ವಿಷಯಕ್ಕೆ ಹೋಗು

ಮ.ರಾಮಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ.ರಾಮಮೂರ್ತಿ
Bornಮಾರ್ಚ್ ೧೧, ೧೯೧೮
Diedಡಿಸೆಂಬರ್ ೨೫, ೧೯೬೭
ತಲಘಟ್ಟಪುರ
Occupation(s)ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ,ಕನ್ನಡ ಸೇನಾನಿ
Titleಕರ್ನಾಟಕ ಬಾವುಟ ಕೃರ್ತ
Parent(s)ವೀರಕೇಸರಿ ಸೀತಾರಾಮಶಾಸ್ತ್ರಿ and ಸುಬ್ಬಮ್ಮ


ಕನ್ನಡ ಚಳವಳಿಗಳ ಹರಿಕಾರರು ಎಂದೆ ಪ್ರಸಿದ್ಧರಾಗಿರುವ ಕೊಣಂದೂರು ಲಿಂಗಪ್ಪ, ಅ.ನ.ಕೃ. ಮೈ.ಸು.ನಟರಾಜ್, ಮೈ.ಸು. ಶೇಷಗಿರಿರಾವ್, ನಾಡಿಗೇರ ಕೃಷ್ಣರಾವ್, ಕರ್ಲಮಂಗಲಂ ಶ್ರೀಕಂಠಯ್ಯ ಮೊದಲಾದವರುಗಳ ಜೊತೆಗೆ ಗುರುತಿಸಿಕೊಂಡವರು ಮ.ರಾಮಮೂರ್ತಿ.ಗಾಂಧೀಜಿಯವರ ವಿಚಾರಧಾರೆಗಳಿಗಂದ ಮನಸೋತ ತಂದೆ ಸೀತಾರಾಮಶಾಸ್ತ್ರಿಗಳು ಚಳವಳಿ ಹಾದಿಹಿಡಿದರು.ಚಳವಳಿ ಪ್ರಚಾರಕ್ಕಾಗಿ ‘ವೀರಕೇಸರಿ’ಯೆಂಬ ಪತ್ರಿಕೆಯನ್ನು ಬೆಂಗಳೂರಿನಲ್ಲಿ ಪ್ರಾಂಭಿಸಿದರು.ತಂದೆಯಿಂದ ಪ್ರೇರಿತರಾದ ರಾಮಮೂರ್ತಿಯವರು ಮುಂದೆ ಅದ್ವಿತೀಯ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಳವಳಿಯ ಅಧ್ವರ್ಯು, ಕನ್ನಡ ಸೇನಾನಿಯೆಂದೆ ಪ್ರಚಲಿತರಾಗುತ್ತರೆ.

ಬಾಲ್ಯ

[ಬದಲಾಯಿಸಿ]

ವೈದಿಕ ಮನೆತನದಲ್ಲಿ ಹುಟ್ಟಿದ ರಾಮಮೂರ್ತಿಯವರಿಗೆ ಸಂಸ್ಕೃತ ಕಡ್ಡಾಯವಾಗಿದ್ದು ಶ್ಲೋಕಗಳನ್ನು ಕಂಠಪಾಠ ಮಾಡಿದ್ದರು. ಪ್ರಾಥಮಿಕ ಶಾಲೆಗೆ ಸೇರಿದ್ದರೂ ಪಾಠಕ್ಕಿಂತ ಆಟದ ಕಡೆಯೇ ಗಮನಜಾಸ್ತಿ. ಕುಮಾರವ್ಯಾಸ, ರಾಘವಾಂಕ, ಹರಿಹರ ಮೊದಲಾದವರ ಕಾವ್ಯಗಳ ಬಗ್ಗೆ ಆಸಕ್ತಿ ಹುಟ್ಟುವಂತೆ ಮಾಡಿದವರು ಶಾಲಾ ಮಾಸ್ತರಾಗಿದ್ದ ಸುಬ್ರಹ್ಮಣ್ಯ ಅಯ್ಯರ್‌ರವರು. ಮಾಧ್ಯಮಿಕ ಶಾಲೆಯ ನಂತರ ರಾಮಮೂರ್ತಿಯವರೂ ಕೂಡಾ ಬಂದು ಸೇರಿದ್ದು ಬೆಂಗಳೂರಿನ ಗಾಂಧಿನಗರದಲ್ಲಿದ್ದ ಆರ್ಯ ವಿದ್ಯಾಶಾಲೆ. ಮುಖ್ಯೋಪಾಧ್ಯಾಯರಾಗಿದ್ದ ದೇವುಡುರವರು ಇವರ ಕಾಳಜಿ ವಹಿಸಿಕೊಂಡರು. ಸಾಹಿತ್ಯ ವಾತಾವರಣದಿಂದ ಪ್ರೇರಿತರಾಗಿ ಇವರು ಬರೆದ ಮೊದಲ ಕಥೆ ‘ಗುರುದಕ್ಷಿಣಿ’. ಮಕ್ಕಳಿಗಾಗಿಯೇ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಶ್ವತ್ಥನಾರಾಯಣ ರಾಯರು ತಮ್ಮ ‘ಮಕ್ಕಳಪುಸ್ತಕ’ದಲ್ಲಿ ಪ್ರಕಟಿಸಿದರು. ಅಶ್ವತ್ಥ ನಾರಾಯಣ ರಾಯರ ಬಳಿ ಇದ್ದ ಅನೇಕ ಪುಸ್ತಕಗಳನ್ನು ಪಡೆದು ಓದಿ ಮುಗಿಸಿದರು.

