ಜಪಾನ್ ಭೂಕಂಪದ ಅವಘಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜಪಾನ್ ಪುಟ್ಟ ದೇಶ. ನಮ್ಮ ದೇಶದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶಕ್ಕಿಂತ ತುಸು ಹೆಚ್ಚು ವಿಸ್ತೀರ್ಣದ ಈ ದೇಶದ ತುಂಬ ಹರಡಿ ಹೋಗಿವೆ – ಒಂದೆರಡಲ್ಲ ಐವತ್ತೈದು ರಿಯಾಕ್ಟರುಗಳು!. ಇವು ಸುಮಾರು ಐವತ್ತು ಸಾವಿರ ಮೆಗಾವಾಟ್ ವಿದ್ಯುದುತ್ಪಾದನೆ ಮಾಡುತ್ತ ಜಪಾನಿಗೆ ಅಗತ್ಯವಾಗಿರುವ ವಿದ್ಯುತ್ತಿನಲ್ಲಿ ಶೇಕಡಾ ನಲುವತ್ತರಷ್ಟನ್ನು ಪೂರೈಸುತ್ತಿವೆ. ವಿಜ್ಞಾನ ತಂತ್ರಜ್ಞಾನಗಳಲ್ಲಿ ಅಮೇರಿಕ, ಇಂಗ್ಲೆಂಡ್ ಮೊದಲಾದ ರಾಷ್ಟ್ರಗಳಿಗೆ ಸರಿ ಮಿಗಿಲಾದ ಸಾಧನೆ ಮಾಡುತ್ತಿರುವ ಜಪಾನಿಗೆ ಸಹಜವಾಗಿಯೇ ಅಗಾಧ ಪ್ರಮಾಣದಲ್ಲಿ ವಿದ್ಯುತ್ ಬೇಕು. ಯಾವ ಮೂಲವಾದರೂ ಅಡ್ಡಿ ಇಲ್ಲ, ವಿದ್ಯುದುತ್ಪಾದನೆ ಅನಿವಾರ್ಯ. ಎಂದೇ ಅದು ಆರಿಸಿಕೊಂಡಿದೆ ಪರಮಾಣು ಶಕ್ತಿಯಿಂದ ವಿದ್ಯುದುತ್ಪಾದನೆಯ ಹಾದಿಯನ್ನು. ಸದಾ ಕಂಪನ ೧೯೬೯ರಲ್ಲಿ ಮೊದಲ ಪರಮಾಣು ಸ್ಥಾವರ ಕಾರ್ಯಾರಂಭಿಸಿತು. ನಂತರದ ವರ್ಷಗಳಲ್ಲಿ ಎಂಥ ಭೂಕಂಪಕ್ಕೂ ಜಗ್ಗದಂಥ ಪರಮಾಣು ಸ್ಥಾವರಗಳನ್ನು ಸ್ಥಾಪಿಸುತ್ತ ಹೋದರು. ನಡು ನಡುವೆ ಜಪಾನಿನಲ್ಲಿ ಆಗಾಗ ಭೂಕಂಪನಗಳು ಸಂಭವಿಸಿದರೂ ಈ ಕಂಪನಗಳಿಂದ ಪರಮಾಣು ಸ್ಥಾವರಗಳಿಗೆ ಯಾವುದೇ ತೊಂದರೆ ಸಂಭವಿಸಲಿಲ್ಲ. ಜಪಾನೀಯರಿಗೆ ಇದು ಅಸಹಜವೇನೂ ಅಲ್ಲ. ಏಕೆಂದರೆ ಜಪಾನ್ ಇರುವುದೇ ಭೂಕಂಪ ವಲಯದಲ್ಲಿ.

UK search & rescue team work in heavy snow in Kamaishi, Japan (5533773065)

