ವಿಷಯಕ್ಕೆ ಹೋಗು

ಸದಸ್ಯ:ಬಿ. ಕೆ. ಗಣೇಶ್ ರೈ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅಪ್ರತಿಮ ವೀರ ಸೇನಾನಿ, ದೇಶ ಭಕ್ತ, ಕನ್ನಡಿಗ, ಕೊಡಗಿನ ವರ ಪುತ್ರ.

ಸೂರ್ಯೋದಯದಲ್ಲಿ "ಸೈನಿಕನ ಪ್ರತಿಮೆಗೆ ಸಲ್ಯೂಟ್ ಹೊಡೆದು ದಿನಚರಿಯನ್ನು ಪ್ರಾರಂಭಿಸುತ್ತಿದ್ದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರ ಜನ್ಮದಿನ 28 ಜನವರಿ.... ಅಪ್ಪಟ ದೇಶಪ್ರೇಮಿಯ ಒಂದು ನೆನಪು....

ವಿಶೇಷ ಲೇಖನ : ಬಿ. ಕೆ. ಗಣೇಶ್ ರೈ

ವೀರರ ಶೂರರ ನಾಡು ಕೊಡಗು ವಿಶ್ವದಲ್ಲೇ ತನ್ನದೇ ಆದ ಸಂಪ್ರದಾಯ, ಉಡುಪು, ಭಾಷೆ, ಕಾಫಿ, ಕಿತ್ತಳೆ, ಯಾಲಕ್ಕಿ, ಭತ್ತ, ಕರಿಮೆಣಸು ಜೇನುಕೃಷಿ, ಜೀವನಾಡಿ ಕಾವೇರಿ ನದಿಯ ಉಗಮಸ್ಥಾನ, ನಿತ್ಯ ಹರಿಧ್ವರ್ಣ, ಹಚ್ಚ ಹಸಿರಿನ ವನಸಿರಿಯ ನಾಡು, 1600 ರಿಂದ 1834 ರ ವರೆಗೆ ಹಾಲೇರಿ ರಾಜವಂಶದ ಅರಸರ ಆಳ್ವಿಕೆಯಲ್ಲಿದ್ದು, 1835 ರಿಂದ 1941ರ ವರೆಗೆ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟು, ನಂತರ 1950 ರಲ್ಲಿ ಪ್ರತ್ಯೇಕ ರಾಜ್ಯವಾಗಿ ’ಸಿ’ ತರಗತಿಯ ಸಂಸ್ಥಾನವಾಗಿ ಚೀಫ್ ಕಮೀಷನರ್ ಆಳ್ವಿಕೆಗೆ ಒಳಪಟ್ಟು 1956 ನವಂಬರ್ ಒಂದರಿಂದ ಮೈಸೂರು ರಾಜ್ಯದಲ್ಲಿ ಕೊಡಗು ವಿಲೀನವಾಗಿ, ಜಿಲ್ಲೆಯಾಗಿ ಇಂದು ಕರ್ನಾಟಕ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ.

ಕೊಡಗು ಜಿಲ್ಲೆ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಮತ್ತು ಜನರಲ್ ಕೆ. ಎಸ್. ತಿಮ್ಮಯ್ಯ, ಹಾಗೂ ಪ್ರತಿಯೊಂದು ಕುಟುಂಬದಿಂದ ಕಡ್ಡಾಯವಾಗಿ ಭಾರತೀಯ ಸೇನೆಗೆ ಸೈನಿಕರನ್ನು ನೀಡಿದ ವೀರ ಪರಂಪರೆಯ ಪುಣ್ಯ ಭೂಮಿಯಾಗಿದೆ.

"ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ" ನವರ ಹೆಜ್ಜೆ ಗುರುತುಗಳು.... ಕೊಡಗಿನ ಕೊಡವ ಮನೆತನದ ಕೊಡಂದೆರಾ ಮಾದಪ್ಪ ಕಾರಿಯಪ್ಪ 28 ಜನವರಿ 1900 ರಲ್ಲಿ ಕೊಡಗಿನ ಶನಿವಾರಸಂತೆ ಗ್ರಾಮದಲ್ಲಿ ಜನಿಸಿದರು. ಬ್ರಿಟಿಷ್ ಆಡಳಿತದ ಸಮಯದಲ್ಲಿ ರೆವಿನ್ಯೂ ಇಲಾಖೆಯಲ್ಲಿ ಅವರ ತಂದೆ ಸೇವೆ ಸಲ್ಲಿಸುತ್ತಿದ್ದರು. ಮೂವರು ಸಹೋದರರು, ಇಬ್ಬರು ಸಹೋದರಿಯರಿದ್ದ ಇವರು ತಮ್ಮ ಎಳೆಯ ವಯಸಿನಲ್ಲೇ ಮಾತಾ ಪಿತರನ್ನು ಕಳೆದು ಕೊಂಡರು.

ಮಡಿಕೇರಿಯ ಸೆಂಟ್ರಲ್ ಸ್ಕೂಲ್ (ಸರಕಾರಿ ಜೂನಿಯರ್ ಕಾಲೇಜು ) ನಲ್ಲಿ ವಿದ್ಯಾರ್ಥಿಯಾಗಿರುವಾಗಲೇ ಗಣಿತ, ಡ್ರಾಯಿಂಗ್, ವ್ಯಂಗ್ಯ ಚಿತ್ರ,ದಲ್ಲಿ ವಿಶೇಷ ಆಸಕ್ತಿ. ಹಾಕಿ, ಕ್ರಿಕೆಟ್ ಆಟಗಾರರಾಗಿ ಮುಂದುವರೆದ ಅವರು ವಿದ್ಯಾಭ್ಯಾಸವನ್ನು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮುಗಿಸಿದರು.

"ಅಚ್ಚುಮೆಚ್ಚಿನ ಮಿಲಿಟರಿಗೆ ಸೇರ್ಪಡೆ" ಪ್ರಥಮ ಜಾಗತಿಕ ಯುದ್ಧ 1918 ರಲ್ಲಿ ಮುಗಿದ ಸಂದರ್ಭ. ಭಾರತೀಯರು ಸೇನೆಯಲ್ಲಿ ಅಧಿಕಾರಿಗಳನ್ನಾಗಿ ಆಯ್ಕೆ ಮಾಡುವಂತೆ ಬೇಡಿಕೆ ಇಟ್ಟ ಸಮಯ ಕೆ.ಸಿ.ಐ.ಒ. (ಕಿಂಗ್ಸ್ ಕಮೀಶನ್ಡ್ ಇಂಡಿಯನ್ ಆಫಿಸರ್ಸ್) ಕಿಂಗ್ಸ್ ಕಮೀಶನ್ - ಡಾಲಿ ಕೆಡೆಟ್ ಕಾಲೇಜು ಇಂದೊರ್ ನಲ್ಲಿ ಪ್ರಥಮ ಬ್ಯಾಚಿನಲ್ಲಿ ಅತ್ಯಂತ ಕಠಿಣ ಆಯ್ಕೆಯಲ್ಲಿ ಕೆ. ಎಂ. ಕಾರಿಯಪ್ಪನವರು ಆಯ್ಕೆಯಾದರು. ನಂತರ ಕರ್ನಾಟಿಕ್ ಇನ್ ಫೆಂಟ್ರಿ ಮುಂಬೈಯಲ್ಲಿ ಪ್ರಥಮ ದರ್ಜೆ ಅಧಿಕಾರಿಯಾದರು. ನಂತರ ಮೆಸಪೊಟೆಮಿಯಾದ (ಇರಾಕ್) ಡೋಗ್ರಾದಲ್ಲಿ ಸೇವೆ ಸಲ್ಲಿಸುತಿದ್ದರು. ಆ ಸಂದರ್ಭದಲ್ಲಿ ಎರಡನೆಯ ವಿಕ್ಟೋರಿಯಾ ಮಹಾರಾಣಿಯ ಸ್ವಂತ ’ರಜಪೂತ್’ ಇನ್ಫೆಂಟ್ರಿ ರೆಜಿಮೆಂಟ್ ಗೃಹದಿಂದ ಆಯ್ಕೆಯಾದ ಪ್ರಥಮ ಭಾರತೀಯ ಅಧಿಕಾರಿಯಾಗಿ ಸ್ಟಾಫ್ ಕಾಲೇಜು ’ಕ್ಯೂಟಾ’ದಲ್ಲಿ 1933 ರಲ್ಲಿ ತರಭೇತಿ ಪಡೆದರು. 1946 ರಲ್ಲಿ ’ಬ್ರಿಗೇಡಿಯರ್’ ಆಗಿ ಭಡ್ತಿಯನ್ನು ಪಡೆದು "ಫ್ರಾಂಟಿಯರ್ ಬ್ರಿಗೇಡ್ ಗ್ರೂಪ್" ನಲ್ಲಿ ಸೇವೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಕರ್ನಲ್ ಅಯೂಬ್ ಖಾನ್ ಕಾರಿಯಪ್ಪನವರ ಅಧೀನದಲ್ಲಿ ಸೇವೆ ಸಲ್ಲಿಸುತಿದ್ದರು. ( 1962 ರಿಂದ 1969 ರ ವರೆಗೆ ಅಯೂಬ್ ಖಾನ್ ರವರು ಪಾಕಿಸ್ಥಾನದಲ್ಲಿ ಫೀಲ್ಡ್ ಮಾರ್ಷಲ್ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.)

" ಆರ್ಡರ್ ಆಫ್ ಬ್ರಿಟಿಷ್ ಎಂಪೈರ್" ಪ್ರಶಸ್ತಿ ಪಡೆದ ಭಾರತೀಯ

ಫಿ. ಮಾ. ಕೆ. ಎಂ. ಕಾರಿಯಪ್ಪವವರು 1941-42 ರಲ್ಲಿ ಸಿರಿಯಾ, ಇರಾಕ್, 1943-44 ರಲ್ಲಿ ’ಮೈನ್ಮರ್’ ಗಳಲ್ಲಿ ಪ್ರಥಮ ಭಾರತೀಯ ಸೇನಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಬರ್ಮದಲ್ಲಿದ್ದ ಜಪಾನೀಯರನ್ನು ಬಿಡುಗಡೆಗೊಳಿಸುವ ಕಾರ್ಯಾಚರಣೆಯಲ್ಲಿ "ಆರ್ಡರ್ ಆಫ್ ಬ್ರಿಟಿಷ್ ಎಂಪೈರ್" ಪ್ರಶಸ್ತಿಯನ್ನು ಪಡೆದ ಪ್ರಥಮ ಭಾರತೀಯರಾಗಿದ್ದಾರೆ.

1947 ರಲ್ಲಿ ಸ್ವಾತಂತ್ರ್ಯವನ್ನು ಅಂಗ್ಲರ ಆಧಿಪತ್ಯದಿಂದ ಪಡೆಯುವ ಸಂದರ್ಭ ಕೆ. ಎಂ ಕಾರಿಯಪ್ಪನವರು ತಮ್ಮ ಸೈನಿಕರನ್ನು ಉದ್ಧೇಶಿಸಿ - " ಇಸ್ ವಕ್ತ್ ಆಪ್ ಮಪ್ತ್, ಹಮ್ ಮಪ್ತ್, ಮುಲ್ಕ್ ಮಪ್ತ್, ಸಭ್ ಕುಛ್ ಮಪ್ತ್ ಹೈ" ಎಂದು ಹೇಳಿ ಸೈನಿಕರಿಗೆ ಸ್ವಾತಂತ್ರ್ಯದ ಬಗ್ಗೆ ಅಭಿಮಾನ ಮೂಡಿಸಿದರು.

