ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್
ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ (systemic lupus erythematosus (SLE)[೧]) ಎನ್ನುವುದು, ಚಿಕ್ಕ ವಯಸ್ಸಿನ ಮಹಿಳೆಯರಲ್ಲಿ ಬಹಳ ಅಪರೂಪಕ್ಕೆ ಕಾಣಿಸಿಕೊಳ್ಳುವ ಒಂದು ಕಾಯಿಲೆ. ಈ ಕಾಯಿಲೆಯು ಚರ್ಮ ಮತ್ತು ದೇಹದ ಒಳಭಾಗದ ಅಂಗಗಳನ್ನು ಬಾಧಿಸುತ್ತದೆ. ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ಚರ್ಮದಲ್ಲಿ ಉರಿಯುವಂತಹ ಸಂವೇದನೆ ಕಾಣಿಸಿಕೊಳ್ಳುತ್ತದೆ, ಅದರಲ್ಲೂ ವಿಶೇಷವಾಗಿ ಮುಖದ ಸುತ್ತಲೂ ಮತ್ತು ಕೆನ್ನೆಗಳಲ್ಲಿ ಈ ಸಂವೇದನೆ ಹೆಚ್ಚು ಕಂಡು ಬರುತ್ತದೆ. ಆ ಭಾಗದಲ್ಲಿ ಕೆಂಪಗಿನ ಗುಳ್ಳೆಗಳು ಏಳುತ್ತವೆ. ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಬಿಸಿ ಅಥವಾ ತುರಿಕೆಯ ಸಂವೇದನೆಗಳೇ ಇಲ್ಲದೆ ಚರ್ಮದ ಮೇಲಿನ ಗುಳ್ಳೆಗಳು ಹೆಚ್ಚಾಗಬಹುದು. ಸ್ವಲ್ಪ$ ಸಮಯದ ಬಳಿಕ ಈ ಗುಳ್ಳೆಗಳು ಉಬ್ಬಿಕೊಂಡು, ಆನಂತರ ಊದಿಕೊಳ್ಳುತ್ತವೆ. ಈ ಕಾಯಿಲೆಯ ಇನ್ನಿತರ ರೋಗಲಕ್ಷಣಗಳು ಅಂದರೆ - ಬಾಯಿ ಹುಣ್ಣು, ಕಾರಣವೇ ತಿಳಿಯದೆ ಮತ್ತೆ ಮತ್ತೆ ಬಾಧಿಸುವ ಜ್ವರ, ಸಂಧಿಗಳಲ್ಲಿ ನೋವು, ಇಡೀ ದೇಹದಲ್ಲಿ ನಿಶ್ಶಕ್ತಿ, ಕೂದಲು ಉದುರುವುದು ಮತ್ತು ಕೆಲವು ಪ್ರಕರಣಗಳಲ್ಲಿ ಅಪರೂಪಕ್ಕೆ ದೇಹದಾದ್ಯಂತ ಗುಳ್ಳೆಗಳು ಏಳುವುದು... ಇತ್ಯಾದಿ
ರೋಗಲಕ್ಷಣಗಳು
[ಬದಲಾಯಿಸಿ]ಈ ಕಾಯಿಲೆ ಇದ್ದವರಲ್ಲಿ ಕಂಡುಬರಬಹುದಾದ ಇನ್ನಿತರ ಸಮಸ್ಯೆಗಳು ಅಥವಾ ರೋಗಲಕ್ಷಣಗಳು ಅಂದರೆ ಕೈ ಮತ್ತು ಕಾಲುಗಳ ಮೇಲೆ ಸಣ್ಣ ಸಣ್ಣ ಕೆಂಪಗಿನ ಮಚ್ಚೆಗಳು ಕಾಣಿಸಿಕೊಳ್ಳುವುದು, ಆ ಬಳಿಕ ಈ ಮಚ್ಚೆಗಳು ಸಣ್ಣ ಹುಣ್ಣುಗಳಾಗುವುದು, ಕೈ ಮತ್ತು ಕಾಲಿನ ಬೆರಳಿನ ತುದಿಗಳಲ್ಲಿ ನೋವು, ಅದರಲ್ಲೂ ವಿಶೇಷವಾಗಿ ಶೀತ ಅಥವಾ ತಣ್ಣಗಿನ ನೀರಿಗೆ ಬೆರಳನ್ನು ಮುಳುಗಿಸಿದಾಗ ನೋವು