ವಿಷಯಕ್ಕೆ ಹೋಗು

ಗೋರಂಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋರಂಟಿ
Lawsonia inermis
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Lawsonia
ಪ್ರಜಾತಿ:
L. inermis
Binomial name
ಲಾಸೋನಿಯ ಇನರ್ಮಿಸ್


ಗೋರಂಟಿ ಲಿತ್ರೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಮದರಂಗಿ ಪರ್ಯಾಯನಾಮ. ಇದರ ಶಾಸ್ತ್ರೀಯ ಹೆಸರು ಲಾಸೋನಿಯ ಇನರ್ಮಿಸ್. ಇಂಗ್ಲಿಷಿನಲ್ಲಿ ಇದನ್ನು ಹೆನ ಎಂದು ಕರೆಯಲಾಗುತ್ತದೆ. ಇದು ಉತ್ತರ ಆಫ್ರಿಕ ಹಾಗೂ ನೈರುತ್ಯ ಏಷ್ಯದ ಮೂಲವಾಸಿ. ಇದನ್ನು ಅಲಂಕಾರಕ್ಕಾಗಿಯೂ ಇದರಿಂದ ಪಡೆಯಲಾಗುವ ಬಣ್ಣಕ್ಕಾಗಿಯೂ ಬೆಳೆಸಲಾಗುತ್ತದೆ.ಹೆಣ್ಣು ಮಕ್ಕಳು ಇದರ ಎಲೆಗಳನ್ನು ನೀರಿನಲ್ಲಿ ಅರೆದು ಕೈ ಕಾಲುಗಳಿಗೆ ಚಿತ್ರಾಕಾರವಾಗಿ ಹಚ್ಚುವರು. ತೊಳೆದ ಮೇಲೆ ಕೆಂಪು ರಂಗೇರಿ ಹೆಚ್ಚು ಸೌಂದರ್ಯವನ್ನು ಕೊಡುವುದು, ಹಿರಿಯರು ತಲೆ ಮತ್ತು ಗಡ್ಡಗಳಿಗೆ ಹಚ್ಚಿ ಬಿಳಿಕೂದಲು ಕೆಂಪಾಗುವಂತೆ ಮಾಡುತ್ತಾರೆ. ಮದುವೆಗಳಲ್ಲಿ ಹೆಣ್ಣಿಗೆ ಮೆಹಂದಿ ಹಚ್ಚುವ ಸಂಪ್ರದಾಯವಿದೆ.

ಸಸ್ಯ ಲಕ್ಷಣಗಳು

[ಬದಲಾಯಿಸಿ]

ಗೋರಂಟಿ ವಿಪುಲವಾಗಿ ಕವಲೊಡೆದು ಬೆಳೆಯುವ ಒಂದು ಪೊದೆಸಸ್ಯ. ಬೂದು ಕಂದು ಮಿಶ್ರಿತ ಬಣ್ಣದ ತೊಗಟೆ, ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ ಸರಳ, ಅಖಂಡ ಹಾಗೂ ಅಂಡಾಕಾರದ ಎಲೆಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು. ಹೂಗಳು ಚಿಕ್ಕ ಗಾತ್ರದವು ಮತ್ತು ಬಿಳಿ ಇಲ್ಲವೆ ಗುಲಾಬಿ ಬಣ್ಣದವು; ಸಂಕೀರ್ಣ ಮಾದರಿಯ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವಕ್ಕೆ ಸುವಾಸನೆಯಿದೆ. ಫಲ ಸಂಪುಟ ಮಾದರಿಯದು. ಹಣ್ಣಿನೊಳಗೆ ನಯವಾದ ಅಸಂಖ್ಯಾತ ಬೀಜಗಳಿವೆ.

