ಹವಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹವಳ (ಇಂಗ್ಲೀಷ್ - coral ಕೊಂಕಣಿ-ಪೊವಳೆ Marathi- पोवले,)[ಬದಲಾಯಿಸಿ]

ಸಾಗರದ ಆಳದಲ್ಲಿ ಕಂಡುಬರುವ ಹವಳಗಳು ಮನುಷ್ಯರಂತೆ ಸಂಘಜೀವಿಗಳು. ಹವಳಗಳ ಮೂಲರೂಪ ಹುಳಗಳು ಕಟ್ಟಿದ ಗೂಡುಗಳು. ಈ ಹುಳುಗಳು ಸಾಮೂಹಿಕವಾಗಿ ಬದುಕುತ್ತವೆ. ಕೆಲವೊಂದು ಪ್ರಭೇದಗಳು ಒಂಟಿಯಾಗಿಯೂ ಜೀವಿಸುತ್ತವೆ. ಹೆಚ್ಚಿನ ಪ್ರಭೇದದ ಹುಳುಗಳು ಒಟ್ಟಿಗೆ ಜೀವಿಸುವುದರಿಂದ ಸಾಗರದಲ್ಲಿ ಒಟ್ಟಾಗಿ ತಮ್ಮ ನೆಲೆಯನ್ನು ಕಾಲನಿ ರೀತಿಯಲ್ಲಿ ಹೊಂದಿವೆ.

ಹವಳ ಹುಟ್ಟೋದು ಹೇಗೆ ?[ಬದಲಾಯಿಸಿ]

ಹವಳದ ಪ್ರಭೇದಗಳು ಭಿನ್ನ ಭಿನ್ನ ರೀತಿಯಲ್ಲಿ ಇದ್ದರೂ ಅವುಗಳ ಹುಟ್ಟು, ರಚನೆ, ಬೆಳವಣಿಗೆ ಹಾಗೂ ಅಂತ್ಯವು ಒಂದೇ ತೆರನಾಗಿರುತ್ತವೆ. ಎಲ್ಲ ಹವಳಗಳು (ಹುಳುಗಳು) ತಮ್ಮ ಮೆದುವಾದ ಶರೀರದ ರಕ್ಷಣೆಗಾಗಿ ಬಟ್ಟಲಿನ ಅಕಾರದಲ್ಲಿ ಸುಣ್ಣದಿಂದ ಕಲ್ಲಿನಷ್ಟು ಗಟ್ಟಿಯಾದ ರಕ್ಷಣಾ ಗೋಡೆಯನ್ನು ರಚಿಸಿಕೊಳ್ಳುತ್ತವೆ. ಅದರೊಳಗೆ ವಾಸಿಸುವ ಇವು ಅಲ್ಲೇ ಬೆಳೆದು ನಂತರ ಅವಸಾನ ಹೊಂದುತ್ತವೆ. ಕೊನೆಯದಾಗಿ ಉಳಿಯುವ, ಇವು ಕಟ್ಟಿದ ಅಸ್ಥಿಯನ್ನೇ ಈಗ ನಾವು ನೋಡುವ, ಆಭರಣಗಳಲ್ಲಿ ಮಿಂಚುವ ‘ಹವಳ’. ಒತ್ತೊತ್ತಾಗಿ ವಾಸಿಸಿದ ಹುಳಗಳ ಸಮೂಹ ಬೆಳೆಯುತ್ತಾ ಹೋಗಿ ಬಳಿಕ ಅಸ್ಥಿಯ ದೊಡ್ಡ ಸಾಲು ಉಂಟಾಗಿ ಹವಳದ ಬಂಡೆಯಾಗುತ್ತವೆ.

