂಲವಾಗುವಂತೆ ಒಂದು ಸಭಾಗೃಹದ ವ್ಯವಸ್ಥೆಯನ್ನೂ ಈ ಕಟ್ಟಡಲ್ಲಿ ಮಾಡಲಾಯಿತು. ಬಾಲಕಾಶ್ರಮದಲ್ಲಿ ಮಕ್ಕಳಿಗೆ ಯೋಗ್ಯ ಶಿಕ್ಷಣ ಸ್ವಾವಲಂಬನೆ, ಸಹಕಾರ ಮನೋಭಾವವನ್ನು ಬೆಳೆಸುವುದರ ಜೊತೆಗೆ ಶಿಸ್ತುಬದ್ಧ ಜೀವನ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಅವರಲ್ಲಿ ತುಂಬಲು ವಿಶೇಷ ಕಾಳಜಿ ವಹಿಸಲಾಯಿತು.

ಪ್ರಚಾರ ಕಾರ್ಯ

[ಬದಲಾಯಿಸಿ]
ಬಾಲಕಾಶ್ರಮ

ಸ್ವಾಮಿ ಆದಿ ದೇವಾನಂದಜೀ ಅವರು ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ವಿದ್ವತ್ತು ಉಳ್ಳವರಾಗಿದ್ದರು. ಇವರು ಮಂಗಳೂರಿನ ಸುತ್ತಮುತ್ತಲಿನ ಶಾಲಾ ಕಾಲೇಜುಗಳಲ್ಲಿ ಹಾಗೂ ಸಂಘ ಸಂಸ್ಥೆಗಳಲ್ಲಿ ಪ್ರವಚನಗಳನ್ನು ಮಾಡುವುದರ ಮೂಲಕ ರಾಮಕೃಷ್ಣ-ವಿವೇಕಾನಂದ ವಿಚಾರಧಾರೆಯ ಪ್ರಚರಕ್ಕಾಗಿ ಶ್ರಮಿಸಿದರು. ಗೀತೆ ಉಪನಿಷತ್ತುಗಳ ಮುಂತಾದ ಶಾಸ್ತ್ರ ಗ್ರಂಥಗಳನ್ನು ಮತ್ತು ಸಂಸ್ಕೃತದ ಪ್ರಕರಣ ಗ್ರಂಥಗಳನ್ನು ಮಂಗಳೂರಿನಲ್ಲಿದ್ದಾಗ ಕನ್ನಡಕ್ಕೆ ಅನುವಾದಿಸಿದರು, ಸ್ವಾಮಿ ವಿಜ್ಞಾನಂದಜೀ, ಸ್ವಾಮಿ ಸುದಾನಂದಾಜೀ, ಸ್ವಾಮಿ ಹರ್ಷಾನಂದಜೀ, ಸ್ವಾಮಿ ಉದ್ದವಾನಂದಜೀ, ಸ್ವಾಮಿ ಜಗದಾತ್ಮಾನಂದಜೀ ಹಾಗೂ ಇತರ ಸ್ವಾಮಿಗಳು ಈ ಎಲ್ಲ ಕಾರ್ಯಗಳಲ್ಲಿ ಸ್ವಾಮಿ ಆದಿ ದೇವಾನಂದಜೀಯವರಿಗೆ ಸಹಾಯ ಮಾಡುತ್ತಿದ್ದರು. ೧೯೬೬ರಲ್ಲಿ ಸ್ವಾಮಿ ಆದಿ ದೇವಾನಂದಜೀ ಅವರ ಸ್ಥಾನದಲ್ಲಿ ಸ್ವಾಮಿ ವಿಜ್ಞಾನಂದಜೀ ಅವರು ಆಶ್ರಮದ ಅಧ್ಯಕ್ಷರಾಗಿದ್ದರು. ಅಶ್ರಮದ ಎಲ್ಲ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಅವರ ತಮ್ಮ ಸರಳ ಹಾಗೂ ಗಂಭೀರ ವ್ಯಕ್ತಿತ್ವದಿಂದ ಬಾಲಕಾಶ್ರಮದ ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ಉತ್ತಮ ಪರಿಣಾಮವನ್ನುಂಟು ಮಾಡುವುದರ ಜೊತೆಗೆ ಜನರು ಆಶ್ರಮದ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚಾಗಿ ಪಾಲ್ಗೊಳ್ಳುವಂತೆ ಮಾಡಿದರು. ಸ್ವಾಮಿ ಬ್ರಹ್ಮರೂಪಾನಂದಜೀ, ಸ್ವಾಮಿ ವೆಂಕಟೇಶಾನಂದಜೀ, ಸ್ವಾಮಿ ಉಮೇಶ್ವರಾನಂದಜೀ ಮೊದಲಾದವರು ಸ್ವಾಮಿ ವಿಜ್ಞಾನಂದಜೀ ಅವರಿಗೆ ಈ ಎಲ್ಲ ಕೆಲಸಗಳಲ್ಲಿ ಹೆಗಲೆಣೆಯಾಗಿ ಸಹಕರಿಸುತ್ತಿದ್ದರು. ೧೯೮೧ರಲ್ಲಿ ಸ್ವಾಮಿ ಸುಂದಾನಂದಜೀ ಅವರು ಆಶ್ರಮದ ಅಧ್ಯಕ್ಷರಾಗಿದ್ದರು. ಆಶ್ರಮವು ಇಂದಿನ ಜಾಗಕ್ಕೆ ಸ್ಥಳಾಂತರವಾದಾಗಿನಿಂದ ಇವರು ಆಶ್ರಮದ ಎಲ್ಲ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ವಿಶಿಷ್ಟವಾದದ್ದು, ಉಜಿತ ಚಿಕಿತ್ಸಾಲಯವನ್ನು ಕಟ್ಟಿ ಅದನ್ನು ನಡೆಸುವುದರಲ್ಲಿ, ವಾರ್ಡನ್ ಸ್ವಾಮಿಜೀ ಎಂದೇ ಪ್ರಖ್ಯಾತರಾಗಿ ಬಾಲಕಾಶ್ರಮದ ಮಕ್ಕಳನ್ನು ಸ್ಫೂರ್ತಿಗೊಳಿಸುವಲ್ಲಿ ಆಶ್ರಮದ ತೋಟಕ್ಕೆ ಒಂದು ರೂಪಕೊಟ್ಟು ಅದನ್ನು ಬೆಳೆಸುವುದರಲ್ಲಿ ಅವರ ಸೇವೆ ಅನನ್ಯವಾದದ್ದು.[]