ಪತ್ರಿಕೋದ್ಯಮ

[ಬದಲಾಯಿಸಿ]

ತಂದೆಯವರು ಪ್ರಕಟಿಸುತ್ತಿದ್ದ ವೀರಕೇಸರಿ ಪತ್ರಿಕೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯ ಪ್ರಚಾರ, ಆಂದೋಲನದಲ್ಲಿ ತೊಡಗಿಸಿಕೊಂಡಿದ್ದರಿಂದ ರಾಮಮೂರ್ತಿಯವರೂ ಈ ಪತ್ರಿಕೆಯಲ್ಲಿ ಆಸಕ್ತರಾಗಿ ತಂದೆಗೆ ಕೈಜೋಡಿಸಿದರು. ಇದಕ್ಕಾಗಿ ಇಂಗ್ಲಿಷ್ ಭಾಷೆಯನ್ನು ನಾರಾಯಣಸ್ವಾಮಿ ಅಯ್ಯರ್‌ರವರಿಂದ ಕಲಿತು, ಇಂಗ್ಲಿಷ್‌ನಲ್ಲಿ ಬರುತ್ತಿದ್ದ ಸುದ್ದಿ ಸಂಗ್ರಹಗಳನ್ನು ಪತ್ರಿಕೆಗಾಗಿ ಅನುವಾದಿಸತೊಡಗಿದರು.ವೀರಕೇಸರಿ ಪತ್ರಿಕೆಯು ಕಾರಣಾಂತರದಿಂದ ಪ್ರಕಟಣೆಯನ್ನು ನಿಲ್ಲಿಸಿದ್ದರಿಂದ ರಾಮಮೂರ್ತಿಯವರೇ ‘ವಿನೋದಿನಿ’, ‘ಕಥಾವಾಣಿ’, ‘ವಿನೋದವಾಣಿ’ ಮುಂತಾದ ಪತ್ರಿಕೆಗಳನ್ನು ಹುಟ್ಟುಹಾಕಿದರು.

ಲೈಂಗಿಕ ವಿಜ್ಞಾನದ ಪತ್ರಿಕೆಯ ಕೊರತೆಯನ್ನು ತುಂಬಲು ‘ಕಾಮಕಲಾ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ, ಸ್ವಾತಂತ್ರ್ಯ ಪೂರ್ವದ ಬಿಗಿ ನೀತಿಯ ಪತ್ರಿಕಾ ಕಾನೂನಿನಿಂದ ಕೋರ್ಟು ಮೆಟ್ಟಿಲು ಹತ್ತಬೇಕಾಗಿಬಂದರೂ ಧೈರ್ಯಗೆಡದೆ ಪತ್ರಿಕೆಯ ಧ್ಯೇಯೋದ್ದೇಶಗಳನ್ನು ವಿವರಿಸಿ ಗೆದ್ದು ಬಂದರು. ಲೈಂಗಿಕ ವಿಜ್ಞಾನದ ಹೆಸರಿನಿಂದ ಇದೇ ಮಾದರಿಯ ಅನೇಕ ಅಶ್ಲೀಲ ಪತ್ರಿಕೆಗಳು ಹುಟ್ಟಿಕೊಂಡಿದ್ದರಿಂದ ತಮ್ಮ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು.

