ಬ್ಯಾಂಕು ಸಾಲ ವ್ಯವಹಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ಯಾಂಕಿನ ವ್ಯವಹಾರಗಳಲ್ಲಿ ಸಾಲ ನೀಡಿಕೆ ಮಹತ್ವದ ಕಾರ್ಯವಾಗಿದೆ. ಉತ್ಪಾದನಾ ಚಟುವಟಿಕೆಗಳನ್ನು ಗಮನಿಸಿ ಬ್ಯಾಂಕ್‍ಗಳು ಸಾಧಾರಣವಾಗಿ ಸಾಲ ನೀಡುತ್ತವೆ. ಸಾಲಗಾರನು ಸಾಲದ ನೆರವಿನಿಂದ ಸರಕು-ಸೇವೆಗಳನ್ನು ಉತ್ಪಾದಿಸಿ, ಮಾರಾಟಮಾಡಿ, ಲಾಭಗಳಿಕೆಯಿಂದ ಬಡ್ಡಿ ಸಮೇತ ಸಾಲವನ್ನು ಮರುಪಾವತಿ ಮಾಡುತ್ತಾನೆ. ಕೈಗಾರಿಕಾ ವಾಣಿಜ್ಯ ಕ್ಷೇತ್ರಗಳಂತೆ, ಸಾಮಾಜಿಕ-ಧಾರ್ಮಿಕ ಕಾರ್ಯಗಳು, ಉತ್ಪಾದನಾಂಗಗಳೂ ಲಾಭದಾಯಕ ಸಂಸ್ಥೆಗಳೂ ಆಗಿರುವುದಿಲ್ಲ. ಆದ್ದರಿಂದ ಅನುತ್ಪಾದಕ ಕಾರ್ಯಗಳಿಗೆ ಏಕಾಏಕಿ ಸಾಲವನ್ನು ಬ್ಯಾಂಕುಗಳು ನೀಡಲಾರವು.

ಸಾಲ ನೀಡಿಕೆಯಲ್ಲಿ ಉತ್ಪಾದಕ-ಮಾರಾಟಗಾರ ನಷ್ಟಕ್ಕೆ ಒಳಗಾದರೆ, ಬ್ಯಾಂಕು ಆ ಮೂಲಕ ನಷ್ಟಕ್ಕೆ ಒಳಗಾಗಲು ಇಚ್ಛಿಸುವುದಿಲ್ಲ; ಆದ ಕಾರಣ, ಸಾಲಗಾರನ ವಸ್ತು, ಆಸ್ತಿಗಳನ್ನು ಆಧಾರವಾಗಿ ಪಡೆದಿರುತ್ತವೆ. ಸಾಲಗಾರರು ವಸ್ತುಗಳನ್ನು ಆಧಾರವಾಗಿಟ್ಟ ಮಾತ್ರಕ್ಕೆ ಬ್ಯಾಂಕು ಸಾಲನೀಡಲೇಬೇಕೆಂಬ ನಿಯಮವಿಲ್ಲ. ಸಟ್ಟಾ, ಕಳ್ಳಪೇಟೆ, ಇತರೇ ಕಾನೂನು ಬಾಹಿರ ವ್ಯವಹಾರಗಳಿಗೆ ಬ್ಯಾಂಕು ಸಾಲ ನೀಡುವುದಿಲ್ಲ. ಬ್ಯಾಂಕು ಸಾಲ ನೀಡುವಾಗ, ಸಾಲಕ್ಕೆ ಇಡುವ ಭದ್ರತೆಯನ್ನು ಕುರಿತು ವಿಚಾರ ಮಾಡುವಂತೆಯೇ ಮರುಪಾವತಿ ಮಾಡುವ ವಿಧಾನವನ್ನೂ ಪರಿಶೀಲಿಸುತ್ತದೆ.

ಬ್ಯಾಂಕುಗಳು ಸಾಲಗಳನ್ನು ಸಾಮಾನ್ಯವಾಗಿ ಹುಂಡಿ, ಷೇರುಪತ್ರ, ಚರ-ಸ್ಥಿರಾಸ್ತಿ, ವಿಮಾಪಾಲಿಸಿ ಮೊದಲಾದವುಗಳ ದಾಖಲೆಗಳ ಆಧಾರದ ಮೇಲೆ ನೀಡುತ್ತವೆ. (ಬ್ಯಾಂಕು ಸಾಲ ನೀಡುವ ಮೊದಲು ಕೋರಿಕೆಯನ್ನು ಪರಿಶೀಲಿಸುತ್ತದೆ.

