ಖಂಡಕಾವ್ಯ
ಖಂಡಕಾವ್ಯ [೧]ಲಾವಣಿಗಿಂತ ದೊಡ್ಡದು, ಮಹಾಕಾವ್ಯಕಿಂತ ಚಿಕ್ಕದಾದ ಹಾಡ್ಗತೆ. ಇದು ಸೀಮಿತ ಉದ್ದೇಶಕ್ಕೆ ಒಳಗಾದುದು. ಇದರಲ್ಲಿ ಕ್ರಿಯೆ ಪ್ರಧಾನ. ಉಪಮೆ, ಮಹೋಪಮೆ , ಗಾಂಭೀರ್ಯ ಮುಂತಾದ ಕಾವ್ಯಗುಣಗಳಿಂದ ಕೂಡಿದ ಸುದೀರ್ಘ ಕಥನವಾಗಿದ್ದು ಮಹಾಕಾವ್ಯವೊಂದರ ಭಾಗದಂತೆ ಕಾಣಿಸುವ ಕೃತಿರಚನೆಯಾಗಿರುತ್ತದೆ. ಖಂಡಕಾವ್ಯ[೨]ವು ವಸ್ತು ಮಧ್ಯದಿಂದ ಆರಂಭವಾಗುತ್ತದೆ ಅಂತ್ಯವೂ ಅನಿರ್ದಿಷ್ಟವಾಗಿರುತ್ತದೆ. ಡಾ.ಜೀಶಂಪ ಈ ಪ್ರಕಾರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ.
ಇತಿವೃತ್ತ
[ಬದಲಾಯಿಸಿ]- ಖಂಡಕಾವ್ಯ[೩]ದಲ್ಲಿ ಕಥೆಗಾರನ ಉದ್ದೇಶ ಭಿನ್ನವಾಗಿರುತ್ತದೆ. ಇಲ್ಲಿ ಘಟನೆಗಳ ಸರಪಣಿ ಪರಸ್ಪರ ಹೆಣೆದುಕೊಂಡಿರುತ್ತದೆ. ಇದರ ವಸ್ತು ಹೆಚ್ಚಾಗಿ ವಾಸ್ತವಿಕ ಘಟನೆಯನ್ನು ಆಧರಿಸಿರುತ್ತದೆ. ಕಥೆಯ ಆರಂಭ ಸಾಮಾನ್ಯವಾಗಿ ಬೆಳೆ ಬೆಳೆಯುತ್ತಾ ವಿಸ್ತಾರಗೊಂಡು ಹಂತ ಹಂತವಾಗಿ ಉತ್ಕರ್ಷವನ್ನು ಸಾಧಿಸುತ್ತದೆ.
- ಇಂತಹ ಖಂಡಕಾವ್ಯಗಳನ್ನು ಹಾಡುವ ವೃತ್ತಿಗಾಯಕರೆಂದರೆ - ನೀಲಗಾರರು, ತಂಬೂರಿದಾಸರು, ತರಲುಗು ಜಂಗಮರು ಮತ್ತು ಕಂಸಾಳೆಯವರು. ಇವರು ಪ್ರಚಲಿತದಲ್ಲಿರುವ ಉತ್ತರದೇವಿ, ಈರೋಬಿ, ನಾಗವ್ವ, ಚಿಕ್ಕೋಳು ಹಿರಿದಿಮ್ಮವ್ವ, ಹುಳಿಯಾರು ಕೆಂಚಮ್ಮ, ನುಚ್ಚಾಯ್ತು ನೀರ ಹೊಳಿಯಾಗೆ ಮತ್ತು ಕೊಂತ್ಯಮ್ಮ ಹೀಗೆ ಹಲವಾರು ಸಾಧಾರಣ, ಅಸಾಧಾರಣ ವ್ಯಕ್ತಿಗಳನ್ನು ಕುರಿತು ಇಡಿ ರಾತ್ರಿ ಹಾಡುವ ಸಾಮರ್ಥ್ಯ ಹೊಂದಿದ್ದಾರೆ.