ಹವಳದ ಬಣ್ಣ ಹೇಗಿರುತ್ತೆ ?[ಬದಲಾಯಿಸಿ]

ಹವಳ ಎಂದಾಕ್ಷಣ ಗುಲಾಬಿ ಹಾಗೂ ಕೆಂಪುಬಣ್ಣದವು ಎಂಬ ಸಾಮಾನ್ಯ ಅಭಿಪ್ರಾಯವಿದೆ. ಮನುಷ್ಯರಂತೆ ಹವಳಗಳಲ್ಲಿ ಕೆರಾಟಿನ್ ಅದರ ಬಣ್ಣವನ್ನು ನಿರ್ಧರಿಸುತ್ತದೆ. ನೀಲಿ, ಕಿತ್ತಳೆ ಬಣ್ಣದಲ್ಲೂ ಹವಳಗಳು ದೊರೆಯುತ್ತವೆ. ಕೆಂಪು ಬಣ್ಣದ ಹವಳಗಳು ಅತೀ ಆಳದಲ್ಲಿ ದೊರೆಯುವುದರಿಂದ ಇವುಗಳ ಬೆಲೆ ಹೆಚ್ಚು. ಭಾರತದ ಲಕ್ಷದ್ವೀಪ, ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್​ನಲ್ಲಿ ಹೆಚ್ಚಾಗಿ ಇವು ಕಂಡುಬರುತ್ತವೆ.

ಹವಳ ಜೀವಿ ‘ಕೋರಲ್’[ಬದಲಾಯಿಸಿ]

ಹವಳಗಳನ್ನು ಉತ್ಪಾದಿಸುವ ಜೀವಿಗಳನ್ನು ‘ಕೋರಲ್’ಗಳು ಎನ್ನುತ್ತಾರೆ. ಅಕಶೇರುಕಗಳಲ್ಲಿ ಹೆಗಲ ಮೂಲೆಯಿಂದ ಸ್ವಲ್ಪ ಹೊರಕ್ಕೆ ಚಾಚಿಕೊಂಡಿರುವ ಮೃದ್ವಸ್ಥಿಗಳೇ ಹವಳ ಜೀವಿಗಳು. ಸಮುದ್ರದಾಳದಲ್ಲಿನ ಬಂಡೆ, ಕಲ್ಲುಗಳಿಗೆ ಅಥವಾ ಗಟ್ಟಿ ನೆಲಕ್ಕೆ ಅಂಟಿಕೊಂಡಂತೆ ಈ ಹುಳಗಳು ಕೋಶಗಳನ್ನು ಕಟ್ಟುತ್ತವೆ. ಲೋಳೆಯಂತಹ ಸೂಕ್ಷ್ಮಜೀವಿಗಳಿಂದ ಹವಳಗಳು ತಯಾರಾಗುವುದರಿಂದ ಇವನ್ನು ‘ಸಮುದ್ರ ಪಾಚಿಗಳು’ ಎಂದೂ ಕರೆಯಬಹುದು. ಸಮುದ್ರದಲ್ಲಿ ಹವಳ ದಂಡೆ ನಿರ್ವಣವಾಗುತ್ತೆ.

ಹವಳದಂಡೆ ನಿರ್ವಣಕ್ಕೆ ಬೇಕು ಸಾವಿರ ವರ್ಷ:[ಬದಲಾಯಿಸಿ]

ಹವಳಗಳು ಎರಡು ರೀತಿಯಲ್ಲಿ ಉತ್ಪತ್ತಿಯಾಗುತ್ತವೆ. ಹವಳದ ಸಾಮಾನ್ಯ ದಂಡೆ ನಿರ್ವಣವಾಗಲು ಸಾವಿರಾರು ವರ್ಷ ಬೇಕಾಗುತ್ತದೆ. ಪಾಚಿಗಳು ಒಂದಕ್ಕೊಂದು ಕವಲೊಡೆದು ರೂಪಗೊಳ್ಳುವುದು ಒಂದು ವಿಧಾನವಾದರೆ, ಪಾಚಿ ಅಥವಾ ಲೋಳೆಗಳ ಮೊಟ್ಟೆಗಳಿಂದಲೂ ಹವಳಗಳು ರೂಪ ತಾಳುತ್ತವೆ. ಆಳವಿಲ್ಲದ ಸಮುದ್ರದ 60 ಮೀಟರ್ ಮೇಲೆ ಹವಳದ ದಂಡೆಗಳು ನಿರ್ವಣವಾಗುತ್ತವೆ. ನೀರಿನ ಉಷ್ಣಾಂಶ 18 ರಿಂದ 33 ಡಿಗ್ರಿ ಸೆಲ್ಸಿಯಸ್ ಇರುವ ಬೆಚ್ಚಗಿನ ವಾತಾವರಣದಲ್ಲಿ ಈ ದಿಣ್ಣೆಗಳು ಬೆಳವಣಿಗೆ ಹೊಂದುತ್ತವೆ. ಇವುಗಳನ್ನು ಜೀವಂತವಾಗಿರಲು ಸೂರ್ಯನ ಬೆಳಕು ಅವಶ್ಯಕ.