ಮಾರ್ಚ್ ೧೧ ಶುಕ್ರವಾರ ಮಧ್ಯಾಹ್ನ ಎರಡರ ಹೊತ್ತಿಗೆ ಒಮ್ಮಿಂದೊಮ್ಮೆಗೇ ಜಪಾನಿನಲ್ಲಿ ಸಂಭವಿಸಿದ ಭೂಕಂಪ ಹೈಟಿಯನ್ನೂ ಮೀರಿಸಿ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು. ರಿಕ್ಟರ್ ಮಾನಕದಲ್ಲಿ ೯ ಸಂಖ್ಯೆಯ ಭೀಕರ ಭೂಕಂಪ ಸಂಭವಿಸಿದ್ದು ಜಪಾನಿನ ಫುಕುಷಿಮಾ ರಿಯಾಕ್ಟರ್ ಕೇಂದ್ರದ ಸಮೀಪದ ಸಾಗರದಾಳದಲ್ಲಿ. ಇದು ತನಕದ ಭೀಕರ ಭೂಕಂಪಗಳಲ್ಲಿ ನಾಲ್ಕನೇಯ ಸ್ಥಾನವನ್ನು ಅಲಂಕರಿಸಿಕೊಂಡ ಈ ಭಯಾನಕ ಭೂಕಂಪ ಸಾಗರ ಪ್ರದೇಶದಲ್ಲಿ ಸಂಭವಿಸಿ ದೈತ್ಯ ಅಲೆಗಳನ್ನೆಬ್ಬಿಸಿತು. ಇಂಥ ದೈತ್ಯ ಅಲೆಗಳಿಗೆ ಜಾಪನೀ ಭಾಷೆಯಲ್ಲಿ ಸುನಾಮೀ ಎಂದು ಹೆಸರು. ೨೦೦೫ರಲ್ಲಿ ಇಂಡೋನೇಶಿಯಾ ಸುಮಾತ್ರಾದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮೀಗೆ ಲಕ್ಷ ಮಂದಿ ಬಲಿಯಾದರು. ಮೊನ್ನೆ ಎದ್ದ ಸುನಾಮೀ ಕೂಡ ಅದೇ ಬಗೆಯಲ್ಲಿ ಪ್ರಳಯಸ್ವರೂಪಿಯಾಯಿತು. ತೀರ ಪ್ರದೇಶದ ನಗರಗಳ ಸಂದಿಗೊಂದಿಗಳಿಗೆಲ್ಲ ನುಗ್ಗುತ್ತ ಎಲ್ಲವನ್ನು ನುಂಗುತ್ತ ಅದು ಮಾಡಿದ ಅನಾಹುತ ಊಹೆಗೂ ನಿಲುಕದಾಗಿತ್ತು. ವಿಮಾನಗಳು, ವಾಹನಗಳು, ದೊಡ್ಡ ದೊಡ್ಡ ಮರದ ಮನೆ-ಕಟ್ಟಡಗಳೆಲ್ಲ ಬೆಂಕಿ ಪೆಟ್ಟಿಗೆಗಳಂತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಆ ದೃಶ್ಯ ಮನ ಕಲಕುತ್ತಿತ್ತು. ಸುಮಾರು ಮೂವತ್ತು ಸಾವಿರ ಮಂದಿ ಬಲಿಯಾಗಿರಬಹುದು ನಿಸರ್ಗದ ಈ ವಿಕೋಪಕ್ಕೆ.

1960-Chilean-tsunami-Hilo-HI-USGS

ಅತ್ಯಂತ ಜನನಿಬಿಡ ನಗರವಾದ ಟೊಕಿಯೋದಿಂದ ಇನ್ನೂರೈವತ್ತು ಕಿಮೀ ಉತ್ತರಕ್ಕಿರುವ ಫುಕುಷಿಮಾ ದೊಡ್ಡ ಪರಮಾಣುಸ್ಥಾವರ ಕೇಂದ್ರ. ಭೂಕಂಪದಲೆಗಳು, ಸುನಾಮೀ ತೆರೆಗಳು ಈ ಪರಮಾಣು ಸ್ಥಾವರಗಳ ಮೇಲೆ, ಅನಿಲ ಸ್ಥಾವರಗಳ ಮೇಲೆ ಅನಿರೀಕ್ಷಿತ ಪ್ರಹಾರ ನಡೆಸಿದುವು. ಅದೆಂಥ ಪ್ರಹಾರವೆಂದರೆ ಪ್ರತಿಕ್ರಿಯಿಸುವುದಕ್ಕೂ ಪುರುಸೊತ್ತಿರಲಿಲ್ಲ. ಅಲ್ಲಿರುವ ಆರು ಸ್ಥಾವರಗಳಲ್ಲಿ ಒಂದು ತೀವ್ರವಾಗಿ ಹಾನಿಗೊಳಗಾಗಿದೆ. ಸ್ಥಾವರದ ಕೇಂದ್ರ ಭಾಗದಲ್ಲಿ ಭೀಕರ ಸ್ಫೋಟಗಳು ನಡೆದು ಮೇಲ್ಕವಚ ಬಿರಿದು ವಿಕಿರಣಶೀಲ ಪದಾರ್ಥಗಳು ಸೋರಿಕೆಯಾಗತೊಡಗಿವೆ. ಇತರ ಮೂರು ಸ್ಥಾವರಗಳು ಕೂಡ ಅದೇ ಹಾದಿಯಲ್ಲಿವೆ. ಅಂದರೆ ಜಪಾನ್ ಮತ್ತೆ ವಿಕಿರಣ ದುರಂತದತ್ತ ಮುಖ ಮಾಡಿದೆ.