ವಿಷಯಕ್ಕೆ ಹೋಗು

ಅಮುಗಿದೇವಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮುಗಿದೇವಯ್ಯ
ಜನನ೧೧೬೦
ಸೊಲ್ಲಾಪುರ
ಅಂಕಿತನಾಮಸಿದ್ಧಸೋಮನಾಥ
ಸಂಗಾತಿ(ಗಳು)ವರದಾನಿ


ಇವರ ವಚನಗಳು ದಟ್ಟವಾದ ಕಾವ್ಯಾಂಶದಿಂದ ಕೂಡಿದೆ. ಸೋಮನಾಥಲಿಂಗ ಗ್ರಾಹಿ, ಅಗ್ರಾಹಿ ಎರಡೂ ಆಗಿರುವುದನ್ನು ಹೇಳುವಾಗ, ಶರಣನ ಲಕ್ಷಣವನ್ನು ನಿರೂಪಿಸುವಾಗ ಕಾವ್ಯಮಯತೆ ತನಗೆ ತಾನೇ ವ್ಯಕ್ತಗೊಳ್ಳುತ್ತದೆ. ಸತಿಪತಿ ಭಾವವನ್ನು ಒಂದು ವಚನದಲ್ಲಿ ಸೊಗಸಾಗಿ ನಿರೂಪಿಸಿರುವನು. ಜ್ಞಾನ - ಕ್ರಿಯೆಗಳು ಭಕ್ತನಾದವನಿಗೆ ಅವಶ್ಯಬೇಕು ಎನ್ನುವನು.

ಅಮುಗಿದೇವ ಕರ್ಣಾಟಕದಲ್ಲಿ ಆಗಿಹೋದ 12ನೆಯ ಶತಮಾನದ ಶರಣರಲ್ಲಿ ಪ್ರಸಿದ್ಧ. ಸ್ವಲ್ಪ ಹೆಚ್ಚು ಕಡಿಮೆ ಅದೇ ಕಾಲದಲ್ಲಿ ಇಬ್ಬರು ಅಥವಾ ಮೂರು ಅಮುಗಿದೇವ ಎಂಬ ಹೆಸರಿನವರು ಇದ್ದಿರಬೇಕೆಂದು ವಿದ್ವಾಂಸರ ಅಭಿಪ್ರಾಯ. ಒಬ್ಬ ನೇಯ್ಗೆ ಕಾಯಕದವ, ಇನ್ನೊಬ್ಬ ಕನ್ನಡಿ (ಕ್ಷೌರದ) ಕಾಯಕದವ. ಇವರಿಬ್ಬರಲ್ಲದೆ ಅಮುಗೇಶ್ವರಲಿಂಗ ಎಂಬ ಅಂಕಿತದ ಒಬ್ಬ ವಚನಕಾರನನ್ನು ಕವಿಚರಿತೆಕಾರರು ಹೇಳಿ ಒಂದು ವಚನವನ್ನು ಉದಾಹರಿಸಿ ಆತ ಇನ್ನೊಬ್ಬ ಆಮುಗಿದೇವಯ್ಯನೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅಮುಗೇಶ್ವರಲಿಂಗ ಎಂಬುದು ಮೊದಲ ಅಮುಗಿದೇವನ ಪತ್ನಿ ರಾಯಮ್ಮನ ವಚನಗಳ ಅಂಕಿತವೆಂದು ಈಚೆಗೆ ನಿರ್ಧಾರವಾಗಿರುವುದರಿಂದ ಅಮುಗಿದೇವರು ಮೂವರಲ್ಲ ಇಬ್ಬರೇ ಎಂದು ಹೇಳಬಹುದಾಗಿದೆ. ಕನ್ನಡಿ ಕಾಯಕದ ಅಮುಗಿದೇವ ಕಮಳೇಶ್ವರಲಿಂಗ ಎಂಬ ಅಂಕಿತದಿಂದ ವಚನಗಳನ್ನು ಬರೆದಿದ್ದಾನೆ. ಆದರೆ ಸಿದ್ಧರಾಮನೊಡನೆ ಸಂಬಂಧವನ್ನು ಪಡೆದು ಪ್ರಸಿದ್ಧನಾದ ಅಮುಗಿದೇವ ನೇಯ್ಗೆಕಾಯಕದ ಅಮುಗಿದೇವನೆಂಬುದನ್ನು ಕನ್ನಡ ಕೃತಿಗಳು ಮತ್ತು ಪ್ರಚಲಿತವಾಗಿರುವ ಕಥೆಗಳು ಏಕಕಂಠದಿಂದ ಹೇಳುತ್ತವೆ.