ಬೇಸಾಯ

[ಬದಲಾಯಿಸಿ]

ಗೋರಂಟಿ ಗಿಡವನ್ನು ಉಷ್ಣ ಹಾಗೂ ಸಮಶೀತೋಷ್ಣ ವಲಯಗಳ ಅನೇಕ ಪ್ರದೇಶಗಳಲ್ಲಿ ಬೆಳೆಸುತ್ತಾರೆ. ಭಾರತ, ಈಜಿಪ್ಟ್‌, ಪರ್ಷಿಯ, ಪಾಕಿಸ್ತಾನ, ಸೂಡಾನ್, ಮಡಗಾಸ್ಕರ್ಗಳಲ್ಲಿ ಇದರ ಎಲೆಗಳಿಂದ ದೊರೆಯುವ ಬಣ್ಣಕ್ಕಾಗಿ ಗೋರಂಟಿ ಗಿಡವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಭಾರತದಲ್ಲಿ ಬಣ್ಣಕ್ಕಾಗಿ ಬೆಳೆಸುವ ಪ್ರದೇಶಗಳಲ್ಲಿ ಮುಖ್ಯವಾದವು ಪಂಜಾಬ್,ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ತಾನಗಳು. ಅದರಲ್ಲೂ ಪಂಜಾಬಿನ ಫರೀದಾಬಾದ್ ಮತ್ತು ಗುಜರಾತಿನ ಬಾರ್ದೋಲಿ ಹಾಗೂ ಮಾಧಿಗಳು ಗೋರಂಟಿ ಉತ್ಪಾದನೆಯ ಮುಖ್ಯ ಕೇಂದ್ರಗಳಾಗಿವೆ.

ಗೋರಂಟಿ ಗಿಡ ಯಾವ ರೀತಿಯ ಮಣ್ಣಿನಲ್ಲಾದರೂ ಬೆಳೆಯಬಲ್ಲದು. ಆದರೆ ನೆಲ ಜವುಗಾಗಿರಬಾರದು. ಗೋರಂಟಿಯನ್ನು ಬೀಜಗಳಿಂದ ಅಥವಾ ಕಾಂಡತುಂಡು ಗಳಿಂದ ವೃದ್ಧಿಸಬಹುದು. ಗೋರಂಟಿಯ ಎಲೆಗಳನ್ನು ವರ್ಷಕ್ಕೆ ಎರಡು ಸಲ (ಏಪ್ರಿಲ್-ಮೇ ಮತ್ತು ಅಕ್ಟೋಬರ್-ನವೆಂಬರ್) ಕಟಾಯಿಸುತ್ತಾರೆ. ಒಂದು ಎಕರೆಗೆ ಸುಮಾರು ೩೫೦-೭೫೦ ಕಿಗ್ರಾಂ ಒಣ ಎಲೆಗಳನ್ನು ಪಡೆಯಬಹುದು. ನೀರಾವರಿ ಭೂಮಿಯಲ್ಲಿ ಇಳುವರಿ ೯೨೦ ಕಿಗ್ರಾಂನಷ್ಟು ಹೆಚ್ಚಾಗಿರಬಹುದು.

ಉಪಯೋಗಗಳು

[ಬದಲಾಯಿಸಿ]
Video of Henna being applied
Elderly Punjabi woman whose hair is dyed with henna.

ಗೋರಂಟಿಯ ಎಲೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಭಾರತ ಮತ್ತು ಮಧ್ಯಪ್ರಾಚ್ಯಗಳಲ್ಲಿ ಅಂಗೈ, ಅಂಗಾಲು ಹಾಗೂ ಕೈ ಬೆರಳಿನ ಉಗುರುಗಳಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ. ತಲೆಗೂದಲು, ಗಡ್ಡ, ಹುಬ್ಬು, ಕುದುರೆಗಳ ಬಾಲ, ಅಯಾಲು, ಚರ್ಮ ಮುಂತಾದವುಗಳಿಗೆ ಬಣ್ಣ ಕೊಡುವುದಕ್ಕೆ ಸಹ ಇದನ್ನು ಬಳಸುವುದುಂಟು. ಹಿಂದಿನ ಕಾಲದಲ್ಲಿ ರೇಷ್ಮೆ ಹಾಗೂ ಉಣ್ಣೆ ಬಟ್ಟೆಗಳಿಗೆ ಬಣ್ಣ ಕೊಡಲು ಗೋರಂಟಿಯನ್ನು ಬಳಸುತ್ತಿದ್ದರು.

