ವಿಷಯಕ್ಕೆ ಹೋಗು

ಶಿವಮೂರ್ತಿ ಸ್ವಾಮೀಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ಧಾರ್ಮಿಕ ಪೀಠದ ಸಮಸ್ತ ಕಾರ್ಯಚಟುವಟಿಕೆಗಳ ಸುಸೂತ್ರ ನಿರ್ವಹಣೆಗೆ ಆಧುನಿಕ ಕಂಪ್ಯೂಟರ್ ತಂತ್ರಜ್ಞಾನವನ್ನು ಭಾರತ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಳವಸಿಕೊಂಡು, ಇಂದಿಗೂ ಅದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವ ಕೀರ್ತಿಗೆ ಪಾತ್ರರಾಗಿರುವವರು ಕರ್ನಾಟಕ ರಾಜ್ಯದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಕಾರಿಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು. ಕರ್ನಾಟಕ ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದ ಯಾವುದೇ ಸ್ವಯಂಸೇವಾ ಅಥವಾ ಧಾರ್ಮಿಕ ಸಂಸ್ಥೆಗಳು ಕಂಪ್ಯೂಟರ್ ಕುರಿತು ಆಲೋಚಿಸುವ ಮುನ್ನವೇ ತಮ್ಮ ಬೃಹನ್ಮಠದ ಕಾರ್ಯಚಟುವಟಿಕೆಗಳಿಗೆ 1984ರಲ್ಲಿಯೇ ಕಂಪ್ಯೂಟರನ್ನು ಬಳಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ದೇಶದ ಯಾವುದೇ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕರು ಲ್ಯಾಪ್‌ ಟಾಪ್‌ ಕಂಪ್ಯೂಟರ್‌ ಗಳ ಬಳಕೆಯನ್ನು ಆರಂಭಿಸುವ ಮುನ್ನವೇ, ಅಂದರೆ 1994ರಲ್ಲಿಯೇ ಸ್ವಾಮೀಜಿಗಳು ಲ್ಯಾಪ್‌ಟ್ಯಾಪ್‌ನ್ನು ಖರೀದಿಸಿ ಬಳಸಿದ್ದಾರೆ!. ಆಧುನಿಕ ಕಂಪ್ಯೂಟರ್ ತಂತ್ರಜ್ಞಾನದ ಉಪಯುಕ್ತತೆಯನ್ನು ಅರಿತು ತಮ್ಮ ಕಾರ್ಯಕ್ಷೇತ್ರದಲ್ಲಿ ಅದನ್ನು ದುಡಿಸಿಕೊಳ್ಳುವುದನ್ನು ಬಹಳ ಹಿಂದೆಯೇ ಆರಂಭಿಸಿದ ಕೀರ್ತಿಗೆ ಸ್ಮಾಮೀಜಿಯವರು ಪಾತ್ರರಾಗಿದ್ದಾರೆ. ಇಂದಿಗೂ ದೇಶ-ವಿದೇಶ ಭೇಟಿಯ ವೇಳೆ ವಿಮಾನ ಪ್ರಯಾಣದಲ್ಲಿ ಮತ್ತು ಸಿರಿಗೆರೆ-ಬೆಂಗಳೂರು ನಡುವೆ ಪ್ರಯಾಣ ಮಾಡುವಾಗ ಸ್ವಾಮೀಜಿಯವರು ಸಮಯ ವ್ಯರ್ಥಗೊಳಿಸದೆ ತಮ್ಮ ಲ್ಯಾಪ್‌ಟಾಪ್‌ ಬಳಸಿ ಕಾರ್ಯನಿರ್ವಹಿಸುತ್ತಾರೆ.

