ವಿಷಯಕ್ಕೆ ಹೋಗು

ಸದಸ್ಯ:Bharathraj.karthadka/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಗವತಿಕೆ

[ಬದಲಾಯಿಸಿ]

ಮುನ್ನುಡಿ

[ಬದಲಾಯಿಸಿ]

ರಂಗಭೂಮಿ ಪ್ರಕಾರದಲ್ಲಿ ರಂಗಸ್ಥಳದ ಹಿಂಭಾಗದಲ್ಲಿ ಎಲ್ಲರಿಗೂ ಕಾಣಿಸುವಂತೆ ಹಿಮ್ಮೇಳನದೊಡನೆ ಕುಳಿತು ಗಣಪತಿ ಸ್ತುತಿಯಿಂದ ಕಥಾನಕವನ್ನು ತೊಡಗಿಸಿ ಪ್ರಸಂಗದ ಯಾವತ್ತು ನಿರ್ದೇಶನದ ಕೆಲಸವನ್ನು ಮಾಡುತ್ತಿರುವ ವ್ಯಕ್ತಿ - ಭಾಗವತ. ರಂಗಸ್ಥಳದಲ್ಲಿ ಏನೇನಾಗುತ್ತದೆ ಎಂಬುದನ್ನು ಅವಶ್ಯಕವಾದ ಗದ್ಯದ ಮೂಲಕ ಕಥೆಯ ಯಾವತ್ತು ಉದ್ದಕ್ಕೂ ಹಾಡುಗಳ ಮೂಲಕ ತಿಳಿಸುವ ಜವಾಬ್ದಾರಿ ಭಾಗವತರದ್ದು. ಕಥಾನಕ ಕೊನೆಗೊಳ್ಳುತ್ತಲೇ ಆತ ಆಟ ಆಡಿಸಿದವರಿಂದ ಮನ್ನಣೆ ಪಡೆದು,ರಂಗಸ್ಥಳವನ್ನು ಬಿಟ್ಟು ಪಥ್ಯವನ್ನು ಸೇರುವ ತನಕವೂ ಆತನೇ ಮುಖ್ಯ ವ್ಯಕ್ತಿ. ಈ ರೀತಿಯೇ ಪಥ್ಯದಲ್ಲಿ ಅಂತ್ಯವಾಗುವ ಈ ಆಟ ಅಲ್ಲಿಂದಲೇ ತೊಡಗುವುದಿದೆ. ಅಲ್ಲಿಂದಲೇ ಅದನ್ನು ರಂಗಸ್ಥಳಕ್ಕೆ ಕರೆತರುವವನು ಭಾಗವತನೇ. ಆತನಿಗೆ ಒಂದು ಮೇಳ ಪ್ರದರ್ಶಿಸುವ ಪ್ರಸಂಗಗಳೆಲ್ಲವೂ ಕಂಠಪಾಠ ಬರಬೇಕು. ಒಂದೊಂದು ಪ್ರಸಂಗದಲ್ಲೂ ಇನ್ನೂರು ಮುನ್ನೂರರಷ್ಟು ಹಾಡುಗಳಿದ್ದು ಅವುಗಳೆಲ್ಲವೂ ಸಾಹಿತ್ಯ, ಧಾಟಿ, ರಾಗ, ತಾಳಗಳ ಮೂಲಕ ಅವನ ಕಂಠದಿಂದ ಪ್ರಸಾರಗೊಳ್ಳಬೇಕು. ಅವನ ನಿರ್ದೇಶನದಲ್ಲಿ ಪಾತ್ರಧಾರಿಗಳು ಕುಣಿಯುತ್ತ ರಂಗಸ್ಥಳಕ್ಕೆ ಕಾಲಿರಿಸಬೇಕು. ಅವನೇ ಮಾತನಾಡಿಸಿ ಆ ಪಾತ್ರಗಳ ಪರಿಚಯವನ್ನು ಮಾಡಿಕೊಡಬೇಕು.ಪಾತ್ರಗಳು ಸಂಭಾಷಿಸದ ಹೊತ್ತಿನಲ್ಲಿ ,ಪಾತ್ರಗಳು ತಮ್ಮ ಮನೋಗತವನ್ನು ಅವನಲ್ಲಿ ತೋಡಿಕೊಳ್ಳಬೇಕು.