ಮೆಹೆಂದಿ

[ಬದಲಾಯಿಸಿ]
Latest Mehndi Design

ಮದರಂಗಿ(ಮೆಹೆಂದಿ): ಮದುವೆಯ ಸಂದರ್ಭದಲ್ಲಿ ಮದುಮಗ ಅಥವಾ ಮದುಮಗಳಿಗೆ ಕೈಗೆ ಹಚ್ಚುವ ಪ್ರಾಕೃತಿಕ ಬಣ್ಣ.[] ಎಂದರೆ ಇದೊಂದು ಎಲ್ಲರಿಗೂ ಇಷ್ಟವಾಗುವ ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ.[]

ಮದರಂಗಿ ತಯಾರಿಕೆ

[ಬದಲಾಯಿಸಿ]

ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ವಿಜ್ಞಾನ ಮುಂದುವರಿದ ಹಾಗೆ ಜನರು ಮದರಂಗಿಯನ್ನು ಬೇರೆ ವಿಧಾನದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಲು ದಾರಿಯನ್ನು ಕಂಡುಕೊಂಡಿದ್ದಾರೆ. ಹೇಗೆಂದರೆ,ಮದರಂಗಿ ಸೊಪ್ಪನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿ ಹಚ್ಚುವ ವಿಧಾನವನ್ನು ಬಳಸಿದ್ದಾರೆ. ಹೀಗೆ ಮದರಂಗಿಯಲ್ಲಿ ಚಿತ್ರಗಳನ್ನು ಬಿಡಿಸಿಕೊಳ್ಳುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಸಣ್ಣ ಸಣ್ಣ ಚಿತ್ರಗಳನ್ನು ಬರೆದು ಅದಕ್ಕೆ ಡಿಸೈನ್ ಎಂದು ಹೆಸರಿಸಿಕೊಂಡಿದ್ದಾರೆ. ಮದರಂಗಿಯ ಡಿಸೈನ್ ಗಳಿಗೆ ಕೆಲವು ಉದಹರಣೆ ಎಂದರೆ, ಇಂಡಿಯನ್ ಡಿಸೈನ್, ಅರೇಬಿಕ್ ಡಿಸೈನ್, ಶೈಲಿ ಅರೇಬಿಕ್ ಡಿಸೈನ್ ಇತ್ಯಾದಿ... ಈ ರೀತಿಯ ಡಿಸೈನ್ ಗಳ ಕೆಲವು ಚಿತ್ರಗಳನ್ನು ನಾವು ಕಾಣಬಹುದಾಗಿದೆ.[]

ಮದರಂಗಿ ಬ‍ಣ್ಣದ ಗುಟ್ಟು

[ಬದಲಾಯಿಸಿ]

ಹಚ್ಚಿದ ಮದರಂಗಿಯನ್ನು ತುಂಬಾ ರಂಗಾಗಿಸಲು ಹಲವು ವಿಧಾನಗಳಿವೆ.

  1. ಒಂದು ವಿಧಾನ : ಸ್ವಲ್ಪ ಏಲಕ್ಕಿಯನ್ನು ಹುರಿದು ಅದರ ಶಾಖ ಕೊಡಬೇಕು.
  2. ಎರಡನೇ ವಿಧಾನ : ನಿಂಬೆ ಹಣ್ಣಿನ ರಸವನ್ನು ಹಚ್ಚಬೇಕು.
  3. ಮೂರನೇ ವಿಧಾನ : ಸ್ವಲ್ಪ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ, ಆ ನೀರನ್ನು ಹಚ್ಚಬೇಕು.