ಕನ್ನಡ ಹೋರಾಟ

[ಬದಲಾಯಿಸಿ]

ಕನ್ನಡದ ವಾತಾವರಣವನ್ನು ಮೂಡಿಸಲು, ಸಾಂಸ್ಕೃತಿಕ ಕಾರ್ಯಕ್ರಮಗಳಾದ ರಾಜ್ಯೋತ್ಸವ ಮುಂತಾದವುಗಳಲ್ಲಿ ಕನ್ನಡ ಕಲಾವಿದರಿಗೆ ಮನ್ನಣೆ ಸಿಗುವಂತೆ ಮಾಡಲು, ಬಿಡುಗಡೆಯಾದ ಕನ್ನಡ ಚಲನಚಿತ್ರಗಳಿಗೆ ಥಿಯೇಟರುಗಳು ದೊರೆಯುವಂತೆ ಮಾಡಲು, ಚಲನಚಿತ್ರ ನಿರ್ಮಾಣದಲ್ಲಿ ಕನ್ನಡಗರಿಗೆ ಆದ್ಯತೆ ದೊರೆಯುವಂತಾಗಲು, ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವಕಾಶಗಳನ್ನು ದೊರೆಯುವಂತಾಗಲು ‘ಕನ್ನಡ ಸಂಯುಕ್ತರಂಗ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದಾಗ ಅ.ನ.ಕೃ. ರವರು ಅಧ್ಯಕ್ಷರಾಗಿ ಇವರು ಕಾರ್ಯಯದರ್ಶಿಗಳಾಗಬೇಕಾಯಿತು. ಇದರ ಮುಖವಾಣಿಯಾಗಿ ‘ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ಹೊರಡಿಸಿದರು.

ನವೆಂಬರ್ ಒಂದರಂದು, ಕರ್ನಾಟಕ ರಾಜೋತ್ಸವವದ ಸಂದರ್ಭದಲ್ಲಿ ಕರ್ನಾಟಕದ ಪ್ರತಿ ಸಾರ್ವಜನಿಕ ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ,ಧ್ವಜ ಪೋಸ್ಟ್ಗಳು ಮತ್ತು ವಾಹನಗಳು ಹಾರಿಸುವ ಕನ್ನಡ ಬಾವುಟ ವನ್ನು ರಚಿಸಿದವರು ರಾಮಮೂರ್ತಿ ಯವರೆ.ಬಾವುಟದ ಮೇಲಿನ ಭಾಗವು ಹಳದಿ ಮತ್ತು ಕೆಳಗಿನ ಭಾಗವು ಕೆಂಪು ಬಣ್ಣದ್ದಾಗಿದೆ,ಧ್ವಜದ ಹಳದಿ ಬಣ್ಣವು ಅರಿಶಿಣ ಮತ್ತು ಕೆಂಪು ಬಣ್ಣವು ಕುಂಕುಮದ ಸಂಕೇತವಾಗಿದೆ. ಇವೆರಡು ವಸ್ತುಗಳು ಭಾರತದ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದ ವಿವಿಧ ಕಾರಣಗಳಿಗೆ ಬಳಸುತ್ತಾರೆ. ಕೆಂಪು ಬಣ್ಣ ಅಭಿವೃದ್ಧಿಯ ಸಂಕೇತ, ಅರಿಸಿಣ ಬಣ್ಣ ಆರೋಗ್ಯಕರ ಸಮಾಜದ ಸಂಕೇತವಾಗಿದೆ.ಇವೆರಡು ಮಂಗಳವನ್ನು ಮತ್ತು ಯೋಗಕ್ಷೇಮವನ್ನು ಸೂಚಿಸುತ್ತದೆ.

ಸಾಹಿತ್ಯ

[ಬದಲಾಯಿಸಿ]

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತರಲ್ಲಿ ಬೆಂಗಳೂರಿನ ಸುತ್ತಮುತ್ತ ಕನ್ನಡೇತರರ ಹಾವಳಿ ಜಾಸ್ತಿಯಾದಾಗ, ಜನ ಸಾಮಾನ್ಯರಲ್ಲಿ ಕನ್ನಡದ ಅರಿವು ಮೂಡಿಸಲು ಇರುವ ಏಕೈಕ ಮಾರ್ಗವೆಂದರೆ ಕನ್ನಡವನ್ನು ಎಲ್ಲರೂ ಓದುವಂತಾಗಲು ಕುತೂಹಲ ಭರಿತ ಕಾದಂಬರಿಗಳ ಕ್ಷೇತ್ರವೂ ಒಂದು ಎಂದು ಬಗೆದು ಪತ್ತೇದಾರಿ ಕಾದಂಬರಿಗಳ ರಚನೆಗೆ ಮುಂದಾದರು. ೧೯೫೦-೬೦ರ ದಶಕದಲ್ಲಿ ಹಲವಾರು ಪತ್ತೆದಾರಿ ಕಾದಂಬರಿಗಳನ್ನು ರಚಿಸಿದರು. ಇವರು ಬರೆದ ಪತ್ತೇದಾರಿ ಕಾದಂಬರಿಗಳಲ್ಲಿ ವಿಪ್ಲವ ಇಬ್ಬರು ರಾಣಿಯರು ಚಿತ್ರಲೇಖ ರಾಜದಂಡ ವಿಷಕನ್ಯೆ ಮರೆಯಾಗಿದ್ದ ವಜ್ರಗಳು ಮುಂತಾದ ೧೫೦ ಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ರಚಿಸಿದರು.

