ವಿಷಯಕ್ಕೆ ಹೋಗು

ಭರತಶಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲೆಗಳಲ್ಲಿರುವ ಶಕ್ತಿಯನ್ನು ವಿದ್ಯುತ್ ಶಕ್ತಿಯಂತಹ ಉಪಯುಕ್ತ ರೂಪವನ್ನಾಗಿ ಬದಲಿಸಬಹುದು.ಸದ್ಯಕ್ಕೆ ಅಷ್ಟು ಬಳಕೆಯಲ್ಲಿರದಿದ್ದರೂ ಅಲೆಗಳ ಶಕ್ತಿ ಅಥವಾ ಭರತಶಕ್ತಿಯನ್ನು ಭವಿಷ್ಯದ ಶಕ್ತಿಯ ಆಕರವನ್ನಾಗಿ ನೋಡಬಹುದು.ಪವನ ಶಕ್ತಿ, ಸೌರಶಕ್ತಿಗಳಂತೆ, ಅಲೆಗಳ ಶಕ್ತಿಯೂ ನವೀಕರಿಸಬಹುದಾದ ಶಕ್ತಿಯ ಆಕರಗಳಲ್ಲೊಂದು. ಎಲ್ಲಾ ಸ್ಥಳಗಳಲ್ಲೂ ಶಕ್ತಿಯನ್ನು ಉತ್ಪಾದಿಸಲು ಬೇಕಾದಷ್ಟು ವೇಗದ ಅಲೆಗಳು ದೊರಕದ ಕಾರಣ ಅಲೆಗಳಿಂದ ವಿದ್ಯುದುತ್ಪಾದನೆ ದುಬಾರಿ ಮತ್ತು ಕೆಲವೇ ಸ್ಥಳಗಳಲ್ಲಿ ಮಾತ್ರ ಸಾಧ್ಯವಾಗಬಹುದಾದ ಕೆಲಸವೆಂಬ ಪ್ರತೀತಿಯಿತ್ತು. ಆದರೆ ಹಿಂದಿಗಿಂತ ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಭರತಶಕ್ತಿಯ ಬಳಕೆ ಸಾಧ್ಯ ಎಂಬುದನ್ನು ಇತ್ತೀಚಿನ ಸಂಶೋಧನೆಗಳು ತೋರಿಸಿಕೊಟ್ಟಿವೆ.

ಇತಿಹಾಸ

[ಬದಲಾಯಿಸಿ]

ಅಲೆಗಳಿಂದ ಶಕ್ತಿಯನ್ನು ಉತ್ಪಾದಿಸಬಹುದಾದ ಭರತಯಂತ್ರಗಳನ್ನು(tidemill) ಯುರೋಪ್ ಮತ್ತು ಉತ್ತರ ಅಮೇರಿಕಾದ ಅಟ್ಲಾಂಟಿಕ್ ತೀರಗಳಲ್ಲಿ ಬಳಸಲಾಗುತ್ತಿತ್ತು.ಭರತ ಯಂತ್ರಗಳನ್ನು ಮಧ್ಯ ಯುಗದಲ್ಲಿ,ರೋಮನ್ ಕಾಲದಲ್ಲೇ ಬಳಸಲಾಗುತ್ತಿತ್ತು ಎಂಬ ಉಲ್ಲೇಖಗಳಿವೆ.ನೀರನ್ನು ದೊಡ್ಡ ಕೊಳಗಳಲ್ಲಿ ಶೇಖರಿಸಿ ಅವು ಹೊರಬರುವಾಗ ಉತ್ಪಾದನೆಯಾಗುವ ಅಲೆಗಳ ರಭಸ ಭರತಯಂತ್ರದ ಚಕ್ರಗಳನ್ನು ತಿರುಗಿಸಿ,ಆ ಮೂಲಕ ಯಾಂತ್ರಿಕ ಶಕ್ತಿಯನ್ನು ಉತ್ಪಾದಿಸಲಾಗುತ್ತಿತ್ತು. ಧುಮುಕುವ ನೀರಿನಿಂದ ಟರ್ಬೈನುಗಳನ್ನು ಬಳಸಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಪ್ರಕ್ರಿಯೆ ಹತ್ತೊಂಭತ್ತನೆಯ ಶತಮಾನದಲ್ಲಿ ಪ್ರಾರಂಭವಾಯಿತು.

ಅಲೆಗಳಿಂದ ದೊಡ್ಡ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಯನ್ನು ಮಾಡಲು ಪ್ರಾರಂಭಿಸಿದ್ದು ಫ್ರಾನ್ಸಿನ ರಾಂನ್ಸ್ ವಿದ್ಯುತ್ ಕೇಂದ್ರದಲ್ಲಿ. ೧೯೬೬ರಲ್ಲಿ ಕಾರ್ಯಾರಂಭಿಸಿದ ಈ ಕೇಂದ್ರ ನಂತರದಲ್ಲಿ ಸಿಹ್ವ ವಿದ್ಯುದುತ್ಪಾದನಾ ಕೇಂದ್ರ ಪ್ರಾರಂಭವಾಗುವವರೆಗೂ ಅತೀ ದೊಡ್ಡ ಕೇಂದ್ರವಾಗಿತ್ತು. ಸಾಗರತಟದಲ್ಲಿರುವ ಕೇಂದ್ರಗಳ ಮೂಲಕ ಸುಮಾರು ಒಂದು ಟೆರಾ ವ್ಯಾಟನಷ್ಟು ವಿದ್ಯುತ್ ಉತ್ಪಾದಿಸಬಹುದುಎಂದು ಅಂದಾಜಿಸಲಾಗಿದೆ.[]

ಸೀಜೆನ್ ನಲ್ಲಿರುವ ಮೊದಲ ವಾಣಿಜ್ಯ ಬಳಕೆಯ ಭರತಶಕ್ತಿಯ ವಿದ್ಯುತ್ ಉತ್ಪಾದನಾ ಕೇಂದ್ರ

ಅಲೆಗಳಿಂದ ವಿದ್ಯುತ್ ಶಕ್ತಿಯ ಉತ್ಪಾದನೆ

[ಬದಲಾಯಿಸಿ]

ಬಾಹ್ಯಾಕಾಶದ ಕಾಯಗಳಿಂದುಂಟಾಗುವ ಗುರುತ್ವಾಕರ್ಷಣೆಯ ಸೆಳೆತಗಳು ಸಾಗರದಲ್ಲಿ ನಿಯತಕಾಲಿಕವಾದ ಅಲೆಗಳನ್ನು ಹುಟ್ಟುಹಾಕುತ್ತವೆ. ಆಕಾಶಕಾಯಗಳ ಸೆಳೆತ ಮತ್ತು ಕಡಲೆಡೆಗಿನ ಸೆಳೆತಗಳ ಕಾರಣದಿಂದ ಸಾಗರದ ನೀರಿನಲ್ಲಿ ತಾತ್ಕಾಲಿಕ ಉಬ್ಬರವುಂಟಾಗುತ್ತದೆ. ಈ ಉಬ್ಬರದಿಂದ ಸಾಗರದ ಮಧ್ಯದಲ್ಲಿನ ನೀರು ದಡದತ್ತ ತಳ್ಳಲ್ಪಟ್ಟು ಅಲೆಗಳ ನಿರ್ಮಾಣವಾಗುತ್ತದೆ. ಭೂಮಿಯ ಸುತ್ತ ಸುತ್ತುವ ಚಂದ್ರನಿಂದ ಈ ಉಬ್ಬರವಿಳಿತಗಳು ನಿರಂತರವಾಗಿ ನಡೆಯುತ್ತಿರುತ್ತದೆ.ಹಾಗಾಗಿ ನವೀಕರಿಸಬಹುದಾದ ಬೇರೆಲ್ಲಾ ಶಕ್ತಿಯ ಮೂಲಗಳು ಸೂರ್ಯನನ್ನು ಶಕ್ತಿಯ ಆಕರವಾಗಿ ಆಶ್ರಯಿಸಿದರೆ, ಅಲೆಗಳಿಂದ ಶಕ್ತಿಯನ್ನು ಪಡೆಯುವ ವಿಧಾನವು ಚಂದ್ರನನ್ನು ಶಕ್ತಿಯ ಆಕರವಾಗಿಸುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳಲ್ಲಿ ಸೂರ್ಯ ಮತ್ತು ಚಂದ್ರರಿಂದ ಸಂಭವಿಸಿದ ಉಬ್ಬುಗಳು ಒಂದೇ ದಿಕ್ಕಿನಲ್ಲಿದ್ದು ಭರತಗಳು ಎತ್ತರವಾಗಿರುತ್ತವೆ. ಸೂರ್ಯ ತಗ್ಗನ್ನು ಮಾಡುವ ಕಡೆ ಚಂದ್ರ ಉಬ್ಬನ್ನು ಮಾಡಿದರೆ ಭರತ ಕೊಂಚ ತಗ್ಗುತ್ತದೆ. ತೆರೆದ ಕಡಲಿನಲ್ಲಿ ಇದು ಸೌಮ್ಯವಾಗಿರುತ್ತದೆ. ಸಮುದ್ರತೀರದಲ್ಲಿ ಒಳಚಾಚುಗಳಿದ್ದರೆ ಅದ್ಭುತವಾದ ದೃಶ್ಯಗಳು ಕಾಣಿಸುತ್ತವೆ.

ಉತ್ಪಾದನಾ ಕ್ರಮಗಳು

[ಬದಲಾಯಿಸಿ]
  1. ಅಲೆಗಳ ಪ್ರವಾಹದಿಂದ ವಿದ್ಯುದುತ್ಪಾದನೆ(Tidal stream generator)
  2. ಅಲೆಗಳ ತಡೆಯಿಂದ ವಿದ್ಯುದುತ್ಪಾದನೆ(Tidal barrage)
  3. ಅಲೆಗಳ ಚಲನಾತ್ಮಕತೆಯಿಂದ ವಿದ್ಯುದುತ್ಪಾದನೆ(Dynamic tidal power)
  4. Tidal lagoon