ಔಷಧೀಯ ಗುಣ

[ಬದಲಾಯಿಸಿ]

ಗೋರಂಟಿ ಎಲೆಗಳಿಗೆ ಔಷಧೀಯ ಗುಣಗಳಿವೆ. ಕಷಾಯದ ರೂಪದಲ್ಲಿ ಇಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು, ತರಚು ಹಾಗೂ ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ. ಕಷಾಯ ಗಂಟಲುನೋವಿಗೆ ಒಳ್ಳೆಯ ಮದ್ದು. ಗೋರಂಟಿಯ ಹೂವನ್ನು ಆವಿ ಅಸವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ಚಂಚಲ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ, ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ.ಗೋರಂಟಿಯನ್ನು ವಾಣಿಜ್ಯ ದೃಷ್ಟಿಯಿಂದ ದೆಹಲಿ, ಗುಜರಾತ್ ಮತ್ತು ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೆಹಲಿ ಗೋರಂಟಿ ಅತ್ಯುತ್ತಮವಾದ್ದು.

ಸರಳ ಚಿಕಿತ್ಸೆಗಳು

[ಬದಲಾಯಿಸಿ]

ಅಂಗೈ ಅಂಗಾಲು ಉರಿ

[ಬದಲಾಯಿಸಿ]

ಹಸಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆಹುಳಿ ಸೇರಿಸಿ ಚೆನ್ನಾಗಿ ಮಸೆದು ಅಂಗೈ ಅಂಗಾಲುಗಳಿಗೆ ಲೇಪಿಸುವುದು.

ತಲೆಯಲ್ಲಿ ಹೇನು ಮತ್ತು ಸೀರು ನಿವಾರಣೆಗೆ

[ಬದಲಾಯಿಸಿ]

ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು ೨ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. (ಅಥವಾ) ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು.

ಬಿಳಿ ಕೂದಲು ಕಪ್ಪಾಗಲು (ಬಾಲನೆರೆ)

[ಬದಲಾಯಿಸಿ]

ಒಂದು ಹಿಡಿ ಹಸೀ ಗೋರಂಟಿ ಕಾಯಿಗಳನ್ನು ನುಣ್ಣಗೆ ಅರೆದು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಚತುರಾಂಷ ಕಷಾಯ ಮಾಡುವುದು. ಚೆನ್ನಾಗಿ ಪಕ್ವವಾಗಿರುವ ೨೫ ಗ್ರಾಂ ನೀಲಿ ದ್ರಾಕ್ಷಿಯನ್ನು ತಂದು ಬೀಜಗಳನ್ನು ಬೇರ್ಪಡಿಸಿ ನುಣ್ಣಗೆ ರುಬ್ಬಿ ಮೇಲಿನ ಕಷಾಯಕ್ಕೆ ಸೇರಿಸುವುದು. ನಂತರ ಒಂದು ಬಟ್ಟಲು ಈ ಕಷಾಯಕ್ಕೆ ಕಾದಾರಿದ ನೀರು ಸ್ವಲ್ಪ ಸೇರಿಸಿ ಕೂದಲಿಗೆ ಹಚ್ಚುವುದು. ಬೆಳಿಗ್ಗೆ ಸೀಗೆಕಾಯಿ ಹಾಕಿ ಬಿಸಿ ನೀರಿನ ಸ್ನಾನ ಮಾಡುವುದು. ಹೀಗೆ ಮೂರು ನಾಲ್ಕು ತಿಂಗಳ ಉಪಚಾರದಿಂದ ಸಫಲತೆ ದೊರೆಯುವುದು.

ಕಾಮಾಲೆಯಲ್ಲಿ

[ಬದಲಾಯಿಸಿ]

ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ರಾತ್ರಿ ನೆನೆ ಹಾಕುವುದು, ಬೆಳಿಗ್ಗೆ ಈ ನೀರನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ವೇಳೆ ೭ ದಿನಗಳು ಕುಡಿಯುವುದು.

ಮೂಲವ್ಯಾಧಿಯಲ್ಲಿ

[ಬದಲಾಯಿಸಿ]

ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ತೆಳು ಬಟ್ಟೆಯಲ್ಲಿ ಸೋಸಿ ರಸ ತೆಗೆಯಿರಿ, ಅರ್ಧ ಟೀ ಚಮಚ ರಸಕ್ಕೆ ಎರಡು ಚಿಟಿಕೆ ಸುಟ್ಟಬಿಗಾರದ ಪುಡಿ ಸೇರಿಸಿ ಬೆಳಿಗ್ಗೆ ಒಂದೇ ವೇಳೆ ಸೇವಿಸುವುದು.