ಹೆಚ್ಚಾಗುವುದು. ಈ ನೋವಿಗೂ ಬೆರಳ ತುದಿಗಳು ಮೊದಲು ಮಾಸಲು ಬಣ್ಣಕ್ಕೆ ತಿರುಗಿ, ಆ ಬಳಿಕ ನೀಲಿಗಟ್ಟಿ, ಆಮೇಲೆ ಕೆಂಪಾಗುವುದಕ್ಕೂ ಸಂಬಂಧ ಇರಬಹುದು. ಆದರೆ ಸ್ವಲ್ಪ ಸಮಯದ ನಂತರ ಬೆರಳು ಸರಿ ಹೋಗುತ್ತದೆ. ಖಔಉ ತೊಂದರೆ ಇರುವ ಮಹಿಳೆಯರಲ್ಲಿ ಮಾನಸಿಕ ಸಮಸ್ಯೆಯೂ ಸಹ ಕಾಣಿಸಿಕೊಳ್ಳುವುದಿದೆ .(ಅಂದರೆ ಖನ್ನತೆ, ಹೆಚ್ಚು ಮಾತನಾಡುವುದು, ಅಸಂಬದ್ಧವಾಗಿ ಮಾತನಾಡುವುದು... ಇತ್ಯಾದಿ). ಇವರಲ್ಲಿ ಮೂತ್ರಪಿಂಡದ ಸಮಸ್ಯೆ ಉಂಟಾಗಿ, ಮೂತ್ರ ವಿಸರ್ಜನೆಯ ಮೂಲಕ ಅಧಿಕ ಪ್ರೊಟೀನ್ ನಷ್ಟವಾಗಬಹುದು, ದೇಹದಲ್ಲಿ ಕೆಂಪು ಮತ್ತು ಬಿಳಿಯ ರಕ್ತಕಣಗಳು ಕಡಿಮೆ ಆಗುವುದರಿಂದ ರಕ್ತಸ್ರಾವದ ಅಸಹಜತೆ, ರಕ್ತಹೀನತೆ, ಬಿಳಿಚಿಕೊಳ್ಳುವುದು... ಇತ್ಯಾದಿ ಅನೇಕ ತೊಂದರೆಗಳು ಕಾಣಿಸಿಕೊಳ್ಳಬಹುದು.
ತೊಂದರೆ
[ಬದಲಾಯಿಸಿ]Systemic lupus erythematosus ತೊಂದರೆ ಇರುವ ಮಹಿಳೆಯರಲ್ಲಿ ಗರ್ಭಧಾರಣೆಗೆ ಕಷ್ಟವಾಗಬಹುದು. ಗರ್ಭಧಾರಣೆ ಆದರೂ ಸಹ, ನಿರಂತರವಾಗಿ ಗರ್ಭಪಾತ ಆಗಬಹುದು. ಎಳೆಯ ವಯಸ್ಸಿನ ಆರೋಗ್ಯವಂತ ಮಹಿಳೆಯಲ್ಲಿ ನಿಶ್ಶಕ್ತಿ, ಬೆಳಕಿಗೆ ಸಂವೇದನಾಶೀಲತೆ, ಮುಖದ ಮೇಲೆ ಗುಳ್ಳೆಗಳು ಏಳುವುದು, ಕೂದಲು ಉದುರುವುದು, ದೇಹದ ತೂಕ ಕಡಿಮೆ ಆಗುವುದು ಅಥವಾ ಸಂಧಿನೋವು ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡರೆ ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ ಇರಬಹುದೇ ಎಂದು ಸಂದೇಹ ಪಡಬೇಕು. ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ ಸಂಬಂಧಿತ ಕಾಯಿಲೆಗಳು ಅಪರೂಪಕ್ಕೆ ಕೌಟುಂಬಿಕ ಹಿನ್ನೆಲೆಯ ಕಾರಣದಿಂದಲೂ ಬರುವುದಿದೆ. ಈ ಕಾಯಿಲೆಯು ಪುರುಷರನ್ನು ಬಾಧಿಸುವುದು ಕಡಿಮೆ. ಆದರೆ ಈ ರೋಗಸ್ಥಿತಿಯು ಮಹಿಳೆಯರನ್ನು ತೀವ್ರವಾಗಿ ಬಾಧಿಸುತ್ತದೆ. ಪುರುಷ ಮತ್ತು ಮಹಿಳೆಯರಲ್ಲಿ ಈ ಕಾಯಿಲೆಯು 1:10 ಪ್ರಮಾಣದಲ್ಲಿ ಕಂಡುಬರುತ್ತದೆ.