  • ೧ ಅನಂತರ ಅದಕ್ಕೆ ಉತ್ತರವನ್ನು ಬರೆಯುತ್ತದೆ.
  • ೨) ಕೆಲವು ವೇಳೆ ಕಬ್ಬಿಣ, ಸಿಮೆಂಟ್, ಮರಮುಟ್ಟು, ಮೌಲಿಕ ವಸ್ತು, ಬೆಳೆ ಮೊದಲಾದವುಗಳ ಆಧಾರದ ಮೇಲೂ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಈ ಬಗೆಯ ಸಾಲವನ್ನು (ಹೈಪಾಥಿಕೇಟೆಡ್ ಲೋನ್) ‘ತೋರಾಧಾರ ಸಾಲ’ ಎನ್ನುತ್ತಾರೆ. ಬ್ಯಾಂಕ್ ವ್ಯವಹಾರದಲ್ಲಿ ಸರಕಿನ ಅಥವಾ ಸ್ವತ್ತಿನ ಮೇಲೆ ಸಾಲಿಗನಿಗೆ ಸಾಲಗಾರ ನೀಡುವ ಹಕ್ಕಿನ ಒಪ್ಪಂದದಲ್ಲಿ ಅರ್ಥಾತ್, ‘ತೋರಾಧಾರ ಸಾಲ’ ನೀಡಿದಾಗ ಸರಕು ಸಾಲಿಗನ ವಶದಲ್ಲಿಡುವುದಿಲ್ಲ. ಅದರ ಮೇಲೆ ಬ್ಯಾಂಕರನಿಗೆ ‘ಧರಣಾಧಿಕಾರ’ (ಲೀನ್) ವಿರುತ್ತದೆ. ಈ ಧರಣಾಧಿಕಾರ ‘ಕಬ್ಜಾಧರಣಾಧಿಕಾರ’ ಕ್ಕಿಂತ (ಪೊಸೆಸರಿ) ಭಿನ್ನವಾದುದು.

ಮತ್ತೆ ಕೆಲವು ಸಂದರ್ಭಗಳಲ್ಲಿ ಬ್ಯಾಂಕುಗಳು ವಸ್ತು, ವಾಹನಗಳನ್ನು ಕೊಳ್ಳಲು, ಬೆಳೆಗಳನ್ನು ಬೆಳೆಯಲು ‘ಮುಂಗಡ ಸಾಲ’ ನೀಡುತ್ತವೆ. ಸರ್ಕಾರ, ಸಂಸ್ಥೆ, ವ್ಯಕ್ತಿಗಳು ಹೊಣೆಗಾರಿಕೆ ಹೊತ್ತು ಕೊಂಡಾಗಲೂ ಬ್ಯಾಂಕುಗಳು ಸಾಲವನ್ನು ನೀಡುತ್ತವೆ. ಇದನ್ನು ‘ಹೊಣೆಗಾರಿಕೆ ಸಾಲ’ ಎನ್ನುತ್ತಾರೆ. ಪಡೆದ ಸಾಲವನ್ನು ಸಕಾಲದಲ್ಲಿ ತೀರಿಸದಿದ್ದಾಗ ಅಂಥವರಿಗೆ ಬ್ಯಾಂಕ್ ಅಂತಿಮ ಎಚ್ಚರಿಕೆ ನೀಡುತ್ತದೆ.