ನದಿಯ ಅಳಿವೆಯಲ್ಲಿ ಸುಮಾರು 6 ಮೀ ಎತ್ತರದ ಭರತವಿದ್ದು ಕಟ್ಟೆಯನ್ನು ಕಟ್ಟಬಹುದಾದ ಹಳ್ಳವಿದ್ದರೆ ಕಟ್ಟೆಯಲ್ಲಿ ಬಾಗಿಲುಗಳನ್ನಿಟ್ಟು ಉಬ್ಬರದ ಕಾಲದಲ್ಲಿ ಎಲ್ಲ ಬಾಗಿಲುಗಳನ್ನೂ ತೆರೆದು ಹಳ್ಳವನ್ನು ತುಂಬಬಹುದು. ಉಬ್ಬರ ಎತ್ತರಕ್ಕೆ ಹೋದಾಗ ಬಾಗಿಲುಗಳನ್ನು ಮುಚ್ಚಿ ಕೂಡಿಟ್ಟ ನೀರನ್ನು ತಿರುಬಾನಿಗಳ ಮೂಲಕ ಬಿಡಬಹುದು. ಕಟ್ಟೆಯ ಎರಡು ಮುಖಗಳಲ್ಲಿಯೂ ನೀರು ಒಂದೇ ಮಟ್ಟಕ್ಕೆ ಬರುವವರೆಗೂ ಕೆಲವು ಗಂಟೆಗಳ ಕಾಲ ಈ ನೀರು ಒದಗುತ್ತದೆ. ಎತ್ತರದ ಉಬ್ಬರದ ಮಟ್ಟದಲ್ಲಿ ಒಂದು, ತಗ್ಗಿನ ಮಟ್ಟದಲ್ಲಿ ಇನ್ನೊಂದು-ಹೀಗೆ ಎರಡು ಕೊಳಗಳಿದ್ದರೆ ಒಂದೇ ಸಮವಾಗಿ ವಿದ್ಯುತ್ತಿನ ಉತ್ಪಾದನೆಯಾಗುತ್ತದೆ. ಟರ್ಬೊ-ಜನರೇಟರುಗಳನ್ನು ಕೂರಿಸಿದ ಕಟ್ಟೆ ಈ ಕೊಳಗಳನ್ನು ಪ್ರತ್ಯೇಕಿಸುತ್ತದೆ. ಟರ್ಬೈನುಗಳಿಂದ (ತಿರುವಾನಿ) ನೀರು ತಗ್ಗಿನ ಕೊಳಕ್ಕಾದರೂ ಬೀಳಬಹುದು. ಇಲ್ಲವೆ ನೇರವಾಗಿ ಸಮುದ್ರವನ್ನಾದರೂ ಸೇರಬಹುದು. ಸಮುದ್ರದಿಂದ ಕೊಳಗಳಿಗೂ ಕೊಳದಿಂದ ಕೊಳಕ್ಕೂ ಬಾಗಿಲುಗಳನ್ನು ಸರಿಯಾದ ಕಾಲದಲ್ಲಿ ತೆರೆದರೆ ದಿನವೆಲ್ಲ ತಿರುಬಾನಿಗಳನ್ನು ನಡೆಸುವುದು ಸಾಧ್ಯ. ಇದರಲ್ಲಿ ಒಂದು ಕೊಳದ ಯೋಜನೆಯಿಂದ ಬರುವಷ್ಟು ಗರಿಷ್ಠ ವಿದ್ಯುತ್ ಉತ್ಪಾದನೆಯಾಗಲಾರದು. ಆದರೆ ಒಂದೇ ಕೊಳವಿದ್ದರೆ ದಿನಕ್ಕೆ ಎರಡು ಸಾರಿ ವಿದ್ಯುತ್ತಿನ ಉತ್ಪತ್ತಿಯೇ ಇರುವುದಿಲ್ಲ. ಪ್ರತಿಯಾಗಿ ಮತ್ತೆರಡು ಸಾರಿ ಗರಿಷ್ಠ ವಿದ್ಯುತ್ತೂ ಬರುತ್ತದೆ. ಅದು ನಮಗೆ ಆವಶ್ಯಕವಾದದ್ದಕ್ಕಿಂತ ಹೆಚ್ಚಾಗಬಹುದು. ಆಗ ಮತ್ತೊಂದು ಎರಡು ಕೊಳಗಳ ಯೋಜನೆಯನ್ನೂ ಇಡಬಹುದು. ಗರಿಷ್ಠ ಎತ್ತರದ ಉಬ್ಬರ ಬಂದಾಗ ನೀರನ್ನು ಎತ್ತರದಲ್ಲಿರುವ ಎರಡನೆಯ ಕೊಳಕ್ಕೆ ಪಂಪುಮಾಡಿ ಶೇಖರಿಸಿ ಬೇಕಾದಾಗ ಬಳಸಿಕೊಳ್ಳಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. ಅಲೆಗಳಿಂದ ಶಕ್ತಿಯುತ್ಪಾದನೆಯ ಸಾಧ್ಯತೆಯ ಬಗ್ಗೆ Environment 360, Oct 15, 2015 ರಲ್ಲಿ ಪ್ರಕಟವಾದ ಲೇಖನ