ರಂಗಸ್ಥಳದ ಗದ್ಯ

[ಬದಲಾಯಿಸಿ]

ರಂಗಸ್ಥಳದ ಗದ್ಯ ಎಂಬುದು ಸಮಯ ಸ್ಫೂರ್ತಿಯಿಂದ ಆಗಾಗ ಹೊರಡುವ ಮಾತುಗಳು. ಆದರೆ ಯಾವತ್ತೂ ಕಥಾನಕಕ್ಕೆ ಜೀವ ಕೊಡುವ ಭಾಗವೆಂದರೆ ಅದರ ಸಾಹಿತ್ಯವು ವಿಭಿನ್ನ ರಾಗ, ತಾಳಗಳಲ್ಲಿ ಭಾಗವತನ ಕೊರಳಿನಿಂದಲೇ ಹೊರ ಬೀಳಬೇಕು. ಅವನ ಜೊತೆಗೆ ಕೊರಳಿಗೆ ಕೊರಳನ್ನು ಒಡ್ಡುವ ಒಬ್ಬ ಸಂಗೀತಗಾರ ಇರಲೂಬಹುದು, ಇಲ್ಲದಿರಲೂಬಹುದು. ಈ ಸಂಗೀತದ ಭಾಗ ಮುಂದೆ ಬರುವ ಗಧ್ಯ ಸಂಭಾಷಣೆಗೆ, ಮಾತುಕತೆಗೆ ವಸ್ತುವನ್ನು ಒದಗಿಸುತ್ತದೆ. ಆದರೆ ಹಾಡಿನ ಉದ್ದಕ್ಕೂ ಯಾರಿಗೆ ಅದು ಸಂಬಂಧಪಡುತ್ತದೋ ಆ ಪಾತ್ರಧಾರಿಯು ಭಾಗವತನ ತಾಳಕ್ಕೆ ಹೊಂದಿಕೆಯಾಗುವಂತೆ ಕುಣಿದು ತೋರಿಸಬೇಕು. ಹೀಗಾಗಿ ಭಾಗವತನಿಗೆ ಯಾವೆಲ್ಲಾ ಭಾವಗಳಿಗೆ, ವಿಷಯಗಳಿಗೆ, ಸಾಂಪ್ರದಾಯಿಕ ಮಟ್ಟುಗಳು ಹೇಗೆ ರೂಪುಗೊಂಡು ಬಂದಿವೆ ಎಂಬ ಜ್ಞಾನ ಇರುವುದರ ಜತೆಯಲ್ಲಿಯೇ, ರಂಗಸ್ಥಳದಲ್ಲಿ ವೇಷಧಾರಿಯು ಪ್ರದರ್ಶಿಸಬೇಕಾದ ಕುಣಿತಕ್ಕೂ ಸಂಪೂರ್ಣ ನಿರ್ದೇಶನ ಸಿಗಬೇಕು. ಇಂಥ ಒಂದು ಹೊಣೆಗಾರಿಕೆಯ ಪಾತ್ರ ಬಲು ದೊಡ್ಡದು. ಎಂಟು-ಹತ್ತು ವರ್ಷಗಳ ಕಾಲ, ನುರಿತ ಭಾಗವತರ ಜತೆಯಲ್ಲಿ ಸೇರಿಕೊಂಡು ಕಲಿಯುವಷ್ಟು ಶಾಸ್ತ್ರಭಾಗ ಭಾಗವತಿಕೆಗೆ ಅನಿವಾರ್ಯ.

ಸಂಗೀತದ ರಾಗಗಳು

[ಬದಲಾಯಿಸಿ]