ಪತ್ತೇದಾರಿ ಕಾದಂಬರಿಗಳ ಜೊತೆಗೆ ಹಲವಾರು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದು ‘ಭಾಗ್ಯದ ಮದುವೆ’[ಸಾವನದುರ್ಗದ (ಮಾಗಡಿ ಸಮೀಪ) ರಸವತ್ತಾದ ವರ್ಣನೆಯ] ‘ಪ್ರೇಮಮಂದಿರ’ [ಬಾಗೇಪಲ್ಲಿ ಪಾಳೆಗಾರಿಕೆಯ ಸುತ್ತ ಹೆಣೆದ ಕೋಟೆ ಕೊತ್ತಲಗಳ ವರ್ಣನೆಯ] ಇವಲ್ಲದೆ ‘ಹಿಪ್ಪರಗಿ’ ಸೀಮೆ ಮತ್ತು ‘ಇಬ್ಬರು ರಾಣಿಯರು’ ಮುಂತಾದ ಕಾದಂಬರಿಗಳಲ್ಲಿ ವಿಪುಲವಾದ ಚಾರಿತ್ರಿಕ ವರ್ಣನೆಗಳಿಂದ ಕೂಡಿದ್ದರೆ, ಶಿವಮೊಗ್ಗ ಜಿಲ್ಲೆಯ ‘ನಗರ’ದಲ್ಲಿ ನಡೆದ ರೈತ ಬಂಡಾಯ ಕುರಿತ ‘ರಾಜದಂಡ’ ಚಾರಿತ್ರಿಕವಾದ ಅದ್ವಿತೀಯ ಕಾದಂಬರಿ ಎನಿಸಿದೆ.

ರಾಮಮೂರ್ತಿಯವರು ಕೃಷಿಜೀವನವನ್ನು ನಡೆಸಲು ಬಯಸಿ ಬೆಂಗಳೂರು – ಕನಕಪುರ ರಸ್ತೆಯ ತಲಘಟ್ಟಪುರದ ತಮ್ಮ ಜಮೀನಿನಲ್ಲಿ ನೀರಿನ ಆಸರೆಗಾಗಿ ಬಾವಿ ತೋಡಿಸುತ್ತಿದ್ದರು. ಬಾವಿಯಲ್ಲಿ ನೀರು ಬಂದಿತೆಂಬ ಸಂತಸದಿಂದ ದಿವಾಕರ ಮತ್ತು ಮಂಜುನಾಥ ಎಂಬ ಮಕ್ಕಳಿಬ್ಬರೊಡನೆ ಬಾವಿಗಿಳಿದಾಗ, ಮೇಲಿಂದ ಮಣ್ಣು ಕುಸಿದು ಕೂಲಿಗಳೊಡನೆ ಮೂವರೂ ದುರ್ಮರಣಕ್ಕೀಡಾದರು. ಅದ್ವಿತೀಯ ಕಾದಂಬರಿಕಾರ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಚಳವಳಿಯ ಅಧ್ವರ್ಯು, ಕನ್ನಡ ಸೇನಾನಿ ಎಂಬ ಕನ್ನಡದ ದೀಪ ನಂದಿ ಹೋದದ್ದು ಡಿಸೆಂಬರ್ ೨೫ರ ೧೯೬೭ರಲ್ಲಿ.

[] [] [] .

ಉಲ್ಲೇಖಗಳು

[ಬದಲಾಯಿಸಿ]
  1. "ದಿನಮಣಿಗಳು-- ಮ.ರಾಮಮೂರ್ತಿ". Archived from the original on 2016-03-06. Retrieved 2015-10-30.
  2. "History of Kannada Journalism". Archived from the original on 2015-07-16. Retrieved 2015-10-30.
  3. "creator-of-kannada-flag".