"ಲೆಫ್ಟಿನೆಂಟ್ ಜನರಲ್ ಆಗಿ ಭಡ್ತಿ" 1947 ರಲ್ಲಿ ಪ್ರಥಮ ಭಾರತೀಯನಾಗಿ ಕೆ. ಎಂ. ಕಾರಿಯಪ್ಪ ನವರು "ಇಂಪಿರಿಯಲ್ ಡಿಫೆನ್ಸ್ ಕಾಲೇಜು" ಕ್ಯಾಂಬರ್ಲಿ, ಯುನೈಟೆಡ್ ಕಿಂಗ್ಡಂ ನಲ್ಲಿ ಉನ್ನತ ಯುದ್ದ ತರಭೇತಿಯನ್ನು ಪಡೆದರು.

ಭಾರತಕ್ಕೆ ಸ್ವಾತಂತ್ರ್ಯ ದೊರೆತು, ಭಾರತ ಪಾಕಿಸ್ಥಾನ ವಿಭಜನೆಯಾದಾಗ ಸೇನಾ ಪಡೆಯನ್ನು ಸರಿಸಮಾನವಾಗಿ ಇಬ್ಭಾಗ ಮಾಡುವಾಗ ಅದರ ಜವಾಬ್ಧಾರಿಯನ್ನು ಕೆ. ಎಂ. ಕಾರಿಯಪ್ಪ ನವರು ವಹಿಸಿದ್ದರು. ಸ್ವಾತಂತ್ರ್ಯನಂತರ ಪೂರ್ವ ವಿಭಾಗದ ಸೇನಾ ಪಡೆಯ ’ಲೆಫ್ಟಿನೆಂಟ್ ಜನರಲ್’ ಆಗಿ ಭಡ್ತಿ ಪಡೆದರು.

"ಪ್ರಥಮ ಕಮಾಂಡರ್ ಇನ್ ಚೀಫ್" (ಸೇನಾ ಮಹಾ ದಂಡನಾಯಕ) ಭಾರತೀಯ ಸೇನಾ ಪಡೆಗಳ (ಭೂ ಸೇನೆ, ವಾಯು ಸೇನೆ, ನೌಕಾಪಡೆ) ಪ್ರಥಮ ಮುಖ್ಯಸ್ಥ " ಪ್ರಥಮ ಕಮಾಂಡರ್ ಇನ್ ಚೀಫ್" ಪಧವಿಯನ್ನು ಜನವರಿ 15 ರಂದು 1949 ರಲ್ಲಿ ಬ್ರಿಟಿಷ್ ಸೇನಾಧಿಕಾರಿ ಜನರಲ್ ರಾಯ್ ಬುಚ್ಚರ್ ನಿಂದ ಅಧಿಕಾರವನ್ನು ತೆಗೆದುಕೊಂಡರು. ಅತ್ಯಂತ ಉನ್ನತ ಹುದ್ದೆಗೆ ಏರಿದ "ಕನ್ನಡಿಗ" ಕೊಡಗಿನ ಕುವರ, ಕೊಡಗಿನ ಕುಲದೇವತೆ ಕಾವೇರಿ ಮಾತೆಯ ವರ ಪುತ್ರ ಜನರಲ್ ಕೆ. ಎಂ. ಕಾರಿಯಪ್ಪ ನವರು ಸಾರ್ವಕಾಲಿಕ ಗೌರವಾನ್ವಿತರಾಗಿ ಭಾರತೀಯರ ಮನದಲ್ಲಿ ಗೌರವದ ಸ್ಥಾನ ಪಡೆದಿದ್ದಾರೆ.

"ಜನರಲ್ ಕಾರ್ಯಪ್ಪ ವಾಂಟ್ಸ್ ಟು ಮೀಟ್ ಯುವರ್ ಜನರಲ್" ಭಾರತ ಪಾಕಿಸ್ಥಾನ ಯುದ್ದ ಸಂದರ್ಭದಲ್ಲಿ ಜನರಲ್ ಕೆ. ಎಂ. ಕಾರಿಯಪ್ಪನವರು ಭಾರತದ ಗಡಿ ದಾಟಿ ಪಾಕಿಸ್ಥಾನದ ನೆಲದಲ್ಲಿ ನಿಂತು "ಜನರಲ್ ಕಾರಿಯಪ್ಪ ವಾಂಟ್ಸ್ ಟು ಮೀಟ್ ಯುವರ್ ಜನರಲ್" ಎಂದು ಎತ್ತರದ ಧ್ವನಿಯಲ್ಲಿ ಕರೆಕೊಟ್ಟರು. ತಕ್ಷಣ ಪೊದೆಯಲ್ಲಿ ಅಡಗಿ ಕುಳಿತಿದ್ದ ಪಾಕ್ ಯೋಧರು ಎದ್ದು ನಿಂತು ಶತ್ರು ಸೇನಾನಿಗೆ ಸಲ್ಯೂಟ್ ಹೊಡೆದು ಅವರನ್ನು ಅವರ ಸೇನಾನಿ ಬಳಿಗೆ ಕರೆದುಕೊಂಡು ಹೋದರು. ಇಂತಹ ಘಟನೆ ಇಡಿ ವಿಶ್ವದ ಇತಿಹಾಸದಲ್ಲಿ ಎಲ್ಲಿಯೂ ನಡೆದಿರಲಿಲ್ಲ. ಭಾರತದ ಈ ಸೇನಾನಿಯನ್ನು ಹೊಡೆದು ನೆಲಕ್ಕೆ ಉರುಳಿಸಲು ಕೇವಲ ಒಂದು ಬುಲೆಟ್ ಸಾಕಾಗಿತ್ತು. ಆದರೆ ಜನರಲ್ ಕೆ. ಎಂ. ಕಾರಿಯಪ್ಪನವರ ಬಗ್ಗೆ ತಿಳಿದಿದ್ದ ಸೈನಿಕರು ಶತ್ರುಗಳಾಗಿದ್ದರೂ ಅವರು ನೀಡಿದ ಗೌರವ ಇನ್ಯಾರಿಗೂ ಸಿಗಲಾರದು.

ಭಾರತ ಪಾಕ್ ಯುದ್ದ ನಡೆಯುವ ಸಂದರ್ಭದಲ್ಲಿ ’ವಿಶ್ವ ಸಂಸ್ಥೆಯಿಂದ ಯುದ್ದ ವಿರಾಮಕ್ಕೆ ಆಜ್ಞೆ ಬಂದಿತ್ತು. ಪ್ರಧಾನಿ ನೆಹರೂ ಆದೇಶದಂತೆ ಕಾಶ್ಮಿರದಲ್ಲಿ ಯುದ್ದ ನಿಲ್ಲಿಸಬೇಕಾಯಿತು. ಇನ್ನು ಹದಿನೈದು ದಿನ ಸಮಯ ದೊರಕಿದ್ದಿದ್ದರೆ ಕಾಶ್ಮೀರ ಸಮಸ್ಯೆ ಅಂದೇ ಮುಗಿದು ಬಿಡುತಿತ್ತು. ಇದರಿಂದ ಕೆ. ಎಂ ಕಾರಿಯಪ್ಪನವರು ಮನನೊಂದು ಯುದ್ಧಭೂಮಿಯಿಂದ ಹಿಂತಿರುಗಬೇಕಾಯಿತು.

"ಮಹಾ ದಂಡನಾಯಕ ಪದವಿಯನ್ನು ಕಂಡು ಅಂಜಿದ ಜವಹರ್ ಲಾಲ್ ನೆಹರೂ" ಭಾರತದ ಮೂರು ಸೇನಾಪಡೆಗಳ ಅಧಿಕಾರವನ್ನು ಪಡೆದಿದ್ದ ಜನರಲ್ ಕೆ. ಎಂ. ಕಾರಿಯಪ್ಪನವರು ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರ ಅವರು ನಡೆದು ಬಂದ ದಾರಿ, ಅವರ ಸಾಹಸ, ಶೌರ್ಯ, ದೇಶಭಕ್ತಿ, ಪ್ರಾಮಾಣಿಕತೆ, ದೃಡನಿರ್ಧಾರ, ದಿಟ್ಟಹೆಜ್ಜೆ, ಧೈರ್ಯವನ್ನು ಕಂಡ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರ್ ಲಾಲ್ ನೆಹರೂರವರು ಅಲ್ಲಿ ತಮ್ಮ ರಾಜಕರಣಕ್ಕೆ ಕುತ್ತುಬಂದು, ಅಧಿಕಾರ ಕಳೆದು ಕೊಳ್ಳುವ ಅಳುಕು ಅಂಜಿಕೆಯಿಂದ, 29 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಅನುಭವಿ ಸೇನಾನಿ ಕೆ. ಎಂ. ಕಾರಿಯಪ್ಪನವರು ಎಲ್ಲಿಯಾದರು ದೇಶವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳ ಬಹುದೆಂಬ ಭಯದಿಂದ ಉಪಾಯವಾಗಿ ಅವರನ್ನು 1953 ರಲ್ಲಿ ನಿವೃತ್ತಿಗೊಳಿಸಿ ನ್ಯೂಜಿಲ್ಯಾಂಡ್ ಗೆ 3ನೇ ರಾಯಬಾರಿಯಾಗಿ ನೇಮಿಸಿ ಕಳುಹಿಸಿದರು. 1956 ರ ವರೆಗೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ದಲ್ಲಿ ರಾಯಾಭಾರಿಯಾಗಿ ಸೇವೆ ಸಲ್ಲಿಸಿ ಭಾರತಕ್ಕೆ ಹಿಂತಿರುಗಿದರು.

"ವೀರ ಸೇನಾನಿಯ ನಿವೃತ್ತಿ ಜೀವನ - ಅಚ್ಚು ಮೆಚ್ಚಿನ ರೋಶನಾರದಲ್ಲಿ" ಭಾರತದ ಸೇನೆಯನ್ನು ಭದ್ರವಾಗಿ ಕಟ್ಟಿದ ಪ್ರಾಮಾಣಿಕ ಸೇನಾನಿ ಕೆ. ಎಂ. ಕಾರಿಯಪ್ಪನವರು ತಮ್ಮ ನಿವೃತ್ತಿ ಜೀವನವನ್ನು ಸುಂದರ ತಾಣ ವನಸಿರಿಯ ಮದ್ಯದಲ್ಲಿರುವ ಮಡಿಕೇರಿಯಲ್ಲಿ ಅರಣ್ಯ ಇಲಾಖೆಯಿಂದ ಐವತ್ತು ಏಕರೆ ಜಾಗವನ್ನು ಖರೀದಿಸಿ ನೆಲೆಸಿದರು. ಅಲ್ಲಿಯೆ ಬ್ರಿಟಿಷರಿಂದ ನಿರ್ಮಾಣವಾದ ಬಂಗಲೆಯಿತ್ತು. ತಾವು ವಾಸಿಸಿತ್ತಿದ್ದ ಬಂಗಲೆ "ರೋಶನಾರ" ಅವರ ಅಚ್ಚುಮೆಚ್ಚಿನ ವಾಸಸ್ಥಾನವಾಗಿತ್ತು.