ಕಾಯಿಲೆಯ ಕಾರ್ಯರೀತಿ
[ಬದಲಾಯಿಸಿ]ನಮ್ಮ ದೇಹ ಸಾವಿರಾರು ಜೀವಕೋಶಗಳಿಂದ, ಅಂಗಾಂಶಗಳಿಂದ ಮತ್ತು ಅಂಗ ವ್ಯವಸ್ಥೆಗಳಿಂದ ನಿರ್ಮಾಣವಾದ ಒಂದು ಸಂಕೀರ್ಣ ಜೈವಿಕಯಂತ್ರ ಎನ್ನಬಹುದು. ಪೆಟ್ಟುಗಳು, ಹೊಡೆತಗಳು, ರೋಗಾಣು-ಮೂಲದ ಸೋಂಕುಗಳು... ಇತ್ಯಾದಿ ಕಾರಣಗಳಿಂದ ಈ ಜೈವಿಕ ಯಂತ್ರಕ್ಕೆ ಆಗಾಗ ಹಾನಿಯಾಗುವುದಿದೆ. ಇಂತಹ ಸಂದರ್ಭಗಳಲ್ಲಿ ದೇಹದ ಸೈನಿಕರಂತಿರುವ ಪ್ರತಿರಕ್ಷಣಾ ವ್ಯವಸ್ಥೆಯು ಹಾನಿಕಾರಕ ಅಂಶಗಳ ವಿರುದ್ಧ ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ದೇಹದ ಈ ಸೈನಿಕ ವ್ಯವಸ್ಥೆಗೆ ಪ್ರತಿರಕ್ಷಣಾ ವ್ಯವಸ್ಥೆ ಎಂದು ಹೆಸರು. ಈ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಲಿಂಪೋಸೈಟ್‌ಗಳು, ಪ್ಲಾಸ್ಮಾ ಕೋಶಗಳು, ನ್ಯೂಟ್ರೋಫಿಲ್ಸ್ ಗಳು, ಮೈಕ್ರೊಫೇಜ್... ಇತ್ಯಾದಿಗಳು ಸೈನಿಕರ ರೀತಿಯಲ್ಲಿ ವ್ಯವಸ್ಥಿತವಾಗಿ ಕಾರ್ಯವೆಸಗುತ್ತವೆ. ಆದರೆ ಕೆಲವು ಸೋಂಕುಗಳು ಮತ್ತು ತಿಳಿಯದಂತಹ ಕೆಲವು ಕಾರ್ಯರೀತಿಯ ಕಾರಣದಿಂದಾಗಿ ನಮ್ಮ ಶರೀರದ ಜೀವಕೋಶಗಳೇ ಅಪರಿಚಿತ ಕೋಶಗಳಾಗಿ ಬದಲಾದಾಗ, ಅವು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ದಾಳಿಗೆ ಒಳಗಾಗಿ ನಾಶವಾಗುತ್ತವೆ. ಇದು ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ ರೋಗಸ್ಥಿತಿಯ ಹಿಂದಿರುವ ಕಾರ್ಯರೀತಿ.