ಸಾಗರದಲ್ಲಿ 6 ಲಕ್ಷ ಚ.ಕಿ.ಮೀ. ವಿಸ್ತಾರ:[ಬದಲಾಯಿಸಿ]

ಹವಳಗಳಿಗೆ ಕಡಲೇ ನೆಲೆ. ಸಮಭಾಜಕದ ಆಸುಪಾಸಿನ ಕಡಲಂಚಿನ ಸನಿಹದ, ಕಡಿಮೆ ಆಳದ, ಸ್ವಚ್ಛವಾದ ಬೆಚ್ಚಗಿನ ನೀರತಾಣಗಳಲ್ಲಷ್ಟೇ ಅವುಗಳ ವಾಸ್ತವ್ಯ. ಹಾಗಿದ್ದು ಸೂರ್ಯನ ಬೆಳಕು ಹರಿದು ಬರುವ ಅವಕಾಶವಿರುವ ಆಳವಿರಬೇಕು. ಪ್ರಸ್ತುತ ವಿಶ್ವದಲ್ಲಿನ ಎಲ್ಲ ಸಾಗರದಲ್ಲಿರುವ ಹವಳ ಸಾಮ್ರಾಜ್ಯದ ವಿಸ್ತಾರ ಆರು ಲಕ್ಷ ಚದರ ಕಿ.ಮೀ. ಹವಳಗಳನ್ನು ಸಮುದ್ರದಿಂದ ಹಾಗೆಯೇ ಕೆತ್ತಿ ತಂದು ಆಭರಣಗಳಿಗೆ ಬಳಸುವುದಿಲ್ಲ. ಆಭರಣಕ್ಕೆ ಯೋಗ್ಯವಾದ ಹವಳದ ಪದರಗಳ ಗಟ್ಟಿಗಳನ್ನು ನುರಿತ ತಜ್ಞರು ಸಾಗರದಿಂದ ಸಂಗ್ರಹಿಸುತ್ತಾರೆ. ಬಳಿಕ ಬಿಸಿಲಿಗೆ ಒಡ್ಡಿ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸಿ ಅವುಗಳಿಗೆ ಸುಂದರ ರೂಪ ನೀಡುತ್ತಾರೆ. ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸುವ ವೇಳೆ ಅವುಗಳ ಒಳಗಿರುವ ಜೀವಿಗಳು ಸಾಯುತ್ತವೆ. ಈ ವೇಳೆ ಅವುಗಳು ಹೊರಸೂಸುವ ಬೆಳಕನ್ನು ಪರೀಕ್ಷೆಗೆ ಒಳಪಡಿಸಿದರೆ, ಯಾವ ಸ್ಥಿತಿಯಲ್ಲಿವೆ ಎಂಬುದು ಗೊತ್ತಾಗುತ್ತದೆ. ಆ ಹುಳಗಳ ಬೆಳಕಿನ ಪ್ರಖರತೆ ಕಡಿಮೆಯಾಗಿದ್ದರೆ ಅವು ರೋಗಪೀಡಿತವಾಗಿವೆ ಮತ್ತು ವಿನಾಶದತ್ತ ಸಾಗುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ.

ಜೀವವೈವಿಧ್ಯದ ತಾಣ-ಹವಳ ಸಾಮ್ರಾಜ್ಯ:[ಬದಲಾಯಿಸಿ]