ಒಮ್ಮೆ ಮೈಸೂರಿನಿಂದ ಮಡಿಕೇರಿಗೆ ಪ್ರಯಾಣ ಮಾಡುತ್ತಿದ್ದಾಗ ಅವರ ಕಾರು ಅಕಸ್ಮಿಕವಾಗಿ ಒಂದು ದನಕ್ಕೆ ಡಿಕ್ಕಿಹೊಡೆದು ದನ ಅರೆಜೀವವಾಗಿ ನೆಲದಲ್ಲಿ ಬಿದ್ದಿತು. ಊರಿನ ಜನರೆಲ್ಲರೂ ಇವರ ಕಾರನ್ನು ತಡೆದು ಚಾಲಕನನ್ನು ತಳಿಸಲು ಮುಂದಾದರು. ಪರಿಸ್ಥಿತಿ ವಿಪರೀತವಾಗುವ ಮೊದಲೆ ಜನರಲ್ ಕೆ. ಎಂ. ಕಾರಿಯಪ್ಪನವರು ಕಾರಿನಿಂದ ಹೊರಕ್ಕೆ ಬಂದಾಗ ನಡೆದ ಘಟನೆಯಲ್ಲಿ ಸೇನಾನಿಯ ಕಾರು ಎಂದು ತಿಳಿದು ಗ್ರಾಮಸ್ಥರು ಬೆಚ್ಚಿದರು. ದನದ ಮಾಲಿಕನನ್ನು ಕರೆದು ಆತನಿಗೆ ಪರಿಹಾರದ ಪೂರ್ಣ ಹಣವನ್ನು ನೀಡಿದರು. ಪ್ರಾಣ ಯಾತನೆಯಿಂದ ನರಳುತ್ತಿದ್ದ ದನವನ್ನು ಅಂಗ ವಿಕಲತೆಯಿಂದ ನರಳುವುದು ಬೇಡ ಎಂದು ನಿರ್ಧರಿಸಿ ತಮ್ಮ ಬಳಿಯಿದ್ದ ಪಿಸ್ತೂಲ್ ನಿಂದ ಶೂಟ್ ಮಾಡಿದರು. ನಂತರ ಕಳೆಬರವನ್ನು ಗ್ರಾಮಸ್ಥರಿಂದ ಗುಂಡಿತೆಗೆಸಿ ಹಾಕಿ ಮುಚ್ಚಿಸಿ ನಂತರ ತಮ್ಮ ಪ್ರಯಾಣವನ್ನು ಮುಂದುವರೆಸಿದರು.

“ಯುದ್ಧ ಸಂದರ್ಭದಲ್ಲಿ ಸೇನಾನಿಗೆ ಕರೆ”

ಭಾರತದ ವಿರುದ್ದ 1962, 1965, 1971 ರಲ್ಲಿ ನಡೆದ ಯುದ್ಧ ಸಂದರ್ಭದಲ್ಲಿ ಸೈನಿಕರಿಗೆ ಆತ್ಮ ಸ್ಥೈರ್ಯ, ಬಲತುಂಬಲು, ನಿವೃತ್ತಿ ಜೀವನ ನಡೆಸುತಿದ್ದ ಸೇನಾನಿ ಕೆ. ಎಂ. ಕಾರಿಯಪ್ಪ ನವರನ್ನು ಭಾರತ ಸರ್ಕಾರ ಕರೆಯಿಸಿ ಕೊಂಡು ಅವರ ಸೇವೆಯನ್ನು ಬಳಸಿಕೊಂಡು ಗೌರವ ಸಲ್ಲಿಸಿದೆ.

"ನನ್ನ ಮಗನಲ್ಲ ಆತನೀಗ ದೇಶದ ಮಗ" 1965 ರ ಪಾಕ್ ಯುದ್ಧ ಸಂದರ್ಭದಲ್ಲಿ ಜನರಲ್ ಕೆ. ಎಂ. ಕಾರಿಯಪ್ಪನವರ ಪುತ್ರ ಫೈಟ್ ಲೆಪ್ಟಿನೆಂಟ್ ಕೆ. ಸಿ. ನಂದಾ ಕಾರ್ಯಪ್ಪ (ನಂತರ ಏರ್ ಮಾರ್ಷಲ್ ಆಗಿ ಸೇವೆ ಸಲ್ಲಿಸಿದವರು) ನವರ ಹಂಟರ್ ಏರ್ ಕ್ರಾಫ್ಟನ್ನು ಹೊಡೆದು ಉರುಳಿಸಿ 1966 ರ ವರೆಗೆ ಯುದ್ಧ ಖೈದಿಯನ್ನಾಗಿರಿಸಿದರು. ಆ ಸಂದರ್ಭದಲ್ಲಿ ಜನರಲ್ ಕೆ. ಎಂ. ಕಾರಿಯಪ್ಪನವರ ಅಧೀನದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸೇವೆ ಸಲ್ಲಿಸಿದ ಫಿ. ಮಾ. ಅಯೂಬ್ ಖಾನ್ ರವರು ಮಡಿಕೇರಿಯಲ್ಲಿದ್ದ ಕಾರಿಯಪ್ಪ ನವರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಅವರ ಮಗನನ್ನು ಶತ್ರು ಪಡೆಯಿಂದ ಬಿಡುಗಡೆ ಮಾಡುವಂತೆ ಶತ್ರು ರಾಷ್ಟ್ರದ ಮುಖ್ಯಸ್ಥರನ್ನು ಕೋರಿಕೊಳ್ಳಲು ಸೂಚಿಸಿದರು. ತಕ್ಷಣ ಕಾರಿಯಪ್ಪನವರು " ಆತ ಈವಾಗ ನನ್ನ ಮಗನಲ್ಲ ಆತನೀಗ ದೇಶದ ಮಗ" ಇನ್ನಿತರ ಖೈದಿಗಳನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೊ ಅದೇ ರೀತಿ ನಡೆಸಿ ಕೊಳ್ಳಲಿ. ಒಂದು ಸಮಯ ಎಲ್ಲಾ ಖೈದಿಗಳನ್ನು ಬಂದ ಮುಕ್ತವಾಗಿಸಿದರೆ ಮಾತ್ರ ಬಿಡುಗಡೆ ಮಾಡಲಿ, ಅವನಿಗೆ ಮಾತ್ರ ವಿಶೇಷ ಸವಲತ್ತು ನೀಡುವುದು ಬೇಡಾ ಎಂದು ಪ್ರತಿಕ್ರಿಯೆ ನೀಡಿದರು. ಈ ವಿಚಾರ ಪಾಕ್ ಸೇನಾನಿಗಳ ಗಮನಕ್ಕೆ ಬಂದು ಎಲ್ಲಾ ಬಂದಿತ ಯುದ್ದ ಖೈದಿಗಳನ್ನು ಗೌರವದಿಂದ ಭಾರತಕ್ಕೆ ಕಳುವಿಸಿಕೊಟ್ಟರು. ಜನರಲ್ ಕೆ. ಎಂ. ಕಾರಿಯಪ್ಪನವರ ಈ ರೀತಿಯಾದ ಮಾತೃಭೂಮಿಯ ಮೇಲಿರುವ ಅಭಿಮಾನವೇ ಭಾರತೀಯ ಸೈನ್ಯದ ಪ್ರತಿಯೊಬ್ಬ ಯೋಧನಿಗೆ ದೇಶ ಸೇವೆ ಸಲ್ಲಿಸುವ ಪ್ರೇರಣೆಯಾಗಿದೆ.

"ಜಗತ್ತಿನ ಬಲಿಷ್ಠ ಸೇನಾ ಪಡೆಗಳಿಗೆ ಸಲಹೆ, ಸೂಚನೆ, ಮಾರ್ಗದರ್ಶನ" ಜನರಲ್ ಕೆ. ಎಂ. ಕಾರಿಯಪ್ಪ ನವರು ಜಗತ್ತಿನ ಬಲಿಷ್ಠ ಸೇನಾ ಪಡೆಗಳಾದ ಚೀನಾ, ಜಪಾನ್, ಯುನೈಟೆಡ್ ಸ್ಟೇಟ್ಸ್, ಗ್ರೇಟ್ ಬ್ರಿಟನ್, ಕೆನಾಡಾ, ಯುರೋಪಿನ ಹಲವಾರು ಸೇನಾ ಪಡೆಗಳಿಗೆ ಭೇಟಿ ನೀಡಿ ಸಲಹೆ, ಸೂಚನೆ, ಮಾರ್ಗದರ್ಶನ ನೀಡಿದ್ದಾರೆ. ಅಮೇರಿಕಾ ಅಧ್ಯಕ್ಷರಾದ ಹ್ಯಾರಿ ಎಸ್. ಟ್ರೂಮನ್ ರವರು "ಆರ್ಡರ್ ಆಫ್ ದಿ ಚೀಫ್ ಕಮಾಂಡರ್ ಆಫ್ ದಿ ಲೆಜಿನ್ ಆಫ್ ಮೆರಿಟ್" ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

" ಭಾರತದ ಅತ್ಯಂತ ಉನ್ನತ " ಫೀಲ್ಡ್ ಮಾರ್ಷಲ್" ಪದವಿ ಕೆ. ಎಂ. ಕಾರಿಯಪ್ಪನವರಿಗೆ. ಭಾರತದ ಯುವ ಪ್ರಧಾನಿ ರಾಜೀವ್ ಗಾಂಧಿಯವರ ಸಮಯದಲ್ಲಿ ಭಾರತ ಸರ್ಕಾರ ತುಂಬಾ ತಡವಾದರೂ ಜನರಲ್ ಕೆ. ಎಂ ಕಾರಿಯಪ್ಪ ನವರ ದೇಶ ಸೇವೆಯನ್ನು ಮರೆಯದೆ ಜೀವಿತಾವಧಿಯಲ್ಲಿಯೇ ಆಗಿನ ಭಾರತದ ರಾಷ್ಟ್ರಪತಿಯಾಗಿದ್ದ ಜೈಲ್ ಸಿಂಗ್ ರವರು 1986 ರಲ್ಲಿ ರಾಷ್ಟ್ರಪತಿ ಭವನದಲ್ಲಿ ಜನರಲ್ ಕೆ. ಎಮ್. ಕಾರಿಯಪ್ಪನವರಿಗೆ "ಫೀಲ್ಡ್ ಮಾರ್ಷಲ್" ಪದವಿಯನ್ನು ನೀಡಿ ಗೌರವಿಸಿದರು. ಅವರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿದ್ದರೂ, ಅವರು ನಿಂತು ಕೊಂಡೇ ಪದವಿಯನ್ನು ಸ್ವೀಕರಿಸಿದರು. ಫೀಲ್ಡ್ ಮಾರ್ಷಲ್ ಪದವಿ ನೀಡಿದ ಸರ್ಕಾರ ಅವರಿಗೆ ದೇಶದ ಒಳಗೆ ಯಾವುದೇ ಭಾಗಕ್ಕೆ ಸಂಚರಿಸಲು ಹೆಲಿಕ್ಯಾಪ್ಟರ್ ಸೌಲಭ್ಯ ನೀಡಿತ್ತು. ಆದರೆ ಒಮ್ಮೆಯಾದರೂ, ಆ ಸೌಲಭ್ಯವನ್ನು ಬಳಸಿಕೊಳ್ಳಲೇ ಇಲ್ಲ.

"ನೈಜ್ಯ ಭಾರತೀಯ ಫಿ. ಮಾ. ಕೆ. ಎಂ. ಕಾರಿಯಪ್ಪನವರ ಸಮಯ ಪ್ರಜ್ಞೆ" ಫಿ. ಮಾ. ಕೆ. ಎಂ ಕಾರಿಯಪ್ಪ ನವರು ಯಾವುದೇ ಸಭೆ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದರೆ, ಸರಿ ಸಮಯದಲ್ಲೇ ಹಾಜರಾಗಿರುತ್ತಿದ್ದರು. ಕೆಲವು ಸಲ ಕಾರ್ಯಕ್ರಮ ಆಯೋಜಕರು ಸಮಾರಂಭದ ತಯಾರಿ ಪೂರ್ಣವಾಗದೆ, ಇವರು ಪ್ರತ್ಯಕ್ಷವಾದಾಗ ಕಕ್ಕಾಬಿಕ್ಕಿ ಯಾಗಿದ್ದು ಇದೆ.