ಕರ್ನಾಟಕ ರಾಜ್ಯಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಿಸಿರುವ ಬೃಹನ್ಮಠದ ಶಿಕ್ಷಣ ಸಂಸ್ಥೆಗಳ ಸಮಸ್ತ ಲೆಕ್ಕಪತ್ರಗಳನ್ನು ನಿರ್ವಹಿಸಲು ತಮ್ಮದೇ ಆದ ಸ್ವಂತ ತಂತ್ರಾಂಶವಾದ ‘ಶಿವ’ ಎಂಬ ಹೆಸರಿನ ತಂತ್ರಾಂಶವನ್ನು 1984ರಲ್ಲಿಯೇ ಸಿದ್ಧಪಡಿಸಿಬಳಸುವ ಮೂಲಕ (ಸಾಫ್ಟ್‌ವೇರ್) ಆಧುನಿಕ ತಂತ್ರಜ್ಞಾನದ ಬಳಕೆ ಆರಂಭಿಸಿದ ಇವರು ವೈಜ್ಞಾನಿಕ ತಳಹದಿಯುಳ್ಳ ಸಂಸ್ಕೃತ ವ್ಯಾಕರಣ ಕುರಿತ ಪಾಣಿನಿಯ ಸೂತ್ರಗಳನ್ನು ಆಧರಿಸಿ ‘ಗಣಕಾಷ್ಟಾಧ್ಯಾಯಿ’ ಎಂಬ ತಂತ್ರಾಂಶವನ್ನು ಸಿದ್ಧಪಡಿಸಿ, ಸಂಸ್ಕೃತ ಅಧ್ಯಯನ ನಿರತ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ತಮ್ಮ ಅಧ್ಯಯನವನ್ನು ಸುಲಭಗೊಳಿಸಿಕೊಳ್ಳಲು ಅನುವುಮಾಡಿದ್ದಾರೆ. ಮಠದ ಪರಂಪರೆಯಲ್ಲಿ ದಶಕಗಳಿಂದ ನಡೆದುಬಂದಿರುವ ‘ಸದ್ಧರ್ಮ ಪೀಠ’ದ ಮೂಲಕ ನೀಡಲಾಗುವ ನ್ಯಾಯದಾನವು ನ್ಯಾಯಾಲಯ ಕಲಾಪದ ರೀತಿಯಲ್ಲಿ ಕನ್ನಡ ಭಾಷೆಯ ಮೂಲಕ ಕಂಪ್ಯೂಟರ್‌ನಲ್ಲಿ ದಾಖಲಿಸಲಾಗುತ್ತಿದೆ. ಸಿರಿಗೆರೆಯಲ್ಲಿನ ‘ಅನುಭವ ಮಂಟಪ’ದ ಮೂಲಕ ನಡೆಯುವ ಧಾರ್ಮಿಕ ಚರ್ಚೆ, ಕಾರ್ಯಕಲಾಪಗಳು ಇಂದು ಕಂಪ್ಯೂಟರ್‌ನಲ್ಲಿ ದಾಖಲಾಗುತ್ತಿವೆ. ಇಡೀ ಮಠದ ವ್ಯವಹಾರಗಳನ್ನು ಸ್ವಾಮೀಜಿಗಳು ಸ್ವತ: ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳನ್ನು ಬಳಸಿ ಕಂಪ್ಯೂಟರ್ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ.