  • ೩. ಬ್ಯಾಂಕುಗಳು ಸಾಲಗಾರನಿಗಲ್ಲದೆ ಬೇರಾರಿಗೂ ಅವನ ವಹಿವಾಟಿಗೆ ಸಂಬಂಧಿಸಿದ ವಿವರಗಳನ್ನೂ ಸಾಲದ ಮಾಹಿತಿಯನ್ನೂ ಠೇವಣಿಯ ವಿವರಗಳನ್ನೂ ಬಹಿರಂಗಗೊಳಿಸುವುದಿಲ್ಲ. ನಗದು ಉದರಿ ಸೌಲಭ್ಯವೂ (Cash credit Fecility) ಒಂದು ಬಗೆಯ ತಾತ್ಕಾಲಿಕ ಸಾಲವೆನ್ನಬಹುದು. “ಒಬ್ಬ ಗ್ರಾಹಕ ತನ್ನ ಬ್ಯಾಂಕ್ ಖಾತೆಯಲ್ಲಿ ಶಿಲ್ಕು ಇಲ್ಲದಿದ್ದರೂ ಹಣವನ್ನು ಮೀರೆಳೆಯಲು ಒಂದು ಪೂರ್ವ ನಿರ್ಧಾರಿತ ಮಿತಿಯನ್ನು ಮಂಜೂರು ಮಾಡಿ ಖಾತೆದಾರನು ಅದನ್ನೂ ಬಳಸಿಕೊಳ್ಳಲು ಬ್ಯಾಂಕ್ ಅವಕಾಶ ಮಾಡಿಕೊಡುತ್ತದೆ.ಋಣಿಗ್ರಾಹಕ ಈ ನಿರ್ಧಾರಿತ ಮೊತ್ತವನ್ನು ಅಗತ್ಯ ಬಿದ್ದಾಗಲೆಲ್ಲ ಚೆಕ್ಕುಗಳ ಮೂಲಕ ಪಡೆಯಬಹುದು. ವಾಸ್ತವವಾಗಿ ಬಳಸಿಕೊಂಡ ಮೊಬಲಗಿನ ಮೊತ್ತಕ್ಕೆ ಮಾತ್ರ ನಿರ್ದಿಷ್ಟ ಬಡ್ಡಿಯನ್ನು ತೆರಬೇಕಾಗುವುದು
  • ೪ ‘ತೋರಾಧಾರದ ಮೇಲೂ ಜಾಮೀನಿನ ಮೇಲೂ ಸಾಮಾನ್ಯವಾಗಿ ಈ ಬಗೆಯ ನಗದಿ ಉದರಿ ಸೌಲಭ್ಯ ನೀಡಲಾಗುತ್ತದೆ
  • ೫.ಬ್ಯಾಂಕಿನಲ್ಲಿ ಸಾಲ ಪಡೆದಾಗ ಅಥವಾ ನಿರ್ದಿಷ್ಟಾವಧಿ ಠೇವಣಿ ಯೋಜನೆಗೆ ಹಣವನ್ನು ನಿಯತವಾಗಿ ಕಂತುಗಳಲ್ಲಿ ಕಟ್ಟಬೇಕಾದಾಗ ಅಥವಾ ಪ್ರತಿತಿಂಗಳೂ ಇಲ್ಲವೇ ಗೊತ್ತಾದ ಅವಧಿಯಲ್ಲಿ ಶುಲ್ಕ, ಚಂದಾ ಹಣ ಮುಂತಾದವನ್ನು ಕಟ್ಟಬೇಕಾದಾಗ ಗ್ರಾಹಕ, ತನ್ನ ಖಾತೆಯಿಂದ ಆಯಾ ಬಾಬ್ತುಗಳಿಗೆ ಹಣಸಂದಾಯ ಮಾಡಲು ಸ್ಥಾಯೀ ಸೂಚನೆಗಳನ್ನೂ, ಅವುಗಳಿಗೆ ಸಂಬಂಧಿಸಿದ ವಿವರಗಳನ್ನೂ ನೀಡಿ ‘ಕೋರಿಕೆ ಪತ್ರ’ ಸಲ್ಲಿಸುತ್ತಾನೆ.
  • ೬. ಬ್ಯಾಂಕು ಆ ಬಗೆಯ ಕಾರ್ಯವನ್ನು ಗ್ರಾಹಕನ ಪರವಾಗಿ ನಿರ್ವಹಿಸುತ್ತದೆ. ಈ ಬಗೆಯ ಸೇವೆಗೆ ಗ್ರಾಹಕನು ಬ್ಯಾಂಕಿಗೆ ನಿರ್ದಿಷ್ಟ ಮೊತ್ತದ ‘ಸೇವಾಶುಲ್ಕ’ ವನ್ನು ನೀಡಬೇಕಾಗುತ್ತದೆ.