ಪ್ರಖ್ಯಾತ ಗಾಯಕಿ ಎಂ. ಎಸ್. ಸುಬ್ಬುಲಕ್ಷ್ಮಿ ಯವರ ಸಂಗೀತ ಕಾರ್ಯಕ್ರಮ ರಾತ್ರಿಯಲ್ಲಿ ನಡೆಯುತ್ತಿದ್ದಾಗ ಅಕಸ್ಮಾತ್ ವಿದ್ಯುತ್ ನಿಂತು ಕತ್ತಲೆ ಆವರಿಸಿದಾಗ, ವೇದಿಕೆಯ ಮೇಲಿದ್ದ ಫಿ. ಮಾ. ಕೆ. ಎಂ. ಕಾರಿಯಪ್ಪನವರು ತಮ್ಮ ಕಿಸೆಯಿಂದ ಕ್ಯಾಂಡಲ್ ಬೆಂಕಿ ಪೊಟ್ಟಣ ತೆಗೆದು, ಕ್ಯಾಂಡಲ್ ಹಚ್ಚಿ ಬೆಳಗಿಸಿದಾಗ ಇಡೀ ಸಭೆಯೇ ದಿಗ್ಬಾಂತವಾಯಿತು.

ಬೆಟ್ಟಗುಡ್ಡಗಳ ಹಾದಿಯಲ್ಲಿ ಪ್ರಯಾಣಿಸುವಾಗ ಅವರ ಕಾರಿನಲ್ಲಿ ಕತ್ತಿ, ಕೊಡಲಿ, ಹಗ್ಗ ಯಾವಾಗಲೂ ಇರುತ್ತಿತ್ತು. ದಾರಿಯಲ್ಲಿ ಮರ ಬಿದ್ದು ರಸ್ತೆ ತಡೆಯಾಗಿದ್ದರೆ, ತಮ್ಮಲ್ಲಿರುವ ಉಪಕರಣದಿಂದ ಸರಿಪಡಿಸಿಕೊಂಡು ಪ್ರಯಾಣ ಮುಂದುವರೆಸಿಕೊಂಡು ಹೋಗುತ್ತಿದ್ದರು.

"ಮಡಿಕೇರಿ ಜನತೆಗೆ ನೀರಿನ ಸೌಲಭ್ಯ ನೀಡಿದ ಮಹಾ ದಾನಿ" ಫಿ. ಮಾ. ಕೆ. ಎಂ. ಕಾರಿಯಪ್ಪನವರು ತಾವೇ ಖರೀದಿಸಿದ್ದ ಜಾಗದಲ್ಲಿ ಜಲದ ನೆಲೆ ಇದ್ದು, ಮಡಿಕೇರಿಯ ಜನತೆ ನೀರಿಗಾಗಿ ಪರದಾಡುವ ಪರಿಸ್ಥಿತಿಯನ್ನು ಕಂಡ ಇವರು ತಮ್ಮ ಜಾಗದಲ್ಲಿರುವ ಎಂಟು ಏಕರೆ ನೀರಿನ ಜಾಗವನ್ನು ಮಡಿಕೇರಿ ಪುರ ಸಭೆಗೆ ದಾನವಾಗಿ ನೀಡಿ, ಜನತೆಯ ನೀರಿನ ಸಮಸ್ಯೆಯನ್ನು ನೀಗಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾ ದಾನಿ.

" ನಾನು ಪ್ಲಾಂಟರ್ ಅಲ್ಲ ಪೆನ್ಶನರ್" ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಚಿತ್ರ ಕಲಾವಿದರು ಒಟ್ಟು ಸೇರಿ "ಕೊಡಗು ಕಲಾ ಪರಿಷತ್" ಸಂಸ್ಥೆಯನ್ನು ಸ್ಥಾಪಿಸಿ ಜಿಲ್ಲೆಯಾದ್ಯಂತ ಕಲಾಶಿಬಿರ, ಕಲಾ ಜಾತಾ, ಚಿತ್ರಕಲಾಸ್ಪರ್ಧೆ, ತೈಲವರ್ಣ ಜಲವರ್ಣ ಚಿತ್ರಕಲಾ ಪ್ರದರ್ಶನ ನಡೆಸಿಕೊಂಡು ಬರುತಿದ್ದ ಸಂದರ್ಭ, ಮಡಿಕೇರಿ ಕಾವೇರಿ ಕಲಾ ಕ್ಷೇತ್ರದಲ್ಲಿ ಸಮೂಹ ಚಿತ್ರಕಲಾ ಪ್ರದರ್ಶನ ನಡೆಯುತಿತ್ತು. ನಾವೆಲ್ಲಾ ಕಲಾವಿದರು ಒಟ್ಟು ಸೇರಿ ಫಿ. ಮಾ. ಕೆ. ಎಂ. ಕಾರಿಯಪ್ಪನವರನ್ನು ಕಲಾ ಪ್ರದರ್ಶನ ವೀಕ್ಷಿಸಲು ಆಹ್ವಾನಿಸಿದ್ದೆವು. ಸಮಯ ನಿಗದಿಯಾಗಿತ್ತು, ನಾವೆಲ್ಲರೂ ಶಿಸ್ತಿನ ಸಿಪಾಯಿಗಳಂತೆ ಅವರ ಬರುವಿಕೆಯನ್ನು ಎದುರು ನೋಡಿಕೊಂಡಿರುವಂತೆ ಒಂದು ನಿಮಿಷ ಹಿಂದೆ ಮುಂದೆಯಾಗದಂತೆ ಕಲಾ ಪ್ರದರ್ಶನ ಗ್ಯಾಲರಿಯೊಳಗೆ ಪ್ರವೇಶಿಸಿದರು. ಒಂದೊಂದು ತೈಲವರ್ಣ, ಜಲವರ್ಣ ಕಲಾಕೃತಿಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಾ, ರಚಿಸಿದ ಕಲಾವಿದರಿಂದ ಪೂರ್ಣ ವಿವರ, ಸನ್ನಿವೇಶ, ಸಂದರ್ಭ, ಸಂದೇಶಗಳ ವಿವರಗಳನ್ನು ತಿಳಿದುಕೊಂಡು ಹರ್ಷಚಿತ್ತರಾಗಿ,ತಮ್ಮ ಕೋಟು ಕಿಸೆಯಿಂದ ಒಂದು ಚೆಕ್ಕನ್ನು ಹೊರತೆಗೆದು ನಮಗೆ ನೀಡುತ್ತಾ "ನಾನು ಪ್ಲಾಂಟರ್ ಅಲ್ಲ ಪೆನ್ಶನರ್" ಎಂದು ನುಡಿಯುತ್ತಾ ’ಕೊಡಗು ಕಲಾ ಪರಿಷತ್’ಗೆ ಒಂದು ಸಾವಿರ ರೂಪಾಯಿಯನ್ನು ಕೊಡುಗೆಯಾಗಿ ನೀಡಿ ಕೊಡಗಿನ ಕಲಾ ಸಂಸ್ಕೃತಿ, ಕಲಾವಿದರಿಗೆ ಪ್ರೋತ್ಸಾಹ ನೀಡಿದ ಪ್ರಥಮ ದಾನಿಯಾದರು. ಆಕ್ಷಣದಲ್ಲಿ ಅವರ ಮಾತಿನ ಅರ್ಥ ನಮಗೆ ತಿಳಿದಿರಲಿಲ್ಲ, ಅವರಿಗೆ ಒಂದು ತಿಂಗಳಿಗೆ ಎರಡು ಸಾವಿರದ ಎಂಟು ನೂರು ರೂಪಾಯಿಗಳು ಮಾತ್ರ ನಿವೃತ್ತಿ ವೇತನ ದೊರೆಯುತ್ತಿದ್ದದು ನಮಗೆ ನಂತರ ತಿಳಿದದ್ದು.

ಕಲಾಪ್ರದರ್ಶನ ವೀಕ್ಷಿಸಿ ಗ್ಯಾಲರಿಯಿಂದ ಹೊರಬರುವಾಗ, ಪುಟ್ಟ ಬಾಲಕಿಯೊಬ್ಬಳು "ಆಟೋಗ್ರಾಫ್" ಪಡೆಯಲು ಕಿರು ಪುಸ್ತಕವನ್ನು ಫಿ. ಮಾ. ಕಾರ್ಯಪ್ಪನವರಿಗೆ ನೀಡಿದಾಗ ಅವರ ಬಳಿಯಿದ್ದ ಪೆನ್ನ್ ನಿಂದ ಪುಸ್ತಕದ ಹಾಳೆಯ ಮೇಲೆ ಒಂದು ಸುಂದರವಾದ ಗಜರಾಜನ ಚಿತ್ರವನ್ನು ರಚಿಸಿ ಅದರ ಕೆಳಗೆ ಇದನ್ನು ರಕ್ಷಿಸಿ ಎಂದು ಬರೆದು ಸಹಿ ಮಾಡಿಕೊಟ್ಟರು. ಅವರ ಕೈಯಲ್ಲಿ ಮೂಡಿಬಂದ ರೇಖಾ ಚಿತ್ರದ ಗೆರೆಗಳನ್ನು ನೋಡಿದಾಗ ನಾವು ಮೂಕವಿಸ್ಮಿತರಾದೆವು. ಅವರ ಗನ್ ಹಿಡಿದ ಕೈ ಪೆನ್ ಹಿಡಿದು ಕಲಾಕೃತಿ ರಚಿಸಿದ ಅವರ ಕಲಾನೈಪುಣ್ಯತೆಗೆ ಸಾಕ್ಷಿಯಾಗಿತ್ತು. ಅವರ ಚಿತ್ರದ ಸಂದೇಶದ ಹಿಂದೆ ಅವರ ಮನಸಿನಲ್ಲಿ ನೋವಿತ್ತು. ಅಂದಿನ ದಿನಗಳಲ್ಲಿ ಕಾಡುಗಳ್ಳ, ಗಜರಾಜ ಹಂತಕ ಲೆಕ್ಕವಿಲ್ಲದಷ್ಟು ಆನೆಗಳ ಹತ್ಯೆ ಮಾಡಿ ಮಾರಣ ಹೋಮ ನಡೆಸುತ್ತಿದ್ದ ಸಮಯವಾಗಿತ್ತು. ಅವರ ಆ ಸಂದೇಶದ ಚಿತ್ರ ಆಗಿನ ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಸರ್ಕಾರಕ್ಕೆ ನೀಡಿದ್ದ ಸೂಚನೆಯಾಗಿತ್ತು.