ಚಿಕಿತ್ಸೆ
[ಬದಲಾಯಿಸಿ]ಯಾರಿಗಾದರೂ Systemic lupus erythematosus -ಇರಬಹುದು ಎಂಬ ಸಂದೇಹ ಇದ್ದಾಗ, ಅದನ್ನು ಸರಿಯಾಗಿ ತಪಾಸಣೆ ಮಾಡಿ ಚಿಕಿತ್ಸೆ ಮಾಡಿಸಬೇಕು. ಖಔಉ-ಇದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾಡುವ ಸರಳ ರಕ್ತ ಪರೀಕ್ಷೆಗೆ ANA ಪರೀಕ್ಷೆ ಎಂದು ಹೆಸರು. ಇದು ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ ರೋಗಿಗಳಲ್ಲಿ ವಿಶೇಷವಾಗಿ ಪಾಸಿಟಿವ್ ಆಗಿರುತ್ತದೆ. ಆದರೆ ಕೆಲವು ಸಹಜ ವ್ಯಕ್ತಿಗಳಲ್ಲಿಯೂ ಇದು ಪಾಸಿಟಿವ್ ಆಗಿರುತ್ತದೆ, ಆದರೆ ಅದರ ಪ್ರಮಾಣ ಕಡಿಮೆ ಇರುತ್ತದೆ. ಮೈಕ್ರೊಸ್ಕೋಪಿಕ್ ಪರೀಕ್ಷೆಗಾಗಿ ಚರ್ಮದ ಬಯಾಪ್ಸಿಯನ್ನು ಮಾಡಲಾಗುವುದು, ಅದರಂತೆಯೇ ಇಮ್ಯುನೊಫ್ಲೋರೆಸೆನ್ಸ್ ಪರೀಕ್ಷೆ ಎಂಬ ವಿಶೇಷ ಪರೀಕ್ಷೆಯನ್ನೂ ಸಹ ಮಾಡಲಾಗುವುದು. ರೋಗವು ರಕ್ತ, ಕಣ್ಣುಗಳು, ಮೆದುಳು, ಮೂತ್ರಪಿಂಡಗಳು, ಪಿತ್ತಜನಕಾಂಗ... ಇತ್ಯಾದಿ ಅಂಗ ಭಾಗಗಳನ್ನು ಆವರಿಸಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇನ್ನಿತರ ಆವಶ್ಯಕ ಪರೀಕ್ಷೆಗಳನ್ನೂ ಸಹ ಮಾಡಲಾಗುವುದು. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಚಟುವಟಿಕೆಯನ್ನು ತಗ್ಗಿಸುವುದು ಅಥವಾ ಪ್ರತಿರಕ್ಷಣಾ ವ್ಯವಸ್ಥೆಯ ಕಾರ್ಯರೀತಿಯನ್ನು ತಗ್ಗಿಸುವುದು ಚಿಕಿತ್ಸೆಯ ಗುರಿಯಾಗಿರುತ್ತದೆ. ಇದಕ್ಕಾಗಿ ಇಮ್ಯುನೋಸಪ್ರಸೆಂಟ್ಸ್ ಎಂಬ ಔಷಧಿಗಳ ಒಂದು ಗುಂಪನ್ನು ಉಪಯೊಗಿಸುತ್ತಾರೆ. ಕಾರ್ಟಿಕೋಸ್ಟೀರಾಯ್ಡ ಗಳು ಎಂದು ಕರೆಯಲಾಗುವ ಇಮ್ಯುನೋಸಪ್ರಸೆಂಟ್‌ಗಳು ,ಹೆಚ್ಚು ಸಾಮಾನ್ಯ ರೀತಿಯ, ಕಡಿಮೆ ಖರ್ಚಿನ ಮತ್ತು ಹೆಚ್ಚಾಗಿ ಬಳಕೆಯಗುವ ಔಷಧಿಗಳು. ಕಾರ್ಟಿಕೋಸ್ಟೀರಾಯ್ಡಗಳು ಅಂದರೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಬಂಧಿಸಿ, ದೇಹದ ಉರಿಯೂತದ ಪ್ರತಿಕ್ರಿಯೆಯನ್ನು ತಡೆಯುವ ಔಷಧಿಗಳು. ಈ ಔಷಧಿಗಳಲ್ಲಿ ಅನೇಕ ಅಡ್ಡ ಪರಿಣಾಮಗಳಿದ್ದರೂ ಸಹ, ಪ್ರತಿರಕ್ಷಣಾ ವ್ಯವಸ್ಥೆಯನ್ನು ಒಳಗೊಂಡಿರುವ Systemic lupus erythematosus ರೀತಿಯ ಕೆಲವು ಕಾಯಿಲೆಗಳ ಸಂದರ್ಭದಲ್ಲಿ ಇವು ಜೀವರಕ್ಷಕದಂತೆ ಕೆಲಸ ಮಾಡುತ್ತವೆ. ಸ್ಟೀರಾಯ್ಡ ಗಳು ಬಹಳ ಅಪಾಯಕಾರಿ ಆಗಿರುವ ಕಾರಣ, ಒಬ್ಬ ತಜ್ಞ ವೈದ್ಯರ ಶಿಫಾರಸಿನ ಮೂಲಕ ಮಾತ್ರವೇ ಈ ಔಷಧಿಗಳನ್ನು ತೆಗೆದುಕೊಳ್ಳಬೇಕು. ಅದೂ ಸಹ ಸೋಂಕುಗಳು, ಮಧುಮೇಹ, ಅಧಿಕ ರಕ್ತದೊತ್ತಡ ಇತ್ಯಾದಿ ಇಲ್ಲವೆಂದು ಪರೀಕ್ಷೆಗಳಲ್ಲಿ ತಿಳಿದು ಬಂದ ಬಳಿಕವೇ ಈ ಔಷಧಿಯನ್ನು ಸರಿಯಾದ ಅನುಸರಣೆ ಮತ್ತು ಪ್ರಮಾಣದಲ್ಲಿ, ವೈದ್ಯರ ಸಲಹೆಯಂತೆಯೆ ತೆಗೆದುಕೊಳ್ಳಬೇಕು.