ಕಡಲಿನ ಅತಿ ನಿಬಿಡ, ಅತಿ ವೈವಿಧ್ಯಮಯ ಜೀವಾಶ್ರಯ ತಾಣದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿರುತ್ತವೆ ಹವಳ ಹುಳಗಳು. ಅಸಂಖ್ಯ ಸಾಗರದ ಸಣ್ಣಜೀವಿಗಳು, ಮೀನು, ಮೃದ್ವಂಗಿ, ಸರೀಸೃಪಗಳು ಹವಳ ಅಸ್ಥಿ ಅಥವಾ ಸಮೂಹದತ್ತ ನೆಲೆಗೊಂಡಿವೆ. ಹೀಗಾಗಿ ನೂರಾರು ಜೀವಿಗಳ ಆಹಾರ ಸರಪಳಿಗಳು ರೂಪುಗೊಂಡಿವೆ. ನೆಲದ ಮೇಲಿನ ಅರಣ್ಯ ರಾಶಿಗಳಂತೆಯೇ ಹವಳ ಲೋಕದಲ್ಲೂ ಅಸಾಮಾನ್ಯ ಜೀವಿದಟ್ಟಣೆ ಇದೆ. ಕಡಲಿನ ಇಡೀ ಜೀವಜಾಲದ ಶೇಕಡ 25ರಷ್ಟು ಪ್ರಭೇದಗಳು ಹವಳ ರಾಜ್ಯವನ್ನೇ ಆಶ್ರಯಿಸಿವೆ.

ಆಭರಣಕ್ಕಷ್ಟೆ ಸೀಮಿತವಾಗದೆ, ಹವಳದ ದಂಡೆಗಳು ಸೂಕ್ಷ್ಮಜೀವಿಗಳ ಪಾಲಿಗೆ ಅತೀ ದೊಡ್ಡ ಆಹಾರ ಸಂಪನ್ಮೂಲವೂ ಹೌದು. ಹವಳಗಳು ಸೂರ್ಯನ ಬೆಳಕು ಮತ್ತು ತ್ಯಾಜ್ಯಗಳನ್ನು ಉಪಯೋಗಿಸಿ ಆಮ್ಲಜನಕ ಮತ್ತು ಆಹಾರವನ್ನು ಉತ್ಪತ್ತಿ ಮಾಡುತ್ತವೆ. ಪಾಚಿಯಂತಹ ಸೂಕ್ಷ್ಮಜೀವಿಗಳು ಒಂದಕ್ಕೊಂದು ಸಾವಿರಾರು ಕವಲೊಡೆದು ಬೃಹತ್ ಆಕಾರ ಪಡೆಯತ್ತವೆ.

ಹವಳಕ್ಕೂ ತಾಪಮಾನ ಪ್ರತಿಕೂಲ:[ಬದಲಾಯಿಸಿ]

ಜಾಗತಿಕ ತಾಪಮಾನ ಬದಲಾವಣೆಯು ದೊಡ್ಡ ಪ್ರಮಾಣದಲ್ಲಿ ಹವಳಗಳ ನಾಶಕ್ಕೆ ಎಡೆಮಾಡಿಕೊಡುತ್ತಿವೆ. ಭೂಮಿಯ ಬಿಸಿ ಏರುತ್ತಿರುವುದು ಗುಪ್ತಗಾಮಿನಿಯಾಗಿರುವ ಹವಳಗಳು ತಳದಲ್ಲೇ ನಶಿಸುವಂತೆ ಮಾಡಿದೆ. ಸಾಗರದ ನೀರು ಅಧಿಕ ಬೆಚ್ಚಗಾದಂತೆ ಹವಳಗಳನ್ನಾವರಿಸಿದ ಶೈವಲಗಳು (ಕಡಲಪಾಚಿ, ಹಾವಸೆ) ಮೃತವಾಗಿ ಹವಳ ದಿಬ್ಬಗಳು ಬರಡು ಮೂಳೆ ರಾಶಿಗಳಂತಾಗುತ್ತವೆ.