ಗ್ರಾಹಕರು ಬಡ್ಡಿಗಳಿಕೆಗಾಗಿ ಗೊತ್ತಾದ ಹಣವನ್ನು ನಿರ್ದಿಷ್ಟಾವಧಿವರೆಗೆ ಬ್ಯಾಂಕಿನಲ್ಲಿ ಇಟ್ಟಿರುತ್ತಾರೆ. ಜೊತೆಗೆ ಅನೇಕ ನಿರ್ದಿಷ್ಟಾವಧಿ ಯೋಜನೆಯ ಠೇವಣಿಗಳನ್ನು ಪ್ರಾರಂಭಿಸುತ್ತಾರೆ. ಇಂಥ ಠೇವಣಿಗಳಿಗೆ ಕಂತುಗಳ ಮೂಲಕ ಹಣಕಟ್ಟುತ್ತಾರೆ. ಇದಕ್ಕೆ ಕಾಲಕಾಲಕ್ಕೆ ಬ್ಯಾಂಕ್ ನೀಡುವ ಬಡ್ಡಿಯೂ ಸಹ ಸೇರ್ಪಡೆಯಾಗುತ್ತಾ ಇರುತ್ತದೆ. ಗ್ರಾಹಕರ ಇಂಥ ಠೇವಣಿಗಳ ಮೇಲೆ ೭೫%ಕ್ಕೆ ಮೀರದಂತೆ ಬ್ಯಾಂಕುಗಳ ಸಾಲ ನೀಡುತ್ತವೆ. ಇಂತಹ ಸಾಲಗಳಿಗೆ ಬ್ಯಾಂಕ್ ನೀಡುವ ಬಡ್ಡಿಗಿಂತ ಸಾಮಾನ್ಯವಾಗಿ ೨% ಹೆಚ್ಚಿಗೆ ಬಡ್ಡಿ ವಿಧಿಸುತ್ತವೆ. ಬ್ಯಾಂಕ್ ನೀಡುವ ಇತರ ಸಾಲಗಳ ಮೇಲಿನ ಬಡ್ಡಿ ದರಕ್ಕಿಂತ ಇದರ ದರ ಕಡಿಮೆಯಿರುತ್ತದೆ. ಇಂಥ ಸಾಲಗಳನ್ನು ‘ಠೇವಣಿಗಳ ಮೇಲೆ ಸಾಲ’ ಎನ್ನುತ್ತಾರೆ.

ಬ್ಯಾಂಕು ಪತ್ರಗಳ ಸ್ವರೂಪ[ಬದಲಾಯಿಸಿ]

ಜನರಲ್ಲಿ ನಿಕಟ ಬಾಂಧವ್ಯ ಹೊಂದಿ ನಿರಂತರವಾಗಿ ವ್ಯವಹರಿಸುವ ಸಂಸ್ಥೆಯೆಂದರೆ ಬ್ಯಾಂಕು, ಆದ ಕಾರಣ ಜನರ ದೈನಂದಿನ ವ್ಯವಹಾರದಲ್ಲಿ, ಸಾರ್ವಜನಿಕ ಜೀವನದಲ್ಲಿ, ಗ್ರಾಹಕರೊಡನೆ ನಡೆಸುವ ವಹಿವಾಟಿನಲ್ಲಿ ಮುಖತಃ ಹಾಗು ಲಿಖಿತದಲ್ಲಿ ವೈವಿಧ್ಯಮಯವಾಗಿ ವ್ಯವಹರಿಸುತ್ತದೆ. ವಿಚಾರ ವಿನಿಮಯವನ್ನು ಮೂಖತ: ನಡೆಸಿದರೂ ಬ್ಯಾಂಕುಗಳು ತಮ್ಮ ವ್ಯವಹಾರವನ್ನು ಜನರೊಂದಿಗೆ ಬರೆಹ ರೂಪದಲ್ಲೇ ನಡೆಸುತ್ತವೆ ಎನ್ನಬಹುದು. ನಿಯಮಾನುಸಾರ ವ್ಯವಹಾರ ನಡೆಸುವುದರಿಂದಲೂ ನಾನಾ ರೀತಿಯ ವಹಿವಾಟುಗಳು ನಡೆಯುವುದರಿಂದಲೂ ಬ್ಯಾಂಕ್ ಸೇವಾಸಂಸ್ಥೆಯಾಗಿರುವುದರಿಂದಲೂ ಅದು ಇತರರೊಡನೆ ವ್ಯವಹರಿಸುವಾಗ ನಡೆಸುವ ಪತ್ರ ವ್ಯವಹಾರವು ಪ್ರಾಮಾಣಿಕವೂ ಖಚಿತವೂ ಪರಿಪೂರ್ಣವೂ ಆಗಿರಬೇಕು.

