ಸದಸ್ಯ:Prabhu456/sandbox1
ಗೋಚರ
"ಮಾಂಸಾಹಾರಿ ಸಸ್ಯಗಳು"
ಓಡಾಡಲಾಗದ ಬಲಿಯ ಬೆನ್ನು ಹತ್ತಲಾಗದೆ ಈ ಸಸ್ಯಗಳು ಹಾಗಿದ್ದೂ ತಾವು ನೆಲಹಿಡಿದು ನಿಂತಲ್ಲೇ ಬಲಿಪ್ರಾಣಿಗಳನ್ನು ಆಕರ್ಷಿಸಿ ಸೆರೆಹಿಡಿದು ಕೊಂದು ತಿಂದುಹಾಕುವ ತಂತ್ರಗಳ ಸೋಜಿಗದ ಸಂಕ್ಷಿಪ್ತ ವಿವರಗಳನ್ನು ನೀವೇ ಗಮನಿಸಿ:
- ‘ಇಬ್ಬನಿ ಗಿಡ’. ಈ ಮಾಂಸಾಹಾರೀ ಗಿಡದ ಎಲೆಗಳ ಅಂಚುಗಳ ತುಂಬ ಚಾಚಿ ನಿಂತ ದೃಢ ತಂತುಗಳು. ಪ್ರತಿ ತಂತುವಿನ ತುದಿಯಲ್ಲೂ ಗೋಂದಿನಂತೆ ಮಂದವಾದ ಅಂಟು ಅಂಟಾದ ದ್ರವದ ಹನಿ. ಇಬ್ಬನಿಯ ನೀರಹನಿಗಳಂತೆಯೇ ಕಾಣುವ ಈ ‘ಜಲದ ಸೆಲೆ’ಯತ್ತ ಹಾರಿಬರುವ ಬಾಯಾರಿದ ಕೀಟಗಳು ಇಳಿದೊಡನೆ ತಪ್ಪಿಸಿಕೊಳ್ಳುವಂತಿಲ್ಲ. ಅಲ್ಲೇ ಬಂಧಿಯಾಗಿ, ಬಲಿಯಾಗಿ ಇಬ್ಬನಿ ಗಿಡಕ್ಕೆ ಆಹಾರವಾಗುವುದೇ ಅವುಗಳ ಹಣೆಬರೆಹ.
- ‘ಹೂಜಿಗಿಡ’ . ಕೊಳವೆಗಳಂತೆ, ಉದ್ದಕತ್ತಿನ ಹೂಜಿಗಳಂತೆ, ಮುಚ್ಚಳ ಸಹಿತ ನಿರ್ಮಿತಿಗಳಂತೆ ಈ ಗಿಡದ ಎಲೆಗಳ ರಚನೆ. ಸುತ್ತಿ ಸುತ್ತಿ ನಿಂತ ಸರ್ಪಗಳಂಥ ರೂಪದ ಕೊಳವೆ ಎಲೆಗಳ ಪ್ರಭೇದಗಳೂ ಉಂಟು . ಹೂಜಿಯ ಅಥವಾ ಕೊಳವೆಯ ತೆರೆದ ಅಂಚಿನ ಆಸುಪಾಸಿನಲ್ಲೂ ಮುಚ್ಚಳದ ತಳದಲ್ಲೂ ಮಧುರ ರುಚಿಯ, ಆಕರ್ಷಕ ವಾಸನೆಯ ಜಾರುದ್ರವ ಲೇಪನ. ಸವಿಜೇನು ಸೇವಿಸಲೆಂದು ಬಂದಿಳಿದ ಕೀಟಗಳು ಹೂಜಿಯೊಳಕ್ಕೆ ಅದರ ತಳದ ವಿಶೇಷ ಅಂಟುದ್ರವದೊಳಕ್ಕೆ ಜಾರಿಬಿದ್ದು ಅಂತ್ಯ ಕಾಣುತ್ತವೆ. ಹೂಜಿಯ ಬಾಯಿಯ ಬಳಿ ಬಂಧಿಯಾದ ಕೀಟಗಳನ್ನು ಹಿಡಿಯಹೋಗಿ ಹೂಜಿಯೊಳಕ್ಕೆ ಜಾರಿಬೀಳುವ ಹಲ್ಲಿ-ಕಪ್ಪೆಗಳನ್ನೂ ತಿಂದುಹಾಕುವ ಪ್ರಭೇದಗಳೂ ಇವೆ.
- ‘ವೀನಸ್ ಫ್ಲೈ ಟ್ರಾಪ್’ . ಇಬ್ಭಾಗಗೊಂಡ ರಚನೆಯ, ತೆರೆಯಬಲ್ಲ, ಮಡಿಸಿಕೊಳ್ಳಬಲ್ಲ ವಿನ್ಯಾಸದ ಎಲೆಗಳು. ಪ್ರತಿ ಎಲೆಯ ಅಂಚಿನುದ್ದಕ್ಕೂ ಸೂಕ್ಷ್ಮ ಸಂವೇದೀ ತಂತುಗಳು. ಬಲಿಯೊಂದು ಈ ತಂತುಗಳನ್ನು ಸ್ಪರ್ಶಿಸಿದೊಡನೆ ಸಸ್ಯದಲ್ಲಿ ವಿಸರ್ಜನೆಗೊಳ್ಳುವ ವಿದ್ಯುದಾವೇಶ ಕಣ್ಣೆವೆಯಿಕ್ಕುವಷ್ಟರಲ್ಲಿ ಎಲೆಯನ್ನು ಭದ್ರವಾಗಿ ಮಡಿಸುತ್ತದೆ. ಬಲಿ ಪ್ರಾಣಿ ಬಂಧಿಯಾಗುತ್ತದೆ. ಮಾಂಸಾಹಾರೀ ಗಿಡಗಳ ವಿಧ ವಿಧ ಭೇಟೆ ತಂತ್ರಗಳಿಗೆ ಇವು ತ್ರಿವಿದ ನಿದರ್ಶನಗಳು ಅಷ್ಟೆ. ಅದು ಹೇಗೇ ಇರಲಿ. ತಾವು ಸೆರೆಹಿಡಿದ ಪ್ರಾಣಿಗಳನ್ನು ಇಂಥವೆಲ್ಲ ಸಸ್ಯಗಳೂ ವಿಶೇಷ ಕಿಣ್ವಭರಿತ ದ್ರವಗಳಲ್ಲಿ ನೆನೆಸುತ್ತವೆ, ಕರಗಿಸುತ್ತವೆ. ಅವುಗಳ ಶರೀರದ ಪೋಷಕ ಅಂಶಗಳನ್ನು ಹೀರಿಕೊಳ್ಳುತ್ತವೆ.
ವಾಸ್ತವ ಏನೆಂದರೆ ಈ ವರ್ಗದ ಸಸ್ಯಗಳು ಕೀಟಗಳನ್ನು ಪ್ರಾಣಿಗಳ ಮಾಂಸವನ್ನು ಆಹಾರವನ್ನಾಗಿ ಸೇವಿಸುವುದಿಲ್ಲ. ಇತರ ಸಸ್ಯಗಳಂತೆಯೇ ಈ ಸಸ್ಯಗಳೂ ‘ದ್ಯುತಿ ಸಂಶ್ಲೇಷಣೆ’ಯಿಂದಲೇ ಆಹಾರವನ್ನು ತಯಾರಿಸಿಕೊಳ್ಳುತ್ತವೆ.