ಲಯ, ಜ್ಞಾನ, ಸಾಹಿತ್ಯ, ರೂಪ, ಮೈಕಟ್ಟು, ಇಂಪಾದ ಕಂಠ. ಸ್ವರದಲ್ಲಿನ ಏರಿಳಿತ, ರಾಗಗಳ ಆರೋಹಣ - ಅವರೋಹಣ ಸಂಗೀತ ಶಾಸ್ತ್ರದ ಜ್ಞಾನ, ತಾಳ, ಬಿಡ್ತಿಗೆ, ಮುಕ್ತಾಯ ಒಂದೇ ತಾಳದಲ್ಲಿ ವಿವಿಧ ಮಟ್ಟುಗಳು, ಪದ್ಯಗಳಲ್ಲಿನ ನಡೆ ಬದಲಾವಣೆ, ಮತ್ತು ಮುಖ್ಯವಾಗಿ ಈ ಎಲ್ಲಾ ಬಯಲಾಟದ ಸಂಪ್ರದಾಯಕ್ಕೆ ಜೀವಾಳವೆನಿಸಿದ ಭಾಗವತರಿಗಿರಬೇಕು. ಯಕ್ಷಗಾನ ಪ್ರಸಂಗವು ದೃಶ್ಯ ಪ್ರಧಾನವಾದುದು. ಪ್ರಸಂಗ ಸಾಹಿತ್ಯದೊಂದಿಗೆ ಯಕ್ಷಗಾನ ಸಂಗೀತವೂ ಸೇರಿಕೊಂಡಿರುತ್ತದೆ. ಒಂದು ದೃಷ್ಟಿಯಿಂದ ಸಂಗೀತವು ಯಕ್ಷಗಾನದ ಜೀವಾಳ, ಕರ್ನಾಟಕ (ದಕ್ಷಿಣ) ಸಂಗೀತದ ರಾಗಗಳನ್ನು ತೆಂಕುತಿಟ್ಟಿನಲ್ಲಿಯೂ, ಹಿಂದುಸ್ತಾನಿ (ಉತ್ತರಾ) ಸಂಗೀತದ ರಾಗಗಳನ್ನು ಬಡಗುತಿಟ್ಟಿನಲ್ಲಿಯೂ ಗುರುತಿಸಬಹುದಾಗಿದೆ. ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿದ ಭಾಗವತರು ತೆಂಕುತಿಟ್ಟಿನಲ್ಲೂ, ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡಿದ ಭಾಗವತರು ಬಡಗುತಿಟ್ಟಿನಲ್ಲಿಯೂ ಇದ್ದಾರೆ. ಆದರೆ ಯಕ್ಷಗಾನದ ಸಾಂಪ್ರದಾಯಿಕ ಶೈಲಿಯ ಅನೇಕ ಹಳೆಯ ಭಾಗವತರುಗಳು ಯಾವುದೇ ರೀತಿಯ ಶಾಸ್ತ್ರಿಯ ಸಂಗೀತವನ್ನು ಅಭ್ಯಾಸ ಮಾಡಿದವರಲ್ಲ. ಯಕ್ಷಗಾನದ ಗಾನ ಶೈಲಿಯು ಅದರದ್ದೇ ಆದ ವೈಶಿಷ್ಟ್ಯಗಳನ್ನೊಳಗೊಂಡಿದೆ. ಇಲ್ಲಿ ಸಾಹಿತ್ಯಕ್ಕೂ ಸಂಗೀತಕ್ಕೂ ಅನ್ಯೋನ್ಯ ಸಂಬಂಧವಿದೆ. ಸಾಹಿತ್ಯವನ್ನು ಬಿಟ್ಟು ಸಂಗೀತವಿಲ್ಲ, ಸಂಗಿತವನ್ನು ಬಿಟ್ಟು ನಾಟ್ಯಾಭಿನಯವಿಲ್ಲ. ಶಾಸ್ತ್ರೀಯ ಸಂಗೀತದಲ್ಲಿ ಸ್ವರವೇ ಮುಖ್ಯವಾಗಿ ಸಾಹಿತ್ಯ ಗೌಣವಾಗುವುದುಂಟು. ಆದರೆ ಯಕ್ಷಗಾನದ ಹಾಡುಗಾರಿಕೆಯಲ್ಲಿ ಸಾಹಿತ್ಯ ಮುಖ್ಯವಾಗುತ್ತದೆ. ಇಲ್ಲಿನ ಸಂಗೀತಕ್ಕೆ ಅದರ ಸಾಹಿತ್ಯದಲ್ಲಿನ ಛಂದಸ್ಸುಗಳೇ ಮೂಲಾಧಾರ. ಛಂದಸ್ಸಿಗೂ ಲಯ-ತಾಳಗಳಿಗೂ ನಿಕಟ ಸಂಬಂಧವಿದೆ. ಯಕ್ಷಗಾನ ಬಯಲಾಟದಲ್ಲಿ ಮಾತ್ರವಲ್ಲದೆ, ಭಾಗವತಿಕೆ ಯಕ್ಷಗಾನ ತಾಳ ಮದ್ದಲೆಯಲ್ಲೂ ಇವರ ಪಾತ್ರವಿದೆ. ಭಾಗವತನು ಪದ್ಯವನ್ನು ಪಾತ್ರದ ಭಾವನೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಹಾಡಬೇಕಾಗುತ್ತದೆ. ಮೂಡಲಪಾಯ ಬಯಲಾಟದಲ್ಲೂ ಭಾಗವತರಿದ್ದಾರೆ. ಜನಪದ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕಂಠಸ್ಥ ಸಂಪ್ರದಾಯದಲ್ಲಿ ಉಳಿಸಿಕೊಂಡು ಬಂದಿದೆ.