ಬ್ಯಾಂಕಿನ ಪತ್ರ ವ್ಯವಹಾರವೆಂದರೆ ಗ್ರಾಹಕ-ಬ್ಯಾಂಕಿನ ನಡುವಣ ನಿಯಮಬದ್ಧ, ಸೌಜನ್ಯಯುತ ಹಾಗೂ ಅರ್ಥ ಪೂರ್ಣವಾದ ವ್ಯವಹಾರಕ್ಕೆ ಸಾಧನವಾದ, ಲಿಖಿತ ಸಂವಾದದ ಪತ್ರಗಳು ಎನ್ನಬಹುದು. ಬ್ಯಾಂಕಿನ ಎಲ್ಲ ವ್ಯವಹಾರ ರಂಗಗಳಲ್ಲಿಯೂ ಪತ್ರ ವ್ಯವಹಾರ ಅನಿವಾರ್ಯವಾಗಿದೆ. ವಾಣಿಜ್ಯ ಬ್ಯಾಂಕುಗಳ ವ್ಯವಹಾರದಲ್ಲಂತೂ ಪತ್ರ ವ್ಯವಹಾರ ನಿತ್ಯ ವಿದ್ಯಮಾನಗಳ ಕೊಂಡಿ ಆಗಿದೆ.

ಬ್ಯಾಂಕುಗಳ ಪತ್ರ ವ್ಯವಹಾರವನ್ನು ಹಲವು ಬಗೆಯಲ್ಲಿ ವರ್ಗೀಕರಿಸುತ್ತಾರೆ; ಬ್ಯಾಂಕು-ಗ್ರಾಹಕರ ಮಧ್ಯೆ ನಡೆಯುವ ಪತ್ರ ವ್ಯವಹಾರ; ಪ್ರಧಾನ ಕಚೇರಿ-ಶಾಖಾ ಕಚೇರಿ ನಡುವಣ ವ್ಯವಹಾರ ಪತ್ರಗಳು: ಸರ್ಕಾರಿ ಕಚೇರಿಗಳೊಂದಿಗೆ ಬ್ಯಾಂಕ್ ನಡೆಸುವ ಪತ್ರ ವ್ಯವಹಾರ; ಖಾಸಗಿ ವ್ಯಕ್ತಿಗಳು ಮತ್ತು ಬ್ಯಾಂಕು ನಡುವಣ ಪತ್ರ ವ್ಯವಹಾರ; ಸಾರ್ವಜನಿಕ ಗಣ್ಯರೊಂದಿಗೆ ನಡೆಯುವ ಪತ್ರ ವ್ಯವಹಾರ; ಹಣ ಸಂಬಂಧದ ಪತ್ರ ವ್ಯವಹಾರ; ಹಣ ಸಂಬಂಧರಹಿತ ಪತ್ರ ವ್ಯವಹಾರ; ಅಚ್ಚಾರ ನಮೂನೆಗಳ ಮೂಲಕ ವ್ಯವಹಾರ; ಸ್ವಲಿಖಿತ ಪತ್ರ ವ್ಯವಹಾರ ಇತ್ಯಾದಿಯಾಗಿ ಹತ್ತಾರು ಬಗೆಗಳಲ್ಲಿ ವರ್ಗಿಕರಿಸಿ ವಿಶ್ಲೇಷಿಸುತ್ತಾರೆ.