ಅಡ್ಡ ಪರಿಣಾಮಗಳು
[ಬದಲಾಯಿಸಿ]ಸ್ಟಿರಾಯ್ಡ ಸೇವನೆಯಿಂದ ಕಾಣಿಸಿಕೊಳ್ಳಬಹುದಾದ ಸಾಮಾನ್ಯ ಅಡ್ಡ ಪರಿಣಾಮಗಳು ಅಂದರೆ, ದೇಹದ ತೂಕ ಹೆಚ್ಚಾಗುವುದು, ಮೂನ್ ಫೇಸ್, ಚರ್ಮ ತೆಳುವಾಗುವುದು, ಸ್ಟ್ರೆಚ್ ಮಾರ್ಕ್ ಗಳು ಬೀಳುವುದು, ರಕ್ತದ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡವು ಏರುವುದು, ಮೂಳೆ ದುರ್ಬಲವಾಗುವುದು ಮತ್ತು ಇನ್ನಿತರ ಸೋಂಕುಗಳು ಕಾಣಿಸಿಕೊಳ್ಳುವ ಅಪಾಯ. ಸ್ಟೀರಾಯ್ಡ ಗಳಲ್ಲದೆ ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ ಗೆ ಸೈಕ್ಲೋನ್ಪೋರಿನ್ ರೀತಿಯ ಬೇರೆ ಕೆಲವು ಔಷಧಿಗಳನ್ನೂ ಸಹ ಉಪಯೋಗಿಸುತ್ತಾರೆ. ಔಷಧಿಗಳ ಈ ಹೊಸ ಗುಂಪಿಗೆ ಜೈವಿಕಗಳು ಎಂದು ಹೆಸರು. ಇವು ಬಹಳ ದುಬಾರಿಯಾಗಿರುತ್ತವೆ. ಈ ಔಷಧಿಗಳನ್ನು ಇಂಜೆಕ್ಷನ್ ರೂಪದಲ್ಲಿ ವಾರ ಅಥವಾ ತಿಂಗಳಿನ ಅವಧಿಗೆ ಅನುಸಾರವಾಗಿ ನೀಡಲಾಗುವುದು. ಈ ಔಷಧಿಗಳಲ್ಲೂ ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುವುದು, ಅಧಿಕ ರಕ್ತದೊತ್ತಡ, ಸೋಂಕು ಸಾಧ್ಯತೆಯಂತಹ ಅಡ್ಡಪರಿಣಾಮಗಳು ಇವೆ. ಆದರೆ ಸ್ಟೀರಾಯ್ಡ ಗಳನ್ನು ಇತರ ಇಮ್ಯುನೋಸಪ್ರಸೆಂಟ್ ಔಷಧಿಗಳ ಜತೆಗೆ ಸೇರಿಸಿ, ಕಡಿಮೆ ಪ್ರಮಾಣ (ಡೋಸೇಜ್) ದಲ್ಲಿ ತೆಗೆದುಕೊಂಡರೆ, ಅಡ್ಡ ಪರಿಣಾಮಗಳನ್ನು ಕಡಿಮೆಗೊಳಿಸಬಹುದು. ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ ಇರುವ ಗರ್ಭಿಣಿ ಮಹಿಳೆಯರ ಬಗ್ಗೆ ವಿಶೇಷ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಇವರಲ್ಲಿ ಸಾಮಾನ್ಯವಾಗಿ ರಕ್ತ ಹೆಪ್ಪು ಗಟ್ಟುವ ಕಾರಣದಿಂದಾಗಿ ಗರ್ಭಪಾತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ಹಾಗಾಗಿ, ಇವರ ಗರ್ಭಧಾರಣೆಯನ್ನು ಉಳಿಸಿ ಕೊಳ್ಳುವ ದೃಷ್ಟಿಯಿಂದ ಆಸ್ಪಿರಿನ್ ಮತ್ತು ಇನ್ನಿತರ ಸ್ಟೀರಾಯ್ಡಗಳನ್ನು ಕೊಡುವಾಗ ವಿಶೇಷ ನಿಗಾವಣೆ ಮತ್ತು ಕಾಳಜಿ ವಹಿಸಬೇಕು.