ಸಮುದ್ರದ ಮಟ್ಟ ಏರಿದಂತೆ ಹವಳ ಜೀವಿಗಳ ಬೆಳವಣಿಗೆ ಹೆಚ್ಚಾಗುವುದು. ಆದರೆ ಹವಳ ಜೀವಿಗಳು ಅಧಿಕ ಉಷ್ಣತೆಯನ್ನು ಸಹಿಸಲಾರವು. ಏರುತ್ತಿರುವ ಉಷ್ಣತೆಯಿಂದ ಹವಳ ಜೀವಿಗಳು ನಾಶವಾಗಲಿವೆ. ಇವು ನೀರಿನ ಅಧಿಕ ಉಷ್ಣತೆ ಮತ್ತು ಮಾಲಿನ್ಯಕ್ಕೆ ಬೇಗನೇ ಗುರಿಯಾಗುವ ತುಂಬ ಸೂಕ್ಷ್ಮ ಸ್ವಭಾವದವು. ಎಲ್​ನಿನೊ ಸಂದರ್ಭದಲ್ಲಿ ಉಷ್ಣತೆ ಅಧಿಕವಾದಾಗ ಅದರಿಂದ ಹವಳಗಳ ಮೇಲೆ ಉಂಟಾಗುವ ಪರಿಣಾಮವನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಆಸ್ಟ್ರೇಲಿಯಾದ ಕಡಲ ತೀರದಿಂದ ದೂರದಲ್ಲಿರುವ ಗ್ರೇಟ್ ಬ್ಯಾರಿಯರ್ ರೀಫ್ ಎಂಬ ಹವಳ ದಿಬ್ಬಗಳಲ್ಲಿ ಬೃಹತ್ ಅವನತಿ 1998ರಲ್ಲಿ ಉಂಟಾಯಿತು. ಅಲ್ಲದೆ ವಿಶ್ವದ ಹಲವಾರು ಸ್ಥಳಗಳಲ್ಲಿ ಹವಳ ಜೀವಿಗಳು ಸತ್ತು ಸುಣ್ಣವಾಗಿದ್ದು ದಾಖಲೆಯಾಗಿದೆ. ಈಗಾಗಲೇ ಹವಳ ಸಾಮ್ರಾಜ್ಯದ ಶೇಕಡ ಹತ್ತು ಭಾಗ ಸಂಪೂರ್ಣ ನಾಶವಾಗಿದೆ; ಶೇಕಡ 30 ಭಾಗ ಚಿಂತಾಜನಕ ಸ್ಥಿತಿಯಲ್ಲಿದೆ, ಶೇಕಡ 30 ಭಾಗ ವಿನಾಶದ ಹಾದಿಯಲ್ಲಿದೆ. ಹವಳ ದಿಬ್ಬ ನಿರ್ಮಾಣ ಮಾಡುವ 799 ಹವಳ ಜೀವಿಗಳಲ್ಲಿ 568 ಪ್ರಭೇದಗಳು ಅಪಾಯಕ್ಕೆ ತುತ್ತಾಗಲಿವೆ. ಅರಣ್ಯನಾಶ ಮತ್ತು ಗಣಿಗಾರಿಕೆಗಳಿಂದ ಅಪಾರ ಪ್ರಮಾಣದ ಕಲ್ಲು, ಮರಳು, ಮಣ್ಣು ಮಳೆ ನೀರಿನ ಮೂಲಕ ನದಿಗಳನ್ನು ತಲುಪಿ ನಂತರ ಕಡಲು ಸೇರಿ ಸೂರ್ಯರಶ್ಮಿಯನ್ನು ತಡೆಗಟ್ಟುತ್ತದೆ. ಈ ಕಾರಣಗಳಿಂದಲೂ ಹವಳದ ದ್ವೀಪಗಳು ಅವನತಿಯಲ್ಲಿವೆ.

ಭಾರತದ ಹವಳ ದ್ವೀಪಗಳು:[ಬದಲಾಯಿಸಿ]

ಭಾರತದ ಭೌಗೋಳಿಕ ಪರಿಸರ ವ್ಯವಸ್ಥೆಯಲ್ಲಿ ಹವಳ ದ್ವೀಪಗಳು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿವೆ. ಅಂದಾಜಿನ ಪ್ರಕಾರ ಭಾರತದ 8 ಸಾವಿರ ಕಿ.ಮೀ. ಕಡಲತೀರದ ಉದ್ದಕ್ಕೂ ಇವು ಹರಡಿಕೊಂಡಿವೆ.

ಗಲ್ಪ್ ಆಫ್ ಮನ್ನಾರ್:[ಬದಲಾಯಿಸಿ]

ದಕ್ಷಿಣದ ರಾಮೇಶ್ವರದಿಂದ ಉತ್ತರದ ತೂತುಕುಡಿಯವರೆಗೆ 21 ದ್ವೀಪಗಳನ್ನು ಗಲ್ಪ್ ಆಫ್ ಮನ್ನಾರ್ ಎಂದು ಕರೆಯಲಾಗಿದ್ದು, ಮನ್ನಾರ್ ಜೈವಿಕ ಮಂಡಲ ಎಂದು ಘೊಷಿಸಲಾಗಿದೆ.