ಬ್ಯಾಂಕಿನ ಪತ್ರ ವ್ಯವಹಾರಗಳಲ್ಲಿ ಅಚ್ಚಾದ ನಮೂನೆಗಳನ್ನು ಬಳಸುವುದು ಈಗ ಎಲ್ಲೆಡೆ ವಾಡಿಕೆಯಾಗಿರುವ ಸಂಗತಿಯಾಗಿದೆ; ಇದರಿಂದ ಹಲವಾರು ಸೌಲಭ್ಯಗಳಿವೆ. ಪತ್ರಗಳನ್ನು ಬರೆಯುವುದಕ್ಕಿಂತ ಅಚ್ಚಾದ ಫಾರಂಗಳನ್ನು ಭರ್ತಿ ಮಾಡುವುದರಿಂದ ಸಮಯ, ಶ್ರಮ ಹಾಗು ಹಣದ ಉಳಿತಾಯವಾಗುತ್ತದೆ; ವ್ಯಕ್ತಿ-ವ್ಯಕ್ತಿಗೆ ಬರೆಹದ ಭಾಷೆ, ಲಿಪಿ, ಶೈಲಿ ಇತ್ಯಾದಿಗಳು ವ್ಯತ್ಯಾಸವಾಗಿ ಲೋಪದೋಷಗಳು ಉಂಟಾಗುವುದು ತಪ್ಪುತ್ತದೆ; ಅಚ್ಚಾದ ಫಾರಂಗಳಲ್ಲಿ ಬಹುಮಟ್ಟಿಗೆ ಎಲ್ಲ ಬಗೆಯ ಅಂಶಗಳೂ ನಿರೂಪಿತವಾಗಿರುತ್ತವೆ. ಸ್ವತಂತ್ರ ಆಲೋಚನೆಯಿಂದ, ವೈಯಕ್ತಿಕ ಹೊಣೆಗಾರಿಕೆಯಿಂದ ಪತ್ರ ಬರೆಯುವಾಗ ಭಿನ್ನಭಿನ್ನ ಸಾಮರ್ಥ್ಯದ ಫಲವಾಗಿ ಪತ್ರಗಳನ್ನು ಭಿನ್ನತೆ ಉಂಟಾಗುವ ಸಂಭವವಿದೆ. ಅಚ್ಚಾದ ಫಾರಂಗಳನ್ನು ಭರ್ತಿಮಾಡುವುದು ಸುಲಭದ ಕೆಲಸವೂ ಹೌದು; ಖಾಲಿ ಜಾಗಗಳಲ್ಲಿ ಪದಗಳನ್ನು ಭರ್ತಿ ಮಾಡುವುದು, ಕೊಟ್ಟಿರುವ ವಿವರಗಳಲ್ಲಿ ಸಂಬಂಧಿಸಿದ್ದಕ್ಕೆ ಸರಿ ಚಿಹ್ನೆ(\/) ಹಾಕುವುದು; ಸಲ್ಲದ ಸಂಗತಿಗಳಿಗೆ ಕಾಟು ಹೊಡೆಯುವುದು (x) ಮುಂತಾದ ಕ್ರಮಗಳು ಉತ್ತರಗಳಲ್ಲಿ ಕ್ರಮಬದ್ಧತೆಯನ್ನು ಉಂಟು ಮಾಡುವುದರ ಜೊತೆಗೆ ವರ್ಗಿಕರಣಕ್ಕೂ ಆಯ್ಕೆಗೂ ಸಹಕಾರಿಯಾಗುತ್ತದೆ.