ಸಾಹಿತ್ಯ ರಚನೆ

[ಬದಲಾಯಿಸಿ]

ಈ ಪ್ರಸಂಗದ ಸಾಹಿತ್ಯವನ್ನೂ ಇವರು ಕಂಠಸ್ಥವಾಗಿ ಉಳಿಸಿಕೊಂಡು ಬಂದಿದ್ದಾರೆ. ಸಾಹಿತ್ಯ ರಚನೆಯಲ್ಲಿ ಕನ್ನಡ, ಸಂಸ್ಕೃತದ ವೃತ್ತಗಳಾದ ಶಾರ್ದೂಲ, ವಿಕ್ರೀಡಿತ, ಮತ್ತೇಭ ವಿಕ್ರೀಡಿತ, ಸ್ರಗ್ದರಾ, ಮಹಾಸ್ರಗ್ದರಾ, ಕನ್ನಡ ಛಂದೋರೂಪಗಳಾದ ಷಟ್ಪದಿ, ದ್ವಿಪದಿ, ಚೌಪದಿ, ಸಾಂಗತ್ಯಗಳೂ ಬರುತ್ತದೆ. ಕಂದ ಮುಂತಾದ ಛಂದರೂಪಗಳಲ್ಲಿ ಕೆಲವೇ ಮಾತ್ರ ಹೆಚ್ಚು ರೂಢಿಯಲ್ಲಿವೆ. ಪ್ರಸಂಗ ಸಾಹಿತ್ಯದಲ್ಲಿ ವೃತ್ತಗಳು ವಿರಳ. ಇವು ಸುಕ್ತಿಭಾಗದಲ್ಲಿ ಮಾತ್ರ ಕಂಡುಬರುತ್ತದೆ. ದಕ್ಷಿಣಾದಿ ಸಂಗೀತವೇ ಮೂಡಲಪಾಯದ ಮೂಲದ್ರವ್ಯ. ದಕ್ಷಣಾದಿ ರಾಗಗಳಾದ ನಾಟಿ, ಕಾಂಬೋದಿ, ನೀಲಾಂಬರಿ, ಆನಂದ ಭೈರವಿ, ದುರ್ಗಾ, ಮೋಹನ, ಮಾಯಾಮಾಳವಗೌಳ, ಭೈರವಿ, ಭೀಮಪಲಾಸಿ, ರೇಗುಪ್ತಿ, ಹಿಂಡೋಲ ಈ ಮುಂತಾದ ರಾಗಗಳಲ್ಲಿ ಮೂಡಲಪಾಯದ ಹಾಡುಗಳಿರುತ್ತದವೆ. ಆದಿ, ಅಟ್ಟ, ರೂಪಕ ಇವು ಪ್ರಮುಖ ತಾಳಗಳು. ಸಾಮಾನ್ಯವಾಗಿ ೮-೧೦ ದಾಟಿಗಳಿರುತ್ತದೆ ಅವೇ ಪುನರಾವರ್ತನೆಗೊಳ್ಳುತ್ತದೆ.

ಉಲ್ಲೇಖ

[ಬದಲಾಯಿಸಿ]
  1. ಲೇಖಕ - ಭಾಗವತ ನೀಲಾವರ ರಾಮಕೃಷ್ಣಯ್ಯ, ಯಕ್ಷಗಾನ ಸ್ವಭೋಧಿನಿ.
  2. ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬, ಪುಟ ಸಂಖ್ಯೆ: ೨೫೮ - ೨೬೦.
  3. ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ಪುಟ ಸಂಖ್ಯೆ: ೧೪೯ - ೧೫೧.