ಅಂಡಮಾನ್ ನಿಕೋಬಾರ್ ದ್ವೀಪ:[ಬದಲಾಯಿಸಿ]

ಬಂಗಾಳ ಕೊಲ್ಲಿಯಲ್ಲಿ ಹವಳಗಳ ಪ್ರದೇಶ ಹೆಚ್ಚಾಗಿದ್ದು, ಅಂಚಿನ ಉದ್ದಕ್ಕೂ ಹರಡಿಕೊಂಡಂತೆ ದ್ವೀಪಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಹವಳಗಳ ಕಾರಣದಿಂದಲೇ 500 ದ್ವೀಪಗಳ ಪೈಕಿ 160 ದ್ವೀಪಗಳು ಪರಿಸರಪೂರಕ ಜೀವವೈವಿಧ್ಯ ತಾಣದಿಂದ ಪ್ರಸಿದ್ಧ ಪಡೆದಿವೆ.

ಗಲ್ಪ್ ಆಫ್ ಕಛ್:[ಬದಲಾಯಿಸಿ]

ಅಂಡಮಾನ್ ದ್ವೀಪಗಳಂತೆಯೇ ಇದ್ದರೂ, ಹೆಚ್ಚು ಕಡಿಮೆ ವೈವಿಧ್ಯಮಯ ಹವಳ ದ್ವೀಪಗಳು ಇಲ್ಲಿವೆ. ಇವನ್ನು ‘ಮರೈನ್ ನ್ಯಾಷನಲ್ ಪಾರ್ಕ್’ ಎಂದು ಸರ್ಕಾರ ಪರಿಗಣಿಸಿದೆ.

ಲಕ್ಷದ್ವೀಪ:[ಬದಲಾಯಿಸಿ]

36 ದ್ವೀಪಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಹವಳ ಸಮೂಹವಿದ್ದು, ಇವು 2ರಿಂದ 9 ಕಿ.ಮೀ.ನಷ್ಟು ಉದ್ದವಾಗಿವೆ.

ವಿಶ್ವದ ಅತಿ ದೊಡ್ಡ ಹವಳ ಬಂಡೆ ಗ್ರೇಟ್ ಬ್ಯಾರಿಯರ್ ರೀಫ್:[ಬದಲಾಯಿಸಿ]

ಗ್ರೇಟ್ ಬ್ಯಾರಿಯರ್ ವಿಶ್ವದಲ್ಲೇ ಅತೀ ದೊಡ್ಡ ಹವಳದ ದಂಡೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ ವೈವಿಧ್ಯಮಯ ಜೀವ ಸಂಕುಲಗಳನ್ನು ಹೊಂದಿರುವುದರಿಂದ ಇದನ್ನು 1981ರಲ್ಲಿ ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ. ಇದರಲ್ಲಿ 2,900 ಪ್ರತ್ಯೇಕ ಹವಳದ ದಂಡೆಗಳಿವೆ. 2,600 ಕಿ.ಮೀ. ಉದ್ದವಿದ್ದು, ಈ ದಂಡೆಗೆ ತಾಗಿಕೊಂಡಂತೆ 900 ದ್ವೀಪ ಸಮೂಹಗಳಿವೆ. ಇವುಗಳನ್ನು ರಕ್ಷಿಸುವ ಸಲುವಾಗಿ ಕೆಲವು ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಭಾಗದಲ್ಲಿ 1,500ಕ್ಕೂ ಹೆಚ್ಚು ಮೀನಿನ ಪ್ರಭೇದಗಳಿದ್ದು, 215 ಜಾತಿಯ ಪಕ್ಷಿಗಳು ವಾಸವಾಗಿವೆ. ಈ ಎಲ್ಲ ಕಾರಣದಿಂದಲೂ ಜಗತ್ತಿನ ಏಳು ನೈಸರ್ಗಿಕ ಅದ್ಭುತಗಳಲ್ಲಿ ಬ್ಯಾರಿಯರ್ ರೀಫ್ ಕೂಡ ಗುರುತಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಹವಳ&oldid=779134" ಇಂದ ಪಡೆಯಲ್ಪಟ್ಟಿದೆ