ಫಿ. ಮಾ. ಕೆ. ಎಂ. ಕಾರಿಯಪ್ಪ ನವರು ವಾಸಿಸುತ್ತಿದ್ದ "ರೋಶನಾರ" ಬಂಗಲೆ ಮಡಿಕೇರಿಯ ಪ್ರಕೃತಿಯ ಮಡಿಲಲ್ಲಿ ಸುಂದರ ಕಾನನ, ಗಂಧದ ಮರಗಳ ನಡುವೆ ಪ್ರಶಾಂತ ವಾತಾವರಣದಲ್ಲಿತ್ತು. ಕಲಾವಿದರಾದ ನಮಗೆ ಚಿತ್ರ ರಚನೆ ಮಾಡಲು ಹೆಚ್ಚು ಸ್ಪೂರ್ತಿ ಕೊಡುತಿದ್ದ ಸ್ಥಳವಾದುದರಿಂದ, ಹೆಚ್ಚು ಹೆಚ್ಚಾಗಿ ಅಲ್ಲಿ ತೆರಳಿ ಪ್ರಕೃತಿಯ ಸೊಬಗನ್ನು ಕ್ಯಾನವಾಸಿನ ಮೇಲೆ ಮೂಡಿಸುತಿದ್ದೆವು. ಕಲಾಕೃತಿ ರಚಿಸಿಯಾದನಂತರ ನಾವು ಫಿ.ಮಾ. ಕಾರ್ಯಪ್ಪನವರ ಬಳಿಗೆ ತೆಗೆದುಕೊಂಡು ಹೋಗಿ ತೋರಿಸುತ್ತಿದ್ದೆವು. ಅವರು ದಿನನಿತ್ಯ ನೋಡುತ್ತಿದ್ದ ದೃಶ್ಯಗಳನ್ನು ನಾವು ಕ್ಯಾನವಾಸಿನ ಮೇಲೆ ಕಲಾಕೃತಿಯನ್ನಾಗಿ ಮೂಡಿಸಿದ್ದನ್ನು ಕಂಡು ಸಂತೋಷ ಪಡುತ್ತಿದ್ದರು. ತಕ್ಷಣ ಅವರ ಅಡುಗೆಯ ಬಟ್ಲರನ್ನು ಕರೆದು ನಮಗೆ ಬಿಸಿ ಬಿಸಿಯಾದ ಕಾಫಿಯನ್ನು ಮಾಡಿಕೊಡಲು ಹೇಳಿ, ನಾವು ಆ ರುಚಿಯಾದ ಕಾಫಿಯನ್ನು ಕುಡಿದು ಅವರ ಆಶೀರ್ವಾದ ಪಡೆದು ತೆರಳುತ್ತಿದ್ದ ಆ ದೃಶ್ಯ ಇಂದಿಗೂ ನಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ.

"ಕಾವೇರಿ ಮಾತೆ" ಯ ಫ್ರೇಮಿಂಗ್ ಚಿತ್ರ ಬಿಡುಗಡೆ ಕೊಡಗಿನ ಕುಲದೇವತೆ "ಕಾವೇರಿ ಮಾತೆ" ಯ ಚಿತ್ರವನ್ನು ನಾನು ರಚಿಸಿ ಶಿವಕಾಶಿಯಲ್ಲಿ ಅಫ್ ಸೆಟ್ ಮುದ್ರಣದಲ್ಲಿ ವರ್ಣರಂಜಿತವಾಗಿ ಮುದ್ರಿಸಿಯಾಗಿತ್ತು. ನಂತರ ಚಿತ್ರವನ್ನು ಮಡಿಕೇರಿಯಲ್ಲಿ ಬಿಡುಗಡೆ ಮಾಡಬೇಕಿತ್ತು. ನಾನು ಚಿತ್ರ ಸಹಿತ ಫಿ. ಮಾ. ಕೆ. ಎಂ. ಕಾರಿಯಪ್ಪನವರನ್ನು ಭೇಟಿ ಮಾಡಲು ’ರೋಶನಾರ’ ಬಂಗಲೆಗೆ ತೆರಳುವಾಗ ಅವರು ಕಾರಿನಲ್ಲಿ ಕುಳಿತು ಬೆಂಗಳೂರಿಗೆ ಪ್ರಯಾಣ ಬೆಳೆಸಲು ಕಾರ್ ಸ್ಟಾರ್ಟ್ ಮಾಡಿಯಾಗಿತ್ತು. ನಾನು ನಿರಾಶನಾದೆ, ಬಂದ ಕೆಲಸವಾಗಲಿಲ್ಲ ಎಂದು ಮನಸಿನಲ್ಲೇ ಚಿಂತಿಸುತ್ತಿರುವಾಗ, ಅವರು ನನ್ನನ್ನು ಕಾರಿನ ಕಿಟಕಿಯಬಳಿಗೆ ಕರೆದು ಬಂದ ವಿಚಾರ ಏನೆಂದು ಕೇಳಿದಾಗ, ಕಾವೇರಿ ಮಾತೆಯ ಚಿತ್ರವನ್ನು ಅವರಿಗೆ ನೀಡಿ, ಈ ಚಿತ್ರವನ್ನು ತಾವು ಬಿಡುಗಡೆ ಮಾಡಬೇಕೆಂದು ಕೇಳಿಕೊಂಡಾಗ, ಅವರು ಬೆಂಗಳೂರಿನಿಂದ ಒಂದು ವಾರ ಕಳೆದು ಬರುತ್ತೇನೆ, ನಂತರದ ದಿನಾಂಕ ಸಮಯವನ್ನು ನನಗೆ ತಿಳಿಸಿದರು. ಆ ಮೇಲೆ ಅವರು ಪ್ರಯಾಣ ಮುಂದುವರೆಸಿದರು. ಇದು ಕೇವಲ ಎರಡು ನಿಮಿಷದಲ್ಲಿ ನಡೆದ ಘಟನೆಯಾಗಿತ್ತು.

"ತಲಕಾವೇರಿ ಪುಣ್ಯಕ್ಷೇತ್ರವನ್ನು ಪಿಕ್ ನಿಕ್ ತಾಣವನ್ನಾಗಿ ದಯವಿಟ್ಟು ಮಾಡಬೇಡಿ" ಮಡಿಕೇರಿಯ ಕಾವೇರಿ ಕಲಾ ಕ್ಷೇತ್ರದಲ್ಲಿ ಚಿತ್ರ ಬಿಡುಗಡೆ ಸಮಾರಂಭ ನಿಶ್ಚಿತ ದಿನದಂದು ನಿಗಧಿತ ಸಮಯದಲ್ಲಿ ಏರ್ಪಾಡಾಗಿತ್ತು. ಫಿ. ಮಾ. ಕೆ. ಎಂ. ಕಾರಿಯಪ್ಪನವರು ಸರಿ ಸಮಯದಲ್ಲೇ ಸಮಾರಂಭಕ್ಕೆ ಆಗಮಿಸಿ "ಕಾವೇರಿ ಮಾತೆ" ಯ ಚಿತ್ರವನ್ನು ಬಿಡುಗಡೆ ಮಾಡಿದರು. ನಾಡಿನ ಜನತೆಗೆ ಶುಭವನ್ನು ಕೋರಿದರು, ಸಭೆಯಲ್ಲಿ ಎಲ್ಲರನ್ನು ಎದ್ದು ನಿಲ್ಲಿಸಿ ಕಾವೇರಿ ಮಾತೆಯ ಬಗ್ಗೆ ಗೀತೆಯನ್ನು ಹೇಳಿ ಎಲ್ಲರನ್ನು ಧ್ವನಿಗೂಡಿಸಿ ಹಾಡಿನ ಮೂಲಕ ಪ್ರಾರ್ಥನೆ ಸಲ್ಲಿಸಿದರು. ಅವರ ಗಾಯನ ಶೈಲಿ ನೋಡಿದಾಗ ಅವರಲ್ಲಿ ಇನ್ನು ಯಾವ ಯಾವ ಪ್ರತಿಭೆಗಳು ಅಡಗಿವೆ ಎನ್ನುವ ವಿಚಾರ ನಮ್ಮನ್ನು ಕಾಡುತಿತ್ತು. ಅವರ ಮನದಾಳದಿಂದ ಹೊರಬಂದ ಮಾತುಗಳು "ತಲಕಾವೇರಿ ಪುಣ್ಯಕ್ಷೇತ್ರವನ್ನು ಪಿಕ್ ನಿಕ್ ತಾಣವನ್ನಾಗಿ ದಯವಿಟ್ಟು ಮಾಡಬೇಡಿ" ಅವರ ಆ ಮಾತುಗಳು ಅವರ ಧ್ವನಿಯಲ್ಲೆ ಬೆಳಗಿನ ಆಕಾಶವಾಣಿಯಲ್ಲಿ ಬಿತ್ತರವಾಗಿ ನಾಡಿನಾದ್ಯಂತ ಜನರು ಆಲಿಸುವಂತಾಯಿತು. ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಅವರ ಸಂದೇಶ ಮುದ್ರಿತವಾಗಿತ್ತು. ನೋಡಲು ನಡೆ ನುಡಿ ಬ್ರಿಟಿಷರಂತೆ ಕಾಣುತಿದ್ದ ಫಿ. ಮಾ. ಕೆ. ಎಂ ಕಾರಿಯಪ್ಪ ನವರು ಕರ್ನಾಟಕದಲ್ಲಿ ಯಾವುದೇ ಸ್ಥಳಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಅವರು ಅಚ್ಚ ಸ್ವಚ್ಚ ಕನ್ನಡ ಭಾಷೆಯಲ್ಲಿ ಭಾಷಣ ಮಾಡುತಿದ್ದರು. ಅಂದಿನ ದಿನಗಳಲ್ಲಿ ಅವರ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಅಭಿಮಾನ ಕಾಳಜಿಯನ್ನು ಕಂಡವರು ಇಂದಿಗೂ ಕನ್ನಡ ಭಾಷೆಯ ಬಗ್ಗೆ ಇರುವ ಗೌರವವನ್ನು ಉಳಿಸಿಕೊಂಡಿದ್ದಾರೆ.

ಮಡಿಕೇರಿ ಜೂನಿಯರ್ ಕಾಲೇಜಿನ ಮಹಾದ್ವಾರದ ಕಲಾಕೃತಿಯ ಉದ್ಘಾಟನೆ

ಮಡಿಕೇರಿ ಜೂನಿಯರ್ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದ ಶ್ರೀ ಪಿ. ಪಿ. ಅಯ್ಯಣ್ಣ ನವರು ಕಲಾಭಿರುಚಿಯುಳ್ಳ ವ್ಯಕ್ತಿತ್ವದವರಾಗಿದ್ದರು. ಅದರ ಫಲವಾಗಿ ಕಾಲೇಜಿನ ಬೃಹತ್ ಮಹಾದ್ವಾರದಲ್ಲಿ ಶಿಲ್ಪ ಕೆತ್ತನೆಯನ್ನು ಮಾಡಿಸಿದರು. ಅದರ ಉದ್ಘಾಟನೆಯನ್ನು 1973 ರಲ್ಲಿ ಅದೇ ವಿಧ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಯಾದ ಫಿ. ಮಾ. ಕೆ. ಎಂ. ಕಾರಿಯಪ್ಪನವರಿಂದ ಮಾಡಿಸಿದರು. ಆ ಸಂದರ್ಭದಲ್ಲಿ ಕಲಾಕೃತಿ ರಚನೆ ಮಾಡುವ ಅವಕಾಶ ನನಗೆ ದೊರೆತುದರಿಂದ, ಸಮಾರಂಭದಲ್ಲಿ ಶಿಲ್ಪಕಲಾವಿದನಾದ ನನ್ನನ್ನು ಫಿ. ಮಾ. ಕಾರ್ಯಪ್ಪನವರಿಂದ ಸನ್ಮಾನಿಸಿ ಗೌರವಿಸಿದರು. ಅಂದಿನ ಆ ಸನ್ಮಾನ ಗೌರವ, ಆಶಿರ್ವಾದ ನನ್ನ ಕಲಾ ಜೀವನದ ಪ್ರಥಮ ಸೌಭಾಗ್ಯವಾಗಿತ್ತು. ಅಂದಿನ ದಿನ ತೆಗೆದ ಸಮಾರಂಭದ ಛಾಯಚಿತ್ರ ಕೊಡಗಿನಲ್ಲೆ ಪ್ರಥಮ ವರ್ಣರಂಜಿತ ಚಿತ್ರವಾಗಿತ್ತು. ಚಿತ್ರತೆಗೆದ ಫಿಲಂನ್ನು ಮುಂಬಯಿಯಲ್ಲಿ ಸಂಸ್ಕರಿಸಿ ಮುದ್ರಣ ಮಾಡಿಸಲಾಗಿತ್ತು.

"ಕೊಡಗಿನ ಕ್ರೀಡೆ ಹಾಕಿ ಪಂದ್ಯಾಟಗಳಲ್ಲಿ" ಮಡಿಕೇರಿಯ ಮ್ಯಾನ್ಸ್ ಕಂಪೌಂಡ್ ಕ್ರೀಡಾಂಗಣ ವಿಶ್ವ ಮಟ್ಟದ ಕ್ರೀಡಾ ಪಟುಗಳನ್ನು ನೀಡಿರುವ ಆಟದ ಮೈದಾನ. ಈ ಮೈದಾನದಲ್ಲಿ ಪ್ರತಿವರ್ಷ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಹಾಕಿ ಪಂದ್ಯಾಟಗಳು ನಡೆಯುತ್ತಿರುತ್ತವೆ. ಫಿ. ಮಾ. ಕೆ. ಎಂ.ಕಾರಿಯಪ್ಪನವರು ಪಂದ್ಯಾಟ ವೀಕ್ಷಿಸಲು ಬಂದು ಹಾಕಿ ಮೈದಾನದ ಮಧ್ಯದಲ್ಲಿ ಎರಡೂ ತಂಡದ ಆಟಗಾರರನ್ನು ಹಸ್ತಲಾಘವ ನೀಡಿ ಹುರಿದುಂಬಿಸಿ, ತಾನೇ ಸ್ವತ: ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದು ಚೆಂಡನ್ನು ಹೊಡೆದು ಪಂದ್ಯಾಟಕ್ಕೆ ಚಾಲನೆ ನೀಡುತ್ತಿದ್ದರು.

"ಮಡಿಕೇರಿ ದಸರಾ ಉತ್ಸವದಲ್ಲಿ" ಮಡಿಕೇರಿಯಲ್ಲಿ ನಡೆಯುವ ದಸರಾ ಉತ್ಸವದಲ್ಲಿ ರಾತ್ರಿ ಪೂರ್ತಿ ನಡೆಯುವ ಕಲಾಕೃತಿಗಳ ವಿದ್ಯುತ್ ದೀಪಾಲಂಕಾರ ಮಂಟಪಗಳ ಮೆರವಣಿಗೆಯ ಅಂತಿಮ ಘಟ್ಟದಲ್ಲಿ, ಅಕ್ಟೋಬರ್ ತಿಂಗಳಿನ ವಿಪರೀತ ಚಳಿಯಲ್ಲಿಯೂ ಸಹ ಬೆಳಗಿನ ಜಾವ ನಾಲ್ಕು ಗಂಟೆಗೆ ಫಿ. ಮಾ. ಕಾರ್ಯಪ್ಪನವರು ಅಗಮಿಸಿ ಎಲ್ಲಾ ಮಂಟಪಗಳನ್ನು ವೀಕ್ಷಿಸಿ, ಸಂತೋಷ ಪಡುತ್ತಿದ್ದರು. ಎಲ್ಲಾ ಮಂಟಪಗಳ ಸಮಿತಿಯವರಿಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿದ್ದರು.

"ತಲಕಾವೇರಿಯಲ್ಲಿ ಪುಣ್ಯಸ್ನಾನ" ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿ - ಭಾಗಮಂಡಲ ಕ್ಷೇತ್ರ ದಿಂದ ಎಂಟು ಕಿ.ಮೀ. ದೂರದಲ್ಲಿದೆ. ಈಗ ರಸ್ತೆ ಸುಗಮವಾಗಿದ್ದು ವಾಹನ ಸಂಚಾರಕ್ಕೆ ಯೋಗ್ಯವಾಗಿದೆ. ಬಹಳ ವರ್ಷಗಳ ಹಿಂದೆ ಅರಣ್ಯ ಮಾರ್ಗವಾಗಿ ಕಾಲು ದಾರಿಯಲ್ಲಿ ನಡೆದುಕೊಂಡು ಗುಡ್ಡ ಬೆಟ್ಟವನ್ನು ಏರಿಕೊಂಡು ತಲಕಾವೇರಿಗೆ ಹೋಗಿ ದರ್ಶನ ಮಾಡಿ ಬರಬೇಕಾಗಿತ್ತು. ಈಗಲೂ ಹಲವಾರು ಭಕ್ತರು ನಡೆದುಕೊಂಡೇ ಹೋಗಿ ಬರುತ್ತಾರೆ. ಫಿ. ಮಾ. ಕಾರ್ಯಪ್ಪನವರು ಭಾಗಮಂಡಲದಿಂದ ತಲಕಾವೇರಿಗೆ ನಡೆದುಕೊಂಡು ಹೋಗಿ ತಲಕಾವೇರಿಯಲ್ಲಿ ತೀರ್ಥ ಸ್ನಾನ ಮಾಡಿ ಬರುತ್ತಿದ್ದರು.

"ಕೊಡವ ಸಾಂಪ್ರದಾಯಿಕ ಉಡುಪಿನ ಕಟ್ಟಾ ಅಭಿಮಾನಿ" ಕೊಡವ ಜನಾಂಗದ ಪರಂಪರೆಯಲ್ಲಿ ವಿಶಿಷ್ಠ ಸ್ಥಾನವನ್ನು ಪಡೆದ ಕೊಡವ ಉಡುಪು ಪುರುಷರ ದಟ್ಟಿ ಕುಪ್ಪಸ "ಕುಪ್ಪ್ಯಚಾಲೆ" ಯನ್ನು ಕೊಡವರು ಹಬ್ಬ ಹರಿದಿನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಧರಿಸುತ್ತಾರೆ. ಫಿ. ಮಾ. ಕಾರ್ಯಪ್ಪನನರು ಮದುವೆ ಸಮಾರಂಭಕ್ಕೆ ಹೋಗುವಾಗ ಕಡ್ಡಾಯವಾಗೆ ತಪ್ಪದೆ "ಕುಪ್ಪ್ಯಚಾಲೆ" ಧರಿಸಿಯೇ ಪಾಲ್ಗೊಳ್ಳುತಿದ್ದರು. ದಿ. ಪುಟ್ಟಣ್ಣ ಕಣಗಾಲ್ ರವರ ಶರಪಂಜರ ದಲ್ಲಿ ಕೊಡವ ಮದುವೆ ಸಂದರ್ಭದಲ್ಲಿ ಪಿ. ಮಾ. ಕೆ. ಎಂ. ಕಾರಿಯಪ್ಪನವರು ಕೊಡಗಿನ ಕೊಡವ ಉಡುಪು "ಕುಪ್ಪ್ಯಾ ಚಾಲೆ" ಯನ್ನು ಧರಿಸಿ ಮದುವೆಯಲ್ಲಿ ಪಾಲ್ಗೊಂಡಿರುವುದನ್ನು ವಿಶೇಷವಾಗಿ ಚಿತ್ರಿಕರಿಸಿದ್ದಾರೆ.

"ರೋಶನಾರ" ವಿಶಿಷ್ಟ ವಸ್ತು ಸಂಗ್ರಹಾಲಯ ಕರ್ನಾಟಕ ಅರಣ್ಯ ಇಲಾಖೆಯಿಂದ ಐವತ್ತು ಎಕರೆ ಸ್ಥಳವನ್ನು ಖರೀದಿಸಿ ರಮಣೀಯ ಕಾನನದ ನಡುವೆ ಬ್ರಿಟಿಷ್ ಆಳ್ವಿಕೆಯಲ್ಲಿ ನಿರ್ಮಿಸಿದ್ದ ಬಂಗಲೆ ಫಿ. ಮಾ. ಕಾರ್ಯಪ್ಪನವರು ವಾಸವಾಗಿದ್ದ ಪ್ರಶಾಂತ ಸ್ಥಳವಾಗಿತ್ತು. ಮಂಜು ಮುಸುಕಿನ ನಡುವಿನಲ್ಲಿ ಮಂಗಳೂರು ಹಂಚಿನ ಮೇಲ್ಛಾವಣಿ, ಒಳಗೆ ಪ್ರವೇಶಿಸುವಾಗ ಕೋಣೆಯ ಒಂದು ಬದಿಯಲ್ಲಿ ಕಟ್ಟಿಗೆಯಿಂದ ಬೆಂಕಿ ಹಾಕಿಕೊಂಡು ಮಡಿಕೇರಿಯ ಚಳಿ ಕಾಯಿಸಿಕೊಳ್ಳಲು ಚಿಮಣಿ ಇರುವ ಗೂಡು. ವೆರಾಂಡದಲ್ಲಿ ಒಂದು ಕಾರ್ಯಪ್ಪನವರಿಗೆ ಕುಳಿತುಕೊಳ್ಳಲು ಆರಾಮ ಕುರ್ಚಿ. ಮನೆಯಲ್ಲಿಯೂ ಸಹ ಸೂಟುಧಾರಿಯಾಗಿ ಇರುತ್ತಿದ್ದರು. ಅವರ ಭೇಟಿಗೆ ವಿಶ್ವದಾದ್ಯಂತದಿಂದ ಹಲವಾರು ಗಣ್ಯರು ಬಂದು ಹೋಗುತ್ತಿದ್ದರು. ನನಗೆ ಅವರನ್ನು ಕಾಣುವ ಅವಕಾಶ ಸಿಗುವ ಸಂದರ್ಭದಲ್ಲಿ ವೆರಾಂಡದಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತು ಕೈಯಲ್ಲಿ ಒಂದು ಸಿಗಾರ್ ಪೈಪು ಹಿಡಿದುಕೊಂಡಿದ್ದರು. ಕೊಡಗಿನ ಸಂಪ್ರದಾಯದಂತೆ ತಲೆಬಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದಾಗ ಅವರು ಎದ್ದುನಿಂತು ನಮ್ಮನ್ನು ಆಶೀರ್ವಾದ ಮಾಡುತಿದ್ದರು. ನಂತರ ಒಳಗೆ ಕರೆದುಕೊಂಡು ಹೋಗಿ ಸ್ವತ: ತಮ್ಮ ಸಂಗ್ರಹವನ್ನು ವಿಶಿಷ್ಟ ವಸ್ತುಗಳನ್ನು ಪ್ರೀತಿಯಿಂದ ತೋರಿಸಿ ವಿವರಿಸುತ್ತಿದ್ದರು. ಬೇರೆ ಬೇರೆ ದೇಶದ ಅಪರೂಪದ ಯಂತ್ರಗಳ ಮಿನಿಯೇಚರ್ ಗಳು, ಗಡಿಯಾರಗಳು, ಟೆಲಿಫೋನ್ ಗಳು, ವಿಗ್ರಹಗಳು, ಧ್ವಜಗಳು, ನಾಣ್ಯಗಳು, ಕರೆನ್ಸಿಗಳು, ಸಿಗಾರ್ ಪೈಪುಗಳು, ವಿದ್ಯುತ್ - ಬ್ಯಾಟರಿ ಇಲ್ಲದೆ ಚಲಿಸುವ ಪಂಪ್ ಸೆಟ್ ಮಾದರಿಗಳು, ಅವರಲ್ಲಿದ್ದ ಕಲಾ ಪ್ರೇಮ ಸೌಂದರ್ಯ ಪ್ರಜ್ಞೆಗೆ ಸಾಕ್ಷಿಯಾಗಿತ್ತು.

ಅವರನ್ನು ಭೇಟಿಯಾಗಲು ಹೋಗುವಾಗ ಮೊದಲು ಒಮ್ಮೆ ನಮ್ಮ ತಲೆ ಮುಟ್ಟಿ ಸವರಿ ಕೂದಲು ಗಿಡ್ಡವಾಗಿದ್ದು ನೀಟ್ ಕ್ರಾಪ್ ಇದೆಯೇ ಎಂದು ಖಾತ್ರಿ ಪಡಿಸಿ, ಧರಿಸಿರುವ ಬಟ್ಟೆಗಳು ಶುಭ್ರವಾಗಿದ್ದು, ನಡೆ, ನುಡಿ, ವಿನಯ, ಗೌರವ, ಸಮಯ ಪ್ರಜ್ಞೆ ಶಿಸ್ತುಬದ್ಧವಾಗಿ ಇದ್ದರೆ ಮಾತ್ರ ನಾವು ಬಚಾವ್, ಇಲ್ಲದಿದ್ದರೆ ನಮಗೆ ಒಳಗೆ ಪ್ರವೇಶವಿಲ್ಲ. ಅವರ ಶಿಸ್ತಿನಲ್ಲಿ ಕೇವಲ ಕೆಲವು ಅಂಶವನ್ನಾದರು ಪಾಲಿಸಿದರೆ ಸಾಕು, ನಾವು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ ಎಂದು ಅವರ ಶಿಸ್ತನ್ನು ಪಾಲಿಸಿದವರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.

"ಭಾರತದ ಸೈನ್ಯಕ್ಕೆ ಕೊಡಗಿನ ಪ್ರತಿಯೊಂದು ಕುಟುಂಬದಿಂದ ಸೈನಿಕರ ಸೇವೆ" ವೀರರ ಪರಂಪರೆಯ ನಾಡಾದ ಕೊಡಗು ಜಿಲ್ಲೆ ಭಾರತ ದೇಶದ ಸೈನ್ಯಕ್ಕೆ ಎರಡು ದಂಡನಾಯಕರಾದ ಫಿ. ಮಾ. ಕೆ. ಎಂ. ಕಾರಿಯಪ್ಪ ಮತ್ತು ಜನರಲ್ ತಿಮ್ಮಯ್ಯ ರವರನ್ನು ನೀಡಿದೆ. ಕೊಡಗಿನಲ್ಲಿ ಗಂಡು ಮಗು ಜನಿಸಿದರೆ ಮನೆಯ ಹೊರಗೆ ಅಂಗಳದಲ್ಲಿ ಮನೆಯ ಯಜಮಾನ ಕೈಯಲ್ಲಿ ಬಂದೂಕ ಹಿಡಿದು ಆಕಾಶದ ಕಡೆಗೆ ಗುಂಡು ಹಾರಿಸಿ ಗಂಡು ಮಗುವಿನ ಜನನದ ಸುದ್ದಿಯನ್ನು ಊರಿನ ಜನತೆಗೆ ತಿಳಿಯುವಂತೆ ಮಾಡುತ್ತಾನೆ. ಹುಟ್ಟಿದಾಗಲೆ ಗುಂಡಿನ ಸದ್ದನ್ನು ಕೇಳಿದ ಮಗು ಮುಂದೊಂದು ದಿನ ಕೈಯಲ್ಲಿ ಬಂದೂಕ ಹಿಡಿದು ದೇಶವನ್ನು ರಕ್ಷಿಸುವ ಸೈನಿಕನಾಗುತ್ತಾನೆ. ಕೊಡಗಿನ ವೀರ ಪುತ್ರರು ದೇಶದ ಗಡಿಯನ್ನು ಕಾಯುತಿದ್ದರೆ. ಸೈನ್ಯದಲ್ಲಿ ಸೈನಿಕನಿಂದ ಹಿಡಿದು ವಿವಿದ ಹುದ್ದೆಯ ಅಧಿಕಾರಿಗಳಾಗಿ, ಕರ್ನಲ್, ಮೇಜರ್, ಬ್ರಿಗೇಡಿಯರ್, ಮಾರ್ಷಲ್, ಕಮಾಂಡರ್, ಕ್ಯಾಪ್ಟನ್.... ಇತ್ಯಾದಿ ಪದವಿಯನ್ನು ಅಲಂಕರಿಸಿ, ಯುದ್ದ ಭೂಮಿಯಲ್ಲಿ ಹೋರಾಡಿದ್ದಾರೆ, ಜಯಗಳಿಸಿದ್ದಾರೆ, ದೇಶಕ್ಕಗಿ ಬಲಿದಾನ ಮಾಡಿ ಹುತಾತ್ಮರಾಗಿದ್ದಾರೆ. ಇವರೆಲ್ಲರಿಗೂ ಸ್ಪೂರ್ತಿಯ ಚಿಲುಮೆ ಫಿ. ಮಾ. ಕೆ. ಎಂ. ಕಾರ್ಯಪ್ಪನವರಾಗಿದ್ದರು.ಇದನ್ನು ಪೂರ್ಣವಾಗಿ ಅರಿತಿದ್ದ ಭಾರತೀಯ ಸೈನ್ಯ ನಿವೃತ್ತಿಯಾಗಿ ಮಡಿಕೇರಿಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದ ಫಿ.ಮಾ. ಕಾರ್ಯಪ್ಪನವರನ್ನು 1971 ರ ಯುದ್ದ ಸಂದರ್ಭದಲ್ಲಿ ಸೈನಿಕರನ್ನು ಹುರಿದುಂಬಿಸಿ, ಶತ್ರು ಸೈನ್ಯದೆಡೆಗೆ ಮುನ್ನುಗ್ಗುವಂತೆ ಪ್ರೇರೆಪಿಸುವಂತೆ ಮಾಡಲು ಕರೆಸಿಕೊಂಡಿದ್ದರು.

"ಎಂದಿಗೂ ಋಣಮುಕ್ತನಾಗಿ ಜೀವಿಸುವುದೇ ಅವರು ಬಯಕೆಯಾಗಿತ್ತು" ಒಮ್ಮೆ. ಫಿ. ಮಾ. ಕಾರಿಯಪ್ಪನವರು ಅನಾರೋಗ್ಯ ನಿಮಿತ್ತ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿದ್ದರು. ಆ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಜಡಿಮಳೆ ಸುರಿಯುತಿತ್ತು. ಅದರ ಪರಿಣಾಮವಾಗಿ ಅವರ ಮನೆಯ ಒಂದು ಬದಿಯ ಗೋಡೆ ಕುಸಿದು ಬಿದ್ದಿತ್ತು. ಅವರ ಮನೆಯ ಅಡುಗೆಯನಿಂದ ತಿಳಿದ ಮಡಿಕೇರಿಯ ಪುರಸಭಾ ಅಧ್ಯಕ್ಷರಾಗಿದ್ದ ಕೆ. ಎಸ್. ದೇವಯ್ಯನವರು ನೂತನ ಗೋಡೆ ಕಟ್ಟಿಸಿ ಸರಿಪಡಿಸಿದರು. ಫಿ. ಮಾ. ಕೆ. ಎಂ ಕಾರಿಯಪ್ಪ ನವರು ಗುಣಮುಖರಾಗಿ ಹಿಂತಿರುಗಿದ ಮೇಲೆ ನಡೆದ ಘಟನೆಯನ್ನು ತಿಳಿದು, ಕೆ. ಎಸ್. ದೇವಯ್ಯ ನವರಿಗೆ ಒಂದು ಕೃತಜ್ಞತಾ ಪತ್ರ ಜೊತೆಗೆ ತಗಲಿದ ಖರ್ಚು ಒಂದು ಸಾವಿರದ ಐನೂರು ರೊಪಾಯಿ ಚೆಕ್ ಲಗತ್ತಿಸಿ ಕಳುವಿಸಿ ಕೊಟ್ಟಿದ್ದರು. ಎಂದಿಗೂ ಋಣಮುಕ್ತನಾಗಿ ಜೀವಿಸುವುದೇ ಅವರು ಬಯಸುತಿದ್ದರು.

ಮಡಿಕೇರಿಯ ರಸ್ತೆಯಲ್ಲಿ ಎಂ. ವೈ. ಜೆಡ್ 100 ನಂಬರಿನ ಕಾರು

ಮಡಿಕೇರಿಯ ರಸ್ತೆಯಲ್ಲಿ ಎಂ. ವೈ. ಜೆಡ್ 100 ನಂಬರಿನ ಬ್ಲಾಕ್ ಬ್ಯೂಕ್ ಕಾರು ಚಲಿಸುತಿದ್ದರೆ, ಅದು ಫಿ. ಮಾ. ಕಾರ್ಯಪ್ಪ ನವರದಾಗಿತ್ತು. ಸೂಟುಧಾರಿಯಾಗಿ, ತಲೆಯ ಮೇಲೆ ಹ್ಯಾಟ್ ಧರಿಸಿ ಬಾಯಲ್ಲಿ ಸಿಗಾರ್ ಪೈಪ್ ಇಟ್ಟುಕೊಂಡು ಕುಳಿತು ಚಲಿಸುತಿದ್ದ ಕಾರನ್ನು ನೋಡಿದ ಮಾರ್ಗದಲ್ಲಿ ನಡೆದಾದುತಿದ್ದ ಜನರು ತಲೆಬಾಗಿ ನಮಸ್ಕರಿಸಿ ಗೌರವ ಸಲ್ಲಿಸುತಿದ್ದರು. ರಸ್ತೆಯಬದಿಯಲ್ಲಿ ಮಕ್ಕಳನ್ನು ಕಂಡರೆ ಕಾರು ರಸ್ತೆಯ ಬದಿಯಲ್ಲಿ ನಿಲ್ಲುತಿತ್ತು. ಕೆಳಗಿಳಿದ ಫಿ. ಮಾ. ಕಾರ್ಯಪ್ಪನವರು ಮಕ್ಕಳನ್ನು ಬಳಿಗೆ ಕರೆದು ನಿಲ್ಲಿಸಿ, ತಮ್ಮ ಕಿಸೆಯಿಂದ ಪೆಪ್ಪರ್ ಮೆಂಟ್ ತೆಗೆದು ಮಕ್ಕಳಿಗೆ ನೀಡಿ ನಂತರ ಅವರ ಕೈಗಳನ್ನು ಎತ್ತಿ "ಜೈ ಹಿಂದ್" ಜೋರಾಗಿ ಹೇಳಿಸಿ ನಂತರ ತಮ್ಮ ಕಾರನ್ನು ಏರಿ ಹೊಗುತಿದ್ದರು. ತಮ್ಮ ಇಳಿವಯಸ್ಸಿನಲ್ಲಿಯೂ ಮಕ್ಕಳಿಗೆ ದೇಶಪ್ರೇಮವನ್ನು ಜಾಗೃತಿಗೊಳಿಸುತಿದ್ದ ಚೈತನ್ಯದ ಚಿಲುಮೆಯಾಗಿದ್ದರು. “ಫಿ. ಮಾ. ಕೆ. ಎಂ. ಕಾರಿಯಪ್ಪನವರ ಅಂತಿಮ ಯಾತ್ರೆ" ಭಾರತಾಂಭೆಯ ಮಡಿಲಿನಲ್ಲಿ ಜನಿಸಿದ, ಕಾವೇರಿ ಮಾತೆಯ ವರಪುತ್ರ, ಭಾರತೀಯರು ಕಂಡ ಕಳೆದ ಶತಮಾನದ ಅಪ್ಪಟ ದೇಶ ಪ್ರೇಮಿ ತನ್ನ ಇಳಿವಯಸ್ಸಿನಲ್ಲಿ ಆರೋಗ್ಯ ಕ್ಷೀಣಿಸಿ, ಬೆಂಗಳೂರಿನ ಏರ್ ಫೋರ್ಸ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ತನ್ನ 94 ನೇ ವಯಸ್ಸಿನಲ್ಲಿ ಮೆ 15 - 1993 ರಲ್ಲಿ ಕೊನೆಯುಸಿರು ಎಳೆದರು. ಭರತವರ್ಷ ಕಂಡ ದಿವ್ಯ ಚೇತನ ಲೀನವಾಯಿತು. ಸುದ್ದಿ ತಿಳಿಯುತಿದ್ದಂತೆ ನಾಡಿನಾದ್ಯಂತ ಜನರು ತಮ್ಮ ಗೌರವವನ್ನು ಆಶ್ರುತರ್ಪಣದ ಮೂಲಕ ಸಮರ್ಪಿಸಿದರು. ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಮಡಿಕೇರಿಗೆ ತಂದು ಕಾವೇರಿ ಕಲಾ ಕ್ಷೇತ್ರದ ಸಭಾಂಗಣದಲ್ಲಿ ವೇದಿಕೆಯ ಮೇಲೆ ಇಡಲಾಗಿತ್ತು. ಕಾವೇಇ ಮಾತೆಯ ಚಿತ್ರವನ್ನು ಬಿಡುಗಡೆ ಮಾಡಿದ ಸ್ಥಳದಲ್ಲಿ ಅವರ ಕಾರ್ಯಕ್ರಮ ಸಾರ್ವಜನಿಕವಾಗಿ ಕೊನೆಯ ಕಾರ್ಯಕ್ರಮವಾಗಿತ್ತು. ನಂತರ ಅದೇ ಸ್ಥಳದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನಾಡಿನಾದ್ಯಂತ ಜನರು ಪಡೆದರು. ಮಡಿಕೇರಿಯ ಮುಖ್ಯ ರಸ್ತೆಯಲ್ಲಿ ಭಾರತ ಸೇನೆಯ ಮೂರು ವಿಭಾಗದ ಮುಖ್ಯಸ್ತರೊಂದಿಗೆ ತೆರೆದ ವಾಹನದಲ್ಲಿ ಸಕಲ ಮಿಲಿಟರಿ ಗೌರವದೊಂದಿಗೆ ಸೇನಾ ಪಡೆಯ ಕವಾಯಿತಿನೊಂದಿಗೆ ಅವರು ವಾಸಿಸುತ್ತಿದ್ದ ರೋಶನಾರದ ಬಳಿಗೆ ತರಲಾಯಿತು. ಕೊಡವ ಪದ್ದತಿಯಂತೆ ಶವ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸಿ ಭಾರತ ಸರ್ಕಾರದ ಸಕಲ ಗೌರವದೊಂದಿಗೆ, ಶ್ರೀಗಂಧದ ಚಿತೆಯಲ್ಲಿರಿಸಿ ಅಂತಿಮ ಸಂಸ್ಕಾರ ನಡೆಸಲಾಯಿತು.


"ಮಡಿಕೇರಿಯಲ್ಲಿ ಫಿ. ಮಾ. ಕೆ. ಎಂ. ಕಾರ್ಯಪ್ಪ ಪ್ರತಿಮೆ" ಮಡಿಕೇರಿಯ ಪುರಸಭೆಯ ಅಧ್ಯಕ್ಷರಾಗಿದ್ದ ಶ್ರೀ ವಾಸುದೇವ ಮತ್ತು ಗಣ್ಯರಾದ ಬೆನ್ ಗಣಪತಿ, ಶಿಲ್ಪಿಗಳಾದ ಕಾಮಯಂಡ ಮುತ್ತಣ್ಣ ಮತ್ತು ಬಿ. ಕೆ. ಗಣೇಶ್ ರೈ ಹಾಗೂ ಇನ್ನಿತರ ನಿವೃತ್ತ ಸೇನಾ ಅಧಿಕಾರಿಗಳ ನೇತ್ರತ್ವದಲ್ಲಿ ಫಿ. ಮಾ. ಕೆ. ಎಂ. ಕಾರಿಯಪ್ಪ ಪ್ರತಿಮೆ ಸಮಿತಿಯನ್ನು ರಚಿಸಿ ಮುಂಬೈಯಲ್ಲಿ ಕಂಚಿನ ಪ್ರತಿಮೆಯನ್ನು ತಯಾರಿಸಿ ತಂದು, ಮಡಿಕೇರಿಯ ಫಿ. ಮಾ. ಕೆ. ಎಂ. ಕಾರಿಯಪ್ಪ ವೃತ್ತದ ಬದಿಯಲ್ಲಿ ಸುಂದರ ಹೂದೋಟದ ಮದ್ಯದಲ್ಲಿ ಎತ್ತರದ ಕೆಂಪು ಗ್ರಾನೈಟ್ ಪೀಠದ ಮೆಲೆ ಕಂಚಿನ ಶಿಲ್ಪವನ್ನು ನಿಲ್ಲಿಸಲಾಗಿದೆ. 1995 ರ ಜನವರಿ 28 ಫಿ. ಮಾ. ಕೆ. ಎಂ. ಕಾರಿಯಪ್ಪನವರ ಜನ್ಮದಿನದಂದು ಭಾರತದ ಸೇನಾ ದಂಡನಾಯಾಕರಾಗಿದ್ದ ಜನರಲ್ ಎಸ್ ರಾಯ್ ಚೌಧರಿಯವರು ಸಕಲ ಮಿಲಿಟರಿ ಗೌರವದೊಂದಿಗೆ ಪ್ರತಿಮೆಯನ್ನು ಅನಾವರಣ ಗೊಳಿಸಿದರು. ಸುಂದರ ಮಡಿಕೇರಿ ನಗರವನ್ನು ಬೆಂಗಳೂರು ಮೈಸೂರು ರಸ್ತೆಯ ಮೂಲಕ ಪ್ರವೇಶಿಸುವಾಗ, ಮೊದಲು ಸಿಗುವುದು ಫಿ. ಮಾ. ಕೆ. ಎಂ. ಕಾರಿಯಪ್ಪ ವೃತ್ತ. ಮಡಿಕೇರಿಗೆ ಬರುವ ಪ್ರತಿಯೊಬ್ಬರು ಪ್ರತಿಮೆಯನ್ನು ನೋಡುತ್ತಾರೆ. ಅದೇ ರಸ್ತೆಯಲ್ಲಿ ಮುಂದೆ ಬರುವಾಗ ಸಿಗುವ ಎರಡನೆಯ ವೃತ್ತ ಜನರಲ್ ತಿಮ್ಮಯ್ಯ ವೃತ್ತ. ಮದ್ಯಭಾಗದಲ್ಲಿ ಜೆನರಲ್ ತಿಮ್ಮಯ್ಯ ನವರ ಪ್ರತಿಮೆ ಸಹ ನೋಡ ಬಹುದಾಗಿದೆ.

"ಫಿ. ಮಾ. ಕೆ. ಎಂ. ಕಾರ್ಯಪ್ಪನವರ ಅಂಚೆ ಚೀಟಿ ಬಿಡುಗಡೆ" ಭಾರತ ಸರ್ಕಾರ ಫಿ. ಮಾ. ಕೆ. ಎಂ. ಕಾರ್ಯಪ್ಪನವರ ಗೌರವಾರ್ಥವಾಗಿ 1995 ರಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿದೆ.


"ಫಿ. ಮಾ. ಕೆ. ಎಂ. ಕಾರ್ಯಪ್ಪ ವಿಶ್ವವಿದ್ಯಾಲಯ" ಫಿ. ಮಾ. ಕಾರ್ಯಪ್ಪನವರ ಸ್ಮರಣಾರ್ತವಾಗಿ ಮಡಿಕೇಇಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಉನ್ನತ ದರ್ಜೆಗೇರಿಸಿ ಸ್ನಾತಕೋತರ ಪದವಿಯನ್ನು ಪಡೆಯಲು ಮಂಗಳೂರು ವಿಶ್ವ ವಿಧ್ಯಾಲಯದ ಆಧೀನದಲ್ಲಿ "ಫಿ. ಮಾ. ಕಾರ್ಯಪ್ಪ ವಿಶ್ವವಿದ್ಯಾಲಯ" ಎಂದು ಪುನರ್ ನಾಮಕರಣ ಮಾಡಲಾಗಿದೆ.

"ಫಿ. ಮಾ. ಕೆ. ಎಂ. ಕಾರ್ಯಪ್ಪ ಒಳಾಂಗಣ ಕ್ರೀಡಾಂಗಣ" ಮಡಿಕೇರಿ ಕಿರಿಯ ಮಹಾವಿಧ್ಯಾಲಯದ ಅವರಣದಲ್ಲಿ ಫಿ. ಮಾ. ಕಾರ್ಯಪ್ಪನವರ ಸ್ಮರಣಾರ್ತವಾಗಿ ಬೃಹತ್ ಸಭಾಂಗಣ ಮತ್ತು ಓಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ.

ಫಿ. ಮಾ. ಕೆ. ಎಂ. ಕಾರಿಯಪ್ಪನವರು ಜನಿಸಿದ ಶನಿವಾರಸಂತೆ ಗ್ರಾಮದಲ್ಲಿರುವ ಅವರ ಮನೆಯನ್ನು ಕರ್ನಾಟಕ ಸರ್ಕಾರ "ಸ್ಮಾರಕ" ವನ್ನಾಗಿ ಸಂರಕ್ಷಿಸಿಸಲು ನಿರ್ಧಾರ ತೆಗೆದುಕೊಂಡಿದ್ದಾರೆ.

ಪ್ರತಿಯೊಬ್ಬ ಭಾರತೀಯರು ಫಿ. ಮಾ. ಕೆ. ಎಂ. ಕಾರಿಯಪ್ಪನವರ, ಸಮಯ ಪಾಲನೆ, ಸಮಯ ಪ್ರಜ್ಞೆ, ದೇಶ ಪ್ರೇಮ, ಮಾತೃ ಭೂಮಿಯ ಮೇಲೆ ಗೌರವ, ಭಾಷಾ ಪ್ರೇಮವನ್ನು ಪಾಲಿಸಿ, ಮುಂದಿನ ಜನಾಂಗಕ್ಕೆ ತಿಳಿಸಿ ಕೊಟ್ಟು ಜೀವನದಲ್ಲಿ ಅಳವಡಿಸಿಕೊಂಡರೆ ಅದೇ ನಾವು ಭಾರತ ದೇಶಕ್ಕೆ ಸಲ್ಲಿಸುವ ಗೌರವವಾಗಿದೆ.

"ಶುದ್ಧ ಹಸ್ತ, ಕಷ್ಟಸಹಿಷ್ಣುತೆ, ಕರ್ತವ್ಯ ನಿಷ್ಠೆ, ಸಮಯಪಾಲನೆ, ದೇಶಭಕ್ತ, ಆಡಳಿತಗಾರ, ಶಿಸ್ತಿನ ಸಿಪಾಯಿ, ಧೀಮಂತ, ಮಹಾತೇಜಸ್ವಿ - ಶತಕೋಟಿಗೊಬ್ಬರೆ ಜನ್ಮತಾಳುವುದು"

"ಜೈ ಹಿಂದ್"

ಬಿ. ಕೆ. ಗಣೇಶ್ ರೈ ಪೂರ್ವ ಅಧ್ಯಕ್ಷರು ಕರ್ನಾಟಕ ಸಂಘ ಶಾರ್ಜಾ ಅರಬ್ ಸಂಯುಕ್ತ ಸಂಸ್ಥಾನ