- ಮಾದೇಶ್ವರ ಮಹಾಕಾವ್ಯ ಖಂಡಕಾವ್ಯಗಳ ಸರಮಾಲೆ. ವೃತ್ತಿಗಾಯಕರು ಹಾಡುವಾಗ ಕಥೆಗೆ ಜೀವತುಂಬಿ ಸಮರ್ಪಣಾಭಾವದಿಂದ ಹಾಡುತ್ತಾರೆ. ಇಂತಹ ಖಂಡಕಾವ್ಯಗಳು ಪ್ರೀತಿ, ಪ್ರೇಮ, ಬಾಂಧವ್ಯ, ಬಂಧು-ಬಳಗದ ಒಡನಾಟ, ತ್ಯಾಗ, ಶೀಲ, ಆತ್ಮಾರ್ಪಣೆ ಕಾವ್ಯದ ಕ್ಷಾತ್ರ ಗುಣವನ್ನು ಮೆರೆಸುವಂತಹ ಕಥೆಗಳಾಗಿರುತ್ತವೆ.
ಖಂಡಕಾವ್ಯ ಕೊಂತ್ಯಮ್ಮ
[ಬದಲಾಯಿಸಿ]ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಕೊಂತಿ ಪೂಜೆ ಪ್ರಸಿದ್ದವಾಗಿದೆ. ಪ್ರಸಿದ್ದವಾದ ಈ ಕಥೆಯನ್ನು ನೀಲಗಾರರು ಮನಕರಗುವಂತೆ ಹಾಡುತ್ತಾರೆ. ಪ್ರಕೃತ ಕಥೆ ಮಹಾಭಾರತದ ಕಥೆಯೇ ಆಗಿದೆ. ಕುಂತಿ ಎಳೆಯ ಮಕ್ಕಳಾದ ಪಾಂಡವರನ್ನು ಕಟ್ಟಿಕೊಂಡು ಕಾಡುಮೇಡುಗಳನ್ನು, ಊರುಕೇರಿಗಳನ್ನು ಅಲೆದು ಸಂಕಷ್ಟದಲ್ಲಿ ಪರಿತಪಿಸಿದ ಬಡತನದ ದಾರುಣ ಚಿತ್ರಣ ಇಲ್ಲಿದೆ.
ಬಾಳವನೆ ಕಾಲದೊಳಗೆ - ಕೊಂತ್ಯಮ್ಮಗೆ
ಬಾಳ ಬಡಸ್ತನವಯ್ಯ
ಅಮ್ಮ ಉಣ್ಣುವಾಗ ಉಡುವಾಗಲೋ -ಕೊಂತ್ಯಮ್ಮಗೆ
ಊರೆಲ್ಲ ಬಂಧುಬಳಗ
ಅಡುವಾಗ ಇಕ್ಕುವಾಗ - ಕೊಂತ್ಯಮ್ಮಗೆ
ಅಡವ್ಯೆಲ್ಲ ನೆಂಟರಲ್ಲ!