ನೇಯ್ಗೆಕಾರ ಅಮುಗಿದೇವ

[ಬದಲಾಯಿಸಿ]

ನೇಯ್ಗೆಕಾಯಕದ ಅಮುಗಿದೇವನ ವಚನಗಳ ಅಂಕಿತ ಸಿದ್ಧಸೋಮನಾಥ ಎಂಬುದು. ಪಂಡರಾಪುರಕ್ಕೆ ಸಮೀಪದಲ್ಲಿರುವ ಪುಳುಜ ಅಥವಾ ಪುಳುಂಜ (ಈಗ ಪುಳೂಜ, ಹೂಳಜ) ಎಂಬ ಗ್ರಾಮದ ಸೋಮನಾಥನೆ ಈತನ ಇಷ್ಟದೈವವಾಗಿದ್ದು ಅವನ ಹೆಸರನ್ನೇ ತನ್ನ ವಚನಗಳ ಅಂಕಿತವನ್ನಾಗಿಟ್ಟುಕೊಂಡಂತೆ ಕಾಣುತ್ತದೆ. ಆ ದೇವಾಲಯದಲ್ಲಿ ದೊರೆತಿರುವ ಒಂದು ಶಾಸನ (1200) ಯಾದವಸಿಂಘಣ ಅಮುಗಿ ದೇವನಿಗೆ ದಾನ ಕೊಟ್ಟುದನ್ನು ಉಲ್ಲೇಖಿಸುತ್ತದೆ. ಈತನನ್ನು ಕುರಿತ ಒಂದು ಕಥೆಯನ್ನು ರಾಘವಾಂಕ ಚಾರಿತ್ರದ ಸಿದ್ಧನಂಜೇಶ ಸಂಗ್ರಹಿಸಿಕೊಟ್ಟಿದ್ದಾನೆ. ಶಂಕರ ಲಿಂಗಕವಿ ಅಮುಗಿದೇವನ ಮೇಲೆ ಒಂದು ರಗಳೆಯನ್ನು ಬರೆದಿದ್ದಾನೆ. ಶಿವಲಿಂಗ ಕವಿ ಅಮುಗಿದೇವಯ್ಯಗಳ ಸಾಂಗತ್ಯ ಎಂಬ ಒಂದು ಸ್ವತಂತ್ರ ಕೃತಿಯನ್ನೇ ರಚಿಸಿದ್ದಾನೆ. ಸಿದ್ಧರಾಮ ಸೊನ್ನಲಿಗೆಯಲ್ಲಿ (ಸೊಲ್ಲಾಪುರ) ಕ್ಷೇತ್ರಪೂಜೆಯನ್ನು ಮಾಡಲು ಉದ್ದೇಶಿಸಿ ಅದಕ್ಕಾಗಿ ಆ ಊರಿನ ಎಲ್ಲರ ಮನೆಯ ಮುಂದೂ ಕೊಟ್ಟಣವನ್ನು ಕುಟ್ಟಲು ಹಾಕಿಸಿದನೆಂದೂ ಅಮುಗಿದೇವ ನಾವು ಭವಿ ಸೇವೆಯಂ ಮಾಡುವವರಲ್ಲ ಎಂದು ಬತ್ತವನ್ನು ಚೆಲ್ಲಿ ಊರನ್ನೇ ಬಿಟ್ಟು ಹೊರಟನೆಂದೂ ಅದನ್ನರಿತ ಸಿದ್ಧರಾಮ ಆತನ ಲಿಂಗನಿಷ್ಠೆಯನ್ನು ಕಂಡು ಮೆಚ್ಚಿದನೆಂದೂ ಈ ಎಲ್ಲ ಕೃತಿಗಳಲ್ಲಿ ಉಕ್ತವಾದ ಕಥೆಯಿಂದ ತಿಳಿದುಬರುತ್ತದೆ. ಸೊಲ್ಲಾಪುರ ಪುಳುಜಗಳು ಅಕ್ಕಪಕ್ಕದಲ್ಲಿರುವ ಊರುಗಳಾದುದರಿಂದ ಅಮುಗಿದೇವ ಸೊನ್ನಲಾಪುರದಲ್ಲಿದ್ದಿರಬೇಕು. ಅನಂತರ ಈ ಯಾವುದೋ ಒಂದು ಘಟನೆ ಕಾರಣವಾಗಿ ಅಲ್ಲಿಂಧ ಹೊರಟು ಬಸವಣ್ಣನವರ ಕಾರ್ಯಕ್ಷೇತ್ರವಾದ ಕಲ್ಯಾಣಕ್ಕೆ ಬಂದು ನೆಲಸಿರಬೇಕು.