ಭಾರತೀಯ ಪರಂಪರೆಯಿಂದ ಬಂದ ಸಾಂಪ್ರದಾಯಿಕ ಜ್ಞಾನ ಮತ್ತು ಪಾಶ್ಚಿಮಾತ್ಯ ಆಧುನಿಕ ತಂತ್ರಜ್ಞಾನ ಎರಡನ್ನೂ ವಿಶಿಷ್ಟ ರೀತಿಯಲ್ಲಿ ಬೆರೆಸಿ ಹದಗೊಳಿಸಿಕೊಂಡು ಬಳಸುತ್ತಿರುವ ಇವರ ಸಾಧನೆಗಳು ಹಲವಾರು. ಸಂಸ್ಕೃತ ವ್ಯಾಕರಣ ಕುರಿತು ಆಧುನಿಕ ರೀತಿಯಲ್ಲಿ ಅಧ್ಯಯನ ನಡೆಸಲು ಅನುವುಮಾಡಿಕೊಡುವ ಇವರ ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶ ಮತ್ತು ವಚನ ಸಾಹಿತ್ಯದ ಸೊಗಡನ್ನು ವಿಶ್ವದೆಲ್ಲೆಡೆ ಪ್ರಸರಿಸುತ್ತಿರುವ ‘ಗಣಕ ವಚನ ಸಂಪುಟ’ ಇವರ ಕಂಪ್ಯೂಟರ್ ಯೋಜನೆಗಳಲ್ಲಿ ಪ್ರಮುಖವಾದವುಗಳು.

ಪರಿಚಯ

[ಬದಲಾಯಿಸಿ]

ಕರ್ನಾಟಕದ ಸಿರಿಗೆರೆಯಲ್ಲಿರುವ ‘ತರಳಬಾಳು ಜಗದ್ಗುರು ಬೃಹನ್ಮಠ’ದ ಪೀಠಾಧಿಕಾರಿಯಾಗಿರುವ ಡಾ. ಶಿವಮೂರ್ತಿ ಸ್ವಾಮೀಜಿಯವರು ಹುಟ್ಟಿದ್ದು ಶಿವಮೊಗ್ಗದ ಜಿಲ್ಲೆಯ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಸ್ಥಳದ ಬಳಿಯ ಸೂಗೂರು ಗ್ರಾಮದಲ್ಲಿ. ಇವರ ಪೂರ್ವಾಶ್ರಮದ ಹೆಸರು ‘ಶಿವಮೂರ್ತಿ’. ಬಾಲ್ಯದಲ್ಲಿಯೇ ಸಂಗೀತದ ಆಸಕ್ತಿ ಹೊಂದಿದ್ದ ಬಾಲಕ ಶಿವಮೂರ್ತಿ, ವಿಜ್ಞಾನ ವಿಷಯದಲ್ಲಿಯೂ ಮುಂದು. ವಿಜ್ಞಾನದ ಪದವೀಧರರಾಗಿ, ನಂತರ, 1976ರಲ್ಲಿ ಬನಾರಸ್ ವಿಶ್ವವಿದ್ಯಾಲಯದಲ್ಲಿ ಓದಿ, ‘ಎ ಕ್ರಿಟಿಕಲ್ ಸ್ಟಡಿ ಆಫ್ ಸೂತ್ರ ಸಂಹಿತಾ’ ಕುರಿತ ಸಂಸ್ಕೃತ ಅಧ್ಯಯನದಲ್ಲಿ ಡಾಕ್ಟರೇಟ್ ಪಡೆದರು. 1977-79ರ ಅವಧಿಯಲ್ಲಿ ಆಸ್ಟ್ರಿಯಾ ದೇಶದ ವಿಯೆನ್ನಾ ವಿಶ್ವವಿದ್ಯಾಲಯದ ಇಂಡಾಲಜಿ ಸಂಸ್ಥೆಯಲ್ಲಿ ಡಾಕ್ಟರೇಟ್ ನಂತರದ ಅಧ್ಯಯನ ನಡೆಸಿದರು.