ಅಮ್ಮ ಬಾಳು ತಪ್ಪಿ ಕೆಟ್ಟಕಾಲಕೆ - ಕೊಂತ್ಯಮ್ಮಗೆ
ಅಡವಿಗೆಡವೆಲ್ಲ ಹಗೆಯೋ
ಹಾದಿನೆರಳ್ಹಗೆಯಾಯಿತೋ -ಕೊಂತ್ಯಮ್ಮಗೆ
ಬೀದಿನೆರಳ್ಹಗೆಯಾಯಿತೋ
ಉಣ್ಣೋದಕ್ಕೆ ಅನ್ನವಿಲ್ಲದೆ - ಕೊಂತ್ಯಮ್ಮಗೆ
ಉಡುವುದಕ್ಕೆ ಸೀರೆಯಿಲ್ಲದೆ
ಓಣಿಒಳಗಳ ಬಟ್ಟೆಯ - ಕೊಂತ್ಯಮ್ಮ
ಹಾದಿ ಬೀದಿಯ ಬಟ್ಟೆಯ
ಚಿಂದಿಯನೆತ್ತಿಕೊಂಡು - ಕೊಂತ್ಯಮ್ಮ
ಹರುವ ಜಲಧಿಗೆ ಬಂದು
ಒಗೆದು ಮಡಿಗಳ ಮಾಡಿ - ಕೊಂತ್ಯಮ್ಮ
ಕುಕ್ಕಿ ಮಡಿಗಳ ಮಾಡಿ
ಹೊಲೆವುದಕೆ ಚೂಜಿಲ್ಲಲದೆ -ಕೊಂತ್ಯಮ್ಮ
ಹೊಲಿವುದಕೆ ದಾರಿಲ್ಲದೆ
ಅಪ್ಪ ಸಣಬನೆ ದಾರ - ಕೊಂತ್ಯಮ್ಮ
ಸಣ್ಣಗೆ ಎಡದುಕೊಂಡು
ಹಂಚಿಕಡ್ಡಿಯ ಮುರುದು - ಕೊಂತ್ಯಮ್ಮ
ಚೂಜಿಯ ಮಾಡಿದಳೊ
ಖಂಡಕಾವ್ಯ- ಲಕ್ಷಣಗಳು
[ಬದಲಾಯಿಸಿ]- ಖಂಡಕಾವ್ಯವು ಮಹಾಕಾವ್ಯಕ್ಕೆ ಹೇಳಿರುವ ಲಕ್ಷಣಗಳಲ್ಲಿ ಕೆಲವು ಮಾತ್ರ ಇರುವ ಪದ್ಯಕಾವ್ಯಕ್ಕೆ ಈ ಹೆಸರಿದೆ. ಈಗ ಖಂಡಕಾವ್ಯಗಳೆಂದು ಪರಿಗಣಿತವಾಗಿರುವ ಸಂಸ್ಕೃತಕಾವ್ಯಗಳನ್ನು ಪರಿಶೀಲಿಸಿದರೆ ಅವು ಕೆಲವು ಸನ್ನಿವೇಶ ವಿಶೇಷಗಳಲ್ಲಿ ಕವಿಗುಂಟಾದ ರಸಮಯ ಅನುಭವವನ್ನೋ ಅಥವಾ ಆಗ ಕವಿಯಲ್ಲಿ ತಾನಾಗಿ ಮೂಡಿ ಒಂದು ಭಾವಗಳನ್ನೋ ಪ್ರಕಟಪಡಿಸುವ, ಲಿರಿಕ್ ಪೊಯಮ್ ಎಂದು ಇಂಗ್ಲಿಷಿನಲ್ಲಿ ಸಿದ್ಧವಾಗಿರುವ ಕಾವ್ಯರೂಪಗಳೇ ಆಗಿವೆ ಎಂಬುದು ಸ್ಪಷ್ಟವಾಗುತ್ತದೆ.
- ಈ ಭಾವಗೀತಾತ್ಮಕ ಖಂಡಕಾವ್ಯಗಳಲ್ಲಿ ಭಕ್ತಿಪ್ರಧಾನವಾದ ಶೃಂಗಾರಪ್ರಧಾನವಾದ ಎರಡು ಬಗೆಗಳಿವೆ. ಭಕ್ತಿಪ್ರಧಾನವಾದ ಭಾವಗೀತೆಗಳನ್ನು ಋಗ್ವೇದ, ರಾಮಾಯಣ, ಭಾರತ ಮುಂತಾದುವುಗಳಲ್ಲೂ ಅನಂತರ ಕಾಲದ ಭಗವತ್ ಸ್ತೋತ್ರಗಳಲ್ಲೂ ವಿಶೇಷವಾಗಿ ಕಾಣಬಹುದು. ಶೃಂಗಾರ ಪ್ರಧಾನವಾದುವು ಮುಕ್ತಕಗಳಾಗಿಯೂ ಸರ್ಗಾತ್ಮಕ ವಿದ್ಯಕಾವ್ಯಗಳಾಗಿಯೂ ಹೇರಳವಾಗಿವೆ.
