ವಿಷಯಕ್ಕೆ ಹೋಗು

ಹೆಜ್ಜೆ ಮೇಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಜ್ಜೆಮೇಳ


ಹೆಜ್ಜೆ ಮೇಳ‘ವು ಉತ್ತರ ಕರ್ನಾಟಕದ ಗ್ರಾಮೀಣ ಸಮುದಾಯಗಳಲ್ಲಿ ಪ್ರಚಲಿತವಾಗಿರುವ ಜಾನಪದ ಕುಣಿತದ ಹಲವು ಬಗೆಗಳಲ್ಲಿ ಒಂದು. ದಕ್ಷಿಣ ಕರ್ನಾಟಕದ ‘ಸುಗ್ಗಿ ಕುಣಿತ‘ಕ್ಕೂ ಹೆಜ್ಜೆ ಮೇಳಕ್ಕೂ ಕೆಲವು ಹೋಲಿಕೆಗಳಿವೆ. ಹೆಜ್ಜೆ ಮೇಳದ ತಂಡಗಳಲ್ಲಿ ಸಮ ಸಂಖ್ಯೆಯ ನರ್ತಕರಿರುತ್ತಾರೆ. ಸಾಮಾನ್ಯವಾಗಿ ಅವರು ಜೋಡಿಗಳಲ್ಲಿ ಕುಣಿಯುತ್ತಾರೆ. ಈ ಕಲಾವಿದರು, ಬಿಳಿಯ ಅಂಗಿ, ಮಂಡಿಯವರೆಗೆ ಕಟ್ಟಿಕೊಂಡ ಕಚ್ಚೆಪಂಚೆ, ಕೆಂಪು ಬಣ್ಣದ ಸೊಂಟಪಟ್ಟಿ ಮತ್ತು ಬಿಳಿ ಅಥವಾ ಕೆಂಪು ರುಮಾಲುಗಳನ್ನು ಧರಿಸುತ್ತಾರೆ. ಅವರ ಬಲಗೈಯಲ್ಲಿ ಒಂದು ಕೋಲು ಇರುತ್ತದೆ ಮತ್ತು ಎಡಗೈಯಲ್ಲಿ ಹಳದಿ ಬಣ್ಣದ ಕರವಸ್ತ್ರವನ್ನು ಹಿಡಿದಿರುತ್ತಾರೆ. ಕೆಲವೊಮ್ಮೆ ಎರಡು ಕೈಗಳಲ್ಲೂ ಕರವಸ್ತ್ರಗಳೇ ಇರುತ್ತವೆ. ಕಾಲುಗೆಜ್ಜೆಗಳು ಕಡ್ಡಾಯ. ಅವುಗಳ ಘಲುಕ್ ಘಲುಕ್ ಶಬ್ದವು ಪ್ರದರ್ಶನದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಜೋಡಿ ನರ್ತಕರಲ್ಲಿ ಮೊದಲನೆಯವನು ಪೂರ್ವನಿಶ್ಚಿತವಾದ ರೀತಿಯಲ್ಲಿ ಹೆಜ್ಜೆ ಹಾಕುತ್ತಾನೆ. ಅವನ ಜೊತೆ ನರ್ತಕನು ಆ ಹೆಜ್ಜೆಗಳಿಗೆ ಅನುಗುಣವಾದ ನೆಗೆತಗಳನ್ನು ಮಾಡುತ್ತಾನೆ. ಕೊಂಚ ಕಾಲದ ಅನಂತರ ಈ ಪಾತ್ರಗಳು ಅದಲುಬದಲಾಗುತ್ತವೆ. ಅದೇನೇ ಇರಲಿ, ಒಟ್ಟು ಪ್ರದರ್ಶನದ ಯಾವುದೇ ಕ್ಷಣದಲ್ಲಿ ಕೆಲವು ಕಲಾವಿದರು ಹೆಜ್ಜೆ ಹಾಕುತ್ತಿದ್ದರೆ, ಉಳಿದವರು ನೆಗತಗಳಲ್ಲಿ (ಜಂಪ್ಸ್) ತೊಡಗಿಕೊಂಡಿರುತ್ತಾರೆ. ಈ ನರ್ತನದಲ್ಲಿ ವೈವಿಧ್ಯಮಯವಾದ ಹಲವು ಬಗೆಯ ಹೆಜ್ಜೆಗಳಿರುತ್ತವೆ. ‘ಒಂದ್ಹೆಜ್ಜೆ’, ‘ಎರಡ್ಹೆಜ್ಜೆ’, ‘ಸಾದಾ ಹೆಜ್ಜೆ’ ಮತ್ತು ‘ಸುತ್ತು ಕೋಲ್ ಹೆಜ್ಜೆ’ಗಳು ಅವುಗಳಲ್ಲಿ ಕೆಲವು. ಇವುಗಳಲ್ಲಿ ‘ಸುತ್ತುಕೋಲು ಹೆಜ್ಜೆ’ ಮತ್ತು ‘ಹದಿನಾರು ಬಸ್ಕಿ’ಗಳು ಅತ್ಯಂತ ಆಕರ್ಷಕ ಮತ್ತು ಸಂಕೀರ್ಣ. ಸುತ್ತುಕೋಲು ಹೆಜ್ಜೆಯಲ್ಲಿ ಕಲಾವಿದರು ಎರಡು ಸಾಲುಗಳಲ್ಲಿ ನಿಂತುಕೊಂಡು ತಮ್ಮ ಕೈಯಲ್ಲಿರುವ ಕೋಲುಗಳನ್ನು ಅಲೆಗಳ ಆಕಾರದಲ್ಲಿ ಚಲಿಸುತ್ತಾ ತಮ್ಮ ಸಂಗಡಿಗರ ಕೋಲುಗಳಿಗೆ ಸಂಘಟ್ಟಿಸಿಸುತ್ತಾರೆ. ಇದೆಲ್ಲವೂ ಸಂಗೀತವಾದ್ಯಗಳ ಹಿನ್ನೆಲೆಯಲ್ಲಿ ನಡೆಯುತ್ತದೆ. ಹದಿನಾರು ಬಸ್ಕಿ’ಯು ಹೆಜ್ಜೆಮೇಳದ ಅನನ್ಯ ಬಗೆ. ಇದರಲ್ಲಿ, ಕಲಾವಿದರು ನಾಲ್ವರ ಗುಂಪುಗಳಾಗಿ ಬೇರ್ಪಡುತ್ತಾರೆ. ಒಬ್ಬ ಕಲಾವಿದನು ಬಾಗಿ ನಿಂತರೆ, ಇನ್ನೊಬ್ಬನು ಅವನ ಮೇಲೆ, ಹಿಂದಿನಿಂದ ಮುಂದಕ್ಕೆ ಮತ್ತು ಮುಂದಿನಿಂದ ಹಿಂದಕ್ಕೆ ನೆಗೆಯುತ್ತಾನೆ. ಈ ನರ್ತನ ಮಾಡಲು ಅಪಾರವಾದ ಕೌಶಲ್ಯ, ವೇಗ ಮತ್ತು ನಿಯಂತ್ರಣಗಳು ಬೇಕು. ಹೆಜ್ಜೆಮೇಳದಲ್ಲಿ ಹಿನ್ನೆಲೆ ಸಂಗೀತವನ್ನು ಒದಗಿಸಲು, ತಮಟೆ, ತಬಲ, ತಾಳ ಮತ್ತು ಹಾರ್ಮೋನಿಯಂಗಳನ್ನು ಬಳಸುತ್ತಾರೆ. ತಂಡದ ನಾಯಕನೇ ಹಾಡುಗಾರನೂ ಆಗಿದ್ದು, ಅವನೇ ತಬಲ ಮತ್ತು ತಾಳಗಳನ್ನು ನುಡಿಸುತ್ತಾನೆ. ಕೆಲವೊಮ್ಮೆ ಮಧುರವಾದ ಶೆಹನಾಯ್ ನಾದವು ಹಾಡುಗಳ ಬದಲಾಗಿ ಇರುತ್ತದೆ. ವಾದಕನು ಶೆಹನಾಯಿಯಲ್ಲಿ ಜನಪ್ರಿಯವಾದ ಗೀತೆಗಳನ್ನು ನುಡಿಸುತ್ತಾನೆ. ಮೊಹರಂ ಹಬ್ಬದ ಸಂದರ್ಭದಲ್ಲಿ ಹೆಜ್ಜೆಮೇಳದ ಪ್ರದರ್ಶನವಿರುತ್ತದೆ. ಇದರಲ್ಲಿ ಹಿಂದೂ ಕಲಾವಿದರೂ ಭಾಗವಹಿಸುವುದರಿಂದ ಹೆಜ್ಜೆಮೇಳವನ್ನು ಕೋಮು ಸಾಮರಸ್ಯದ ಸಂಕೇತವೆಂದೂ ಪರಿಗಣಿಸಲಾಗಿದೆ.