12ನೇ ಶತಮಾನದ ಮಹಾನ್ ಸಂತರಾದ ಶ್ರೀ ಮರುಳಸಿದ್ಧರು ಸ್ಥಾಪಿಸಿದ ಸಿರಿಗೆರೆಯ ತರಳಬಾಳು ಜಗದ್ಗುರು ಬೃಹನ್ಮಠದ 21ನೇ ಪೀಠಾಧಿಕಾರಿಯಾಗಿ 1979ರಲ್ಲಿ ಡಾ. ಶಿವಮೂರ್ತಿಯವರಿಗೆ ಪಟ್ಟಾಭಿಷೇಕವಾಯಿತು. ಅಂದಿನಿಂದ ಅವರು, ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ಹೆಸರಿನಿಂದ ಧರ್ಮಪೀಠದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಸ್ವಾಮೀಜಿಯವರು ಶ್ರೀ ತರಳಬಾಳು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಈ ಶಿಕ್ಷಣ ಸಂಸ್ಥೆಯು ಶಿಶುವಿಹಾರದಿಂದ ತಾಂತ್ರಿಕ ಮಹಾ ವಿದ್ಯಾಲಯಗಳವರೆಗೆ ಸುಮಾರು 200 ಶೈಕ್ಷಣಿಕ ಅಂಗಸಂಸ್ಥೆಗಳನ್ನು ಹೊಂದಿದ್ದು, ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾದಾನದ ಮಹತ್ತದ ಉದ್ದೇಶದಿಂದ ಜ್ಞಾನದಾಸೋಹದ ಪರಂಪರೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸುಮಾರು 40 ಸಾವಿರ ವಿದ್ಯಾರ್ಥಿಗಳು ಈ ಅಂಗಸಂಸ್ಥೆಗಳಲ್ಲಿ ಅಧ್ಯಯನ ನಿರತರಾಗಿದ್ದಾರೆ.

ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾಮೀಜಿಯವರ ಸಾಧನೆಗಳು

[ಬದಲಾಯಿಸಿ]

1997ರಲ್ಲಿ ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ನಡೆದ 10ನೇ ವಿಶ್ವ ಸಂಸ್ಕೃತ ಸಮ್ಮೇಳನದ ಸಂಘಟನಾ ಸಮಿತಿಯ ಗೌರವಾಧ್ಯಕ್ಷರಾಗಿ ಸ್ವಾಮೀಜಿಯವರು ಕಾರ್ಯನಿರ್ವಹಿಸಿದ್ದಾರೆ. ಆಧುನಿಕ ತಂತ್ರಜ್ಞಾನ ಮತ್ತು ಸಾಂಪ್ರದಾಯಿಕ ಜ್ಞಾನ ಎರಡನ್ನೂ ಸಹ ಹದವಾಗಿ ಸಮ್ಮಿಳನಗೊಳಿಸುವ ಮೂಲಕ ಇವರು ಕೈಹಾಕಿದ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದಾರೆ. 1994ರಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ 9ನೇ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಈ ‘ಗಣಕಾಷ್ಟಾಧ್ಯಾಯಿ’ ತಂತ್ರಾಂಶದ ಪ್ರಾತ್ಯಕ್ಷಿಕೆಯನ್ನು ಮೊದಲ ಬಾರಿಗೆ ಸ್ವಾಮೀಜಿಯವರು ನೀಡಿದರು.