- ಇವುಗಳಲ್ಲಿ ಶೃಂಗಾರಮಯ ಸನ್ನಿವೇಶಗಳೂ ಹಾವಭಾವಗಳ ವರ್ಣನೆಯೂ ಪ್ರಮುಖವಾಗಿದ್ದರೂ ಪ್ರಕೃತಿಸೌಂದರ್ಯ ಚಿತ್ರಣ ಅವುಗಳೊಡನೆ ಹೆಣೆದುಕೊಂಡಿರುತ್ತದೆ. ಈಗ ಉಪಲಬ್ಧವಾಗಿರುವ ಈ ಬಗೆಯ ಕಾವ್ಯಗಳಲ್ಲಿ ಕಾಳಿದಾಸನ ಎರಡು ಸರ್ಗಗಳುಳ್ಳ ಮೇಘದೂತ ಅತ್ಯಂತ ಪ್ರಾಚೀನವಷ್ಟೇ ಅಲ್ಲದೆ ಉತ್ತಮವಾದುದೂ ಹೌದು. ಅದೇ ಕವಿಯ ಋತುಸಂಹಾರ, ಬಿಲ್ಹಣನ ಚೋರಪಂಚಾಶಿಕೆ, ಭರ್ತೃಹರಿಯ ಶೃಂಗಾರ ಶತಕ, ಅಮರು ಕವಿಯ ಅಮರ ಶತಕ, ವೇದಾಂತ ದೇಶಿಕರ ಹಂಸಸಂದೇಶ, ಜಯದೇವನ ಗೀತಗೋವಿಂದ ಇವು ಇತರ ಕೆಲವು ಉಲ್ಲೇಖನೀಯ ಖಂಡಕಾವ್ಯಗಳು.
- ಸಂಸ್ಕೃತದಲ್ಲಿ ಹೇರಳವಾಗಿರುವ ನೀತಿಬೋಧಕ ಕಾವ್ಯಗಳೂ ಖಂಡಕಾವ್ಯಗಳೇ. ಕನ್ನಡದಲ್ಲಿ ಬೇಂದ್ರೆಯವರ ಸಖೀಗೀತವನ್ನೂ ಎಸ್.ವಿ. ಪರಮೇಶ್ವರಭಟ್ಟರ ಇಂದ್ರಚಾಪದಲ್ಲಿನ ಆತ್ಮಕಥಾರೂಪದ ಮೊದಲ 300 ಸಾಂಗತ್ಯಗಳ ಕಂತನ್ನೂ ಖಂಡಕಾವ್ಯಗಳೆನ್ನಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ https://www.google.co.in/?gfe_rd=cr&ei=_8u_VJDtMueW8Qf7k4GQCg&gws_rd=ssl#q=%E0%B2%96%E0%B2%82%E0%B2%A1%E0%B2%95%E0%B2%BE%E0%B2%B5%E0%B3%8D%E0%B2%AF
- ↑ http://www.hingyake.in/2014/10/veeranna-madiwalar-book-release.html
- ↑ http://www.kanaja.in/%E0%B2%95%E0%B3%81%E0%B2%B5%E0%B3%86%E0%B2%82%E0%B2%AA%E0%B3%81-%E0%B2%A6%E0%B2%B0%E0%B3%8D%E0%B2%B6%E0%B2%A8-%E0%B2%AD%E0%B2%BE%E0%B2%97-%E0%B3%A9-%E0%B3%A7%E0%B3%A7-%E0%B2%B8%E0%B3%81%E0%B2%9C/