ವಿಷಯಕ್ಕೆ ಹೋಗು

ಪಿ. ಗೋವಿಂದ ಪಿಳ್ಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ. ಗೋವಿಂದ ಪಿಳ್ಳೆ

ಪಿ. ಗೋವಿಂದ ಪಿಳ್ಳೆ (1849-97). ಮಲಯಾಳ ಭಾಷಾಚರಿತ್ರಂ ಎನ್ನುವ ಗ್ರಂಥದ ಕರ್ತೃ.

ಬಾಲ್ಯ

[ಬದಲಾಯಿಸಿ]

ತಿರುವನಂತಪುರದ ಶ್ರೀಕಂಠೇಶ್ವರ ಪ್ರದೇಶದ ಪಪ್ಪುಪಿಳ್ಳೆ ಈತನ ತಂದೆ. 1873ರಲ್ಲಿ ಬಿ.ಎ. ಪದವಿ ಪಡೆದು ತಿರುವನಂತಪುರದ ಒಂದು ಪ್ರೌಢಶಾಲೆಗೆ ಮುಖ್ಯೋಪಾಧ್ಯಾಯನಾಗಿ ನೇಮಕಗೊಂಡ. ಒಂದು ವರ್ಷ ಕಳೆಯುವಷ್ಟರಲ್ಲಿ ಆಗಿನ ತಿರುವಾಂಕೂರು ಮಹಾರಾಜರಾಗಿದ್ದ ಆಯಿಲ್ಯ ತಿರುನಾಳರು ಈತನನ್ನು ತಮ್ಮ ಅರಮನೆಯ ಪ್ರಧಾನ ಕರಣಿಕನನ್ನಾಗಿ ನೇಮಿಸಿಕೊಂಡರು. ಹೀಗೆ ಅರಮನೆಯ ಪ್ರಧಾನಾಧಿಕಾರಿಯಾಗಿ ಪಿಳ್ಳೆ ಸ್ವಲ್ಪಕಾಲ ರಾಜರ ವಿಶೇಷ ಪ್ರೀತಿಗೆ ಪಾತ್ರನಾಗಿ ಸರ್ವಾಧಿಕಾರ್ಯಕ್ಕಾರ್ ಎಂದು ಸಾಕಷ್ಟು ಪ್ರಸಿದ್ಧನಾದ.

ಸಾಹಿತ್ಯ ರಚನೆ

[ಬದಲಾಯಿಸಿ]