ಅಚ್ಚಾದ ಫಾರಂಗಳು ಎಷ್ಟೇ ಉಪಯುಕ್ತವಾದರೂ ಬ್ಯಾಂಕಿನ ಎಲ್ಲ ವ್ಯವಹಾರಗಳಲ್ಲಿಯೂ ಅವನ್ನೇ ಬಳಸಲಾಗುವುದಿಲ್ಲ; ಸಮಯ ಸಂದರ್ಭಗಳಿಗೆ ತಕ್ಕಂತೆ ಅನಿವಾರ್ಯವಾಗಿ ಪತ್ರ ರಚನೆ ಮಾಡಬೇಕಾಗುತ್ತದೆ. ಪತ್ರಗಳನ್ನು ಉಕ್ತಲೇಖನ ಕೊಟ್ಟು ಬರೆಸಲಾಗುವುದು ಮತ್ತು ಟೈಪಿಸಲಾಗುವುದು; ಇಲ್ಲವೇ ಸ್ವಯಂ ಬರೆಯಲಾಗುವುದು. ಲಿಖಿತ ಪತ್ರಗಳಲ್ಲಿ ಉತ್ತಮ ವಾಣಿಜ್ಯ ಪತ್ರದ ಲಕ್ಷಣಗಳೆಲ್ಲಾ ಇರಬೇಕಾದದ್ದು ಅತ್ಯವಶ್ಯ. ಸಂಕ್ಷಿಪ್ತತೆ, ವಿನಯಪೂರ್ವಕ ನಿರೂಪಣೆ ಇತ್ಯಾದಿ ಅಂಶಗಳು ಪರಿಪಾಲನೀಯ ಸಂಗತಿಗಳಾಗಿವೆ. ವಿಚಾರಣಾಪತ್ರ, ದೂರು ಪತ್ರ, ಬಾಕಿ ವಸೂಲಿ ಪತ್ರ ಮುಂತಾದವನ್ನು ಲಿಖಿಸುವಲ್ಲಿ ಜಾಣ್ಮೆ, ತಾಳ್ಮೆ, ಚಾತುರ್ಯ, ಸೌಜನ್ಯ, ಎಚ್ಚರಿಕೆಯ ಗುಣಗಳು ಎಷ್ಟಿದ್ದರೂ ಸಾಲದು. ಸಕಾಲದಲ್ಲಿ ಸಮರ್ಪಕವಾಗಿ ಉತ್ತರಿಸುವುದು ಗ್ರಾಹಕನ ಹಿತ ದೃಷ್ಟಿಯಿಂದ ಬಹುಮುಖ್ಯ. ಬ್ಯಾಂಕು ತನ್ನ ಪತ್ರ ವ್ಯವಹಾರದಲ್ಲಿ ಗ್ರಾಹಕನ ಲೆಕ್ಕ-ಹಣದ ಬಗ್ಗೆ ಗೋಪ್ಯತೆಯನ್ನು ಕಾಪಾಡಬೇಕು. ಅಸಮಾಧಾನಗೊಂಡ ಗ್ರಾಹಕರಿಗೆ ಸಮಾಧಾನದ ಉತ್ತರಗಳನ್ನು ನೀಡಬೇಕು; ಪ್ರತಿಭಟನೆಗೆ ಮರುಪ್ರತಿಭಟನೆ ಸೂಕ್ತ ಉತ್ತರವಲ್ಲ.

ಬ್ಯಾಂಕ್ ವ್ಯವಹಾರದ ಪತ್ರಗಳನ್ನು ಠೇವಣಾತಿಗಳಿಗೆ ಸಂಬಂಧಿಸಿದ ಪತ್ರಗಳು, ಸಾಲ ವ್ಯವಹಾರದ ಪತ್ರಗಳು, ಇತರ ಸೇವೆಗಳಿಗೆ ಸಂಬಂಧಿಸಿದ ಪತ್ರಗಳು; ಚೆಕ್ಕು ವ್ಯವಹಾರ ಎಂದು ಸ್ಥೂಲವಾಗಿ ವರ್ಗಿಕರಿಸಬಹುದು.

ಬ್ಯಾಂಕಿನ ಪತ್ರ ವ್ಯವಹಾರದಲ್ಲಿ ಬ್ಯಾಂಕು ಗ್ರಾಹಕನಿಗೆ ಬರೆಯುವ ಅಥವಾ ಗ್ರಾಹಕನು ಬ್ಯಾಂಕಿಗೆ ಬರೆಯುವ ಪತ್ರಗಳಿಗೆ ಆದ್ಯತೆಯಿದೆ. ಗ್ರಾಹಕ ಮತ್ತು ಬ್ಯಾಂಕ್ ನಡುವಣ ಪತ್ರ ವ್ಯವಹಾರದ ಮೊದಲ ಹೆಜ್ಜೆಯೆಂದರೆ ಗ್ರಾಹಕನು ಖಾತೆ ತೆರೆಯುವುದು ಎನ್ನಬಹುದು. ಈ ಸಂದರ್ಭದಲ್ಲಿ ಠೇವಣಾತಿ, ಸಾಲದ ವ್ಯವಹಾರ ಹಾಗೂ ಚೆಕ್ಕುಗಳ ಬಗ್ಗೆ ಪ್ರಸ್ತಾಪಿಸುವುದು ಅಗತ್ಯವಾಗಿದೆ.