‘ಗಣಕಾಷ್ಟಾಧ್ಯಾಯಿ’ – ಸಂಸ್ಕೃತ ವ್ಯಾಕರಣ ಕುರಿತ ‘ಕಂಪ್ಯೂಟರ್ ತಂತ್ರಾಂಶ’: ‘ಗಣಕಾಷ್ಟಾಧ್ಯಾಯಿ(ಆವೃತ್ತಿ 5.0)’ ಸಂಸ್ಕೃತದ ಅದ್ವಿತೀಯ ವೈಯಾಕರಣಿಯಾದ ಪಾಣಿನಿಯ ಸೂತ್ರಗಳನ್ನು ಆಧರಿಸಿರುವ ಸಂಸ್ಕೃತ ವ್ಯಾಕರಣ ಕುರಿತ ವಿಶಿಷ್ಟವಾದ ತಂತ್ರಾಂಶ. ‘ಪಾಣಿನಿಯ ಅಷ್ಟಾಧ್ಯಾಯಿ’ ಎಂಬ ಮೂಲ ಕೃತಿಯಿಂದ ಈ ತಂತ್ರಾಂಶದ ಹೆಸರನ್ನು ಸೃಜಿಸಲಾಗಿದೆ. ಗಣಕದ ಮೂಲಕ ತಂತ್ರಾಂಶವನ್ನು ಸಿದ್ಧಪಡಿಸಿರುವ ಕಾರಣ, ಈ ತಂತ್ರಾಂಶಕ್ಕೆ ‘ಗಣಕಾಷ್ಟಾಧ್ಯಾಯಿ’ ಎಂದು ಹೆಸರು ನೀಡಲಾಗಿದೆ. ಸಂಸ್ಕೃತ ವ್ಯಾಕರಣ ಕುರಿತು ಎಂಟು ಅಧ್ಯಾಯಗಳಿರುವ ‘ಅಷ್ಟಾಧ್ಯಾಯಿ’ ಎಂಬ ಹೆಸರಿನ ಮೇರು ಕೃತಿಯನ್ನು ರಚನೆ ಮಾಡಿರುವ ಪಾಣಿನಿಯು ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ ಜೀವಿಸಿದ್ದನು. ಮೂಲ ಕೃತಿಯಲ್ಲಿ ಸುಮಾರು 4000 ಸೂತ್ರಗಳು ಇವೆ. (ಪ್ರತಿಯೊಂದು ಸೂತ್ರವೂ ಒಂದು ಸರಳ ವಾಕ್ಯದಷ್ಟು ಉದ್ದ ಮಾತ್ರ ಇದೆ. ಕೆಲವು ಸೂತ್ರಗಳಂತೂ ಕೇವಲ ಒಂದು ಪದ ಅಥವಾ ಹಲವು ಪದಗಳು ಮಾತ್ರ ಆಗಿವೆ.) ಈ ಸೂತ್ರಗಳು ಅತ್ಯಂತ ಸಂಕ್ಷಿಪ್ತವಾಗಿದ್ದು ಸಂಸ್ಕೃತ ಭಾಷೆಯ ವೈಜ್ಞಾನಿಕ ತಳಹದಿಯ ದ್ಯೋತಕವಾಗಿವೆ. ಈ ಕೃತಿಯು ಸಂಸ್ಕೃತ ಭಾಷೆಯ ಇಡೀ ವ್ಯಾಕರಣವನ್ನು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ವಿವರಿಸುತ್ತದೆ. ಒಂದು ಭಾಷೆಯ ವ್ಯಾಕರಣವನ್ನು ಈ ರೀತಿಯಲ್ಲಿ ವಿವರಿಸುವ ಮತ್ತೊಂದು ಕೃತಿಯು ವಿಶ್ವದ ಯಾವುದೇ ಇತರ ಭಾಷೆಗಳಲ್ಲಿ ಕಂಡುಬರುವುದಿಲ್ಲ. ತರ್ಕಬದ್ಧವಾದ ಈ ಕೃತಿಯನ್ನು ಕಂಪ್ಯೂಟರ್‌ಗೆ ಅಳವಡಿಸಿರುವುದು ವಿಶಿಷ್ಟ ಮತ್ತು ಸಮಂಜಸ.

ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಒಬ್ಬ ಧಾರ್ಮಿಕ ವ್ಯಕ್ತಿಯಾಗಿದ್ದುಕೊಂಡು, ಇಂತಹ ವಿಶಿಷ್ಟ ಕೃತಿಯನ್ನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಮೂಲಕ ಗಣಕ ತಂತ್ರಾಂಶವನ್ನಾಗಿ ರೂಪಿಸಿದ್ದಾರೆ. ಈ ತಂತ್ರಾಂಶವು ಸಂಸ್ಕೃತದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅಧ್ಯಯನಕ್ಕೆ ಅನುಕೂಲವಾಗುವಂತೆ ರಚಿಸಲಾಗಿದೆ. ಇದರಿಂದಾಗಿ ಸಂಸ್ಕೃತ ವ್ಯಾಕರಣ ಅಭ್ಯಾಸವು ಸುಲಭವಾಗಿದೆ.

