ಎಮಿಲ್ ಫಿಷರ್
ಎಮಿಲ್ ಫಿಷರ್ | |
---|---|
Born | ಎಮಿಲ್ ಫಿಷರ್ ೧೮೫೨ ಅಕ್ಟೋಬರ್ ೯ ಜರ್ಮನಿ |
Nationality | ಜರ್ಮನಿ |
ಜರ್ಮನಿಯ ಜೈವಿಕ ರಸಾಯನವಿಜ್ಞಾನಿಯಾಗಿದ್ದ ಎಮಿಲ್ ಫಿಷರ್ರವರು ೧೮೫೨ರ ಅಕ್ಟೋಬರ್ ೯ರಂದು ಬಾನ್‌ನ ಹತ್ತಿರದ ಯೂಸ್ಕಿರ್ ಶೇನ್‌ನಲ್ಲಿ ಜನಿಸಿದರು. ಫಿಷರ್ರವರು ೧೮೭೫ರಲ್ಲಿ ‘ಫಿನೈಲ್‌ಹೈಡ್ರಾಝಿನ್’ನನ್ನು ಕಂಡುಹಿಡಿದರು. ಕಾರ್ಬೋಹೈಡ್ರೇಟ್‌ಗಳ ಜೊತೆಯ ಸಂಯೋಗದಿಂದ ಫಿನೈಲ್‌ಹೈಡ್ರಾಝಿನ್ ಹೊಳಪಿನ ಹಳದಿಬಣ್ಣದ ಹರಳುಗಂತಹ ವ್ಯುತ್ಪನ್ನವನ್ನು (derivative) ಉತ್ಪತ್ತಿ ಮಾಡುತ್ತದೆ ಎಂಬುದಾಗಿ ೧೮೮೪ರಲ್ಲಿ ಕಂಡುಹಿಡಿದರು. ಸಕ್ಕರೆಯ ಅಧ್ಯಯನದಲ್ಲಿ ಆ ಪ್ರಕ್ರಿಯೆ ಪ್ರಧಾನಪಾತ್ರವನ್ನು ವಹಿಸುತ್ತದೆ. ಆ ವ್ಯುತ್ಪನ್ನಗಳಿಗೆ ‘ಒಸಾಝೊನ್‌ಗಳು’ (osazones) ಎಂಬುದಾಗಿ ಕರೆಯಲಾಗಿದೆ. ಸಕ್ಕರೆಯ ಬೇರೆಬೇರೆ ರೂಪಗಳಾದ ಗ್ಲೂಕೋಸ್, ಫ್ರುಕ್ಟೋಸ್ ಮತ್ತು ಮಾನ್ನೋಸ್‌ಗಳಿಂದ (mannose) ಅದೇ ಒಸಾಝೋನ್‌ಗಳನ್ನು ಫಿಷರ್ ತಯಾರಿಸಿದರು. ೧೮೮೨ರ ನಂತರ ಯೂರಿಕ್ ಆಮ್ಲ ಮತ್ತು ಕೆಫೀನ್‌ಗಳನ್ನು ಒಳಗೊಂಡ ಅನೇಕ ಸಂಯುಕ್ತವಸ್ತುಗಳ ಗುಂಪಿನ ಬಗ್ಗೆ ಅಧ್ಯಯನಗಳನ್ನು ನಡೆಸಿ, ಅವೆಲ್ಲವೂ ‘ಪ್ಯೂರಿನ್’ಗೆ (purine) ಸಂಬಂಧಪಟ್ಟದ್ದಾಗಿವೆ ಎಂಬುದಾಗಿ ಫಿಷರ್ ಕಂಡುಹಿಡಿದರು. ಮುಂದಿನ ಕೆಲವು ವರುಷಗಳಲ್ಲಿ ಅವರು ೧೩೦ಕ್ಕೂ ಹೆಚ್ಚಿನ ಸಂಖ್ಯೆಯ ಅಂತಹ ಸಂಯುಕ್ತವಸ್ತುಗಳನ್ನು ಸಂಶ್ಲೇಷಿಸಿದರು. ಸುಮಾರು ೧೮೯೯ರಲ್ಲಿ ಅವರು ಅಮೈನೋ ಆಮ್ಲಗಳನ್ನು ಸಂಶ್ಲೇಷಿಸಿದರು. ಅವರು ೧೯೦೧ರಲ್ಲಿ ಸಂಶ್ಲೇಷಿಸಿದ ಆರ್ನಿಥೀನ್ (ornithine), ೧೯೦೨ರಲ್ಲಿ ಸಂಶ್ಲೇಷಿಸಿದ ಸೆರೀನ್ (serine) ಮತ್ತು ೧೯೦೮ರಲ್ಲಿ ಸಂಶ್ಲೇಷಿಸಿದ ಸಲ್ಫರ್ ಇರುವ ಸಿಸ್ಟೈನ್‌ಗಳು (cystine) ಅವುಗಳಲ್ಲಿ ಸೇರಿವೆ. ಸಕ್ಕರೆಗಳ ಮತ್ತು ಪ್ಯೂರಿನ್ ಸಂಯುಕ್ತವಸ್ತುಗಳ ಸಂಶ್ಲೇಷಣೆಯನ್ನು ನಡೆಸಿದ ಫಿಷರ್ರವರಿಗೆ ೧೯೦೨ರ ರಸಾಯನವಿಜ್ಞಾನಕ್ಕೆ ಮೀಸಲಾದ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.[೧] ಕ್ಯಾನ್ಸರ್ನಿಂದ ಮಾತ್ರವಲ್ಲ, ತಮ್ಮ ಇಬ್ಬರು ಪುತ್ರರ ಸಾವಿನ ಮಾನಸಿಕ ವೇದನೆಯಿಂದ ನರಳುತ್ತಿದ್ದ ಫಿಷರ್ರವರು ೧೯೧೯ರ ಜುಲೈ ೧೫ರಂದು ಆತ್ಮಹತ್ಯೆ ಮಾಡಿಕೊಂಡರು.
ಉಲ್ಲೇಖಗಳು
[ಬದಲಾಯಿಸಿ]