ವಚನಕಾರ

[ಬದಲಾಯಿಸಿ]

ಕಲ್ಯಾಣ ಕೆಲವುಕಾಲ ಈತನ ಕಾರ್ಯಕ್ಷೇತ್ರವಾಗಿತ್ತು. ಶರಣರ ಧಾರ್ಮಿಕ ಮತ್ತು ಸಾಮಾಜಿಕ ಸಮತೆಯ ಮಹಾಸಾಧನೆಯಲ್ಲಿ ಈತ ಮತ್ತು ಈತನ ಪತ್ನಿ ರಾಯಮ್ಮ ಭಾಗವಹಿಸಿದರೂ ಇಬ್ಬರೂ ಒಳ್ಳೆಯ ವಚನಕಾರರೂ ಆಗಿದ್ದರೆಂಬುದಕ್ಕೆ ಈಗ ಸಿಕ್ಕಿರುವ ಅವರ ಕೆವಲ ಕೆಲವು ವಚನಗಳೇ ಸಾಕ್ಷಿಯಾಗಿವೆ. ಕಲ್ಯಾಣದ ಕ್ರಾಂತಿಯ ಅನಂತರ ಈತ ಅಲ್ಲಿಂದ ಹೊರಟು ತನ್ನ ಇಷ್ಟದೇವರೆ ಇದ್ದ ಪುಳುಜೆಗೆ ಬಂದಿರಬೇಕು. ಅಲ್ಲಿ ಜನಜಾಗೃತಿಯನ್ನುಂಟುಮಾಡುತ್ತ ಆತ ದೀರ್ಘಕಾಲ ಬದುಕಿದಂತೆ ತೋರುತ್ತದೆ. ಯಾದವಸಿಂಘಣನಂಥ ರಾಜನನ್ನೂ ಆಕರ್ಷಿಸಿ ಆತನಿಂದ ಗೌರವಪೂರ್ವಕವಾಗಿ ದಾನವನ್ನು ಪಡೆಯುವಷ್ಟು ಪ್ರಭಾವಶಾಲಿಯಾಗಿ ಈತನ ವ್ಯಕ್ತಿತ್ವ ಅಲ್ಲಿ ಬೆಳೆಯಿತು. ಪುಳುಜೆಯಲ್ಲಿ ಮಾತ್ರವಲ್ಲದೆ ವಿಜಾಪುರದ ಸುತ್ತು ಮುತ್ತಲಿನ ಭಾಗಗಳಲ್ಲಿ ಮತ್ತು ಜತ್ತ ಮುಧೋಳ ಸಂಸ್ಥಾನಗಳಲ್ಲಿ ಕೂಡ ಅಮುಗಿದೇವನ ಉಲ್ಲೇಖವಿರುವ ಅನೇಕ ದೇವಾಲಯಗಳಿರುವುದು ತಿಳಿದುಬರುತ್ತದೆ. ಈತನಿಗೆ ಅಮಾಕಸಿದ್ಧ ಎಂಬ ಹೆಸರು ಪ್ರಚಲಿತವಾಗಿರುವುದೂ ಮೇಲೆ ಹೇಳಿದ ಶಾಸನದಲ್ಲಿ ಈತನಿಗೆ ಕೊಟ್ಟಿರುವ ಸಿದ್ಧಕುಲಾರ್ಣವಪ್ರವರ್ಧನಸುಧಾಕರ ಎಂಬ ವಿಶೇಷಣವೂ ಕುತುಹಲಕರವಾದ ಅಂಶಗಳು. ಕುರುಬ ಅಥವಾ ಹಾಲು ಮತದವರ ಮೇಲೆ ವಿಶೇಷ ಪ್ರಭಾವವನ್ನು ಬೀರಿ ಅವರನ್ನು ಲಿಂಗವಂತರನ್ನಾಗಿ ಮಾಡಿದ ಸಿದ್ಧ ಅಮುಗಿದೇವಯ್ಯ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: