ವಿಷಯಕ್ಕೆ ಹೋಗು

ಸದಸ್ಯ:Leston Veigas 144706/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಯಾಬೆಟೆಸ್‌ ಮತ್ತು ಶಸ್ತ್ರಚಿಕಿತ್ಸೆ

[ಬದಲಾಯಿಸಿ]

ಡಾಕ್ಟ್ರೇ, ನನಗೆ ಆಪರೇಶನ್‌ ಬೇಡ, ಯಾಕಂದ್ರೆ ನನಗೆ ಡಯಾಬೆಟೆಸ್‌ ಇದೆ. ಡಯಾಬೆಟೆಸ್‌ ಇದ್ದಾಗ ಗಾಯಗಳು ವಾಸಿಯಾಗಲ್ವಂತೆ.... ಎಲ್ಲರೂ ಹೇಳುತ್ತಾರೆ... ಎಂಬ ವಾದ ಸರಣಿಯನ್ನು ಬಲವಾಗಿ ನಂಬುವವರು ನಮ್ಮಲ್ಲಿ ಬಹಳ ಮಂದಿ. ಇದರಲ್ಲಿ ಸುಶಿಕ್ಷಿತರೂ ಸಾಕಷ್ಟು ಇರುವುದು ವಿಷಯದ ಬಗ್ಗೆ ಇರುವ ಅಜ್ಞಾನದ ಸಂಕೇತವೆನ್ನಬೇಕು.

ಡಯಾಬೆಟೆಸ್‌ (ಮಧುಮೇಹ) ಎಂಬುದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುವಷ್ಟಕ್ಕೇ ಸೀಮಿತವಾದ ಕಾಯಿಲೆಯಲ್ಲ ನಿಜ. ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಕುಂದಿಸಿ, ಗಾಯಗಳ ಗುಣವಾಗುವಿಕೆಯನ್ನು ಕುಂಠಿತಗೊಳಿಸುತ್ತದೆ ಎಂಬುದೂ ನಿಜವೇ. ಆದರೆ ಗಾಯ ವಾಸಿಯಾಗುವಲ್ಲಿ ವಿಳಂಬವಾದೀತು. ಎಂಬುದಷ್ಟೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಇರುವುದಕ್ಕೆ ಸಕಾರಣವಾಗಲಾರದು. ಏಕೆಂಬುದರ ವಿವರ ತಿಳಿಯೋಣ ಬನ್ನಿ.

ಯಾವುದೇ ಕಾಯಿಲೆಗೆ ಶಸ್ತ್ರಚಿಕಿತ್ಸೆಯನ್ನು ತಜ್ಞವೈದ್ಯರು ಸೂಚಿಸಿದಾಗ, ಅದರ ಅರ್ಥ - ಈ ಕೆಳಗಿನ ಎರಡರಲ್ಲಿ ಒಂದು. ಮೊದಲನೆಯದಾಗಿ, ರೋಗಿಗಿರುವ ಕಾಯಿಲೆಗೆ ಶಸ್ತ್ರಚಿಕಿತ್ಸೆಯಲ್ಲದೆ ಬೇರೆ ಪರ್ಯಾಯ ಚಿಕಿತ್ಸೆ ಇಲ್ಲ ಎಂಬುದು. ಉದಾಹರಣೆಗೆ ಹರ್ನಿಯಾ, ಹೈಡ್ರೊಸಿಲ್‌, ಲೈಪೋಮಾ... ಇತ್ಯಾದಿ. ಇವುಗಳನ್ನು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ವಾಸಿಯಾಗಲು ಸಾಧ್ಯವೇ ಇಲ್ಲ.

ಎರಡನೆಯ ಕಾರಣ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೇ ಹೋದಲ್ಲಿ ಕಾಯಿಲೆ ಉಲ್ಬಣಗೊಂಡು ಒದಗಬಹುದಾದ ಅಪಾಯಕಾರಿ ಸಂಕೀರ್ಣತೆಗಳು. ಉದಾಹರಣೆಗೆ, ಅಪೆಂಡಿಸೈಟಿಸ್‌. ಇಲ್ಲಿ ಇಂಜೆಕ್ಷನ್‌, ಔಷಧಿಗಳ ಮೂಲಕ ಅಪೆಂಡಿಕ್ಸ್‌ ನ ಸೋಂಕನ್ನು ನಿವಾರಿಸುವ ಅವಕಾಶ ಇದೆಯಾದರೂ, ಒಂದು ವೇಳೆ ನಿರೀಕ್ಷಿತ ಸತ್ಪರಿಣಾಮ ಉಂಟಾಗದೆ ಕಾಯಿಲೆ ಮುಂದುವರಿದು ಅಪೆಂಡಿಕ್ಸ್‌ ಒಡೆದು ಹೋಗಿದ್ದೇ ಆದರೆ, ರೋಗಿಯ ಪರಿಸ್ಥಿತಿ ಬಿಗಡಾಯಿಸುತ್ತದೆ. ಇದೇ ರೀತಿ ದೇಹದ ಯಾವುದೇ ಭಾಗದಲ್ಲಿ ಕೀವು ತುಂಬಿದಾಗಲೂ ಔಷಧಿ ಚಿಕಿತ್ಸೆಯ ಮೊರೆ ಹೋಗುವುದರಿಂದ ರೋಗಿಗೆ ಅಪಾಯವಾಗುವ ಸಂಭವವೇ ಹೆಚ್ಚು.

ಮೇಲ್ಕಾಣಿಸಿದ ಸಂದರ್ಭಗಳಲ್ಲಿ ರೋಗಿಗೆ ಡಯಾಬೆಟೆಸ್‌ ಇದ್ದರೂ, ವೈದ್ಯರು ಶಸ್ತ್ರಚಿಕಿತ್ಸೆಯನ್ನೇ ಸೂಚಿಸುತ್ತಾರೆ. ಏಕೆಂದರೆ ಪ್ರಾಣಕ್ಕೆ ಕುತ್ತು ತರಬಲ್ಲ ಸಂಕೀರ್ಣತೆಗಳನ್ನು ತಡೆಯುವುದು ವೈದ್ಯನಾದವನ ಮೊದಲ ಕರ್ತವ್ಯ. ಎಲ್ಲವೂ ನಾವಂದು ಕೊಂಡಂತೆ ಆಗುತ್ತದೆ ಎಂಬ ಆಶಾವಾದ ದೈನಂದಿನ ಜೀವನಕ್ಕೆ ಸರಿ ಹೊಂದಬಹುದು. ಆದರೆ ವೈದ್ಯನಾದವನು ನಾವು ಬಯಸಿದಂತೆ ಆಗದಿ ದ್ದರೆ? ಎಂಬ ಮಾತನ್ನು ಯಾವತ್ತೂ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇದು ಒಂದು ರೀತಿಯ ನಿರಾಶಾವಾದ ಎಂದು ಕೊಂಡರೂ, ವೈದ್ಯಕೀಯದಲ್ಲಿ ಅತ್ಯಗತ್ಯ. ಇದಕ್ಕೆ “high index of suspicion” ಅನ್ನುತ್ತಾರೆ. ಈ ಗುಣವನ್ನು ಹೊಂದಿರುವ ಯಾವುದೇ ವೈದ್ಯ, ರೋಗಿ ಬಯಸುವ ಚಿಕಿತ್ಸೆಯ ಬದಲಿಗೆ ರೋಗಕ್ಕೆ ಸೂಕ್ತವಾದ ಚಿಕಿತ್ಸೆಯನ್ನೇ ಸೂಚಿಸುತ್ತಾನೆ. ಇಲ್ಲಿ ಡಯಾಬೆಟೆಸ್‌ ಇರುವುದು ಅಥವಾ ಇಲ್ಲದೇ ಇರುವುದು ಅಂತಹಾ ಪ್ರಮುಖ ವಿಚಾರವಾಗದು.

ಹಾಗಿದ್ದರೆ, ಡಯಾಬೆಟೆಸ್‌ ಇರುವ ರೋಗಿಗಳಿಗೆ ಹೆಚ್ಚಿನ ಆರೈಕೆ ಬೇಡವೇ? ನಿಶ್ಚಯವಾಗಿಯೂ ಹೆಚ್ಚಿನ ಆರೈಕೆ ಹಾಗೂ ನಿಗಾ ಆವಶ್ಯಕ. ಆದರೆ ಡಯಾಬೆಟೆಸ್‌ ಇರುವವರಿಗೆಂದೇ ಪ್ರತ್ಯೇಕ ಚಿಕಿತ್ಸೆ ಇಲ್ಲ ಎಂಬ ಮಾತು ಗಮನಾರ್ಹ. ಅಂತಹಾ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಸೂಚಿಸುವಾಗ, ವೈದ್ಯರು ರೋಗಿಗೆ ಡಯಾಬೆಟೆಸ್‌ ಇರುವುದನ್ನು ಗಣನೆಗೆ ತೆಗೆದುಕೊಂಡೇ ನಿರ್ಧರಿಸಿರುತ್ತಾರೆ. ಶಸ್ತ್ರಚಿಕಿತ್ಸೆಗೆ ರೋಗಿಯ ಒಪ್ಪಿಗೆ ಪಡೆದುಕೊಂಡ ಅನಂತರ, ಡಯಾಬೆಟೆಸ್‌ ಅನ್ನು ತಹಬಂದಿಗೆ ತಂದ ಅನಂತರವೇ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಕೀವು, ಉದರದಲ್ಲಿನ ಸೋಂಕು... ಇತ್ಯಾದಿ ಎಮರ್ಜೆನ್ಸಿ ಕಾಯಿಲೆಗಳ ಶಸ್ತ್ರಚಿಕಿತ್ಸೆಯ ಮುನ್ನ ಲಭ್ಯವಿರುವ ಸಮಯಾವಕಾಶ ತೀರಾ ಸೀಮಿತವಾಗಿರುವುದರಿಂದ, ಇನ್ಸುಲಿನ್‌ ಇಂಜೆಕ್ಷನ್‌ನ ಮುಖಾಂತರ ರೋಗಿಯ ರಕ್ತದ ಸಕ್ಕರೆಯ ಪ್ರಮಾಣವನ್ನು ತುರ್ತಾಗಿ ನಿಯಂತ್ರಿಸಿ, ಆದಷ್ಟು ಶೀಘ್ರ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಇದರಲ್ಲಿ ಜನರಲ್‌ ವೈದ್ಯಕೀಯ ತಜ್ಞರು ಹಾಗೂ ಅರಿವಳಿಕೆ ತಜ್ಞರು ಮುಂದಾಳತ್ವ ವಹಿಸುತ್ತಾರೆ. ಡಯಾಬೆಟೆಸ್‌ ಇರುವ ರೋಗಿಗೆ ಶಸ್ತ್ರಚಿಕಿತ್ಸೆಯಿಂದುಂಟಾಗಬಹುದಾದ ರಿಸ್ಕ್ ಮತ್ತು ಶಸ್ತ್ರಚಿಕಿತ್ಸೆ ಮಾಡದೇ ಇದ್ದಲ್ಲಿ ಕಾಯಿಲೆ ಉಲ್ಬಣಗೊಂಡು ಆಗಬಹುದಾದ ಅಪಾಯ - ಇವೆರಡನ್ನು ತುಲನೆ ಮಾಡಿ ನಿರ್ಧಾರ ಮಾಡಬೇಕಾಗುತ್ತದೆ. ಎಲ್ಲ ರೀತಿಯ ಶಸ್ತ್ರಚಿಕಿತ್ಸೆಗಳಿಗೂ ಅನ್ವಯವಾಗುವಂತೆ ನಿಯಮಾವಳಿ ರೂಪಿಸುವುದು ಅಸಾಧ್ಯವಾದ್ದರಿಂದ, ರೋಗಿಯ ಕಾಯಿಲೆಗನುಗುಣವಾಗಿ ನಿರ್ಧಾರವನ್ನು ಮಾಡಬೇಕಾಗುತ್ತದೆ. ಅದೇನಿದ್ದರೂ, ಕೊನೆಯ ನಿರ್ಧಾರ ರೋಗಿಯದ್ದು ಎಂಬುದರಲ್ಲಿ ಎರಡು ಮಾತಿಲ್ಲ.