ಮು೦ಜಾಗ್ರತೆ
[ಬದಲಾಯಿಸಿ]ರೋಗಿಗಳು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ಆದಷ್ಟು ತಪ್ಪಿಸಿಕೊಳ್ಳಬೇಕು ಮತ್ತು ಯಾವಾಗಲೂ ಸೂಚಿಸಿದಂತಹ ಸನ್‌ಸ್ಕ್ರೀನ್‌ಗಳನ್ನು ಉಪಯೋಗಿಸಬೇಕು. ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ ಅನ್ನುವುದು ಸೂರ್ಯನಿಗೆ ಸ್ವಲ್ಪವೇ ಒಡ್ಡಿಕೊಂಡರೂ ಕೆರಳಬಹುದಾದ ಒಂದು ಕಾಯಿಲೆ. ಹಾಗಾಗಿ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವಂತೆ ಬಲವಾಗಿ ಸೂಚಿಸಲಾಗುತ್ತದೆ.
ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್‌ಯು ಅಪಾಯಕಾರಿ ಕಾಯಿಲೆಯಾಗಿ ಪರಿಣಮಿಸಬಹುದು, ಆದರೆ ರೋಗಿಯು ಜಾಗರೂಕನಾಗಿದ್ದರೆ, ನಿರಂತರವಾಗಿ ವೈದ್ಯರ ಸಲಹೆ-ಸೂಚನೆಗಳನ್ನು ಪಾಲಿಸುತ್ತಿದ್ದರೆ, ಔಷಧಿಗಳನ್ನು ಸರಿಯಾಗಿ ಸೇವಿಸುತ್ತಿದ್ದರೆ ಮತ್ತು ನಿಯಮಿತವಾಗಿ ಹಾಗೂ ಕ್ರಮಬದ್ಧವಾಗಿ ಚೆಕ್-ಅಪ್‌ಗೆ ಒಳಗಾಗುತ್ತಿದ್ದರೆ, ಈ ಕಾಯಿಲೆಯ ನಿಯಂತ್ರಣ ಸಾಧ್ಯವಿದೆ. ಈ ಹಿಂದೆ ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್ ಅಂದರೆ ಅದು ಮಾರಕ ಕಾಯಿಲೆ ಎಂಬ ಭಾವನೆ ಇತ್ತು. ಆದರೆ ಈ ದಿನಗಳಲ್ಲಿ ತಪಾಸಣೆ, ಚಿಕಿತ್ಸೆ ಮತ್ತು ಅನುಸರಣೆಗಳಲ್ಲಿ ಆಗಿರುವ ಅಭಿವೃದ್ಧಿಗಳಿಂದಾಗಿ ಸಿಸ್ಟೆಮಿಕ್ ಲ್ಯೂಪಸ್ ಎರಿಥ್‌ಮೆಟೋಸಸ್‌ರೋಗಿಗಳೂ ಸಹಜ ಜೀವನವನ್ನು ನಡೆಸಬಹುದಾಗಿದೆ.