ಪುಸ್ತಕ ಮಳಿಗೆ

[ಬದಲಾಯಿಸಿ]
ಪುಸ್ತಕ ಮಳಿಗೆ

ಸ್ವಾಮಿ ಸುನಂದಾನಂದಜೀ ಅವರ ಬಳಿಕ ೧೯೯೮ರಲ್ಲಿ ಸ್ವಾಮಿ ಪೂರ್ಣ ಕಾಮಾನಂದಜೀ ಅವರು ಆಶ್ರಮದ ಅಧ್ಯಕ್ಷರಾದರು, ಹಿಂದಿನ ಎಲ್ಲ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ರಾಮಕೃಷ್ಣ ವಿವೇಕಾನಂದ ವೇದಾಂತ ಸಾಹಿತ್ಯಗಳು ಹೆಚ್ಚು ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಸುಂದರವಾದ ಪುಸ್ತಕ ಮಳಿಗೆಯು ೧೯೯೯ರಲ್ಲಿ ಇವರ ಅಧ್ಯಕ್ಷತೆಯಲ್ಲಿ ನಿರ್ಮಾಣವಾಯಿತು. ಸಾರ್ವನಿಕರಿಗೆ ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಿರುವ ಆಧ್ಯಾತ್ಮಿಕ ಶಿಬಿರಗಳು, ವ್ಯಕ್ತಿತ್ವ ನಿರ್ಮಾಣ ಶಿಬಿರಗಳು ,ಬೇಸಿಗೆ ಶಿಬಿರಗಳು ಹಾಗೂ ಇತರ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಸುಸಜ್ಜಿತ ಸಭಾಭವನ, ಬಹುಪಯೋಗಿ ಭವನ ಹಾಗೂ ಗ್ರಂಥಲಯವನ್ನು ಒಳಗೊಂಡ ಕಟ್ಟಡ ಸಂಕೀರ್ಣವನ್ನು ಸಾರ್ವಜನಿಕರ ಸಹಾಯದಿಂದ ನಿರ್ಮಿಸುವಲ್ಲಿ ಆಶ್ರಮವು ಯಶಸ್ವಿಯಾಯಿತು.

ಮಠದ ದಿನಚರಿ

[ಬದಲಾಯಿಸಿ]

ಶ್ರಿ ರಾಮಕೃಷ್ಣ ಆಶ್ರಮದ ಪೂಜಾಗೃಹ ಮತ್ತು ಧ್ಯಾನ ಮಂದಿರದಲ್ಲಿ ದಿನಚರಿ ಸಾಮಾನ್ಯವಾಗಿ ಹೀರುತ್ತದೆ: ಪ್ರತಿದಿನ ಬೆಳಗ್ಗೆ ಮಂಗಳಾರತಿ ವೇಧಘೋಷ, ಪೂಜೆ, ಸಂಜೆ ಸಂಧ್ಯಾರತಿ ಮತ್ತು ಭಜನೆ, ಎಕಾದಶಿಯಂದು ರಾಮನಾಮ ಸಂಕೀರ್ತನೆ. ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾಪೂಜೆ, ಶಿವರಾತ್ರಿ ಮುಂತಾದ ಹಬ್ಬಗಳ ಆಚರಣೆ, ಶ್ರೀ ರಾಮಕೃಷ್ಣ ,ಶ್ರೀ ಶಾರದಾದೇವಿ, ಸ್ವಾಮಿ ವಿವೇಕಾನಂದ , ಶ್ರೀ ಶಂಕರಾಚಾರ್ಯಾ ,ಭಗವಾನ್ ಬುದ್ಧ ಮುಂತಾದ ಸಂತರ ಜನ್ಮದಿನಗಳ ಆಚರಣೆ, ಅಧ್ಯಾತ್ಮ ಸಾಧಕರಿಗೆ ಸ್ವಾಮೀಜಿಯವರ ಸಲಹೆಗಳು ಇತ್ಯಾದಿ. ಸಭಾಭವನದಲ್ಲಿ ಪ್ರತಿ ಭಾನುವಾರ ಸಂಜೆ ಪ್ರವಚನ.

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-12-05. Retrieved 2016-08-26.
  2. http://www.mangalorean.com/%E0%B2%AE%E0%B2%82%E0%B2%97%E0%B2%B3%E0%B3%82%E0%B2%B0%E0%B3%81-%E0%B2%B0%E0%B2%BE%E0%B2%AE%E0%B2%95%E0%B3%83%E0%B2%B7%E0%B3%8D%E0%B2%A3-%E0%B2%AE%E0%B2%BF%E0%B2%B7%E0%B2%A8%E0%B3%8D-%E0%B2%B8/