‘ಗಣಕ ವಚನ ಸಂಪುಟ’ ಎಂಬ ಹೆಸರಿನ ಕಂಪ್ಯೂಟರ್ ತಂತ್ರಾಂಶವನ್ನು ಸ್ವಾಮೀಜಿಯವರು ನಿರ್ಮಿಸಿದ್ದಾರೆ. ಭಾರತೀಯ ಸಾಹಿತ್ಯ ಪ್ರಕಾರದಲ್ಲಿಯೇ ವಿಶಿಷ್ಟ ಸ್ಥಾನವನ್ನು ಹೊಂದಿರುವ ವಚನ ಸಾಹಿತ್ಯದ ಪ್ರಸಾರದಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಸ್ವಾಮೀಜಿಯವರು ಈ ವಚನ ಸಂಪುಟದಲ್ಲಿ ಬಸವಣ್ಣನವರ 1426 ವಚನಗಳು ಮತ್ತು ಇತರ ಶರಣರ 18 ಸಾವಿರ ವಚನಗಳನ್ನು ಇದರಲ್ಲಿ ಅಳವಡಿಸಿದ್ದಾರೆ. ಕಂಪ್ಯೂಟರ್ ತಂತ್ರಾಂಶ ಗುಣಲಕ್ಷಣಗಳಾದ ಹುಡುಕುವುದು ಮತ್ತು ಸೂಚೀಕರಣ ಹಾಗೂ ವಿಂಗಡಣೆಯ ಸೌಲಭ್ಯಗಳನ್ನು ಬಳಸಿ ವಿವಿಧ ವಿಷಯ ಕುರಿತು, ವಿವಿಧ ರಚನೆಕಾರರ ವಚನಗಳನ್ನು ಸುಲಭವಾಗಿ ಹುಡುಕಿ, ವಿಂಗಡಿಸಿ ಪತ್ತೆಮಾಡಿ, ಅವುಗಳನ್ನು ಓದಿಕೊಳ್ಳಬಹುದು, ಕನ್ನಡೇತರರಿಗೆ ಈ ವಚನ ಸಾಹಿತ್ಯದ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಈ ಎಲ್ಲಾ ವಚನಗಳ ಅರ್ಥವನ್ನು ಇಂಗ್ಲಿಷ್ ಭಾಷೆಯಲ್ಲಿಯೂ ಸಹ ನೀಡಲಾಗಿದೆ. ಅಲ್ಲದೆ, ಕನ್ನಡ ಲಿಪಿ ಬಾರದವರೂ ವಚನದ ಉಚ್ಛಾರವನ್ನು ಮಾಡಲು ಅನುಕೂಲವಾಗುವಂತೆ ವಚನಗಳನ್ನು ರೋಮನ್ ಲಿಪಿಯಲ್ಲಿಯೂ ಸಹ ನೀಡಲಾಗಿದೆ. ಕನ್ನಡ ಲಿಪಿಯನ್ನು ಕಂಪ್ಯೂಟರ್‌ನಲ್ಲಿ ಮೂಡಿಸಲು ಮಠದ ವತಿಯಿಂದಲೇ ಪ್ರತ್ಯೇಕ ಕನ್ನಡ ಲಿಪಿ ತಂತ್ರಾಂಶವನ್ನು ಸಿದ್ಧಪಡಿಸಿ ಅಳವಡಿಸಲಾಗಿದೆ. ಬಳಕೆಗೆ ಸುಲಭವಾದ ಕೀಲಿಮಣೆ ವಿನ್ಯಾಸವನ್ನೂ ಸಹ ಅಳವಡಿಸಲಾಗಿದೆ.