ಕರಣತ್ರಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಣತ್ರಯ : ಕರಣ ಎಂದರೆ ಸಾಧನ. ಶಾಸ್ತ್ರ್ರಗಳಲ್ಲಿ ಮನಸ್ಸು, ವಾಕ್ ಮತ್ತು ಕಾಯ (ಶರೀರ)ಗಳನ್ನು ತ್ರಿಕರಣಗಳೆಂದು ಹೇಳಿದೆ. ಜೀವ ಈ ಮೂರು ಕರಣಗಳಿಂದ ಸುಖದುಃಖಾತ್ಮಕವಾದ ವಿಷಯಗಳನ್ನು ಅನುಭವಿಸುತ್ತಾನೆ. ಕರಣಗಳು ಅಂತಃಕರಣ ಮತ್ತು ಬಾಹ್ಯಕರಣ ಎಂದು ಎರಡು ಬಗೆಯಾಗಿವೆ. ಶರೀರದ ಒಳಗಿರುವುದು ಅಂತಃಕರಣ. ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂಕಾರಗಳನ್ನು ಅಂತಃಕರಣ ಚತುಷ್ಟಯ ಎಂದು ಕರೆಯಲಾಗಿದೆ. ಈ ನಾಲ್ಕೂ ಮನಸ್ಸಿನ ಪ್ರಭೇದಗಳು. ಅವುಗಳಲ್ಲಿ ಸಂಕಲ್ಪಾತ್ಮಕ ಅಥವಾ ವಿಕಲ್ಪಾತ್ಮಕವಾದದ್ದು ಮನಸ್ಸು. ಅದೇ ಚಿಂತನರೂಪವಾಗಿದ್ದರೆ ಚಿತ್ತವೆಂದೂ ಯುಕ್ತಾಯುಕ್ತ ವಿವೇಕರೂಪವಾಗಿದ್ದರೆ ಬುದ್ಧಿಯೆಂದೂ ನಾನು (ಅಹಂಕಾರ), ನನ್ನದು (ಮಮಕಾರ), ರೂಪ ಅಥವಾ ಅಭಿಮಾನವುಳ್ಳದ್ದು ಅಹಂಕಾರವೆಂದೂ ಕರೆಯಲ್ಪಡುತ್ತದೆ. ಬಾಹ್ಯಕರಣಗಳು ವಾಕ್ ಮತ್ತು ಕಾಯಗಳಿಗೆ ಸಂಬಂಧಿಸಿದ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳು.

"https://kn.wikipedia.org/w/index.php?title=ಕರಣತ್ರಯ&oldid=639320" ಇಂದ ಪಡೆಯಲ್ಪಟ್ಟಿದೆ