ಬೆಳಕಿನ ಚೆದರಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೂಳಿನಂತಹ ಸೂಕ್ಷ್ಮಕಣಗಳ ಮೇಲೆ ಬೀಳುವ ಬೆಳಕಿನ ಕಿರಣಗಳ ದಿಕ್ಕು ಬದಲಾಗುತ್ತದೆ . ಇದೇ ಬೆಳಕಿನ ಚೆದರಿಕೆ. ಹೀಗೆ ಚೆದರಿದ ಬೆಳಕಿನ ತರಂಗ ದೂರ ಬದಲಾಗದಿದ್ದರೆ ಇದನ್ನು 'ಸಂಸಕ್ತ ಚೆದರಿಕೆ 'ಎನ್ನುತ್ತಾರೆ. ಚೆದರಿದ ಬೆಳಕಿನ ತರಂಗ ದೂರ ಬದಲಾದರೆ ಅದು 'ಅಸಂಸಕ್ತ ಚೆದರಿಕ'. ಸಣ್ಣ ಕಿಟಕಿ ಅಥವಾ ರಂಧ್ರದ ಮೂಲಕ ಕೋಣೆಯೊಳಗೆ ಬೆಳಕು ತೂರಿ ಬಂದಾಗ ಬೆಳಕಿನ ದೂಲವನ್ನು ಗುರುತಿಸಬಹುದು . ಸಾಮಾನ್ಯವಾಗಿ ಕಣ್ಣಿಗೆ ಕಾಣದ ದೂಳಿನ ಕಣಗಳು ಹೊಳೆಯುತ್ತ ಇದರಲ್ಲಿ ತೇಲಾಡುತ್ತಿರುತ್ತದೆ. ಗಾಳಿಯಲ್ಲಿರುವ ದೂಳಿನ ಕಣಗಳು ತಮ್ಮ ಮೇಲೆ ಬಿದ್ದ ಬೆಳಕನ್ನು ಚೆದರಿಸುವುದೇ ಇದಕ್ಕೆ ಕಾರಣ.ಚೆದರಿಕೆಯಿಂದಾಗಿ ನಿಲಂಬಿತ ಕಣಗಳಿರುವ ದ್ರವದ ಮೂಲಕವು ಬೆಳಕಿನ ದೂಲವನ್ನು ಗುರುತಿಸಬಹುದು . ಇದಕ್ಕೆ 'ಟಿಂಡಲ್ ಪರಿಣಾಮ ' ಎಂದು ಹೆಸರು . ಆಕಾಶದ ನೀಲಿ ಸಹ ಬೆಳಕಿನ ಚೆದರಿಕೆಯ ಪರಿಣಾಮವೇ, ಆಕಾಶದ ನೀಲಿ ಬಣ್ಣಕ್ಕೆ ರಾಯಿಲೆ ಎಂಬ ವಿಜ್ಞಾನಿ ಸೂಕ್ತ ವಿವರಣೆ ನೀಡಿದ್ದರಿಂದ ಇದಕ್ಕೆ 'ರಾಯಿಲೆ ಚೆದರಿಕೆ ' ಎಂದು ಹೆಸರು . ರಾಯಿಲೆ ಪ್ರಕಾರ ದೂಳಿನ ಅಥವಾ ವಾಯು ಕಣಗಳ ಮೂಲಕ ಚೆದರಿದ ಬೆಳಕಿನ ತೀವ್ರತೆ ಅದರ ಆ‍ವೃತ್ತಿಯ ನಾಲ್ಕನೇ ಘಾತಕ್ಕೆ ಸಮಾನುಪಾತದಲ್ಲಿರುತ್ತದೆ . ಬಿಳಿಬೆಳಕಿನ ಘಟಕವಾದ ನೀಲಿ ನೇರಿಳೆ ಬೆಳಕಿನ ಆವೃತ್ತಿ ಮಿಕ್ಕ ಘಟಕಗಳ ಆವೃತ್ತಿಗಳಿಗಿಂತ ಹೆಚ್ಚು . ಆದ್ದರಿಂದ ನೀಲಿ -ನೇರಿಳೆ ಬೆಳಕು ಹೆಚ್ಚು ಚೆದರುತ್ತದೆ . ಇದರಿಂದಾಗಿ ಆಕಾಶ ನೀಲಿಯಾಗಿ ಕಾಣುತ್ತದೆ . ಸಿಗರೇಟಿನ ಹೊಗೆ ತುಸು ನೀಲಿಯಾಗಿ ಕಂಡು ಬರುವುದಕ್ಕೂ ಇದೇ ಕಾರಣ.ಮೇಲಿನವು ಬೆಳಕಿನ ಸಂಸಕ್ತ ಚೆದರಿಕೆಗೆ ಉದಾಹರಣೆಗಳು . ಸೂರ್ಯಸ್ತ ಅಥವಾ ಸೂರ್ಯೋದಯ ಸಮಯದಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ತಲುಪಬೇಕಾದರೆ ವಾತಾವರಣದ ಮೂಲಕ ಹೆಚ್ಚು ದೂರ ಚಲಿಸುತ್ತದೆ . ಬಹು ಕಡಿಮೆ ಚೆದರುವ ಕೆಂಪು ಬೆಳಕು ವಾತಾವರಣವನ್ನು ಹಾದು ಭೂಮಿಯನ್ನು ತಲುಪುತ್ತದೆ . ಆದ್ದರಿಂದಲೇ ಆ ಸಮಯದಲ್ಲಿ ದಿಗಂತ ಕೆಂಪು ಬಣ್ಣದ್ದಾಗಿ ಕಂಡು ಬರುವುದು . ಅಸಂಸಕ್ತ ಚೆದರಿಕೆಗೆ ರಾಮನ್ ಪರಿಣಾಮ ಒಂದು ಅತ್ಯುತ್ತಮ ಉದಾಹರಣೆ.