ಆಯಿಲ್ಯ ತಿರುನಾಳ್ ಮಹಾರಾಜರು ದಿವಂಗತರಾದ (1880) ಬಳಿಕ ರಾಜ ಗದ್ದುಗೆಯನ್ನೇರಿದ ವಿಶಾಖ ತಿರುನಾಳ್ ಅದುವರೆಗೆ ರಾಜಾಶ್ರಿತರಾಗಿದ್ದ ಅಧಿಕಾರಿಗಳನ್ನೆಲ್ಲ ಕೆಲಸದಿಂದ ತೆಗೆದುಹಾಕಿದರು. ಆ ಸಮೂಹದಲ್ಲಿ ಗೋವಿಂದ ಪಿಳ್ಳೆಯೂ ಒಬ್ಬ. ಆ ಘಟನೆಯ ಅನಂತರ ಪಿಳ್ಳೆಯ ಆಸಕ್ತಿ ಮಲಯಾಳಂ ಸಾಹಿತ್ಯ ರಚನೆಯ ಕಡೆಗೆ ತಿರುಗಿತು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಮಲಯಾಳಂ ಭಾಷೆ ಮತ್ತು ಸಾಹಿತ್ಯಕ್ಕೆ ಒಂದು ಸಮಗ್ರ ಚರಿತ್ರೆಯನ್ನು ರಚಿಸಬೇಕೆಂದು ಯೋಚಿಸುತ್ತಿದ್ದ ಪಿಳ್ಳೆ ಆ ಯೋಜನೆಯ ಅಂಗವಾಗಿ 1881ರಲ್ಲಿ ಮಲಯಾಳ ಭಾಷಾಚರಿತ್ರಂ ಎನ್ನುವ 168 ಪುಟಗಳ ಮೊದಲ ಸಂಪುಟವನ್ನು ಸಿದ್ಧಮಾಡಿ ಪ್ರಕಟಿಸಿದ. 1889-90 ರ ಅವಧಿಯಲ್ಲಿ ಐನೂರು ಪುಟಗಳ ಮತ್ತೆರಡು ಸಂಪುಟಗಳು ಬೆಳಕು ಕಂಡವು. ಮಾಸಿಕಗಳು, ಸಾಪ್ತಾಹಿಕಗಳು, ಮುದ್ರಣಾಲಯಗಳು- ಮುಂತಾದವುಗಳ ಸೌಲಭ್ಯಗಳಿಲ್ಲದಿದ್ದ ಕಾಲದಲ್ಲಿ, ಮಲಯಾಳದ ಪ್ರಸಿದ್ಧ ಗ್ರಂಥಗಳು ಪ್ರಕಟಗೊಂಡಿರದಿದ್ದ ಕಾಲದಲ್ಲಿ ಓಲೆಯ ಗ್ರಂಥಗಳು, ಐತಿಹ್ಯಗಳು - ಮುಂತಾದವನ್ನು ಕಾಪಾಡಿಕೊಂಡು ಬಂದಿದ್ದ ಪ್ರಾಚೀನ ಗೃಹಗಳಿಗೆ ಅಲೆದು, ಹುಡುಕಿ, ಸಂಗ್ರಹಿಸಿ ಸಾಹಿತ್ಯ ಚರಿತ್ರೆಯೊಂದನ್ನು ಮೊದಲ ಬಾರಿಗೆ ರಚಿಸಿದ ಕೀರ್ತಿ ಗೋವಿಂದ ಪಿಳ್ಳೆಯದು.

ಅರಮನೆಯ ಅಧಿಕಾರವನ್ನು ಬಿಟ್ಟಮೇಲೆ ಪಿಳ್ಳೆ ತಿರುವನಂತಪುರದಲ್ಲಿ ವಕೀಲನಾದ. ಅದೇ ಸಂದರ್ಭದಲ್ಲಿ ಒಂದು ಇಂಗ್ಲಿಷ್ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದ್ದಲ್ಲದೆ ಅದುವರೆಗೆ ಬೆಳಕು ಕಾಣದೆ ಇದ್ದ ಭಾಷಾ ನೈಷಧ ಚಂಪು, ದಕ್ಷಯಾಗ ಕಿಳಿಪ್ಪಾಟ್ಟು - ಮುಂತಾದುವನ್ನು ಪ್ರಕಟಿಸಿ ಬೆಳಕಿಗೆ ತಂದ. ರೋಮನ್ ಚರಿತ್ರೆ ಮತ್ತು ಎ ಹ್ಯಾಂಡ್ ಬುಕ್ ಆಫ್ ಟ್ರ್ಯಾವಂಕೂರ್ ಎನ್ನುವ ಎರಡು ಸ್ವಂತ ಕೃತಿಗಳನ್ನು ರಚಿಸಿ ಪ್ರಕಟಿಸಿದ.

ಒಂದು ಇಂಗ್ಲಿಷ್-ಮಲಯಾಳಂ ನಿಘಂಟನ್ನು ಸಿದ್ಧಪಡಿಸಿ ಪ್ರಕಟಿಸುವ ಯೋಜನೆ ಹಾಕಿಕೊಂಡು ಪಿಳ್ಳೆ ಅದಕ್ಕಾಗಿ ಶ್ರಮಿಸಿದ್ದುಂಟು. ಆದರೆ ಅದು ಈತನ ಜೀವಮಾನದಲ್ಲಿ ಸಿದ್ಧಿಸಲಿಲ್ಲ.