ತಲೆ ಸುತ್ತು

[ಬದಲಾಯಿಸಿ]

ಎರಡು ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಒಂದು ಟೀ ಚಮಚ ಶುದ್ಧ ಜೇನಿನಲ್ಲಿ ಮಿಶ್ರ ಮಾಡಿ ಸೇವಿಸುವುದು.

ಹಲ್ಲು ನೋವು ಮತ್ತು ಹುಳುಕು ಹಲ್ಲಿನಲ್ಲಿ

[ಬದಲಾಯಿಸಿ]

ಹಸಿ ಗೋರಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಡುವುದು, ರಸವನ್ನು ಆಗಾಗ್ಗೆ ಉಗುಳುತ್ತಿರುವುದು.

ಬೆವರು ಸೆಲೆ

[ಬದಲಾಯಿಸಿ]

ಒಂದು ಹಿಡಿ ಹಸಿ ಗೋರಂಟಿ ಎಲೆಗಳನ್ನು ತಂದು ಚೆನ್ನಾಗಿ ಕುಟ್ಟಿ ಶುಭ್ರವಾದ ಬಟ್ಟೆಯಲ್ಲಿ ಸೋಸಿ ಚೆನ್ನಾಗಿ ರಸ ತೆಗೆಯುವುದು, ಈ ರಸವನ್ನು ಬೆವರು ಸೆಲೆಗೆ ಹಚ್ಚುವುದು.

ಗಜಕರ್ಣ, ಹುಳುಕಡ್ಡಿ ಮತ್ತು ದದ್ದುಗಳಿಗೆ

[ಬದಲಾಯಿಸಿ]

ಮೊದಲು ಗಾಯ ಇರುವು ಕಡೆ ಒರಟು ಬಟ್ಟೆಯಿಂದ ಸ್ವಲ್ಪ ಉಜ್ಜುವುದು. ೨೦ಗ್ರಾಂ ಗೋರಂಟಿ ಬೀಜಗಳನ್ನು ಗಟ್ಟಿ ಮೊಸರಿನಲ್ಲಿ 3ದಿನ ನೆನೆಹಾಕುವುದು, ಮೂರು ದಿನಗಳ ನಂತರ ಈ ಬೀಜಗಳನ್ನು ಚೆನ್ನಾಗಿ ರುಬ್ಬಿ ಲೇಪಿಸುವುದು. ೨ಗ್ರಾಂ ಬೀಜಗಳ ಚೂರ್ಣವನ್ನು ಕಾದಾರಿದ ನೀರಿನಲ್ಲಿ ಹೊಟ್ಟೆಗೆ ಕೊಡುವುದು.

ಬಿಳಿ ತೊನ್ನು ಮತ್ತಿತರ ಚರ್ಮ ವ್ಯಾಧಿಗಳಿಗೆ

[ಬದಲಾಯಿಸಿ]

ಈ ಮೂಲಿಕೆಯಲ್ಲಿ ರಕ್ತ ಶುದ್ದಿ ಮಾಡುವ ಗುಣವಿದೆ, ೧೦ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ, ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹೊರಗೆ ಲೇಪಿಸುವುದು, ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ (ಒಂದು ಬಟ್ಟಲು) ಕದಡಿ ಸೇವಿಸುವುದು.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://dailytimes.com.pk/life-and-style/30-Apr-16/from-mehndi-to-marriage-vows-bipasha-and-karan-singh-grovers-wedding-celebrations-in-full-swing
  2. "ಆರ್ಕೈವ್ ನಕಲು". Archived from the original on 2018-01-21. Retrieved 2018-06-06.
  3. "ಆರ್ಕೈವ್ ನಕಲು". Archived from the original on 2018-04-26. Retrieved 2018-06-06.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೋರಂಟಿ&oldid=1215966" ಇಂದ ಪಡೆಯಲ್ಪಟ್ಟಿದೆ